
ಎಸ್ ಸಾಯಿಲಕ್ಷ್ಮಿ
ನಾನಾಗ ಟೆಲಿಪೋನ್ ಎಕ್ಸ್ಚೇಂಜ್ ನಲ್ಲಿ ಕೆಲಸದಲ್ಲಿದ್ದೆ. ಸಾಮಾನ್ಯವಾಗಿ Morning Shift Duty. ಮಧ್ಯಾಹ್ನ ಊಟದ ಹೊತ್ತಿಗೆ ಮನೆಗೆ ಮರಳುತ್ತಿದ್ದೆ. ನಮ್ಮ ಡ್ಯೂಟಿ ಮುಗಿಯುತ್ತಿದ್ದಂತೆ ಮಧ್ಯಾಹ್ನದ ಶಿಫ್ಟ್ ಆರಂಭ. ಹಾಗೆಯ ಅದು ಕೊನೆಯಾಗುವ ಹೊತ್ತಿಗೆ ರಾತ್ರಿಯ ಪಾಳಿ ಶುರು. ದಿನದ ಇಪ್ಪತ್ನಾಕು ಗಂಟೆಯು ಕೆಲಸ ಮಾಡುವ ತುರ್ತು ಸೇವೆ ನಮ್ಮದು. ಬರೀ ಹೆಣ್ಣುಮಕ್ಕಳ ರಾಜ್ಯ.
ನಾನೆಂದು ಡ್ಯೂಟಿಯಿಂದ ಸೀದಾ ಮನೆಗೆ ಬಂದವಳಲ್ಲ. ಅಲ್ಲಿ ನನಗೆ ಲೋಕಕಲ್ಯಾಣದ ಕಾರ್ಯಕ್ರಮಗಳಿರುತ್ತಿದ್ದವಲ್ಲ. ಅಲ್ಲಿ ಅನೇಕ ಗೆಳತಿಯರು ಹಾಲೂಡಿಸುವ ತಾಯಿಯರು. ಅವರಿಗೆ ನೈಟ್ ಡ್ಯೂಟಿ ಆಗದು. ವಿಶೇಷ ರಿಯಾಯ್ತಿ ಸೌಲಭ್ಯವಿರುತ್ತಿರಲಿಲ್ಲ. ಹೆಚ್ಚುಕಮ್ಮಿ ಈ ಎಲ್ಲರಿಗೂ ಇತರ ಸಹೋದ್ಯೋಗಿಗಳೊಡನೆ ಡೇ ಶಿಫ್ಟ್ ಗೆ ಬದಲಾಯಿಸಿ ಅವರವರ ಗಂಡಂದಿರಿಗೋ ಅಕ್ಕಪಕ್ಕದ ಮನೆಯ ಪೋನಿಗೋ ಡ್ಯೂಟಿ ಚೇಂಜ್ ತಿಳಿಸಿ ಬರುವ ಪರಿಪಾಠ. ಇದು ನಿತ್ಯನಿತ್ಯ ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಕೆಲಸ. ನನ್ನಂತೆ ಇನ್ನು ಕೆಲವರು ಈ ಲೋಕೋಪಕಾರಿ ಕೆಲಸಕ್ಕಾಗಿ ಗುರುತಿಸಿಕೊಂಡು ಜನಪ್ರಿಯರಾದವರು. ಈಗ ನೆನಪಾಗುವವರು ಗಿರಿಜಾ, ಲಲಿತ ಗುರುಪ್ರಸಾದ, ವೀಣಾ, ಜಾನಕಿ ಮುಂತಾದವರು. ಮಿತ್ರೆಯರು ಅತಿ ಡಿಮ್ಯಾಂಡ್ ಇರುವ ವಾರದ ಮಾರ್ನಿಂಗ್ ಡ್ಯೂಟಿ ನಮ್ಮಲ್ಲಿ ಒತ್ತೆಯಿಟ್ಟು ನೈಟ್ ಡ್ಯೂಟಿಯಿಂದ ಮುಕ್ತರಾಗುತ್ತಿದ್ದರು. ನನಗೆ ಆಗಿನ್ನು ಮದುವೆಯಾಗಿರಲಿಲ್ಲ. ಅವರಿಗೆಲ್ಲ ಸಹಾಯ ಮಾಡುವುದೆಂದರೆ ಏನೋ ಖುಷಿ. ಒಟ್ಟು ನಮ್ಮ ಮಾತು ನಡೆಯುತ್ತಿತ್ತು.
ಮನೆಯಲ್ಲಿ ಅಮ್ಮ ಊಟ ಮಾಡದೆ ನನ್ನ ಬರುವಿಗಾಗಿ ಕಾಯುವರು. ಅ ಅರಿವಿದ್ದರೂ ಈ ಗೆಳತಿಯರ ಡ್ಯೂಟಿ ಸಿಕ್ಕುಗಳನ್ನು ಬಿಡಿಸುವ ಕಾಯಕದಿಂದ ಮನೆಮುಟ್ಟುವುದು ತಡವಾಗುತ್ತಿತ್ತು.

ಅಮ್ಮನ ಅಮ್ಮನೂ ನಮ್ಮೊಡನಿದ್ದರು. ಅಮ್ಮ ಹಿಂದಿ ಸಾಹಿತ್ಯರತ್ನ ಪದವಿ ಗಳಿಸಿ ಆ ಸಾಹಿತ್ಯದಲ್ಲಿ ಆಳ ಅಧ್ಯಯನ ನಡೆಸಿದ್ದರು. ತುಳಸಿ ರಾಮಾಯಣ ಅವರ ಅತಿ ಪ್ರೀತಿಯ ವಿಷಯ. ಇದ್ದಿಲು ಒಲೆಯ ಮೇಲೆ ರುಚಿಕಟ್ಟಾದ ಅಡುಗೆ ಸಿದ್ದಪಡಿಸಿರುವರು. ದಿನವಿಡೀ ಅದರ ಬಿಸಿ ಉಳಿದು ಆ ಸಾರು, ಹುಳಿಯ ಪರಿಮಳ ಮನೆಯಾಚೆಗೂ ಹೊಮ್ಮುವುದು. ಪೂಜೆ ಮುಗಿಸಿ ಕೈದೋಟದ ಮಾವಿನ ಮರದಡಿ ಕೂತು ಅಮ್ಮ ಅಜ್ಜಿಗೆ ತುಳಸಿ ರಾಮಾಯಣದಲ್ಲಿನ ಸ್ವಾರಸ್ಯಕರ ಸನ್ನಿವೇಶಗಳನ್ನು ವಿವರಿಸುವರು. ಈ ಮಗಳ ಪಾಂಡಿತ್ಯಕ್ಕೆ ಆ ಅಮ್ಮ ತಲೆದೂಗುತ್ತ ಕಿವಿಯಾಗುವರು. ಇದು ನಿತ್ಯಕ್ರಮ. ಈ ಹೊತ್ತಿಗೆ ನನ್ನಪ್ಪ ಸೈಕಲ್ ಏರಿ ಬೆರಣಿ,ಇದ್ದಿಲು, ಸೀಮೆಣ್ಣೆ ಹೊಂಚಲೋ ಇಲ್ಲ ಲೈಬ್ರರಿಗೋ, ಸಾಮಾನು ಸರಂಜಾಮು ಹೊಂದಿಸಲೋ ಹೊರಟಿರುವರು. ಪರ್ಣಕುಟೀರದಂತೆ ಭಾಸವಾಗುತ್ತಿದ್ದ ಮಾವು, ಹಲಸು, ತೆಂಗು, ಮಲ್ಲಿಗೆ,ಜಾಜಿ, ಸೀಬೆ, ದಾಳಿಂಬೆಯ ಸಮೃದ್ಧ ಸಸ್ಯಕಾಶಿಯ ವಾತಾವರಣ. ನಂತರ ಅಮ್ಮ ಅಜ್ಜಿಗೆ ವಿಧವಿಧ ವ್ಯಂಜನಗಳುಳ್ಳ ಊಟ ಪ್ರೀತಿಯಿಂದ ಉಪಚರಿಸಿ ಬಡಿಸುವ ರೂಢಿ. ಅಮ್ಮನೇ ಜೇಷ್ಠಪುತ್ರಿ. ತಾನು ಗಳಿಸಿದ ಹಿಂದಿ ಭಾಷಾವಿದ್ಯೆಯಿಂದ ಬೋಧನೆ ಹಾಗು ಉತ್ಯರಪತ್ರಿಕೆಗಳ ಮೌಲ್ಯಮಾಪನದ ದುಡಿಮೆಯಿಂದ ತಂದೆಯಿಲ್ಲದ ತುಂಬಿದ ತವರಿಗೆ ದಿಕ್ಕಾದವರು ಅಮ್ಮ. ಹೀಗೆ ಈ ಹಿರಿಯಕ್ಕನ ಮನೆಯಲ್ಲಿ ಸದಾ ಒಡಹುಟ್ಟಿದವರ ಕಲರವ ಒಂದಲ್ಲ ಒಂದು ಕಾರಣಕ್ಕೆ.ಹಾಗೆಯೇ ಅಪ್ಪನ ಕಡೆಯವರಿಗೂ ಸ್ವಾಗತವಿತ್ತು.
ಅಜ್ಜಿಯ ಊಟ ಮುಗಿವಾಗ ಅಪ್ಪ ಹಿಂತಿರುಗುವ ಸಮಯ. ಅವರಿಗೂ ಬಡಿಸಿ ಅಮ್ಮ ನನಗಾಗಿ ಕಾಯುವರು. ನಾನೋ ನನ್ನ ಡ್ಯೂಟಿ ಎಕ್ಸ್ಚೇಂಜ್ ವ್ಯವಹಾರ ಸಮರ್ಪಕವಾಗಿ ಮುಗಿಸಿಯೇ ಮನೆದಾರಿ ಹಿಡಿಯುವುದು. ತಡವಾಗುವುದು ಸಾಮಾನ್ಯ ಸಂಗತಿ.

ಒಂದು ದಿನ ವಿಪರೀತ ವಿಳಂಬವಾಗಿ ನಾನು ಮನೆ ತಲುಪವಾಗ ನಾಲ್ಕು ಗಂಟೆ ಸಮೀಪಿಸಿತ್ತು. ಈಗಿನಂತೆ ಆಗ ಎಲ್ಲರ ಮನೆಗಳಲ್ಲಿ ದೂರವಾಣಿ ಸಂಪರ್ಕ ಲಭ್ಯವಿಲ್ಲದ ಕಾಲ. ಅಮ್ಮ ನನಗಾಗಿ ಕಾದು ಕಾದು ಊಟ ಮಾಡಿ ಮತ್ತೊಮ್ಮೆ ಅನ್ನಕ್ಕಿಟ್ಟಿದ್ದರು. ನನಗೆ ನೆನಪಿರುವಂತೆ ಬೆಂಡೇಕಾಯಿ ಪ್ರಧಾನವಾಗಿದ್ದ ಶ್ರೀಮದ್ ಬೇಳೆಹುಳಿ. ಅದರಲ್ಲಿ ತೇಲುವ ಒಗ್ಗರಣೆಯಲ್ಲಿ ಸೀಳಿಹಾಕಿದ ಗಮ ಹಾಗು ರುಚಿವರ್ಧಕ ಹಸಿಮೆಣಸಿನಕಾಯಿ. ಅಮ್ಮನ ಹುಳಿಯ ರುಚಿಗೆ ಮರುಳಾಗದವರಾರು? ನಾನು ಬಂದೇನೇ ಎಂದು ನೋಡಲು ಗೇಟಿನ ಬಳಿ ಅಪ್ಪನನ್ನು ನೇಮಿಸಿದ್ದ ಅಮ್ಮ ಬಾಗಿಲ ಮುಂದೆ ತಾನು ನಿರೀಕ್ಷೆಯ ಕಣ್ಣುಗಳನ್ನು ಹಾಯಿಸಿದ್ದರು.
ಎದುರುಗೊಂಡ ಅಮ್ಮ ಮುಖ ಚಿಕ್ಕದಾಗಿಸಿಕೊಂಡು ಹೇಳಿದರು
‘ಛೇ ಎಂತಾ ಕೆಲಸ ಮಾಡಿಬಿಟ್ಟೆ. ದುಡಿದು ದಣಿದು ಬರೋ ನಿನ್ನ ಬಿಟ್ಟು ಊಟ ಮಾಡಿಬಿಟ್ಟೆ.’
‘ಏನಾಯ್ತೂಂತ? ಒಳ್ಳೇ ಕೆಲಸ ಮಾಡಿದೆ. ಇನ್ನ ಮೇಲೆ ಕಾಯಬೇಡ. ಅಪ್ಪ ನೋಡಿದರೆ ಗೇಟ್ ಹತ್ರ, ನೀನು ಬಾಗಿಲ ಮುಂದೆ ನಿಂತು ಕಾಯ್ತೀರಿ. ನನ್ನ ಮನಸ್ಸಿಗೆ ತುಂಬಾ ಕಷ್ಟ ಆಗತ್ತೆ.’
ಆಗ ಅಮ್ಮ ಆಡಿದ ಮಾತು ಇಂದಿಗೂ ನೆನಪಿನ ಖಜಾನೆಯಲ್ಲಿ ಜೀವಂತವಾಗಿದೆ. ಅಂದು ಅವರೆಂದರು.
‘ನೀವು ಅಪ್ಪ ಅಮ್ಮ ಆದಾಗಲೇ ನಿಮಗೆ ನಿಮ್ಮಪ್ಪ ಅಮ್ಮನ ಆತಂಕ, ಬೆಲೆ ಅರ್ಥ ಆಗೋದು. ನಾಳೆ ನಿನಗೆ ಮಗು ಆದಾಗ ನಾನು ಮಧ್ಯಾಹ್ನ ನೆತ್ತಿ ಮೇಲೆ ಸೂರ್ಯ ಬಂದಾಗ ಆ ಮಗೂನ ಬಿಸಿಲಲ್ಲಿ ಮಲಗಿಸಿ ಬರತೀನಿ. ನೀನು ಯಾಕೇಂತ ಕೇಳಬಾರದು?’
ಅವರ ಮಗಳಾದ ನನ್ನನ್ನು ಹಾಗು ನನಗೆ ಮುಂದೊಂದು ದಿನ ಆಗಬಹುದಾದ ಮಗುವನ್ನು ಎಷ್ಟು ಅರ್ಥಗರ್ಭಿತವಾಗಿ ತಾಯ್ತನದ ನವಿರು ಭಾವಕ್ಕೆ ಸಮೀಕರಿಸಿದ್ದರು.
ಪೋಟೋ ಸೌಜನ್ಯ: ವೆಂಕಟೇಶ ಸತ್ಯನಾರಾಯಣ






0 Comments