ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಮತ್ತು ಬೆಳೆಯುತ್ತಿರುವ ಮಕ್ಕಳು – ವಿದ್ಯಾ

ನಿಮ್ಮ ಮಕ್ಕಳು ನಿಮ್ಮ ಸ್ವತ್ತಲ್ಲ…

– ವಿದ್ಯಾ

ಎಂಟನೆಯ ತರಗತಿಯ ಮಕ್ಕಳಿಗೆ ಕಮಲಾ ಸುರೈಯಾ (ಕಮಲಾದಾಸ್)ರ “ಮಿಡ್ಲ್ ಏಜ್” ಪದ್ಯವೊಂದನ್ನು ವಿವರಿಸುತ್ತಿದ್ದೆ. ಟೀನೇಜಿನ ಮಕ್ಕಳಿಗೆ ಉದ್ದೇಶಪೂರ್ವಕವಾಗಿಯೇ ಪದ್ಯ ಓದಲು ಇಟ್ಟಿದ್ದಾರೇನೋ ಅನ್ನಿಸಿತ್ತು. ಮಹಿಳೆಯ ಜೀವನದ ಮಧ್ಯ ವಯಸ್ಸಿನಲ್ಲಿ ಆಕೆಯ ಮನಸ್ಸಿನ ಸ್ಥಿತಿಯ ತೊಳಲಾಟವನ್ನು ಈ ಪದ್ಯದಲ್ಲಿ ಅತ್ಯಂತ ಮಾರ್ಮಿಕವಾಗಿ ಹಿಡಿದಿಟ್ಟಿದ್ದಾರೆ ಕಮಲಾದಾಸ್.ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ಮಕ್ಕಳು ತಾಯಿಯ ವಾತ್ಸಲ್ಯ ಮತ್ತು ಕಾಳಜಿಯ ಸೆರಗಿನಿಂದ ಹೊರಬಂದು ಸ್ವತಂತ್ರರಾಗುವ ಪ್ರಕ್ರಿಯೆಯನ್ನು ಕೋಶ ಒಡೆದು ಹೊರ ಬರುವ ಚಿಟ್ಟೆಗೆ ಹೋಲಿಸುತ್ತಾರೆ. ಒಂದು ಹಂತಕ್ಕೆ ತಾಯಿಗೆ ಒಂದು ಕಪ್ ಕಾಫಿ ಮತ್ತು ಬಟ್ಟೆ ಮಟ್ಟಸಗೊಳಿಸಲಷ್ಟೇ ತನ್ನ ಅವಶ್ಯಕತೆ ಅನ್ನಿಸಿ ಹೇಳಲಾಗದ ಅತೀವ ನೋವನ್ನು ಅನುಭವಿಸುತ್ತಾಳೆ. ಹಿಂದೊಮ್ಮೆ ತನ್ನ ಪುಟ್ಟ ಮಗುವಿನೊಂದಿಗೆ ಆಡಿದ್ದ ಮಕ್ಕಳಾಟಗಳನ್ನೆಲ್ಲ ನೆನೆದು ದು:ಖಿಸುತ್ತಾಳೆ. ಯಾರೂ ಮನೆಯಲ್ಲಿಲ್ಲದ ವೇಳೆ ಜೋಪಾನವಾಗಿಟ್ಟ ಮಕ್ಕಳ ಪುಟ್ಟ ಪುಟ್ಟ ಬಟ್ಟೆಗಳನ್ನು ಸ್ಪರ್ಶಿಸಿ ಕಣ್ತುಂಬ ನೀರು ತುಂಬಿಕೊಳ್ಳುತ್ತಾಳೆ. ಇದನ್ನು ಓದುತ್ತ ವಿವರಿಸುತ್ತಿದ್ದಂತೆ ನನ್ನ ಕಣ್ಣುಗಳೂ ತುಂಬಿ ಬಂದಿದ್ದವು. ಹುಡುಗರೂ ಮಾತು ನಿಲ್ಲಿಸಿ ಅರೆಗಳಿಗೆ ಸ್ತಬ್ದರಾಗಿದ್ದರು. ಬಹುಶ: ಇಂಥದ್ದೇ ಒಂದು ನೋವಿನ ಅನುಭವ ಪ್ರೌಢಾವಸ್ಥೆಗೆ ಕಾಲಿಟ್ಟ ಎಲ್ಲ ಮಕ್ಕಳ ತಾಯಂದಿರಿಗೂ ಆಗುತ್ತದೇನೋ.
ಇಂಥದ್ದೇ ಗೊಂದಲವನ್ನು ಹೊತ್ತು ಗೆಳತಿಯೊಬ್ಬಳು ನನ್ನ ಬಳಿ ಬಂದಿದ್ದಳು. ಕೆಲವು ವರ್ಷಗಳ ಕಾಲ ಹೊರಗೆ ದುಡಿವ ಮಹಿಳೆಯಾಗಿದ್ದು, ಮಗುವಿನ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಸತತ ೧೨ ವರ್ಷಗಳ ಕಾಲ ಮನೆಯ ದೇಖರೇಖಿನಲ್ಲಿ ತನ್ನೆಲ್ಲ ತನ್ಮಯತೆಯನ್ನೂ ಸುರಿದುಬಿಟ್ಟಿದ್ದಳು. ಇದೀಗ ಬುದ್ಧಿ ಬಲಿಯುತ್ತಿರುವ ಹದಿನೈದರ ಪೋರ, ಹೈಸ್ಕೂಲಿನ ಮೆಟ್ಟಿಲೇರುತ್ತಿದ್ದಂತೆ ಸಂಪೂರ್ಣ ಬದಲಾಗಿದ್ದಾನೆ ಎಂಬ ಕಳಕಳಿ, ನೋವನ್ನು ಹೊತ್ತು ಬಂದಿದ್ದಳು. ಮನೆಯಲ್ಲಿ ಮಾತು ಕಡಿಮೆ, ತಾನಾಯಿತು, ತನ್ನ ಪುಸ್ತಕವಾಯಿತು. ಕಂಪ್ಯೂಟರಿನ ಮುಂದೆ ಕೂತರೆ ಪ್ರಪಂಚದಿಂದ ಅವನು ಮಾರು ದೂರ. ಬರುಬರುತ್ತ ಕಡಿಮೆಯಾಗುತ್ತಿರುವ ಮಾತಾಪಿತೃಗಳ ಮೇಲಿನ ಪ್ರೀತಿ, ಅತಿಯಾದ ಸಿಟ್ಟು, ಕುಂದಿದ ಆತ್ಮ ವಿಶ್ವಾಸ, ಮನೆಯ ಯಾವುದೇ ಆಗುಹೋಗುಗಳಿಗೆ ಸಂಬಂಧವಿಲ್ಲದಂತಿರುವಿಕೆ, ಒರಟು ಉತ್ತರ.. ಹೀಗೆ ಹೇಳುತ್ತ ಅವಳ ಕಣ್ಣಾಲಿಗಳು ತುಂಬಿ ಬಂದಿದ್ದವು. ಟೀನೇಜಿಗೆ ಬಂದ ಮಗ ಕೈ ಬಿಟ್ಟು ಹೋಗುತ್ತಿದ್ದಾನೆಂಬ ಆತಂಕಕ್ಕೆ ಒಳಗಾಗಿದ್ದಳು. ಅದು ಸೃಷ್ಟಿಸಿದ ನಿರ್ವಾತದಲ್ಲಿ ಸಿಕ್ಕಿ ಒಂಟಿತನ ಅನುಭವಿಸುತ್ತಿದ್ದಳು.
“ಪ್ರೀತಿಯಿಂದ ನನ್ನನ್ನು ಮಾತಾಡಿಸಿ ತಿಂಗಳುಗಳಾದವು..” ಎನ್ನುತ್ತ ಬಿಕ್ಕಿದ್ದಳು ಕೂಡ.
“ಅವನ ಒರಟು ಉತ್ತರಗಳು ಹೆತ್ತ ಹೊಟ್ಟೆಗೆ ಚೂರಿಯಿಂದ ಇರಿವಂತಿರುತ್ತವೆ.”
“ ಈ ವೈಮನಸ್ಯಕ್ಕಾಗಿಯೇ ಅನಿವಾರ್ಯವಾಗಿ ಅವನೊಂದಿಗೆ ಮಾತು ಕಡಿಮೆ ಮಾಡಿದ್ದೇನೆ. ಪ್ರಾರ್ಥಿಸದ ದೇವರಿಲ್ಲ, ಮಾಡದ ಹರಕೆಗಳಿಲ್ಲ. ಮಗುವಿಗೆ ಯಾರೋ ಏನೋ ಮಾಡಿಸಿದ್ದಾರೆ. ಜ್ಯೋತಿಷಿಗಳ ಹತ್ತಿರವೂ ಹೋಗಿ ಬಂದೆ. ಯಾವುದೂ ಕೆಲಸಕ್ಕೆ ಬರುತ್ತಿಲ್ಲ.” ಎನ್ನುತ್ತ ಸಾವರಿಸಿಕೊಳ್ಳಲು ಮೌನವಾಗಿಬಿಟ್ಟಳು.
“ಒಮ್ಮೆ ನಿನ್ನ ಬಳಿ ಕರೆತರುತ್ತೇನೆ. ಮಾತಾಡಿಸ್ತೀಯಾ ಅವನನ್ನು?”-ಅವಳ ಕಣ್ಣುಗಳಲ್ಲಿ ಅಸಹಾಯಕತೆಯಿತ್ತು. ನಾನು ಶರತ್ತಿನ ಮೇರೆಗೆ ಒಪ್ಪಿದೆ. ಬಲವಂತ ಮಾಡಕೂಡದೆಂದೂ, ಅವನು ಸ್ವಯಂಪ್ರೇರಿತನಾಗಿ ನನ್ನ ಬಳಿ ಬರುವುದನ್ನು ಪ್ರೋತ್ಸಾಹಿಸಬೇಕೆಂದೂ ಹೇಳಿದೆ.

ಆ ವಯಸ್ಸೇ ಹಾಗೆ. ಹೊಸದಾಗಿ ಅರಿವಾಗುತ್ತಿರುವ ಅಸ್ತಿತ್ವ, ಬೆಳೆಯುತ್ತಿರುವ ಮೈ ಮನಗಳು, ತನ್ನತನದ ಅರಿವು, ಅಹಂ, ಇಮೇಜಿನ ಪ್ರಜ್ಞೆ, ಸಂಬಂಧಗಳ ಬಗ್ಗೆ ಕುತೂಹಲ, ವಿಸ್ತಾರವಾಗುತ್ತಿರುವ ಜ್ಞಾನ, ಎದುರಲ್ಲಿಟ್ಟುಕೊಂಡ ಆದರ್ಶಗಳು, ರೋಲ್ ಮಾಡೆಲ್ಲುಗಳು..ಎಷ್ಟೋ ಮಕ್ಕಳು ಮಾತು ನಿಲ್ಲಿಸಿ ಸ್ವಗತದೊಳಗೆ ಜಾರಿಬಿಡುತ್ತಾರೆ. ಹೆಚ್ಚು ಹೆಚ್ಚು ಮೌನಿಗಳಾಗುತ್ತಾರೆ. ತಂದೆ ತಾಯಿಗಳಿಗಿಂತ ಗೆಳೆಯರ ಸಾಂಗತ್ಯ ಹಿತವೆನಿಸುತ್ತದೆ. ಪೋಷಕರ ಆಜ್ಞೆ, ಅಭಿಪ್ರಾಯಗಳು ತಮ್ಮಅನಿಸಿಕೆಗಳೊಂದಿಗೆ ತಾಕಲಾಡಿ ಎಲ್ಲ ನಿರ್ಬಂಧಗಳನ್ನು ಮೀರಿದ ಬಂಡಾಯವೊಂದನ್ನು ಹೊರಹಾಕಿಬಿಡುತ್ತಾರೆ. ಪೋಷಕರಿಗೆ ತಮ್ಮ ಮಗುವಿನಲ್ಲಾದ ಧಿಢೀರ್ ಬದಲಾವಣೆ ಕಂಗೆಡಿಸುತ್ತದೆ. ತಮ್ಮ ಮಗು ಹೀಗಿರಲಿಲ್ಲವೆಂದೂ, ಇದ್ದಕ್ಕಿದ್ದ ಹಾಗೆ ಈ ರೀತಿ ವರ್ತಿಸುತ್ತಿದ್ದಾನೆಂದೂ ನೊಂದು ನುಡಿವ ಪೋಷಕರನ್ನು ಕಂಡಾಗಲೆಲ್ಲ ನನ್ನ ಮನಸ್ಸಿನಲ್ಲಿ ಒಂದು ಪ್ರೀತಿಯ ಎಳೆ ಹಾದು ಹೋಗುತ್ತದೆ. ತಮ್ಮ ಪೋಷಕರು ತಮ್ಮನ್ನು ಅರ್ಥೈಸಿಕೊಳ್ಳಲಾರರು, ಈ ಕಾರಣಕ್ಕೇ ನಾನು ಮೌನಕ್ಕೆ ಶರಣು ಹೋಗುತ್ತೇನೆ..ಎನ್ನುವ ಮಕ್ಕಳನ್ನು ನೋಡಿದಾಗಲೆಲ್ಲ ಪ್ರೌಢಾವಸ್ಥೆಯ ಮನಸ್ಸು ಸೃಷ್ಟಿಸುವ ಕಂದಕ ಕಣ್ಣ ಮುಂದೆ ಕಾಣುತ್ತದೆ
ಕೆಲವು ದಿನಗಳ ಮೌನದ ನಂತರ ಒಂದು ಸಂಜೆ ಅವನು ಬಂದ- ಹಿಡಿ ಮೈ ಮಾಡಿಕೊಂಡು ನನ್ನೆದುರು ಕೂತ. ತುಂಬ ಸಂಕೋಚ, ಮುಜುಗರ, ಪರೀಕ್ಷೆಗೊಡ್ಡಿಕೊಳ್ಳುತ್ತಿರುವಂಥ ಭಾವ, ಕಣ್ಣ ತುಂಬಾ ಅನುಮಾನಗಳು. ಉಹು.. ಮಾತಾಡಲು ತಯಾರಿರಲಿಲ್ಲದ ಅವನು ಗರಿಯಂತೆ ಸೂಕ್ಷ್ಮವಾಗಿ ಕಂಡ. ಕೊಂಚ ಹೊತ್ತು ಖಾಲಿ ಮತ್ತು ಪ್ರಯಾಸದ ಮಾತುಕತೆಯಾದ ಮೇಲೆ, ಮೆಲ್ಲನೆ ಅವನ ಇಷ್ಟಾನಿಷ್ಟಗಳನ್ನೆಲ್ಲ ಒಂದೊಂದಾಗಿ ಹಂಚಿಕೊಳ್ಳತೊಡಗಿದ. ಅವನ ಫೇವರಿಟ್ ಟೀಚರ್, ಗೆಳೆಯರು, ಚಲನಚಿತ್ರ, ಕಾರು, ಬಣ್ಣ, ಪುಸ್ತಕ, ಕನಸುಗಳು… ಹೀಗೆ ಸಾಗಿತ್ತು. ಇದ್ದಕ್ಕಿದ್ದ ಹಾಗೆ, “ಐ ಫೀಲ್ ವೆರಿ ಲೋನ್ಲಿ” ಅನ್ನುತ್ತ ಅಂತರ್ಮುಖಿಯಾಗಿಬಿಟ್ಟ.
“ನನಗೆ ಗೊತ್ತು ಅಮ್ಮನಿಗೆ ಬೇಜಾರಾಗಿದೆ ನನ್ನಿಂದ. ಆದರೆ ಅಮ್ಮನಿಗೆ ನಾನು ಹೇಳಿದ್ದು ಅರ್ಥವಾಗೋದಿಲ್ಲ. ಅವಳದ್ದು ಒಂದೇ ಹಠ. ಡಿಸಿಪ್ಲಿನ್..”
“ಏನಾದ್ರೂ ಮಾತಾಡಿದ್ರೆ ಸರಿಯಾದ ರೀತಿಯಲ್ಲಿ ಅರ್ಥ ಮಾಡ್ಕೊಳ್ಳೋದಿಲ್ಲ. ಬೇಗ ಅತ್ತುಬಿಡ್ತಾಳೆ. ಅದಕ್ಕೆ ನಾನು ಏನೂ ಹೇಳೋಕೆ ಹೋಗೊಲ್ಲ.”
“ಯಾವಾಗ ನೋಡಿದ್ರೂ ನನಗೂ ನನ್ನ ಕಸಿನ್ ಗೂ ಹೋಲಿಸ್ತಿರ್ತಾಳೆ. ಮ್ಯಾಥ್ಸ್ ನನಗೆ ಕಷ್ಟ. ನನಗೆ ಎಷ್ಟು ಮಾರ್ಕ್ ತೆಗೆದ್ರೂ ಸಾಲದು ಅನ್ನಿಸತ್ತೆ.”
“ನನ್ನ ಗೆಳೆಯರೆಲ್ಲರ ನಂಬರ್ ಅಮ್ಮನ ಬಳಿಯಿದೆ. ಬರೋದು ಎರಡು ನಿಮಿಷ ತಡ ಆದ್ರೆ ಹುಡುಕಿಕೊಂಡು ಬರ್ತಾಳೆ. ಎಲ್ರೂ ನನ್ನನ್ನ ಮಮ್ಮಾಸ್ ಬಾಯ್ ಅಂತ ಹಾಸ್ಯ ಮಾಡ್ತಾರೆ. ಅವಮಾನ ಆಗತ್ತೆ ನನಗೆ.”
“ನಾನು ರೂಡ್ ಅಂದ್ಕೊಂಡಿದಾಳೆ ಅವಳು. ನಾನು ರೂಡ್ ಅಲ್ಲ, ಅಸರ್ಟಿವ್ ಅಷ್ಟೇ. ಇಲ್ಲದಿದ್ದರೆ ಅವಳು ಕೇಳೊಲ್ಲ. ಆದ್ರೆ ಅವಳು ದು:ಖ ಪಟ್ಟರೆ ನನಗೂ ದು:ಖ ಆಗತ್ತೆ. ಈ ಕೇರ್ ಫಾರ್ ಹರ್.”
ಇಲ್ಲಿ ಪ್ರತ್ಯೇಕ ಎರಡು ವೃತ್ತಗಳಿದ್ದವು. ಒಂದು, ಮಗುವಿನ ಸ್ವಾವಲಂಬಿಯಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಅಭದ್ರತೆಯಿಂದ, ಖಾಲಿತನದಿಂದ ಕುಗ್ಗಿ ಭಾವನಾತ್ಮಕ ಒತ್ತಡಕ್ಕೆ ಸಿಲುಕಿದ ಅಮ್ಮ, ಬೆಳವಣಿಗೆಯ ಹಂತ ಹಂತದಲ್ಲೂ ಸಮರ್ಥನೆ ಕೊಡುತ್ತ, ಜವಾಬ್ದಾರಿಯನ್ನು ಪ್ರತಿ ಬಾರಿಯೂ ಒತ್ತಿ ಒತ್ತಿ ಹೇಳುತ್ತ ರೋಸಿ ಹೋಗಿ ಮೌನಿಯಾದ ಮಗು. ಈ ಎರಡರ ಮಧ್ಯೆ ಒಂದು ಸೇತುವೆ ಹುಟ್ಟಬೇಕಿತ್ತು. ಇಬ್ಬರಿಗೂ ಈ ಸಂದರ್ಭ, ಅನುಭವಗಳು ಹೊಸದು. ಇಬ್ಬರೂ ವೃತ್ತದಿಂದ ಹೊರಬಂದು ನೋಡಬೇಕಿತ್ತು. ಇಲ್ಲಿ ತಪ್ಪು, ಸರಿ ಎನ್ನುವುದಕ್ಕಿಂತ ಇಬ್ಬರ ಪರಿಸ್ಥಿತಿಗಳೂ ಅರ್ಥೈಸಿಕೊಳ್ಳಬೇಕಾದವು. ಅನುಕಂಪಯೋಗ್ಯವಾದವು.
ಕೆಲವು ವಿಚಾರಗಳನ್ನು ತಾಯಿಯೊಂದಿಗೆ ಚರ್ಚೆ ಮಾಡಿದ ಮೇಲೆ ಒಂದು ಸುದೀರ್ಘ ವಿರಾಮದ ನಂತರ ಒಂದು ದಿನ ಪಾರ್ಕಿನಲ್ಲಿ ಅವಳ ಭೇಟಿಯಾಯಿತು. ಸ್ವಲ್ಪ ಗೆಲುವಾಗಿದ್ದಂತೆ ಕಂಡಳು. ಹಲವು ಹವ್ಯಾಸಗಳನ್ನು ಹಚ್ಚಿಕೊಂಡಿದ್ದೇನೆಂದು ತಿಳಿಸಿದಳು. ಅರ್ಧ ದಿನದವರೆಗೆ ಮಾಂಟೆಸರಿ ಕೋರ್ಸಿಗೆ ಸೇರಿಕೊಂಡಿದ್ದೇನೆಂದೂ, ಕೋರ್ಸ್ ಮುಗಿದ ನಂತರ ಕೆಲಸಕ್ಕೆ ಸೇರುತ್ತೇನೆಂದಳು. ಇತ್ತೀಚೆಗೆ ಮಗನದ್ದೇನೂ ಕಿರಿಕಿರಿಯಿಲ್ಲವೆಂದಳು. ಸರಿಯಾಗಿ ಮಾತನಾಡಿಸುತ್ತಿದ್ದಾನೆಂದು ಹೇಳಿದಳು. “ಜಗಳಗಳು ಯಾರ ಮನೆಯಲ್ಲಿ ಇಲ್ಲ? ನನ್ನ ಮಗ ಕೆಟ್ಟ ದಾರಿ ಹಿಡಿದಿಲ್ಲ. ಸರಿಯಾಗಿಯೇ ಬೆಳೆಸಿದ್ದೇನೆ”-ಎಂದೆಲ್ಲ ಹೇಳಿದಳು. ನನ್ನ ಕೈ ಹಿಡಿದು ಸಂತೃಪ್ತಿಯ ನಗೆ ನಕ್ಕಳು. ಆ ದಿನಕ್ಕಾಗಿ ಧನ್ಯವಾದವನ್ನೂ ಹೇಳಿದಳು. “ಈಗಂತೂ ಖಾಲಿ-ಪೀಲಿ ಯೋಚನೆಗಳಿಗೆಲ್ಲ ಸಮಯವೇ ಇಲ್ಲ. ಹೊತ್ತು ಮುಳುಗುತ್ತಿದೆ, ಬರಲೇ?” ಎನ್ನುತ್ತ ತನ್ನ ಸ್ಕೂಟರನ್ನೇರಿ, ಕೈ ಬೀಸಿ ರಸ್ತೆಯಂಚಿನಲ್ಲಿ ಮರೆಯಾದಳು.
ಶೈಶವ ಮತ್ತು ಬಾಲ್ಯಾವಸ್ಥೆಗಳಂತೆ, ಪ್ರೌಢಾವಸ್ಥೆಯೂ ಪ್ರತಿ ಮಗು ಮತ್ತು ಪೋಷಕರ ಬದುಕಿನ ಒಂದು ಹಂತ. ಅದನ್ನು ಸರಿಯಾಗಿ ನಿಭಾಯಿಸಲು ಬಹು ಪಾಲು ಜನ ಸಿದ್ಧರಿರುವುದಿಲ್ಲ. ಇದೊಂದು ಭಾವನಾತ್ಮಕ ಮತ್ತು ಮಾನಸಿಕ ಬೆಳವಣಿಗೆಯ ಘಟ್ಟ. ಕೆಲವೊಮ್ಮೆ ಅನುಸರಿಸುವ ಪ್ರಯೋಗಗಳು ಒಬ್ಬರ ಮೇಲೊಬ್ಬರು ಯುದ್ಧ ಸಾರುವಂತಿರುವ ಅನಿವಾರ್ಯತೆಯನ್ನೂ ಹುಟ್ಟು ಹಾಕಿಬಿಡುತ್ತವೆ. ಮಗುವು ಕೆಲವೊಂದು ರೀತಿಯಲ್ಲಿ ಮಗುವಾಗಿಯೇ ಉಳಿಯಬೇಕೆಂದು ಪೋಷಕರು ಬಯಸಿದರೆ, ಬೆಳೆಯುವ ಮಕ್ಕಳಿಗೆ ತಂದೆ ತಾಯಿ ತಿಳಿಸಿಕೊಟ್ಟ ಆದರ್ಶಗಳಲ್ಲಿಯೇ ವೈರುಧ್ಯಗಳೆದ್ದು ತೋರುತ್ತವೆ. ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸಬಯಸುತ್ತಾರೆ. ದ್ವಂದ್ವಗಳಲ್ಲಿ ಸಿಕ್ಕಿ, ಪ್ರತಿಭಟನೆಗಿಳಿಯುತ್ತಾರೆ.
ಇಲ್ಲಿರುವ ಅವಶ್ಯಕತೆ ಇಷ್ಟೇ. ಪೋಷಕರು ತಮ್ಮ ಅಂತರ್ಧ್ವನಿಯನ್ನೂ ಆಲಿಸಬೇಕು. ಮಕ್ಕಳ ಧ್ವನಿಗೂ ಕಿವಿಯಾಗಬೇಕು. ಸ್ವಲ್ಪ ಸಹಿಷ್ಣುತೆ, ಕೆಲವು ಮೃದು ನುಡಿಗಳು, ಅತಿಯಾದ ಕಟ್ಟುನಿಟ್ಟು ಮಾಡದಿರುವಿಕೆ- ಇದರ ಸಮತೋಲನವನ್ನು ಅವರೇ ಕಂಡುಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ಬದುಕಿನ ಎಲ್ಲ ಹಂತಗಳಂತೆ ಇದೂ ಒಂದು. ಇದೂ ಬದಲಾಗುವುದೆಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ನಿಧಾನವಾಗಿ ಹೊಕ್ಕುಳ ಬಳ್ಳಿಯನ್ನು ಸೆಳೆದುಕೊಂಡು, ಕೈ ಬಿಡಿಸಿ ಸ್ವತಂತ್ರವಾಗಿ ಹೆಜ್ಜೆ ಹಾಕುವುದಕ್ಕೆ ಮಕ್ಕಳಿಗೆ ಅನುವು ಮಾಡಿಕೊಡಬೇಕು. ಟೀನೇಜ್ ಅಥವಾ ಪ್ರೌಢಾವಸ್ಥೆಯನ್ನು ಕುರಿತು ಯೋಚಿಸುವಾಗಲೆಲ್ಲ, ಮಾತಾಡುವಾಗಲೆಲ್ಲ ಖಲೀಲ್ ಗಿಬ್ರಾನ್ ನ ಈ ಕವಿತೆ ಪದೇ ಪದೇ ಜ್ಞಾಪಕಕ್ಕೆ ಬರುತ್ತದೆ.
ನಿಮ್ಮ ಮಕ್ಕಳು
ನಿಮ್ಮ ಸ್ವತ್ತಲ್ಲ
ತನ್ನನ್ನೇ ತಾನು
ಅದಮ್ಯವಾಗಿ ಪ್ರೀತಿಸುವ
ಬದುಕಿನ ಕುಡಿಗಳವು
ನಿಮ್ಮ ಮೂಲಕ ಬರುತ್ತಾರಷ್ಟೆ, ನಿಮ್ಮಿಂದಲ್ಲ
ನಿಮ್ಮೊಡನಿದ್ದರೂ
ನಿಮಗೆ ಸೇರಿದವರಲ್ಲ
ನಿಮ್ಮ ಪ್ರೀತಿಯನ್ನಷ್ಟೇ ಕೊಡಬಲ್ಲಿರಿ
ನಿಮ್ಮ ಆಲೋಚನೆಗಳನ್ನಲ್ಲ
ಅವರವೇ ಆಲೋಚನೆಗಳಿವೆ ಅವರಿಗೆ
ನೀವವರ ದೇಹಗಳ ಬಂಧಿಸಬಲ್ಲಿರಿ
ಅವರ ಆತ್ಮಗಳನ್ನಲ್ಲ
ಏಕೆಂದರೆ,
ಅವರು ನಿಮ್ಮ ಕನಸಿಗೆ ನಿಲುಕದ
ನಾಳೆಗಳಲ್ಲಿ ಬದುಕುತ್ತಾರೆ
ನೀವು ಅವರಂತೆ ಬದುಕಲು
ಪ್ರಯತ್ನಿಸಬಹುದು,
ನಿಮ್ಮಂತೆ ಅವರನ್ನು ಬದಲಾಯಿಸಲಲ್ಲ
ಏಕೆಂದರೆ,
ಬದುಕು ಹಿಂದೋಡುವುದಿಲ್ಲ
ನೆನ್ನೆಗಳಲ್ಲಿ ನಿಲ್ಲುವುದೂ ಇಲ್ಲ
ನೀವು, ನಿಮ್ಮ ಮಕ್ಕಳೆಂಬ ಜೀವಂತ ಬಾಣಗಳ
ತೂರಿ ಬಿಡಲು ಬಳಸಿದ ಬಿಲ್ಲುಗಳು
ಅನಂತದ ಪಥದಲ್ಲಿ ಕಂಡ ಗುರುತುಗಳು
ತನ್ನ ಬಾಣಗಳು ವೇಗವಾಗಿ,
ದೂರ ಪಯಣಿಸಲೆಂದು
ಅವನು ನಿಮ್ಮನ್ನು ಬಗ್ಗಿಸುತ್ತಾನೆ
ತನ್ನ ಶಕ್ರಿಯಿಂದ..
ಬಿಲ್ಲುಗಾರನ ಕೈಯಲ್ಲಿ ಬಾಗಿ ಸಂತಸಪಡಿ
ಏಕೆಂದರೆ
ಅವನು ಧೃಢವಾದ ಬಿಲ್ಲನ್ನೂ ಪ್ರೀತಿಸುತ್ತಾನೆ
ತಾನು ಬಿಡುವ ಬಾಣಗಳನ್ನಷ್ಟೇ ಅಲ್ಲ!
 

‍ಲೇಖಕರು G

19 May, 2015

4 Comments

  1. Jayashree Deshpande

    ಅರ್ಥಭರಿತವಾದ ಲೇಖನ,ಮನೋಜ್ನವಾಗಿ ವಿವರಿಸಿದ್ದೀರಿ.ಮಕ್ಕಳ ಮಾನಸಿಕ ಬೆಳವಣಿಗೆಯ ಸ್ತರಗಳ ಸುಂದರ ನಿರೂಪಣೆ ಬಹಳ ಇಷ್ಟವಾಯಿತು.ಅಭಿನಂದನೆಗಳು ವಿದ್ಯಾ ಅವರೆ.

  2. Anil Talikoti

    ತುಂಬಾ ಒಳ್ಳೆಯ, ಉಪಯುಕ್ತ ಲೇಖನ -ಖಲೀಲ್ ಗಿಬ್ರಾನ್ ನ ಈ ಕವಿತೆ ನನ್ನ ನೆಚ್ಚಿನ ಕವಿತೆಗಳಲ್ಲೊಂದು
    ~ಅನಿಲ

  3. ಅಕ್ಕಿಮಂಗಲ ಮಂಜುನಾಥ

    ಲೇಖನ ಚೆನ್ನಾಗಿದೆ.

  4. padmapani

    ತುಂಬ ಅಗತ್ಯದ ಲೇಖನ ಇದು. ಹೃತ್ಪೂರ್ವಕ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading