ಹಾ ಮ ಭಟ್ಟ ನೆನಪಿನ ಸಂಸ್ಕೃತಿ ಉತ್ಸವ
ಪಂಪ ಉತ್ಸವ ಚೆಂಗನ್ನೂರು ಕೇರಳ ಹಾಗೂ ಅಭಿವ್ಯಕ್ತಿ ಬಳಗ ತುಮರಿ ಇವರ ಸಹಯೋಗದಲ್ಲಿ 2012 ರಿಂದ ಪ್ರತೀ ವರ್ಷ ಹಾಲ್ಕೆರೆಯ ಕವಿ, ಸಮಾಜವಾದಿ ಹಾ ಮ ಭಟ್ಟ ನೆನಪಿನ ಸಂಸ್ಕೃತಿ ಉತ್ಸವ ಸಾಗರದ ತುಮರಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ..
ಶಾಂತವೇರಿ ಗೋಪಾಲಗೌಡರ ಒಡನಾಡಿಗಳಾದ ಹಾ ಮ ಭಟ್ಟರು ತಮ್ಮ ಪರೋಪಕಾರಿ ಮನೋಭಾವದಿಂದಾಗಿ ಆ ಭಾಗದಲ್ಲೆಲ್ಲ ಮನೆ ಮಾತಾದವರು. ಅವರ ಮಕ್ಕಳಾದ ರಘು ಹಾಲ್ಕೆರೆ ಹಾಗೂ ಹಾ ಮ ಕನಕ ಅವರು ಪ್ರತೀವರ್ಷ ತಂದೆಯ ಜನ್ಮತಿಂಗಳಾದ ಸಪ್ಟೆಂಬರ್ ಮಾಹೆಯಲ್ಲಿ ೨೮,೨೯,೩೦ ಈ ಮೂರು ದಿನಗಳ ಕಾಲ ಕಲೆ ಸಂಗೀತ ಸಾಹಿತ್ಯ ನಾಟಕ ಸಿನೇಮಾ ಮುಂತಾದವುಗಳ ಸಂಯೋಜನೆಯ ಮೂಲಕ ಅದ್ಭುತ ಲೋಕವೊಂದನ್ನು ಆಸಕ್ತಲೋಕಕ್ಕೆ ತೆರೆದಿಡುತ್ತಾರೆ..
ಈ ಬಾರಿಯೂ ತುಮರಿಯಲ್ಲಿ ಉತ್ಸವ ಆರಂಭವಾಗಿದೆ, ದಿನಾಂಕ 28 ರಂದು ಹಾ ಮ ಭಟ್ಟರ ಬಾಲ್ಯದ ಗೆಳೆಯ ಹಸನ್ ಸಾಬ್ ಅವರಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ವಿದುಷಿ ಸುಚಿತ್ರ ಹೊಳ್ಳ, ಜೋಗಿ, ಪ್ರೀತಿ ನಾಗರಾಜ್, ಅರವಿಂದ ಚೊಕ್ಕಾಡಿ, ಖ್ಯಾತ ಸಿನೆಮಾ ಛಾಯಾಗ್ರಾಹಕ ರಾಮಚಂದ್ರ, ಬೇರೆ ಬೇರೆ ಬಾಷೆಯ ಎಲ್ಲ ಕವಿಗಳು, ಮಮತಾ ಸಾಗರ್, ರೇಣುಕಾ ರಮಾನಂದ, ಮಮತಾ ಅರಸೀಕೆರೆ, ಶ್ರೀದೇವಿ ಕೆರಮನೆ, ಚಾಂದನಿ, ಕೃತಿ ಹೆಗ್ಗೋಡು, ಕೃಷ್ಣಮೂರ್ತಿ ಕವತ್ತಾರ್, ಕೆ ಜಿ ಕೃಷ್ಣಮೂರ್ತಿ, ಪ್ರಸನ್ನ, ಅನನ್ಯ ಕಾಸರವಳ್ಳಿ,ಮುಂತಾದವರೆಲ್ಲ ಪಾಲ್ಗೊಂಡಿದ್ದಾರೆ.





ದಿ||ಹಾ.ಮ. ಭಟ್ಟರೊಂದಿಗೆ ತುಂಬಾ ಆತ್ಮೀಯ ಒಡನಾಟವಿತ್ತು ; ಪರಸ್ಪರರ ಸಮಾಜವಾದೀ ಹಿನ್ನೆಲೆಯೂ ಕಾರಣವಾಗಿತ್ತು ; ವರ್ಷದಲ್ಲಿ ಅಪರೂಪಕ್ಕೆಂಬಂತೆ ಸಾಗರ ಪೇಟೆಯಲ್ಲಿ ಎದುರಾಗುತ್ತಿದ್ವಿ- ಹೆಗ್ಗೋಡಿನ ಶಿಬಿರದಲ್ಲಿ ಖಾಯಂ ಭೇಟಿ- ಆಗ ಶಿಬಿರ 8 ದಿನಗಳ ನಡೆಯುತ್ತಿತ್ತು ; ಹೊಳೆದಾಟಿ,ಈಕಡೆಗೆ ಬಂದವರು ಎರಡು- ಮೂರುದಿನ ಇರುತ್ತಿದ್ದರು. ಈ ತುಮರಿಕಡೆಯ ಹೊಳೆಆಚಿನ ಹಲವರು ಸಾಗರದಲ್ಲಿ ಖಾಯಮ್ಮಾಗಿ ಒಂದು ಬಾಡಿಗೆ ರೂಮ್ ಇಟ್ಟುಕೊಳ್ಳುತ್ತಿದ್ದರು- ಕಾರಣ, ಅಲ್ಲಿನವರಿಗೆ ಆಗಿನದಿನಗಳಲ್ಲಿ ( ಈಗಲೂ) ಸಾಗರಕ್ಕೆ ಬರುವುದು ದುಸ್ತರವಿತ್ತು.ಬೆಳಗಿನಿಂದ ಸಂಜೆಯೊಳಗೆ ಎರಡು ಬಸ್ಸುಗಳಿದ್ದವೇನೋ ! ನಡುವೆ ನಾಲ್ಕು ಕಿ.ಮೀ. ಹೊಳೆಯಲ್ಲಿ ” ಲಾಂಚ್” ಮೂಲಕ ಸಾಗಬೇಕು.
ಲಾಂಚ್ಹತ್ತಿ ಹೊಳೆದಾಟುವುದೆಂದರೆ ಅದೊಂದು ಸಂಭ್ರಮ- ರೋಮಾಂಚನ .ದೊಡ್ಡವನಾದ ಮೇಲೆ ನಾನೂ Driver ನ ಕೋರಿ ಲಾಂಚ್ ನ Drive ಮಾಡಿದ್ದೂ ಉಂಟು.
ಆಗಿನ ,ಅಂಥಾ ಕಾಲದಲ್ಲೇ ಭಟ್ಟರು ತುಮರಿಯಲ್ಲಿ ರಂಗಚಳವಳಿ ಆರಂಭಿಸಿದ್ದರು. ” ಅಭಿವ್ಯಕ್ತಿ ಬಳಗ” –
ಮುಂದೆ ಕಟಿಬದ್ಧರಾಗಿ ,” ಶಾಂತವೇರಿ ಗೋಪಾಲಗೌಡ ರಂಗಮಂದಿರ” ವನ್ನೂ ನಿರ್ಮಿಸುವಲ್ಲಿ ಯಶಸ್ವಿಯಾದರು. ಮೂಲೆ ಊರಾದರೂ ರಂಗಚಟುವಟಿಕೆ ನಡೆದುಕೊಂಡು ಬಂದಿತು.
ಮುಂದೆ ಕೆ.ಜಿ.ಕಿಟ್ಟಣ್ಣ ತುಮರಿಯನ್ನೇ ಕೇಂದ್ರವಾಗಿಟ್ಟುಕೊಂಡು ,” ಕಿನ್ನರಮೇಳ” ಎಂಬ ಮಕ್ಕಳ ರೆಪರ್ಟರಿಯನ್ನು ಕಟ್ಟಿ ,ರಾಜ್ಯಾದ್ಯಂತ ಪ್ರದರ್ಶನ ನೀಡಲಾರಂಭಿಸಿದರು.
ನಿಜ, ತುಮರಿಗೆ ಹತ್ತರದ( ವನಾಗಿ) ದಲ್ಲಿದ್ದೂ ,ಈ ಭಾರಿಯ ಉತ್ಸವಕ್ಕೆ ಹೋಗಲಾಗದ್ದಕ್ಕೆ ವಿಷಾದವಾಗುತ್ತಿದೆ ; ಇರಲಿ ,ಮೂರೂದಿನಗಳ ಉತ್ಸವ ಛಂದಾಗಿ ಸಾಗಲೆಂದು ಬಯಸುವೆ ; ರಾಘೂ ಗೆ ಶುಭಾಶಯಗಳು.