ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಬ್ದುಲ್ ಕಲಾಂ ನಿಮಗಿದೋ ಸಲಾಂ

ನಾ ದಿವಾಕರ

ಸಾರ್ವಜನಿಕ ಜೀವನದಲ್ಲಿ ಸಾಧನೆಯ ಉತ್ತುಂಗ ಶಿಖರವನ್ನೇರಿ, ಜನಸಾಮಾನ್ಯರ ಮನದಾಳದಲ್ಲಿ ಶಾಶ್ವತವಾದ ಸ್ಥಾನ ಪಡೆಯುವ ಯಾವುದೇ ವ್ಯಕ್ತಿ ಚಾರಿತ್ರಿಕವಾಗಿ ಸ್ಮರಣಾರ್ಹರಾಗುತ್ತಾರೆ. ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಇಂತಹ ಮಹಾನ್ ದಾರ್ಶನಿಕ ವ್ಯಕ್ತಿಗಳು ವಿರಳ ಎನ್ನಬಹುದಾದರೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಅಂತಹ ಮೇಧಾವಿಗಳ ಪೈಕಿ ಭಾರತ ರತ್ನ ಡಾ ಕೆ ಪಿ ಜೆ ಅಬ್ದುಲ್ ಕಲಾಂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇಶದ ಶಾಸಕಾಂಗ ವ್ಯವಸ್ಥೆ ತನ್ನ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೇ ಕಳೆದುಕೊಂಡು ಸಾರ್ವಭೌಮ ಪ್ರಜೆಗಳನ್ನು ಘಟ್ಟದ ಮೇಲಿನಿಂದಲೇ ವೀಕ್ಷಿಸುವ ಅಹಮಿಕೆಯನ್ನು ಬೆಳೆಸಿಕೊಂಡಿರುವ ಸಂದರ್ಭದಲ್ಲಿ, ತಮ್ಮ ಘನವೆತ್ತ ಭೌತಿಕ ಹುದ್ದೆಯ ಔನ್ನತ್ಯವನ್ನು ಬದಿಗಿಟ್ಟು, ಜನಸಾಮಾನ್ಯರೊಡನೆ ಬೆರೆತು ಹೊಸ ಪರಂಪರೆಯನ್ನು ಸೃಷ್ಟಿಸಿದ ಕೀತರ್ಿ ಕಲಾಂ ಅವರಿಗೆ ಸಲ್ಲುತ್ತದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯ ದುರಂತವೆಂದರೆ ಇಲ್ಲಿ ಇಂದಿಗೂ ಸಹ ಪ್ರಾಚೀನ ಪರಂಪರೆಯ ರಾಜ-ಪ್ರಜೆಯ ಅಂತರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಸಂಸತ್ತಿನ ಸಾಂವಿಧಾನಿಕ ಪೀಠದಲ್ಲಿ ಆಸೀನರಾಗಿ ತಮ್ಮ ಆಡಳಿತ ನೀತಿಯನ್ನು ಜನತೆಯ ಮುಂದಿರಿಸುವ ಜನಪ್ರತಿನಿಧಿಗಳು ಸಾರ್ವಭೌಮ ಪ್ರಜೆಗಳ ಪರವಾಗಿ ತಾವೇ ಚುನಾಯಿಸುವ ದೇಶದ ರಾಷ್ಟ್ರಪತಿ ಹುದ್ದೆಯನ್ನು ಬೌದ್ಧಿಕ ಬಂಧನದಲ್ಲಿರಿಸುವ ವಿಕೃತ ಪದ್ಧತಿಯನ್ನೂ ನಾವು ಕಾಣುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲೂ ರಾಷ್ಟ್ರಪತಿ ಭವನದ ಚೌಕಟ್ಟಿನಿಂದ ಹೊರಬಂದು ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದ ಕಲಾಂ ಈ ಕಾರಣಕ್ಕಾಗಿಯೇ ಮಹಾನ್ ಎನಿಸುತ್ತಾರೆ.

ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ, ನಿಷ್ಠೆ, ಸರಳತೆ ಮತ್ತು ಪಾರದರ್ಶಕತೆ ಇವೆಲ್ಲವೂ ಒಂದು ದೇಶದ ಬೌದ್ಧಿಕ ಬೆಳವಣಿಗೆಗೆ ಅವಶ್ಯವಾದ ಪರಿಕರಗಳು. ಈ ಎಲ್ಲ ಗುಣಗಳನ್ನೂ ಮೀರಿ ಬೇಕಾಗಿರುವುದು ದಾರ್ಶನಿಕತೆ. ಬಹುಶಃ ಅಬ್ದುಲ್ ಕಲಾಂ ಈ ಎಲ್ಲ ಗುಣಗಳನ್ನೂ ಹೊಂದಿದ್ದರು. ಆದರೆ ಅವರು ರಾಷ್ಟ್ರಪತಿಗಳಾಗಿ ಪ್ರತಿನಿಧಿಸಿದ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಪ್ರಭುತ್ವವನ್ನು ಪ್ರತಿನಿಧಿಸುವ ರಾಜಕೀಯ ನಾಯಕರಲ್ಲಿ ಈ ಯಾವ ಗುಣಗಳೂ ಇಲ್ಲದಿರುವುದೂ ಸತ್ಯ. ಹಾಗಾಗಿಯೇ ಅಬ್ದುಲ್ ಕಲಾಂ ಒಬ್ಬ ಮೇರು ವ್ಯಕ್ತಿಯಾಗಿ ಕಂಗೊಳಿಸುತ್ತಾರೆ. ತಾವು ಅನುಸರಿಸುವ ಮಾರ್ಗದಲ್ಲೇ ಅಂತಿಮ ಕ್ಷಣದವರೆಗೂ ಕ್ರಮಿಸಿ ಸಾರ್ಥಕತೆ ಗಳಿಸುವ ಇಚ್ಚಾಶಕ್ತಿಯನ್ನು ಕಲಾಂ ಪ್ರದರ್ಶಿಸಿದ್ದಾರೆ. ಒಬ್ಬ ವಿಜ್ಞಾನಿಯಾಗಿ, ತಂತ್ರಜ್ಞರಾಗಿ ತಮ್ಮ ಕಾಯಕ ಪೂರೈಸಿದ ಕಲಾಂ ಎಂದಿಗೂ ಸೈದ್ಧಾಂತಿಕ ಚೌಕಟ್ಟಿಗೆ ಒಳಪಟ್ಟವರಲ್ಲ. ಹಾಗಾಗಿ ಅವರ ಜೀವನದಲ್ಲಿ ದ್ವಂದ್ವಗಳು ಕಾಣುವುದು ಸಹಜ. ವೈಜ್ಞಾನಿಕ ಮನೋಭಾವನ್ನು ಪ್ರೋತ್ಸಾಹಿಸುವ ಒಬ್ಬ ದಾರ್ಶನಿಕ ವ್ಯಕ್ತಿ ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಕಲಾಂ ಎದುರಿಸಿದ ಸನ್ನಿವೇಶವನ್ನೇ ಎದುರಿಸಬೇಕಾಗುತ್ತದೆ. ಮಾನವೀಯತೆ, ವಿಶ್ವಶಾಂತಿ ಮತ್ತು ವಿಶ್ವ ಭ್ರಾತೃತ್ವ ಬಯಸುತ್ತಲೇ ಬೈಜಿಕ ಅಸ್ತ್ರ ತಯಾರಿಕೆ, ಬೈಜಿಕ ಪರೀಕ್ಷೆ, ಕ್ಷಿಪಣಿ ತಂತ್ರಜ್ಞಾನ ಮತ್ತಿತರ ಯುದ್ಧ ಪರಂಪರೆಯನ್ನು ಪೋಷಿಸುವ ತಂತ್ರಜ್ಞಾನಗಳನ್ನು ಪುಷ್ಟೀಕರಿಸಿದ ಕಲಾಂ ಇಂತಹ ದ್ವಂದ್ವದಲ್ಲೇ ತಮ್ಮ ಅಂತ್ಯ ಕಂಡಿರುವುದು ಆಕ್ಷೇಪಾರ್ಹ ಅಲ್ಲವಾದರೂ ವಿಡಂಬನೆಯಂತೂ ಹೌದು.
ದೇಶದ ಯುವ ಜನತೆಗೆ ಪ್ರಾಮಾಣಿಕತೆ ಮತ್ತು ಶ್ರದ್ಧಾಭಕ್ತಿಗಳ ಪಾಠ ಕಲಿಸಲು ಅವಿರತ ಯತ್ನಿಸಿದ ಕಲಾಂ ಅಭಿವೃದ್ಧಿ ಅಥವಾ ಪ್ರಗತಿಯನ್ನು ಆಢಳಿತ ವ್ಯವಸ್ಥೆಯ ಚೌಕಟ್ಟಿನಲ್ಲೇ ವ್ಯಾಖ್ಯಾನಿಸಿದ್ದು ಹೌದು. ಹಾಗಾಗಿಯೇ ಪರಿಸರ ಪ್ರಜ್ಞೆ ಅವರ ಉಪನ್ಯಾಸಗಳಲ್ಲಿ ಕಂಡುಬರುತ್ತಿರಲಿಲ್ಲ. ವಿಶ್ವಶಾಂತಿಗೆ ಮಾರಕವಾದ ಕ್ಷಿಪಣಿ ಮತ್ತು ಬೈಜಿಕ ಅಸ್ತ್ರ, ಬೈಜಿಕ ವಿದ್ಯುತ್ ಘಟಕಗಳು ಭವಿಷ್ಯದ ಮಾನವ ಜನಾಂಗಕ್ಕೆ ಮತ್ತು ಅವರು ಅತಿ ವ್ಯಾಮೋಹದಿಂದ ಅಪ್ಪಿಕೊಂಡಿದ್ದ ಯುವ ಸಮುದಾಯದ ಭವಿಷ್ಯಕ್ಕೆ ಮಾರಕ ಎಂಬ ವಾಸ್ತವ ಅವರ ಉಪನ್ಯಾಸಗಳಲ್ಲಿ ಬಿಂಬಿತವಾಗಲೇ ಇಲ್ಲ. ಕಲಾಂ ಅವರ ಈ ನಿಲುವು ಸಾಮಾಜಿಕ ಕಾಳಜಿಯ ನೆಲೆಯಲ್ಲಿ ಆಕ್ಷೇಪಾರ್ಹ ಎನಿಸಿದರೂ ವ್ಯಕ್ತಿಗತ ಅಭಿವ್ಯಕ್ತಿಯ ನೆಲೆಯಲ್ಲಿ ಪ್ರಮಾದ ಎನಿಸುವುದಿಲ್ಲ. ಆದಾಗ್ಯೂ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ವಿಜ್ಞಾನಿ ಮತ್ತು ತಂತ್ರಜ್ಞ ಭಿನ್ನವಾಗಿ ಆಲೋಚಿಸಬಹುದಿತ್ತು. ಭಾರತದ ಯುವ ಜನತೆಯ ದನಿಯಾಗಿ ಮೂಡಿಬಂದ ಕಲಾಂ , ಮಾರಣಾಂತಿಕ ಬೈಜಿಕ ಶಕ್ತಿಯ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಪರಿಸರ ಪ್ರೇಮಿಗಳ ದನಿಯಾಗಿ ಮೂಡಲೇ ಇಲ್ಲ. ನದಿ ಜೋಡಣೆಯ ವಿಚಾರದಲ್ಲೂ ಸಹ ಕಲಾಂ ಪ್ರಭುತ್ವದ ಪರವಾಗಿಯೇ ಇದ್ದುದನ್ನು ಗಮನಿಸಬೇಕು.
ಆದರೆ ಈ ಯಾವುದೇ ಲೋಪಗಳು ಕಲಾಂ ಅವರ ದಾರ್ಶನಿಕತೆಯನ್ನು ಮಸುಕುಗೊಳಿಸುವುದಿಲ್ಲ. ತತ್ವ ಸಿದ್ಧಾಂತಗಳ ಚೌಕಟ್ಟಿನಿಂದ ಹೊರಬಂದು ನೋಡಿದಾಗ ಭಾರತದ ಯುವ ಜನತೆಗೆ ಕಲಾಂ ಅವರಂತಹ ಆದರ್ಶಪ್ರಾಯ ದಾರ್ಶನಿಕರ ಅವಶ್ಯಕತೆ ಇದೆ. ಪ್ರಭುತ್ವದ ಪ್ರತಿನಿಧಿಗಳು ಇಂತಹ ದಾರ್ಶನಿಕರನ್ನು ತಮ್ಮ ಆಡಳಿತ ವ್ಯವಸ್ಥೆಯ ಬತ್ತಳಿಕೆಯ ಭಾಗವಾಗಿ ಬಳಸಿಕೊಳ್ಳುವ ಪರಂಪರೆಯನ್ನು ಯುವ ಜನತೆ ವಿರೋಧಿಸಬೇಕಿದೆ. ಒಬ್ಬ ವಿಜ್ಞಾನಿಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎಂಬ ಅಹಮಿಕೆಯಿಂದ ಮೆರೆಯುವ ರಾಜಕೀಯ ಪಕ್ಷ ವೈಜ್ಞಾನಿಕ ಮನೋಭಾವವನ್ನೇ ನಿರ್ನಾಮ ಮಾಡಲು ಮುಂದಾಗುವುದನ್ನು ಯುವ ಜನತೆ ಗಮನಿಸಬೇಕಿದೆ. ತಮ್ಮ ಸಮರಶೀಲತೆಯನ್ನು ಸಮಥರ್ಿಸಿಕೊಳ್ಳಲು ವಿಜ್ಞಾನಿ ರಾಷ್ಟ್ರಪತಿಯ ನೆರವು ಪಡೆಯುವ ಪ್ರಭುತ್ವದ ಪ್ರತಿನಿಧಿಗಳಿಗೆ ಕಲಾಂ ಅವರಂತ ದಾರ್ಶನಿಕ ವ್ಯಕ್ತಿಯ ತಾತ್ವಿಕ ಮೌಲ್ಯಗಳು ಮುಖ್ಯವಾಗುವುದೇ ಇಲ್ಲ. ಹಾಗಾಗಿ ಕಲಾಂ ಅವರಂತಹ ಪ್ರತಿಭಾನ್ವಿತ ಮೇಧಾವಿಗಳೂ ಸಹ ಆಡಳಿತ ವ್ಯವಸ್ಥೆಯ ಶರಪಂಜರದಲ್ಲಿ ಬಂಧಿಯಾಗಿಬಿಡುತ್ತಾರೆ.
ಈ ಎಲ್ಲ ಅಪಭ್ರಂಶಗಳ ನಡುವೆಯೂ ಅಬ್ದುಲ್ ಕಲಾಂ ಒಬ್ಬ ಧೃವತಾರೆಯಾಗಿ ಕಂಗೊಳಿಸಿದ್ದರೆ ಅದು ಅವರ ವ್ಯಕ್ತಿಗತ ಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ. ಆ ಕಾರಣಕ್ಕಾಗಿಯೇ ಕಲಾಂ ಸದಾ ವಂದಿತ ದಾರ್ಶನಿಕರಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ.

‍ಲೇಖಕರು G

3 August, 2015

1 Comment

  1. Raj

    Kalam was a honest, simple and straightforward no non-sense human being. But after his death everyone is busy glorifying him and not able to fathom what his real value is. His philosophy was very simple and humble, but calling him a philosopher is far-fetched. I believe not emphasizing on such basic issues as afforestation, primary education, over population and pollution etc during his last 10-15 years of public life he didn’t use his influence well.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading