ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೃತಾ ಹೆಗಡೆ ಅಂಕಣ- ‘ಅದು ಮೂಗರ ಶಾಲೆಯಲ್ಲ’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

11

ಬೆಳಗ್ಗೆ 9 ಗಂಟೆ. ಮೈಸೂರಿನಲ್ಲಿ ರೈಲು ಇಳಿದಿದ್ದೇ, ಆಟೋ ಹತ್ತಿದ ನಾವು, ಸರಸ್ವತಿಪುರಂನಲ್ಲಿರುವ ನಳಪಾಕ​ ಹೋಟೆಲ್​ನಲ್ಲಿ ತಿಂಡಿ ತಿಂದೆವು. ಅದಾದಮೇಲೆ ಪಿ.ಎ.ಡಿ.ಸಿ ಸ್ಕೂಲ್​ನತ್ತ ಹೋಗಲು ಆಟೋ ತಲಾಶ್​ ಆರಂಭ ಮಾಡಿದೆವು. ಅದು ಅಕ್ಟೋಬರ್​ ತಿಂಗಳ ಎರಡನೇ ವಾರವಾದ್ದರಿಂದ ಸ್ವಚ್ಛ ಬಿಸಿಲು. 

ಬೆಳಗ್ಗೆ 9.30ಕ್ಕೇ ಮಧ್ಯಾನ್ಹವೇನೋ ಎಂಬಂಥ ಕಣ್ಕುಕ್ಕುವ ಸೂರ್ಯರಶ್ಮಿ. ಎರಡ್ಮೂರು ಖಾಲಿ ಆಟೋಗಳಿಗೆ ಕೈ ಮಾಡಿದರೂ, ಅವರ ಸಮಸ್ಯೆ ಏನಿತ್ತೋ ಏನೋ ನಿಲ್ಲಿಸಲೇ ಇಲ್ಲ. ಪ್ಯಣ್ಯಕ್ಕೆ ಮತ್ತೊಬ್ಬ ಆಟೋದವನು ವಿರುದ್ಧ ದಿಕ್ಕಿಗೆ ಹೋಗುತ್ತಿದ್ದವನು ಯೂಟರ್ನ್​ ಮಾಡಿಕೊಂಡು ನಮ್ಮತ್ತ ಬಂದ. ‘ಜನತಾ ನಗರ’ ಎಂದರು ದೀಪಾ ಅಕ್ಕ. ‘ಜನತಾ ನಗರದಲ್ಲಿ ಎಲ್ಲಿ..?’ ಕೇಳಿದ ಆತ. ‘ಪಿ.ಎ.ಡಿ.ಸಿ ಸ್ಕೂಲ್’ ಅಂತ ದೀಪಕ್ಕಾ ಹೇಳುತ್ತಿದ್ದಂತೆ ಆತ, ‘ಓಹೋ, ಕಿವುಡು ಮೂಗರ ಶಾಲೆನಾ…? ಬನ್ನಿ ಕೂತ್ಕಳಿ. ಕರ್ಕಂಡ್​ ಒಯ್ತಿನಿ’ ಅಂದ. ‘ಸರ್​ ಅದು ಕಿವುಡು ಮಕ್ಕಳ ಶಾಲೆ. ಮೂಗರ ಶಾಲೆಯಲ್ಲ. ಅಲ್ಲಿರೋ ಪ್ರತಿಯೊಂದು ಮಗುವೂ ಮಾತನಾಡುತ್ತೆ’ ನೇರವಾಗಿ ಹೇಳಿದರು.

‘ಅದೆಲ್ಲ ನಮ್ಗೆ ಗೊತ್ತಿಲ್ಲ ತಾಯಿ. ಎಲ್ರೂ ಹೇಳ್ದಾಂಗೆ ನಾನೂ ಹೇಳ್ದೆ’ ಎಂದು ನಗುತ್ತಾ ಉತ್ತರ ಕೊಟ್ಟ ಅವನಿಗೆ, ‘ಪರವಾಗಿಲ್ಲ. ಇನ್ಮುಂದೆ ಹಾಗೆ ಹೇಳಬೇಡಿ. ಕಿವುಡು ಮಕ್ಕಳ ಶಾಲೆ ಅಂತಷ್ಟೇ ಹೇಳಿ ಆಯ್ತಾ..’ ಎಂದು ನಯವಾಗಿಸೂಚಿಸಿದ್ದರು ದೀಪಾ ಅಕ್ಕ. ಅವರ ಧಿಟ್ಟ ನಿಲುವು ನನಗೆ ಇಷ್ಟವಾಯ್ತು. ‘ಕಿವುಡು’ ಶಬ್ಧದ ಜತೆ ಜೋಡಿ ಶಬ್ಧವಾಗಿಯೇ ಜನಜನಿತವಾಗಿರುವ ‘ಮೂಗ’ ಅನ್ನೋ ಪದವನ್ನೇ ಬಿಡಿಸಿ ಇಡುವ ಪ್ರಯತ್ನವಿದು. ‘ಶಾಲೆಯಲ್ಲಿರುವ ಎಲ್ಲ ಮಗುವೂ ಮಾತನಾಡುತ್ತೆ ಅಂದ ಮೇಲೆ ನನ್ನ ಮಗುವಿಗೂ ಆ ಶಾಲೆ ಮಾತು ಕಲಿಸಿಯೇ ಕಲಿಸುತ್ತೆ’ ಮನಸ್ಸಿನ ಮೂಲೆಯಲ್ಲೆಲ್ಲೋ ಭರವಸೆ ಮತ್ತೆ ಬಂದು ಕುಳಿತಂತೆನಿಸಿತು.  

ಆಟೋ ‘ಪಿ.ಎ.ಡಿ.ಸಿ’ ಕಾಂಪೌಂಡ್​ ಎದುರು ನಿಂತಿತ್ತು. ಆಗ ಸಮಯ ಸರಿಯಾಗಿ ಬೆಳಗ್ಗೆ 10 ಗಂಟೆ. ದೀಪಾ ಅಕ್ಕಾ ಆಟೋ ಡ್ರೈವರ್​ಗೆ ಹಣ ಕೊಡುತ್ತಿರುವಾಗ, ನಾನು ಪಿ.ಎ.ಡಿ.ಸಿ ಶಾಲೆಯತ್ತ ನೋಡಿದೆ. ನೋಡಲು ಸರ್ಕಾರಿ ಪ್ರೌಢ ಶಾಲೆಯ ಥರ ಕಾಣುವ ಕಟ್ಟಡ. ಎರಡು ಅಂತಸ್ತಿನ ಶಾಲೆಯ ಮುಂದೆ ವಿಶಾಲವಾದ ಜಾಗ. ಸುತ್ತಮುತ್ತ ಹೂವು ಹಣ್ಣಿನ ಮರಗಿಡಗಳು. ಕಿವಿಗೆ ಕೇಳಿಸುತ್ತಿದ್ದ ಅಳಿಲು, ಹಕ್ಕಿಗಳ ಚಿಲಿಪಿಲಿ ನಾದ. 

ಶಾಲೆಯ ಕಾಂಪೌಂಡ್​ನ ದೊಡ್ಡ ಗೇಟ್​ ಪಕ್ಕದಲ್ಲೊಂದು ಚಿಕ್ಕ ಗೇಟ್​ ಗೇಟ್​ನ ಮುಂದೆ ಕುರ್ಚಿ ಹಾಕಿಕೊಂಡು ಗೇಟ್​ ಕಾಯುತ್ತಾ ಕೂತಿದ್ದ ಒಬ್ಬರು ತಾತ, ದೀಪಾ ಅಕ್ಕಾರನ್ನು ಕಂಡಿದ್ದೇ, ಖುಷಿಯಿಂದ ಮಾತನಾಡಿಸಿದರು. ‘ಹಾಂ… ನಾವೆಲ್ಲ ಆರಾಮ್​ನೀವು ಹೇಗಿದ್ದೀರಿ’ ಎನ್ನುತ್ತಾ ಮುಚ್ಚಿದ್ದ ದೊಡ್ಡ ಗೇಟ್​ನ ಪಕ್ಕದಲ್ಲಿದ್ದ ಚಿಕ್ಕ ಗೇಟ್​​ನ್ನ ಕೈಯ್ಯಿಂದ ತಳ್ಳಿ ಒಳಹೋದ ದೀಪಾ ಅಕ್ಕಾರನ್ನೇ ನಾನು ಹಿಂಬಾಲಿಸಿದೆ.

ಕಟ್ಟಡದ ಮೇಲೆ  ದೊಡ್ಡದಾಗಿ ‘ರೋಟರಿ ವೆಸ್ಟ್​ ಅಂಡ್​ ಪೇರೆಂಟ್ಸ್​ ಅಸೋಸಿಯೇಶನ್​ ಆಫ್​ ಡೆಫ್​ ಚಿಲ್ಡ್ರನ್​’ ಅಂತ ಬರೆದಿತ್ತು. ‘ಪಿ.ಎ.ಡಿ.ಸಿ’ ಎಂದು ನನ್ನೊಳಗೇ ಹೇಳಿಕೊಂಡೆ. ‘ಅಮೃತಾ ನೋಡು ಇದೇ ನಮ್ಮ ಶಾಲೆ ‘ಪಿ.ಎ.ಡಿ.ಸಿ’. ಮಧ್ಯದ ಕಟ್ಟಡವಿದೆಯಲ್ಲ ಅದು ಶಾಲೆ. ಎಡ, ಬಲದಲ್ಲಿ ಇರುವುದು  ಹಾಸ್ಟೆಲ್​ಕಟ್ಟಡಗಳು. ಶಾಲೆಯ ಕಾಂಪೌಂಡ್​ನ ಒಳಗೆ ಆಗಷ್ಟೇ ಹೊಸದಾಗಿ ತಯಾರಾಗಿ ನಿಂತಿದ್ದ ಕಟ್ಟಡವನ್ನು ತೋರಿಸುತ್ತಾ, ‘ಇದು ಕಾಂಪ್ಲೆಕ್ಸ್​ ಕಟ್ಟಡ’ ಇನ್ನೂ ಉದ್ಘಾಟನೆಯಾಗಿಲ್ಲ ಅಂದರು. ಅವರು ತೋರಿಸಿದ ಕಟ್ಟಡಗಳನ್ನೆಲ್ಲ ಮತ್ತೊಮ್ಮೆ ನೋಡಿದೆ. 

ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಂತೆ, ಸಾಲಾಗಿ ಶಿಸ್ತಿನಿಂದ ಇಟ್ಟ ಚಪ್ಪಲಿಗಳು ಕಂಡವು. ಎಲ್ಲ ದೊಡ್ಡ ಚಪ್ಪಲಿಗಳ ಮಧ್ಯದಲ್ಲಿ ಚಿಕ್ಕ ಚಪ್ಪಲಿಗಳು ಬೆಚ್ಚಗೆ ಕೂತಿದ್ದವು. ತಾಯಿಯರು ಮತ್ತು ಮಕ್ಕಳ ಚಪ್ಪಲಿಗಳು ಅವು ಎಂದು ನೋಡಿದ ತಕ್ಷಣ ಗೊತ್ತಾಗುವ ಹಾಗಿತ್ತು. ಕಾರಿಡಾರ್​ನಲ್ಲಿ ಯಾರೂ ಕಾಣಿಸಲಿಲ್ಲ. ಬಲಬದಿಯಿಂದ ಪ್ರಾರ್ಥನೆಯ ಶಬ್ಧ ಕೇಳಿಸುತ್ತಿತ್ತು. ಯಾರೋ ಒಬ್ಬರು ಹೇಳಿಕೊಡುತ್ತಿದ್ದ ಪ್ರಾರ್ಥನೆಯನ್ನು, ಎಲ್ಲರೂ ಸೇರಿ ಹೇಳುತ್ತಿದ್ದುದ್ದು ಕಿವಿಗೆ ಬಿತ್ತು. ದೀಪಾಅಕ್ಕ ಎಡ ಬದಿಗೆ ಹೊರಳಿ ಆಫೀಸ್ ರೂಮ್​ನೊಳಗೆ ಹೋದರು. ಅಲ್ಲಿಯೇ ಇದ್ದ ಸರ್​ ಒಬ್ಬರ ಬಳಿ ಮಾತನಾಡಿ ಬಂದ ದೀಪಾಅಕ್ಕಾ, ‘ಹಾಸ್ಟೆಲ್​ನಲ್ಲಿ ರೂಂ ಖಾಲಿ ಇಲ್ವಂತೆ ಅಮೃತಾ’ ಎಂದರು. ನಾನು ಆಯ್ತು ಅನ್ನುವಂತೆ ಗೋಣು ಅಲ್ಲಾಡಿಸಿದೆ. ‘ಪ್ರಾರ್ಥನೆ ನಡೆಯುತ್ತಿದೆ. ಟೀಚರ್ಸ್​ ಎಲ್ಲ ಅಲ್ಲೇ ಇರುತ್ತಾರೆ ಬಾ ಹೋಗೋಣ’ ಗಡಿಬಿಡಿಯಿಂದ ಹೊರಟ ಅವರ ಬೆನ್ನಹಿಂದೆ ನಾನೂ ಹೊರಟೆ.   

ತಾಯಂದಿರೆಲ್ಲ ಕುಳಿತಿದ್ದರು. ಮಕ್ಕಳೆಲ್ಲ ನಿಂತಿದ್ದರು. ಅಮ್ಮ ಮಕ್ಕಳು ಎದುರು-ಬದರಾಗಿದ್ದರು. ಪ್ರಾರ್ಥನೆ ಹೇಳಿಕೊಡುತ್ತಿದ್ದವರಿಗೆ ಎಲ್ಲ ಮಕ್ಕಳೂ ಬೆನ್ನು ಹಾಕಿ ನಿಂತು ತಮ್ಮ ತಮ್ಮ ಅಮ್ಮಂದಿರ ಮುಖ ನೋಡುತ್ತಿದ್ದರೆ, ಕುಳಿತಿದ್ದ ಎಲ್ಲ ತಾಯಂದಿರೂ ತಮ್ಮ ತಮ್ಮ ಮಕ್ಕಳನ್ನೇ ನೋಡುತ್ತಾ, ಪ್ರಾರ್ಥನೆ ಹೇಳಿಸುತ್ತಿದ್ದರು. ನನಗೆ ಈ ದೃಶ್ಯ ಅತ್ಯಂತ ವಿಶೇಷವಾಗಿ ಕಂಡಿತ್ತು. ಪ್ರಾರ್ಥನೆ ನಡೆಯುತ್ತಿರುವ ತರಗತಿಯ ಒಳಹೋಗದೇ, ಹೊರಗಿನಿಂದಲೇ ಇದೆಲ್ಲ ನೋಡಿದೆ. 

ಎರಡೂ ಕಿವಿಗೆ ಶ್ರವಣ ಸಾಧನ ಹಾಕಿಕೊಂಡು, ಶಿಸ್ತಿನಿಂದ ಪ್ರಾರ್ಥನೆ ಹೇಳುತ್ತಿದ್ದ ಮುದ್ದು ಮಕ್ಕಳ ಮುಖಗಳನ್ನ ಗಮನಿಸುತ್ತಾ ಒಂದ್ಹತ್ತು ನಿಮಿಷ ಕಿಟಕಿಯಲ್ಲಿ ಕಳೆದುಹೋಗಿದ್ದೆ. ಪ್ರಾರ್ಥನೆ ಮುಗಿದಿತ್ತು. ದೀಪಕ್ಕಾ ಕರೆದರು. ಅಲ್ಲಿದ್ದ ಎಲ್ಲ ಶಿಕ್ಷಕಿಯರಿಗೆ ನನ್ನ ಪರಿಚಯಿಸಿದರು, ‘ನಮಸ್ತೆ ಮೇಡಮ್’ ಎನ್ನುತ್ತಿದ್ದ ನನ್ನ ತಡೆದ ದೀಪಾ ಅಕ್ಕಾ. ‘ಇಲ್ಲಿ ನೀನು ಯಾರನ್ನೂ ಮೇಡಮ್​, ಮ್ಯಾಮ್​, ಮಿಸ್​, ಅನ್ನಬಾರದು. ಎಲ್ಲ ಶಿಕ್ಷಕರಿಯರಿಗೂ ಆಂಟೀ ಅಂತಲೇ ಕರೆಯಬೇಕು. ಇಲ್ಲಿರುವ ಎಲ್ಲ ಮಕ್ಕಳಿಗೆ ನೀನೂ ಕೂಡ ‘ಆಂಟಿ’ಯೇ. ಆದರೆ ಉಳಿದ ತಾಯಂದಿರು ಮತ್ತು ಶಿಕ್ಷಕರ ಪಾಲಿಗೆ ಇವತ್ತಿನಿಂದ ನೀನು ‘ಅಥರ್ವ ಅಮ್ಮ’ ಎಂದರು ನಗುತ್ತಾ. ‘ಅಥರ್ವ ಅಮ್ಮ’ ಅಂತ ಮನಸ್ಸಿನಲ್ಲಿಯೇ ಹೇಳಿಕೊಂಡೆ. ಚೆನ್ನಾಗಿದೆ ಅನ್ನಿಸತೊಡಗಿತ್ತು.  

ಅಲ್ಲಿದ್ದ ಒಬ್ಬರು ಹಿರಿಯ ಆಂಟೀ ‘ಮಗು ಎಲ್ಲಿ…?’ ಕೇಳಿದರು. ‘ಅದು 1 ವರ್ಷ 8 ತಿಂಗಳ ಮಗು. ಇವತ್ತು ಅಡ್ಮೀಶನ್​ ಆದ್ರೆ, ಇಲ್ಲೆಲ್ಲ ಮನೆ ಹುಡುಕೋ ಕೆಲಸನೂ ಇಟ್ಕೊಂಡ್​ ಬಂದಿದೀವಿ. ಹೀಗಾಗಿ ಮಗೂನಾ ಮನೆಲ್ಲೇ ಬಿಟ್ಟು ಬಂದಿದೀವಿ’ ಎಂದೆ.  ಮಗುವನ್ನ ಎಲ್ಲೆಲ್ಲಿ ಪರೀಕ್ಷೆ ಮಾಡಿಸಿದ್ದೇವೆ, ಎಷ್ಟು ಶ್ರವಣ ದೋಷವಿದೆ, ಮಗುವಿನ ಚಟುವಟಿಕೆಯಲ್ಲ ಹೇಗಿದೆ ಎಂಬುದನ್ನೆಲ್ಲ ಅವರು ವಿಚಾರಿಸಿದರು. ‘ನೀವು ನಿಮ್ಮ ಮನೆಯವರ ಜತೆ ಮಗು ಕರ್ಕೊಂಡ್​ಬನ್ನಿ, ಮಗುವನ್ನ ನೋಡದೇ ಅಡ್ಮೀಶನ್​ ಮಾಡಿಸ್ಕೊಳಲ್ಲ.  ಆಫೀಸ್ ರೂಮಿನಲ್ಲಿರುವ ರಘುವೀರ್​ ಅಂಕಲ್​ ನೊಮ್ಮೆ ಕೇಳಿ ನೋಡಿ.’ ಸೂಚಿಸಿದರು ಅವರು. ನಾನು ಗೊಂದಲಗೊಂಡೆ. ಆಗ ಮುಖ್ಯಾಧ್ಯಾಪಕಿಯಾಗಿದ್ದ ಗಾಯತ್ರಿ ಆಂಟೀ  ಆವತ್ತೇ ರಜಾದಲ್ಲಿದ್ದ ಕಾರಣ, ಅವರ ಭೇಟಿಯೂ ನಮಗೆ ಅಸಾಧ್ಯವಾಗಿತ್ತು. ‘ಇವತ್ತು ಅಥರ್ವನ ದಾಖಲಾತಿ ಸಾಧ್ಯವಿಲ್ಲವೆಂದಾದರೆ, ಮತ್ತೆ ಬಂದರಾಯಿತು’ ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡಿಕೊಂಡೆ. 

ಆಫೀಸ್​ ರೂಮ್​ನಲ್ಲಿದ್ದ ರಘುವೀರ್​ ಅಂಕಲ್​ ಬಳಿ ದೀಪಾ ಅಕ್ಕ ಅಥರ್ವನ ಅಡ್ಮೀಶನ್ ​ಕುರಿತು ಮಾತನಾಡಿದರು. ‘ಮಗುವನ್ನ ನೋಡದೇ, ಮಗುವಿನ ತಂದೆ ತಾಯಿಯ ಸಂದರ್ಶಿಸದೇ  ಅಡ್ಮೀಶನ್​ ಕೊಡೋಕಾಗಲ್ಲ’ ಅಂತ ವಿನಮ್ರವಾಗಿ ಹೇಳಿದರು ಅವರು. ಆದರೆ, ದೀಪಾ ಅಕ್ಕಾ ‘ಇಂಟರ್​ವ್ಯೂ ನಾನು ಮಾಡಿದ್ದೇನೆ. ಮಗುವನ್ನ ನೋಡಿ, ಮಾತನಾಡಿಸಿದ್ದೇನೆ. ತಂದೆ ತಾಯಿಯರನ್ನ ಜತೆಯಲ್ಲಿಯೇ ಕೂರಿಸಿಕೊಂಡು ನಮ್ಮ ಸ್ಕೂಲ್​ನ ನಿಯಮಾವಳಿಗಳೆಲ್ಲವನ್ನೂ ತಿಳಿಸಿದ್ದೇನೆ. ಗಾಯತ್ರಿ ಆಂಟೀಗೂ ಈಗಷ್ಟೇ ಫೋನ್​ ಮಾಡಿದ್ದೆ. ಅಡ್ಮೀಶನ್​ಗೆ ಬೇಕಾದ ಡಾಕ್ಯುಮೆಂಟ್ಸ್​ ಎಲ್ಲವೂ ಇದೆ. ದಯವಿಟ್ಟು ಅಡ್ಮೀಶನ್​ ಮಾಡಿಸಿಕೊಳ್ಳಿ’ ಅಂದರು.

ಅದೇ ಶಾಲೆಯ ಹಿರಿಯ ತಾಯಿ ಹಾಗೂ ಪಿ.ಎ.ಡಿ.ಸಿ ಕಮೀಟಿಯ ಸದಸ್ಯರು ಕೂಡ ಆಗಿರುವ ದೀಪಾ ಅವರ ಕೋರಿಕೆಯನ್ನ ಮನ್ನಿಸಿ, ಮಗುವಿನ ಅನುಪಸ್ಥಿತಿಯಲ್ಲಿಯೇ ಅಡ್ಮಿಶನ್ ಮಾಡಿಕೊಳ್ಳಲೊಪ್ಪಿದ ಅವರು, ಅಡ್ಮೀಶನ್​ ಪ್ರೊಸೀಜರ್​ ಶುರು ಮಾಡಿದರು. ‘ಇವರೇ ನೋಡು ನಮ್ಮ ಶ್ರೀನಿವಾಸ ಮಾಮಾ’ ಅಲ್ಲಿಯೇ ಇದ್ದ ಫೋಟೋ ತೋರಿಸಿ ಕೈ ಮುಗಿದರು ದೀಪಕ್ಕಾ. ನಾನು ಅವರನ್ನೇ ಅನುಕರಿಸುತ್ತಾ, ತಾಜಾ ಹೂವು ಏರಿಸಿ, ಮುತ್ತಿನ ಮಾಲೆ ಹಾಕಿದ್ದ ಆ ಫೋಟೋವನ್ನ ಹತ್ತಿರದಿಂದ ನೋಡಿದೆ. ರೈಲಿನಲ್ಲಿ ದೀಪಕ್ಕಾ ಹೇಳಿದ ಅವರ ಕಥೆ ನೆನಪಾಯ್ತು. 

ಅಡ್ಮೀಶನ್​ ಪ್ರೋಸೀಜರ್​ ಎಲ್ಲವೂ ಮುಗಿದ ಮೇಲೆ, ರಘುವೀರ್​ ಅಂಕಲ್​ ಒಂದು ಪುಸ್ತಕವನ್ನ ನನ್ನ ಕೈಗಿತ್ತರು. ‘ಕಿವುಡು ಮಕ್ಕಳಿಗೆ ಕಲಿಸುವ ವಿಧಾನ’ ಎಂಬ ಪುಸ್ತಕವದು. ನಾನು ಕುತೂಹಲದಿಂದ ಆ ಪುಸ್ತಕವನ್ನು ನೋಡತೊಡಗಿದೆ. ‘ಇವತ್ತಿನಿಂದ ಈ ಪುಸ್ತಕವೇ ನಿನ್ನ ಭಗವದ್ಗೀತೆ !  ಇವತ್ತೇ ಇದನ್ನ ಓದು. ಈ ಪುಸ್ತಕ ಬರೆದಿದ್ದು ನಮ್ಮ ಸ್ಕೂಲ್​ನ, ಪಿ.ಎ.ಡಿ.ಸಿ ಕಮೀಟಿಯ ಕಾರ್ಯದರ್ಶಿಗಳಾಗಿರುವ ರತ್ನಾ ಆಂಟಿ. ಅವರು ಈ ಶಾಲೆಯ ಹಿರಿಯ ತಾಯಿಯೂ ಹೌದು. ಹಿರಿಯ ಶಿಕ್ಷಕರೂ ಹೌದು’ ಎಂದರು ದೀಪಕ್ಕಾ. 

ಪುಸ್ತಕದ ಹಿಂದಿದ್ದ ಅವರ ಫೋಟೋವನ್ನೇ ನೋಡತೊಡಗಿದೆ. ‘ಅವರು ಈಗ ಎಲ್ಲಿ ಸಿಗ್ತಾರೆ ನಮಗೆ..?’ ಪ್ರಶ್ನಿಸಿದೆ. ‘ಅವರು ಈಗ ಇರೋದು ಬೆಂಗಳೂರಲ್ಲೇ. ಚಂದ್ರಶೇಖರ ಇನ್​ಸ್ಟಿಟ್ಯೂಟ್​ನಲ್ಲೇ ಮದರ್ಸ್​ ಟ್ರೈನಿಂಗ್​ ಸೆಂಟರ್​ನ ಕೋಆರ್ಡಿನೇಟರ್​ ಆಗಿದ್ದಾರೆ’ ‘ಓಹೋ.. ಆವತ್ತು ನಾವು ಅಥರ್ವನ ಕಿವಿ ಪರೀಕ್ಷೆಯ ಫಲಿತಾಂಶ ಪಡೆದು ಬಂದಮೇಲೆ ವಾಪಾಸ್​ ಅಲ್ಲಿಗೆ ಹೋಗಿಯೇ ಇಲ್ಲ. ಹೋಗಿದ್ದರೆ ಅಲ್ಲಿ ರತ್ನಾಆಂಟಿ ನಮಗೆ ಸಿಗುತ್ತಿದ್ದರೋ ಏನೋ..’ ಅಂದುಕೊಂಡೆ ಮನಸ್ಸಿನಲ್ಲಿಯೇ. ‘ಹದಿನೈದು ದಿನಕ್ಕೊಮ್ಮೆ ರತ್ನಾ ಆಂಟಿ ಬರ್ತಾರೆ, ಆವಾಗ ನೀವು ಅವರನ್ನ ಭೇಟಿ ಮಾಡಬಹುದು’ ಅಂಕಲ್​ ನನಗೆ ಹೇಳಿದರು. ನಾನು ಆಗಲಿ ಅಂದೆ.

ಅಷ್ಟರಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಕೊಠಡಿಯಿಂದ ಗದ್ದಲ ಕೇಳಿಬಂತು. ನಾಲ್ಕಾರು ಮಕ್ಕಳು ರೊಯ್​ನೆ ಕಾರಿಡಾರ್​ನಲ್ಲಿ ಓಡಿಹೋದರು. ಅಮ್ಮಂದಿರೆಲ್ಲ ಆಫೀಸ್​ ರೂಮ್​ ದಾಟಿ ಹೋಗುತ್ತಿದ್ದರು. ‘ಪ್ರಾರ್ಥನೆ ಮುಗಿಯಿತು ಅಮೃತಾ, ಬಾ ಯಾವುದಾದರೂ ಮಗುವನ್ನು ನಿನಗೆ ಭೇಟಿ ಮಾಡಿಸ್ತೀನಿ’ ಎಂದ ದೀಪಕ್ಕಾ ಆಫೀಸ್​ ರೂಮ್​ನ ಹೊರಗೆ ಸ್ಪಲ್ಪ ಹೊತ್ತು ನಿಂತು, ಒಬ್ಬ ತಾಯಿ ಮಗುವನ್ನು ಕರೆದರು. ದೀಪಕ್ಕಾರನ್ನು ಕಂಡಿದ್ದೇ ‘ನಮಸ್ತೆ ಆಂಟೀ’ ಎಂದ ಆ ತಾಯಿ, ತನ್ನ ಮಗನ ಬಳಿ ‘ನೋಡು ದೀಪಾ ಆಂಟಿ ಬಂದಿದ್ದಾರೆ. ನಮಸ್ತೆ ಹೇಳು’ ಅಂದರು. ಆ ಮಗು ಕೈಜೋಡಿಸುತ್ತಾ, ದೀಪಕ್ಕಾರ ಮುಖವನ್ನ ತನ್ನ ಗೋಣೆತ್ತಿ ನೋಡುತ್ತಾ ಸ್ಪಷ್ಟವಾಗಿ ‘ನಮಸ್ತೆ ಆಂಟೀ..’ ರಾಗವಾಗಿ ಹೇಳಿದ. ‘ವಾಹ್​ ಎಂಥ ಸ್ಪಷ್ಟತೆ..!’ ಖುಷಿಯಾಗಿ ಕಣ್ಣಂಚು ಒದ್ದೆಯಾಯ್ತು ನನಗೆ.

‘ಇವನು ಸಚಿತ್​, ಈಗ ಇವನಿಗೆ ನಾಲ್ಕು ವರ್ಷ ಕಾಕ್ಲಿಯರ್​ ಇಂಪ್ಲಾಂಟ್​ ಆಗಿದೆ. ಸ್ಪಷ್ಟ ಮಾತು ಬಂದಿದೆ ನೋಡು’ ಎಂದು ಅವನನ್ನ ನನಗೆ ಪರಿಚಯ ಮಾಡಿಸುತ್ತಲೇ, ಹಲವಾರು ತುಣುಕು ಪ್ರಶ್ನೆಗಳನ್ನು ಅವನಿಗೆ ಕೇಳಿದ್ದರು. ಅವನು ಅವನಮ್ಮನ ಹಿಂದೆ ಅಡಗುತ್ತಾ, ನಾಚಿಕೊಳ್ಳುತ್ತಲೇ ಪಟ ಪಟ ಉತ್ತರಿಸುತ್ತಿದ್ದ. ನನಗಂತೂ ಸಚಿತ್​ ಮಾತುಗಳನ್ನ ಕೇಳುತ್ತಲೇ ಇರಬೇಕೆಂಬ ಭಾವ. ಇನ್ನೂ ನಾಲ್ಕಾರು ಮಕ್ಕಳು ಚಕಚಕನೆ ಮಾತನಾಡುವುದನ್ನ ನೋಡಿದೆ. ಅವರ ಅಮ್ಮಂದಿರೊಂದಿಗೆ ಮಾತನಾಡಿದೆ. ಭವಿಷ್ಯದಲ್ಲಿ ನನ್ನ ಮಗನೂ ಹೀಗೆಯೇ ಮಾತನಾಡುತ್ತಾನೆ ಅನ್ನಿಸತೊಡಗಿತು. ಅದ್ಯಾವುದೋ ಸಮಾಧಾನ ನನ್ನೆದೆಯನ್ನ ತಂಪಾಗಿಸಿತು. 

ಪಿ.ಎ.ಡಿ.ಸಿ ಶಾಲೆಗೆ ಬಂದಿದ್ದ ನಮ್ಮ ಉದ್ದೇಶ ನೆರವೇರಿತ್ತು. ಈಗ ಇಲ್ಲೇ ಸುತ್ತಮುತ್ತ ಮನೆ ಹುಡುಕುವುದೊಂದು ಕೆಲಸ ಬಾಕಿ ಇತ್ತು. ದೀಪಕ್ಕಾ ಹತ್ತಾರು ವರ್ಷ ಅದೇ ಪ್ರದೇಶದಲ್ಲಿಯೇ ಇದ್ದು, ಅನುಭವವಿದ್ದರಿಂದ ಸುತ್ತ ಮುತ್ತ ರಸ್ತೆಗಳನ್ನೆಲ್ಲ ಸುತ್ತಿ ಸುತ್ತಿ ಖಾಲಿ ಮನೆಗಳನ್ನ ಹುಡುಕಿದೆವು. ‘ಟು ಲೆಟ್​’ ಬೋರ್ಡ್ ಇರುವ ಮನೆಗಳಿಗೆಲ್ಲ ನುಗ್ಗಿ ನೋಡಿದೆವು. ಸ್ಕೂಲ್​ನಿಂದ ತುಂಬಾ ದೂರವಿಲ್ಲದಂಥ ಚಿಕ್ಕ ಮನೆ ನಮಗೆ ಬೇಕಿತ್ತು. ಮಧ್ಯಾಹ್ನ ೧.೩೦ರ ತನಕ ಸುತ್ತಾಡಿ ಸುಸ್ತಾದೆವು. ದೀಪಕ್ಕಾ ಮಧ್ಯಾಹ್ನದ ನಮ್ಮ ಊಟಕ್ಕೂ ವ್ಯವಸ್ಥೆ ಮಾಡಿದ್ದರು. ಜನತಾ ನಗರದಿಂದ ಸ್ವಲ್ಪ ದೂರ ಪ್ರಶಾಂತ ನಗರದಲ್ಲಿರುವ ‘ಆಶಾ ಪ್ರಕಾಶ್​’ ಎಂಬುವವರ ಮನೆಗೆ ಊಟಕ್ಕೆ ಕರೆದೊಯ್ದರು. 

ಆಗ ಹತ್ತನೇ ತರಗತಿಯಲ್ಲಿದ್ದ ಅವರ ಮಗ ‘ಪ್ರಜ್ವಲ್​’ ಕೂಡ ಪಿ.ಎ.ಡಿ.ಸಿಯ ಹಳೆಯವಿದ್ಯಾರ್ಥಿಯೇ. ನಾವು ಡೋರ್​ ಬೆಲ್​ ಒತ್ತಿದಾಗ ಬಾಗಿಲು ತೆಗೆದ ಪ್ರಜ್ವಲ್​ ಲಕ್ಷಣವಾಗಿದ್ದ. ‘ದೀಪಾ ಆಂಟೀ’ ಎನ್ನುತ್ತಾ ದೀಪಕ್ಕಾರನ್ನು ಮಾತನಾಡಿಸಿ ನನ್ನ ನೋಡಿ ನಕ್ಕು ಬನ್ನಿ ಬನ್ನಿ ಅಂದ. ಇವರ ಮನೆ ತುಂಬಾ ಆಪ್ತವಾಗಿತ್ತು. ಆಶಾ ಅವರೂ ಕೂಡ ನನಗೊಂದಷ್ಟು ಧೈರ್ಯ ಹೇಳಿದರು. ರುಚಿಯಾದ ಊಟ ಬಡಿಸಿದರು. ಪ್ರತಿಭಾವಂತ ಪ್ರಜ್ವಲ್​ನ ಸಾಧನೆಯನ್ನೆಲ್ಲ ವಿವರಿಸಿದರು. ಅವರ ಮನೆಯಲ್ಲಿ ಹಸಿವೂ ತಣಿದು, ಮನಸ್ಸೂ ತಿಳಿಯಾಯ್ತು.

ಊಟದ ನಂತರ ಮತ್ತೊಂದಿಷ್ಟು ರಸ್ತೆಗಳನ್ನ ಸುತ್ತುವ ಯೋಚನೆಯಿದ್ದರೂ ನಾಲ್ಕು ಗಂಟೆಯ ಟ್ರೈನ್​ಗೆ ವಾಪಾಸ್ ಬೆಂಗಳೂರಿಗೆ ಹೋಗಲೇಬೇಕಿತ್ತು ನಮಗೆ. ಹೀಗಾಗಿ, ಆಶಾ ಅವರ ಮನೆಯ ಅಕ್ಕಪಕ್ಕವೇ ಸ್ವಲ್ಪ ವಿಚಾರಿಸಿ, ಯಾವ ಮನೆಯೂ ಸರಿಕಾಣದೇ, ರೈಲ್ವೇ ಸ್ಟೇಶನ್​ಗೆ ಪಯಣ ಬೆಳೆಸಿದೆವು. ‘ನಿನ್ನ ಗಂಡನಿಗೆ  ವಾರದ ರಜೆಯಿದ್ದಾಗ, ಇಲ್ಲಿಗೆ ಬಂದು ಮನೆ ಹುಡುಕಿ. ಮನೆ ಇಬ್ಬರೂ ಸೇರಿಯೇ ಹುಡುಕೋದು ಒಳ್ಳೇದು’ ಎನ್ನುತ್ತಿದ್ದ ದೀಪಕ್ಕಾರನ್ನೇ ನೋಡುತ್ತಿದ್ದರೂ, ನನ್ನ ಮನಸ್ಸು ಮಾತ್ರ ಸಧ್ಯದಲ್ಲಿಯೇ ಮೈಸೂರಿನಲ್ಲಿ ಶುರುವಾಗಲಿದ್ದ ನನ್ನ ಜೀವನವನ್ನ ಕಲ್ಪಿಸಿಕೊಳ್ಳತೊಡಗಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

4 August, 2021

1 Comment

  1. Venkat

    ಅಮೃತಾ ಹೆಗಡೆ ಅಂಕಣ ಚೆನ್ನಾಗಿ ಮೂಡಿ ಬರುತಿದೆ.
    ಅದೇ ಜಾಗದಲ್ಲಿ (ಜನತಾ ನಗರ) “Rotary Dumb & Deaf School(R)” ಇದೆ .
    ಅದಕ್ಕಾಗಿ ಆಟೊದವನು “ಕಿವುಡು ಮೂಗರ ಶಾಲೆನಾ…?” ಅಂದಿರಬಹುದೇ?!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading