ಸಿಎಂ ಆದ್ರು ನಮ್ಮ ಅಹಿಂದ ಸಿದ್ದರಾಮಯ್ಯ
ಅವತ್ತು ಡಾ ರಾಜ್ಕುಮಾರ್ ಗೆ 60ರ ಸಂಭ್ರಮ,ಮೈಸೂರಿನ ಮಾನಸ ಗಂಗೋತ್ರಿಯ ಓಪನ್ ಏರ್ ಥಿಯೇಟರ್ ನಲ್ಲಿ ಕಿಕ್ಕಿರಿದ ಜನಸ್ತೋಮ, ಕೈಕಾಲು ಆಡಿಸಲಾಗದಷ್ಟು. ಭರ್ತಿ ಜನ. ಕೇಕೆ, ಉದ್ಗಾರ, ಉತ್ಸಾಹ ಪುಟಿದೇಳುತ್ತಿತ್ತು. ಕನ್ನಡ ಕುಲಕೋಟಿಗೆ ರಾಜಣ್ಣ ಹೇಗೋ ಅದೇ ರೀತಿ ಜನ ಸಮೂಹಕ್ಕೆ ಅಲ್ಲಿ ಅವತ್ತು ಮೋಡಿ ಮಾಡಿದ ಹೆಸರು ಸಿದ್ದರಾಮಯ್ಯ. ಅವರ ಜೊತೆಗೆ ಖ್ಯಾತ ಕಾದಂಬರಿಕಾರ ಚದುರಂಗ ಕೂಡ ಇದ್ದರು, ಈ ಮೂವರು ದಿಗ್ಗಜರ ಸಂಗಮದಲ್ಲಿ ತನ್ನ ಟಿಪಿಕಲ್ ಶೈಲಿಯಿಂದ ಹೆಚ್ಚು ಗಮನ ಸೆಳೆದದ್ದು ಸಿದ್ದರಾಮಯ್ಯನವರೇ. ಅವರ ಬಗೆಗೆ ಬಹುವಾಗಿ ಕೇಳಿದ್ದ ಮತ್ತು ಪತ್ರಿಕೆಗಳಲ್ಲಿ ಓದಿಕೊಂಡ ನನಗೆ ಅಂದು ಸಿದ್ದರಾಮಯ್ಯನವರನ್ನು ಕಣ್ತುಂಬಿಕೊಂಡು ಸನಿಹದಿಂದ ನೋಡುವ ಅವಕಾಶ ಮೊದಲ ಬಾರಿಗೆ ದಕ್ಕಿತ್ತು!

ಸಿದ್ದರಾಮಯ್ಯ ಈ ನಾಡು ಕಂಡ ಅಪರೂಪದ ಸರಳ, ಸಜ್ಜನಿಕೆಯ ಮತ್ತು ಎದೆಗಾರಿಕೆಯ ನಾಯಕ. ತಾನು ನಂಬಿಕೊಂಡ ಸಿದ್ದಾಂತಕ್ಕೆ ಬದ್ದತೆ ಇಟ್ಟುಕೊಂಡು ಸಾಧಿಸುವ ಛಲ ಅವರಿಗೆ ರಕ್ತಗತವಾಗಿ ಬಂದಿದೆಯೇನೋ. ರಾಜ್ಯದ ಶಕ್ತಿ ಕೇಂದ್ರದ ಅಧಿಪತ್ಯಕ್ಕೆ ಹಿಂದುಳಿದ ವರ್ಗದವರನ್ನು ಮೊದಲ ಬಾರಿಗೆ ಕೊಡುಗೆಯಾಗಿ ನೀಡಿದ ಹಳೇ ಮೈಸೂರು ಪ್ರಾಂತ್ಯದಿಂದ ಎರಡನೆಯ ಶಕ್ತ ಕೊಡುಗೆಯಾಗಿ ಸಿದ್ದರಾಮಯ್ಯನವರನ್ನು ಕೊಡುಗೆಯಾಗಿ ನೀಡಿದೆ. ಜಾತಿ ಪ್ರಭಾವಳಿಯ ನಡುವೆ ಅತ್ಯಂತ ತ್ರಾಸದಾಯಕವಾದರೂ ತನ್ನ ವರ್ಚಸ್ಸಿನಿಂದ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರಿಗೆ ಈ ಹುದ್ದೆ ಹಿಂದೆಯೇ ಲಭಿಸಬೇಕಿತ್ತಾದರೂ ಕೀಳು ರಾಜಕೀಯ ಹಿತಾಸಕ್ತಿಗಳಿಂದ ಪದೇ ಪದೇ ತಪ್ಪಿಹೋಗಿತ್ತು.
ಆದರೆ ಎಲ್ಲ ಅಡ್ಡಿ ಆತಂಕಗಳನ್ನು ಮೀರಿ ಇತರೆ ನಾಯಕರೊಂದಿಗೆ ಸೇರಿ ಪಕ್ಷಕ್ಕೆ ಅಭೂತ ಪೂರ್ವ ಗೆಲುವಿನ ಪ್ರಮುಖ ಪಾಲುದಾರರಲ್ಲಿ ಒಬ್ಬರಾಗಿ ಹೊರ ಹೊಮ್ಮಿದ ಸಿದ್ದರಾಮಯ್ಯ, ಯಾರ ಹಂಗೂ ಇಲ್ಲದೇ ನಿರ್ಬಿಡೆಯಿಂದ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದಾರೆ. ಈ ಅವಕಾಶ ಹಿಂದುಳಿದವರಿಗೆ, ದಲಿತರಿಗೆ ಶೋಷಿತರಿಗೆ ಸಿಕ್ಕ ಸಾಮಾಜಿಕ ನ್ಯಾಯದ ಕಲ್ಪನೆಯ ಪ್ರತೀಕವೂ ಆಗಿದೆ. ಸಿದ್ದರಾಮಯ್ಯನವರು ಇಂಥಹದ್ದೊಂದು ಕ್ಷಣವನ್ನು ಸಾಕ್ಷೀಕರಿಸಲು ಸಾಗಿ ಬಂದ ಹಾದಿ ಸುಲಭದ್ದೇನಾಗಿಲ್ಲ, ಈ ಹಂತದಲ್ಲಿ ಅವರು ಎದುರಿಸಿದ ಸಂಕಷ್ಟಗಳು, ರಾಜಕೀಯ ಏರುಪೇರುಗಳು ಮತ್ತು ಜೀವನ ಕುರಿತ ಪುಟ್ಟ ಅವಲೋಕನ ನಿಮಗಾಗಿ.
ಹಳೇ ಮೈಸೂರು ಪ್ರಾಂತ್ಯದ ವರುಣಾ ಹೋಬಳಿಯ ಸಿದ್ದರಾಮನ ಹುಂಡಿಯಲ್ಲಿ ಕೆ ಸಿದ್ದರಾಮಯ್ಯನವರ ಜನರ(12 ಆಗಸ್ಟ್ 1948). ಸಿದ್ದರಾಮನ ವರಪ್ರಸಾದವಾಗಿ ಮಗು ಹುಟ್ಟಿದ್ದರಿಂದ ಅವರಿಗೆ ಅದೇ ಹೆಸರು ಸಿದ್ದರಾಮಯ್ಯ! ರಾಜ್ಯದ 3ನೇ ಅತೀ ದೊಡ್ಡ ಸಮುದಾಯವಾದ ಕುರುಬ ಜನಾಂಗದ ದೊಡ್ಡ ನಾಯಕರಾಗುತ್ತಾರೆಂದು ಅವತ್ತಿನ ಅವರ ಚಟುವಟಿಕೆಗಳೇ ಹೇಳುತ್ತಿದ್ದವು ಎನ್ನುತ್ತಾರೆ ಅವರ ಸಮಕಾಲೀನರು. ಶೋಷಿತ ಸಮುದಾಯಗಳಲ್ಲಿ ಒಂದಾದ ಕುರುಬ ಸಮುದಾಯ ಅನಕ್ಷರತೆ, ಬಡತನ, ಅಮಾಯಕತೆಗಳೊಂದಿಗೆ ಸಮಾಜದಲ್ಲಿ ಅನುಭವಿಸುತ್ತಿದ್ದ ನೋವುಗಳನ್ನು ನಲಿವುಗಳನ್ನು ಸಿದ್ದರಾಮಯ್ಯ ಕಂಡುಂಡವರು. ತಮ್ಮ ಪದವಿ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಮೈಸೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ ಸಿದ್ದರಾಮಯ್ಯನವರಿಗೆ ತಮ್ಮ ವೃತ್ತಿ ಬದುಕಿಗಿಂತ ಸಮುದಾಯಕ್ಕೆ ನೆರವಾಗ ಬೇಕು ಅವರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು, ಸಮಾಜದ ಮುಖ್ಯ ವಾಹಿನಿಯಲ್ಲಿ ಸಮುದಾಯವನ್ನು ಮುನ್ನೆಡೆಸಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತು ಇದೆಲ್ಲಕ್ಕೂ ರಾಜಕೀಯ ಶಕ್ತಿಯೇ ಮುಖ್ಯವೆಂದರಿತರು.
ಈ ದಿಸೆಯಲ್ಲಿ ಚಿಂತಿಸಿ 1978ರಲ್ಲಿ ಸಮಾಜವಾದಿ ಅಲೆಯಲ್ಲಿ ರಾಜಕೀಯವ ಬದುಕನ್ನು ಆರಂಭಿಸಿದರು. ಮೊದಲಿಗೆ ತಾಲೂಕು ಬೋರ್ಡ ಸದಸ್ಯರಾದ ಅವರು ಹಲವಾರು ಏಳುಬೀಳುಗಳನ್ನು ಕಂಡು 1983ರಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕ ದಳದ ಅಭ್ಯರ್ಥಿಯಾಗಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಗೆಲುವು ಸಾಧಿಸಿ ವಿಧಾನ ಸೌಧದ ಮೆಟ್ಟಿಲು ಹತ್ತಿದರು. ಮತ್ತು ಜನಾನುರಾಗಿಯಾಗಿ ಕಡಿಮೆ ಅವಧಿಯಲ್ಲೇ ಬೇಗನೇ ರಾಜಕೀಯದ ಮುಖ್ಯವಾಹಿನಿಗೆ ಬಂದು ಬಿಟ್ಟರು.
ನಂತರದ ದಿನಗಳಲ್ಲಿ ಜನತಾ ಪಕ್ಷವನ್ನು ಸೇರಿ ಕನ್ನಡ ಕಾವಲು ಸಮಿತಿಯ ಮೊಟ್ಟ ಮೊದಲ ಅಧ್ಯಕ್ಷರಾದರು ಮತ್ತು ಅಂದೇ ರಾಜ್ಯದ ಆಢಳಿತದಲ್ಲಿ ಕನ್ನಡ ಜಾರಿಗೆ ಬರಲು ಕಟ್ಟುನಿಟ್ಟಿನ ಕ್ರಮಗಳನ್ನು ಶಿಫಾರಸ್ಸು ಮಾಡಿ ಯಶ ಕಂಡಿದ್ದರು. 1985ರ ವಿಧಾನ ಸಭೆ ಚುನಾವಣೆಗಳಲ್ಲಿ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಿದ ಸಿದ್ದರಾಮಯ್ಯ , ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಮೊದಲಿಗೆ ಪಶುಸಂಗೋಪನಾ ಸಚಿವ, ನಂತರ ರೇಷ್ಮೇ ಕೃಷಿ, ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಮುಂದೆ 1989ರಲ್ಲಿ ಕಾಂಗೈನ ರಾಜಶೇಖರ ಮೂರ್ತಿಯೆದುರು ಸೋಲನುಭವಿಸಿದ ಸಿದ್ದರಾಮಯ್ಯನವರಿಗೆ ಹೊಸ ರಾಜಕೀಯ ಬದುಕು ಕಲ್ಪಿಸಿದ್ದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ! ಜನತಾ ಪಕ್ಷ ಒಡೆದು ಹೋಳಾಗಿ ಕಡೆಗೆ ಜನತಾ ದಳವಾದಾಗ ಆ ಪಕ್ಷಕ್ಕೆ 1992ರಲ್ಲಿ ಸಿದ್ದರಾಮಯ್ಯನವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. 1994ರಲ್ಲಿ ಜನತಾ ದಳ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದ ದೇವೇಗೌಡರ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಮಂತ್ರಿಯಾದ ಸಿದ್ದರಾಮಯ್ಯನವರನ್ನು ದೇವೇಗೌಡರು ಪ್ರಧಾನ ಮಂತ್ರಿಯಾಗುತ್ತಿದ್ದಂತೆಯೇ ಉಪಮುಖ್ಯಮಂತ್ರಿಯಾಗಿ ಮಾಡಲಾಯಿತು. ಆಗ ಜೆ ಹೆಚ್ ಪಟೇಲ್ ರಾಜ್ಯದ ಮುಖ್ಯಮಂತ್ರಿ.
ಜನತಾದಳ ಮತ್ತೆ ಛಿದ್ರವಾಗಿ ಜಾತ್ಯಾತೀತ ಜನತಾ ದಳ ಆದಾಗ ರಾಜ್ಯಾಧ್ಯಕ್ಷರಾದ ಸಿದ್ದರಾಮಯ್ಯ ಪಕ್ಷವನ್ನು ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡರು. 2004ರ ಚುನಾವಣೆಯಲ್ಲಿ ಮರು ಆಯ್ಕೆಯಾಗಿ ಕಾಂಗೈನೊಂದಿಗೆ ಸಮ್ಮಿಶ್ರ ಸರ್ಕಾರ ಆರಂಭವಾದಾಗ ಮತ್ತೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆದರು. ಆಗ ಧರಮ್ ಸಿಂಗ್ ರಾಜ್ಯದ ಮುಖ್ಯಮಂತ್ರಿ. ಮತ್ತೆ ದಳದಲ್ಲಿ ಒಡಕು ಉಂಟಾಗಿ ದೇವೇಗೌಡರೊಂದಿಗೆ ರಾಜಕೀಯ ಸರಿ ಬರದಿದ್ದಾಗ 2006ರಲ್ಲಿ ಅಹಿಂದ ಚಳುವಳಿ ಆರಂಭಿಸಿದರು ಮತ್ತು ಕಾಂಗ್ರೆಸ್ ಸೇರಿದರು. 2008ರ ಚುನಾವಣೆಯಲ್ಲಿ ಮತ್ತೆ ಆರಿಸಿ ಬಂದರು. ಹೀಗೆ ವೈವಿದ್ಯಮಯ ನೆಲಗಟ್ಟಿನಲ್ಲಿ ರಾಜಕೀಯ ಬದುಕು ಕಟ್ಟಿಕೊಂಡ ಸಿದ್ದರಾಮಯ್ಯ ಯಾವತ್ತಿಗೂ ನೇರ ನಡೆನುಡಿಯವರು. ಅನಿಸಿದ್ದನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಹೇಳಿಬಿಡುವವರು. ಆದರೆ ಇದೇ ಅವರಿಗೆ ಅನೇಕ ಸಲ ಮುಳುವಾಗಿದ್ದುಂಟು. ಆದರೆ ಯಾವುದನ್ನು ಮುಚ್ಚಿಟ್ಟು ಮೋಸ ಮಾಡುವ ಜಾಯಮಾನದವರಲ್ಲ ಸಿದ್ದರಾಮಯ್ಯ ಎಂಬುದೇ ಅವರ ಪ್ಲಸ್ ಪಾಯಿಂಟು.
ಸಿದ್ದರಾಮಯ್ಯನವರು ಸಮಾಜವಾದಿ ಕಲ್ಪನೆ ಮೂಸೆಯಲ್ಲಿ ಕನಸುಗಳನ್ನು ಕಟ್ಟಿಕೊಂಡು ಅದರ ಸಾಕಾರಕ್ಕಾಗಿ ಬದುಕು ಸವೆಸಿದವರು.ಸ್ವಸ್ಥ ಸಮಾಜ ಕಟ್ಟುವ ಪರಿಕಲ್ಪನೆಯಲ್ಲಿ ರಾಜಕೀಯದ ಅನ್ಯಾಯಗಳನ್ನು ಬಗಲಲ್ಲಿ ಕಟ್ಟಿಕೊಂಡು ನವ ಸಮಾಜದ ನಿರ್ಮಾಣಕ್ಕೆ ಮಿಡಿದವರು. ಈ ದಿಕ್ಕಿನಲ್ಲಿ ಅದಕ್ಕೊಂದು ರೂಪ ದೊರೆತಾಗ ಹುಟ್ಟಿಕೊಂಡದ್ದೇ ‘ಅಹಿಂದ’. ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಅವಕಾಶಗಳಿಂದ ವಂಚಿತರಾಗಿದ್ದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಒಗ್ಗೂಡುವಿಕೆಯ ಮಹತ್ವವನ್ನ ಅರಿತ ಸಿದ್ದರಾಮಯ್ಯ, ಹೆಸರಿಗೆ ಅನ್ವರ್ಥಕವಾಗಿದ್ದ ಜಾತ್ಯಾತೀತ ಜನತಾ ದಳದಿಂದ ಉಚ್ಚಾಟನೆಗೊಂಡಾಗ ‘ಅಹಿಂದ’ ಕಟ್ಟಿದರು. ಆ ಮೂಲಕ ಇಡೀ ರಾಜ್ಯದಲ್ಲಿಯೇ ದೊಡ್ಡ ಸಂಚಲನವನ್ನು ಸೃಷ್ಟಿಸಿಬಿಟ್ಟರು. ಅದರ ತೀವ್ರತೆಗೆ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಲ್ಲಿ ತಳಮಳ ಹುಟ್ಟುವಂತೆ ಮಾಡಿದರು. ಯಾವ ರಾಷ್ಟ್ರೀಯ ಪಕ್ಷಗಳು ಅಹಿಂದ ವನ್ನು ತಮ್ಮ ಮತ ಬ್ಯಾಂಕ್ ಮಾಡಿಕೊಂಡು ತಳ ಸಮುದಾಯದ ಹಿತವನ್ನು ಕಡೆಗಣಿಸಿದ್ದವೋ ಅಂತಹ ಪಕ್ಷಗಳಿಗೆ ಛಳಿ ಹುಟ್ಟಿಸಿದ್ದು ಸಿದ್ದರಾಮಯ್ಯನವರ ಸಾಧನೆಯೇ ಸರಿ.
ಆದರೆ ಅಹಿಂದ ಚಳುವಳಿ ತೀವ್ರಗೊಂಡು ದೇಶದ ಇತರೆಡೆಗೂ ಅದರ ಗಾಳಿ ಹಬ್ಬಿತೇನೋ ಎನ್ನುವಷ್ಟರಲ್ಲಿ ಅದನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸುವಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡ ಸಿದ್ದರಾಮಯ್ಯನವರನ್ನು ಸೆಳೆದುಕೊಂಡ ಕಾಂಗ್ರೆಸ್ ಲೆಕ್ಕಾಚಾರದ ರಾಜಕೀಯವನ್ನು ಮಾಡಿತು. ಒಂದು ರೀತಿಯಲ್ಲಿ ಅದು ಈಗ ಒಳ್ಳೆಯದೇ ಆದಂತೆ ಆಗಿದೆ. ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಅಂತಹದ್ದೊಂದು ಪ್ರಯತ್ನ ಮಾಡಿದ್ದರೂ ಸಹ ಅದು ಕೈಗೂಡಿರಲಿಲ್ಲ. ಆದರೂ ಅಹಿಂದವನ್ನು ಮೂಲ ಸ್ವರೂಪದಲ್ಲಿ ಮುಂದುವರೆಸಿ ಶಕ್ತಿ ತುಂಬಿ ಮುಂದೊಂದು ದಿನ ಅದನ್ನು ರಾಜಕೀಯ ಶಕ್ತಿಯಾಗಿಸುವ ತಾಕತ್ತು ಸದ್ಯಕ್ಕೆ ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯ., ಅದು ವರ್ತಮಾನದ ಅಗತ್ಯವೂ ಆಗಿದೆ. ಆದರೆ ಅದಕ್ಕಿನ್ನೂ ಬಹುದೂರವಿದೆ ಎನಿಸುತ್ತಿದೆ. ಸಧ್ಯಕ್ಕೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಲಿ ಸಮಾಜದ ಎಲ್ಲ ಸ್ಥರದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ ಎಂದು ಆಶಿಸೋಣವಲ್ಲವೇ?







siddaramayyanavaru nadedu band dariyannu sankshiptawagi vivarisiddakke dhanyvadagalu sir,,
ಸಿದ್ದರಾಮಯ್ಯ ನಡೆದು ಬಂದ ದಾರಿಯನ್ನು ಕಡಿಮೆ ಅಕ್ಷರಗಳಲ್ಲಿ ಉತ್ತಮವಾಗಿ ನಿರೂಪಿಸಿದ್ದಕ್ಕಾಗಿ ಧನ್ಯವಾದಗಳು