ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಯ್ಯಯ್ಯೋ.. ಕವಿಗೋಷ್ಠಿ!!

ಹಜರತ ಅಲಿ ದೇಗಿನಾಳ

ಅನಧಿಕೃತ ಆಡಳಿತಗಾರರೆಂದೂ ರವಿಕಾಣದ್ದನ್ನು ಕಾಣುವ ಶಕ್ತಿವಂತರೆಂದೂ ಬಿರುದಾಂಕಿತರಾದ ಕಿರಿಯ ಕವಿಗಳು ಹಿರಿಯ ಕವಿಗಳು ಯುವಕವಿಗಳು ಮರಿಕವಿಗಳು ಖ್ಯಾತಕವಿಗಳು, ಚೋರಕವಿಗಳು, ಜಿಲ್ಲಾ-ತಾಲೂಕ-ಹೋಬಳಿ-ರಾಜ್ಯ ಇತ್ಯಾದಿ ಮಟ್ಟದ ಕವಿಗಳು ಜನವಸತಿ ಪ್ರದೇಶದಲ್ಲಿ ಖಾಲಿ ಖುರ್ಚಿಗಳ ಮುಂದೆ ನಡೆಸುವ ಗೋಷ್ಠಿಯನ್ನು ಕವಿಗೋಷ್ಠಿಯೆನ್ನುತ್ತಾರೆ!

ಬಹುಭಾಷಾ ಕವಿಗೋಷ್ಠಿ, ಯುಗಾದಿ ಕವಿಗೋಷ್ಠಿ, ದಸರಾ ಕವಿಗೋಷ್ಠಿ ಇತ್ಯಾದಿಗಳೆಂದು ಕವಿಗೋಷ್ಠಿಗಳಲ್ಲಿ ಹಲವಾರು ಪ್ರಕಾರಗಳಿವೆ.ಮಕ್ಕಳಿಗಾಗಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕವಿಗೋಷ್ಠಿ ನಡೆಯುತ್ತವೆ.ಇತ್ತಿತ್ತಲಾಗಿ ತಮಗೆ ಸರಿಯಾಗಿ ಅವಕಾಶ ಮತ್ತು ಸ್ಥಾನಮಾನ ಕೊಡದ ಪುರುಷ ಕವಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಮೀಳಾ ಕವಿಗಳು ಪ್ರತ್ಯೇಕವಾಗಿ ಮಹಿಳಾ ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ!ಆ ಮೂಲಕ ಪುಲ್ಲಿಂಗ ಕವಿಗಳಿಗೆ ತಾವುಗಳು ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲವೆಂದು ಈ ಸ್ತ್ರೀಲಿಂಗ ಕವಿಗಳು ಸಾರಿ ಸಾರಿ ಹೇಳುತ್ತಿದ್ದಾರೆ!

ಈಗ ನೇರವಾಗಿ ಕವಿಗೋಷ್ಠಿ ನಡೆಯುವ ವೇದಿಕೆಗೆ ಬರೋಣ. ವೇದಿಕೆಯ ಮೇಲೆ ಕವಿಗೋಷ್ಠಿಗಾಗಿ ಹತ್ತಿಪ್ಪತ್ತಾರು ಖುರ್ಚಿ ಹಾಕಲಾಗಿರುತ್ತದೆ. ದೂರದೂರದಿಂದ ಬಸವಳಿದು ಬಂದು ಅಲ್ಲಿಲ್ಲಿ ಅಡಗಿ ಕುಳಿತಿರುವ ಕವಿಗಳನ್ನು ಕನಿಕರದಿಂದ ಮೇಲಕ್ಕೆ ಕರೆಯಲಾಗುತ್ತದೆ. ಕರೆಯುವುದೇ ತಡ ಕವಿಗಳು ಎದ್ದೇನೋ ಬಿದ್ದೇನೋ ಎಂದು ವೇದಿಕೆಗೆ ನುಗ್ಗುತ್ತಾರೆ. ವೇದಿಕೆಯ ಮುಂದಿನ ಸಾಲಿನಲ್ಲಿ ಅದರಲ್ಲೂ ಅಧ್ಯಕ್ಷರ ಪಕ್ಕದಲ್ಲಿ ಸೀಟು ಹಿಡಿಯಲು ಒಂದು ಸಣ್ಣ ಪೈಪೋಟಿ ನಡೆಯುತ್ತದೆ. ಕವಿಗಳು ಖುರ್ಚಿ ಹಿಡಿಯುವ ಈ ದೃಶ್ಯಗಳು ಮುಂದೆ ಕುಳಿತಿರುವ ಸೂಕ್ಷ್ಮಸಂವೇದನೆಯ ಜನರಿಗೆ ಬಹಳಷ್ಟು ಮೋಜು ನೀಡಬಹುದು. ಅದರಲ್ಲೂ ವೇದಿಕೆಯ ಮೇಲೆ ಖುರ್ಚಿಗಳು ಕಡಿಮೆ ಬೀಳುವಂತೆ ಕಂಡರಂತೂ ಅದೊಂದು ‘ಮ್ಯೂಸಿಕಲ್ ಚೇರ್’ ಆಗುತ್ತದೆ. ಖುರ್ಚಿಯ ಈ ದೌಡಿನಲ್ಲಿ ತುಸು ಹಿಂದುಳಿಯುವ ‘ಮಂದ’ ಕವಿಗಳಿಗಂತೂ ಹಿಂದಿನ ಸಾಲೇ ಗತಿಯಾಗುತ್ತದೆ!

ಒಮ್ಮೆ ರಾಮದುರ್ಗದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ನನ್ನನ್ನು ಕವಿಯೆಂದು ಕರೆಯಲಾಗಿ ನಾನು ಅಲ್ಲಿಗೆ ದಂಡಯಾತ್ರೆ ಕೈಗೊಂಡಿದ್ದೆ. ಸಂಜಿಯವರೆಗೆ ಭಾಷಣದ ಮೇಲೆ ಭಾಷಣಗಳು ಬಿದ್ದ ಅಲ್ಲಿ ಕವಿಗೋಷ್ಠಿಯೇ ಕೊನೆಯ ಗೋಷ್ಠಿ! ನಾನು ಮುಂಜಾನೆಯೇ ಹೋಗಿ ಕುಳಿತು ಭಾಷಣ ಕೇಳಿ ಕೇಳಿ ಅರೆಜೀವವಾಗಿದ್ದೆ. ನಿರೂಪಕರು ಕರೆದ ನಂತರ ವೇದಿಕೆಯ ಮೇಲೆ ಹೋಗಿ ಮುಂದಿನ ಸಾಲಿನಲ್ಲಿ ಖಾಲಿಯಿದ್ದ ಒಂದು ಖುರ್ಚಿಯತ್ತ ನಡೆದೆ. ಇನ್ನೇನು ಕುಳಿತುಕೊಳ್ಳಬೇಕೆನಿಸುವಷ್ಟರಲ್ಲಿ ಮಿಂಚಿನಂತೆ ಬಂದ ಕವಿಚಕ್ರವರ್ತಿಗಳೊಬ್ಬರು ‘ಧಕ್’ ಎಂದು ಕುಳಿತುಬಿಟ್ಟರು!

ಕವಿಗಳ ಹಣೆಬರಹವೇ ಇಷ್ಟು ಎಂದು ನಾನು ಹಿಂದಿನ ಸಾಲಿನಲ್ಲಿ ಬಾಕಿ ಉಳಿದಿದ್ದ ಒಂದು ಖುರ್ಚಿಯತ್ತ ಹೊಂಟೆ. ಸರಕ್ಕನೆ ಸುಳಿದ ಕವಯಿತ್ರಿಯೊಬ್ಬಳು ಅಕ್ಷರಶಃ ಆ ಖುರ್ಚಿಯನ್ನು ಕಸಿದುಕೊಂಡಳು! ಸಭಿಕರನ್ನೊಮ್ಮೆ ಆ ಖುರ್ಚಿಯನ್ನು ಕಸಿದುಕೊಂಡ ಕವಯಿತ್ರಿಯನ್ನೊಮ್ಮೆ ನೋಡುತ್ತ ನಿರುಪಾಯನಾಗಿ ನಾನು ಕೆಲಹೊತ್ತು ನಾಚಿಕೆಯಿಂದ ನಿಂತುಕೊಂಡೆ. ಸಂಘಟಕರು ಸುಮಾರು ಹೊತ್ತಿನ ನಂತರ ದಯಮಾಡಿ ಒಂದು ಖುರ್ಚಿಕೊಟ್ಟ ನಂತರ ಕುಳಿತುಕೊಂಡೆ

ಕನ್ನಡದ ಪ್ರಸಿದ್ಧ ಸಾಹಿತ್ಯಿಕ ಪತ್ರಿಕೆಯೊಂದಕ್ಕೆ ಐವತ್ತು ತುಂಬಿದ ನಿಮಿತ್ಯ ಸಮ್ಮೇಳನ ನಡೆಯಿತು ಬೆಂಗಳೂರಿನಲ್ಲಿ. ಸಮ್ಮೇಳನದ ಭಾಗವಾಗಿ ಕವಿಗೋಷ್ಠಿ ನಡೆಯಿತು. ಸಮ್ಮೇಳನಕ್ಕೆ ಬರುವ ಎಲ್ಲ ಕವಿಗಳಿಗೆ ಕವಿತೆವಾಚನ ಮಾಡಲು ಅವಕಾಶ ಕೊಡುವುದಾಗಿ ಸಂಘಟಕರು ಮೊದಲೇ ಮಾತುಕೊಟ್ಟದ್ದರಿಂದ ಬಹಳಷ್ಟು ಜನ ಕವಿಪುಂಗವರು ದಯಮಾಡಿಸಿದ್ದರು. ಆ ಮ್ಯಾರಾಥಾನ ಕವಿಗೋಷ್ಠಿ ಪ್ರಾರಂಭವಾಯಿತು ಹರ್ಯಾವತ್ತು. ಎಲ್ಲ ಕವಿಗಳಿಗೆ ಅವಕಾಶ ಕೊಡಬೇಕು ಆದರೆ ಸಮಯ ಕಡಿಮೆ ಹಿಡಿಯಬೇಕು ಎಂಬುದು ನಿರೂಪಕರ-ಸಂಘಟಕರ ಹಿರಿಯಾಸೆ. ಹೀಗಾಗಿ ನಿರೂಪಕರು ಕವಿಗಳಿಗೆ ‘ಮುಂದಿನ ತಯಾರಿ’  ಎಂದು ಹೆಸರು ಕೂಗುತ್ತಿದ್ದರು.

ನಿರೂಪಕರಿಗೆ ಎಷ್ಟು ಧಾವಂತವಿತ್ತೆಂದರೆ ಕವಿಯೊಬ್ಬರ ಕವಿತಾವಾಚನ ಮುಗಿದ ನಂತರ ಮುಂದಿನ ತಯಾರಿಯನ್ನು ಕರೆಯದೆ ಅದರ ಮುಂದಿನವನನ್ನು ಕರೆಯುತ್ತಿದ್ದರು! ನನ್ನನ್ನು ಕರೆದರು; ಮರೆತರು. ನಾನು ಗೆಳೆಯರ ಮೂಲಕ ಎಚ್ಚರಿಸಲಾಗಿ ನಿರೂಪಕರು ಮತ್ತೊಮ್ಮೆ ಕರೆದರು. ನಾನು ವೇದಿಕೆಯ ಮೇಲೆ ಹೋಗಿ ಇನ್ನೇನು ಕವಿತಾವಾಚನ ಮಾಡಬೇಕೆಂದು ಭಾಷಣಕಟ್ಟೆಗೆ ಹೋಗಬೇಕೆನ್ನುವಷ್ಟರಲ್ಲಿ ಮುಂದಿನ ತಯಾರಿಯ ಕವಯಿತ್ರಿಯೊಬ್ಬರು ಆತುರದಿಂದ ಬಂದು ಮೈಕು ಹಿಡಿದು ನಿಂತುಬಿಟ್ಟಿದ್ದರು!

ಆ ಹುಚ್ಚು ಕವಯಿತ್ರಿಗೆ ನಾನು ಕವಿತೆವಾಚನ ಮಾಡಲು ನಿಂತಿದ್ದೇನೆ ಎಂಬುದೂ ಕಾಣಲಿಲ್ಲವೇ? ನಾನು ಕೈಕೈ ಹಿಚುಕಿಕೊಂಡು ಅಲ್ಲೇ ವೇದಿಕೆಯ ಮೇಲೆಯೇ ಮೂಲೆಯಲ್ಲಿ ಅಂಡವೂರಿ ಕುಳಿತುಬಿಟ್ಟೆ-ಆ ಕೆಟ್ಟ ನಿರೂಪಕರಿಗೆ ಕಾಣುವಂತೆ! ನಿರೂಪಕರು ಆಗ ನನ್ನನ್ನು ಕರುಣೆಯಿಂದ ನೋಡಿ ಒಂದು ಹತ್ತು ನಿಮಿಷ ಕಾಯಿಸಿ ನಂತರ ದಯಮಾಡಿ ಅವಕಾಶ ಕೊಟ್ಟರು!

ಕವಿಗೋಷ್ಠಿಯ ವೇದಿಕೆಯ ಮೇಲೆ ಇಂಥಹ ವಿಲಕ್ಷಣ ಸನ್ನಿವೇಶಗಳು ಸಾಕಷ್ಟಿರುತ್ತವೆ. ಬಹಳಷ್ಟು ಕವಿಗೋಷ್ಠಿಗಳಲ್ಲಿ ಒಬ್ಬರು ಉದ್ಘಾಟಕರಾಗಿ ಬಂದಿರುತ್ತಾರೆ. ಅವರು ಉದ್ಘಾಟಿಸಿ ಪುಸ್..ಪುಸ್..! ಎಂದು ಒಂದಿಷ್ಟು ‘ಏನೋ’ ಬಾಯಿಬಡಿದ ನಂತರ ನಿಜವಾದ ಕವಿಗೋಷ್ಠಿ ಆರಂಭವಾಗುತ್ತದೆ.ನಿರೂಪಕರು ಕಾವ್ಯದ ಕುರಿತು ತಮ್ಮ ಎಲ್ಲ ಜ್ಞಾನವನ್ನು ಧಾರೆಯೆರೆವಂತೆ ಉದ್ಧವಾಗಿ ಪೀಠಿಕೆ ಹಾಕಿ ನಿರೂಪಿಸುತ್ತಾರೆ. ಆ ನಂತರ ಸಂಘಟಕರು ವೇದಿಕೆಯ ಮೇಲೆ ಬಂದು ಕವಿಗಳಿಗೆ ಪಾಲಿಸಲು ಸಾಧ್ಯವೇ ಆಗದ ಕಠಿಣ ಶರತ್ತುಗಳನ್ನು ವಿಧಿಸುತ್ತಾರೆ:-

1) ಕವಿಗಳು ದಯವಿಟ್ಟು ಒಂದೇ ಕವಿತೆಯನ್ನು ಓದಬೇಕು;ಅದೂ ಚಿಕ್ಕದಿರಬೇಕು

2) ಚುಟುಕು ಓದುವುದಾದರೆ ಎರಡು-ಮೂರನ್ನು ಓದಬೇಕು; ಹೆಚ್ಚಿಗೆ ಓದಬಾರದು!

3) ಕವಿತೆ ಓದುವ ಮುಂಚೆ ವಿವರಣೆ ಇತ್ಯಾದಿ ನೀಡಬಾರದು

4) ಕವಿತೆಯ ಸಾಲುಗಳನ್ನು ಪುನರಾವೃತ್ತಿ ಮಾಡಬಾರದು

5) (ತಪ್ಪಿದಲ್ಲಿ ನಿಮ್ಮನ್ನು ಮುಂದಿನ ಕವಿಗೋಷ್ಠಿಗಳಿಂದ ಗಡಿಪಾರು ಮಾಡಲಾಗುತ್ತದೆ ಹುಷಾರ್!)

ಇಷ್ಟು ಶರ್ತುಗಳನ್ನು ಗಮನದಲ್ಲಿರಿಸಿಕೊಂಡು ಕವಿಪ್ರಾಣಿಗಳು ಕವಿತೆವಾಚನ ಮಾಡಬೇಕು! ನನ್ನಂತಹ ಕೆಲವು ನಾಚಿಕೆ ಸ್ವಬಾವದ ಕವಿಗಳು ಈ ಶರತ್ತುಗಳನ್ನು ಚಾಚೂತಪ್ಪದೆ ಪಾಲಿಸಿ ಸಂಘಟಕರ ಮೆಚ್ಚುಗೆಗೆ ಪಾತ್ರರಾಗುತ್ತೇವೆ. ಇದರಿಂದಾಗಿ ಮುಂದಿನ ಮತ್ತೊಂದು ಕವಿಗೋಷ್ಠಿಯಲ್ಲಿ ಅವಕಾಶ ಸಿಗುತ್ತದೆ! ಆದರೆ ಕೆಲವು ಹಂಡ (ನಿವೃತ್ತರಾದ ಹಿರಿಯ ಕವಿಗಳು) ಕವಿಗಳು ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಕವಿತೆಯ ಹಿನ್ನೆಲೆ-ಮುನ್ನೆಲೆ ಹೇಳಿ ಇಂಥಹ ಸದವಕಾಶ ನೀಡಿದ ಸಂಘಟಕರಿಗೆ ಧನ್ಯವಾದಗಳನ್ನರ್ಪಿಸಿ ತಮ್ಮ ಉದ್ದವಾದ ಗೊಡ್ಡು ಕವಿತೆಯನ್ನು ಓದುತ್ತಾರೆ. ಎತ್ತು ಮುತ್ತು ಮಾಡುವಂತೆ ಉದ್ದವಾಗಿ ಇವರು ಕವಿತೆ ಒದುತ್ತಿದ್ದರೆ ಅತ್ತ ಸಮಯದ ಅಭಾವದಿಂದ ಪೇಚಾಟದಲ್ಲಿರುವ ಸಂಘಟಕರು ಇಂಥಹ ಶರತ್ತು ಉಲ್ಲಂಘಿಸುವ ವಿಶ್ವಾಸದ್ರೋಹಿ ಕವಿಯನ್ನು ಕವಿಗೋಷ್ಠಿಗೆ ಕರೆದದ್ದಕ್ಕಾಗಿ ಗಲ್ಲಗಲ್ಲ ಬಡಿದುಕೊಳ್ಳುತ್ತಾರೆ!

ಆದರೆ ಕವಿಗೋಷ್ಠಿಯೆಂದರೆ ಕವಿಗೋಷ್ಠಿಯೇ! ಅಲ್ಲಿ ತಮ್ಮ ಕವಿತೆ ಮಂಡಿಸುವ ಕವಿಗಳ ಶೈಲಿಗಳು ಎಷ್ಟು ವಿಬಿನ್ನವಾಗಿರುತ್ತವೆ. ನೋಡಲೊಂದು ಸೊಗಸು!ನಿರೂಪಕರು ತಮ್ಮ ಹೆಸರನ್ನು ಕರೆದ ನಂತರ ಸ್ವರ್ಗದ ಬಾಗಿಲು ತೆರೆಯಿತೋ ಎಂಬಂತೆ ಕೈಯಲ್ಲಿ ಕವಿತೆಗಳನ್ನು ಹಿಡಿದು ಕವಿಗಳು ಮೈಕಿನತ್ತ ಧೀರ-ಗಂಭೀರವಾಗಿ ನಡೆದು ಬಂದು ‘ನಾನೇ ಈ ಜಗತ್ತಿನ ಚಕ್ರವರ್ತಿ (ನೀವೆಲ್ಲ ಹುಲುಮಾನವರು!); ನನ್ನ ಮುಂದೆ ಯಾರಿದ್ದಾರೆ? (ಸಾಮಾನ್ಯ ಸಭಿಕರಿದ್ದಾರೆ ದಯವಿಟ್ಟು ಗಮನಿಸಿ!) ಎಂದು 56 ಇಂಚು ಎದೆ ಸೆಟೆಸಿ ಸಭಿಕರತ್ತ ಒಮ್ಮೆ ದೀರ್ಘ ದೃಷ್ಟಿಹಾಯಿಸಿ ಮೈಕನ್ನು ಸರಿಯಾಗಿ ಬಾಯಿಗೆ ಬಗ್ಗಿಸಿಕೊಂಡು ‘ಉಪ್’ ಎಂದು ಊದುತ್ತಾರೆ! ಆಕಳಿಸುತ್ತಿರುವ ಜನ ಎಚ್ಚರವಾಗುತ್ತಾರೆ. ಕವಿಗಳು ಕವಿತೆ ಪ್ರಾರಂಭಿಸುತ್ತಾರೆ-

ಏಳು ಕೊಳ್ಳದೆಲ್ಲಮ್ಮ

ಎಲ್ಲರ ತಾಯಿ ನೀನಮ್ಮ

ನಿನ್ನ ಕೀರ್ತಿ ಹೆಚ್ಚಮ್ಮ

ಏಳು ಕೊಳ್ಳದ ಎಲ್ಲಮ್ಮ     ಅಥವಾ

ರೈತರು ಸತ್ತರು..

ರೈತರು..ಸತ್ತು ಹೋದರು..

ಅಲ್ಲಿ ನೋಡಿ..ಅಲ್ಲಿ ನೋಡಿ…

ತೋಳಹಳ್ಳಕ್ಕೆ ಬಿದ್ದಂತೆ

ಎಮ್ಮೇಲೆಗಳು ರೆಸಾರ್ಟು ಹೊಕ್ಕರು..     ಅಥವಾ

ಕೈಕೊಟ್ಟ ಓ! ನನ್ನ ಪ್ರಿಯತಮೆ

ನಿನ್ನ ದಿಕ್ಕಿಗೆ ಶರಣೆಂಬೆ

ನೀನು ಮಾಡಿದ ಈ ಗಾಯ ಇನ್ನೂ ಮಾಯುತ್ತಿಲ್ಲ

ಯಾವ ದಡ್ಡ ವೈಧ್ಯರಿಗೂ ಅದು ತಿಳಿಯುತ್ತಿಲ್ಲ…

ನಾನೇನು ಮಾಡುತ್ತಿದ್ದೇನೆ…?

ನಾನೇನು ಮಾಡುತ್ತಿದ್ದೇನೆ…ಗೊತ್ತೆ?

ಹರಕು ಗಡ್ಡ ಬೆಳೆಸಿಕೊಂಡು ಹರಗಾಡುತ್ತಿದ್ದೇನೆ!

ಈ ಮಾದರಿಯಲ್ಲಿ ಎಳೆದೆಳೆದು ಕವಿಗಳು ಕವಿತೆ ವಾಚಿಸುತ್ತಾರೆ. ಇವರ ಕರ್ಕಷ ಧ್ವನಿಯಲ್ಲಿ ಕೇಳಿ ಬರುತ್ತಿರುವ ಕಾವ್ಯತೌಡನ್ನು ಸಭಿಕರು ಕೇಳದೆ ಕೇಳುತ್ತಾ ತಲೆಚಿಟ್ಟು ಹಿಡಿದು ತೇಲುಗಣ್ಣು ಹಾಕುತ್ತಾರೆ! ಆದರೆ ಸಭಿಕರ ನಾಡಿಮಿಡಿತ ಬಲ್ಲ ನನ್ನಂತ ಪಕ್ಕಾ ವ್ಯಾವಹಾರಿಕ ಕವಿಗಳು ಎಲ್ಲರಿಗೂ ತಿಳಿಯುವಂತೆ ರಸವತ್ತಾದ ಕವಿತೆ ವಾಚಿಸಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸುತ್ತೇವೆ. ಬೆಳಗಾವಿ ಜಿಲ್ಲೆಯ ಕವಿಗೋಷ್ಠಿಗಳಲ್ಲಿ ನಾನು ಪಿಕ್ಷ್ ಆಗಿ ಕ್ಲಿಕ್ ಆಗಲು ಮತ್ತು ಉಳಿದ ಗೊಡ್ಡುಕವಿಗಳು ಮೈಪರಚಿಕೊಳ್ಳಲು ಇದು ಬಹುಮಟ್ಟಿಗೆ ಕಾರಣವೆನಿಸುತ್ತದೆ!

ಕವಿಗಳ ಕೊರೆತ ಮುಗಿದ ಮೇಲೆ ಗೋಷ್ಠಿಯ ಅಧ್ಯಕ್ಷರ  ಗರಗಸ ಚಾಲೂ ಆಗುತ್ತದೆ. ಅವರ ಮುಖದಲ್ಲಿ ಮಂದಹಾಸ ಲಾಸ್ಯವಾಡುತ್ತಿರುತ್ತದೆ! ತಮಗೆ ಪಾಳಿ ಬಂದಿರುವುದಕ್ಕೆ; ಇನ್ನೂ ಬೆರಳೆಣಿಕೆಯಷ್ಟಾದರೂ ಕಾವ್ಯಪ್ರೇಮಿಗಳು ಜೀವಂತ ಕುಳಿತಿರುವುದಕ್ಕೆ…ಮುಂತಾದುವಕ್ಕೆ.

ಕಾವ್ಯ ಎಂದರೇನು? ಕವಿತೆ ಹೇಗೆ ಹುಟ್ಟುತ್ತದೆ? ಪಂಪನಿಂದ ಹಂಪನಾವರೆಗೆ ಹೇಗೆ ಅದು ಹರಿದು ಬಂದಿದೆ? ಈಗ ಹೇಗೆ ಮುಂದುವರೆದಿದೆ? ನವೋದಯ, ನವ್ಯ, ದಲಿತ-ಬಂಡಾಯ-ಎಂಥ ಕಾವ್ಯ ಏನು ಕತೆ?! ಇತ್ಯಾದಿ ಕುಟ್ಟಿ ಸದರಿ ಕವಿಗೋಷ್ಠಿಯಲ್ಲಿ ಓದಿದ ಎಲ್ಲ ಕವಿತೆಗಳು ಬಹಳ ಸುಂದರವಾಗಿವೆ ಎಂದು ಮುಗಮ್ಮಾಗಿ ಅಪ್ಪಣೆ ಕೊಡಿಸುತ್ತಾರೆ!

ಕವಿಗೋಷ್ಠಿಯ ಈ ಸನ್ಮಾನ್ಯ ಅಧ್ಯಕ್ಷರು ತಮ್ಮ ಮತ್ತು ತಮ್ಮ ಕವಿತೆಯ ಕುರಿತೇ ಈ ಮಾತು ಹೇಳಿದರೆಂದು ಕವಿಗಳೆಲ್ಲರೂ ಉಬುಉಬು ಉಬ್ಬುತ್ತಾರೆ! ದೀರ್ಘ ಭಾಷಣ ಮುಗಿದ ನಂತರ ಕವಿಗೋಷ್ಠಿಗೆ ಕಳಸವಿಟ್ಟಂತೆ ಸನ್ಮಾನ್ಯ ಅಧ್ಯಕ್ಷರು ಸಾಕಷ್ಟು ದೀರ್ಘವಾದ ತಮ್ಮ ಸ್ವರಚಿತ ಒಂದು ಕವಿತೆ ಓದುತ್ತಾರೆ. ಗೋಷ್ಠಿಯ ಎಲ್ಲರಿಗೂ ಔಡಲ ಎಣ್ಣೆ ಕುಡಿದಂತಾಗುತ್ತದೆ!

ಇಂಥ ಅಥವಾ ಇದಕ್ಕಿಂತ ಕೆಟ್ಟದ್ದಾದ ಹಲವಾರು ಕಾರಣಗಳಿಂದ ಕವಿಸಮ್ಮೇಳನ ಆಯೋಜಿಸುವ ಸಂಘಟಕರಿಗೆ ಕವಿಗಳ ಮೇಲೆ ಈಗ ಏಟೇಟೂ ವಿಶ್ವಾಸವಿಲ್ಲವೆಂಬುದು ಮತ್ತು ಕವಿಗಳ ಡಿಗಿನಿಟಿ ಯಾವತರ ಕುಸಿದು ಪಾತಾಳ ಕಂಡಿದೆ ಎಂಬುದು ನಿಪ್ಪಾಣಿಯ ಗಡಿಭಾಗದಲ್ಲಿ ನಡೆದ ಕವಿಗೋಷ್ಠಿಯೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನನಗೆ ಮನದಟ್ಟಾಯಿತು.

ಮುಂಜಾನೆ ಎಂಟು ಗಂಟೆಗೆ ಆರಂಭವಾಗಿದ್ದ ಆ ಒಂದು ದಿನದ ಸಮ್ಮೇಳನದಲ್ಲಿ ಕವಿಗೋಷ್ಠಿಯೇ ಕೊನೆಯ ಕಾರ್ಯಕ್ರಮ! ಮುಸ್ಸಂಜೆ ಏಳು ಗಂಟೆಯ ವೇಳಿಗೆ ಅದರ ಪಾಳಿ ಬರಲಾಗಿ ನಿರೂಪಕರು ಕವಿಗಳನ್ನು ವೇದಿಕೆಗೆ ಕರೆದು ಕುಳ್ಳಿರಿಸಿದರು. ನಂತರ ಸಂಘಟಕರು ಕವಿಗಳ ಬೆನ್ನ ಹಿಂದೆ ಬಂದು ಕವಿಗಳೆಲ್ಲರ ಕವಿತೆಗಳನ್ನು ‘ಚೆಕ್’ ಮಾಡತೊಡಗಿದರು! ನನಗೂ ಕೇಳಲಾಗಿ ನಾನು ಪುಸ್ತಕ ತೋರಿಸಲಾಗಿ ‘ಅಸೂದೆ.. ‘ಅಸೂದೆ’…ಎಂದರು!

ಕವಿತಾವಾಚನಕ್ಕಿಂತ ಮುಂಚೆಯೇ ಕವಿತೆಗಳನ್ನು ಹೀಗೆ ಏಕೆ ಚೆಕ್ ಮಾಡಿದರು ಎಂದು ನನಗೆ ವಿಸ್ಮಯವಾಯಿತು. ಆದರೆ ಇದರ ಹಿಂದಿನ ಕಾರಣಗಳನ್ನು ತಿಳಿಯುವುದು ಅಷ್ಟೇನೂ ಕಷ್ಟವಾಗಲಿಲ್ಲ. ಕವಿಗೋಷ್ಠಿಗೆ ಬಂದ ಕೆಲವು ಕವಿಗಳು ಗೋಷ್ಠಿಯ ಗಾಂಭೀರ್ಯ ಮರೆತು ಕ್ಷುದ್ರವಾದ ಪ್ರೇಮದ ಕವಿತೆಗಳನ್ನು ಕರುಣಾರ್ದ್ರವಾಗಿ ಓದಿ ಸಂಘಟಕರಿಗೆ ಪಜೀತಿ ಮಾಡುತ್ತಿದ್ದಾರೆ!ಇಂಥ ಕೆಟ್ಟ ಕವಿಗಳನ್ನು ಪೂರ್ವದಲ್ಲಿಯೇ ಪತ್ತೆಹಚ್ಚಿ ಗದಮುವುದು ಸಂಘಟಕರ ಮುಂದಾಲೋಚನೆ! ಕವಿಕೂಟಗಳೆಲ್ಲ ಕೊನೆಯಲ್ಲಿ ನಡೆಯುವಂತಾಗಲು ಇಂಥವೆಲ್ಲ ಕಾರಣಗಳಿವೆ. ವಾತಾವರಣ ಹೀಗಿರಲಾಗಿ ಇನ್ನೂ ಕವಿಗೋಷ್ಠಿಗಳು ನಡೆಯುತ್ತಿರುವುದೇ ಹೆಚ್ಚಿನ ಮಾತಾಗಿದೆ ಎನಿಸುತ್ತದೆ.

‍ಲೇಖಕರು admin

23 May, 2017

1 Comment

  1. Ramesh Aroli

    ಚೆನ್ನಾಗಿದೆ ಹಜರತ ಅಲಿಯವರೆ, ಬಹಳಷ್ಟು ಸಲ, ನಿರೂಪಕರೇ ಅಧ್ಯಕ್ಷರ ರೈಟ್ ಹ್ಯಾಂಡ್ ಇಲ್ಲ ಲೆಫ್ಟ್ ಹ್ಯಾಂಡ್ ರಂತೆ ಖುರ್ಚಿ ಕಾಯ್ದಿರಿಸಿ, ಅತ್ಯಾನಗತ್ಯವಾಗಿ ಮುಗುಳು ನಗುವ, ಮೈಕಿನೆದುರು ಕವಿತೆ ಓದುತ್ತಿರುವ ಪ್ರಾಣಿಯೊಬ್ಬ ಜ್ಯುನಿಯರ್ ರೌಡಿ ಶೀಟರ್ ಎಂಬ ಭಾವದಲ್ಲಿ ಇದ್ದು ಬಿಡುವ ಅದೆಷ್ಟೋ ಪ್ರಸಂಗಗಳು ಆಗಾಗ ನಡಿತವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading