ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಾವ

ಕೀರ್ತಿ ಬೈಂದೂರು

ನಿನಗಂತೂ ಸದಾ ಹೊರಡುವುದಕ್ಕೆ ಗಡಿಬಿಡಿ
ಆಯಾಸದ ಹಂಗಿಲ್ಲ ನಿನಗೆ
ಕೊಟ್ಟಿದ್ದರಲ್ಲವೆ ಅನುಭವಕ್ಕೆ
ಇಸ್ತ್ರಿಯಾದ ಬಟ್ಟೆ, ಘಮಿಸುವ ಪರ್ಫ್ಯೂಮ್
ನಿನಗಿಷ್ಟೇ ಸಾಕುಬಿಡು!
ಹಸಿರು ಬ್ಲೌಸ್ ಇಲ್ಲದ ಹಳದಿ ಸೀರೆ
ಗುಲಾಬಿ ಹೊಂದುತ್ತದೆಂದು ನೀನು ಕೊಟ್ಟೆ
ಬಳೆ ಒಡೆದು ಗಾಜು ಹರಡಿತು
ಅಲ್ಲೇ ಸರಿಸಿ ನಕ್ಕೆ ನೀನು
ಕಣ್ಣಲ್ಲೇ ಹೊರಡುವ ಭಾವ
ನೋಡು! ಗಡಿಬಿಡಿಯನ್ನು ಬಿಟ್ಟಿಲ್ಲ ನೀನು

ಪುರುಸೊತ್ತಿನಲ್ಲಿ ಫಿಲ್ಟರ್ ಕಾಫಿ ನಿನ್ನ ಮೆಚ್ಚು
ಜೊತೆಯಲ್ಲಿ ನಗುವಿಗೂ ತುಸು ಬೇಡಿಕೆ
ಹಣೆ ತಾಗಿಸಿ, ಇಟ್ಟ ಮೇಜಿಗೆ ಕೈ ತಟ್ಟಿ
ಹರಟೆಯಲಿ ಸುಖಿಸುವ ಘಳಿಗೆ ಬಾರದೀಗ
ಅವಶ್ಯ ಆರಾಮದ ಸಮಯಕ್ಕೀಗ ನೀ ಹೊರಗಿನವ

ಎಂದೂ ಕದಮುಚ್ಚದ ನಿನ್ನ ತೆರೆದ ಮನ
ನಿನ್ನಿಂದ ಬಯಸಿ ಪಡೆದ ಶುದ್ಧಪ್ರೀತಿ
ಋಣಬಂಧಿ ನಾನು ಪ್ರೇಮ ಸಹಿತ ಪಾಠಕೆ

ಪ್ರೀತಿ ಹುಟ್ಟಿದ ಹೊಸತರಲಿ ಕೊಟ್ಟ ಬೆಂಡೋಲೆ
ಇನ್ನು ಕಿವಿಯಲಿ ನುಲಿಯುವುದಿಲ್ಲ
ಸಂಗಾತಕ್ಕೆಂದು ಅವಕ್ಕೆ ಬೀರು ಇದೆ!
ಕಣ್ಣೀರಿಗೆ ಬೇಕಿಲ್ಲ ನೀನು;
ನಕ್ಕು ಗಟ್ಟಿಯಾಗುವುದಕ್ಕೆ ಅಗತ್ಯವಿತ್ತು

ಕೀರ್ತಿ ಬೈಂದೂರು: ಪದವಿ ವಿದ್ಯಾರ್ಥಿನಿ ಮತ್ತು ರಂಗನಟಿ

‍ಲೇಖಕರು Avadhi

18 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading