ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನಾಗುವುದು ಹೇಗೆ?

-ರಂಜನಿ ಪ್ರಭು

ಅಮ್ಮ

ಅಮ್ಮನಾಗುವುದು
ಹೇಗೆ? ಎಂದು
ಹೇಳಿಕೊಡುತ್ತಾರೆ
ಎಲ್ಲರೂ
ಕಂದ ಗರ್ಭದಲಿ
ಮೂಡಿದ ಮರುಕ್ಷಣವೇ
ಒಡಲು ಮನಸುಗಳೇ
ಪಾಠ ಶುರುಮಾಡಿ
ಬಿಡುತ್ತವೆ

ಆದರೆ..
ಮಕ್ಕಳು ಬೆಳೆದು
ಸ್ವತಂತ್ರರಾದಾಗ
ತುಂಬಿಕೊಳುವ
ಮೌನವನು
ಭರಿಸುವುದು ಹೇಗೆ?
ಯಾರೂ ಹೇಳುವುದಿಲ್ಲ..
ಮನಸು ಒಡಲುಗಳೂ
ಅಣಿಯಾಗುವುದಿಲ್ಲ.

ಮಕ್ಕಳು ಬೆಳೆದು
ಆದರು ಸ್ವತಂತ್ರ,
ಅಮ್ಮನಿಗೋ ಹೆಮ್ಮೆ
ಆದರಿನ್ನು ಅವರು ಕೇಳಲಾರರು ಅಮ್ಮನ ಸಲಹೆ
ಉಪದೇಶ ? ಉಹುಂ
ಇಲ್ಲವೇ ಇಲ್ಲ
ಅಮ್ಮನಿಲ್ಲದೆಯೇ
ಸಂಭಾಳಿಸುತ್ತಾರೆ
ಎಲ್ಲವನ್ನೂ..

ನಗುತ್ತಿವೆ
ಅಮ್ಮನ ತುಟಿಗಳು..
ರೆಕ್ಕೆ ಕಟ್ಟಿದ್ದೂ ಅವಳೇ
ಹಾರಬಿಟ್ಟಿದ್ದೂ
ಅವಳೇ
ಆದರೇಕೆ ಎದೆಯೊಳಗೆ ಸಣ್ಣ
ಬಿಕ್ಕಳಿಕೆಯ ಸದ್ದು?

ಈ ಹೊಸ ಅಮ್ಮ
ಕಲಿಯಬೇಕಿದೆ
ಮಕ್ಕಳ ತಪ್ಪು ಕಂಡರೂ ಕಾಣದಂತಿರುವುದ..
ಕಲಿಯಬೇಕಿದೆ
ತುಟಿಯ ಹೊಸಿಲಿಗೆ
ಬಂದ ಮಾತುಗಳನ್ನು ಹಾಗೇ ಒಳಗೆ ತಳ್ಳುವುದ..
ನೆನಪು ಕಾಡಿದಾಗೆಲ್ಲ
ಕರೆಮಾಡಿ ಮಾತಾಡುವ
ಉಕ್ಕುವಾಸೆಯನು
ಒಳತಳ್ಳುವುದ..
ಕಲಿಯಬೇಕಿದೆ
ಕಣ್ಣ ಕೊನೆಯಲಿ
ನಿಂತ ಕಂಬನಿಯ
ಬಿಂದುಗಳ ಮರೆಯಲಿ ನಿಂತು
ಒರೆಸಿಕೊಳುವುದ..
ಕಲಿಯಲೇ ಬೇಕು
ಅಮ್ಮ ಈ ಹೊಸಪಾಠಗಳನು

ಬೆಳೆದ ಮಕ್ಕಳನು
ಪ್ರೀತಿಸುವುದೆಂದರೆ
ದೂರದಿಂದ ಚಂದ್ರಮನ ನೋಡಿದಂತೆ.
ಹಿಡಿಯಲಾಗದು
ಬೆಳದಿಂಗಳ ಅಲೆಯಂತು ಮೂಡುವುದು

ನಟಿಸುತ್ತಾಳೆ ಅಮ್ಮ
ತನಗೇನೂ ನೋವಾಗಿಲ್ಲ ಎಂದು
ಆದರೆ ಒಳಗೇ ಚುಚ್ಚುತಿವೆ ಸೂಜಿಗಳು

ಅಮ್ಮ ಮಕ್ಕಳ ಬಂಧವೇನೋ ಬೆಸೆದಿದೆ
ಸದಾ..

ಅಮ್ಮನಿಲ್ಲದೆಯೂ
ನಡೆದೀತು ಮಕ್ಕಳ ಬದುಕು , ಈಗ ಮುನ್ನಿನಂತಲ್ಲ

ಮಕ್ಕಳು ಮನೆಗೆ
ಬರುವರೆಂದರೆ ಸಾಕು ಬಾಲ್ಯದ
ಚಿತ್ರಗಳ ಧೂಳು ಒರೆಸುತ್ತಾಳೆ..
ಅವರು ಆಡಿದ ಅಂಗಳವನು
ಸುಮ್ಮನೆ ನೋಡುತ್ತಾಳೆ
ಕೊಠಡಿಗಳನ್ನು
ಸುಖಾಸುಮ್ಮನೆ
ಮತ್ತೆ ಮತ್ತೆ ಜೋಡಿಸುತ್ತಾಳೆ
ಎಲ್ಲಿ ಓಡುವುವೋ
ಆಯಾಸ ಮೊಣಕಾಲ ನೋವು
ಸಿದ್ಧ ಅಂದು ಮಕ್ಕಳ
ಪ್ರಿಯವಾದ ಖಾದ್ಯ

ಬದಲಾಗುವುದೇ ಇಲ್ಲ ಅಮ್ಮ ಒಳಾಂತರಂಗದಲ್ಲಿ.ಮುದ್ದಿಸಿ
ತಿನ್ನಿಸಿ ಮನೆಯನೆ
ಹಬ್ಬವಾಗಿಸಿ ಬಿಡುವ ಅಮ್ಮ
ಬಾಗಿಲಲಿ ನಿಂತು
ನಗುತ್ತಲೇ ಕೈಬೀಸಿ
ಕಳಿಸಿಕೊಡುವಾಗ
ಪ್ರಾರ್ಥಿಸುತ್ತಾಳೆ
ಅವರ ಒಳಿತಿಗೆ
ಒಳಗೆ ಬಂದೊಡನೆ
ಮೊದಲಿನದೇ ಆಯಾಸ
ದೂರದಿಂದಲೇ
ಮೂಲೆಯಿಂದಲೇ
ಕಾಳಜಿ ಮಾಡುತ್ತಾಳೆ
ಮತ್ತೆ ಕಾಯತೊಡಗುತ್ತಾಳೆ

ಅವಳಿಗೇ ತಿಳಿಯದಂತೆ…

‍ಲೇಖಕರು Admin

23 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading