ಗಿರಿಜಾಶಾಸ್ತ್ರಿ, ಕೆ ರಘುನಾಥ್ ಅವರು ಬರೆದ ಪ್ರವಾಸ ಕಥನ ‘ಅಮೇರಿಕಾಯಣ ಸಹಪಯಣ’
‘ಗೀತಾಂಜಲಿ’ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಗಿರಿಜಾಶಾಸ್ತ್ರಿ ಅವರ ಒಂದು ನುಡಿ ಇಲ್ಲಿದೆ.
–ಗಿರಿಜಾಶಾಸ್ತ್ರಿ
ನಾನು ಹುಟ್ಟಿದ್ದು ಅತ್ತ ತೀರ ಹಳ್ಳಿಯೂ ಅಲ್ಲದ, ಇತ್ತ ಪಟ್ಟಣವೂ ಅಲ್ಲದ ಒಂದು ಗ್ರಾಮದಲ್ಲಿ. ಮೈಸೂರಿನ ಕೆ. ಆರ್. ನಗರದ ಬಳಿಯಿರುವ ಸಾಲಿಗ್ರಾಮದಲ್ಲಿ. ಮೈಸೂರನ್ನು, ಅದರಲ್ಲೂ ಅಲ್ಲಿನ ದಸರಾವನ್ನು ನೋಡಬೇಕೆಂಬುದು ಆಗಿನ ನನ್ನ ದೊಡ್ಡ ಕನಸು. ಹೀಗೆ ಹಂಬಲಿಸಿ ಹಂಬಲಿಸಿ ದಸರಾ ನೋಡಲು ಮೈಸೂರಿಗೆ ಹೋದಾಗ ಅಲ್ಲಿ ತಪ್ಪಸಿಕೊಂಡು ಬಿಟ್ಟಿದ್ದೆ. ದೊಡ್ಡ ಶಹರದಲ್ಲಿ ತಪ್ಪಿಸಿಕೊಳ್ಳುವ ಭಯ ನನಗೆ ಬಾಲ್ಯ ತಂದಿತ್ತ ಶಾಪವೇನೋ.
ಶಹರದಲ್ಲಿ ನಿಜವಾಗಿ ಕಳೆದು ಹೋಗುವ ಅನುಭವವಾಗಿದ್ದೇ ಮದುವೆಯಾಗಿ ಮುಂಬಯಿಗೆ ಬಂದಮೇಲೆ. ಆದರೆ ಇದು ದೈಹಿಕವಾಗಿ ಕಳೆದು ಹೋಗುವ ಭಯವಲ್ಲ. ಸನದಿಯವರು “ಗಾಳಿಯ ರೈಲಿಗೆ ಧೂಳಿಯ ಕ್ಯೂ” ಎನ್ನುತ್ತಾರೆ. ಧೂಳೆಬ್ಬಿಸಿ ಬರುವ ರೈಲು ಒಂದು ಕಡೆ, ಅದರೊಳಗೆ ಧೂಳಿನಂತೆ ತೂರಿಕೊಂಡು ಧೂಳೇ ಆಗಿಬಿಡುವ ಪ್ರಯಾಣಿಕರು ಒಂದು ಕಡೆ. ಮುಂಬಯಿಯ ಮಾಯಾ ಬಜಾರಿಗೆ ನಾಗರಿಕರು ಧೂಳಿಗೆ ಸಮಾನ. ಆದರೆ ಹೀಗೆ ತೃಣಸಮಾನರಾದ ಮುಖವಿಲ್ಲದವರು ಅರಬ್ಬಿಕಡಲಿನೊಳಗೆ ಮುಳಗೇಳುವಾಗ, ಬಂದು ಕೈಹಿಡಿಯುವುದೂ ಇಂತಹುದೇ ಮುಖವಿಲ್ಲದ ಇನ್ನೊಂದು ಚೈತನ್ಯ. ಅನಾಮಿಕರು ಅನಾಮಿಕರಿಗೆ ನೆರವಾಗುವ ಜಾದೂವನ್ನು ಮುಂಬಯಿಯಲ್ಲಿ ಮಾತ್ರ ನೋಡಬೇಕು.
ಹೀಗೆ ಮುಖವಿಲ್ಲದೆ, ಮುಂಬಯಿಯೊಳಗೆ ಬಂದ ನಮಗೆ ಮುಖಕೊಟ್ಟದ್ದು ಕನ್ನಡ ಪ್ರಪಂಚ. ಮುಖ ಎಂದರೆ ಬಾಯಿ ಎನ್ನುವ ಅರ್ಥವೂ ಇದೆ. ಮರಾಠಿ ಮೌಶಿಯ ಮಡಿಲೊಳಗೆ ನಿಜವಾಗಿ ಬಾಯಿ ಕೊಟ್ಟದ್ದು ಕನ್ನಡ ಮಾಯಿ. ೩೫ ವರುಷಗಳ ಹಿಂದೆ, ಯಾವುದೋ ಕನ್ನಡ ಕಾರ್ಯಕ್ರಮವೊಂದರಲ್ಲಿ ಅನಾಮಿಕಳಾಗಿ ಕುಳಿತಿದ್ದ ನನ್ನನ್ನು ಸನದಿಯವರು ವೇದಿಕೆಗೆ ಕರೆದು ಕವಿತೆ ಓದಲು ಅವಕಾಶಮಾಡಿಕೊಟ್ಟರು. ಅಂದಿನಿ೦ದ ಕವಿತೆ, ಬರವಣಿಗೆ ನನ್ನ ಕೈ ಹಿಡಿದಿದೆ, ನನಗೆ ಮುಖಕೊಟ್ಟಿದೆ. ಇದು ಶಹರದಲ್ಲಿ ಕಳೆದು ಹೋಗುವ ನನ್ನ ಭಯವನ್ನೂ ಕಳೆದಿದೆ.
ತೀರ್ಥಯಾತ್ರೆ ಎಂದು ಅಮ್ಮನನ್ನು ಕರೆದುಕೊಂಡು ದ್ವಾರಕಾ, ಮಥುರಾ, ಡೆಲ್ಲಿ ಹಾಗೂ ಮಹಾರಾಷ್ಟ್ರದ ಎಲ್ಲೆಡೆಯೂ ಒಬ್ಬಳೇ ಸುತ್ತಿಸಿದ್ದೇನೆ. ಈ ಧೈರ್ಯ ಕೊಟ್ಟಿದ್ದು ನನಗೆ ಮುಂಬಯಿ ಹವಾ. ನಾನು ಚಿಕ್ಕ ಹುಡುಗಿಯಾಗಿದ್ದಾಗ ನನ್ನ ಕೆಟ್ಟ ಧಾಷ್ಟೀಕವನ್ನು ಕಂಡ ನಮ್ಮಪ್ಪ “ಇವಳು ಎಲ್ಲೋ ಅಪ್ಪಿ ತಪ್ಪಿ ಹೆಣ್ಣಾಗಿ ಬಿಟ್ಟಳು, ಗಂಡಾಗಿದ್ದರೆ ಇಡೀ ಪ್ರಪಂಚವನ್ನು ಸುತ್ತಿಕೊಂಡುಬ೦ದು ಬಿಟ್ಟಿರೋಳು” ಎಂದದ್ದು ನೆನಪಾಗುತ್ತದೆ. “ಅಪ್ಪಾ ನಾನು ಹೆಣ್ಣಾಗಿಯೇ ಒಬ್ಬಳೇ ಸುತ್ತಿದ್ದೇನೆ ನೋಡಿ” ಎಂದು ಹೇಳಲು ಈಗ ಅಪ್ಪ ಇಲ್ಲ. ಆದರೆ, ಹೊರಗೆ ಎಷ್ಟೇ ಭಂಡ ಧೈರ್ಯ ತೋರಿದರೂ ಹೆಣ್ಣಾಗಿರುವ ಭಯವನ್ನು ಕಳೆದುಕೊಳ್ಳುವ ವಾತಾವರಣವನ್ನು ನಮ್ಮ ಸಮಾಜ ಇನ್ನೂ ನಿರ್ಮಾಣ ಮಾಡಿಲ್ಲ ಎನ್ನುವುದ ನಿಜ. ‘ಅಕ್ಕ’ನಿಗೆ ಅವಳ ಪ್ರಯಾಣವೇ ಅವಳಿಗೆ ಖಾಸಗೀ ವಲಯವಾಗಿರುವಂತೆ (ಸ್ಪೇಸ್) ಎಲ್ಲ ಹೆಣ್ಣುಮಕ್ಕಳ ಪ್ರಜ್ಞಾ ವಿಸ್ತಾರವೂ ಅವರವರು ಕೈಗೊಳ್ಳುವ ಪ್ರಯಾಣದಲ್ಲೇ ಅಡಗಿದೆ ಎಂದು ನಾನು ಭಾವಿಸುತ್ತೇನೆ.
ನನಗೆ ನಿಜವಾಗಿ ಕಳೆದು ಹೋಗುವ ಭಯ ಮತ್ತೆ ಉಂಟಾದದ್ದೇ ದೋಹಾದ ವಿಮಾನ ನಿಲ್ದಾಣದಲ್ಲಿ- ಗಾಲಿ ಕುರ್ಚಿಯವನು ನನ್ನನ್ನು ಮತ್ತು ಗಂಡನನ್ನು ಬೇರೆ ಬೇರೆಯೆಡೆಗೆ ನಿಲ್ಲಿಸಿದಾಗ. ಪ್ರತಿಯೊಂದು ಎಡೆಯಲ್ಲಿಯೂ ನಾನು ಎಲ್ಲರಿಗೂ ಒಂದೇ ಪದವನ್ನು ಪದೇ ಪದೇ ಹೇಳುತ್ತಿದ್ದುದಕ್ಕೆ ಈ ಭಯವೇ ಕಾರಣವೇನೋ. ಇಂತಹ ಭಯವನ್ನು ಮತ್ತೊಮ್ಮೆ ಕಳೆದದ್ದು ಅಮೇರಿಕಾ ದೇಶ. ಅದೇ ಆಕಾಶ, ಅದೇ ಭೂಮಿ, ಅಮೇರಿಕನ್ನರ ಆರೈಕೆಯನ್ನು ಪ್ರೀತಿಯಿಂದ ಕೈಗೊಳ್ಳುವ ಅದೇ ಹಸಿರು ನಿಸರ್ಗ, ಅಪರಿಚಿತರಂತೆ ವ್ಯವಹರಿಸದ ಜನ ಈ ಎಲ್ಲವೂ ನನ್ನ ಅನಾಮಿಕತೆಯ ಭಯವನ್ನು ಕಳೆಯಿತು ಎಂದರೆ ಅತಿಶಯೋಕ್ತಿಯಲ್ಲ.
ಬಾಲ್ಯದಲ್ಲಿ ನನಗೆ ಶಹರದ ಕನಸುಗಳು ಬೀಳುತ್ತಿರಲಿಲ್ಲ. ಹೊಟ್ಟೆ, ಬಟ್ಟೆಗೇ ತತ್ವಾರವಾದ ಮನೆಯಲ್ಲಿ ಕನಸುಗಳನ್ನು ಕಾಣುವುದೂ ಪಾಪವೇನೋ. ಮೈಸೂರನ್ನೇ ನೋಡಲಾರದ ನನಗೆ ಇನ್ನು ಅಮೇರಿಕಾದ ಕನಸಾದರೂ ಹೇಗೆ ಬೀಳಬೇಕು? ಶಾಲೆಯಲ್ಲಿ ಕಲಿಯುವಾಗ ಭೂಪಟವನ್ನು ಕುರುಡಾಗಿ ನೋಡಿ ಊರು ಕೇರಿಗಳ ಹೆಸರನ್ನು ಉರುಹೊಡೆದದ್ದಷ್ಟೇ..
ನನ್ನ ಎರಡನೆಯ ಮಗ ಶಶಾಂಕ ಇಂಜನಿಯರಿ೦ಗ್ ಮುಗಿಸಿ, ಅಮೇರಿಕಾದಲ್ಲಿ ಓದಲು ಹೊರಟ. ಅವನ ಓದು, ಜಿ. ಆರ್. ಇ. ಅಂಕ, ವಿದ್ಯಾರ್ಥಿ ವೀಸಾ ಎಲ್ಲವೂ ಅನುಕೂಲವಾಗಿ ಒದಗಿ ಬಂದದ್ದರಿ೦ದ ಅವನು ಬಫಲೋ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿ ಸೇರಲು ಸಾಧ್ಯವಾಯಿತು. ಆ ಹೊತ್ತಿನಲ್ಲಿ ಕೂಡ ನಾನು ಅಮೇರಿಕಾಗೆ ಹೋಗುವೆನೆಂದು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ನನಗೆ ಅಮೇರಿಕಾ ದೇಶ ಅಂತಹ ಆಕರ್ಷಕವಾಗಿ ಕಂಡಿರಲಿಲ್ಲ. ನೋಡಿದರೆ ಯೂರೋಪನ್ನು ನೋಡಬೇಕು. ಅಮೇರಿಕಾದಲ್ಲಿ ಏನಿದೆ? ಎಂದು ಈಗಲೂ ನಂಬುವವಳು ನಾನು. ಮಗ ತನ್ನ ಎಂ.ಎಸ್. ಪದವಿಯನ್ನು ಯಶಸ್ವಿಯಾಗಿ ಮುಗಿಸಿದ. ಘಟಿಕೋತ್ಸವಕ್ಕೆ ಎಲ್ಲಾ ತಾಯಿ ತಂದೆಯರೂ ಅಮೇರಿಕಾಕ್ಕೆ ಹೋಗುವ ಪರಿಪಾಠವಿದೆ. ನಮ್ಮ ಮಗನೂ ನಮ್ಮನ್ನು ಅಲ್ಲಿಗೆ ಬರುವಂತೆ ಒತ್ತಾಯಿಸಿದ.
ಅಮೇರಿಕಾಕ್ಕೆ ಹೊರಡಲು ಮಾಡಿಕೊಂಡ ನಮ್ಮ ತಯಾರಿ, ವೀಸಾ ರಾದ್ಧಾಂತ ಎಲ್ಲವನ್ನು ಬರೆಯುತ್ತಾ ಹೋದರೆ ಅದು ಇನ್ನೊಂದು ಗ್ರಂಥವೇ ಆಗಬಹುದು.
ಹೀಗೆ ಹೊರಟು ನಿಂತಾಗ ಅಪರಿಚಿತ ನಾಡಿಗೆ ಹೋಗುವ ಆತಂಕ, ಎಲ್ಲವೂ ಸರಿಯಾಗಿ ನಡೆಯುವುದೋ ಇಲ್ಲವೋ ಎನ್ನುವ ಶಂಕೆ ಎಲ್ಲವನ್ನೂ ಹೊತ್ತುಕೊಂಡು ನಾವು ದೋಹಾದಿಂದ ಫಿಲೆಡೆಲ್ಫಿಯಾ ಅಲ್ಲಿಂದ ಬಫಲೋ ನಿಲ್ದಾಣಕ್ಕೆ ಬಂದು ತಲಪಿದೆವು. ‘ಒಂದು ಎಮ್ಮೆಯ ನಾಡಿನಿಂದ ಇನ್ನೊಂದು ಎಮ್ಮೆಯ ನಾಡಿಗೆ!!!’ ಭಾಷೆ ಸರಿಯಾಗಿ ಗೊತ್ತಿಲ್ಲದ, ಅಪರಿಚಿತ ನೆಲದ ಮೇಲೆ ಕಂಡು ಕಾಣದ ಜನರ ನಡುವೆ ಅನಾಮಿಕರಾದ ನಾವು ಬಂದು ಸೇರಿದ್ದು ಸಾಹಸವೆಂದೇ ನನಗೆ ತೋರಿತು. ಅಲ್ಲಿ ಕಂಡ ಬೆರಗನ್ನು, ಅಪರಿಚಿತ ದೇಶ, ನನ್ನ ಭಯವನ್ನು ಕಳೆದ ಬಗೆಯನ್ನು ಇಲ್ಲಿ ದಾಖಲಿಸಿದ್ದೇನೆ. ಎರಡನೆಯ ಮತ್ತು ಮೂರನೆಯ ಬಾರಿ ೨೦೨೨, ೨೦೨೩ ರಲ್ಲಿ ಮತ್ತೆ ಅಮೇರಿಕಾದ ವಾಷಿಂಗ್ಟನ್ ರಾಜ್ಯದ ಸಿಯಾಟೆಲ್ ಗೆ ಭೇಟಿಯಿತ್ತಾಗ ಈ ಭಯ ಮತ್ತು ಬೆರಗು ಕಮ್ಮಿಯಾಯಿತು. ಅದನ್ನು ಕೂಡ ಇಲ್ಲಿ ದಾಖಲಿಸಿದ್ದೇವೆ.
ಸಿಯಾಟಲ್ ನಗರವನ್ನು ಕೇಂದ್ರವಾಗಿಟ್ಟುಕೊ೦ಡು ನಾವು ಒರೆಗಾನ್, ಅರಿಜೋನಾ, ಕ್ಯಾಲಿಫೋರ್ನಿಯಾ, ನೆವಾಡ ಮುಂತಾದ ರಾಜ್ಯಗಳಿಗೆ ಪ್ರವಾಸ ಕೈಕೊಂಡೆವು. ಅಲ್ಲಿ ಹೊಸ ಸಾಂಸ್ಕೃತಿಕ ವಿವರಗಳಿಗೆ ತೆರೆದುಕೊಳ್ಳುವಾಗಿನ ವಿಸ್ಮಯವನ್ನು ಇಲ್ಲಿ ದಾಖಲಿಸಿದ್ದೇವೆ. ನಮ್ಮ ಕಣ್ಣಿಗೆ ಬಿದ್ದ ವಿವರಗಳಿವು. ಅಮೇರಿಕಾದಂತಹ ದೊಡ್ಡ ಭೂಪ್ರದೇಶಕ್ಕೆ ತನ್ನದೇ ಆದ ವಿಭಿನ್ನ ಕಾಲದೇಶಗಳು ಇವೆ ಎಂಬ ಗ್ರಹಿಕೆಯನ್ನು ಇಟ್ಟುಕೊಂಡೇ ಬರೆದಂತಹ ಇಂತಹ ಟಿಪ್ಪಣಿಗಳನ್ನು ಓದುಗರೂ ಸಹಾ ಅದೇ ನೆಲೆಯಲ್ಲಿ ಗ್ರಹಿಸುತ್ತಾರೆ ಎನ್ನುವ ನಂಬಿಕೆ ನಮಗೆ ಇದೆ.
ಈ ನನ್ನ ಬರಹಗಳನ್ನು ಆಗಾಗ್ಗೆ ನಾನು ಮುಖಹೊತ್ತಿಗೆಯಲ್ಲಿ ಪ್ರಕಟಿಸಿದಾಗ ಬಹಳ ಜನ ನನ್ನ ಸ್ನೇಹಿತರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ನನ್ನ ಮಗ ಶಶಾಂಕ ನಮ್ಮನ್ನು ಅಮೇರಿಕಾಕ್ಕೆ ಕರೆಸಿಕೊಂಡು ಅಲ್ಲಿನ ಕೆಲವು ಭಾಗಗಳನ್ನು ತೋರಿಸಿದ್ದಲ್ಲದೇ, ನಮ್ಮನ್ನು ತಿಂಗಳಾನುಗಟ್ಟಲೆ ನಿಭಾಯಿಸಿದ್ದಾನೆ. ಈ ಎಲ್ಲರಿಗೆ ನನ್ನ ಮನಃಪೂರ್ವಕ ಧನ್ಯವಾದಗಳು.






0 Comments