ಲೇಖನ ಮತ್ತು ಚಿತ್ರಗಳು: ವಿನತೆ ಶರ್ಮ
“ಈ ನನ್ನ ಪ್ರಪಂಚದ ಬೆರಗು ಅಚ್ಚರಿಗಳ ಬಗ್ಗೆ ಬರೆಯುವುದು ನನ್ನಿಷ್ಟ. ಅದನ್ನು ಓದುವುದು ಅಣ್ಣನ ಇಷ್ಟ. ಮುಂದಿನ ವಿಷಯ ನನಗೆ ಬೇಡ. ಅದನ್ನು ಅಣ್ಣ ವಿಲಿಯಂಗೆ ಬಿಡುತ್ತೀನಿ” ಎಂದು ಡೊರೊತಿ ತಮ್ಮ ದಿನಚರಿಯಲ್ಲಿ ಬರೆದಿದ್ದಾರೆ. ಆಕೆ ವಿವರಿಸಿದ ಡಫೊಡಿಲ್ ಹೂಗಳು ಅರಳುವ ಋತುಮಾನ, ಆ ಹೂವಿನ ಅಂದ ಚೆಂದ, ಆ ಹೂವಿನ ಹಾಸಿಗೆ ಹೇಗೆ ಮನ ತುಂಬುತ್ತದೆ ಎಂಬ ಬರಹಗಳನ್ನು ವಿಲಿಯಂ ಮುಂದೆ ತಮ್ಮ ಕವನದಲ್ಲಿ ಉಪಯೋಗಿಸಿ ಕೊಂಡರು. ಅಣ್ಣ ವಿಲಿಯಂ ಸುಪ್ರಸಿದ್ಧ ಕವಿಯಾಗಿ, ಇಂಗ್ಲೆಂಡ್ ರಾಣಿಯ ಆಸ್ಥಾನ ಕವಿಯಾಗಿ ಬಾಳಿದರು. ತಂಗಿ ಡೊರೊತಿ ಅದೇ ಸುಂದರ ಲೇಕ್ ಡಿಸ್ಟ್ರಿಕ್ಟ್ ನ ಪುಟ್ಟ ಪ್ರಪಂಚದಲ್ಲಿ ಉಳಿದರು.
ಕಳೆದ ವರ್ಷ 2013 ನವೆಂಬರ್ 28 ಶುಕ್ರವಾರ ನಾನು ಪ್ರಸಿದ್ಧ ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್ ವರ್ತ ಮತ್ತು ಅವರ ತಂಗಿ ಡೊರೊತಿ ವರ್ಡ್ಸ್ ವರ್ತರ ಮನೆಗೆ ಹೋಗಿದ್ದೆ. ಅವರ ಮನೆ ‘ಡೋವ್ ಕಾಟೆಜ್ ‘ ಇರುವ ಗ್ರಾಸ್ಮೇರ್ ಹಳ್ಳಿಯಿಂದ ಕೆಲವೇ ಕಿಲೋಮೀಟರು ದೂರದಲ್ಲಿ ನಾನಿದ್ದದ್ದು. ಕೆಲವಾರಗಳಿಂದ ಇಂಗ್ಲೆಂಡಿನಲ್ಲಿರುವ ಜನಪ್ರಿಯವಾದ ಲೇಕ್ ಡಿಸ್ಟ್ರಿಕ್ಟ್ ನ ಕಂಬ್ರಿಯ ಪ್ರಾಂತ್ಯದಲ್ಲಿ ತಂಗಿದ್ದ ನನಗೆ ಇಲ್ಲಿಗೆ ಬಂದಾಗಲಿಂದಲೂ ವಿಲಿಯಮ್ ವರ್ಡ್ಸ್ ವರ್ತರ ಸುಪ್ರಸಿದ್ಧ ಕವಿತೆಗಳು ಹುಟ್ಟಿದ ತಾಣವನ್ನು ನೋಡಬೇಕೆಂಬ ಆಸೆ ಇತ್ತು. ಬಂದ ಹೊಸತಲ್ಲಿ ಮಾಹಿತಿ ಕೇಂದ್ರದಲ್ಲಿ ಕವಿಯ ಮನೆಯ ಬಗ್ಗೆ, ಜೀವನ ಮತ್ತು ಬರಹಗಳ ಬಗ್ಗೆ ಇದ್ದ ಪ್ರದರ್ಶನದ ವಿಷಯ ಸಂಗ್ರಹಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅವರ ತಂಗಿ ಡೊರೊತಿ ವರ್ಡ್ಸ್ ವರ್ತರ ಬಗೆಗಿನ ಮಾಹಿತಿ. ವರ್ಡ್ಸ್ ವರ್ತ ಟ್ರಸ್ಟ್ ಈ ಪ್ರದರ್ಶನಗಳನ್ನು ಏರ್ಪಡಿಸಿತ್ತು. ಅದರಲ್ಲೂ ಡೊರೊತಿಯ ಪ್ರದರ್ಶನದ ಹೆಸರು ” ಡೊರೊತಿ ವರ್ಡ್ಸ್ ವರ್ತ್ – ಪ್ರತಿ ದಿನದ ಹರ್ಷ ಮತ್ತು ಬೆರಗು”; ಸರಿ, ನನ್ನ ಕುತೂಹಲ ಗರಿಕೆದರಿತು. ಇದೇ ಮೊಟ್ಟ ಮೊದಲ ಬಾರಿಗೆ 2013 ಮಾರ್ಚ್ 23 ರಿಂದ 2014 ಜನವರಿ 5 ರ ತನಕ ಡೊರೊತಿ ವರ್ಡ್ಸ್ ವರ್ತರ ಜೀವನ ಮತ್ತು ಬರಹಗಳು, ದಿನ ನಿತ್ಯದ ವಸ್ತುಗಳು, ಆಕೆ ಬರೆದ ಪತ್ರಗಳು ಮತ್ತು ಆಕೆಯ ‘ಗ್ರಾಸ್ಮೇರ್ ಜರ್ನಲ್ ‘ ಇತ್ಯಾದಿಗಳ ಪ್ರದರ್ಶನವನ್ನು ಡೋವ್ ಕಾಟೆಜ್ ನ ಪಕ್ಕದ ಕಟ್ಟಡ ‘ಜರ್ವುಡ್ ಕೇಂದ್ರ’ ದಲ್ಲಿ ಏರ್ಪಡಿಸಿದ್ದರು.
ವರ್ಡ್ಸ್ ವರ್ತ ಕುಟುಂಬದವರ ಮನೆಯ ಮುಂಭಾಗ.
ವರ್ಷಗಳ ಹಿಂದೆ ಬೆಂಗಳೂರಿನ ಕಾಲೇಜ್ನಲ್ಲಿ ಬಿ ಎ ಓದುತ್ತಿದ್ದಾಗ ನಾನು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದೆ. ಆಗ ಓದಿದ್ದ ವರ್ಡ್ಸ್ ವರ್ತರ ಕವಿತೆಗಳು, ಅವುಗಳಲ್ಲಿದ್ದ ಪ್ರಕೃತಿ ಪ್ರೇಮ, ಕವಿಯ ಒಳ ದೃಷ್ಟಿ ನೋಡುವ ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧ, ಪ್ರಾಕೃತಿಕ ಪ್ರಪಂಚಕ್ಕೆ ಹೇಗೆ ನಾವು ಹತ್ತಿರವಾಗಬೇಕು ಎಂಬ ಸವಿನುಡಿಗಳ ನೆನಪು ನುಗ್ಗಿ ಬಂತು. ಆತನ ‘ಡಫೊಡಿಲ್ ‘ ಕವನವನ್ನು ಓದಿದ ಮೇಲೆ ಆ ಡಫೊಡಿಲ್ ಹೂ ಹೇಗಿರುತ್ತದೆ ಎಂದು ಊಹಿಸಿಕೊಂಡು, ಅದರ ಚಿತ್ರ ನೋಡಲು ಆಗ ಸೇಂಟ್ ಮಾರ್ಕ್ಸ್ ರಸ್ತೆಯ ಬ್ರಿಟಿಷ್ ಲೈಬ್ರರಿಗೆ ಓಡಿದ್ದೆ. ಈಗ ಕಡೆಗೂ ಆತನ ಈ ಬರಹಗಳ, ಆ ಸವಿ ನುಡಿಗಳ ಹಿಂದೆ, ಆತನ ಬಾಗಿಲ ಹಿಂದೆ ಇಷ್ಟು ವರ್ಷಗಳು ಬಚ್ಚಿಟ್ಟುಕೊಂಡಿದ್ದ ಡೊರೊತಿ ನನಗೆ ಪರಿಚಯವಾದರು.
1771 ರಲ್ಲಿ ಹುಟ್ಟಿದ ಡೊರೊತಿ ವಿಲಿಯಂ ಗಿಂತ ಒಂದೇ ವರ್ಷ ಚಿಕ್ಕವರು. ಐದು ಮಕ್ಕಳ ಕುಟುಂಬ, ಆಕೆ ಮೂರನೇ ಮಗು; ತಂದೆಯ ಸಂಪಾದನೆ ಚೆನ್ನಾಗಿತ್ತು. ಈ ಹುಡುಗಿಗೆ ಐದು ವರ್ಷವಾಗಿದ್ದಾಗ ತಾಯಿ ಸಾಯುತ್ತಾರೆ . ತಂದೆ ಈ ಚಿಕ್ಕ ಹುಡುಗಿಯನ್ನು ಹ್ಯಾಲಿಫಾಕ್ಸ್ ನಲ್ಲಿದ್ದ ಬಂಧುವಿನ (ಆಂಟಿ) ಹತ್ತಿರ ಕಳಿಸುತ್ತಾರೆ. ತಂದೆ 1783 ರಲ್ಲಿ ಸತ್ತಾಗ ಕುಟುಂಬಕ್ಕೆ ಹಣಕಾಸಿನ ತೊಂದರೆಯಾಗಿ ಮಕ್ಕಳೆಲ್ಲಾ ಬೇರೆ ಬೇರೆಯಾಗಿ ಬಂಧುಗಳ ಬಳಿ ಬೆಳೆಯುತ್ತಾರೆ. ಡೊರೊತಿ ಒಬ್ಬ ಅಂಕಲ್ನ ಕುಟುಂಬದೊಂದಿಗೆ ಬೆಳೆಯುತ್ತಾ, ಆ ವಿದ್ಯಾವಂತ, ಜ್ಞಾನಿ ಅಂಕಲ್ ನ ಸಹಾಯದೊಂದಿಗೆ ಹೋಮರ, ಶೇಕ್ಸ್ ಪೀಯರ್ ಮುಂತಾದ ಕವಿಗಳ ಸಾಹಿತ್ಯ ವನ್ನ ಓದುವುದಲ್ಲದೆ ಆ ಕುಟುಂಬದ ಚಿಕ್ಕ ಮಕ್ಕಳ ಲಾಲನೆ ಪಾಲನೆಯನ್ನೂ ಬಹಳ ಕುಶಲವಾಗಿ ಮಾಡುತ್ತಾರೆ. ಈ ಹಂತದ ಜೀವನದಲ್ಲಿ ಅವರು ಮಕ್ಕಳ ಹುಟ್ಟು-ಸಾವು, ಲಾಲನೆ-ಪಾಲನೆ, ಸಣ್ಣ ಪುಟ್ಟ ಖಾಯಿಲೆಗಳಿಗೆ ಮನೆವೈದ್ಯ ಮಾಡುವುದು, ಬಟ್ಟೆ ಹೊಲಿಗೆ, ದೊಡ್ಡ ಕುಟುಂಬವನ್ನು ನಿಯಂತ್ರಿಸುವ ಕುಶಲಗಾರಿಕೆಗಳನ್ನು ಕಲಿಯುತ್ತಾರೆ. ಆಕೆಯ ಮುಂದಿನ ಜೀವನದಲ್ಲಿ ಈ ಅನುಭವಗಳನ್ನು ಅತ್ಯಂತ ಸಫಲವಾಗಿ ಡೊರೊತಿ ಉಪಯೋಗಿಸುತ್ತಾ ಅಣ್ಣ ವಿಲಿಯಂ ಮನೆಯ ಆಧಾರ ಸ್ತಂಭವಾಗುತ್ತಾರೆ. ಅಣ್ಣನ ಮಕ್ಕಳನ್ನು ಪ್ರೀತಿಸುತ್ತಾ, ಬೆಳೆಸುತ್ತಾ ಕುಟುಂಬದ ತಾಯಿಯಾಗಿ, ತಂಗಿಯಾಗಿ, ಸ್ನೇಹಿತೆಯಾಗಿ, ಅತ್ತೆಯಾಗಿ, ಎಲ್ಲಕ್ಕೂ ಮಿಗಿಲಾಗಿ ತನ್ನ, ಅವರೆಲ್ಲರ ದಿನನಿತ್ಯ ಬದುಕಿನ ಆಗುಹೋಗುಗಳನ್ನು ದಿನವೂ ತನ್ನ ಜರ್ನಲ್ ನಲ್ಲಿ ಬರೆಯುತ್ತಾರೆ. ಆಗಾಗ ಅನಾರೋಗ್ಯದಿಂದ ಬಳಲುತ್ತಾ, ತಾನು ಮದುವೆಯಾಗದೆ, ಜೀವನದ ಕಡೆಯ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪರಾವಲಂಬಿಯಾಗಿ ಬದುಕಿ 1855 ರಲ್ಲಿ ಸಾಯುತ್ತಾರೆ.
ಅದು ಹೆಂಗಸರು ಬುದ್ದಿಮತಿಗಳಾಗಿ, ಪ್ರತಿಭಾಶಾಲಿಗಳಾಗಿದ್ದರೂ, ವಿವಿಧ ವೃತ್ತಿಗಳಲ್ಲಿ ಮಿಂಚುವ, ಮಿಂಚಿದ ಕಾಲವಲ್ಲ. ಸಮಾಜ ಗಂಡಸರನ್ನೇ ಹೆಚ್ಚಾಗಿ ಮೇಲು ಎಂದು ಹೇಳಿದ ಕಾಲ ಆಗ. ಆ ಕಾಲದಲ್ಲಿ ಕೆಲ ಮಹಿಳೆಯರು ಬರೆದರೂ, ಎಷ್ಟೇ ಪ್ರತಿಭೆ ಇದ್ದರೂ ತಮ್ಮ ನಿಜ ಹೆಸರನ್ನು, ತಮ್ಮತನವನ್ನು ಬಚ್ಚಿಟ್ಟುಕೊಂಡು ಬದುಕಿದ ದಿನಗಳು ಅವು. ಬಹಳ ನಂತರ ಮಹಿಳೆಯರನ್ನು ಬರಹಗಾರ್ತಿಯರಾಗಿ ಒಪ್ಪಿಕೊಂಡ ಸಮಾಜ ಡೊರೊತಿಯ ಬರಹವನ್ನು ಗುರುತಿಸಿ, ಆಕೆಯ ಬರಹಗಳು ವಿಲಿಯಂರ ಕವನಗಳ ಮೇಲೆ ಬೀರಿದ ಪ್ರಭಾವನ್ನು ಒಪ್ಪಿಕೊಂಡಿದೆ. ನಾನು ಓದುತ್ತಾ, ನೋಡುತ್ತಾ ಹೋದಂತೆ ಬಹಳಷ್ಟು ವಿಷಯ ತಿಳಿದಿದ್ದೂ ಅಲ್ಲದೆ ಡೊರೊತಿ ಬರೆದ ದಿನಚರಿಯ ಕೆಲ ಭಾಗಗಳು ಮುಂದೆ ವಿಲಿಯಂ ರ ಕವನಗಳಾಗಿದ್ದು ತಿಳಿದು ಅಚ್ಚರಿಯ ಜೊತೆ ದುಃಖವೂ ಆಯಿತು. ಆಹ್ ಲೋಕವೇ, ಆಕೆಗೆ ಸಲ್ಲಬೇಕಾದ ಸ್ಥಾನ, ಗುರುತು, ಸರಿಯಾದ ಗೌರವ ಇನ್ನೂ ಸಿಕ್ಕಿಲ್ಲ ಎನ್ನಿಸಿತು. ಆ ಕಾಲದಲ್ಲಿ ಬಹಳ ಸಹಜವೆಂಬಂತೆ ವಿಲಿಯಂ ಡೊರೊತಿಯ ಬರಹಗಳನ್ನು ಉಪಯೋಗಿಸಿಕೊಂಡರು. ಈ ಕಾಲದಲ್ಲಿ ಹಾಗೆ ಮಾಡುವಂತಿಲ್ಲ, ಮಾಡಬಾರದು – ನಾವು, ನಮ್ಮ ಸಮಾಜ ಈಗ ಹೆಚ್ಚಿನ ಮಟ್ಟಿಗೆ ಲಿಂಗ ಸೂಕ್ಷ್ಮತೆ, ಸಮಾನತೆಯ ಅರಿವು ಇರುವವರು, ಸ್ತ್ರೀವಾದವನ್ನು ಕಾರ್ಯರೂಪದಲ್ಲಿ ನೋಡುತ್ತಿರುವವರು ನಾವುಗಳು ಎಂದು ಸ್ವಲ್ಪ ಸಮಾಧಾನವಾಯಿತು.
ಚರಿತ್ರಕಾರರು, ಸಾಹಿತ್ಯಕಾರರು ಡೊರೊತಿ ವಿಲಿಯಂ ಜೊತೆ ಡೋವ್ ಕಾಟೆಜ್ನಲ್ಲಿ ಹಂಚಿಕೊಂಡ ಜೀವನ ಹಾಗೂ ಅಲ್ಲಿ ಆಕೆ ಆತನ ಸಾಹಿತ್ಯದ ಮೇಲೆ ಬೀರಿದ ಪ್ರಭಾವನ್ನು ಕುರಿತು ಸಾಕಷ್ಟು ಚರ್ಚೆ, ಮಾತುಕತೆ ಹಾಗೂ ವಿಮರ್ಶೆಗಳನ್ನು ತಂದಿದ್ದಾರೆ. ಅವುಗಳ ಹಿನ್ನಲೆ ಹೀಗಿದೆ.
ಹುಡುಗಿ ಡೊರೊತಿ ಅಣ್ಣ ವಿಲಿಯಂನನ್ನು 1795 ರಲ್ಲಿ ಒಮ್ಮೆ, ಮತ್ತೊಮ್ಮೆ 1798 ರಲ್ಲಿ ಭೇಟಿಯಾಗುತ್ತಾಳೆ. ಅಲ್ಲಿಂದ ಮುಂದೆ ಡೋವ್ ಕಾಟೇಜ್ ನಲ್ಲಿ ಬದುಕಲು ಪ್ರಾರಂಭ ಮಾಡಿ ಇಬ್ಬರೂ ತಮ್ಮ ಜೀವನವನ್ನು ಪರಸ್ಪರ ಹಂಚಿಕೊಳ್ಳುತ್ತಾ ಹೋಗುತ್ತಾರೆ. ಆಗಾಗಲೇ ವಿಲಿಯಂ ಫ್ರೆಂಚ್ ಹುಡುಗಿ ಅನೆಟ್ ಳನ್ನು ಪ್ರೀತಿ ಮಾಡಿ ಅವಳಿಂದ ಒಬ್ಬ ಮಗಳನ್ನು ಪಡೆದಿರುತ್ತಾರೆ. ಡೋವ್ ಕಾಟೇಜ್ ಗೆ ಬರುತ್ತಿದ್ದ ಅವರ ಬಾಲ್ಯದ ಗೆಳತಿ ಮೇರಿಯನ್ನು ಮುಂದೆ ವಿಲಿಯಂ ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾರೆ. ವಿಶೇಷವೆಂದರೆ ಡೊರೊತಿ ಈ ಇಬ್ಬರು ಹೆಂಗಸರಿಗೂ, ಇಬ್ಬರ ಮಕ್ಕಳಿಗೂ ಸ್ನೇಹಿತೆಯಾಗಿ, ಅತ್ತೆಯಾಗಿ ಕಡೆಯತನಕ ಉಳಿಯುತ್ತಾರೆ. ಅದರಲ್ಲೂ ಮೇರಿ ತನ್ನ ಬಾಲ್ಯದ ಗೆಳತಿಯಾಗಿದ್ದು, ತಾನು, ಅಣ್ಣ ವಿಲಿಯಂ ಹಂಚಿಕೊಂಡಿದ್ದ ಡೋವ್ ಕಾಟೇಜ್ ಗೆ ಆಗಾಗ ಬಂದು ಕಡೆಗೆ ಅಣ್ಣನನ್ನು ಪ್ರೀತಿಸಿ ಮದುವೆಯಾದಾಗ ಮೊದಲು ಇಷ್ಟ ಪಡದಿದ್ದರೂ ಕಡೆಗೆ ಅವಳನ್ನು ತಮ್ಮಲ್ಲಿ ಒಬ್ಬಳನ್ನಾಗಿ ಸ್ವಾಗತಿಸುತ್ತಾರೆ. ಅವರಿಬ್ಬರ ಮದುವೆಗೆ ಹೋಗಲು ಧೈರ್ಯ ವಾಗದೆ ಆಕೆ ಬರೆದ ದಿನಚರಿಯ ದಾಖಲೆ ಹೀಗಿದೆ – ” ಅಕ್ಟೋಬರ್ 4, ಸೋಮವಾರ 1802 – ನನ್ನ ಸೋದರ ವಿಲಿಯಂನ ಮದುವೆ ಮೇರಿ ಹಚಿಂಸೋನ್ ಜೊತೆಗೆ ಆಯಿತು.” ಸ್ನೇಹಿತೆಗೆ ಬರೆದ ಪತ್ರವೊಂದರಲ್ಲಿ ತಮ್ಮ ದುಗುಡ, ತಳಮಳವನ್ನು, ತನಗೆ ಎಷ್ಟು ಮಾನಸಿಕ ತಲ್ಲಣವುಂಟಾಗಿದೆ ಎಂದು ಹಂಚಿಕೊಂಡಿದ್ದಾರೆ. ಅದೇ ಪುಟದಲ್ಲಿ ಆಕೆ ತಾನು ಬರೆದಿರುವ ಮೂರು ಸಾಲುಗಳನ್ನು ಇನ್ಕ್ ನಿಂದ ಹೊಡೆದು ಹಾಕಿದ್ದಾರೆ . ಇಂದಿಗೂ ಆ ಮೂರು ಸಾಲುಗಳಲ್ಲಿ ಇರುವ ಪದಗಳು ಏನು ಎಂದು ನೋಡುಗರಿಗೆ, ಓದುಗರಿಗೆ ತಿಳಿಯುವುದಿಲ್ಲ. ಪ್ರದರ್ಶನದ ಕ್ಯೂರಟರ್ ದೊಡ್ಡ ಪದಗಳಲ್ಲಿ “ಓದುಗರೇ, ಈ ಸಾಲುಗಳಲ್ಲಿ ಆಕೆ ಏನನ್ನು ಬರೆದು ನಂತರ ಹೊಡೆದು ಹಾಕಿದ್ದಾಳೆ ನೀವೇ ಊಹಿಸಿ, ನೀವು ಏನೆಂದು ಹೇಗೆಂದು ಇದನ್ನು ಅರ್ಥೈಸಿಕೊಳ್ಳುತೀರ” ಎಂದು ಬರೆದು ನಮಗೆ ಸವಾಲು ಹಾಕಿದ್ದಾರೆ.
ಮನೆಯ ಹಿಂಭಾಗ – ಇಲ್ಲೇ ಅವರ ಕೈ ತೋಟವಿತ್ತು. ಆ ತೋಟ ಅವರ ಕವನಗಳಿಗೆ, ಬರಹಗಳಿಗೆ ಚೇತನವಾಗಿತ್ತು.
ನಾನೂ ಕೂಡ ಬಗ್ಗಿ ಬಗ್ಗಿ ಗ್ಲಾಸ್ ಬಾಕ್ಸ್ ಒಳಗಿರುವ ಡೊರೊತಿಯ ದಿನಚರಿಯ ಆ ಎರಡು ಹಾಳೆಗಳನ್ನು ಮತ್ತೆ ಮತ್ತೆ ನೋಡಿದೆ, ಓದಲು ಪ್ರಯತ್ನಿಸಿದೆ – ಉಹುಂ, ಆಕೆ ಹೊಡೆದು ಹಾಕಿರುವ ಆ ಮೂರು ಸಾಲುಗಳಲ್ಲಿ ಏನಿದೆ, ಆ ರಹಸ್ಯವೇನು ಎಂದು ಕಡೆಗೂ ಹೊಳೆಯಲಿಲ್ಲ. ಡೊರೊತಿ ಯಾಕೆ ಮದುವೆಯಾಗಲಿಲ್ಲ, ಯಾವ ಕಾರಣದಿಂದ ಅಣ್ಣನ ಕುಟುಂಬದೊಂದಿಗೆ ಉಳಿದರು ಎಂಬ ಪ್ರಶ್ನೆಗಳು ಅನೇಕರನ್ನು ಕಾಡಿದೆ. ತಮ್ಮ ಮನೆಗೆ ಬರುತ್ತಿದ್ದ ಅನೇಕ ಸಾಹಿತಿಗಳಲ್ಲಿ ಅವರು ಇಬ್ಬರು ಪ್ರಮುಖ ಕುಟುಂಬ ಸ್ನೇಹಿತರು ಆದ ಸಾಮ್ಯುಯೆಲ್ ಕೋಲ್ರಿಜ್, ತಾಮಸ್ ಕ್ವಿನ್ಸಿ ಅವರೊಡನೆ ಹೆಚ್ಚು ಆತ್ಮೀಯರಾಗಿದ್ದರು ಎನ್ನುವ ಸಂಗತಿ ಬಹಳ ಪ್ರಚಾರಕ್ಕೆ ಒಳಗಾಗಿದ್ದರೂ ಅವರನ್ನು ಡೊರೊತಿ ಪ್ರೆಮಿಸಿರಬಹುದೇನೋ ಎಂಬುವುದಕ್ಕೆ ಖಚಿತ ಪುರಾವೆ ಇಲ್ಲ. ಅಣ್ಣ ವಿಲಿಯಂಗೆ ಅವರು ಅಷ್ಟೂ ಹತ್ತಿರವಾಗಿದ್ದರಿಂದ ಬೇರೆಯವರನ್ನು ಪ್ರೇಮಕ್ಕೆ, ಮದುವೆ-ಸಾಂಗತ್ಯಕ್ಕೆ ಒಪ್ಪಲಿಲ್ಲ ಎಂಬ ಮಾತು ಕೂಡ ಇದೆ.
ತನ್ನ ಕಾಲದಲ್ಲಿ ಡೊರೊತಿ ತಾನು ಬರೆದಿದ್ದನ್ನ ಪ್ರಕಟಗೊಳಿಸದೆ, ಇಷ್ಟಪಡದೆ ಅನಾಮಿಕವಾಗಿಯೇ ಉಳಿದರೂ, ಡೊರೊತಿ ಮತ್ತು ವಿಲಿಯಂರ ಕೆಲ ಸ್ನೇಹಿತರು ತಮ್ಮ ಬರಹಗಳಲ್ಲಿ ಆಕೆಯ ಬಗ್ಗೆ, ಬರವಣಿಗೆಯ ಬಗ್ಗೆ ಬರೆದಿದ್ದಾರೆ. ಇವರಲ್ಲಿ ಆಪ್ತ ಸ್ನೇಹಿತ ಕವಿ ಸಾಮ್ಯುಯೆಲ್ ಕೋಲ್ರಿಜ್ ಒಬ್ಬರು. ಮತ್ತೊಬ್ಬರು ತಾಮಸ್ ಕ್ವಿನ್ಸಿ. ಈ ಇಬ್ಬರೂ ಡೊರೊತಿ, ಮತ್ತಾಕೆಯ ಬರವಣಿಗೆ ವಿಲಿಯಂರ ಮೇಲೆ ಹೇಗೆ, ಎಷ್ಟು ಪ್ರಭಾವ ಬೀರಿತ್ತು ಎಂದು ಸಾಕಷ್ಟು ಬರೆದಿದ್ದಾರೆ.
ಡೊರೊತಿಯ ಬರಹಗಳಲ್ಲಿ ಕವಿದೃಷ್ಠಿ, ಓದುಗರನ್ನು ಹಿಡಿದಿಡುವ ಬರವಣಿಗೆಯ ಶೈಲಿ, ನಿತ್ಯ ಜೀವನದ ಆಗುಹೋಗುಗಳನ್ನೇ ಆಕೆ ಅಷ್ಟೂ ಅಚ್ಚರಿ, ಬೆರಗು ಕಣ್ಣುಗಳಿಂದ ನೋಡುವುದು, ಅವುಗಳ ಬಗ್ಗೆ ಸ್ವಗತವೆಂಬಂತೆ ಹೇಳುವುದು, ಹಂಚಿಕೊಳ್ಳುವುದು ದಾಖಲಾಗಿದೆ. ಉದಾಹರೆಣೆಗೆ, 1799 ರಲ್ಲಿ ಅಣ್ಣ, ತಂಗಿ ಡೋವ್ ಕಾಟೇಜ್ ನಲ್ಲಿ ವಾಸವಾಗಿರಲು ಬರುತ್ತಾರೆ. 1802 ರ ಜೂನ್ ತಿಂಗಳಲ್ಲಿ ತನ್ನ ಮಲಗುವ ಕೋಣೆಯ ಕಿಟಕಿಯಲ್ಲಿ ಗೂಡು ಕಟ್ಟುತ್ತಿದ್ದ ಸ್ವಾಲೊ ಹಕ್ಕಿಗಳ ಬಗ್ಗೆ ತಮ್ಮ ‘ದ ಸ್ಟೋರಿ ಆಫ್ ದ ಸ್ವಾಲೋಸ್’ ಸ್ವಗತದಲ್ಲಿ ವಿವರವಾಗಿ ಬರೆಯುತ್ತಾ ಹೋಗುತ್ತಾರೆ. ಆ ಹಕ್ಕಿಗಳ ಮೊದಲ ವಿಫಲ ಪ್ರಯತ್ನ, ಮತ್ತೆ ಆಕೆ ಅವುಗಳನ್ನು ಹುಡುಕುವುದು, ಕೆಲ ದಿನಗಳ ನಂತರ ಅವುಗಳನ್ನು ತಮ್ಮ ಮನೆಯ ಹಿಂದುಗಡೆ ಇದ್ದ ತೋಟದಲ್ಲಿ ನೋಡಿದ್ದನ್ನು ದಾಖಲಿಸುತ್ತಾರೆ. ನನಗೆ ಈ ಬರಹದ ಶೈಲಿ ಬಹಳ ಇಷ್ಟವಾಯಿತು. ಸರಳವಾಗಿ ಸುಂದರವಾಗಿ ಮನ ಮುಟ್ಟುವಂತೆ ವಿವರಿಸುವ ಆ ಧಾಟಿ, ಪ್ರತಿಯೊಂದನ್ನೂ ಮಗುವಿನಂತೆ ಕುತೂಹಲದಿಂದ ನೋಡಿ ಅದರ ಬಗ್ಗೆ ಮರು ಚಿಂತನೆ ಮಾಡುವ, ತೊಡಗಿಸಿಕೊಳ್ಳುವ ಏಕಾಗ್ರತೆ, ಆ ಧ್ಯಾನ – ಇದು ನಮ್ಮನ್ನು ಹಿಡಿದಿಡುತ್ತದೆ.
ಸಾಹಿತ್ಯದ ಬಗ್ಗೆ ಆಕೆಗಿದ್ದ ಪ್ರೀತಿ ಅವರ ಜರ್ನಲ್ ನಲ್ಲಿ ಗಮನಕ್ಕೆ ಬರುತ್ತದೆ. ಆಕೆ ಓದುತ್ತಿದ್ದ ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಯ ಸಾಹಿತ್ಯದ ಬಗ್ಗೆ ಆಗಾಗ ತಮ್ಮ ಮೂವರು ಸ್ನೇಹಿತೆಯರಿಗೆ (ತನ್ನ ಶಾಲಾ ಗೆಳತಿ ಜೇನ್ ಪೋಲಾರ್ದ್, ಕ್ಯಾತೆರಯ್ನ್ ಚೆರ್ಕಸೊನ್, ಲೇಡಿ ಬೋಮೊಂಟ್) ಪತ್ರದಲ್ಲಿ ಬರೆದು ಹಂಚಿಕೊಳ್ಳುತ್ತಾರೆ. ಅದರಲ್ಲೂ ಶಾಲಾ ಗೆಳತಿ ಜೇನ್ ಪೋಲಾರ್ದ್ ಬಳಿ ಜೀವನದ ಸುಮಾರು ವಿಷಯಗಳನ್ನು ಹೇಳಿದ್ದಾರೆ.
ಸಾಹಿತ್ಯ ಪ್ರಪಂಚ ಡೊರೊತಿಯ ಬರಹಗಳಲ್ಲಿ ಗುರುತಿಸಿರುವುದು ಆಕೆಯ ಓದುವ ಅಭಿಲಾಷೆ, ಆಸಕ್ತಿ, ಕೊನೆ ಮೊದಲಿಲ್ಲದ ನಡಿಗೆ, ಚಾರಣದ ಬಗ್ಗೆ ಇದ್ದ ಪ್ರೀತಿ, ತಿರುಗಾಟ, ಅವಿರತವಾಗಿ ಮಾಡುತ್ತಿದ್ದ ತೋಟದ ಕೆಲಸ, ಕುಟುಂಬದ ಬಗ್ಗೆ ಇದ್ದ ಪ್ರೀತಿ, ಕಾಳಜಿ, ಎಲ್ಲರನ್ನೂ ತಾನು ಇನ್ನಿಲ್ಲದಷ್ಟು ಪ್ರೀತಿಸುವುದು, ಹಾಗೆ ಅವರೆಲ್ಲರಿಂದ ಪ್ರೀತಿ ಕಾಳಜಿಯನ್ನು ಅಪೇಕ್ಷಿಸುವುದು ಮತ್ತು ನಿಸರ್ಗ ಪ್ರೇಮ. ನಾನು ಈ ಪ್ರದರ್ಶನದಲ್ಲಿ ಆಕೆಯ ಬರಹ, ದಿನಚರಿಗಳನ್ನು ಓದುತ್ತಾ ಮುಂದೆ ಮುಂದೆ ಹೋದಾಗ ನನಗೆ ಕಣ್ಣಿಗೆ, ಮನಸಿಗೆ ತಟ್ಟಿದ್ದು ನಿಸರ್ಗದ ಬಗ್ಗೆ ಡೊರೊತಿ ತೋರುತ್ತಿದ್ದ, ತೋರಿಸಿದ ಅಪ್ರತಿಮ ಕುತೂಹಲ, ಆಸಕ್ತಿ, ಪ್ರೀತಿ, ಅಚ್ಚರಿ, ನಿರಂತರವಾಗಿ ಕಲಿಯುತ್ತಿದ್ದ ರೀತಿ, ಮತ್ತದನ್ನು ದಾಖಲಿಸುತ್ತಿದ್ದ ಅಭ್ಯಾಸ. ಸುಮಾರು ಮೂರು ಗಂಟೆಗಳ ಕಾಲ ಸ್ವಲ್ಪ ಸ್ವಲ್ಪವಾಗಿ ಓದುತ್ತಾ ಹೋದೆ – ಆಕೆ ತನ್ನ ಪ್ರತಿ ದಿನದ ಜೀವನವನ್ನು ಅತ್ಯಂತ ಬೆರಗು, ಸಂಭ್ರಮದಿಂದ ನೋಡುತ್ತಿದ್ದ ಆ ಪರಿ ನನಗೆ ಬಹಳಾ ಹಿಡಿಸಿತು – ಹಾಗೆ ಇನ್ನೂರು ವರ್ಷಗಳ ಹಿಂದಿನ ಅವರ ಕಷ್ಟಕರವಾದ ಜೀವನ ಶೈಲಿ, ಅತಿರೇಕದ ಚಳಿಗಾಲ, ಆ ಪುಟ್ಟ ಮನೆಗೆ ಬರುತ್ತಿದ್ದ ಅಷ್ಟೊಂದು ಜನರ ಸಂಭಾಳಿಕೆ, ಅಣ್ಣನ ಬೆಳೆಯುತ್ತಿದ್ದ ಕುಟುಂಬ… ಇಷ್ಟೆಲ್ಲದರ ಮಧ್ಯೆಯೂ ಆಕೆ ಬರೆದಿದ್ದೆ ಬರೆದಿದ್ದು. ವಾಹ್, ಡೊರೊತಿ, ನೀವು ಭೇಷ್ ಭೇಷ್ ಎಂದುಕೊಂಡೆ.
ಡೊರೊತಿ ವರ್ಡ್ಸ್ ವರ್ತ ಪ್ರದರ್ಶನವಿದ್ದ ಕಟ್ಟಡ.
ಮಧ್ಯದಲ್ಲಿ ಅಣ್ಣ ವಿಲಿಯ0 ನ ಖಾಸಗಿ ಸೆಕ್ರೆಟರಿಯಂತೆ ಪಾತ್ರ ವಹಿಸುತ್ತ ಆತ ಬಾಯಲ್ಲಿ ಹೇಳಿದಂತೆ ತಾನು ಆತನ ಕವನಗಳನ್ನು ಬರೆಯುವುದು. ನಿರಂತರವಾಗಿ ಅಣ್ಣನ ಜೊತೆ ಸಾಹಿತ್ಯ, ನಿಸರ್ಗ, ಕವನಗಳ ಬಗ್ಗೆ ಚರ್ಚೆ. ತಾನು ಬೆಳೆಯುತ್ತಿದ್ದ ತೋಟದ ತರಕಾರಿ ಹಣ್ಣುಗಳು, ಹವಾಮಾನ ಬದಲಾದಂತೆ ಹುಟ್ಟುತ್ತಿದ್ದ ಬಣ್ಣ ಬಣ್ಣದ ಹೂಗಳು, ಆ ಹವಾಮಾನದಲ್ಲಿನ ಬಿಸಿಲು, ಚಳಿ, ಹಿಮ, ಹತ್ತಿ ಇಳಿಯುತ್ತಿದ್ದ ಬೆಟ್ಟಗಳು, ಕೈಗೊಂಡ ಕಾಲ್ ನಡಿಗೆಗಳು, ಚಾರಣಗಳು, ಎಲ್ಲವೂ ಆ ಬರಹಗಳಲ್ಲಿ ಸೊಗಸಾಗಿ ಮೂಡಿದೆ.
ಡಫೊಡಿಲ್ ಹೂ ಬಗ್ಗೆ ಅವರು ಬರೆದ ಸುದೀರ್ಘ ಸ್ವಗತದ ತುಣುಕುಗಳನ್ನು ನಾನು ಓದಿದೆ. ಆ ಹೂ ಹುಟ್ಟುವ ಮುಂಚಿನ ಋತುಮಾನ, ನಂತರ ಬರುವ ವಸಂತ ಮಾಸ, ಹೂವಿನ ಗಿಡ ಹೂ ಬಿಡಲು ತಯಾರಾಗುವುದು, ಹೂ ಬಂದ ಮೇಲೆ ಅದರ ಸೌಂದರ್ಯ, ಅ ಹೂವಿನ ಹಾಸಿಗೆಯ ಮನಮೋಹಕತೆ – ಓಹ್, ಎಷ್ಟು ಚೆನ್ನಾದ ವಿವರಣೆ. ಅಲ್ಲೇ ನಿಂತು ಓದುತ್ತಾ ಬೇರೊಂದು ಲೋಕಕ್ಕೆ ಹೋದ ಅನುಭವವಾಯಿತು. ಕಡೆಗೂ ನಾನು ವಿದ್ಯಾರ್ಥಿ ಜೀವನದಲ್ಲಿ ಆ ಡಫೊಡಿಲ್ ಹೂ ಹೇಗಿರುತ್ತದೆ ಎಂದು ಊಹಿಸಿಕೊಂಡು ಮಾಡಿದ್ದ ಕಲ್ಪನಾ ಚಿತ್ರ ಈಗ ಸಂಪೂರ್ಣವಾದ ತೃಪ್ತಿ ಸಿಕ್ಕಿತು. ಈ ಬರಹಗಳನ್ನು ಓದಿದ ಮೇಲೆ ನನಗ್ಯಾಕೋ ವಿಲಿಯಂರ ಡಫೊಡಿಲ್ ಕವನಕ್ಕಿಂತಲೂ ಡೊರೊತಿಯ ಈ ಡಫೊಡಿಲ್ ಬರಹವೇ ಮುದ್ದಾಗಿದೆ ಎನಿಸಿತು. ಡೊರೊತಿ ತನ್ನ ನಿಜ ಕಣ್ಣುಗಳಿಂದ ನೋಡಿದ ಆ ಹೂವಿನ ಬೆರಗಿನ ವಿವರಣೆಯ ಮುಂದೆ ವಿಲಿಯಂರ ಕವನ ಸ್ವಲ್ಪ ಬಿಳಿಚಿಕೊಂಡಿದೆಯೇನೋ ಎಂದೆನಿಸಿತು. ಡೊರೊತಿಗೆ ಬೈ ಎಂದು ವಿದಾಯ ಹೇಳಿ ಹೊರಬಂದ ಮೇಲೆ ನನ್ನ ಕಣ್ಣು ಕಟ್ಟಡದ ಅಕ್ಕಪಕ್ಕ ಎಲ್ಲಾದರೂ ಡಫೊಡಿಲ್ ಹೂ ಕಾಣುತ್ತದಾ ಎಂದು ಹುಡುಕಿತು. ಅರೆ, ಏನಿದು, ಡೊರೊತಿಯ ಪ್ರಭಾವವೇ ಎಂದು ಮನಸ್ಸು ನಕ್ಕಿತು.
ಡೋವ್ ಕಾಟೇಜ್ ಮತ್ತು ಡೊರೊತಿ ವರ್ಡ್ಸ್ ವರ್ತ ಪ್ರದರ್ಶನವಿದ್ದ ಕಟ್ಟಡಗಳು













– ನಿಮ್ಮ ಲೇಖನ ಮತ್ತು ಚಿತ್ರಗಳು ವಿಲಿಯಂ ವರ್ಡ್ಸವರ್ತ್ ಹುಟ್ಟಿ ಬೆಳೆದ ಮನೆ ಮತ್ತು ಪರಿಸರಗಳ ಕುರಿತು ತುಂಭಾ ಪ್ರಭಾವಿಸುವಂತಹವು. ಡೊರೋತಿ ವರ್ಡ್ಸ್ ವರ್ತ ಕುರಿತು ಅಪೂರ್ವ ಮಾಹಿತಿಗಳನ್ನು ಕಲೆ ಹಾಕಿ ಓದುಗರಿಗೆ ನೀಡಿದ್ದೀರಿ, ವರ್ಡ್ಸ್ ವರ್ತ್ ಮತ್ತು ಡೊರೋತಿ ಓಡಾಡಿದ ಸ್ಥಳಗಳಲ್ಲಿ ನಮ್ಮನ್ನು ಅಲೆದಾಡಿಸಿದ್ದೀರಿ.ವಿಲಿಯಂನ ಕವನ ನಮಗೂ ಪಠ್ಯವಾಗಿತ್ತು, ಆದರೆ ಡ್ಯಾಫೋಡಿಲ್ಸ್ ಹೂವು ಹೇಗಿರುತ್ತದೆ ಎನ್ನುವ ಸ್ಪಷ್ಟ ಪರಿಕಲ್ಪನೆ ನನ್ನನ್ನೂ ಸೇರಿದಂತೆ ಅನೇಕರಿಗೆ ಇರುವುದಿಲ್ಲ, ಆ ಹೂವಿನ ಒಂದು ಚಿತ್ರವನ್ನಾದರೂ ಹಾಕಿದ್ದರೆ ಲೇಖನಕ್ಕೆ ಇನ್ನೂ ಕಳೆ ಬರುತ್ತಿತ್ತು.
Photographs of daffodils are available on internet. Since they are not grown in India, we can’t have a visualized picture of these flowers nor can we correlate them with the plant body.