‘ಅರಸನ ಆತ್ಮಹತ್ಯೆ’

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಅರಸನೊಬ್ಬ ಸಾಯವುದು ದೊಡ್ಡ ಸುದ್ದಿಯೇ ನಿಜ. ಆದರೆ ಅರಸನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾಯುವುದು ಇದೆಯಲ್ಲ ಅದು ವಿಚಿತ್ರವಾದ ಮತ್ತು ಆಶ್ಚರ್ಯದ ಸಂಗತಿ. ಆ ರಾಜನೇನು ದೀರ್ಘ ಕಾಲ ಆಳ್ವಿಕೆ ಮಾಡಿರಲಿಲ್ಲ. ತಂದೆಯ ಅಕಾಲಿಕ ಮರಣಾನಂತರ ಪಟ್ಟಕ್ಕೆ ಬಂದಿದ್ದ ಆತ ಕೆಲವೇ ವರ್ಷಗಳಲ್ಲಿ ಇಡೀ ಜಗತ್ತಿಗೆ ಪರಿಚಿತನಾಗಿದ್ದ. ಹಾಗೆ ಅವನು ಜನಪ್ರಿಯನಾಗಲು ಕಾರಣ ಆತನ ರಾಜ್ಯದಲ್ಲಿದ್ದ ಒಂದು ವಿಶೇಷ ಅಥವಾ ವಿಚಿತ್ರ ಎನ್ನಬಹುದಾದ ಕಾನೂನು. ಅದೂ ಅವನು ರಾಜನಾದ ಮೊದಲ ದಿನವೇ ಘೋಷಣೆ ಮಾಡಿದ್ದಾಗಿತ್ತು.

‘ನನ್ನ ರಾಜ್ಯದಲ್ಲಿ ಖಾಸಗಿತನಕ್ಕೆ ಅವಕಾಶವಿಲ್ಲ. ದೊರೆಗೆ ತಿಳಿಯದ, ರಾಜ್ಯಕ್ಕೆ ಗೊತ್ತಿರದ ಯಾವ ವಿಷಯಗಳೂ ಇಲ್ಲಿರುವ ಹಾಗಿಲ್ಲ’ ಎಂದು ಪಟ್ಟವೇರಿದ ದಿನವೇ ಫರ್ಮಾನು ಹೊರಡಿಸಿದ ನೂತನ ದೊರೆ. ಪ್ರೈವೇಸಿ ಇಲ್ಲದಿರುವುದು ಅಂದರೆ ಖಾಸಗಿತನದ ಜೊತೆಗೆ ರಹಸ್ಯಗಳೂ ಇಲ್ಲದಿರುವುದು ಎಂದಾಯಿತಲ್ಲ! ಹೊಸ ಕಾನೂನು ಮರುದಿನದಿಂದಲೇ ಜಾರಿಗೆ ಬಂತು. ಆ ಪ್ರಕಾರ ಆ ರಾಜ್ಯದಲ್ಲಿ ಯಾವ ವಿಷಯಗಳೂ ರಹಸ್ಯವಾಗಿ ಅಥವಾ ಖಾಸಗಿಯಾಗಿ ಉಳಿಯುವ ಹಾಗಿರಲಿಲ್ಲ. ಬಡವ ಬಲ್ಲಿದರೆನ್ನದೆ ಎಲ್ಲರ ವಿಷಯಗಳೂ ಜಗಜ್ಜಾಹೀರಾಗಬೇಕಾಯಿತು.

ಮನೆಯಲ್ಲಿ ಇರುವ ಜನರ ಸಂಖ್ಯೆ ಮತ್ತು ಸಂಬಂಧಗಳು, ಅವರು ತೊಡುವ ಉಡುಗೆ, ಸೇವಿಸುವ ಆಹಾರ, ಮಾಡುವ ವ್ಯಾಪಾರ, ದಿನದ ಅಥವಾ ತಿಂಗಳ ಗಳಿಕೆ ಎಲ್ಲವನ್ನೂ ರಾಜನಿಗೆ ತಿಳಿಸಲೇಬೇಕಿತ್ತು. ಇದಕ್ಕಾಗಿಯೇ ರಾಜ ಕೆಲವು ಅಧಿಕಾರಿಗಳನ್ನೂ ನೇಮಿಸಿಕೊಂಡಿದ್ದ. ಜನರು ತಮ್ಮ ಆದಾಯದ ಜೊತೆಗೆ ವೈಯಕ್ತಿಕ ವಿಷಯಗಳನ್ನೂ ಆ ಅಧಿಕಾರಿಗಳಿಗೆ ತಿಳಿಸಬೇಕಿತ್ತು. ಹಾಗಂತ ರಾಜ ತನ್ನ ಪ್ರಜೆಗಳ ಸ್ವಾತಂತ್ರ ಹರಣ ಮಾಡಿದ್ದ ಎನ್ನಲಾಗದು. ಅವರಿಗೆ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯ ಇತ್ತು. ಆದರೆ ಅದು ಖಾಸಗೀ ವಿಷಯವಾಗಿರದೆ ರಾಜತ್ವಕ್ಕೆ ತಿಳಿದಿರಬೇಕಿತ್ತು.‌ ಆರಂಭದಲ್ಲಿ ಸಾಮನ್ಯವಾದ ವಿಷಯಗಳ ಮೇಲೆ ಮಾತ್ರ ಹೇರಿಕೆಯಾಗಿದ್ದ ಈ ಕಾನೂನು ಕ್ರಮೇಣ ಜನರ ಇಡೀ ಮನೆಯನ್ನೇ ಆವರಿಸಿಕೊಂಡಿತು. 

*  *  * 

ತಾವು ಮದುವೆಯಾಗಲು ಬಯಸುವ ಹೆಣ್ಣು – ಗಂಡಿನ ವಿವರಗಳು‌,‌ ಎಷ್ಟು ಮಕ್ಕಳನ್ನು ಹೊಂದುವ ಆಸೆ ಇದೆ, ಸಸ್ಯಾಹಾರಿಗಳೋ, ಮಾಂಸಾಹಾರಿಗಳೋ, ಯಾವ ಬಣ್ಣದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ, ಮನೆಯಲ್ಲಿನ ವೃದ್ಧರಿಗೆ ಇರುವ ರೋಗಗಳು, ಯಾರು ಯಾರನ್ನು ಪ್ರೀತಿಸುತ್ತಾರೆ, ಪ್ರೇಮಿಗಳು ಏನಾದರೂ ಉಡುಗೊರೆ ಕೊಡುವುದಾದರೆ ಅದು ಖಾಸಗಿತನ ವಿರೋಧಿಸುವ ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಠಸ್ಸೆ ಹಾಕಿಸಿಕೊಂಡೇ ಕೊಡಬೇಕಿತ್ತು. ಪ್ರೇಮ ಪತ್ರಗಳನ್ನೂ ಕೂಡ ಅಧಿಕಾರಗಳು ಓದಿದ ಮೇಲೆಯೇ ಪ್ರಿಯಕರನಿಗೆ ಕೊಡಬೇಕಿತ್ತು. ಯಾವ ಆಧಿಕಾರಿಗಳೂ ಯಾವುದಕ್ಕೂ ನಿರ್ಬಂಧ ಹೇರುತ್ತಿರಲಿಲ್ಲ. ಆದರೆ ಯಾವುದನ್ನೂ ರಹಸ್ಯವಾಗಿ ಇಡುವಂತಿರಲಿಲ್ಲ.

ಈ ಖಾಸಗೀತನದ ವಿರೋಧ ರಾಜನಿಗೆ ಎಷ್ಟಿತ್ತೆಂದರೆ ಗಂಡ ಹೆಂಡತಿ ಯಾವ ಯಾವ ರಾತ್ರಿಗಳಲ್ಲಿ ಸೇರುತ್ತಾರೆ ಎಂಬ ಮಾಹಿತಿಯನ್ನೂ ಅಧಿಕಾರಿಗಳಿಗೆ ಮೊದಲೇ ಕೊಡಬೇಕಿತ್ತು. ಹಾಗೆಂದು ವಾರದಲ್ಲಿ ಇಂತಿಷ್ಟೇ ದಿನ ಸರಸ ಎಂಬ ನಿಯಮವೇನೂ ಇರಲಿಲ್ಲ. ಆದರೆ ಅದು ರಹಸ್ಯವಾಗಿರಬಾರದಿತ್ತು ಅಷ್ಟೆ. ಜನರ ಎಲ್ಲಾ ಆಗು ಹೋಗುಗಳಿಗೆ ರಾಜನೇ ಹೊಣೆ ಎಂಬ ಕಾರಣಕ್ಕೋ ಏನೋ ಇಂಥದ್ದೊಂದು ವಿಚಿತ್ರ ಕಾನೂನನ್ನು ರಾಜ ಜಾರಿಗೆ ತಂದಿದ್ದ. ಮೈಮೇಲಿನ ಮಚ್ಚೆಯಿಂದ ಹಿಡಿದು ಶ್ರೀಮಂತನೊಬ್ಬ ಯಾವ ವೇಶ್ಯಾಗೃಹಕ್ಕೆ ಹೋಗುತ್ತಾನೆ ಎಂಬುದು ಕೂಡ ಗುಟ್ಟಾಗಿ ಉಳಿದಿರಲಿಲ್ಲ.

ಹುಡುಗರು ಗಂಡಸರಾಗಿ ಬದಲಾಗುವ, ಹುಡುಗಿಯರು ಮೈನೆರೆಯವ ವಿಷಯಗಳೂ ಖಾಸಗಿಯಾಗಿ ಉಳಿದಿರಲಿಲ್ಲ. ಎಲ್ಲವೂ ಮುಕ್ತವಾಗಿ ಇರಬೇಕು ಎಂಬ ರಾಜನ ಈ ಬಯಕೆಯು ವಿಚಿತ್ರವೆನಿಸಿದ್ದರೂ ಜನರಿಗೆ ಅದು ಹಿಂಸೆ ಎನಿಸಲಿಲ್ಲ. ಏಕೆಂದರೆ ರಾಜ ಯಾವುದಕ್ಕೂ ನಿರ್ಬಂಧ ಹೇರಿರಲಿಲ್ಲ. ಮೊದಮೊದಲು ತಮ್ಮ ವೈಯುಕ್ತಿಕವಾದುದೆಲ್ಲ ರಾಜನಿಗೇಕೆ ಬೇಕು ಇದು ಸರ್ವಾಧಿಕಾರಿ ಧೋರಣೆ ಎಂದುಕೊಂಡು ವಿರೋಧಿಸಿದ ಜನ ನಿಧಾನಕ್ಕೆ ಈ ವ್ಯವಸ್ಥೆಗೆ ಹೊಂದಿಕೊಂಡುಬಿಟ್ಟರು. ಇಡೀ ಪ್ರಪಂಚದ ಖಾಸಗೀತನವಿಲ್ಲದ ಮೊದಲ ರಾಜ್ಯ ಅದಾಯಿತು. ಜನ ಅದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳಲಾರಂಭಿಸಿದರು. 

ಕಳ್ಳತನ, ಧಗಾ, ವಂಚನೆ ಪ್ರಖರಣಗಳು ಕ್ರಮೇಣ ಕಡಿಮೆಯಾದವು. ಜನಕ್ಕೆ ಎಲ್ಲರ ವಿಷಯಗಳೂ ಗೊತ್ತಿರುತ್ತಿದ್ದವು.‌ ಆದರೆ ಯಾರೂ ಇನ್ನೊಬ್ಬರ ಖಾಸಗೀ ವಿಷಯಗಳನ್ನು ಮಾತಾಡುತ್ತಿರಲಿಲ್ಲ. ಎಲ್ಲಿ ತನ್ನದನ್ನು ಇನ್ನೊಬ್ಬ ಮಾತಾಡಿಬಿಡುತ್ತಾನೋ ಎಂಬ ಆತಂಕ ಅವರದ್ದಾಗಿತ್ತು. ಕದ್ದರೆ ಅದನ್ನೂ ಲೆಕ್ಕ ಕೊಡಬೇಕಾಗಿ ಬಂತು. ಯಾರೋ ಒಂದಿಬ್ಬರು ಪ್ರೇಮಿಗಳು ತಮ್ಮ ಪ್ರೀತಿಯ ವಿಷಯವನ್ನು ಗುಟ್ಟಾಗಿ ಇಟ್ಟು ಇದು ರಾಜನಿಗೆ ತಿಳಿಯುವುದಿಲ್ಲ ಬಿಡು ಎಂದು ತಪ್ಪಿಸಿಕೊಳ್ಳಲು ನೋಡಿದಾಗ ಅವರನ್ನು ಬಂಧಿಸಿಟ್ಟಿದ್ದ ರಾಜ. ಅಂದಿನಿಂದ  ಮತ್ಯಾರೂ ರಾಜ್ಯದಲ್ಲಿ ಅಂಥ ಸಾಹಸಕ್ಕೆ ಇಳಿಯಲಿಲ್ಲ. ಎಲ್ಲರ ವ್ಯವಹಾರಗಳು, ಕಷ್ಟ-ಸುಖಗಳು ಎಲ್ಲರಿಗೂ ತಿಳಿದಿರುವಂತ ಸಮಯ ಅದಾಗಿತ್ತು. ಜನಕ್ಕೆ ಈ ವ್ಯವಸ್ಥೆಯ ಮೇಲೆ ಕ್ರಮೇಣ ನಂಬಿಕೆ ಬಲವಾಗತೊಡಗಿತು.‌ ಇನ್ನೇನು ಜಗತ್ತಿನ ಬೇರೆ ಬೇರೆ ರಾಜ್ಯಗಳೂ ಇದನ್ನು ಅನುಸರಿಸಬೇಕೆಂಬ ಬಗ್ಗೆ ಯೋಚಿಸಿ, ಜಾರಿಗೆ ತರುವವರಿದ್ದರು. 

     *         *          * 

ಅಷ್ಟರಲ್ಲಿ ಆ ರಾಜ ಆತ್ಮಹತ್ಯೆ ಮಾಡಿಕೊಂಡಿದ್ದ. ಯಾವ ರಹಸ್ಯವೂ ಇಲ್ಲದ ರಾಜ್ಯವೊಂದರ ಅರಸನ ಆತ್ಮಹತ್ಯೆಯ ಹಿಂದಿನ ಕಾರಣ ಈಗ ದೊಡ್ಡ ರಹಸ್ಯವಾಗಿ ಉಳಿಯಿತು. ತಾನು ರೂಪಿಸಿದ ಕಾನೂನಿಗೆ ಅನುಗುಣವಾಗಿಯೇ ರಾಜನೂ ನಡೆದುಕೊಂಡಿದ್ದ. ತನ್ನ ಖಾಸಗೀತನದ ರಹಸ್ಯವೊಂದನ್ನು ತಾನು ಬಂಧಿಸಿಟ್ಟ ಆ ಪ್ರೇಮಿಗಳಿಬ್ಬರ ಬಳಿಯಲ್ಲಿ ಹೇಳಿ ಹೋಗಿದ್ದ. 

ತಂದೆಯ ಮರಣಾನಂತರ ಚಿಕ್ಕ ವಯಸ್ಸಿನಲ್ಲಿಯೇ ಆಡಳಿತದ ಚುಕ್ಕಾಣಿ ಹಿಡಿದಿದ್ದ ಅವನ ಮದುವೆ, ಪಕ್ಕದ ರಾಜಮನೆತದ ಯುವರಾಣಿಯೊಂದಿಗೆ ನಿಶ್ಚಯವಾಗಿತ್ತು. ಮದುವೆಗೆ ಕೆಲವೇ ದಿನಗಳಿರುವಾಗ ಪ್ರೀತಿಯನ್ನು ರಹಸ್ಯವಾಗಿಟ್ಟಿದ್ದ ಕಾರಣಕ್ಕೆ ಬಂಧನದಲ್ಲಿಟ್ಟಿದ್ದ ಆ ಪ್ರೇಮಿಗಳನ್ನು ರಾಜ ಭೇಟಿಯಾದ. 

“ಇಲ್ಲಿ, ಯಾವುದನ್ನೂ ಖಾಸಗಿಯಾಗಿ ಇಡಬಾರದು.‌ ರಾಜ್ಯಕ್ಕೆ ಎಲ್ಲವನ್ನೂ ತಿಳಿಸಬೇಕೆಂದು ನಿಮಗೆ ಗೊತ್ತಿರಲಿಲ್ಲವೆ ?” ಎಂದು ಅವರನ್ನು ಪ್ರಶ್ನಿಸಿದ.
ಅವರು ಮೌನವಾಗಿದ್ದರು…

‘ಒಂದು ವೇಳೆ ನೀವು ಪ್ರೀತಿಸುವ ವಿಷಯವನ್ನು ಹೇಳಿದ್ದರೆ ನಾವು ನಿಮಗೆ ಶಿಕ್ಷಿಸುತ್ತಿದ್ದೆವೆ? ಇಲ್ಲವಲ್ಲ. ನಿಮ್ಮಂಥ ಎಷ್ಟೋ ಜೋಡಿಗಳು ರಾಜ್ಯಕ್ಕೆ ತಮ್ಮ ಪ್ರೀತಿಯ ವಿಷಯ ತಿಳಿಸಿ ನಮ್ಮಿಂದ ಉಡುಗೊರೆಗಳನ್ನು ಪಡೆದಿದ್ದಾರೆ’ ಎಂದು ತಾನೇ ಮತ್ತೆ ಮಾತಾಡಿದ. 
ಆಗಲೂ ಅವರಿಬ್ಬರೂ ಸುಮ್ಮನಿದ್ದರು…

‘ಹೋಗಲಿ, ನಿಮಗೆ ಇದನ್ನು ರಾಜ್ಯಾಡಳಿತಕ್ಕೆ ತಿಳಿಸಬಾರದು ಎನ್ನುವುದಕ್ಕೆ ಇದ್ದ ಒಂದು ಒಳ್ಳೆಯ ಕಾರಣ ಕೊಡಿ. ನಾನು ನಿಮ್ಮನ್ನು ಬಿಡುಗಡೆಗೊಳಿಸುತ್ತೇನೆ’ ಎಂದು ರಾಜ ಹೇಳಿದಾಗ, ಆ ಪ್ರೇಮ ಖೈದಿಗಳು ಒಮ್ಮೆ ಮುಖ ನೋಡಿಕೊಂಡರು.


‘ನಿಮ್ಮ ಅರಮನೆಯ ಹೂ ದೋಟದಲ್ಲಿರುವ ನೂರಾರು ಗಿಡಗಳಲ್ಲಿ ಅರಳುವ ಹೂವುಗಳು ತಾವು ಮೊಗ್ಗುಗಳಾಗಿದ್ದು, ಹೂವಾಗಿದ್ದು ಯಾವಾಗ ಎಂದು ನಿಮಗೆ ಹೇಳುತ್ತವೆಯೆ?’ 
‘ನಿಮ್ಮ ರಾಜ್ಯದಲ್ಲಿರುವ ಹಕ್ಕಿಗಳು ತಾವು ಹಾರಿ ಯಾವ ಯಾವ ಮರದಲ್ಲಿ ಕೂತೆವು, ಎಷ್ಟು ಆಕಾಶ ಪರ್ಯಟನೆ ಮಾಡಿದೆವು ಎಂದು ನಿಮಗೆ ಹೇಳುತ್ತವೆಯೆ?’ 
‘ಈ ರಾಜ್ಯದಲ್ಲಿರುವ ಇರುವೆಗಳ ಸಂಖ್ಯೆ ಯಾರಿಗಾದರೂ ತಿಳಿದಿದೆಯೆ?’ 
‘ಯಾವ ಸೊಳ್ಳೆ ಯಾರನ್ನು ಕಚ್ಚಿದೆ ಎಂಬ ವಿಷ್ಯ ನಿಮಗೆ ಯಾರು ಹೇಳುತ್ತಾರೆ?’ 
‘ದಂಪತಿಗಳು ರಾತ್ರಿ ಸೇರುವ ಬಗ್ಗೆ ನಿಮಗೆ ತಿಳಿಸಬೇಕು, ಆದರೆ ಪತಂಗಗಳ ಬಗ್ಗೆ ನಿಮಗೇನು ತಿಳಿದಿದೆ?’ 
‘ಪ್ರೇಮಿಯೊಬ್ಬ ಕೊಡುವ ಉಡುಗೊರೆಗೆ ರಾಜಮುದ್ರೆ ಹಾಕಿಸುತ್ತೀರಲ್ಲ, ಕರಡಿಯ ಪ್ರೀತಿಯ ಬಗ್ಗೆ ನಿಮಗೆ ಗೊತ್ತಾ?’ 
‘ಈ ರಾಜ್ಯದಲ್ಲಿರುವ ಗುಲಾಬಿ ಹೂವುಗಳೆಷ್ಟೆಂದು ನಿಮಗೆ ಗೊತ್ತೆ?’ 
ಎಂದು ಇಬ್ಬರೂ ರಾಜನಿಗೆ ಪ್ರಶ್ನೆ ಹಾಕಿದರು. 

ರಾಜ ನಿರುತ್ತರಿಯಾದ. ಆ ಪ್ರೇಮಿಗಳನ್ನು ತನ್ನ ಅರಮನೆಗೆ ಬರುವಂತೆ ಸೂಚಿಸಿದ. ಅಂತೆಯೇ ಅವರು ಬಂದರು. ಇಬ್ಬರನ್ನೂ ಸತ್ಕರಿಸಿ, ಜೊತೆಯಲ್ಲಿ ಊಟ ಮಾಡಿ, ನಾಳೆಯಿಂದ ಈ ರಾಜ್ಯದಲ್ಲಿ ಖಾಸಗೀ ವಿಷಯಗಳನ್ನು ಯಾರೂ ಬಹಿರಂಗಪಡಿಸಬೇಕಾಗುವುದಿಲ್ಲ. ಆ ಕಾನೂನನ್ನು ನಾನು ಹಿಂಪಡೆಯುತ್ತಿದ್ದೇನೆ ಎಂದು ಅವರಿಗೆ ಹೇಳಿ ರಾಜ ಮರ್ಯಾದೆಗೆ ತಕ್ಕ ಉಡುಗೊರೆಯನ್ನೂ ಅವರಿಗೆ ಕೊಟ್ಟ.
 
ಅಲ್ಲಿಂದ ಹೊರಡುವಾಗ ಆ ಪ್ರೇಮಿಗಳು ಕೇಳಿದರು, ” ದೊರೆ, ಎಷ್ಟು ಒಳ್ಳೆಯವರು ನೀವು? ಆದರೆ ಇಂಥ ಕಾನೂನನ್ನು ನೀವು ಅಧಿಕಾರಕ್ಕೆ ಬಂದ ಮೊದಲ ದಿನವೇ ಜಾರಿಗೆ ತಂದಿದ್ದರ ಹಿಂದಿನ ಕಾರಣವೇನು? ನಿಮಗೆ ಅಭ್ಯಂತರವಿಲ್ಲದಿದ್ದರೆ ಮಾತ್ರ ಹೇಳಿ ” 

ರಾಜ, ಅವರನ್ನು ತನ್ನ ಗೆಳೆಯರಂತೆ ಭಾವಿಸಿ ತನಗಿದ್ದ ಕಾರಣವನ್ನು ವಿವರಿಸಿದ: 

‘ನಿಮಗೆ ಗೊತ್ತಿರುವ ಹಾಗೆ ನಮ್ಮ ರಾಜ್ಯದಲ್ಲಿ ಒಂದು ಪ್ರತೀತಿಯಿದೆ. ರಾಜನಿಗೆ ಜನಿಸಿದ ಮೊದಲ ಪುತ್ರನೇ ಮತ್ತೆ ರಾಜನಾಗಬೇಕು. ಒಂದು ವೇಳೆ ಮೊದಲ ಮಗು ಗಂಡು ಆಗಿರದೆ ಹೋದರೆ ರಾಜನ ಸೋದರ ಸಂಬಂಧಿಗಳಲ್ಲಿ ಯಾರಿಗೆ ಮೊದಲ ಗಂಡು ಮಗನಿರುತ್ತಾನೋ ಅವನು ರಾಜನಾಗುವ ಅಧಿಕಾರ ಪಡೆಯುತ್ತಾನೆ. ಈ ಹಿಂದೆ ಅನೇಕ ಬಾರಿ ಈ ಥರ ಆಗಿದ್ದಿದೆ. ನಮ್ಮ ಮನೆಗೆ ರಾಜತ್ವ ಸಿಕ್ಕಿದ್ದೂ ಕೂಡ ಇದೇ ನಿಯಮದಿಂದಾಗಿ. ಹಾಗಾಗಿ ಈ ರಾಜತ್ವ ನಮ್ಮ ಮನೆಯಿಂದ ಕೈತಪ್ಪಿ ಹೋಗಬಾರದೆಂಬ ಕಾರಣಕ್ಕೆ ನಮ್ಮ ಅಪ್ಪ, ಅಮ್ಮನವರು ಮಾಡಿದ ಪಿತೂರಿಯಿದು.’ 

‘ಏನು ಪಿತೂರಿ ದೊರೆ?’ 
‘ನಮ್ಮ ಅಪ್ಪ ಅಮ್ಮಂದಿರಿಗೆ ಜನಿಸಿದ ಮೊದಲ ಮಗು ಗಂಡಾಗಿರಲಿಲ್ಲ.’ 
‘ಅಯ್ಯೋ ದೊರೆ. ಅಂದರೆ ಅವರು ಮೊದಲು ಹುಟ್ಟಿದ ಹೆಣ್ಣು ಮಗುವನ್ನು ಹಾಗೆಯೇ ಕೊಂದರೆ?’ 
‘ಇಲ್ಲ. ಕೊಲ್ಲಲಿಲ್ಲ’ 
‘ಮತ್ತೆ ನೀವು ಹೇಗೆ ರಾಜನಾಗಲು ಸಾಧ್ಯವಾಯಿತು?’ 
‘ಅದು ನಮ್ಮ ಪೋಷಕರು ಮುಚ್ಚಿಟ್ಟ ದೊಡ್ಡ ರಹಸ್ಯ. ಅರಮನೆಯ ಅಂತಪುರದ ರಹಸ್ಯಗಳು ಸುಲಭವಾಗಿ ಬಹಿರಂಗವಾಗಲಾರವು. ಅವರಿಗೆ ಜನಿಸಿದ ಮೊದಲ ಮಗು ನಾನೇ. ನಾನು ಹೆಣ್ಣು ಮಗುವಾಗಿದ್ದೆ’ 
ಇಬ್ಬರೂ ರಾಜನನ್ನು ನಖಶಿಖಾಂತ ಒಮ್ಮೆ ನೋಡಿದರು. 


‘ಎಲ್ಲಿ ರಾಜತ್ವ ತಮ್ಮ ಕುಟುಂಬದ ಕೈತಪ್ಪಿ ಹೋಗುತ್ತದೆಯೋ ಎಂದು ನನ್ನನ್ನು ಗಂಡುಮಗುವೆಂದೇ ಬಿಂಬಿಸಿದರು. ಅರಮನೆಯೊಳಗಿನ ಈ ರಹಸ್ಯ ಗೊತ್ತಿದ್ದ ಕೆಲವರು ನಿಗೂಢವಾಗಿ ಕಣ್ಮರೆಯಾದರು. ನನಗೆ ಗಂಡು ಮಗುವಿನ ಬಟ್ಟೆಗಳನ್ನೇ ಹಾಕಿದರು. ನನ್ನನ್ನು ಗಂಡು ಮಗುವಿನಂತೆಯೇ ಬೆಳೆಸಿದರು. ನನ್ನ ದೇಹದಲ್ಲಾದ ಬದಲಾವಣೆಗಳನ್ನೂ ಮರೆಮಾಚುವಂತೆ ನನ್ನ ಧಿರಿಸುಗಳನ್ನು ರೂಪಿಸಿದರು. ಇದೆಲ್ಲವನ್ನೂ ಮಾಡಲು ನನ್ನ ಒಪ್ಪಿಗೆಯನ್ನೂ ಅವರು ಕೇಳಲಿಲ್ಲ. ನಾನು ಎಷ್ಟೋ ಬಾರಿ ಇದನ್ನು ಹೇಳಿದರೂ ಅಪ್ಪ ಅಮ್ಮ ನನ್ನ ಮಾತು ಕೇಳಲಿಲ್ಲ.

ಇಂಥ ರಹಸ್ಯವನ್ನು ಕಳೆದಿಪ್ಪತ್ತು ವರ್ಷಗಳಿಂದ ಮನಸ್ಸಲ್ಲಿಟ್ಟುಕೊಂಡು ಬದುಕಿದ್ದೇನೆ. ಹಾಗಾಗಿಯೇ ಅಪ್ಪ ಸತ್ತಾಗ ನಾನು ರಾಜನಾದ ಮೊದಲ ದಿನವೇ ಈ ಕಾನೂನು ಘೋಷಿಸಿದ್ದು. ರಹಸ್ಯಗಳೇ ಇರಬಾರದು ಎಂದು. ಈಗ ನೋಡಿ ನನ್ನ ಮದುವೆ ನಿಶ್ಚಯವಾಗಿದೆ. ನಾನು ಮದುವೆಯಾಗುವುದು ಆ ಯುವರಾಣಿಗೆ ಮೋಸ ಮಾಡಿದಂತಾಗುವುದಿಲ್ಲವೆ ? ಅದಕ್ಕೆ ಯಾವ ರಹಸ್ಯಗಳೂ ನನ್ನ ರಾಜ್ಯದಲ್ಲಿ ಇರಬಾರದು ಅಂದುಕೊಂಡಿದ್ದೆ.

ಆದರೆ ನಿಮ್ಮಿಬ್ಬರ ಪ್ರಶ್ನೆಗಳಿಂದ ನನಗೆ ಅದೆಂಥ ಅಮಾನವೀಯ ಕಾನೂನು ಎಂಬುದು ಅರಿವಾಗಿದೆ. ಹಾಗಾಗಿ ನಾಳೆಯೇ ಅದನ್ನು ಹಿಂಪಡೆಯುತ್ತೇನೆ. ನನ್ನಿಂದಾದ ತೊಂದರೆಗೆ ವಿಷಾದಿಸುತ್ತೇನೆ. ನಿಮಗೆ ಶುಭವಾಗಲಿ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟ ರಾಜ ತನ್ನ ಮಂತ್ರಾಲೋಚನಾ ಸಭೆ ನಡೆಸಿ ಮರುದಿನದಿಂದಲೇ ಆ ಖಾಸಗೀತನ ವಿರೋಧಿ ಕಾನೂನನ್ನು ರದ್ದುಗೊಳಿಸುವಂತೆ ಆದೇಶ ಹೊರಡಿಸಿದ. 

ಆ ರಾತ್ರಿಯೇ ಆತ ಆತ್ಮಹತ್ಯೆ ಮಾಡಿಕೊಂಡದ್ದು! ಕೆಲವೇ ದಿನಗಳಲ್ಲಿ ಮದುವೆ ನಿಶ್ಚಯವಾಗಿದ್ದ ರಾಜನೊಬ್ಬ ಹೀಗೆ ಆತ್ಮಹತ್ಯೆ ಮಾಡಿಕೊಂಡದ್ದು ಸುದ್ದಿಯಾಯಿತು. ಇದರ ಹಿಂದಿನ ಕಾರಣ ಗೊತ್ತಿದ್ದವರು ಮಾತ್ರ ಇಡೀ ರಾಜ್ಯದಲ್ಲಿ ಮೂರೇ ಜನ- ರಾಜನ ಅಮ್ಮ ಮತ್ತು ಆ ಪ್ರೇಮಿಗಳಿಬ್ಬರು. ಆ ಪ್ರೇಮಿಗಳಿಬ್ಬರು ಯಾವ ಕಾರಣಕ್ಕೂ ಇದನ್ನು ಯಾರಿಗೂ ಹೇಳಲಾರರು. ಏಕೆಂದರೆ ಈಗ ರಹಸ್ಯಗಳನ್ನು ಕಾಪಾಡಿಕೊಳ್ಳಲು ಕಾನೂನಿನ ಭಯ ಅವರಿಗಿರಲಿಲ್ಲ. ಹಾಗಾಗಿ ಅದನ್ನು ಹೇಳಬೇಕಾಗಿರಲಿಲ್ಲ. ಇನ್ನು ಅಷ್ಟು ವರ್ಷಗಳ ಕಾಲ ಕಾಪಿಟ್ಟಿದ್ದ ರಹಸ್ಯವನ್ನು ಆ ಅಮ್ಮ, ಮಗನ ಸಾವಿನ ನಂತರ ಏಕೆ ಹೊರ ಹಾಕಲಾರಳು… ಜನರು ಮತ್ತೆ ತಮ್ಮ ತಮ್ಮ ಖಾಸಗೀತನ ಕಾಪಾಡಿಕೊಂಡ ಬದುಕಿಗೆ ಮರಳಿದರು. 

*     *      *      * 

ತನ್ನ ಮೊಬೈಲ್ ನ ಸ್ಕ್ರೀನ್ ಲಾಕ್, ಗ್ಯಾಲರಿ ಲಾಕ್, ವಾಟ್ಸಪ್ ಲಾಕ್, ಮೆಸೆಂಜರ್ ಲಾಕ್ ಎಂದು ವಿಪರೀತ ಸೆಕ್ಯುರಿಟಿ ಕೋಡ್ ಗಳನ್ನು ಕೊಟ್ಟ ಮಗಳ ಮೊಬೈಲ್ ನ್ನು ಅಕಸ್ಮಾತ್ ಆಗಿ ಬಳಸಲು ಹೋದ ಅಪ್ಪನಿಗೆ ಯಾವ ಆ್ಯಪ್ ಗಳೂ ಓಪನ್ ಆಗದಿದ್ದಾಗ ಮಗಳೇ ಬಂದು ಸಹಾಯ ಮಾಡಿದಳು. ಅಂತ ಮಗಳಿಗೆ, ಅಪ್ಪ ತಾನು ಬಾಲ್ಯದಲ್ಲಿ ಕೇಳಿದ ಈ ‘ಅರಸನ ಆತ್ಮಹತ್ಯೆ’ ಎಂಬ ಈ ಕಥೆಯನ್ನು ಹೇಳಿದನು. ಆ ಮಗಳು ಅದೇನೆಂದು ಅರ್ಥ ಮಾಡಿಕೊಂಡಳೋ ಏನೋ ? 

December 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: