ಅರುಣ್ ಜೋಳದಕೂಡ್ಲಿಗಿ ಕಾಲಂ : ಪಾತ್ರೆ ಪರಿಕರಗಳಲ್ಲಿ ಹೆಣ್ಣಿನ ಒಡಕಲು ಬಿಂಬಗಳು

`ಹಳೆ ಪಾತ್ರೆ, ಹಳೆ ಕಬುಣ, ಹಳೆ ಪೇಪರ್ ತರ ಹೋಯ್, ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯ್’ ಎಂಬ ಜಂಗ್ಲಿ ಚಲನಚಿತ್ರದ ಯೋಗರಾಜ ಭಟ್ಟರು ಬರೆದ ಹಾಡು ಹೆಚ್ಚು ಚರ್ಚೆಗೆ ಒಳಗಾಯಿತು. ಇದು  ಚರ್ಚೆ ಎನ್ನುವುದಕ್ಕಿಂತ ನಕಾರಾತ್ಮಕ ಭಾವನೆಯ ಅಸಹನೆಯನ್ನು ಹುಟ್ಟಿಸಿತ್ತು ಎನ್ನುವುದೇ ಸರಿ.
ಲೈಂಗಿಕ ದ್ವಂದ್ವಾರ್ಥದ ನೂರಾರು ಹಾಡುಗಳ ಬಗ್ಗೆ ಹುಟ್ಟದ ಅಸಹನೆ ಈ ಹಾಡಿನ ಬಗ್ಗೆ ಹುಟ್ಟಿತ್ತು. ಇದಕ್ಕೆ ಕಾರಣ ಹೀಗಿರಬಹುದು. ಈ ಹಾಡಿನ ಪಲ್ಲವಿಯೇ ಹಳೆ ಪಾತ್ರೆ, ಕಬುಣ, ಪೇಪರ್ ಕೊಳ್ಳುವವನೊಬ್ಬ ಬಜಾರದಲ್ಲಿ ಕೂಗುತ್ತಾ ಬರುವಂತೆ ಕೇಳಿಸುತ್ತದೆ. ಹಾಗೆ ಕೂಗುವವನ ಬಟ್ಟೆ ಕೊಳೆಯಾಗಿ, ಒಂದಷ್ಟು ದುರ್ವಾಸನೆ ಬೀರುತ್ತಿರುವ ಚಿತ್ರವೊಂದು ಈ ಹಾಡಿನ ಬೆನ್ನಲ್ಲೆ ಹುಟ್ಟುವ ಸಾಧ್ಯತೆ ಇದೆ.
ಹೀಗೆ ಹಳೆ ಪಾತ್ರೆ, ಕಬುಣ, ಪೇಪರ್ ಕೊಳ್ಳುವ ಕೆಲಸವನ್ನು ಪ್ರೀತಿ ಪ್ರೇಮದ ಜತೆಗಿನ ಸಮೀಕರಣ ಕೂಡ `ಅನಿಸುತಿದೆ ಯಾಕೋ ಇಂದು..’ ಎಂಬಂತಹ ಕೋಮಲ ನಂಬಿಕೆಯೊಂದನ್ನು ಒಡೆದಂತಿದೆ. ಇಂತಹ ತೀರಾ ಕೆಳವರ್ಗದ ಜನರು ಮಾಡುವ ಕಳಪೆ ಕೆಲಸವನ್ನು ಸಿನೆಮಾದ ಹಾಡಿನ ಸಾಹಿತ್ಯವನ್ನಾಗಿ ಮಾಡಿರುವುದು ಈ ಬಗೆಯ ವಿರೋಧಕ್ಕೆ ಕಾರಣವಾಗಿರಬಹುದು. ಈ ಹಾಡನ್ನು ವಿರೋಧಿಸಿದವರ ಸಾಮಾಜಿಕ ಹಿನ್ನೆಲೆ ನೋಡಿದರೂ ಇದು ಅರಿವಿಗೆ ಬರುತ್ತದೆ.
ಹಾಡು ಬರೆದ ಯೋಗರಾಜ ಭಟ್ಟರೇನು ಈ ಹಾಡು ಬರೆಯುವಾಗ ಹೀಗೆ ಕೀಳು ಕೆಲಸವನ್ನು ಉನ್ನತೀಕರಿಸುವ ಭಾವನೆಯೇನೂ ಇರಲಿಕ್ಕಿಲ್ಲ. ಬದಲಾಗಿ ಹಾಡಿನ ಸಾಹಿತ್ಯದಲ್ಲಿ ಈತನಕ ಬಳಕೆಯಾಗದ ಹೊಸ ನುಡಿಗಟ್ಟೊಂದು ಜನರನ್ನು ಆಕರ್ಷಿಸಬಹುದು ಎನ್ನುವ ತತಕ್ಷಣದ ಪ್ರಯೋಜನವಾದಿ ದೃಷ್ಟಿ ಇರಬಹುದಷ್ಟೆ. ಈ ಹಾಡಿನ ವಿಶ್ಲೇಷಣೆ ಮಾಡುವಾಗ `ಹಳೆಪಾತ್ರೆ’ಯೊಂದು  ನನ್ನನ್ನು ಕಾಡಿತು. ಅಂತೆಯೇ ಅಕಾಡೆಮಿಕ್ ವಲಯ ಚರ್ಚೆ ಮಾಡಲು ಅಷ್ಟು ಗಂಭೀರ ವಿಷಯವೇನೂ ಅಲ್ಲದ ಪಾತ್ರೆ ಪರಿಕರಗಳಲ್ಲಿ ಹೆಣ್ಣಿನ ಬಿಂಬಗಳನ್ನು ಕಾಣಬೇಕೆನಿಸಿತು. ಈ ಬರಹವನ್ನು ನೋಡಿ ಅಕಾಡೆಮಿಕ್ ಶಿಸ್ತಿನ ಜನ ಕೊಂಕು ನುಡಿಯುವ ಸಾಧ್ಯತೆಯಂತೂ ಇದ್ದೇ ಇದೆ. ಇರಲಿ, ಪಾತ್ರೆ ಪರಿಕರಗಳ ಬೆನ್ನು ಹತ್ತಿ ಹೆಣ್ಣಿನ ಒಡಕಲು ಬಿಂಬಗಳನ್ನು ಕಾಣಲು ಈ ಅಂಕಣದಲ್ಲಿ ಪ್ರಯತ್ನಿಸಿರುವೆ, ಒಮ್ಮೆ ಓದಿ. ಮೆಚ್ಚುವ ಟೀಕಿಸುವ ಸ್ವಾಂತಂತ್ರ್ಯ ನಿಮಗಿದ್ದೇ ಇದೆ.
ನಾನೊಮ್ಮೆ ಅವ್ವನ ಜತೆ ಪಾತ್ರೆ (ಭಾಂಡೆ) ಅಂಗಡಿಗೆ ಹೋಗಿದ್ದೆ. ಅಲ್ಲಿನ ಪಾತ್ರೆಗಳು ಒಂದೊಂದು ಕಂಪನಿಯ ಲೇಬಲ್ಲನ್ನು ಅಂಟಿಸಿಕೊಂಡಿದ್ದವು. ಅಂತೆಯೇ ಹೆಣ್ಣುಮಕ್ಕಳ ವಿವಿಧ ಭಂಗಿಗಳ ಜಾಹಿರಾತಿಯ ಫಲಕಗಳಿದ್ದವು. ಅದರಲ್ಲಿ ಸೀರೆ ಉಟ್ಟು ಅಡುಗೆ ಮಾಡುವ ಹೆಣ್ಣುಮಕ್ಕಳ ಚಿತ್ರಗಳಿರುವಂತೆ, ಆಧುನಿಕ ಮಾದರಿಯ ಉಡುಗೆ ತೊಟ್ಟ ಮಾಡ್ರನ್ ಹುಡುಗಿಯರೂ ಅಡುಗೆ ಮಾಡುವ ಫೋಜು ಕೊಟ್ಟಿದ್ದರು. ಇದು ಏಕಕಾಲದಲ್ಲಿ ಸಾಂಪ್ರದಾಯಿಕ ಮಹಿಳೆಯರನ್ನೂ, ಮಾಡ್ರನ್ ಹುಡುಗಿಯರನ್ನೂ ಸಾಂಕೇತಿಸುವಂತಿತ್ತು. ಅಥವಾ ಮಹಿಳೆ ಎಷ್ಟೇ ಮಾಡ್ರನ್ ಆದರೂ ಅಡುಗೆ ಕೆಲಸ ಅವಳದೇ ಎನ್ನುವುದನ್ನು ಸಮೀಕರಿಸಿದಂತಿತ್ತು. ಆ ಅಂಗಡಿಯಲ್ಲಿ ಹೆಣ್ಣುಮಕ್ಕಳೇ ತುಂಬಿದ್ದರು. ಕೆಲವು ಗಂಡಸರು ಇದ್ದರಾದರೂ, ಅವರಲ್ಲಿ ‘ನೀವೇನೆ ತೊಗೊಳ್ಳಿ ನಾ ಹಣ ಕೊಡ್ತಿನಿ’ ಎನ್ನುವ ಅಹಂಭಾವ ಇದ್ದಂತೆ ಕಾಣುತ್ತಿತ್ತು. ಇದು ಪಾತ್ರೆ ಪರಿಕರಗಳಿಗೂ ಮತ್ತು ಹೆಣ್ಣಿಗೂ ಬಿಡದ ನಂಟನ್ನು ಬೆಸೆಯುವ ಮುಂದುವರಿಕೆಯಂತೆ ಕಂಡಿತು.
ಹಾಗೆಯೇ ಅಲ್ಯುಮಿನಿಯಂನ ಹಳೆಯ ಪಾತ್ರೆ ಮುಂತಾದ ಪರಿಕರಗಳನ್ನು ಮಾರಾಟ ಮಾಡಿ, ಅದಕ್ಕೆ ಹೆಚ್ಚಿನ ಹಣ ಕೊಟ್ಟು ಹೊಸ ಪಾತ್ರೆಗಳನ್ನು ಕೊಳ್ಳುವ ಮಹಿಳೆಯರೂ ಇದ್ದರು. ಕ್ಷಣಾರ್ಧದಲ್ಲಿ ಪಾತ್ರೆ ಅಂಗಡಿಯವ ಆ ಹಳೆಯ ಸಾಮಾನುಗಳನ್ನು ದೊಡ್ಡ ಹಿಡಿಯಿಂದ ಜಜ್ಜಿ ನುಣ್ಣಗೆ ಮಾಡಿ ಚೀಲಕ್ಕೆ ತುಂಬಿದನು. ಆ ಪಾತ್ರೆ ಸಾಮಾನುಗಳನ್ನು ಮಾರಿದ ಹೆಣ್ಣುಮಗಳು ಜಜ್ಜುವಿಕೆಗೆ ಮುಕ್ಕಾಗುತ್ತಿದ್ದ ಪರಿಕರಗಳನ್ನು ನೋಡುತ್ತಾ ತನ್ನ ಭಾವಕೋಶಕ್ಕೆ ಹೊಡೆತ ಬಿದ್ದಂತೆ ದುಃಖಿತಳಾದಳು. ಇದು ಅವಳ ಮತ್ತು ಪಾತ್ರೆ ಪರಿಕರಗಳ ಜತೆಗಿನ ಆಪ್ತ ನಂಟನ್ನು ತೋರಿಸುತ್ತಿತ್ತು.
ಆಹಾರ ತಯಾರಿಕೆಯ ಒಂದೊಂದು ಪರಿಕರಗಳ ಹಿಂದೆಯೂ ಚರಿತ್ರೆ ಇದೆ. ಇದನ್ನು ಅಧ್ಯಯನಕಾರರು ಹುಡುಕಹೊರಟರೆ, ಅದು ಕೇವಲ ಆಯಾ ಪಾತ್ರೆ ಪಗಡದ ಚರಿತ್ರೆ ಮಾತ್ರ ಆಗಿರದೆ ಮಹಿಳಾ ಚರಿತ್ರೆಯ ಜತೆಗೂ ತಳಕು ಹಾಕಿಕೊಳ್ಳುತ್ತದೆ. ಎಷ್ಟೋ ಬಾರಿ ಇಂತಹ ಅಮುಖ್ಯ ಸಂಗತಿಗಳು ಅಧ್ಯಯನದ ವಿಷಯವಾಗುವುದೇ ಇಲ್ಲ. ಹಾಗಾಗಿ ಚರಿತ್ರೆಯಲ್ಲಿ ಇವುಗಳು ಹೇಳಬೇಕಿದ್ದ ಮಾತುಗಳು ಮೌನವಾಗಿಯೇ ಉಳಿಯುತ್ತವೆ.
ಆಹಾರ ವೈವಿದ್ಯತೆಯಂತೆಯೇ ಆಹಾರ ಪರಿಕರಗಳಲ್ಲಿಯೂ ವೈವಿದ್ಯತೆ ಇದೆ. ಈ ವೈವಿದ್ಯತೆಯು ಸಮಾಜದ ವಿವಿಧ ಸ್ಥರಗಳನ್ನೂ, ಜಾತಿ ವೈವಿದ್ಯವನ್ನೂ, ಶ್ರೇಣೀಕರಣವನ್ನೂ, ಪ್ರಾದೇಶಿಕ ಭಿನ್ನತೆಯನ್ನೂ ,ಲಿಂಗ ತಾರತಮ್ಯಗಳನ್ನೂ ಒಟ್ಟೊಟ್ಟಿಗೆ ದ್ವನಿಸುತ್ತದೆ. ಕರ್ನಾಟಕದಲ್ಲಿನ ಆಹಾರ ಪರಿಕರಗಳ ವೈವಿದ್ಯವು ಇಲ್ಲಿಯ ಸಾಂಸ್ಕೃತಿಕ ವೈವಿದ್ಯವನ್ನೂ ತೋರಿಸುತ್ತದೆ. ಒಂದೇ ಪರಿಕರಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳೂ ಅದರ ಬಳಕೆಯ ನೆಲೆಗಳೂ ಭಿನ್ನವಾಗಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಮಹಿಳೆಯ ಶೋಧದ ಫಲಗಳೂ ಇವೆ.
ಜಾನಪದ ನುಡಿಗಟ್ಟುಗಳಲ್ಲಿ ಆಹಾರ ಪರಿಕರಗಳ ಬಳಕೆಯಿದೆ. ಇವುಗಳ ಹಿಂದಿನ ಧೋರಣೆ ಗ್ರಹಿಸಲು ಕೆಲವು ಉದಾಹರಣೆ ನೋಡಬಹುದು. ಸೊಟ್ಟಗ ಇದ್ದೂ ಕೈಸುಟ್ಟುಕೊಳ್ಳು( ಉಪಾಯ ಇದ್ದೂ ಅಪಾಯ ತಂದುಕೊಳ್ಳುವುದು), ಓಡಲ್ಲಿ ಉರಿದು ಸುಣ್ಣ ಕಲ್ಲೊಳಗೆ ಬಿರಿಹುಯ್( ಚಿತ್ರ ಹಿಂಸೆಕೊಡು, ಓಡು-ಬಾಣಲಿ ಆಕಾರದ ಒಡೆದ ಮಡಕೆಯ ತಳಭಾಗ) ಒರಳು ಕಲ್ಲಿಗೆ ತಲೆ ಕೊಡು( ಅಪಾಯಕ್ಕೆ ತಲೆಯೊಡ್ಡು, ಒರಳು- ಬತ್ತವನ್ನು ಒನಕೆಯಿಂದ ಕುಟ್ಟಲು ಮಾಡಿರುವ ಕಲ್ಲಿನ ಗುಳಿ ಒಳಕಲ್ಲು) ಒರೆ ಇಕ್ಕು (ಪರೀಕ್ಷಿಸಿ ನೋಡು) ಒಲೆ ಹೂಡು(ಸಂಸಾರ ಮಾಡತೊಡಗು) ಆವುಗೆಯಲ್ಲಿ ಬೇಯು(ಉಸಿರು ಕಟ್ಟುವ ವಾತವರಣದಲ್ಲಿ ಬದುಕು,ಸಂಕಟಪಡು.ಆವುಗೆ-ಕುಂಬಾರಮಡಕೆಗಳನ್ನು ಬೇಯಿಸುವ ಒಲೆ) ಬಾಣಲೆಯಿಂದ ಬೆಂಕಿಗೆ ಬೀಳು(ಸಣ್ಣ ತೊಂದರೆಯಿಂದ ಪಾರಾಗಲು ಹೋಗಿ ದೊಡ್ಡ ತೊಂದರೆಗೆ ಒಳಗಾಗು) ಬಾನಿ ತುಂಬು( ಹೊಟ್ಟೆ ತುಂಬಿಸು, ಬಾನಿ-ದೊಡ್ಡ ಮಣ್ಣಿನ ಪಾತ್ರೆ) ಮೊಡಕೇಲಿ ಉಂಡು ಮೊಗೇಲಿ ಕೈತೊಳೆಯದಿರು( ಅಚ್ಚುಕಟ್ಟು ಕಲಿ, ಕಸಮಾರಿಯಾಗದಿರು) ಲಟ್ಟಣಿಗೇಲಿ ಗಟ್ಟಿಸು(ಸಂಭೋಗಿಸು) ಮುಂತಾದ ನುಡಿಗಟ್ಟುಗಳನ್ನು ನೋಡಬಹುದು.
ಇಂತಹ ನುಡಿಗಟ್ಟುಗಳಿಗೂ ಮಹಿಳೆಯ ಬದುಕಿಗೂ ಒಂದು ಬಗೆಯ ಸಾವಯವ ಸಂಬಂಧ ಇರುವಂತೆ ಕಾಣುತ್ತಿದೆ. ಹಿಂಸೆ, ಬೇಯುವಿಕೆ, ಉಸಿರುಕಟ್ಟುವ ವಾತಾವರಣ, ಅಪಾಯಕ್ಕೆ ಸಿಲುಕು, ಭೋಗದ ವಸ್ತು ಮುಂತಾದ ಅರ್ಥಗಳು ಪರೋಕ್ಷವಾಗಿ ಮಹಿಳೆಯರ ಬದುಕನ್ನು ನಿರ್ದೇಶಿಸುತ್ತಿವೆ. ಅಥವಾ ಮಹಿಳೆಗೆ ಹೊಂದಿಕೊಂಡಂತಿದ್ದ ಪಾರಂಪರಿಕ ನುಡಿಗಟ್ಟುಗಳನ್ನು ಸಹಾ ಇವು ಸೂಚಿಸುತ್ತಿರಬಹುದು.
ಈಗಲೂ ಗ್ರಾಮೀಣ ಪ್ರದೇಶದಲ್ಲಿ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಅಡುಗೆ ಪರಿಕರಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಅದರಲ್ಲಿ ಕೊಟ್ಟವರ ಹೆಸರು ಹಾಕಿಸಿ ಟಂಕಿಸಿ ಸಂಭ್ರಮಿಸುತ್ತಾರೆ. ಹಾಗಾಗಿ ಮದುವೆ ಮುಂತಾದ ಕಡೆ ಉಡುಗೊರೆಯಾಗಿ ಕೊಟ್ಟ ಅಡುಗೆ ಸಾಮಾನುಗಳು ಕೊಟ್ಟವರ ನೆನಪನ್ನು ಸದಾ ಬಚ್ಚಿಟ್ಟುಕೊಂಡಿರುತ್ತವೆ.

ಮದುವೆಯಲ್ಲಿ ಹೆಣ್ಣಿನ ತಂದೆ ತಾಯಿ ತಮ್ಮ ಮಗಳ ಹೊಸ ಜೀವನಕ್ಕೆ ಅನುವಾಗಲೆಂದು ಭಾಂಡೆ ಸಾಮಾನನ್ನು ಕೊಡುವ ಪದ್ದತಿ ಇದೆ. ಇದು ಕರ್ನಾಟಕದ ಹಲವು ಭಾಗಗಳಲ್ಲಿ ಈಗಲೂ ಪ್ರಚಲಿತದಲ್ಲಿದೆ. ಮದುವೆಯಾದ ನಂತರ ಈ ಭಾಂಡೆ ಸಾಮಾನುಗಳನ್ನು ಹಿಡಿದು ಕುಣಿಯುತ್ತಾ ಮೆರವಣಿಗೆಯಲ್ಲಿ ಗಂಡಿನ ಮನೆಗೆ ಸಾಗಿಸುತ್ತಾರೆ. ಆಗೆಲ್ಲಾ ಆಹಾರ ಪರಿಕರಗಳು ಮದುಮಕ್ಕಳಂತೆ ಸಂಭ್ರಮಿಸುತ್ತವೆ. ಹೀಗೆ ತವರು ಮನೆಯವರು ಕೊಡುವ ಭಾಂಡೆಯನ್ನು ಆಧರಿಸಿ ಹೆಣ್ಣಿನ ಅಂತಸ್ತು ನಿರ್ದಾರವಾಗುತ್ತದೆ.
ಆಹಾರ ತಯಾರಿಕೆಯ ಪರಿಕರಗಳಲ್ಲಿ ಹಲವು ಬಗೆಯ ಸಾಂಸ್ಕೃತಿಕ ವೈವಿದ್ಯಗಳಿವೆ. ಈ ಎಲ್ಲಾ ವೈವಿದ್ಯಗಳು ಅಡುಗೆಯ ಹೊಸ ಶೋಧದಿಂದ ಹುಟ್ಟಿಕೊಂಡಿವೆ. ಈ ಶೋಧದ ಮೂಲ ಮಹಿಳೆ. ಇಂತಹ ಹಲವು ಪರಿಕರಗಳು ಜನರ ಸಂಸ್ಕೃತಿಯ ಭಾಗವಾಗಿ ಬೆರೆತಿವೆ. ಅಥವಾ ಸಾಮಾಜಿಕ ನಂಬಿಕೆಗೆ ಪೂರಕವಾಗಿ ಬಳಕೆಯಾಗುತ್ತಿವೆ.
ಆಹಾರ ಪರಿಕರಗಳ ಮೂಲಕ ಮಹಿಳಾ ಬದುಕನ್ನು ಅರಿಯಬಹುದು. ಇದು ನಗು ತರಿಸುವ ಮಾತಾದರೂ, ಸೂಕ್ಷ್ಮ ಸಂಗತಿ. ಈ ನೆಲೆಯಲ್ಲಿ ಮಹಿಳಾ ವಿಷಯಗಳನ್ನು ಭಿನ್ನವಾಗಿ ನೋಡಲು ಸಾಧ್ಯವಿದೆ. ಮಹಿಳಾ ವಿದ್ಯಾಭ್ಯಾಸದ ವಿಷಯ ಬಂದಾಗಲೆಲ್ಲಾ ಎಷ್ಟು ಓದಿದ್ರೂ ಮುಸ್ರೆ ತಿಕ್ಕೋದು ತಪ್ಪೀತಾ? ಎನ್ನುವ ತುಂಬಾ ಜನಪ್ರಿಯ ಮಾತೊಂದಿದೆ. ಈ ಮಾತು ಮಹಿಳೆ ಮತ್ತು ಆಹಾರ ತಯಾರಿಕಾ ಪರಿಕರಗಳ ಜತೆ ಒಂದು ಸಾವಯವ ಸಂಬಂಧವನ್ನು ಕಟ್ಟಿಹಾಕುತ್ತಿದೆ. ಅದು ಮಹಿಳೆ ವಿದ್ಯಾಬ್ಯಾಸಕ್ಕೆ ತೆರೆದುಕೊಂಡರೂ ಮುಸುರೆ ತಿಕ್ಕುವ ಕೆಲಸ ನಿಲ್ಲುವುದಿಲ್ಲ ಎನ್ನುವ ನಂಬಿಕೆಯನ್ನು ಬಲಗೊಳಿಸುತ್ತಿದೆ. ಮಹಿಳೆ ಶಿಕ್ಷಣಕ್ಕೆ ತೆರೆದುಕೊಳ್ಳುವುದನ್ನು ಇದು ತಡೆಯುವಂತಿದೆ. ಈ ಒಂದು ಮಾತಿನಿಂದ ಹೆಣ್ಣಿನ ವಿದ್ಯಾಭ್ಯಾಸ ಮಟುಕುಗೊಂಡ ನೂರಾರು ಉದಾಹರಣೆಗಳಿವೆ.
ಮಹಿಳೆ ಆಹಾರ ಪರಿಕರಗಳೊಂದಿಗೆ ಒಂದು ಅನೋನ್ಯ ಸಂಬಂಧವನ್ನ ಕಲ್ಪಿಸಿಕೊಂಡು ಬದುಕುತ್ತಾಳೆ. ಅಂದರೆ ಹೆಚ್ಚಚ್ಚು ಆಹಾರ ಪರಿಕರಗಳು ಮನೆಯಲ್ಲಿದ್ದರೆ ಅದು ಮನೆಯ ಆರ್ಥಿಕ ಸ್ಥಿತಿಯ ಸುಧಾರಣೆಯನ್ನು ಬಿಂಬಿಸುತ್ತದೆ ಎನ್ನುವುದು ಅವಳ ನಂಬಿಕೆ. ಹಾಗಾಗಿ ಮಹಿಳೆಯರು ಮನೆಯಲ್ಲಿ ಹೆಚ್ಚು ಆಹಾರ ಪರಿಕರಗಳನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಇನ್ನು ಮನೆಯಲ್ಲಿ ಅಡುಗೆ ಮಾಡಲು ಸಾಮಾನಿಲ್ಲ ಎಂಬುದನ್ನು ಮಹಿಳೆಯು ಪಾತ್ರೆ, ಚೆಂಬು, ತಟ್ಟೆಯನ್ನು ಬೀಳಿಸುವ ಅಥವಾ ಖಾಲಿ ಪಾತ್ರೆಯನ್ನು ಎಲ್ಲರಿಗೂ ಕೇಳುವಂತೆ ತಿಕ್ಕುವ ಮೂಲಕ ಮನೆಯಲ್ಲಿ ಎಲ್ಲ ಖಾಲಿಯಾಗಿದೆ ಎನ್ನುವುದನ್ನು ಸಂವಹನ ಮಾಡುತ್ತಾಳೆ. ಹೀಗೆ ಹೆಣ್ಣು ಮಾತುಗಳಿಲ್ಲದೆ ತನ್ನ ಸಿಟ್ಟು ಅಸಹಾಯಕತೆಯನ್ನು ಅಡುಗೆ ಪರಿಕರಗಳ ಮೂಲಕ ಸಂವಹನ ಮಾಡುವ ಒಂದು ಬಿಡುಗಡೆ ದಾರಿಯೂ ಇದೆ.
ಮಹಿಳೆಯ ಅಸಹಾಯಕ ಸ್ಥಿತಿಯಲ್ಲಿ ಅಡುಗೆ ಪರಿಕರಗಳು ಅವಳಿಗೆ ಬಲವನ್ನು ಹೆಚ್ಚಿಸುವ ಸಂಗತಿಗಳೂ ಇವೆ. ಗಂಡ ಹೊಡೆಯಲು ಬಂದಾಗ ಅವಳು ಲತ್ತೋಡಿ, ಊದುಗಳಬೆ, ಮುದ್ದಿಕೋಲು, ಒಣಕೆ ಮುಂತಾದವುಗಳನ್ನು ತೆಗೆದುಕೊಂಡು ಪ್ರತಿಭಟಿಸುತ್ತಾಳೆ. ಅಥವಾ ಮನೆಯಲ್ಲಿ ಆಪತ್ತು ಬಂದಾಗ ಅಥವಾ ಕಳ್ಳಕಾಕರು ಮನೆಗೆ ದಿಢೀರನೆ ಪ್ರವೇಶಿಸಿ ದೌರ್ಜನ್ಯ ಮಾಡಲು ಪ್ರಯತ್ನಿಸಿದಾಗ, ಅಥವಾ ಅಪರಿಚಿತ ಗಂಡೊಂದು ಮನೆ ಪ್ರವೇಶಿಸಿ ಬಲತ್ಕಾರಕ್ಕೆ ಪ್ರಯತ್ನಿಸಿದಾಗ ಈಳಿಗೆ ಮಣೆ ಹಿಡಿದು ಪ್ರತಿಭಟಿಸುವ ಸಂಗತಿಗಳನ್ನು ನೋಡಬಹುದು. ಆವಾಗೆಲ್ಲಾ ಅಹಾರ ಪರಿಕರಗಳು ಮಹಿಳೆಯರಿಗೆ ಆಯುಧವಾಗಿಯೂ ಬಳಕೆಯಾಗಿ ಅವಳನ್ನು ಪಾರುಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ.
ಇದಕ್ಕೆ ವಿರುದ್ಧವಾಗಿಯೂ ಇದೇ ಪರಿಕರಗಳು ಬಳಕೆಯಾಗುವ ಸಾಧ್ಯತೆಯಿದೆ. ಅಂದರೆ ಅಡುಗೆ ಮನೆ ಮಹಿಳೆಯರಿಗೆ ಒಂದು ಸುರಕ್ಷಿತ ತಾಣವಾದಂತೆ, ಅದು ಅವಳಿಗೆ ಬಂದೀಖಾನೆಯಾಗಿಯೂ ಕೆಲವೊಮ್ಮೆ ಬಳಕೆಯಾಗುತ್ತದೆ. ಪುಕ್ಕಲು ಮಹಿಳೆಯರನ್ನು ಗಂಡ ಹೊಡೆಯುವಾಗಲೂ, ಅತ್ತೆ ಕಿರುಕುಳ ಕೊಡುವಾಗಲೂ ಇದೇ ಅಡುಗೆ ಪರಿಕರಗಳು ಅವಳನ್ನು ದಂಡಿಸಲು ಬಳಕೆಯಾಗುತ್ತವೆ. ಹೀಗೆ ದೈರ್ಯವಂತ ಮಹಿಳೆಯರಿಗೆ ಅಡುಗೆ ಪರಿಕರಗಳು ಆಯುಧದಂತೆ ಬಳಕೆಯಾದರೆ, ಅದೇ ಪುಕ್ಕಲು ಮಹಿಳೆಯರನ್ನು ಶೋಷಿಸುವ ಅಸ್ತ್ರಗಳೂ ಆಗುತ್ತವೆ.
ಚಿತ್ರದುರ್ಗದ ಒನಕೆ ಓಬವ್ವನೆಂದೇ ಇತಿಹಾಸ ಪ್ರಸಿದ್ದಿಯನ್ನು ಪಡೆದ ಓಬವ್ವನ ಚರಿತ್ರೆಯಲ್ಲಿ ಅಡುಗೆ ಪರಿಕರ ಒನಕೆ ಹೆಚ್ಚು ಪ್ರಸಿದ್ದಿಯನ್ನು ಪಡೆಯಿತು. ಒನಕೆಯಿಂದ ನೂರಾರು ಸೈನಿಕರನ್ನು ಕೊಂದು ವೀರ ಮಹಿಳೆ ಎನ್ನಿಸಿಕೊಂಡಳು. ಈಗಲೂ ಶಾಲಾ ಮಕ್ಕಳ ಸ್ಥಬ್ದಚಿತ್ರಗಳಲ್ಲಿ ಒನಕೆ ಹಿಡಿದ ಓಬವ್ವನ ಪಾತ್ರವನ್ನು ನೋಡಬಹುದು. ಆಗ ಒನಕೆ ಆಪತ್ಕಾಲದಲ್ಲಿ ಓಬವ್ವನಿಗೆ ಆಯುಧವಾಗಿ ಬಳಕೆಯಾಗಿತ್ತು. ಅಂತೆಯೇ ಜನಪದ ಕಥೆಗಳಲ್ಲಿ ಅಡುಗೆ ಪರಿಕರಗಳು ಮಹಿಳೆಗೆ ಹೇಗೆ ಸಹಕಾರಿಯಾಗಿದ್ದವು ಎನ್ನುವುದರ ಅನೇಕ ಪಾಠಾಂತರದ ಕಥೆಗಳಿವೆ.
ಮಹಿಳೆಯ ಸೌಂದರ್ಯವನ್ನು ಹೊಗಳಲು ಆಹಾರ ಪರಿಕರಗಳು ರೂಪಕದಂತೆ ಬಳಕೆಯಾಗಿವೆ. ಬಟ್ಟಲಗಣ್ಣವಳು, ಕೈಬಟ್ಳಂತ ಮುಖದವಳು, ಸೋರೆಯಂತ ಕುಚದವಳು, ಮುಂತಾದ ಬಳಕೆಯನ್ನು ನೋಡಬಹುದು. ಮಹಿಳೆಯನ್ನು ಬೈಯುವ ಬೈಗಳಲ್ಲಿ ಅನೇಕ ಅಡುಗೆ ಪರಿಕರಗಳನ್ನು ರೂಪಕವಾಗಿ ಬಳಸಲಾಗಿದೆ. ಕಪ್ಪಗೆ ಇರುವ ಹೆಣ್ಣನ್ನು ಕರೆಹಂಚಿನ್ ಮುಖದವಳ್ವು, ಅಗಲವಾದ ಮುಖದವಳನ್ನು ಗಂಗಾಳ್ದಂತ ಮುಖದವಳು ಎನ್ನುವಂತಹ ಬಳಕೆಯನ್ನು ನೋಡಬಹುದು.
ನಿತ್ಯವೂ ಆಹಾರ ಪರಿಕರಗಳೊಂದಿಗೆ ಒಡನಾಡುವ ಮಹಿಳೆ, ನಮ್ಮ ವ್ಯಾಖ್ಯಾನ, ವಿವರಣೆಗೆ ಸಿಕ್ಕದಂತಹ ಒಂದು ಬಗೆಯ ಅನೋನ್ಯ ಸಂಬಂಧವನ್ನು ಹೊಂದಿರುತ್ತಾಳೆ. ಮನೆಯಲ್ಲಿ ಪರಿಕರವೊಂದು ಕಳೆದಾಗ ಅವಳು ಪಡುವ ವೇದನೆ ಅಷ್ಟಿಷ್ಟಲ್ಲ. ಇಡೀ ತನ್ನ ಓಣಿಯಲ್ಲಿ ಯಾರ ಮನೆಯಲ್ಲಿ ಅಡಗಿರಬಹುದೆಂದು, ಯಾವುದೋ ನೆಪ ಮಾಡಿ ಅವರ ಮನೆ ಪ್ರವೇಶಿಸಿ ಕಳ್ಳ ನೋಟದಿಂದ ಅವರ ಅಡುಗೆ ಮನೆಯ ಆಹಾರ ಸಾಮಗ್ರಿಗಳನ್ನೆಲ್ಲಾ ನೋಡಿ ಇರುವ ಇಲ್ಲದ ಬಗ್ಗೆ ಖಚಿತ ಪಡಿಸಿಕೊಳ್ಳುತ್ತಾಳೆ.
ದೇವನೂರು ಮಹಾದೇವ ಅವರ ಒಡಲಾಳ ಕಾದಂಬರಿಯ ಸಾಕವ್ವ ಕಳೆದ ಕೋಳಿಯನ್ನು ಹುಡುಕಿದಂತೆ ಮಹಿಳೆಯರು ಕಳೆದುಹೋದ ಚೆಂಬನ್ನೋ, ಲೋಟ ತಟ್ಟೆಯನ್ನೋ ಹುಡುಕುವ ಪತ್ತೇದಾರಿಕೆ ತುಂಬಾ ಕುತೂಹಲಕಾರಿಯಾಗಿರುತ್ತದೆ. ಹೀಗೆ ಕಳೆದ ತಟ್ಟೆ ಲೋಟದ ಕಾರಣಕ್ಕೇ ಬಯಾನಕ ಜಗಳಗಳೂ ನಡೆದ್ದಿದೆ. ಹಾಗೆಯೇ ಪರಿಕರಗಳು ನುಗ್ಗಾದಾಗ ಮಹಿಳೆ ಪಡುವ ವೇದನೆ ಇದನ್ನು ಭಿನ್ನವಾಗಿ ಕಾಣಿಸುತ್ತದೆ.
ಕುಂಬಾರಿಕೆಯಲ್ಲಿ ಮಹಿಳೆಯರೂ ಆಹಾರ ಪರಿಕರಗಳ ತಯಾರಿಕೆಯಲ್ಲಿ ಭಾಗಿಯಾಗುತ್ತಿದ್ದಳು. ಆಗ ಸ್ವಾರೆ, ಕುಡಿಕಿ, ಚಟಿಗಿ ಮುಂತಾದ ಪರಿಕರಗಳ ತಯಾರಿಕೆಯಲ್ಲಿ ಮಹಿಳೆಯ ಸೃಜನಶೀಲತೆಯ ಪಾಲೂ ಇರುತ್ತಿತ್ತು. ಹಾಗಾಗಿಯೇ ಮಡಕೆಯಲ್ಲಿ ರಂಗೋಲಿಯನ್ನೂ, ಚೈನಿನಾಕಾರದ ಸುತ್ತಲ ಚಿತ್ತಾರವನ್ನೂ ಕಾಣಬಹುದಾಗಿತ್ತು. ಆದರೆ ಇಂದು ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರ ಪರಿಕರಗಳಲ್ಲಿ ಮಹಿಳೆಯರ ಸೃಜನಶೀಲತೆ ಬಳಕೆಯಾಗದೆ, ಅದು ಕೇವಲ ಮಾರುಕಟ್ಟೆಯ ಮನಸ್ಸನ್ನು ಆಶ್ರಯಿಸಿದೆ.
ಆಹಾರ ಮಾರುಕಟ್ಟೆಯ ಪರಿಭಾಷೆಯಲ್ಲಿ ವ್ಯಾವಹಾರಿಕ ಸಂಗತಿಯಾಗುತ್ತಲೂ ಅದು ಮಹಿಳೆಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದೆ. ದೊಡ್ಡ ದೊಡ್ಡ ಮಠ ಸಂಸ್ಥೆ ಮುಂತಾದವುಗಳಲ್ಲಿ, ಬೃಹತ್ ಆಹಾರ ಪರಿಕರಗಳನ್ನು ನೋಡುತ್ತೇವೆ. ಆಹಾರ ಪರಿಕರಗಳು ದೊಡ್ಡವಾದಂತೆ ಅವುಗಳು ಮಹಿಳೆಯ ಜತೆಗಿನ ಸಂಬಂಧವನ್ನು ಕಡಿದುಕೊಂಡು ಪುರುಷರ ವಶಕ್ಕೆ ಒಳಗಾಗುತ್ತವೆ. ಪುರುಷ ಬಾಣಸಿಗರು ಆಹಾರದ ಮೇಲೆ ಪ್ರಭುತ್ವವನ್ನು ಸಾಧಿಸುತ್ತಿರುವುದು ಈ ಹೊತ್ತಿನ ವಾಸ್ತವ ಸಂಗತಿ. ಅಂದರೆ ಮಹಿಳೆಗೆ ಸಂಬಂಧವಿದ್ದದ್ದು ಮಾರುಕಟ್ಟೆಯ ಸಂಗತಿಯಾಗುತ್ತಲೂ ಅಲ್ಲಿ ಪುರುಷರ ಪ್ರವೇಶವಾಗುವುದನ್ನು ಇದರಿಂದ ತಿಳಿಯಬಹುದು.
ದೊಡ್ಡಮಟ್ಟದಲ್ಲಿ ಆಹಾರ ತಯಾರಿಕೆ ಇರುವಲ್ಲೆಲ್ಲಾ, ಪ್ರಧಾನ ಅಡುಗೆಗಾರರು ಪುರುಷರಾಗಿದ್ದು, ಅವರ ಬಳಿ ತರಕಾರಿ ಹೆಚ್ಚಲು, ಆಹಾರ ಸಾಮಗ್ರಿಯನ್ನು ಸ್ವಚ್ಚಮಾಡಲು ಸಹಾಯಕರಂತೆ ಮಹಿಳೆಯರು ಬಳಕೆಯಾಗುವುದನ್ನು ನೋಡಬಹುದು. ಇಲ್ಲಿಯೂ ಬಹುಪಾಲು ಪುರೋಹಿತಶಾಹಿ ಪುರುಷರು, ಕೆಳವರ್ಗದ ಮಹಿಳೆಯರು ಇರುವುದು ಕಾಣುತ್ತದೆ. ಇಲ್ಲಿ ವರ್ಣಬೇಧ ವರ್ಗಬೇಧವಾಗಿಯೂ ವಾಸ್ತವದಲ್ಲಿ ಮುಂದುವರೆಯುತ್ತಿರುವ ಅಪಾಯವನ್ನೂ ಗುರುತಿಸಬಹುದು.
ಇಂದು ಜಾಗತೀಕರಣ ವೈವಿದ್ಯತೆಯನ್ನು ಕಳೆದು, ಆಯಾ ವೈವಿಧ್ಯತೆಯು ಜನಸಮುದಾಯಕ್ಕೆ ನೀಡುವ ಚೈತನ್ನವನ್ನು ನಾಶ ಮಾಡಿ ಅವರನ್ನು ಗಿರಾಕಿಗಳನ್ನಾಗಿ ಮಾಡುತ್ತಿದೆ. ಈ ಮಹಾಸಮರದಲ್ಲಿ ಅಡುಗೆ ಪರಿಕರಗಳ ವೈವಿದ್ಯತೆಯೂ ನಾಶವಾಗಿ, ಒಂದೇ ಬಗೆಯ ಅಡುಗೆ ಪರಿಕರಗಳು ಎಲ್ಲೆಡೆಯೂ ಕಾಣುತ್ತಿವೆ. ಆ ಮೂಲಕ ಅಡುಗೆ ಪರಿಕರಗಳೂ ಸಹ ಬಂಡವಾಳಶಾಹಿಗಳ ಬಂಡವಾಳವನ್ನು ಹೆಚ್ಚಿಸುವಲ್ಲಿ ನಿರತವಾದಂತೆ ಕಾಣುತ್ತಿದೆ. ಇದು ಮಹಿಳೆಯರ ಕ್ರಿಯಾಶೀಲತೆಯನ್ನೂ, ಅವರ ಜತೆಗಿನ ಸಾವಯವ ಸಂಬಂಧವನ್ನೂ ಕಡಿದುಹಾಕುತ್ತಿದೆ. ಇದರಿಂದಾಗಿ ಮಹಿಳೆಗೂ ಅಡುಗೆ ಪರಿಕರಗಳಿಗೂ ಹೊಸ ಬಗೆಯ ಸಂಬಂಧ ಸೃಷ್ಟಿಯಾಗುತ್ತಿದೆ. ಈ ಸಂಬಂಧ ಆಹಾರ ತಯಾರಿಕೆಯ ಜತೆ ಅವಳ ಬಗೆಗಿನ ಸಾಂಪ್ರದಾಯಿಕ ದೃಷ್ಟಿಕೋನವನ್ನೇನು ಬದಲಾಯಿಸುವಷ್ಟು ಗಟ್ಟಿಯಾಗಿಲ್ಲ ಎನ್ನುವುದನ್ನು ನೆನೆಯಬೇಕು.
ಮೆಟಲ್ ಸ್ಟೋರ್ಗಳಿಂದ ಹೊಸದಾಗಿ ತಂದ ಸಾಮಾನುಗಳಲ್ಲಿ ಅವಳು ತನ್ನ ಮುಖ ನೋಡಿಕೊಂಡು ಖುಷಿಗೊಳ್ಳುವುದಿದೆ. ಅದೇ ಸಾಮಾನುಗಳ ಬಳಕೆ ಹೆಚ್ಚಾದಂತೆ ಅವಳ ಚಿತ್ರ ಮಸುಕಾಗುತ್ತದೆ. ಕಾಲಾನಂತರದಲ್ಲಿ ಮುಖ ಕಾಣುವುದೇ ಇಲ್ಲ. ಬಳಸಿದ ಪ್ರತಿಬಾರಿಯೂ ಅವುಗಳನ್ನು ಉಜ್ಜಿ ಉಜ್ಜಿ ಸ್ವಚ್ಛ ಮಾಡಿರುತ್ತಾಳೆ. ಈ ಉಜ್ಜುವಿಕೆಯ ಗೀರುಗಳೇ ತುಂಬಿಕೊಂಡು ಅವಳ ಚಿತ್ರ ಕಾಣದಂತೆ ಅಡ್ಡಾಗಿರುತ್ತವೆ. ಇದು ಮಹಿಳೆ ಮತ್ತು ಅಡುಗೆ ಪರಿಕರಗಳ ನಡುವಿನ ನಂಟನ್ನು ಬಿಂಬಿಸುವ ಶಕ್ತ ರೂಪಕದಂತೆ ಕಾಣುತ್ತದೆ.
ಮತ್ತೆ ಈ ಬರಹದ ಮೊದಲ ಸಾಲಿಗೆ ಮರಳುವುದಾದರೆ, ಹಳೆ ಪಾತ್ರೆಯು ಹೆಣ್ಣಿನ ಅಡುಗೆ ಕೋಣೆಯ ನೋವು ನಲಿವು ಸಂತಸ ಹೇಳಲಾರದ ಬಿಕ್ಕಳಿಕೆಯ ಮಾತುಗಳು ಅಡಗಿದ ಅಡಗುದಾಣದಂತೆ ನನಗೀಗ ಕಾಣತೊಡಗಿದೆ.

‍ಲೇಖಕರು avadhi

October 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. siddharam

    ಉತ್ತಮ ಬರಹ ಅರುಣ್, ಅಭಿನಂದನೆಗಳು. ನೀವೆಂದಂತೆ ಹಳೆ ಪಾತ್ರೆಯು ಹೆಣ್ಣಿನ ಅಡುಗೆ ಕೋಣೆಯ ನೋವು ನಲಿವು ಸಂತಸ ಹೇಳಲಾರದ ಬಿಕ್ಕಳಿಕೆಯ ಮಾತುಗಳು ಅಡಗಿದ ಅಡಗುದಾಣವೇ ಸರಿ. ಇಡೀ ಲೇಖನವನ್ನು ನಿಮ್ಮ ಈ ಕೊನೆಯ ಸಾಲು ಪ್ರತಿನಿಧಿಸುತ್ತದೆ. ತೀರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೆಣ್ಣುಮಕ್ಕಳ ಅಡುಗೆ ಕೋಣೆಯ ವಿಷಯವನ್ನು ಲೇಖನವನ್ನಾಗಿಸಿ, ಚಿಂತನೆಗೆ ತೊಡಗಿಸಿದ್ದಕ್ಕೆ ಮತ್ತೊಮ್ಮೆ ಅಭಿನಂದನೆಗಳು.-ಸಿದ್ಧರಾಮ ಹಿರೇಮಠ.

    ಪ್ರತಿಕ್ರಿಯೆ
  2. nagaraja naik

    arun, lekhana chennagide. hale patre, hale kabuna haadina visleshane chennagide.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: