"ಅಮ್ಮಾ, ಸಂತಾ ಗಿಫ್ಟ್ ತಂದಿಟ್ಟಿದ್ದಾನೆ!"

‘ನಾನು ಜಿ ಎನ್ ಮೋಹನ್.. ನಾನು ಸಂತಾಕ್ಲಾಸ್’, ಜಿ ಎನ್ ಮೋಹನ್ ಅವರು ಬರೆದ ಈ ಬರಹ ಮತ್ತು ಸಂತಾ ಎಬ್ಬಿಸಿದ ನೆನಪಿನ ಅಲೆಗಳು ಹಲವಾರು. ಅಂತಹ ಒಂದು ಅಲೆಯನ್ನು ರಾಧಿಕಾ ಗಂಗಣ್ಣ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.  

10629583_10152401638791736_3067563974505268972_n

ರಾಧಿಕಾ ಗಂಗಣ್ಣ

ನನ್ನ ಬಾಲ್ಯದಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಹೆಚ್ಚೂ ಅಂದರೆ ಹತ್ತಿರದ ಬೇಕರಿಯಲ್ಲಿ fruit cake ತಂದು ತಿಂದಿದ್ದಷ್ಟೆ, ಅದೂ ನಾವಾಗಿಯೇ ಅಂಗಡಿಗೆ ಹೋಗುವಷ್ಟು ದೊಡ್ಡವರಾದಮೇಲೆ. ಅಕ್ಕನ ಮಗ, ಅಣ್ಣನ ಮಗಳು ಹುಟ್ಟಿದಮೇಲೆ ಕೇಕ್ ತಿನ್ನುವುದರ ಜೊತೆಗೆ ಕೇಕ್ ಎಕ್ಸಿಬಿಷನ್ಗೆ ಹೋಗಿ ಫೋಟೊ ತೆಗೆಸಿಕೊಂಡು ಬರುವುದು ಮೊದಲಾಯಿತು. ಅಣ್ಣನ ಮಗಳು ಕಾನ್ವೆಂಟ್ನಲ್ಲಿ ಓದುತ್ತಿದ್ದರ ಫಲವಾಗಿ Secret Santa ಪರಿಚಯವಾಯ್ತು. ಮಗಳು ಒಂದನೇ ತರಗತಿ ಇರಬೇಕು. ಆಗ ಕ್ರಿಸ್ಮಸ್ ಹಬ್ಬದ ಆಸು ಪಾಸಿನಲ್ಲಿ ಹೇಳಿದಳು. “ಅಮ್ಮಾ, ಸಂತಾ ಕ್ಲಾಸ್ ಗೆ ಚೀಟಿ ಬರೆದಿಟ್ಟರೆ ಮಕ್ಕಳಿಗೆಲ್ಲ ಗಿಫ್ಟ್ ತಂದು ಕೊಡ್ತಾನಂತೆ” ಅಂತ!
635860880347228609569272281_Santa-Claus-Pics-0302
ನಗು ಬಂದರೂ ತಡೆದು ಕೊಂಡು, “ಹೌದಾ! ಹಾಗಾದರೆ ಚೀಟಿ ಬರೆದಿಡು” ಅಂದೆ. ತಕ್ಷಣವೇ ಹೋಗಿ ಒಂದು ಚೀಟಿಯಲ್ಲಿ ತನಗೆ ಏನು ಬೇಕು ಎಂದು ಬರೆದು ತಂದು “ಅಮ್ಮಾ ಎಲ್ಲಿಡಲಿ ಇದನ್ನು?” ಅಂದ್ಲು! ಸುಮ್ಮನೆ ಹಾಸ್ಯಕ್ಕೆ ಹೇಳಿದರೆ ಈ ಹುಡುಗಿ ಅದನ್ನು ನಂಬಿಯೇ ಬಿಟ್ಟಿದ್ದಾಳಲ್ಲ ಅಂದುಕೊಂಡು “ಟಿ.ವಿ ಹತ್ರ ಇಡು” ಅಂದೆ. “ಆದರೆ ಸಂತಾಗೆ ಹೇಗೆ ಗೊತ್ತಾಗುತ್ತೆ ನಾವು ಎಲ್ಲಿಟ್ಟಿರ್ತೀವಿ ಅಂತ, ರಾತ್ರಿ ನಾವು ಬಾಗಿಲು ಹಾಕಿರ್ತೀವಿ ಸಂತಾ ವಾಪಸ್ ಹೋಗ್ಬಿಟ್ರೆ!” ಏನೆಲ್ಲಾ ಪ್ರಶ್ನೆಗಳು ಆ ಮುಗ್ಧ ಮನಸ್ಸಿನಲ್ಲಿ. “ಹಾಗೆಲ್ಲ ಏನೂ ಆಗೋಲ್ಲಾ, ಸಂತಾ ಬರೋದೆ ಎಲ್ಲರೂ ಮಲಗಿರುವಾಗ, ಸ್ವಲ್ಪ ಕಿಟಕಿ ತೆಗೆದಿಟ್ರೆ ಆಯ್ತು, ಬಂದು ಚೀಟಿ ತೊಗೊಂಡು ಹೋಗ್ತಾನೆ” ಅಂದೆ. ಅವಳು ಮಲಗಿದ ಮೇಲೆ ಚೀಟಿ ತೆಗೆದಿಟ್ಟೆ. ಬೆಳಿಗ್ಗೆ ಎದ್ದು ಟಿ.ವಿ ಹತಿರ ಹೋಗಿ ನೋಡಿ, “ಅಮ್ಮಾ, ಸಂತಾ ಚೀಟಿ ತೊಗೊಂಡು ಹೋಗಿದ್ದಾನೆ” ಅಂತ ಅವಳಿಗೆ ಖುಷಿಯೋ ಖುಷಿ! ಇನ್ನು ಸುಮ್ಮನಿದ್ದರೆ ಆಗಲ್ಲ ಅಂತ ಗೊತ್ತಾಯ್ತು. ಸರಿ ಅವಳು ಚೀಟಿಯಲ್ಲಿ ಬರೆದಿದ್ದ ’Little Mommy’ ತಂದು ಬಚ್ಚಿಟ್ಟು, ಕ್ರಿಸ್ಮಸ್ ದಿವಸ ಅವಳು ಏಳುವ ಮುನ್ನ ದಿಂಬಿನ ಬಳಿ ಇಟ್ಟೆವು. ಬೆಳಗ್ಗೆ ಎದ್ದ ತಕ್ಷಣವೇ ಪಕ್ಕದಲ್ಲಿದ್ದ ಗಿಫ್ಟ್ ಪ್ಯಾಕ್ ನೋಡಿ “ಅಮ್ಮಾ, ಸಂತಾ ಗಿಫ್ಟ್ ತಂದಿಟ್ಟಿದ್ದಾನೆ!” ಅಂದು ಸಂತೋಷ, ಸಂಭ್ರಮದಿಂದ ಕಿರುಚಿದಳು! ಅವಳ ಮುಖದಲ್ಲಿದ್ದ ಸಂತಸ, ಆಶ್ಚರ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಎರಡನೇ ತರಗತಿಯಲ್ಲಿದ್ದಾಗ ಬಹುಶಃ ಮರೆತಳೋ ಏನೋ, ಚೀಟಿ ಬರೆದಿಟ್ಟ ನೆನಪಿಲ್ಲ. ಮೂರನೇ ತರಗತಿಗೆ ಬಂದಾಗ ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ನೆನಪಾಯ್ತು ಅವಳಿಗೆ ಸಂತಾ ಕ್ಲಾಸ್ ಬಗ್ಗೆ. ಅವಳು ಬರೆದಿಟ್ಟ ’Barbie Dream House’ ಕೋರಿಕೆ ಚೀಟಿಯನ್ನು ಸಂತಾ ಯಾಕೋ ತೆಗೆದುಕೊಂಡು ಹೋಗಲೇ ಇಲ್ಲ! ಸರಿ, ಸಮಾಧಾನ ಮಾಡಿದ್ದಾಯ್ತು. “ಇಷ್ಟು ಲೇಟ್ ಆಗಿ ಹೇಳಿದ್ರೆ ಸಂತಾಗೆ ಕಷ್ಟ. ಪ್ರಪಂಚದಲ್ಲಿರೋ ಎಲ್ಲಾ ಮಕ್ಕಳ ಹತ್ರ ಹೋಗಿ ಬರಬೇಕು, ಸ್ವಲ್ಪ ಮುಂಚೆನೇ ಹೇಳಿದ್ರೆ ಚೆನ್ನಾಗಿತ್ತು” ಅಂತ. ಚೀಟಿಯೂ ೩-೪ ದಿವ್ಸ ಆದ್ರೂ ಟಿ.ವಿ ಹತ್ರಾನೇ ಉಳೀತು. ಹೊಸ ವರ್ಷದ ಒಳಗೆ ಬರಬಹುದು ಅಂತ ಸಮಾಧಾನ ಮಾಡಿದರೂ, ಚೀಟಿ ತೆಗೆದುಕೊಂಡೇ ಹೋಗದ ಸಂತಾ ಬಗ್ಗೆ ಅವಳಿಗೆ ಸಿಟ್ಟೂ ಬಂತು. ಹಾಗೇ ’ಸಂತಾ’ ಕಡೆಯಿಂದ ಗಿಫ್ಟ್ ಬಂತೂ ಕೂಡಾ! ಈ ಬಾರಿ ಅಷ್ಟೊಂದು ಸರ್ಪ್ರೈಸ್ ಇರ್ಲಿಲ್ಲ. ಗಿಫ್ಟ್ Flipkart ಇಂದ ಬಂತು. “ಸಂತಾ ಯಾಕೆ ತಾನೇ ಗಿಫ್ಟ್ ತಂದು ಕೊಡಲಿಲ್ಲ, ಅಡ್ರೆಸ್ಸ್, ಫೋನ್ ನಂಬರ್ ಹೇಗೆ ಗೊತ್ತಾಯ್ತು, flipkartನವ್ರಿಗೆ ಸಂತಾ ದುಡ್ಡು ಕೊಡ್ಬೇಕಾ?” ಹೀಗೇ ಏನೇನೋ ಪ್ರಶ್ನೆಗಳು. ಯಾಕೋ ಅಮ್ಮಾ, ಅಪ್ಪನೇ ಕಳಿಸಿರೊ ಗಿಫ್ಟ್ ಅಂತ ತುಸು ಅನುಮಾನ ಬಂತು. ಕೇಳಿದಳು ಕೂಡಾ.
10689908_10152401627546736_7282749937152289427_n
ಇಲ್ಲಪ್ಪ ಅಂತ ಹಾರಿಕೆಯ ಉತ್ತರ ಕೊಟ್ಟಾಯಿತು. ಅರ್ಧ ನಂಬಿಕೆ, ಅರ್ಧ ಸಂಶಯವಿತ್ತು ಮನಸ್ಸಿನಲ್ಲಿ. ಇತ್ತೀಚೆಗೆ ಕೊನೆಗೂ ಅವಳಿಗೆ ಗೊತ್ತಾಗಿಯೇ ಹೋಯಿತು ಅಪ್ಪ-ಅಮ್ಮನೇ ಅವಳ ಸಂತಾ ಅಂತ! ಈ ಸಾರಿ ಕೇಳಿದೆ. “ಯಾಕೆ ಸಂತಾಗೆ ಏನೂ ಕೇಳಲ್ವಾ?” ಅಂತ. “ಸಂತಾನೂ ಇಲ್ಲಾ ಏನೂ ಇಲ್ಲಾ ಅಮ್ಮ. ನಿನ್ನನೇ ಕೇಳ್ತೀನಿ ಏನಾದ್ರೂ ಬೇಕಾದ್ರೆ” ಅಂದ್ಲು!
ಜಿ ಎನ್ ಮೋಹನ್ ಸರ್ ಅವರ ಈ ಲೇಖನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು

‍ಲೇಖಕರು Avadhi

January 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: