ಉರಿವ ಮನೆಯ ಗಳ ಹಿರಿವವರು
ಡಾ ಎಸ್ ಬಿ ಜೋಗೂರ್
ಉತ್ತರಾಖಂಡ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಇತ್ತೀಚಿನ ದಶಕಗಳಲ್ಲಿ ಈ ಮಟ್ಟದ ಪ್ರವಾಹ.. ಸಾವು.. ಈ ದೇಶದ ಜನತೆ ಕಂಡಿರಲಿಲ್ಲ, ಕೇಳಿರಲಿಲ್ಲ. ಈಗಾಗಲೇ ಸಾವಿರಾರು ಸಂಖ್ಯೆಯ ಜನ ಯಾತ್ರಿಕರು ಅಸುನೀಗಿದ್ದಾರೆ. ಮತ್ತೆ ಕೆಲವರು ಬದುಕುಳಿಯಲು ಹಾತೊರೆಯುತ್ತಿದ್ದಾರೆ, ಇನ್ನೂ ಕೆಲವರು ಸಾವಿನ ಆಜೂ ಬಾಜೂ ಹೋಗಿ ಬಂದಿದ್ದಾರೆ. ನಿಸರ್ಗ ಮನುಷ್ಯನ ಮೇಲೆ ಕೋಪಿಸಿಕೊಂಡರೆ ಮತ್ತೂ ಭಯಂಕರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಅನೇಕ ಸಂದರ್ಭಗಳಲ್ಲಿ ವಿಶ್ವದ ಬೇರೆ ಬೇರೆ ದೇಶಗಳ ಜನರಿಗೆ ಅದು ನೀಡುತ್ತಲೇ ಇದೆ. ಆದರೆ ಮನುಷ್ಯ ಮಾತ್ರ ಇಂಥಾ ಯಾವ ಪೆಟ್ಟುಗಳಿಂದಲೂ ಪಾಠ ಕಲಿಯದೇ ಮತ್ತಷ್ಟು ಪಾಪಿಷ್ಟನಾಗುತ್ತಿದ್ದಾನೆ. ಉರಿವ ಮನೆಯ ಗಳ ಹಿರಿವ ಬುದ್ದಿ ಮನುಷ್ಯನೆಂಬ ನೀಚ ಪ್ರಾಣಿಗೆ ಮಾತ್ರ ಸಾಧ್ಯ. ಮಿಕ್ಕ ಎಲ್ಲ ಪ್ರಾಣಿಗಳಲ್ಲಿಲ್ಲದ ದುರ್ಬುದ್ಧಿ ಮನುಷ್ಯನ ಮೆದುಳಲ್ಲಿ ಶ್ರವಿಸಿ ಅವನು ಮಾಡಬಾರದ್ದೆನ್ನೆಲ್ಲಾ ಮಾಡಲು ಕಾರಣವಾಗಿದೆ.
ಮನುಷ್ಯನ ಮನ:ಪ್ರವೃತ್ತಿಗಳಲ್ಲಿ ಅತ್ಯಂತ ತುಚ್ಚವಾದವುಗಳೂ ಇವೆ. ಸಾಯುವವನ ಕತ್ತಲ್ಲಿಯ ಸರಕ್ಕಾಗಿ ಹಪಹಪಿಸುವ, ಹರಿಯುವ ದುಷ್ಟತನವಿದೆ, ಕಾಲಲ್ಲಿಯ ಚೈನು ಸರಾಗವಾಗಿ ಬಿಚ್ಚದಿದ್ದರೆ ಕಾಲೇ ಕತ್ತರಿಸುವ ಕ್ರೌರ್ಯವಿದೆ. ಹಾಹಾಕಾರ ಎದ್ದ ಗಳಿಗೆಯಲ್ಲಿಯೇ ವ್ಯವಹಾರಿಕ ಬುದ್ದಿಯನ್ನು ಮೆರೆಯುವ ನೀಚತನವಿದೆ. ಪ್ರವಾಹದಲ್ಲಿ ಸಿಲುಕಿ ಸಾಯುವವರ ಮಧ್ಯೆಯೇ ಬಾಟಲ್ ನೀರಿಗೆ 100 ರೂಪಾಯಿ ಎಂದು ಜೊಲ್ಲು ಸುರಿಸುವ ನಿರ್ಲಜ್ಜತನವಿದೆ, ತಾಯಿ- ಮಗಳನ್ನು ಅತ್ಯಾಚಾರವೆಸಗಿ ಕೊಲೆ ಮಾಡುವಷ್ಟರ ಮಟ್ಟಿಗಿನ ಕಾಮಪಿಪಾಸುವಿನ ಕ್ರೌರ್ಯವಿದೆ. ವಿಚಿತ್ರವೆಂದರೆ ಇಂಥವುಗಳೆಲ್ಲವೂ ಇದ್ದದ್ದು, ನಡೆದದ್ದು ಪವಿತ್ರ ಯಾತ್ರಾಸ್ಥಳಗಳಲ್ಲಿ ಮತ್ತು ದೇವರು ಅಲ್ಲಿ ಠಿಕಾಣಿ ಹೂಡಿರುವನು ಎನ್ನುವ ನಂಬುಗೆಯ ನೆಲದಲ್ಲಿ. ಒಂದು ಬಟ್ಟಲು ಅನ್ನಕ್ಕೆ 400 ರೂಪಾಯಿಯಂತೆ, ಒಂದು ಚಪಾತಿಗೆ 200-300 ರೂಪಾಯಿಗೆ ಮಾರಿಕೊಳ್ಳುವ ವ್ಯಾಪಾರೀ ಬುದ್ಧಿಯೂ ಇಂಥಾ ಪವಿತ್ರ ನೆಲದಲ್ಲೇ ಇರುವದು ಈ ಉತ್ತರಾಖಂಡದ ಪ್ರವಾಹಕ್ಕಿಂತಲೂ ಭಯಂಕರ.

ಮನುಷ್ಯನನ್ನು ಹೊರತು ಪಡಿಸಿದರೆ ಯಾವುದೇ ಪ್ರಾಣಿಗಳಲ್ಲಿ ಇಂಥಾ ಸಮಯಸಾಧಕತನ, ಮೋಸ, ವ್ಯವಹಾರಿಕ ದುರ್ಬುದ್ಧಿ ಇಲ್ಲ. ಅತ್ಯಂತ ಬೀಭತ್ಸ ಎನ್ನುವ ಸಂದರ್ಭವನ್ನೇ ವ್ಯಾಪಾರೀಕರಣಕ್ಕೆ ಬಳಸಿಕೊಳ್ಳುವ ದರೋಡೆಕೋರತನಕ್ಕೆ ಏನೆನ್ನಬೇಕು..? ಹೇಗಾದರೂ ಮಾಡಿ ಬದುಕಿ ಉಳಿಯಬೇಕು, ಇಲ್ಲಿಂದ ಪಾರಾಗಬೇಕು ಎಂದು ಹಾತೊರೆಯುವವರ ನೆರವಿಗೆ ಬರದೇ, ಅವರನ್ನೇ ಸುಲಿಗೆ ಮಾಡುವ ಕ್ರಮ ನೆರೆ ಮನೆಗೆ ಬೆಂಕಿ ಹತ್ತಿರುವ ಗಳಿಗೆಯಲ್ಲಿ ಮೈ ಕಾಯಿಸಿಕೊಳ್ಳುವ ಗುಣದಂತಿದೆ. ಈ ದೇಶದ ಜನ ಮಾತ್ರವಲ್ಲದೇ ಇಡೀ ವಿಶ್ವದ ಜನ ಈ ದುರಂತವನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ. ಅಪಾರ ಪ್ರಮಾಣದ ನೆರವೂ ಹರಿದು ಬರುತ್ತಿದೆ. ಹಿಂದೊಮ್ಮೆ ಲಾತೂರಿನಲ್ಲಿ ಭೂಕಂಪ ಜರುಗಿದಾಗ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ ಸಂದರ್ಭದಲ್ಲಿ ವಿದೇಶಗಳಿಂದ ಅಪಾರ ಪ್ರಮಾಣದ ರಗ್ಗುಗಳು ಇಲ್ಲಿಯ ಸಂತ್ರಸ್ತರಿಗೆ ಕಾಣಿಕೆಯಾಗಿ ಬಂದಿರುವದಿತ್ತು. ಅವುಗಳಲ್ಲಿ ಕೆಲವನ್ನು ಹಿಂಬಾಗಿಲಿನಿಂದ ಬೇರೆಡೆ ರವಾನಿಸಿದ ಬಗ್ಗೆಯೂ ವರದಿಯಾಗಿತ್ತು. ಇಂಥಾ ಸಂದರ್ಭವನ್ನೇ ಕಾಯುತ್ತ ಕುಳಿತ ಕೆಲವರು ಈಗಲೂ ಇದ್ದಾರೆ. ಈ ಸಂದರ್ಭದಲ್ಲಿ ನನಗೆ ಈಚೆಗೆ ಜಿ.ಎನ್. ಮೋಹನ ಅವರು ಅನುವಾದಿಸಿದ ‘ಬರ ಅಂದರೆ ಎಲ್ಲರಿಗೂ ಇಷ್ಟ’ ಎನ್ನುವ ಕೃತಿ ನೆನಪಾಗುತ್ತಿದೆ.
ಅದಾಗಲೇ ಸಾವಿರಾರು ಜನ ಸಾವಿನ ದವಡೆಗೆ ಸಿಲುಕಿರುವದಿದೆ. ಹತ್ತಾರು ಸಾವಿರ ಜನ ಪ್ರತಿ ಗಳಿಗೆಯನ್ನೂ ಬದುಕಿ ಉಳಿಯುವ ಭರವಸೆಯೊಂದಿಗೆ ಉಸಿರಾಡುತ್ತಿದ್ದಾರೆ. ಇದೇ ಒಂದು ಅವಕಾಶವೆಂದು ಅವರನ್ನೇ ಜೀವಂತ ಹರಿದು ಮುಕ್ಕುತ್ತಿರುವ ವ್ಯಾಪಾರಿ ಬುದ್ದಿಯ ಹದ್ದುಗಳು ಅಸಹ್ಯ ಮತ್ತು ಹೇಸಿಗೆ ಹುಟ್ಟಿಸುವಂತಿವೆ.. ದೇಶದ ಬೇರೆ ಬೇರೆ ಭಾಗಗಳಿಂದ ಅಲ್ಲಿಗೆ ತೆರಳಿದವರಿದ್ದಾರೆ. ಅದರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು, ಗರ್ಭಿಣಿ ಮಹಿಳೆಯರು ಹೀಗೆ ಎಲ್ಲಾ ವಯೋಮಾನದವರು ಇದ್ದಾರೆ. ಇಲ್ಲಿ ಅವರನ್ನು ಸಂರಕ್ಷಿಸುವ ಕೆಲಸ ಯುದ್ಧೋಪಾದಿಯಲ್ಲಿ ನಡೆದಿರುವದಾದರೂ ವಿ.ಐ.ಪಿ.ಗಳ ಕಡೆಗಿರುವ ಗಮನ ಜನಸಾಮಾನ್ಯನ ಕಡೆಗೆ ಇರದಿರುವದು ಸಹಜ. ಹಾಗಾಗದೇ ಎಲ್ಲರೂ ಯಾತ್ರಾರ್ಥಿಗಳು, ಒಂದೇ ಸ್ತರದಲ್ಲಿಟ್ಟು ಅವರನ್ನು ರಕ್ಷಿಸುವ, ಪಾರು ಮಾಡುವ ಅವಶ್ಯಕತೆಯಿದೆ. ಅಷ್ಟಕ್ಕೂ ಸಾವಿಗೆ ವರ್ಗ ಪ್ರಜ್ಞೆ ಎನ್ನುವದಿಲ್ಲ. ಸಾವು ಸಾವೇ..
ಹಾಗಾಗಿ ತೀರಾ ಸಾಮಾನ್ಯನ ಜೀವಕ್ಕೂ ಒಬ್ಬ ವಿ.ಐ.ಪಿ.ಗೆ ಸಿಗಬಹುದಾದ ಪ್ರಾಮುಖ್ಯತೆಯೇ ಸಿಗಲಿ ಹೆಲಿಕಾಪ್ಟರ್ ಲ್ಲಿ ಪಾರು ಮಾಡುವ ಪ್ರಸಂಗವೇ ಇರಲಿ, ಇಲ್ಲವೇ ಒಂದು ತೂಗು ಸೇತುವೆಯ ಮೂಲಕ ರಕ್ಷಿಸುವದಿರಲಿ. ಎಲ್ಲವೂ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ನಡೆಯಬೇಕು. ತಪ್ಪಿಯೂ ಅಲ್ಲಿ ಸ್ತರಗಳು ಸೃಷ್ಟಿಯಾಗದಿರಲಿ. ಎಲ್ಲ ಜೀವಗಳು ಅಮೂಲ್ಯವಾದವುಗಳೇ.. ಜೀವಕ್ಕಾಗಿ ಹಾಹಾಕಾರದ ಸಂದರ್ಭದ ನಡುವೆ ಉಂಡೂ ಹೋದ ಕೊಂಡೂ ಹೋದ ಎನ್ನುವ ಗುಣದವರಿಗೆ ಕನಿಷ್ಟ ಪಾಪ ಪ್ರಜ್ಞೆಯಾದರೂ ಕಾಡಲಿ. ಇಂಥಾ ಸಂದರ್ಭದಲ್ಲಿಯೂ ಅಲ್ಲಿರುವ ಸಂತ್ರಸ್ತರ ಮೇಲೆ ಅತ್ಯಾಚಾರಗೈಯುವ ಮನಸುಗಳ ಸೈತಾನತ್ವಕ್ಕೆ ಧಿಕ್ಕಾರವಿರಲಿ. ಹಾಬ್ಸ್ ರಂಥಾ ಚಿಂತಕರು ಮನುಷ್ಯನ ಕ್ರೌರ್ಯವನ್ನು ಅರಿತೇ ಅವನ ಮೇಲೆ ನಿರ್ಬಂಧಗಳಿಲ್ಲದಿದ್ದರೆ ಆತ ಪಶು ಸದೃಶನಾಗುತ್ತಾನೆ, ತುಚ್ಚನಾಗುತ್ತಾನೆ ಎಂದಿದ್ದರು. ಅನೇಕ ಬಗೆಯ ನಿರ್ಭಂಧಗಳಿರುವಾಗಲೂ ಆತ ಹೀಗೆ ರಾಕ್ಷಸತ್ವವನ್ನು ಮೆರೆಯುವದಿದೆ.






ಮನುಷ್ಯ ಅದೆಷ್ಟು ಲಜ್ಜೆಗೆಟ್ಟವನಾಗುತ್ತಾನೆ ಎನ್ನುವುದಕ್ಕೆ ನೀವು ಕೊಟ್ಟು ತನ್ನ ವ್ಯಾಪಾರಿ ದೃಷ್ಠಿ ಉದಾಹರಣೆಯಾಗುತ್ತದೆ, ಇದಷ್ಟೇ ಅಲ್ಲದೇ ಇಂಥಹ ಸಂದರ್ಭದಲ್ಲಿಯೂ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಾನೆ… ಒಂದೊಳ್ಳೆ ಲೇಖನ ಓದಿಸಿದಿರಿ
pravar, idu manushyana tuchchatanada ondu aayaam ashte.