ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲೆಮಾರಿ ಹುಡುಗ ಮತ್ತು ಒಂದು ಗಜಲ್- ಟೀನಾ ಶಶಿಕಾಂತ್

ಟೀನಾ ಶಶಿಕಾಂತ್

ಟೀನಾಜೋನ್

”ಆಮೇಲೆ?” ನಾನು ಕೇಳಿದೆ.

“ಥಾಯ್ಲೆಂಡಿಗೆ ಹೋಗ್ತೇನೆ.”

“ಅದಾದ ಮೇಲೆ?”

“ಯೂಎಸ್ಎ ತಿರುಗ್ತೇನೆ!”

“ಆಮೇಲೆ?”

“ಐ ರಿಯಲೀ ಡೋಂಟ್ ನೋ. ಈ ‘ವಾಂಡರಿಂಗ್ ಸೌಲ್’ ಅಂತಾರಲ್ಲ, ಹಾಗಾಗಿಬಿಟ್ಟಿದೀನಿ. ನಂಗೆ ಜೋರ್ಡಾನಿಗೆ ವಾಪಾಸು ಹೋಗಲಿಕ್ಕಾಗದು ಟೀನಾ!” ಎಂದು ಹೇಳಿ ಆ ಹುಡುಗ ತನ್ನ ಸರೋವರಗಳಂಥ ಕಣ್ಣುಗಳಿಂದಲೇ ನಕ್ಕುಬಿಟ್ಟಿದ್ದ. ನನಗೆ ಆತ ನಮ್ಮ ನಾಗರೀಕತೆಯ ಎಲ್ಲ ದುರವಸ್ಥೆಗಳ ಪ್ರತೀಕ ಅನ್ನಿಸಿತ್ತು.

ಏಳು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಲೈಬ್ರರಿಯಲ್ಲಿ ಪರಿಚಯವಾದ ಮಹ್ಮೂದ್ ಅಲಿಯಾಸ್ ಶಾಹಿದ್ ಉರ್ಫ್ ಸಬೀಲ್ ಜೋರ್ಡಾನಿನ ಪ್ಯಾಲೆಸ್ತೈನೀ ಮೂಲದ ಹುಡುಗ. ಮೊದಮೊದಲು ಆವನ ಆಂಗ್ಲ ಆಕ್ಸೆಂಟಿಗೆ ಹೊಂದಿಕೊಳ್ಳುವುದು ಕಷ್ಟವಾದರೂ ಮಾತನಾಡಿದೆ. ಆತನ ತಂದೆ ಜೋರ್ಡಾನಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್. ನಾಲ್ಕು ಅಕ್ಕತಂಗಿಯಂದಿರು, ಆರು ಅಣ್ಣತಮ್ಮಂದಿರು. ನನ್ನ ಓದಿನ ಬಗ್ಗೆ ಹೇಳಿದ್ದನ್ನು ಆಸಕ್ತಿಯಿಂದ ಕೂತು ಕೇಳಿ ಮಾರನೇ ದಿನವೇ ಸುಮಾರು ಬರಹಗಳು, ಪುಸ್ತಕಗಳನ್ನು ತಂದು ನನ್ನೆದುರಿಗಿಟ್ಟ. ಜತೆಗೊಂದು ಕಪ್ಪು ಬಣ್ಣದ ಹೊದಿಕೆಯ ಮೇಲೆ ಚಿನ್ನದ ಬಣ್ಣದ ಅಕ್ಷರಗಳಿದ್ದ ಕುರಾನಿನ ಆಂಗ್ಲ ಅನುವಾದ. ನನಗೆ ಏನು ಹೇಳಬೇಕೊ ತೋಚಲಿಲ್ಲ. ಆತನನ್ನು ಹೇಗೆ ಅವಾಯ್ಡ್ ಮಾಡಲಿ ಎಂದು ಅಲ್ಲಿಯತನಕ ಯೋಚನೆ ಮಾಡುತ್ತ ಇದ್ದ ನನ್ನ ಹಿಪಾಕ್ರಸಿಯನ್ನ ಶಪಿಸಿಕೊಂಡೆ.

ಆತ ಪ್ಯಾಲೆಸ್ತೈನಿನವನೆಂದು ತಿಳಿದ ತಕ್ಷಣ ಜತೆಯ ಹುಡುಗರು ಅವನನ್ನು ದೂರಮಾಡಿಬಿಡುತ್ತಿದ್ದರು. ತಾನು ಮುಸಲ್ಮಾನನೆಂದು ಪ್ರತಿಕ್ಷಣವೂ ಅರಿವು ಮೂಡಿಸುವ ಆತನ ಜೀವನ ಬಹಳ ವಿಚಿತ್ರವಾಗಿ ಕಳೆಯುತ್ತ ಇತ್ತು. ಇಲ್ಲಿನ ಹುಡುಗರು ಕ್ರಿಕೆಟ್ ಆಡುವುದನ್ನು ನೋಡಿದಾಗಲೆಲ್ಲ ಅವನಿಗೆ ತನ್ನೂರ ಫುಟ್ಬಾಲ್ ಮೈದಾನಗಳು ನೆನಪಾಗಿಬಿಡುತ್ತಿದ್ದವು. ಪಾಕಿಸ್ತಾನ, ಅಫಘಾನಿಸ್ತಾನಗಳನ್ನು ಕುತೂಹಲದಿಂದ ನೋಡಲು ಹೋದವ ಜಿಗುಪ್ಸೆ ಹೊಂದಿ ವಾಪಾಸು ಬಂದಿದ್ದ ಮಹ್ಮೂದ್ ಅಲೀಘಡ ವಿಶ್ವವಿದ್ಯಾನಿಲಯದಿಂದ ಆಂಗ್ಲಸಾಹಿತ್ಯದಲ್ಲಿ ಪದವಿ ಪಡೆದಿದ್ದ. ಅಲ್ಲಿನ ಹುಡುಗಿಯೊಬ್ಬನ್ನು ಪ್ರೀತಿಸಿ ಆಕೆಯ ತಂದೆತಾಯಂದಿರು ಮದುವೆಯಾಗಿ ಅಲ್ಲೇ ನೆಲೆಸಲು ಒತ್ತಾಯಿಸಿದಾಗ ಹೇಳದೆ ಕೇಳದೆ ಹೊರಟುಬಂದಿದ್ದ. “ಯಾಕೆ ಹಾಗೆ ಮಾಡಿದೆ?” ನಾನು ಕೇಳಿದ್ದೆ. “ಗೊತ್ತಿಲ್ಲ! ನನ್ನ ಬಗ್ಗೆ ಅವರೇನಂದುಕೊಂಡಿದ್ರೋ? ಈಗ ಅವಳ ಮದುವೆ ಆಗಿಹೋಗಿರಬಹುದು” ಮತ್ತೆ ಆತ ನಕ್ಕಿದ್ದ. ಯಾಕೊ ಆತನ ಕೃತಘ್ನತೆಯ ಮೇಲೆ ಸಿಟ್ಟು ಬಂದಿರಲಿಲ್ಲ.

ಮಹ್ಮೂದನಿಗೆ ಸಿಟ್ಟಿನ ಮೇಲೆ ಹತೋಟಿ ಕಡಿಮೆ ಎಂದು ಆತನೇ ನನಗೆ ತಿಳಿಸಿದ. “ಹೊರದೇಶದಲ್ಲಿದೀಯ. ಹುಶಾರಾಗಿರು.” ಎಚ್ಚರಿಸಿದ್ದೆ. “ನಂಗೊತ್ತು. ಸಿಟ್ಟು ಮಾಡಬಾರದು. ಕೆಟ್ಟದು. ನಮ್ಮ ಹುಡುಗರಿಗೆಲ್ಲ ಹೀಗೇ. ವಿಚಿತ್ರ ಸಿಟ್ಟು. ನನ್ನ ಕಸಿನ್ ಒಬ್ಬ, ಬರೇ ಹದಿನಾರು ವರ್ಷದವ. ಪೊಲೀಸರ ವಿರುದ್ಧ ಗಲಭೆಯಲ್ಲಿ ಭಾಗವಹಿಸಿದ. ಕೈಯಲ್ಲಿ ಬರೀ ಕಲ್ಲುಗಳು. ಅವರ ಕೈಯಲ್ಲಿ ಗನ್ನುಗಳು. ನಾಲ್ಕು ತಿಂಗಳಾಯಿತು ಅವನು ಸತ್ತುಹೋಗಿ!” ಮತ್ತದೇ ನಿರ್ವಿಕಾರ, ನಿರ್ಲಿಪ್ತ ಮುಗ್ಧನಗು. ನಮ್ಮ ಇಪ್ಪತ್ತೊಂದನೇ ಶತಮಾನದ ನಾಗರೀಕತೆಯ ಕೂಸು ಇವನು. ಆತನಿಗೂ ಆಸೆ ಆಕಾಂಕ್ಷೆಗಳಿದ್ದವು, ಒಳ್ಳೆಯ ಸ್ನೇಹಿತರ ಅವಶ್ಯಕತೆಯಿತ್ತು, ಬಾಳಗೆಳತಿಯ ಬಗ್ಗೆ ಕಲ್ಪನೆಗಳಿದ್ದವು. ಆದರೆ ಅಭದ್ರತೆಯಿಂದ ಪ್ರೇರೇಪಿತವಾದ ಅಲೆಮಾರಿತನ ಆತನನ್ನು ಒಂದೆಡೆ ನೆಲೆಸಲು ಬಿಡುತ್ತಿರಲಿಲ್ಲ. ಇಂತಹ ಇನ್ನೆಷ್ಟು ಹುಡುಗ ಹುಡುಗಿಯರು ನಮ್ಮ ನೆಲದ ಮೇಲೆ ಅಲೆದಾಡಬೇಕೊ ಏನೊ?

ಎಲ್ಲ ಕಡೆ ಕಾರ್ತೀಕದ ಬೆಳಕು. ಮಕ್ಕಳ ಕೇಕೆ. ನನ್ನ ಕಿವಿಗಳಲ್ಲಿ ಜಗಜೀತ್ ಸಿಂಗರ ಒಂದು ಗಜಲ್. ಬರೆದವರಾರೊ? ನೆನಪಾಗುತ್ತ ಇಲ್ಲ.

“ಬಚ್ಚೋಂಕೋ ಛೋಟೇ ಹಾಥೋಂಸೆ ಚಾಂದ್ ಸಿತಾರೇ ಛೂನೇ ದೋ..

ಚಾರ್ ಕಿತಾಬೇಂ ಪಢ್ ಕರ್ ವೋ ಭೀ ಹಂ ಜೈಸೇ ಹೋಜಾಯೇಂಗೇ..”

(ಮಕ್ಕಳ ಪುಟ್ಟ ಕೈಗಳು ಮುಟ್ಟಲಿ ಬಿಡು ಚಂದ್ರ ತಾರೆಗಳ

ನಾಲಕ್ಕು ಪುಸ್ತಕಗಳನ್ನೋದಿ ಅವರು ನಮ್ಮಂತೆಯೆ ಆಗಿಹೋಗುವರು..)

 

‍ಲೇಖಕರು G

22 October, 2012

5 Comments

  1. Praveen

    ಈ ಹುಡುಗನ ಬಗ್ಗೆ ಮತ್ತೆಲ್ಲೋ ಕೇಳಿದ ನೆನಪು. ಈಗ ಮತ್ತೆ ಗೊಂದಲದ ಗೂಡು ನನ್ನೊಳಗು…
    ಮತ್ತೆ, ಅಪರೂಪಕ್ಕೆ ಟೀನಾ ಪ್ರತ್ಯಕ್ಷರಾಗ್ತಾರೆ ಅದೇ ಖುಷಿ 🙂 -ಪ್ರವೀಣ್

  2. Raghunandan K

    ಮಕ್ಕಳ ಪುಟ್ಟ ಕೈಗಳಿಗೆ ಚಂದ್ರ ತಾರೆಗಳು ಸಿಕ್ಕಲಿ
    ಅವರು ನಮ್ಮಂತಾಗದಿರಲಿ…

  3. D.RaviVarma

    tumbaa apyayamanavaagide.. nimma baraha bahudinada nantra adu heart touching…

  4. Uma Rao

    Very nice!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading