ಅರ್ಧನಾರೀಶ್ವರ ಕಥಾ, ಮತ್ತೆ ಮತ್ತೆ ರಿತು ಪರ್ವ – ರಶ್ಮಿ ಕಾಸರಗೋಡು

ರಶ್ಮಿ ಕಾಸರಗೋಡು

ಮೈಕಲ್ ಜಾಕ್ಸನ್ ಹುಟ್ಟಿದ್ದು ಕಪ್ಪು ವರ್ಣದ ಜನಾಂಗದಲ್ಲಾಗಿದ್ದರೂ, ಸಂಗೀತ ಲೋಕದಲ್ಲಿ ಆತ ಬೆಳೆದು ನಿಂತದ್ದು ಕಪ್ಪು ಅಥವಾ ಬೆಳ್ಳಗಿನ ತ್ವಚೆಯಿಂದಾಗಿ ಅಲ್ಲ. ಅವನು ಕಪ್ಪು, ಬಿಳುಪು ಎರಡೂ ಆಗಿದ್ದನು. ಅವನು ಹೆಣ್ಣು ಗಂಡೂ ಆಗಿಯೇ ಅಪ್ರತಿಮನೆಂದೆನಿಸಿಕೊಂಡವನು. ಶತಮಾನಗಳಿಂದ ಕೀಳರಿಮೆಗೊಳಪಟ್ಟ ವರ್ಣಬೇಧ ನೀತಿಯಿಂದ ಹೊರಬಂದು ಕಪ್ಪು ತ್ವಚೆಯನ್ನು ತೊರೆದು ಬೆಳ್ಳಗಾಗುವುದರ ಜತೆಗೇ ಸಂಗೀತದೊಂದಿಗೆ ಜೀವನವನ್ನೇ ಬದಲಾಯಿಸಿದ್ದ ಜಾಕ್ಸನ್. ಈ ಬದಲಾವಣೆಯನ್ನು ಒಬ್ಬ ವ್ಯಕ್ತಿ ಹೇಗೆ ಸ್ವೀಕರಿಸಿ ಬದುಕುತ್ತಾನೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಮೈಕಲ್ ಜಾಕ್ಸನ್ ಸಂಗೀತದಲ್ಲಿ ಯಾವ ರೀತಿ ಹೊಸ ತರಂಗವನ್ನೇ ಸೃಷ್ಟಿಸಿದರೋ ಭಾರತೀಯ ಸಿನೆಮಾದಲ್ಲಿ ಅದೇ ರೀತಿಯ ಹೊಸ ಆವಿಷ್ಕಾರವನ್ನು ಮಾಡಿದ ಕೀರ್ತಿ ರಿತುಪರ್ಣೋಘೋಷ್ ಅವರಿಗೆ ಸಲ್ಲಬೇಕು. ಅದರಲ್ಲೂ ಹೆಣ್ಣು ಗಂಡೆಂಬ ಎರಡು ಲಿಂಗಗಳ ಹೊಯ್ದಾಟದಲ್ಲಿ ಉಭಯಲಿಂಗವನ್ನು ಪರಿಚಯಿಸುವ ಮೂಲಕ ಸಿನೆಮಾದ ಸೀಮಾರೇಖೆಯನ್ನು ದಾಟಿ ಒಂದು ವಿಪ್ಲವವನ್ನೇ ಸೃಷ್ಟಿಸಿದವರು ರಿತು ಎಂದರೆ ಅತಿಶಯೋಕ್ತಿಯಲ್ಲ!
9 ವರುಷಗಳ ಹಿಂದೆ ಚಾಂದ್ ಪೊಟ್ಟ್ ಎಂಬ ಮಲಯಾಳಂ ಸಿನಿಮಾ ನೋಡಿದ್ದೆ. ಹುಡುಗನೊಬ್ಬನನ್ನು ಹೆಣ್ಣಿನ ತರ ಬೆಳೆಸಿದರೆ ಅವ ಹೇಗಾಗುತ್ತಾನೆ ಎಂಬ ಚಿತ್ರಣ ಅದರಲ್ಲಿತ್ತು. ಆದಾದ ನಂತರ ನಾನು ಅವನಲ್ಲ ಅವಳು ಪುಸ್ತಕ ಓದಿದ್ದೆ. ತೃತೀಯ ಲಿಂಗಿಗಳ ಬೇಗುದಿ ಅರ್ಥವಾಗಿದ್ದು ಆವಾಗಲೇ. ಹೀಗೆ ನೋಡಿದ ಸಿನಿಮಾ, ಕಾಡಿದ ಪುಸ್ತಕಗಳ ಜತೆ ಗಮನ ಸೆಳೆದದ್ದು ರಿತುಪರ್ಣೋ ಘೋಷ್ ಎಂಬ ಕಲಾವಿದ. ಅವರ ಸಿನಿಮಾಗಳನ್ನು ನೋಡಿದಾಗ ಅವರ ಬಗ್ಗೆ ಅರಿಯಬೇಕೆಂಬ ಕುತೂಹಲ ಹುಟ್ಟುತ್ತಿತ್ತು. ಸಿನಿಮಾದ ಬಗ್ಗೆ ಅಲ್ಪ ಸ್ವಲ್ಪವೇ ಕ್ರೇಜ್ ಇರುವ ನನ್ನನ್ನು ರಿತು ಅದ್ಯಾಕೆ ಆ ಪರಿ ಸೆಳೆದರು ಎಂಬುದರ ಬಗ್ಗೆ ನನಗಿನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ರಿತು ಪರ್ಣೋ ಘೋಷ್ – ಕೊಲ್ಕತ್ತಾದ ‘ಭದ್ರಲೋಕ’ ಸಂಸ್ಕೃತಿಯ ಭದ್ರಕೋಟೆಯನ್ನು ಬೇಧಿಸುವ ಮೂಲಕ ಸಿನೆಮಾಗಳಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದವರು. ಇವರ ಸಿನೆಮಾಗಳು ಸನಾತನಿಗಳನ್ನು ಹುಬ್ಬೇರಿಸುವಂತೆ ಮಾಡಿದ್ದರೆ, ಸಾಂಸ್ಕೃತಿಕ ಉದಾರೀಕರಣಕ್ಕೊಳಗಾದವರು, ಮಾನಸಿಕವಾಗಿ ಈ ಸಂಪ್ರದಾಯಗಳಿಗೆ ಬದ್ಧರಾದವರಿಗೆ ಕೊಂಚ ಮುಜುಗರವನ್ನುಂಟು ಮಾಡಿದ್ದವು. ಮುಕ್ತ ಕಾಮ, ಸಲಿಂಗ ರತಿ, ಲಿವಿಂಗ್ ಟು ಗೆದರ್, ಮಂಗಳಮುಖಿಯರ ಅಂತರಾಳ, ಹೆಣ್ಮಕ್ಕಳ ಸೂಕ್ಷ್ಮ ಮನಸ್ಸು, ಗಂಡಿನ ಬೇಗುದಿ ಎಲ್ಲವನ್ನ್ನೂ ಉತ್ಪ್ರೇಕ್ಷೆಯಿಲ್ಲದೆಯೇ ತೆರೆಯ ಮೇಲೆ ತೋರಿಸಿದ ಗಟ್ಟಿಗ ಈತ. ತಮ್ಮ ಸಿನೆಮಾಗಳಲ್ಲಿ ಸಂಬಂಧಗಳಿಗೆ ಒತ್ತು ನೀಡುವ ಮತ್ತು ಇಂಥಾ ಸಂಬಂಧಗಳೊಂದಿಗೆ ಬೆಸೆದಿರುವ ವ್ಯಕ್ತಿಗಳ ಕುಟುಂಬ ಸದಸ್ಯರ ಮನಸ್ಥಿತಿಯನ್ನು ಅತಿ ಸೂಕ್ಷ್ಮವಾಗಿ ತೆರೆಯ ಮೇಲೆ ಕಟ್ಟಿಕೊಡುವುದರಲ್ಲಿ ರಿತು ಮೇಲುಗೈ ಸಾಧಿಸಿದ್ದರು. ಹೊಸ ನೋಟ, ಹೊಸ ಉದಾಹರಣೆ, ಹೊಸ ಮೀಮಾಂಸೆಗಳ ಮೂಲಕ ಮುಜುಗರದ ಪರದೆಯಾಚೆಗಿರುವ ಸಂಕೀರ್ಣ, ಸಂದಿಗ್ಧ ವಿಷಯಗಳನ್ನು ನಿರೂಪಿಸುವ ಮೂಲಕ ರಿತು ಸಿನೆಮಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ರಿತು ನನಗೆ ಇಷ್ಟವಾಗುತ್ತಾ ಹೋಗಿದ್ದು ಹೀಗೆ.
ಅಂದ ಕಾಲತ್ತಿಲ್ ಭಾರತದಲ್ಲಿ ಸಿನೆಮಾ ಎಂಬುದು ಪುರುಷ ಕಲೆಯಾಗಿತ್ತು. ಅಂದರೆ ಸಿನೆಮಾದಲ್ಲಿ ತೊಡಗಿಸಿಕೊಂಡವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಪುರುಷರು. ಇದೀಗ ಭಾರತೀಯ ಸಿನೆಮಾಗೆ 100 ವರ್ಷ ತುಂಬಿದ್ದರೂ, ಈ ಸಿನೆಮಾಗಳಲ್ಲಿ ಶೇ. 99 ಸಿನೆಮಾಗಳು ಪುರುಷ ನಿರ್ಮಿತವಾದವುಗಳೇ. ನಿರ್ಮಾಣ, ನಿರ್ದೇಶನ, ಛಾಯಾಗ್ರಹಣ, ವಿತರಣೆ, ಪ್ರದರ್ಶನ, ಜಾಹೀರಾತು, ಮಾರ್ಕೆಟಿಂಗ್ ಇವೆಲ್ಲವೂ ಪುರುಷರ ನಿಯಂತ್ರಣದಲ್ಲಿದ್ದು, ಇಲ್ಲಿ ಎಲ್ಲವೂ ಪುರುಷ ಪ್ರಧಾನವಾಗಿತ್ತು. ಹೀಗಿರುವಾಗ ಸ್ತ್ರೀಯರು, ದಲಿತರು, ಲೈಂಗಿಕ ಅಲ್ಪಸಂಖ್ಯಾತರು ಸಿನೆಮಾದಲ್ಲಿ ಜಾಗ ಕಂಡುಕೊಳ್ಳಲೇ ಇಲ್ಲ. ಶೇ.1 ರಷ್ಟು ಮಾತ್ರ ಇರುವ ಸ್ತ್ರೀ ನಿರ್ಮಿತ ಸಿನೆಮಾಗಳನ್ನು ಪರಿಶೀಲಿಸಿದರೆ ಅದರ ಕಥಾವಸ್ತು, ದೃಶ್ಯಾವಿಷ್ಕಾರ, ನೋಟಗಳು ಹಾಗೂ ವಿಭಿನ್ನ ದೃಷ್ಟಿಕೋನದಿಂದ ಸೃಷ್ಟಿಸಿದವುಗಳಾಗಿದ್ದವು. ಮಾತ್ರವಲ್ಲದೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಎಲ್ಲ ವಿಷಯಗಳಲ್ಲಿ ಪುರುಷರ ನಿಯಂತ್ರಣ ಇದ್ದೇ ಇರುತ್ತಿತು. ಈ ಸಂಸ್ಕೃತಿಯನ್ನು ಬೇಧಿಸುವ ಸಲುವಾಗಿ ರಿತು ತಮ್ಮ ಸಿನೆಮಾದಲ್ಲಿ ಮಹಿಳೆಯರ, ಲೈಂಗಿಕ ಅಲ್ಪಸಂಖ್ಯಾತರ ನೋವುಗಳನ್ನು ತೆರೆಯ ಮೇಲೆ ತಂದಿಟ್ಟರು. ‘ಮಹಿಳೆಯರನ್ನು ಇಷ್ಟೊಂದು ಅರ್ಥ ಮಾಡಿಕೊಂಡ ಬೇರೊಬ್ಬ ನಿರ್ದೇಶಕ ಇರಲಿಕ್ಕಿಲ್ಲ’ ಇದು ರಿತು ನಿರ್ದೇಶನದ ಬಗ್ಗೆ ಇರುವ ಒನ್‌ಲೈನ್ ಅಭಿಪ್ರಾಯ.
ಆದಾಗ್ಯೂ, ನಮ್ಮ ದೃಶ್ಯ ಪಾಠಶಾಲೆಗಳಾದ ಸಿನೆಮಾಗಳು ಇಲ್ಲಿ ಬರೆದ ಇತಿಹಾಸವೆಂದರೆ ಪುರುಷ ನೋಟಗಳ ದೃಶ್ಯಾವಿಷ್ಕಾರವೇ ಆಗಿದೆ. ಅವರ ದೃಷ್ಟಿಕೋನವನ್ನು ಒಪ್ಪಿಕೊಂಡೇ ನಮ್ಮ ಈ ಸಿನೆಮಾ ಉದ್ಯಮ ಮುಂದೆ ಸಾಗುತ್ತಿದೆ. ಹೀಗಿರುವಾಗ ಅದರಲ್ಲಿದ್ದುಕೊಂಡೇ ವಿಭಿನ್ನ ರೀತಿಯಲ್ಲಿ ಸಿನೆಮಾದ ಆಯಾಮವನ್ನು ಬದಲಿಸಿದ ವಿಪ್ಲವಕಾರಿ ರಿತುಪರ್ಣೋ ಘೋಷ್.
ಲಿಂಗಾಧಿಕಾರ ನಮ್ಮ ಆಯ್ಕೆ


ರಿತು ಎಂಬುದು ಗಂಡೋ , ಹೆಣ್ಣೋ ಎಂಬ ಗೊಂದಲ ಹಲವರಿಗೆ ಕಾಡಿದೆ. ಹೀಗಿರುವಾಗ ಲಿಂಗಾಧಿಕಾರ ನಮ್ಮ ಆಯ್ಕೆ ಎಂಬ ಈ ವಿಪ್ಲವಕ್ಕೆ ನಾಂದಿ ಹಾಡಿದ್ದು ಇದೇ ರಿತು. ಅದೂ ತನ್ನ ಪುರುಷತ್ವ ಎಂಬ ಹೊರೆಯನ್ನು ಸ್ವಯಂ ತ್ಯಜಿಸುವ ಮೂಲಕ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಈ ಬದಲಾವಣೆಗಾಗಿ ಆತ ಮೊದಲಿಗೆ ಪುರುಷನಲ್ಲಿರುವ ಸ್ತ್ರೀತ್ವವನ್ನು ಹೊರಬರುವಂತೆ ಮಾಡಿದರು. ಆಮೇಲೆ ಹೆಣ್ಣಾಗಿಯೇ ಬದಲಾಗುತ್ತಾ ಹೋದರು. ಒಟ್ಟಿನಲ್ಲಿ ಗಂಡು ಹಾಗೂ ಹೆಣ್ಣನ್ನು ಮೀರಿ ಅದರ ಸೀಮಾರೇಖೆ, ಚೌಕಟ್ಟು, ಕಟ್ಟುಪಾಡುಗಳನ್ನು ತೊಡೆದು ಹಾಕಿ ಅದರಿಂದಾಚೆ ಬೆಳೆದು ಬಿಟ್ಟರು. ಲಿಂಗಾಧಿಕಾರ ನಮ್ಮ ಆಯ್ಕೆ ಎಂಬುದನ್ನು ಸಾಧಿಸಿ ತೋರಿಸಿದ ರಿತು, ಅದನ್ನೇ ಒಂದಾಗಿ, ಎರಡಾಗಿ, ಒಂದು ಮತ್ತು ಎರಡನ್ನು ಒಟ್ಟಿಗೆ ಸೇರಿಸಿ ಮತ್ತೆ ಒಂದಾಗಿಸಿ ಪ್ರತಿಯೊಬ್ಬರಿಗೂ ಒಂದೊಂದೇ ರೀತಿಯಲ್ಲಿ ಆಯ್ಕೆ ನೀಡಿ ಅದನ್ನೇ ದೃಶ್ಯಾವಿಷ್ಕಾರವಾಗಿಸಿ ತನ್ನ ಸಿನೆಮಾಗಳಲ್ಲಿ ತೋರಿಸಿರುವ ರಿತು ಇಫೆಕ್ಟ್ ನಾವಿಲ್ಲಿ ಕಾಣಬಹುದು. ತನ್ನ ಕೊನೆಯ ಮೂರು ವರ್ಷಗಳಲ್ಲಿನ ಸಿನೆಮಾದ ಮೂಲಕ ಈ ಭೂತಕಾಲ ನಿರಾಸೆಯನ್ನು ರಿತು ಯಥಾರ್ಥ್ಯವನ್ನಾಗಿಸಿದರು. ರಿತು ಅವರ ಸಿನೆಮಾ ಮತ್ತು ಜೀವನಕ್ಕೆ ಸಂಬಂಧಪಟ್ಟಂತೆ ಇದು ಏಕ ಕಾಲದಲ್ಲಿ ಒಳಗೂ ಹೊರಗೂ ನಡೆದ ಕಲಾಪವಾಗಿತ್ತು. ಇದು ಹಲವರಿಗೆ ಅರ್ಥವಾಗದೇ ಹೋದ ಕಾರಣ ಮನಸ್ತಾಪಕ್ಕೂ ಕಾರಣವಾದದ್ದಿದೆ. ಚಲನಚಿತ್ರದ ಓದು, ನಿರ್ಮಾಣದಲ್ಲಿ ಪುರುಷ ದೃಷ್ಟಿ ಸಿನೆಮಾದ ಮೂಲವಾಗಿ ಬಿಟ್ಟಿರುವುದೇ ಇದಕ್ಕೆಲ್ಲಾ ಕಾರಣ. ಉಭಯ ಲಿಂಗಿಗಳಿಗೆ ಸಾರ್ವಜನಿಕ ಸಮೂಹ ಮತ್ತು ಮನಶಾಸ್ತ್ರವು ಪ್ರತ್ಯೇಕ ಮುದ್ರೆಯೊತ್ತಿ ಒಂದು ಬದಿಗೆ ತಳ್ಳಲ್ಪಟ್ಟಾಗ, ಅವರ ಮೇಲೆ ದಯೆ ತೋರಿ ಎಂಬುದು ಘೋಷಣೆಯಾಗಿಯೇ ಉಳಿದಾಗ ಅದನ್ನು ಸಿನೆಮಾ ಮಾಧ್ಯಮದ ಮೂಲಕ ಬೆಳಕಿಗೆ ತಂದವರು ರಿತು. ಅದು ಸಿನೆಮಾರಂಗದಲ್ಲಾದ ಬದಲಾವಣೆಯೆಂದೆನಿಸಿದರೂ, ರಿತು ಜೀವನದಲ್ಲಿಯೂ ಈ ಬದಲಾವಣೆಗಳು ಸಾಕಷ್ಟು ಪ್ರಭಾವ ಬೀರಿದ್ದವು.
ರಿತು ಸಿನಿಮಾ ಕಾಡಿದ್ದು ಹೀಗೆ
ಜಸ್ಟ್ ಎನದರ್ ಲವ್ ಸ್ಟೋರಿ
2010ರಲ್ಲಿ ‘ಅರೇಕ್ತಿ ಪ್ರಿಮೇರ್ ಗಾಲ್ಪೋ’ (ಜಸ್ಟ್ ಎನದರ್ ಲವ್‌ಸ್ಟೋರಿ) ಎಂಬ ಸಿನೆಮಾದ ಮೂಲಕ ಓರ್ವ ಪುರುಷ ನಿರ್ದೇಶಕ ಎಂಬ ಸ್ವಲಿಂಗ ಪದವಿಗೆ ರಿತು ತೆರೆ ಎಳೆದರು. ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ಮಾಣ ಮಾಡಿ, ಹೆಣ್ಣಾಗಿಯೂ ಸಲಿಂಗಕಾಮಿಯಾದ ಮೂರನೇ ಲಿಂಗ ನಿರ್ದೇಶಕನಾಗಿಯೂ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು ರಿತು. ಬಂಗಾಳದಲ್ಲಿ ಮಹಿಳೆಯರಿಗೆ ನಾಟಕ ವೇದಿಕೆ ನಿಷೇಧಿಸಿದ್ದ ಕಾಲದಲ್ಲಿ ನಾಲ್ಕು ದಶಕಗಳವರೆಗೆ ಅಲ್ಲಿ ಸ್ತ್ರೀವೇಷ ಧರಿಸಿ ನೃತ್ಯ ಮಾಡಿದ ಚಪಲ್ ಬಾಧುರಿ ಎಂಬ ವ್ಯಕ್ತಿಯ ಕಥೆ ಹೇಳುವ ಚಿತ್ರವಾಗಿತ್ತು, ಜಸ್ಟ್ ಎನದರ್ ಲವ್ ಸ್ಟೋರಿ. ಚಪಲ್ ಬಾಧುರಿಯ ಬಗ್ಗೆ ಡಾಕ್ಯುಮೆಂಟರಿ ತಯಾರಿಸುವ ನಿರ್ದೇಶಕನಾಗಿ ರಿತು ಇದರಲ್ಲಿ ಅಭಿನಯಿಸಿದ್ದರು. ಚಪಲ್ ಬಾಧುರಿಯಾಗಿ ಅವರೇ ಬೆಳ್ಳಿತೆರೆಗೆ ಬಂದಾಗ ರಿತು (ಚಪಲ್‌ಬಾಧುರಿ) ನೃತ್ಯ ಮಾಡುತ್ತಿದ್ದ ಸ್ತ್ರೀವೇಷಗಳ ಭೂತಕಾಲವನ್ನು ಅಭಿನಯಿಸಿದ್ದರು. ಕ್ರಮೇಣ ಚಪಲ್ ಬಾಧುರಿಯ ಜೀವನ ರಿತು ಅವರ ಜೀವನಕ್ಕೆ ಪರಕಾಯ ಪ್ರವೇಶ ಮಾಡುತ್ತಾ ಹೋಗುವುದನ್ನು ಈ ಚಿತ್ರದಲ್ಲಿ ಕಾಣಬಹುದು.
ಚಿತ್ರಾಂಗದೆಯ ಬಯಕೆ
2001ರಲ್ಲಿ ಚಿತ್ರಕಥೆ ಬರೆದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಸಂಜೋಯ್ ನಾಗ್ ನಿರ್ದೇಶಿಸಿದ ‘ಮೆಮರೀಸ್ ಇನ್ ಮಾರ್ಚ್‌’, 2012ರಲ್ಲಿ ಕಥೆ ಬರೆದು ನಿರ್ದೇಶಿಸಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ‘ಚಿತ್ರಾಂಗದಾ’ ತೆರೆಕಂಡಾಗ ರಿತು ಭಾರತೀಯ ಸಿನೆಮಾದಲ್ಲಿ ಹೊಸ ಲಿಂಗಕ್ಕೆ ಹೊಸ ಭಾಷ್ಯ ಬರೆದರು. ‘ಮೆಮರೀಸ್ ಇನ್ ಮಾರ್ಚ್‌’ನಲ್ಲಿ ಕೊಲ್ಕತ್ತಾಗೆ ಬರುವ ಅಮ್ಮನಿಗೆ ಅಲ್ಲಿ ಮುಖಾಮುಖಿಯಾಗಬೇಕಾಗಿ ಬರುವುದು ತನ್ನ ಮಗನ ಸಲಿಂಗಕಾಮಿಗಳಾದ ಗಂಡು ಮಕ್ಕಳನ್ನು, ಗಂಡಿನಲ್ಲಿರುವ ಹೆಣ್ಣು ಭಾವವನ್ನು. ಇಂಥ ಸೂಕ್ಷ್ಮ ವಿಷಯಗಳನ್ನು ಹೆಣ್ಣೊಬ್ಬಳು, ಅದರಲ್ಲೂ ಮಾತೃಹೃದಯದಲ್ಲಾಗುವ ತಲ್ಲಣಗಳನ್ನು ತೆರೆಯ ಮೇಲೆ ತೋರಿಸಿರುವುದು ಅದ್ಭುತ.
‘ಚಿತ್ರಾಂಗದಾ’ ಚಿತ್ರದ ಮೂಲಕ ರಿತು ಟಾಗೋರರ ಕಥೆಗೆ ಮರಳಿ ಬರುತ್ತಾರೆ. ಗಂಡಾಗಿ ಬೆಳೆಸಲ್ಪಟ್ಟ ಚಿತ್ರಾಂಗದೆಯಲ್ಲಿರುವ ಹೆಣ್ಣುಭಾವಗಳನ್ನು ತೆರೆ ಮೇಲೆ ತೋರಿಸಿ ಗಂಡು ಹೆಣ್ಣಿನ ಲಿಂಗಾಧಿಕಾರವನ್ನು ಪ್ರಶ್ನಿಸುವಂತೆ ಮಾಡುತ್ತಾರೆ ರಿತು. ಟಾಗೋರರ ಚಿತ್ರಾಂಗದೆಗೆ ದೃಶ್ಯಪಾಠ ನೀಡಿದ ಸಲಿಂಗಕಾಮಿಯಾದ ನೃತ್ಯ ಸಂಯೋಜಕನಾಗಿಯೂ ಚಿತ್ರಾಂಗದೆಯಾಗಿಯೂ ದ್ವಿಪಾತ್ರ ಮಾಡಿದ ರಿತು ಅವರ ಅಭಿನಯವಂತೂ ಎಕ್ಸಲೆಂಟ್. ತನ್ನ ಗೆಳೆಯನ ಪ್ರಣಯ ಸಮರ್ಪಣೆಗಾಗಿ ಅವನ ವಿರೋಧವನ್ನು ಲೆಕ್ಕಿಸದೆ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗಾಗಿ ವಿಧೇಯನಾಗುವ ಸಲಿಂಗಕಾಮಿ ನೃತ್ಯ ನಿರ್ದೇಶಕ ಆ ಬದಲಾವಣೆಯ ಮಧ್ಯೆ ಸ್ವಂತ ಅಪ್ಪ ಅಮ್ಮನ ದೃಷಿಯಲ್ಲಿ ವಿಚಾರಣೆಗಳನ್ನೆದುರಿಸುತ್ತಾರೆ.
ಹೆಣ್ಣಾಗುವ ಹಂಬಲದಿಂದ ಶಸ್ತ್ರಚಿಕಿತ್ಸೆ ಮಾಡಿ ಇನ್ನೇನು ಸ್ವಲ್ಪ ಬಾಕಿಯಿದೆ ಅನ್ನುವ ಹೊತ್ತಿಗೆ ತನ್ನ ಗೆಳೆಯನ ಮುಂದೆ ಆತನ ಪ್ರೇಯಸಿ, ತನ್ನ ಅಪ್ಪ, ಅಮ್ಮನ ಮುಂದೆ ಆತ ಸೋಲುತ್ತಾನೆ. ‘ನಿನ್ನಲ್ಲಿರುವ ದೇಹಕ್ಕೆ ಜನ್ಮ ನೀಡಿದವಳು ನಾನು.. ನಿನ್ನ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತಿದೆ ಎಂಬುದನ್ನು ಅರಿಯುವ ಹಕ್ಕು ನನಗಿದೆ’ ಎನ್ನುವ ಡೈಲಾಗ್ ಮಾತೃ ಹೃದಯದ ಬೇಗುದಿಯನ್ನು ಬಿಂಬಿಸುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಲಿರುವ ಶ್ರಮವನ್ನು ಅರ್ಧದಲ್ಲಿ ಬಿಟ್ಟು ಲಿಂಗ ಪದವಿಯ ನೂಲು ಸೇತುವೆಯ ಮೂಲಕ ಆ ಕಲಾವಿದ ಜೀವನದ ಸೇತುವೆಯನ್ನು ದಾಟುವುದನ್ನು ನಾವಿಲ್ಲಿ ಕಾಣಬಹುದು. ಚಿತ್ರಾಂಗದ ಸಿನೆಮಾದಲ್ಲಿ ನಮಗೆ ದಕ್ಕಿದ್ದು ಅಲ್ಲಿಯವರೆಗೆ ಭಾರತೀಯ ಸಿನೆಮಾದಲ್ಲಿ ಲಭಿಸದ ಸೌಂದರ್ಯ ದರ್ಶನದ ಅನುಭೂತಿ.
ಸ್ವಂತ ದೇಹವನ್ನು ಮೈಕಲ್ ಜಾಕ್ಸನ್ ನಂತೆ ಒಂದು ಪ್ರಯೋಗ ವಸ್ತುವನ್ನಾಗಿ ಮಾಡಿದ ರಿತು ಶಾರೀರಿಕವಾಗಿ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾರೆ. ಹಾರ್ಮೋನು ಚಿಕಿತ್ಸೆಗಳೂ, ಪಾತ್ರ ನಿರ್ವಹಣೆಗಾಗಿ ಮಾಡಿದ ಹಲವಾರು ಇನ್ನಿತರ ಚಿಕಿತ್ಸೆಗಳಿಂದ ಅವರ ದೇಹ ಕ್ಷೀಣವಾಗಿತ್ತು. ಆದರೆ ಹೊಸತನದ ಕಿಚ್ಚು ಮನಸ್ಸಲ್ಲಿ ಉರಿದು, ಸಿನೆಮಾದ ಮೂಲಕ ಹೊಸತೊಂದು ಹೂವಾಗಿ ಅರಳುತ್ತಿತ್ತು.
ಚೋಖೇರ್‌ಬಾಲಿ


ಅವರ ಇನ್ನೊಂದು ಚಿತ್ರವಾದ ‘ಚೋಖೇರ್‌ಬಾಲಿ’ಯಲ್ಲಿ ‘ಚಾರುಲತಾ’ದ ಪ್ರಭಾವ ತುಂಬಾನೇ ಇದೆ ಎಂದು ಅನಿಸಿದರೂ, ‘ರೇ’ ಸಿನೆಮಾಗಳಿಗಿಂತ ಇದು ತುಂಬಾನೇ ಭಿನ್ನವಾಗಿತ್ತು. ಟಾಗೋರ್ ಕೃತಿಗಳನ್ನಾಧರಿಸಿ ನಿರ್ಮಿಸಿದ ಸಿನೆಮಾ ‘ಚೋಖೇರ್ ಬಾಲಿ’. ಬಂಗಾಳ ವಿಭಜನೆ ಘೋಷಣೆಯ ವಿರುದ್ಧ ಕೊಲ್ಕತ್ತಾದಲ್ಲಿ ಜನರೋಷ ಕಂಡು ಬಂದ ಕಾಲದಲ್ಲಿ ಬಿನೋದಿನಿ ಎಂಬ ವಿವಾಹಿತೆ ಸ್ತ್ರೀ ಸಮಾಜದ ಕಟ್ಟುಪಾಡುಗಳನ್ನು ಭೇದಿಸಲು ಪ್ರಯತ್ನಿಸುತ್ತಿರುವ ದೃಶ್ಯಕಾವ್ಯ ಈ ಸಿನೆಮಾ. ವಿವಾಹಿತೆಯಾಗಿ ಒಂದು ವರ್ಷ ತುಂಬುವ ಮೊದಲೇ ಸುಂದರಿಯಾಗಿದ್ದ ಬಿನೋದಿನಿಗೆ ವಿಧವೆಯಾಗಬೇಕಾಗಿ ಬರುತ್ತದೆ. ಈ ಹಿಂದೆ ವಿವಾಹ ಪ್ರಸ್ತಾಪ ಮಾಡಿದ್ದ ಮಹೇಂದ್ರ ಮತ್ತು ಆತನ ಗೆಳೆಯ ಬೆಹರಿ ಸಿಕ್ಕ ನಂತರ ಬಿನೋದಿನಿಯ ಜೀವನ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ಸಿನೆಮಾದ ಒನ್‌ಲೈನ್ ಸ್ಟೋರಿ. ಮಹೇಂದ್ರ ಅವರ ಅಮ್ಮನ ಆಸೆ ಪ್ರಕಾರ ಅವರ ಜತೆ ವಾಸಿಸುವ ಬಿನೋದಿನಿ ಅವನ ಹೆಂಡತಿ ಆಶಾಲತ ಜತೆ ಸ್ನೇಹಿತೆಯಾಗುತ್ತಾಳೆ. ಮಹೇಂದ್ರನ ಮನೆಯಲ್ಲಿ ಬಿನೋದಿನಿಯ ವಾಸ್ತವ್ಯ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವ ಹೆಚ್ಚಾಗಿ ಕಂಡು ಬಂದ ಬಂಗಾಳದ ಸವರ್ಣೀಯ ಹಿಂದೂ ಕುಟುಂಬದ ಸ್ತ್ರೀಯರ ತೊಂದರೆಗಳನ್ನು ವಿವಿಧ ಆಯಾಮಗಳಲ್ಲಿ ತೋರಿಸುವ ಮೂಲಕ ಸಿನೆಮಾ ಮುಂದುವರಿಯುತ್ತದೆ. ಪ್ರಸ್ತುತ ಸಿನೆಮಾದಲ್ಲಿ ಆಶಾಲತ ಮತ್ತು ಮಹೇಂದ್ರ ಸಾಂಪ್ರದಾಯಿಕತೆಯ ಪ್ರತೀಕಗಳಾಗಿ ಕಂಡುಬಂದರೆ ಬಿನೋದಿನಿ ಬಂಗಾಳಕ್ಕೆ ಆಗಮಿಸುತ್ತಿರುವ ಆಧುನಿಕ, ಸ್ವಾತಂತ್ರ್ಯ ಹಾಗೂ ಸ್ತ್ರೀ ಸ್ವಾತಂತ್ರ್ಯದ ಪ್ರತಿನಿಧಿಗಳಾಗುತ್ತಾರೆ.
ತಿತ್ತಲಿ ಮತ್ತು ದಹನ್
ಅಮ್ಮನೊಂದಿಗೆ ಸಂಬಂಧವಿರಿಸಿಕೊಂಡಿದ್ದ ಹಿರಿಯ ನಟನೊಂದಿಗೆ ಮಗಳಿಗೆ ಕ್ರಶ್ ಆಗುವುದು ‘ತಿತ್ತಲಿ’ ಎಂಬ ಚಿತ್ರದ ಸಾರ. ಇಲ್ಲಿ ರಿತು ಅಮ್ಮ ಮತ್ತು ಮಗಳ ಸಂಬಂಧದ ಕಥೆ ಹೇಳಿದರೆ, ‘ದಹನ್‌’ ಚಿತ್ರದಲ್ಲಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮಗಳ ನೋವಿನ ಕಥೆಯನ್ನು ಹೇಳುತ್ತಾರೆ. ಕೊಲ್ಕತ್ತಾದ ಬೀದಿಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯ ನೋವು, ದೌರ್ಜನ್ಯದ ವಿರುದ್ಧ ಬಂಡಾಯವೆದ್ದ ಮಹಿಳೆಯರ ಸಂಘರ್ಷಗಳು, ಸಮಾಜದ ದೃಷ್ಟಿಕೋನ… ಎಲ್ಲವನ್ನೂ ದಹನ್ ಚಿತ್ರದಲ್ಲಿ ನಿರೂಪಿಸುವ ಮೂಲಕ ರಿತು ಸಮಾಜದ ಕನ್ನಡಿಯಾಗುತ್ತಾರೆ.
ಅಬೋಹಮಾನ್
2009 ರಲ್ಲಿ ತೆರೆಕಂಡ ‘ಅಬೋಹಮಾನ್‌’ ಪ್ರತಿಭಾವಂತ ನಿರ್ದೇಶಕನೊಬ್ಬನ ಬದುಕಿನ ದುರಂತ ಚಿತ್ರಣ. ತನ್ನ ಮಗನ ವಯಸ್ಸಿನವಳೇ ಆಗಿರುವ ತನ್ನ ಸಿನೆಮಾದ ನಾಯಕಿಯಲ್ಲಿ ಅನುರಕ್ತನಾಗುವ ಮಧ್ಯ ವಯಸ್ಸು ದಾಟಿದ ನಿರ್ದೇಶಕ ಅನಿಕೇತ್‌ನ ಕಥೆ ಇಲ್ಲಿದೆ. ನಿರ್ದೇಶಕ ಅನಿಕೇತ್ ಕೊನೆಗೆ ಪತ್ನಿ ಮತ್ತು ಮಗನ ತಿರಸ್ಕಾರಕ್ಕೆ ಒಳಗಾಗುತ್ತಾ ಒಂಟಿ ಬದುಕು ಸಾಗಿಸುತ್ತಾನೆ. ಇತ್ತ ಅನಿಕೇತನ ಪತ್ನಿ ಮಗನನ್ನು ನಿರ್ದೇಶಕನನ್ನಾಗಿ ರೂಪಿಸುವ ಮೂಲಕ ಗಂಡನ ವಿರುದ್ಧ ಮೌನವಾಗಿ ಸೇಡು ತೀರಿಸಿಕೊಳ್ಳುತ್ತಾಳೆ. ಇಲ್ಲಿ ರಿತು ಸಂಬಂಧಗಳ ನಡುವಿನ ತಿಕ್ಕಾಟ, ಪ್ರೀತಿ ಪ್ರೇಮಗಳನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡಿದ್ದಾರೆ.
ಶುಭೋ ಮೊಹರತ್
ಅಗಥಾ ಕ್ರಿಸ್ಟಿಯವರ ‘The Mirror Crack’d from Side to Side’, ‘ ಎಂಬ ಕಥೆಯನ್ನು ಆಧರಿಸಿದ ಸಿನೆಮಾ ‘ಶುಭೋ ಮೊಹರತ್‌’. ಇಲ್ಲಿ ಕಕೋಲಿ ಎಂಬ ನಟಿಯ ಹತ್ಯೆ ಸುತ್ತ ಸಿನೆಮಾ ಕಥೆ ಗಿರಕಿ ಹೊಡೆಯುತ್ತದೆ. ಅದರ ಜತೆಗೇ ಭೂತಕಾಲ ಹಾಗೂ ವರ್ತಮಾನಕಾಲದ ವ್ಯಕ್ತಿ ಸಂಬಂಧಗಳ ತಿಕ್ಕಾಟಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಸುಜಾತ ಎಂಬ ನಟಿಯ ಜೀವನದ ಕಥೆ ಹೇಳುವ ರಿತು ಅವರ ಮೊದಲ ಟೆಲಿಫಿಲ್ಮ್ ‘ಅಭಿನಂತರ್‌’ (2001). ಈ ಟೆಲಿಫಿಲ್ಮ್ ಮೂಲಕ ರಿತು ಸೆಲ್ಯೂಲಾಯ್ಡ್ ಲೋಕದ ಬಣ್ಣದ ಜೀವನದಲ್ಲಿ ಅದರ ರಹಸ್ಯಗಳನ್ನು ತೆರೆಯುತ್ತಾ ಹೋಗುತ್ತಾರೆ.
ರೈನ್‌ಕೋಟ್
ಓ ಹೆನ್ರಿ ಅವರ ‘The Gift of the Magi ‘ ಕಥೆಯಿಂದ ಸ್ಪೂರ್ತಿ ಪಡೆದು ನಿರ್ದೇಶಿಸಿದ ಸಿನೆಮಾ ‘ರೈನ್‌ಕೋಟ್‌’. ವಿವಾಹಿತೆಯಾಗಿರುವ ತನ್ನ ಹಳೆ ಪ್ರೇಯಸಿಯ ಜತೆ ಮನುವಿನ ಮಾತುಕತೆ, ಕಷ್ಟದಲ್ಲಿದ್ದರೂ ತನ್ನ ಕಷ್ಟಗಳನ್ನು ಪ್ರಿಯಕರನ ಮುಂದೆ ತೋರಿಸದೆ ನಗುತ್ತಾ ಬಾಯಿಬಡುಕಿಯಂತೆ ಮಾತನಾಡುವ ನೀರು… ಈ ಇಬ್ಬರ ನಡುವಿನ ಸಂಭಾಷಣೆಯಲ್ಲಿಯೇ ಸಿನೆಮಾ ಕಥೆ ಸಾಗುತ್ತದೆ. ನೀರು ಮತ್ತು ಮನುವಿನ ಮೌನ ಇಲ್ಲಿ ಮಾತಾಗುತ್ತದೆ, ಅವರ ಮಾತು ಕಥೆ ಹೇಳುತ್ತದೆ.
ದೋಸರ್
ವರ್ತಮಾನ ಕೊಲ್ಕತ್ತಾ ನಗರದ ಹಿನ್ನೆಲೆಯಲ್ಲಿ ಚಿತ್ರಿಸಿದ ಸಿನೆಮಾ ‘ದೋಸರ್‌’ (2006). ಈ ಚಿತ್ರದಲ್ಲಿ ಕೌಶಿಕ್ ಮತ್ತು ಕಾಂಬೋರಿ ಒಂದೊಳ್ಳೆಯ ದಾಂಪತ್ಯ ಜೀವನ ನಡೆಸುತ್ತಿರುತ್ತಾರೆ. ಒಂದು ಘಟನೆಯಿಂದ ಕೌಶಿಕ್‌ನ ನಿಜವಾದ ಸ್ವಭಾವ ಗೊತ್ತಾದಾಗ ಈ ಕುಟುಂಬದ ಸಂತಸ ನಷ್ಟವಾಗುತ್ತದೆ. ತನ್ನ ಗಂಡ ಸ್ನೇಹಿತನ ವಂಚನೆಯ ಬಗ್ಗೆ ಕಾಂಬೋರಿ ಆಂತಕಕ್ಕೆ ಒಳಪಡುತ್ತಾಳೆ. ಗಂಡನ ಅನಾರೋಗ್ಯದಿಂದಾಗಿ ಆತನಿಗೆ ಶುಶ್ರೂಶೆ ಮಾಡುವಾಗಲೂ ತನ್ನನ್ನು ವಂಚಿಸಿದವನನ್ನು ಆರೈಕೆ ಮಾಡುವುದು ಯಾಕೆ ಎಂದು ಒಳಮನಸ್ಸು ಹಲುಬುತ್ತಿರುತ್ತದೆ. ಸ್ತ್ರೀಯ ಒಳಮನಸ್ಸಿನ ತಳಮಳಗಳನ್ನು ರಿತು ಇಲ್ಲಿ ತೋರಿಸಿರುವುದು ಸಿನೆಮಾದ ಪ್ಲಸ್ ಪಾಯಿಂಟ್.
ಅಸುಖ್, ನೌಕಾದುಬಿ, ಬರಿವಾಲಿ
‘ಅಸುಖ್‌’ ಎಂಬ ಸಿನೆಮಾ ರವೀಂದ್ರ ನಾಥ ಟಾಗೋರರ ‘ಟೋಟೋ ಅಮರ್‌ಮೊಯ್‌’ ಎಂಬ ಕವಿತೆಯ ಸ್ಫೂರ್ತಿಯಾಗಿತ್ತು. ಅದೇ ವೇಳೆ ‘ನೌಕಾದುಬಿ’, ಶಕ್ತಿಯುತವಾದ ಗಾಳಿಗೆ ಸಿಕ್ಕಿ ಮುಳುಗಿ ಹೋದ ಒಂದು ದೋಣಿಯಲ್ಲಿರುವ ನಾಲ್ಕು ಯಾತ್ರಿಕರ ಜೀವನ ಈ ಅಪಘಾತದ ನಂತರ ಹೇಗೆ ಬದಲಾಗುತ್ತದೆ ಎಂಬ ಕಥಾವಸ್ತುವನ್ನು ಹೊಂದಿದೆ. ಸಾಮಾನ್ಯವಾಗಿ ರಿತು ಅವರ ಸಿನೆಮಾದೊಳಗೊಂದು ಸಿನೆಮಾ ಇರುತ್ತದೆ. ‘ಬರಿವಾಲಿ’ ಚಿತ್ರ ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಈ ಚಿತ್ರದಲ್ಲಿ ವಿಧವೆ ಬಾನಲತಾ ಎಂಬ ಮಧ್ಯ ವಯಸ್ಕೆಯಾದ ಸ್ತ್ರೀಯ ಏಕಾಂತತೆಗೆ ಭಂಗಮಾಡುವ ಹಲವು ಕಥಾಪಾತ್ರಗಳ ಮೂಲಕ ಚಿತ್ರದ ಕಥೆ ಸಾಗುತ್ತದೆ. ಒಂದು ಸಿನೆಮಾ ನಿರ್ಮಾಣ ಯುನಿಟ್ ಬಾನಲತಾಳ ಎಸ್ಟೇಟ್‌ನಲ್ಲಿ ಶೂಟಿಂಗ್‌ಗಾಗಿ ಬರುವುದು. ಅದು ಅವರ ಏಕಾಂತತೆಯನ್ನು ಭಂಗ ಪಡಿಸುವುದು ಚಿತ್ರದ ಕಥಾವಸ್ತು. ನಿರ್ದೇಶಕರಾದ ದೀಪಾಂಕರನೊಂದಿಗೆ ಬಾನಲತೆಯ ಪ್ರೀತಿ ಸಂಬಂಧ ಸಿನೆಮಾ ಶೂಟಿಂಗ್ ಮುಗಿಯುವ ವೇಳೆಗೆ ಹೇಗೆ ಸಂದಿಗ್ಧತೆಯಲ್ಲಿ ಸಿಲುಕುತ್ತದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಸ್ತ್ರೀಯ ಏಕಾಂತತೆ, ಏಕಾಂತ ಜೀವನ, ಸ್ನೇಹ, ಒದ್ದಾಟ ಹೆಣ್ಣಿನ ಮನಸ್ಸಿನ ಚಿತ್ರಣ ಎಲ್ಲವನ್ನೂ ಅಷ್ಟೇ ನಾಜೂಕಾಗಿ ಇಲ್ಲಿ ತೋರಿಸಲಾಗಿದೆ.
ಟಾಗೋರ್, ರೇ ಮತ್ತು ರಿತು
ರವೀಂದ್ರನಾಥ ಟಾಗೋರರ ಕೃತಿಗಳ ಪುನರಾವಿಷ್ಕಾರ, ಪುನರ್‌ವ್ಯಾಖ್ಯಾನಗಳನ್ನು ಮಾಡುವ ಮೂಲಕ ಟಾಗೋರರ ಕೃತಿಗಳನ್ನು ಬೆಳ್ಳಿತೆರೆಗೆ ತಂದವರು ರಿತು. 1994ರಲ್ಲಿ ರಿತುಪರ್ಣೋ ಘೋಷ್ ಅವರನ್ನು ಭಾರತೀಯ ಸಿನೆಮಾ ನಕಾಶೆಯಲ್ಲಿ ಗುರುತಿಸುವಂತೆ ಮಾಡಿದ ‘ಉನಿಷೆ ಏಪ್ರಿಲ್‌’ ನಿಂದ ಆರಂಭಗೊಂಡ ಸಿನೆಮಾಗಳು ಬಂಗಾಳದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವು ಎಂದೇ ಹೇಳಬಹುದು. ರೇ, ಮೃಣಾಲ್‌ಸೇನ್, ಶ್ಯಾಂ ಬೆನೆಗಲ್ ಪರಂಪರೆಯ ನಂತರ ಒಂದು ಮಾಸ್ಟರ್ ಟಚ್‌ನ ಅಭಾವ ಅನುಭವಿಸಿದವರಿಗೆ ಉತ್ತರವಾಗಿ ನಿಂತವರು ಘೋಷ್. ಕಳೆದ ಎರಡು ದಶಕಗಳಲ್ಲಿ ರಿತು ನಿರೀಕ್ಷೆಗಿಂತ ಮಿಗಿಲಾಗಿ ಬೆಳೆದು ಬಿಟ್ಟರು. ಕಾಲದ ಋತುಗಳ ಜತೆ ಸ್ವಯಂ ಬದಲಾವಣೆಗೊಳ್ಳುವ ಅವರ ರೀತಿ ಇಲ್ಲಿ ನಿರ್ಣಾಯಕ ಪಾತ್ರವಹಿಸಿತು. ಹಳೆಯ ದಿಲ್ಲಿ ಚಲನ ಚಿತ್ರೋತ್ಸವವನ್ನು ಮೆಲುಕು ಹಾಕಿದರೆ ವ್ಯತ್ಯಸ್ತವಾದ ಜುಬ್ಬಾ ಧರಿಸಿದ ರಿತು ಅಲ್ಲೊಂದು ಮಿಂಚಿನ ಸಂಚಾರವನ್ನೇ ಸೃಷ್ಟಿಸುತ್ತಿದ್ದರು. ಅವರ ಅಮ್ಮ ತೀರಿ ಹೋದ ನಂತರವೇ ರಿತು, ಅಮ್ಮನ ಆಭರಣಗಳನ್ನು ಧರಿಸಿತೊಡಗಿದರು ಎಂದು ಹೇಳಲಾಗುತ್ತಿದೆ. ಕ್ರಮೇಣ ಒಂದೊಂದೇ ಚಲನಚಿತ್ರೋತ್ಸವಗಳು ಕಳೆಯುವಾಗ ಅವರು ಬದಲಾಗುತ್ತಾ ಹೋದರು. ಅವರ ನಡತೆಯಲ್ಲಿ ಮಾತ್ರ ಇದ್ದ ಆ ಸ್ತ್ರೀಯ ಅಂಶಗಳು ಕ್ರಮೇಣ ಸ್ತ್ರೀ ಭಾವಗಳನ್ನು ಒಳಗೊಂಡಿತು. ಪರಿಣಾಮ ಅವರ ಸ್ವಭಾವ ವೇಷದಿಂದ ಭಾವಕ್ಕೆ ಬದಲಾಗುತ್ತಾ ಹೋಯಿತು.
ಸಾಯುವ ಮುನ್ನ ರಿತು ವ್ಯೋಮ್‌ಕೇಶ್ ಭಕ್ಷಿಯ ಕಥಾಪಾತ್ರದ ‘ಸತ್ಯಾನ್ವೇಷಿ’ ಎಂಬ ಥ್ರಿಲ್ಲರ್ ಚಿತ್ರದ ಮೂಲಕ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದರು. ಆದರೆ ಚಿತ್ರ ಪೂರ್ಣವಾಗುವುದಕ್ಕಿಂತ ಮುನ್ನವೇ ಸಿನೆಮಾಲೋಕದಲ್ಲಿ ರಿತುಪರ್ವವನ್ನೇ ಸೃಷ್ಟಿಸಿದ್ದ ಘೋಷ್ 2013 ಮೇ 30ರಂದು ನಮ್ಮನ್ನಗಲಿ ಹೋದರು. ತನ್ನ ವ್ಯಕ್ತಿತ್ವದಿಂದ ಬಂಗಾಳವನ್ನೂ, ಕೊಲ್ಕತ್ತಾದ ಫ್ಯೂಡಲ್ ಅಧಿಕಾರವನ್ನೂ ನಡುಗಿಸಿದ್ದ ರಿತು ಪರ್ಣೋ ಘೋಷ್ ಅಂದೊಮ್ಮೆ ಸಂದರ್ಶನದಲ್ಲಿ ಮಾತನಾಡುತ್ತಾ ‘ಕೊಲ್ಕತ್ತಾಗೆ ನನ್ನನ್ನು ಪೂರ್ಣವಾಗಿ ಅಂಗೀಕರಿಸಲು ಸಾಧ್ಯವಾಗದೇ ಇದ್ದರೂ ನನ್ನನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಕೊಲ್ಕತ್ತಕ್ಕೆ ಮಾತ್ರವಲ್ಲ, ರಿತು ಅವರ ಕ್ರಿಯೇಟಿವಿಟಿಯನ್ನು ಇಡೀ ಸಿನೆಮಾರಂಗಕ್ಕೆ ಕಡೆಗಣಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ರಿತುಗೆ ಸಮಾನರಾದ ಇನ್ನೊಬ್ಬ ನಿರ್ದೇಶಕ ಮತ್ತೆ ಹುಟ್ಟಿ ಬರುವುದು ಅಸಾಧ್ಯ…!
 

‍ಲೇಖಕರು G

May 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Ravi Kulkarni

    Rashmi, ultimate one…
    reetu avara bagge atyuttamavagi barediddiri..!
    Tumba khushi aaitu..

    ಪ್ರತಿಕ್ರಿಯೆ
  2. Anonymous

    raincoat movie had stirred my mind for many days for its plot and the technical brilliance. there should some meaningful critics on RPGs movies. Indians needs to accept ritu as one of the most best film maker of modern India. rip ritu da!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: