ಅಯ್ಯೋ ನಾಯಿ ಪಾಡೇ..

ಹೀಗೊಂದು ಲಹರಿ..

radhika ganganna

ರಾಧಿಕಾ ಗಂಗಣ್ಣ 

ತಂಪು ಹವೆಯಲ್ಲಿ ಕೀ ಬೋರ್ಡ್ ಕುಟ್ಟಿ ಲಕ್ಷ ಲಕ್ಷ ಸಂಪಾದಿಸುವ ಯುವಕ, ತಂಪು ಕಾರಿನಲ್ಲಿ ಸುಂಯ್ ಎಂದು ಬಂದು, ಕೈ ಬಿಡಲೊಲ್ಲದ ಇನ್ನೂ ನಿದ್ದೆಗಣ್ಣಲ್ಲಿರುವ ಪುಟ್ಟ ಮಗುವನ್ನು ’ಗುಡ್ ಮಾರ್ನಿಂಗ್’ ಎಂದು ತನ್ನ ತಮಿಳು ಧಾಟಿಯಲ್ಲಿ ಉಲಿದ ಆಯಾಳ ಕೈಗೊಪ್ಪಿಸಿ, ಒಂದರ ಹಿಂದೆ ಒಂದು ನಿಂತ ಕಾರುಗಳ ಸಾಲಿನಲ್ಲಿ ತನ್ನದೊಂದಿಷ್ಟು ’high value’ ನದ್ದೆಂದು ಮನಸ್ಸಿನಲ್ಲಿಯೇ ಬೀಗಿ ಕಾರನ್ನು ಶುರು ಮಾಡಿದ್ದನೋ ಏನೋ ಧಡಕ್ಕನೆ ಬ್ರೇಕ್ ಹಾಕಬೇಕಾಯಿತು.

dog3ಹಠಾತ್ತನೆ ಪಕ್ಕದಿಂದ ಬಂದು ನಿಂತ ಆಟೋಗೆ ಗುದ್ದಲು ತಪ್ಪಿಸಲು. ಎದೆಗೊತ್ತಿಕೊಂಡು ಪುಟ್ಟ ಮಗುವನ್ನು, ಬೆನ್ನಮೇಲೆ ಲ್ಯಾಪ್ಟಾಪ್ ಬ್ಯಾಗನ್ನು ಹೊತ್ತು ಆಟೋದಿಂದಿಳಿದ ತಾಯಿಯನ್ನು ಕಂಡು, ಅವಳಿಗೆ ಬಯ್ಯಲು ಆಗದೆ, ಹತ್ತಿರದಲ್ಲೇ ನಿಂತಿದ್ದ, ದೂರದ ಬಿಸಿಲುನಾಡು ಒರಿಸ್ಸಾದಿಂದ ’ತಂಪಾದ’ ಬೆಂಗಳೂರಿಗೆ ಉದರ ನಿಮಿತ್ತವಾಗಿ ಬಂದಿರುವ ಸೆಕ್ಯೂರಿಟಿಯವನ ಮೇಲೆ ನಾಲ್ಕಕ್ಷರದ ಪದ ಉಪಯೋಗಿಸಿದ, ಲೇನ್ ಡಿಸಿಪ್ಲಿನ್ ಫಾಲೋ ಮಾಡಿಸಲು ವಿಫಲನಾಗಿದ್ದಕ್ಕೆ.

ನಾಲೆಯ ಪಕ್ಕ ಜಮೀನಿರುವ ತನ್ನ ಊರಲ್ಲೇ ತುಸು ಬಿಸಿಲಲ್ಲಿ ಜೀವ ತೆಯ್ದಿದ್ದರೆ, ತನ್ನ ಹೆಂಡತಿ, ಮಗುವಿನ ಜೊತೆ ಎರಡು ಹೊತ್ತು ಹೊಟ್ಟೆ ತುಂಬ ಊಟ ಮಾಡಬಹುದಾಗಿತ್ತು ಹೀಗೆ ಬಿಸಿಲಲ್ಲಿ ನಿಂತು ಒಣಗಿ ಬಯ್ಯಿಸಿಕೊಳ್ಳುವುದಕ್ಕಿಂತ ಅಂತ ಅಂದುಕೊಳ್ಳುತ್ತಲೆ ಕ್ಷಮಾನೋಟವನ್ನು ಬೀರಿದ್ದನವನು ಕಾರಿನ ಮಾಲೀಕನತ್ತ.

ಕಾರು ಅತ್ತ ಸಾಗಿತೋ ಇಲ್ಲವೋ, ಆಗಲೋ ಈಗಲೋ ಅನ್ನುವಂತೆ ಜೀವ ಹಿಡಿದು ಊಟದ ವಾಸನೆಯನ್ನು ಅರಸುತ್ತಾ ಬಂದ ಬಡಕಲು ನಾಯಿಯತ್ತ ತನ್ನ ಕೈಯಲ್ಲಿದ್ದ ತುಂಡುಗೋಲನ್ನು ಎಸೆದ. ಅನಿರೀಕ್ಷಿತವಾಗಿ ತಗಲಿದ ಏಟಿನಿಂದ ಗಾಬರಿಯಾಗಿ ಅದು ಓಡತೊಡಗಿತು. ಆ ನೋವಿನಲ್ಲೂ ಘಮಘಮಿಸುವ ಊಟದ ಜಾಡು ಹಿಡಿದು ಅತ್ತ ಸಾಗಿದರೆ ಸಾವಿರಾರು ಐ.ಟಿ ಉದ್ಯೋಗಿಗಳು ಅರೆಬರೆ ಉಂಡು ಬಿಸಾಡಿದ ಊಟವನ್ನು ಹೊತ್ತ ಕರೀ ಪ್ಲಾಸ್ಟಿಕ್ ಚೀಲಗಳು ಒಂದು ಕೋಣೆಯಲ್ಲಿ.

ಹಿಂದೊಮ್ಮೆ ಭತ್ತ ಬೆಳೆಯುತ್ತಿದ್ದ, ಈಗ ಬರೀ ಗಗನಚುಂಬಿ ಕಟ್ಟಡಗಳ, ಹೊಲಸು ನಾರುವ ವಿಶಾಲ ಕೆರೆಯ ಊರಿನ ಯುವಕ, ಊಟದ ಚೀಲಗಳನ್ನು ಲಾರಿಗೆ ಸಾಗಿಸುತ್ತಲೇ ನಾಯಿಯತ್ತ ಕರುಣೆಯಿಂದ ನೋಡಿದ. ಚೀಲಗಳಲ್ಲಿ ನೂರಾರು ಮಂದಿ ತಿನ್ನುವಷ್ಟು ಅನ್ನ, ರೊಟ್ಟಿ, ಪಲ್ಯದ ರಾಶಿ. ಆದರೆ ಹಸಿದ ನಾಯಿಗೆ ಊಟವಿಲ್ಲ.

ಉತ್ತರ ಕರ್ನಾಟಕದ ತನ್ನ ಊರಲ್ಲಿ ಎಕರೆಗಟ್ಟಲೆ ಜಮೀನಿದ್ದರೂ ಬರದ ಫಲವಾಗಿ, ಬೆಂಗಳೂರಲ್ಲಿ ಕಟ್ಟಡ ಕಟ್ಟಲು ಸಂಸಾರ ಸಮೇತ ಬಂದಿಳಿದಿರುವ ಯುವತಿ ತುತ್ತು ಬಾಯಿಗಿಡಲು ಎತ್ತಿದ್ದ ಕೈಯನ್ನು ಅಲ್ಲೇ ನಿಲ್ಲಿಸಿ ತನ್ನ ಕೈಯಲ್ಲಿದ್ದ ರೊಟ್ಟಿಯನ್ನು ನೋಡುತ್ತಿದ್ದ ನಾಯಿಯನ್ನು ನೋಡಿದಳು. ಏನನ್ನಿಸಿತೋ ಕೈಯಲ್ಲಿದ್ದ ರೊಟ್ಟಿಯನ್ನು ನಾಯಿಯ ಮುಂದೆ ಹಾಕಿದಳು. ಇದು ನಿಜವೋ, ಕನಸೋ ಅನ್ನುವಂತೆ ನಾಯಿ ಒಮ್ಮೆ ಅವಳತ್ತ ನೋಡಿ, ರೊಟ್ಟಿ ತಿಂದು, ಬಾಲ ಅಲ್ಲಾಡಿಸಿ ಮುಂದೆ ಸಾಗಿತು.

ಐ.ಟಿ ಕ್ಯಾಂಪಸ್ಸಿನ ಅಂಗಳದಲ್ಲಿ ನೆಟ್ಟಿದ್ದ, ಪಕ್ಷಿ, ಚಿಟ್ಟೆಗಳಿಗೇನೂ ಉಪಯೋಗ ಬರದ, ಕೊಂಬೆಗಳನ್ನು ಸವರಿದ ಉದ್ದನೆಯ ಮರದಡಿಯಲ್ಲಿ, ಉದುರಿದ ಎಲೆಗಳನ್ನು ಹೆಕ್ಕಿ ಸ್ವಚ್ಛವಾದ ನೆಲದ ಮೇಲೆ ನೆರಳನ್ನು ಹುಡುಕಿಕೊಂಡು ಸೆಕ್ಯೂರಿಟಿ ಯವನು ಓಡಿಸಿಬಿಡುತ್ತಾನೋ ಏನೋ ಎಂದು ಅತ್ತಿತ್ತ ನೋಡುತ್ತಲೇ ನಾಯಿ ಉದ್ದಕ್ಕೆ ಕಾಲು ಚಾಚಿ ಮಲಗಿತು. ಸೆಕ್ಯುರಿಟಿಯವನು ಇದನ್ನು ಗಮನಿಸಿದರೂ ಗಮನಿಸಿದವನಂತೆ ಮುಂದೆ ಸಾಗಿದ, ತನ್ನ ಸುಪೀರಿಯರ್ ಏನಾದರೂ ಹೇಳುವವರೆಗಾದರೂ ನಾಯಿ ತನ್ನ ಪಾಡಿಗೆ ನಿದ್ದೆ ಮಾಡಲಿ ಎಂದು . .

‍ಲೇಖಕರು Admin

May 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shama, Nandibetta

    Radhika, ನಿಜ. ಒಬ್ಬೊಬ್ಬರದು ಒಂದೊಂಥರ ನಾಯಿ ಪಾಡು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: