ಮುದ್ದು ಅಮ್ಮ ಮಿಸ್ ಯು
ಪ್ರವರ ಕುಂವೀ
ಬೆಳಗ್ಗೆಯಿಂದ ಸೆಕೆಗೆ ತತ್ತರಿಸಿ ಹೋಗಿದ್ದ ನಾನು ಫ್ಯಾನು ಹಾಕಿಕೊಂಡು ಏನನ್ನೋ ಓದುತ್ತಾ ಕೂತಿದ್ದೆ, ಇದ್ದಕ್ಕಿದ್ದಂತೆ ಮೋಡಗಟ್ಟಿಬಿಡಬೇಕೆ. ಮನೆಯೊಳಗಿನ ಸೆಕೆಯ ಚಿತ್ರಹಿಂಸೆಯನ್ನು ಅನುಭವಿಸಿದ್ದ ನನಗೆ ತಣ್ಣಗಿನ ವಾತಾವರಣ ಕೊಂಚ ಖುಶಿ ಎನಿಸಿತು, ಆಗಲೇ ಮಿಂಚು ಗುಡುಗಿನ ಆರ್ಭಟ ಜೋರಾಗಿತ್ತು, ಚೆಂದ ಕಾಣುತಿದ್ದ ಮಿಂಚನ್ನು ಕ್ಲಿಕ್ಕಿಸುವ ಸಲುವಗಿ ಕ್ಯಾಮೆರ ತರಲು ಒಳಗೆ ಹೋಗಿ ಬರುವಷ್ಟರಲ್ಲಿ ಮಳೆ ಧೋ ಎಂದು ಶುರುವಾಗಿಯೇ ಬಿಡ್ತು ಚೂರು ಬೇಸರದ ಜೊತೆ ಮಣ್ಣಿನ ವಾಸನೆಯನ್ನು ಸವಿದ ಅನುಭವದ ಖುಶಿ, ಒಳಗಿಂದ ಚೇರನ್ನು ತಂದು ಹೊರಾಂಡದಲ್ಲಿ ಕೂತುಬಿಟ್ಟೆ. ಮಳೆಯಲ್ಲಿ ಕಾಲು ತೋಯಲು ಬಿಟ್ಟು ಕೂತದ್ದಕ್ಕೆ ಏನೋ ನಿರಾಳವೆನ್ನಿಸಿತು. ಎದುರು ಮನೆಯಲ್ಲಿ ಕಿಡಕಿಯ ಸರಳುಗಳನ್ನು ಹಿಡು ನಿಂತಿದ್ದ ಮಗುವಿಗೆ ಅದರಮ್ಮ ಮುದ್ದು ಮಾಡುತ್ತಾ ತಿನ್ನಿಸುತಿದ್ದಳು. ನೋಡುತ್ತಲೇ ಊರಿನಲ್ಲಿದ್ದ ನನ್ನ ಮುದ್ದು ಅಮ್ಮ ನೆನಪಾದಳು.
ಹುಟ್ಟಿನಿಂದ ಡಿಗ್ರಿವರೆಗೂ ಕೊಟ್ಟೂರಿನಲ್ಲೇ ಓದಿದ್ದ ನನಗೆ ಬರಿ ಅಮ್ಮ ಎನ್ನುವುದಕ್ಕಿಂತ ಬಹು ದೊಡ್ಡ ಗುರು. ಸ್ಕೂಲಿಗೆ ಹೋಗಲು ಅಳುತಿದ್ದ ನನ್ನನ್ನು ಸಂಬಾಳಿಸಲು ಕೆನ್ನೆ ಗಿಂಡುತ್ತಾ, ಕೈಗೆ ದುಡ್ಡು ಕೊಡುತ್ತಾ ಏನೆಲ್ಲಾ ಕಸರತ್ತು ಮಾಡುತಿದ್ದರೂ ನಾನು ಶಾಲೆಗೆ ಹೋಗುವುದಕ್ಕೆ ಪ್ರತಿಭಟಿಸುತ್ತಲೇ ಇದ್ದೆ, ಕೊನೆಗೊಮ್ಮೆ ಅಮ್ಮ ಜೋರಾಗಿ ಗದರಿದರೆ ಕಣ್ಣೀರು ಹಾಕುತ್ತಲೇ ಮೆಲ್ಲಗೆ ಕಾಲೆಳೆಯುತ್ತಾ ಹೋಗುತ್ತಿದ್ದೆ. ಸ್ಕೂಲು ಬಿಡುತ್ತಲೇ ಮನೆಗೆ ಓಡಿಬರುತಿದ್ದೆ, ಓಣಿಯ ದಾರಿಗೆ ಎಂಟ್ರಿ ಕೊಡುತ್ತಿದ್ದಂತೆ ಅಮ್ಮ ಮಾಡುತಿದ್ದ ಖಾರ ಮಂಡಕ್ಕಿ ವಾಸನೆ ನೆಗಡಿಯಾದರೂ ಮೂಗಿಗಡರುತಿತ್ತು, ಮೂಗೇರಿಸುತ್ತ ವಾಸನೆ ಎಳೆದುಕೊಳ್ಳುತ್ತಾ ಮನೆಗೆ “ಅಮ್ಮಾ, ಮಂಡಕ್ಕಿ ಹಾಕ್ಕೊಡು ಹೊಟ್ಟೆ ಹಸಿತಿದೆ” ಎಂದು ಜೋರಾಗಿ ಕೂಗುತ್ತಲೇ ಗೇಟು ತೆರೆಯುತಿದ್ದೆ, “ಆಗ್ಲೆ ಬಂದ್ಯಾ ಬಾ ನಿನ್ ಮೂಗು ನಾಯಿ ಮೂಗು ನೋಡು” ಎಂದು ಮುದ್ದಾಗಿ ಹೇಳಿ ಮಣ್ಣಾಗಿರುತಿದ್ದ ಕೈಕಾಲುಗಳನ್ನು ತೊಳೆದುಕೊಳ್ಳಲು ಹೇಳಿದರೆ ನಾನು ಬೇಕೊ ಬೇಡವೋ ಎಂಬಂತೆ ಕಾಲಿಗೆ ನೀರು ಹಾಕೊಂಡು ಆಯ್ತಮ್ಮ ಎನ್ನುತಿದ್ದಂತೆ ಅಮ್ಮ ನನ್ನ ಕಾಲುಗಳನ್ನ ನೋಡಿ “ಹಿಮ್ಮಡಿಗೆ ಸರಿಯಾಗಿ ನೀರು ಹಾಕ್ಕೊಂಡಿಯೇನ್ ನೋಡು” ಎನ್ನುತ್ತಲೇ ತಾನೆ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದಳು.
“ಅನ್ನಪೂರ್ಣಮ್ಮ ಏನ್ ಮಾಡ್ತಿದಿಯವ್ವ” ವಾರಕ್ಕೆರಡು ಬಾರಿಯಾದರೂ ಮಕ್ಕಳಾದ ಹುಲಿಗೆಪ್ಪ ಬಸವರಾಜರ ಜೊತೆ ಜಗಳ ಮಾಡಿಕೊಂಡು ಬಂದು ಅಮ್ಮನ ಹತ್ತಿರ ತನ್ನ ಗೋಳನ್ನು ತೋಡಿಕೊಳ್ಳುತಿದ್ದ ಅಂಜಿನವ್ವಳು ಜಗಳದ ಸಲುವಾಗಿ ಬೆಳಿಗ್ಗೆಯಿಂದ ಊಟ ಮಾಡದೇ ಹಸಿದಿದ್ದನ್ನು ಅಮ್ಮನಿಗೆ ಸುಲಭವಾಗಿ ಗೊತ್ತಗಿಬಿಡುತಿತ್ತು, ಮರುಕ್ಷಣ್ದಲ್ಲೇ ತಟ್ಟೆಗೆ ಅನ್ನ ಸಾರು ಹಾಕಿ ಕೊಡುತಿದ್ದಂತೆ ಅಂಜಿನವ್ವನ ಕಣ್ಣಲ್ಲಿ ತುಂಬಿ ಹರಿಯುತಿದ್ದ ನೀರು ಕಣ್ಣೊರೆಸಿಕೊಳ್ಳುತ್ತಾ ಊಟ ಮಾಡುತಿದ್ದಳು.
ಸಾಯಂಕಾಲದಿಂದ ಏನಾದರೊಂದು ಮೆಲ್ಲುತ್ತಾ ಓದುತಿದ್ದ ನಾನು ನೋಡು ನೋಡುತಿದ್ದಂತೆ ತೂಕಡಿಸುತ್ತಾ ಮಲಗಿಬಿಡುತಿದ್ದೆ, ಕುಂಭಕರ್ಣನ ನಿದ್ದೆ ಮಾಡುತಿದ್ದ ನನ್ನನ್ನು ಅಮ್ಮ ಎದೆಗವುಚಿಕೊಂಡು ತುತ್ತು ಮಾಡಿ ತಿನ್ನಿಸುವಾಗ ಎಷ್ಟೋ ಬಾರಿ ನಿದ್ದೆಗಣ್ಣಿನಲ್ಲಿ ಅಮ್ಮನ ಕೆನ್ನೆಗೆ ಬಾರಿಸಿದ್ದೂ ಇದೆ, ಆದರೂ ಒಂದೇ ತುತ್ತು ಒಂದೇ ತುತ್ತು ಎನ್ನುತ್ತಾ ಅಷ್ಟನ್ನು ಗೊತ್ತಿಲ್ಲದೇ ನನ್ನ ಹೊಟ್ಟೆಗೆ ಸೇರಿಸಿ ಇವಾಗ ಮಲ್ಕೋ ಅಂತಾ ಜೋಪಾನವಾಗಿ ಹಾಸಿಗೆಯ ಮೇಲೆ ಮಲಗಿಸುತಿದ್ದಳು. ಶಾಲೆಯಲ್ಲಿ ಸ್ಪರ್ಧೆಗಳು ಇಡುತಿದ್ದಂತೆ ಮನೆ ಓಡಿ ಬಂದು ಅವುಗಳ ಲಿಸ್ಟನ್ನು ಅಮ್ಮನಿಗೆ ಕೊಟ್ಟರೆ ನನ್ನ ಅರ್ಧ ಗೆದ್ದ ಹಾಗೆ.
ಪ್ರಬಂಧಕ್ಕೆ ಏನೇನು ಬರಿಬೇಕು, ಚಿತ್ರ ಏನು ಬಿಡಿಸ್ಬೇಕು, ಜಾನಪದ ಗೀತೆಗೆ, ಭಾವಗೀತೆಗೆ, ದೇಶಭಕ್ತಿಗೆ ಯಾವ ಹಾಡು ಹಾಡ್ಬೇಕು ಯಾವ ಥರ ಹಾಡ್ಬೇಕು, ಆಶುಭಾಷಣಕ್ಕೆ ಏನೆಲ್ಲಾ ಮಾತಾಡ್ಬೇಕು, ವೇದಿಕೆ ಮೇಲೆ ಹೇಗಿರಬೇಕು ಎಲ್ಲವನ್ನೂ ಅಷ್ಟೂ ಮನೆ ಕೆಲಸಗಳ ನಡುವೆ ನನಗೆ ಹೇಳಿಕೊಡುವಾಗಲೂ ಅದೇ ಉತ್ಸಾಹ, ಕೊನೆಗೆ ಎಲ್ಲಾ ಸ್ಪರ್ಧೆಗಳಲ್ಲಿ ಗೆದ್ದು ಸರ್ಟಿಫಿಕೇಟುಗಳನ್ನ ಅಮ್ಮನ ಕೈಗೆ ಕೊಟ್ಟಾಗ ಅಕ್ಕ ಪಕ್ಕದ ಮನೆಯವರಿಗೆಲ್ಲಾ ನನ್ನ ಮಗ ಗೆದ್ದಿದ್ದಾನೆ ಅನ್ನೋದನ್ನ ಒತ್ತಿ ಹೇಳುವಾಗಿನ ಸಂತೋಷವನ್ನು ಆ ಸುಂದರವಾದ ಮುಖದಲ್ಲಿ ನೋಡಬೇಕು, ಮುದ್ದು ಮುದ್ದು ಅಮ್ಮ.
ಅಮ್ಮ ಅಡಿಗೆ ಮಾಡಲು ಶುರುವಿಟ್ಟರೆ ಪಕ್ಕದ ಮನೆಯ ಸುಶಿಲಮ್ಮ, ಪಾರ್ವತಮ್ಮ ಟೀಚರ್, ಮಂಗಳಮ್ಮ , ಗೌರಮ್ಮ ಎಲ್ಲರೂ ಮೂಗೇರಿಸುತ್ತಾ ಹೊರಗೆ ಕೂತು ಅಡಿಗೆಯನ್ನು ಗುಣಗಾನ ಮಾಡಿದ್ದೇ ಮಾಡಿದ್ದು, ದೋಸೆ ಸಾಗುವಾದರಂತೂ ಅಬ್ಬಬ್ಬಾ ಬಾಯಲ್ಲಿ ನೀರು, ಬರೆಯುತ್ತಿರುವಾಗಲೂ ಅಮ್ಮ ಮಾಡುತಿದ್ದ ದೋಸೆ ನೆನೆದು ಬಾಯಿ ನೀರೂರಿತು. ಬರೋಬ್ಬರಿ ಎರಡುವರೆ ತಾಸು ದೋಸೆ ಮಾಡಿ ಚಿಕ್ಕಪ್ಪ ಮನೆಗೊಂದಿಷ್ಟು, ಅಂಜಿನವ್ವಗೊಂದಿಷ್ಟು, ಪಕ್ಕದ ಮನೆಯ ಪಾರ್ವತಿ ಟೀಚರ್ರಿಗೆ ಕೊನೆಗೆ ತರಕಾರಿ ಮಾರಲು ಬರುತಿದ್ದ ಸುಟ್ಟಕೋಡಿಹಳ್ಳಿಯ ಹೆಣ್ಣುಮಗಳಿಗೆ ತಿನ್ನಲೂ ಕೊಟ್ಟು ಮನೆಗೂ ತೆಗೆದುಕೊಂಡು ಹೋಗಲು ಕಟ್ಟಿಕೊಡುತಿದ್ದರೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ. ಡಿಗ್ರಿ ಮುಗಿಸಿ, ಬೆಂಗಳೂರಿಗೆ MCA ಓದಲು ಲಗೇಜಿನ ಸಮೇತ ಬರುವಾಗಲಂತೂ ಬಾಚಿ ತಬ್ಬಿ ಮಗುವಂತೆ ಅತ್ತುಬಿಟ್ಟಳು ಮುದ್ದು ಅಮ್ಮ, ತುಂಬಾ ಅಂದ್ರೆ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ…








ಹೌದು ಪ್ರವರ… ‘ಅವ್ವ’ ಅಂದರೆ ಸಾಕ್ಷಾತ್ ‘ಅನ್ನಪೂರ್ಣೇಶ್ವರಿ’ಯೇ… 🙂
ನಿಜಕ್ಕೂ ಅಮ್ಮನ ಬಗ್ಗೆ ಹೇಳಲು ಹೋದರೆ ಶಬ್ಧಗಳು ಸಾಲದು. ಅದೆಷ್ಟು ಸುಂದರ ಅನುಭಗಳು ನಮ್ಮ ಕಣ್ಮುಂದೆ ಬರುತ್ತವೆ.. ನಿಜಕ್ಕೂ ನಿಮ್ಮ ಬರಹ ಓದಿ ತುಂಬಾ ಖುಶಿಯಾಯಿತು. ನಾನು ಎರಡನೇ ತರಗತಿಯಲ್ಲಿ ಇದ್ದಾಗಲೇ ಅಮ್ಮನಿಂದ ದೂರವಿದ್ದೆ. ಆಗಿನ ನೆನಪುಗಳು ಮತ್ತೆ ಹಸಿರಾದವು. ಮೂರನೇ ತರಗತಿಯಿಂದ ಹತ್ತರ ವರೆಗೂ ಅಮ್ಮನ ಜೊತೆ ಇದ್ದೆ. ಮತ್ತೆ ದೂರ.
ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಬರಹ ಓದಿ ಮನ ಪ್ರಸನ್ನವಾಯಿತು. ಇಂದಿನ ದಿನ ಸಂತೋಷವಾಗಿ ಕಳೆಯುವುದಂತೂ ನಿಜ.
ಧನ್ಯವಾದಗಳು ಗೆಳೆಯ ಪ್ರವರ.
ಶುಭವಾಗಲಿ..
…………. Pravara, eshtu chennagi barediddera. Haudu amma yavatto annapoorneye. 🙂
ಅಂಗನವಾಡಿಯ ದಿನಗಳು ಕಣ್ಮುಂದೆ ಕುಣಿದಾಡಿದವು.
ತುಂಬಾ ಥ್ಯಾಂಕ್ಸ್ ಓದಿಸಿದ್ದಕ್ಕೆ…
ಚಂದ ಬರೆದಿದ್ದೀರಿ ಪ್ರವರ…
🙂
ಅಮ್ಮನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ. ಈ ಬರಹದ ಮುಖೇನ ನಾನೂ ನನ್ನ ಅಮ್ಮನನ್ನು ಹೆಚ್ಚು ಪ್ರೀತಿಸುವಂತಾಗಬೇಕು.
tuMbaa chennaagide 🙂
ಅಮ್ಮನ ಕೈಗೂಸಿನ ಮುದ್ದಾದ ಬರಹ ಓದಿ ಮನ ತುಂಬಿ ಬಂತು…
ಪ್ರವರ ಪ್ರಬುದ್ಧ ಲೇಖಕ.. ಗಂಭೀರ ಬರಹಗಳನಷ್ಟೇ ಅಲ್ಲದೆ ಲಘು ಬರಹಗಳನ್ನು ಕೂಡ ತುಂಬಾ ಮುದ್ದಾಗಿ ಬರೆಯಬಲ್ಲರೆಂಬುದಕ್ಕೆ ಇದೊಂದು ಸರ್ಟಿಫಿಕೆಟ್..
ಬರಹ ಮಸ್ತಾಗಿದೆ..
ಅಮ್ಮನ ನೆನಪು ಜೋರಾಗಿದೆ ಯುಗಾದಿ ಹಬ್ಬಕ್ಕೆ ಹೋಗಿ ಬನ್ನಿ… ಅಮ್ಮನ ಕೈ ಅಡಿಗೆ ಊಟ ಮಾಡಿ ಬನ್ನಿ… ಚೆನ್ನಾಗಿ ಬರೆದಿದ್ದೀರಿ ಪ್ರವರ ಅಮ್ಮಾ ಅಂದ್ರೆ ಏನೋ ಪುಳಕ ಅಲ್ಲ್ವಾ..
very nice write up
ಅಮ್ಮ ಅನ್ನುವ ಪದದೊಳಗಿನ ಚೇತನವನ್ನು ಗುರುತಿಸುವ ಕೆಲಸ ಇನ್ನೂ ಆಗಬೇಕಿದೆ.ಪ್ರವರರವರ ಆಸಕ್ತಿ ಚೆನ್ನಾಗಿದೆ.
ಅಮ್ಮ ಅಂದ್ರೆ ಏನೋ ಒಂಥರಾ ಖುಷಿ..,
ನಿಮ್ಮ ಬರಹ ನೋಡಿದ ಮೇಲೆ ಅಮ್ಮ ಮೇಲೆ ತುಂಬಾ ಮುದ್ದು ಬಂದಿದೆ.. ಚೆನ್ನಾಗಿದೆ ಪ್ರವರ.
ಒಂದು ಸುಂದರ ಲೇಖನ ಅಪೂರ್ಣ ಅನಿಸಿತು. ಏಕೆಂದರೆ, ಅಮ್ಮನ ಬಗೆಗೆ ಬರೆದಷ್ಟೂ ಕಡಿಮೆಯೇ.
Very nice….good writeup pravara
thumba ishtavaayitu frd..
Chennagidhe….
Amma yendharene yeno onthara harusha…
Happy UGADI.
Super!! ammaaaaaa….I Love you!!