ಅರೆಯುತ್ತ, ನಮ್ಮನ್ನೇ ನಾವು ಅರಿಯುತ್ತ..

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ.

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಇದು ಹೇಳಿಕೇಳಿ ಸುಗ್ಗಿ ಸಮಯ. ಹೊಲದಾಗ ಹೊಸದಾಗಿ ತೆನಿ ಮೂಡ್ತಾವ. ಇಂಥ ಎಳೀಕಾಳಂದ್ರ ಹಾಲ್ದೆನಿ ತುಂಬಿದ ಕಾಳುಗಳು. ಈ ಸಮಯದಾಗ ಇವನ್ನೆಲ್ಲ ಉಪ್ಪು ನೀರಿಗೆ ಹಾಕಿ ಕುದಿಸಿ ತಿನ್ನೂ ಸುಖದ ಮುಂದ ಯಾವ ಮೃಷ್ಟಾನ್ನನೂ ಬೇಡ. ನಮ್ಮ ಧಾರವಾಡದ ಸಂತಿ ಇರಲಿ, ರಾಯಚೂರಿನ ಸಂತಿ ಇರಲಿ, ಕಲಬುರ್ಗಿಯ ಕಣ್ಣಿ ಮಾರ್ಕೆಟ್‌ ಇರಲಿ. ಎಲ್ಲ ಕಡೆನೂ ಹಸಿಕಾಳುಗಳನ್ನು ಗುಡ್ಡೆ ಹಾಕಿಕೊಂಡು ಮಾರಾಟ ಮಾಡ್ತಾರ.

ಈ ಕಾಳ್ತೆನಿ ಆಯೂದೆ ಒಂದು ಕಲೆ. ಅಗ್ದಿ ಎಳೀವಿದ್ರ, ಒಳಗ ಕಾಳಿರುದಿಲ್ಲ. ಅಗ್ದಿ ಜೊಳ್ಳಿರ್ತಾವ. ಬರೇ ಕಾಯಿ ಎಳಕೊಳ್ಳಾಕ ಹೋದ್ರ ಎಳೀ ಮುಳ್ಳಿರ್ತಾವ. ಅವನ್ನೇನರೆ ಹಂಗೇ ಬಾಯೊಳಗಿಟ್ಕೊಂಡು ಎಳದ್ರಿ ಅಂದ್ರ.. ಬಾಯ್ಬಿಟ್ರ ‘ಚುಚ್ಚು ಮಾತುಗಳೆ.’ ಹಂಗಂತ ಒಂಚೂರು ಬಲಿತ ಕಾಳುಗಳನ್ನು ಆಯ್ಕೆ ಮಾಡ್ಕೊಂಡ್ರ ಒಳಗ ಹಾಲ್ದೆನಿ ಇರೂದಿಲ್ಲ. ಒಗರೊಗರು ಅನಿಸ್ತದ. ಅಗ್ದಿ ಹದ ನೋಡಿ ಕಾಳು ಆಯ್ಕೊಬೇಕು. ಅವು ಹೆಂಗಿರಬೇಕು ಅಂದ್ರ ಎಳೀ ಹೊಟ್ಟಿಯೊಳಗ ಕಾಳು ತುಂಬ್ಕೊಂಡಿರಬೇಕು. ಮಿರಮಿರ ಮಿಂಚ್ತಿರಬೇಕು. ಮ್ಯಾಲಿನ ಸಿಪ್ಪಿ ಮಿಂಚದೇ ಕಡು ಹಸಿರು ಬಣ್ಣಕ್ಕ ಬಂದಿದ್ರ ಅವು ಹುರಿಯಾಕಲ್ಲ, ಬೇಯಿಸಿಕೊಂಡು ತಿನ್ನಾಕ ಹದವಾಗಿರ್ತಾವ.

ತಿಳೀ ಹಸಿರು ಬಣ್ಣದ ತೆನಿ ಮುಟ್ಟಿದಾಗ ಕಾಳುಕಾಳು ಕೈಗೆ ಹತ್ತಬೇಕು. ಅಂಥ ಕಾಳಿರುವ ಗುಡ್ಡೆಯನ್ನು ಆಯ್ಕೆ ಮಾಡ್ಕೊಬೇಕು. ಆದ್ರ ಮಾರಾಟಕ್ಕ ಕುಂತೋರು ಯಾವ ಎಂಬಿಎ ಶಾಲೆಯ ವಿದ್ಯಾರ್ಥಿಗಳಿಗೂ ಕಡಿಮಿ ಇರೂದಿಲ್ಲ. ಅವರು ಹಾಕಿರುವ ಗುಡ್ಡೆಯ ಹೊಟ್ಟಿಯೊಳಗ ಕಾಳಿರದ ಎಳೀಕಾಯಿಗಳನ್ನು ಹಾಕಿರ್ತಾರ. ಮ್ಯಾಲೆ ಅಗ್ದೀ ತಾಜಾಹಸಿರು ಕಾಳಿನ ಗುಡ್ಡೆ ಒತ್ತಿರ್ತಾರ.

ಈ ದಿನದೊಳಗ ನಮ್ಮೂರಾಗೆಲ್ಲ ಇಳಿಸಂಜಿ ಚಳಿಯೊಳಗ ಢಣಢಣ ಸದ್ದು ಕೇಳಿಸಿದ್ರ ಬಟಾಣಿ ಹುರಿಯುವವರು ಬಂದ್ರು ಅಂತನೇ ಅರ್ಥ. ಬಟಾಣಿ ಕಾಳಿಗೆ ಚೂರೆಚೂರು ಎಣ್ಣಿ ಹಾಕು, ಉಪ್ಪು ಉದುರಿಸಿಕೊಟ್ರ, ಹೊರಗ ಸುಳಿಯುವ ತಣ್ಣನೆಯ ಗಾಳಿಗೂ, ತಿನ್ನುವ ಈ ಕಾಳುಗಳಿಗೂ.. ಆಹಹಾ.. ಚಳಿ, ಉಪ್ಪು, ಬಿಸಿ ಕಾಳು.. ಚಳಿಯನ್ನು ಆನಂದಿಸುವುದೇ ಹೀಗೆ. ಇಲ್ಲಾಂದ್ರ ಭರ್ತಿ ಕಾಳು ತಂದು, ಕುದಿಕುದಿ ನೀರಾಗ ಹಾಕಿ, ಮುಚ್ಚಿಟ್ಬಿಡ್ತಾರ. ನೀರು ಆರೂತನಾನೂ.. ಅವು ಹದವಾಗಿ ಉಮಗೊಳ್ತಾವ.

ಹುಂಗ ಉಮಗೊಳ್ಳೂಮುಂದ ಕಾಯಿಗಳ ಸಿಪ್ಪಿ, ಸೊಟ್ಟಿ ಉಪ್ಪುನೀರು ಹೀರ್ಕೊಂತಾವ. ಅವನ್ನು ನಾವು ಹೀರಿ, ಬೀಜ ಎಳದು, ಸಿಪ್ಪಿಯಷ್ಟೆ ಉಗುಳಬೇಕು. ಕೆಲವೊಮ್ಮೆ ಬಟಾಣಿಯನ್ನು ಹಿಂಗ ತಿನ್ನೂಮುಂದ ಅಣಕಿಸುವ ಕಾಯಿ ತಿಂತಾರ ಅಂತಿದ್ವಿ.

ಅಲಸಂದಿ ಕಾಳು ಬಂದ್ರಂತೂ ಮನ್ಯಾಗ ಸಂಭ್ರಮನೆ ಸಂಭ್ರಮ. ಅಲಸಂದಿ ಕಾಳು, ಸುಲದು, ಅದಕ್ಕ ಬಳ್ಳೊಳ್ಳಿ, ಹಸಿಮೆಣಸಿನ ಕಾಯಿ, ಜೀರಗಿ ಹಾಕಿ, ಅವಡಜಬಡ ಜಜ್ಜಿ ಕೊಡ್ತೀವಿ. ಆ ಹಿಟ್ಟನ್ನು ವಡೆ ಮಾಡಿ, ಎಣ್ಣೆಗೆ ಕರೀತೀವಿ. ಈ ವಡೆಯನ್ನು ಚಹಾಜೊತಿಗೆ ಸವಿಯೂದು ಚಳಿಗಾಲವನ್ನು ಸಂಪೂರ್ಣ ಅನುಭವಿಸಿದಂಗೆ. ಹಿಟ್ಟನ್ನು ಅರಿಯುವುದು, ನಮ್ಮನ್ನೇ ಅರಿಯೂದು… ಒಂದು ಪ್ರಕ್ರಿಯೆ. ಹಾಲ್ದೆನಿಯನ್ನು ಬೇಯಿಸಿ, ತಿನ್ನುವಾಗ ಸಿಗುವ ಉಪ್ಪಿನ ಸ್ವಾದ, ರೈತರ ಉಪ್ಪಿನ ಋಣವನ್ನು ನೆನಪಿಸುವಂತಿರುತ್ತದೆ.

ಅರಿಯೂಮುಂದ, ನಮ್ಮ ಅಹಂಕಾರ ದೂರ ಸಿಡೀತಿರ್ತದ. ಆದರ ಕೈಲೆ ಒಳಕಲ್ಲಿನಾಗ, ಚಮಚೇಲೆ ಮಿಕ್ಸಿಯೊಳಗ ತಿರುವಿ ಒಟ್ಟುಗೂಡಸ್ತೇವಿ ಹಿಂಗ ತಿರುವೂಮುಂದ, ಒಟ್ಟುಗೂಡುಮುಂದ ನಾವು ನಮ್ಮತನ ಮರೀತೇವಿ. ಗುಂಪಿನಾಗ, ಒಟ್ಟುಗೂಡಿದಾಗ ಬಲತಡಿಯೂದು ಸಲೀಸಾಗ್ತದ. ಒಬ್ಬೊಬ್ಬರೇ ಆದ್ರ ಸಿಡಿದು ದೂರ ಬೀಳ್ತೇವಿ. 
ಈ ಕಾಳು ಅರಿಯುವುದರೊಳಗ ನಮ್ಮನ್ನು ನಾವು ಅರಿಯುವ ಪ್ರಕ್ರಿಯೆ ನಡದೇ ಇರ್ತದ. ಚಳಿಗಾಲವನ್ನು ಆನಂದಿಸುವುದು, ಅರಿಯುತ್ತಲೇ ಆನಂದಿಸುವುದು ಹಿಂಗ

‍ಲೇಖಕರು ಅನಾಮಿಕಾ

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: