ಅಪ್ಪ, ನೀನೊಂದು ಆಲದ ಮರ

lakshmikanth-itnal-1ಲಕ್ಷ್ಮೀಕಾಂತ ಇಟ್ನಾಳ

ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಪರಿಸರದ ಒಂದೂರು. ಹಸಿರು ಹೊದ್ದ ಕಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಅದರ ಜೀವನಾಡಿಯೊಂದಿಗೆ ಬೆರೆತ ಒಂದು ಪುಟ್ಟ ಸಂಸಾರ. ಕಡಲ ತಡಿಯ ಇಂತಹದೊಂದು ಊರಿನ ಸರಕಾರೀ ಕಚೇರಿಯೊಂದರಲ್ಲಿ ಜೀವನೋಪಾಯದ ನೌಕರಿ. ಕೆಲಸ ಮುಗಿಸಿ ಮನೆಗೆ ಮರಳುವಾಗ ಮಗನಿಗೇನಾದರು ಒಯ್ಯದಿದ್ದರೆ ತನ್ನನ್ನು ತಾನೇ ಕ್ಷಮಿಸಲಾರದ ಅಪ್ಪ. ಮನೆಯಿಂದ ಹೊರಡುವಾಗ ಮಗನ ಬೇಡಿಕೆಗಳ ಪಟ್ಟಿ ಅವನ ಮನಸ್ಸಿನಲ್ಲಿ ಇದ್ದೇ ಇರುತ್ತಿತ್ತು. ಅಪ್ಪನ ಹೆಚ್ಚು ಅಪ್ಯಾಯಮಾನ, ನಿಷ್ಕಾರಣ ಅತೀ ಪ್ರೀತಿ ಎಲ್ಲಿ ಮಗನನ್ನು ಹಠಮಾರಿಯನ್ನಾಗಿ ಮೊದ್ದು ಮಾಡುವುದೋ, ಓದಿನಲ್ಲಿ ಹಿಂದಿಕ್ಕುವುದೋ ಎಂಬ ಅಳುಕು ಅಮ್ಮನದು, ಅದಕ್ಕಾಗಿಯೇ ಹುಸಿಮುನಿಸು.

ಮಗನೂ ಅಷ್ಟೇ ಪ್ರತಿಭಾವಂತ. ಮಗನ ವಿದ್ಯಾಭ್ಯಾಸದೊಂದಿಗೆ ಇತರೆ ಚಟುವಟಿಕೆಗಳಿಗೆ ಮೈತುಂಬ ಪ್ರೋತ್ಸಾಹದ ಮಳೆ ಸುರಿಸುವ ಅಪ್ಪನನ್ನು ನೋಡಿ ಮಗನ ಸ್ನೇಹಿತರಲ್ಲಿ ಅಪ್ಪನ ಬಗ್ಗೆ ತುಂಬ ಗೌರವ. ತಮಗಾಗಿ ಸಮಯವನ್ನು ಮೀಸಲಿಟ್ಟು ಪ್ರೀತಿಯ ಹೊಳೆ ಹರಿಸುವ ಇಂಥ ಅಪ್ಪ ನಮಗೂ ಇರಬಾರದಿತ್ತೆ ಅಂದುಕೊಂಡವರೆಷ್ಟೋ, ಅಂದವರೂ ಅಷ್ಟೇ. ಇಂತಹ ಸಹಜ ಅಭಿಮಾನದ ಸ್ನೇಹಿತರ ಮಾತಿಗೆ ಉಬ್ಬಿಹೋಗುತ್ತಿದ್ದ ಮಗ.

child_painingಮಗ ಓದುವಾಗ ಪಕ್ಕದಲ್ಲಿಯೇ ಬಿದ್ದುಕೊಂಡು ಅವನ ಜೊತೆಗಿದ್ದರೂ ಅಭ್ಯಾಸಕ್ಕೆ ತೊಂದರೆಯಾಗದಂತೆ ತಾನೂ ಒಂದು ಸಾಹಿತ್ಯ ಪುಸ್ತಕವನ್ನು ಓದುತ್ತ ಅವನ ಸಾಮೀಪ್ಯದಲ್ಲೇ ಬಹುಹೊತ್ತು ಇರುತ್ತಿದ್ದ ಅಪ್ಪ. ಬಹುರಾತ್ರಿಯ ನಂತರ ಮಗನಿಗೆ ಗುಡ್ ನೈಟ್ ಹೇಳಿ, ಮಲಗಲು ಹೋದ ಅಪ್ಪನ ನಂತರ ತಾನೂ ಸ್ವಲ್ಪ ಹೊತ್ತಿಗೆ ಮಲಗಿದವನಿಗೆ ಬೆಳಿಗ್ಗೆ ಎದ್ದಾಗ ತನ್ನ ಹಾಸಿಗೆಯಲ್ಲಿ ತಣ್ಣಗೆ ಬೆಚ್ಚಗೆ ತಬ್ಬಿ ಮಲಗಿದ್ದು ನೋಡಿ ಖುಷಿ.

ಬೆಳಿಗ್ಗೆ ಮಗನನ್ನು ಟ್ಯೂಶನ್ ಗೆಂದು ಎಬ್ಬಿಸಲು ಬಂದವ, ಮಗ ಇನ್ನೂ ಗಾಢ ನಿದ್ದೆಯಲ್ಲಿದ್ದು ಅದೆಷ್ಟೊತ್ತಿಗೆ ಮಲಗಿದ್ದಾನೋ ಎಂದು ಎಬ್ಬಿಸಲು ಮನಸ್ಸಾಗದೇ, ಇನ್ನೂ ಸ್ವಲ್ಪ ಮಲಗಲಿ ಎಂದು ಅಲ್ಲಿಯೇ ಮಗನ ಜೊತೆಯಲ್ಲಿ ಮಲಗಿದ ಅಪ್ಪನಿಗೆ ನಿದ್ರೆಯಾವರಿಸಿದ್ದು, ಮಗ ಎದ್ದು ಅಭಿಮಾನದಿಂದ ಅಪ್ಪನ ತಲೆ ನೇವರಿಸುತ್ತ ಕುಳಿತು ಬಿಡುತ್ತಿದ್ದ.

ಅತ್ಯಂತ ಪ್ರೀತಿಯ ಗೆಳೆಯರಾಗಿದ್ದರಷ್ಟೆ. ಒಂದೊಮ್ಮೆ ಅಪ್ಪ ಮಗನ ಬೂಟಿನ ಸೈಜುಗಳು ಒಂದೇ ಆದಲ್ಲಿ ಅಂದಿನಿಂದ ಮಗನೊಂದಿಗೆ ಗೆಳೆಯನಂತೆ ಇರು ಎನ್ನುವ ಆಂಗ್ಲ ನುಡಿಯ ಅಕ್ಷರಶ: ಪಾಲಕ ಈ ಅಪ್ಪ. ಕಾಫಿ ಮಾಡಲೇ ಅಪ್ಪ ಎಂದು ಕೇಳುತ್ತಿರುವಂತೆ ಎದ್ದು, ಇಲ್ಲ ಆಗಲೇ ಅಮ್ಮ ಮಾಡಿರಬಹುದೆಂದು ಹೇಳುತ್ತ, ಇಬ್ಬರೂ ಎದ್ದು ಬಾತರೂಮ್ ಕಡೆಗೆ ನಡೆಯುವರು.

ಅಮ್ಮ ಕಾಫಿ ನೀಡುತ್ತ ಮಗನ ನೂರೆಂಟು ತಕರಾರುಗಳನ್ನು ಹೇಳುತ್ತಿದ್ದಂತೆ ಇಬ್ಬರದೂ ದಿವ್ಯ ಮೌನ. ಅಂದಿನ ಪೇಪರ್ ಓದುತ್ತ ಮಗನ ದಿನಚರಿ ವಿಚಾರಿಸುತ್ತಿದ್ದಂತೆ, ತನಗೇನಾದರೂ ರೆಫರೆನ್ಸ್ ಪುಸ್ತಕ, ನೋಟ್ಸ್ ಗಳು ಬೇಕೆಂದು ಮಗ ಹೇಳಿದರೆ, ಕೂಡಲೇ ಆ ಕೆಲಸದ ಹಿಂದೆ ಬಿದ್ದು ಬಿಡುತ್ತಿದ್ದ ಅಪ್ಪ. ಅಲ್ಲಿಯ ಬುಕ್ ಸ್ಟೋರ್ ಗಳು, ಸುತ್ತ ಶಿರ್ಸಿ, ಕಾರವಾರ, ಧಾರವಾಡದ ಗೆಳೆಯರಿಗೆ ಈ ವಿವರ ನೀಡಿ, ಅದನ್ನು ತರಿಸಿಕೊಳ್ಳುವ ಎಲ್ಲ ಪ್ರಯತ್ನ ಅಪ್ಪನಿಂದ.  ಮಗನೇನಾದರೂ ‘ಇಂದು ಈಜುವಾ’ ಎಂದರೆ ಅಪ್ಪ ಆಗಲೇ ರೆಡಿ.

ಟಾವೆಲ್ ಈಜುಡುಪು ಬ್ಯಾಗಿನಲ್ಲಿ ಹಾಕಿಕೊಂಡು ಇಬ್ಬರೂ ಹೊರಟೇ ಬಿಡುತ್ತಿದ್ದರು. ಒಮ್ಮೊಮ್ಮೆ ಸಮೀಪದ ನದಿಗೆ ಹೋದರೆ, ಇನ್ನೊಮ್ಮೆ ಸೇಫ್ ಇರುವ ಕಡಲ ತಡಿ. `ಅರ್ಧ ಗಂಟೆಯಲ್ಲಿ ನೀರಿನಿಂದ ಹೊರಗಿರಬೇಕು’ ಎಂದು ಅಪ್ಪ ಅನ್ನುತ್ತಿದ್ದಂತೆ ಮಗನಿಗೆ ಅರ್ಥವಾಗಿಬಿಡುತ್ತಿತ್ತು, ಅಪ್ಪನಿಗೆ ಕಚೇರಿಯಲ್ಲಿ ಹೆಚ್ಚು ಕೆಲಸವಿರಬಹುದೆಂದು. ಏಕೆಂದರೆ ಅಪ್ಪ ಕಚೇರಿ ಕೆಲಸದಲ್ಲಿ ಬಹು ನಿಷ್ಠಾವಂತ. ಒಳ್ಳೆಯ ಗೌರವ ಇಟ್ಟುಕೊಂಡವ. ಒಂದೇ ಒಂದು ಕಪ್ಪು ಚುಕ್ಕೆಯೂ ಕೂಡ ಬರದಂತಹ ಪ್ರಾಮಾಣಿಕ ಸೇವೆ ಅವನದು. ಸೇವೆಯಲ್ಲಿ ಒಂದೂ ಕಪ್ಪು ಚುಕ್ಕೆ ಬರದಂತೆ ಸರ್ವೀಸು ಮಾಡಬೇಕೆಂದು ಸಹೋದ್ಯೋಗಿಗಳಲ್ಲಿ ಕನಸು ತುಂಬುತ್ತಿದ್ದ ! ಅದಕ್ಕೆ ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಬೈಕ್ ನಲ್ಲಿ ಇಬ್ಬರೂ ಸಮೀಪದಲ್ಲೇ ಹರಿಯುವ ನದಿಗೆ ಇಲ್ಲವೆ ಕಡಲಿನ ದಂಡೆಯಲ್ಲಿ ಈಜು ಹೊಡೆದು ಮರಳುವಷ್ಟರಲ್ಲಿ ಅಮ್ಮನ ಅಡುಗೆ ತಯಾರು.

ಇಬ್ಬರೂ ಒಂದೇ ತಟ್ಟೆಯಲ್ಲಿ ಉಂಡು ತಮ್ಮ ತಮ್ಮ ದೈನಂದಿನ ಕಾರ್ಯಗಳಿಗೆ ತೊಡಗುವ ಅಭ್ಯಾಸದ ರೂಢಿ ಮಾಡಿಕೊಂಡಿದ್ದರು. ಊಟಕ್ಕೆ ಕುಳಿತರಂತೂ, ಅಪ್ಪನಿಗೆ ಮೊದಲ ತುತ್ತು ಮಗ ಉಣಿಸಿದರೆ, ಮಗನಿಗೆ ಅಪ್ಪನೇ ಉಣಿಸಬೇಕು. ಹೀಗೆ ಅಪ್ಪ ಮಗನದು ಸಂಬಂಧಾತೀತ ಸ್ನೇಹ, ಬಿಡಿಸಲಾರದ ನಂಟು. ತನ್ನ ಯೌವ್ವನದ ಬಡತನದ ಕತ್ತಲೆಯ ದಿನಗಳಲ್ಲಿ ಕಂಡ ಕನಸುಗಳನ್ನು ಅಪ್ಪ ಮಗನ ರೂಪದಲ್ಲಿ ಕಂಡುಕೊಳ್ಳುತ್ತಿದ್ದ, ಮಗನಿಗೆ ತನ್ನ ಬದುಕಿನ ರೀತಿಯಿಂದ ಬೆಳಕಿನ ದಾರಿದೀವಿಗೆಯಾಗಿದ್ದ. ಕಳೆದು ಹೋದ ಸುಂದರ ಕನಸುಗಳನ್ನು ಮರಳಿ ಕೈ ಹಿಡಿದು ಕರೆತಂದು ಅವುಗಳೊಂದಿಗೆ ಮತ್ತೆ ಹೆಜ್ಜೆ ಹಾಕುತ್ತಿದ್ದ,  ತನ್ನ ಸರ್ವಸ್ವದಂತಿದ್ದ, ಮಗನೊಂದಿಗೆ.

may-flowerಪಶ್ಚಿಮಘಟ್ಟಗಳ ರುದ್ರ ರಮಣೀಯ  ಸ್ಥಳಗಳಲ್ಲಿ, ಸಹ್ಯಾದ್ರಿಯ ತಪ್ಪಲಿನಲ್ಲಿ ನೆಲೆಸಿರುವ ದೇವಾನುದೇವತೆಗಳ ತೀರ್ಥಕ್ಷೇತ್ರಗಳಿಗೆ ದರ್ಶನ ಭಾಗ್ಯ ಅರಸಿ, ಅಸಂಖ್ಯ ಭಕ್ತರು, ಪರಿಸರ ಪ್ರಿಯರು, ಪಶ್ಚಿಮ ಘಟ್ಟಗಳಿಗೆ ಭೇಟಿ ನೀಡುವುದು ಸಾಮಾನ್ಯ. ಪ್ರತಿ ಹೆಜ್ಜೆ ಹೆಜ್ಜೆಗೆ ಹರಿಯವ ನೊರೆ, ತೊರೆ ಝರಿಗಳಲ್ಲಿ ಜುಳು ಜುಳು ಹರಿಯುವ ಆ ರಭಸದ ತಿಳಿ ಜಲಧಾರೆಯ ಸೊಬಗು, ಶುಭ್ರ ನೀರಿನಲ್ಲಿ ತಳಮಟ್ಟದವರೆಗಿನ ಕಾಣುವ ಮರಳು, ಪಾಚಿ-ಕಲ್ಲುಗಳಲ್ಲಿ ಕಾಣುವ ಹಿಂಡು ಹಿಂಡು ಚಿಕ್ಕ ದೊಡ್ಡ ಮೀನುಗಳು, ಡೊಂಕು ಡೊಂಕಾಗಿ ಹರಿಯುವ ಇವುಗಳ ನೋಟ, ಮುಂಗಾರು ಮಳೆ ಪ್ರವೇಶದಿಂದ ಶ್ರಾವಣದಿಂದ ಭಾದ್ರಪದಗಳಲ್ಲಿ ಉಕ್ಕುತ್ತ ಹರಿಯುವ ಇವುಗಳನ್ನು ನೋಡಿ ಆನಂದಿಸಿದವರಿಗೇ ಗೊತ್ತು.

ಮನಕೆ ತಂಪನೀಯುವ ಸೊಬಗಿನ, ಆಹ್ಲಾದಕರ ತಂಪು ಸುರಿಸುವ ಸುಂದರ ಬೆಟ್ಟ ಬಯಲುಗಳಲ್ಲಿ ಹಬ್ಬಿರುವ ಹಸಿರಾತಿಹಸುರು ಪಶ್ವಿಮ ಘಟ್ಟದ ತಾಣಗಳು. ಅಪ್ಪ-ಮಗ ಸುತ್ತ-ಮುತ್ತಲಿನ ಬಹುತೇಕ ಪ್ರೇಕ್ಷಣೀಯ ಸ್ಥಳಗಳು, ಜಲಪಾತಗಳನ್ನು ಹಿಡಿದು ನೋಡದೇ, ಆಡದೇ ಇರುವ ಯಾವುದೂ ಉಳಿದಿಲ್ಲವೆನುವಂತೆ ತಮ್ಮ ಬಿಡುವಿನ ಸಮಯದಲ್ಲಿ ತಿರುಗುವವರು…. ಒಲ್ಲೆನೆಂದರೂ ಅಮ್ಮನನ್ನು ತಮ್ಮ ಜೊತೆಯಲ್ಲಿಯೇ ಕಾರಿನಲ್ಲಿ ಕರೆದುಕೊಂಡು ಬಿಡುವುದನ್ನು ಮರೆಯದೇ….. ಹೀಗಾಗಿ ಇಂತಹ ವಿಷಯಗಳಲ್ಲಿ ಸುಪ್ರಸಿಧ್ಧರು, ಕಚೇರಿಯಲ್ಲಂತೂ ಯಾರಾದರೂ ಆಗಂತುಕರು, ಅಧಿಕಾರಿಗಳು ಬಂದರೆ ಅಪ್ಪನೇ  ಒಂದು ರೆಫರನ್ಸ್ ಗೈಡ್.

ಅದೊಮ್ಮೆ ಒಬ್ಬ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಕಚೇರಿ ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗಾಗಿ ಬಂದಿದ್ದರು. ಅವರೊಬ್ಬ ದರ್ಪದ ಅಧಿಕಾರಿ ಎಂದೇ ಹೆಸರು ವಾಸಿಯಾಗಿದ್ದವರು. ಅವರಿಗೆ ತಮ್ಮ ಮಗನ ಮೇಲೆ ಅಪಾರ ಪ್ರೀತಿ. ಹೀಗಾಗಿ ಮಗನಿಗೆ ಪಶ್ಚಿಮ ಘಟ್ಟಗಳ ರಮಣೀಯ ಸ್ಥಳಗಳನ್ನು ತೋರಿಸಲು ಕರೆದುಕೊಂಡು ಬಂದಿದ್ದರು. ಮಗನ ಜೊತೆಗಿನ ಅವರ ಒಡನಾಟದಿಂದ ಅವರಿಬ್ಬರೂ ಪರಸ್ಪರ ಬಹಳ ಸ್ನೇಹಜೀವಿಗಳಾಗಿದ್ದುದು ಗೋಚರವಾಗುತ್ತಿತ್ತು. ಇದನ್ನು ಕಂಡ ಈ ಅಪ್ಪನಿಗೂ ಗಳಿಗೆ ಗಳಿಗೆಯೂ ತನ್ನ ಮಗ ನೆನಪಾಗತೊಡಗಿದ್ದ. ಕಚೇರಿ ಕೆಲಸಗಳ ಪರಿಶೀಲನಾ ಸಭೆಯನ್ನು ಮುಂಜಾನೆಯೇ ನಿಗದಿಪಡಿಸಿದ್ದು, ಮಗನಿಗೆ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ಆದಷ್ಟು ಬೇಗ ನೋಡಬೇಕೆನಿಸಿದ್ದರಿಂದ ಮಗನ ಮೇಲಿನ ಪ್ರೀತಿಗೆ, ಅವನ ಬೇಡಿಕೆಯಂತೆ ಅವುಗಳನ್ನು ವೀಕ್ಷಿಸಲು ಹೋದವರು, ಮಗನಿಗೆ ಇನ್ನೂ ಹೆಚ್ಚು ಹೆಚ್ಚು ತೋರಿಸಬೇಕೆಂಬ ಅವರ ಅಕ್ಕರೆ, ಪ್ರಯಾಣವನ್ನು ಬೆಳೆಸುತ್ತಲೇ ಇತ್ತು.

kalyan_mantapಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತ, ಸಾಹೇಬರ ಪ್ರವಾಸಕ್ಕೆ ಎಳ್ಳಷ್ಟು ತೊಂದರೆಯಾಗದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತ ಅವರ ಮೆಚ್ಚುಗೆಗೆ ಪಾತ್ರನಾಗಿದ್ದವನು ಈ ಅಪ್ಪ,… ಸಾಹೇಬರು ತಮ್ಮ ಮಗನೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ, ಅವರಿಬ್ಬರ ಆಪ್ತ ಸಂಭಾಷಣೆಗಳು ಅವರಿಗೆ ಪದೇ ಪದೇ ತಮ್ಮ ಮಗನ ನೆನಪನ್ನು ತಂದು ಕೊಡುತ್ತಿತ್ತು. ಅದೆಲ್ಲಿಗೋ ಹೊರಡಲಿದ್ದ ಮಗನಿಗೆ, ಅವನ ಬೇಡಿಕೆ ಸಾಮಗ್ರಿಗಳನ್ನು ತಂದು ಕೊಡಲು ಅಪ್ಪನೇ ಆಗಬೇಕಿತ್ತು, ಪದೇ ಪದೇ ಮುಖದಲ್ಲಿ ಅದೇನೋ ಅವ್ಯಕ್ತ ಆತಂಕ. ಮೊಬೈಲ್ ಗಳಿಗಿಂತ ಮೊದಲಿನ ಕಾಲವದು.

ಅಲ್ಲಲ್ಲಿ ರಸ್ತೆಯ ಮೇಲಿನ ಗ್ರಾಮಗಳಲ್ಲಿ ದೂರವಾಣಿಯಲ್ಲಿ ಅವಶ್ಯಕತೆಗೆ ತಕ್ಕಂತೆ ಕಚೇರಿ, ಸ್ನೇಹಿತರು, ಹಾಗೂ ಮನೆಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಯಾವತ್ತೂ ಹಾಗೆಯೇ ಇವರನ್ನು ಕೇಳದೇ ಕಚೇರಿಯಲ್ಲಿ ಕೆಲಸಗಳೇ ನಡೆಯದಷ್ಟು ಅನುಭವಿ. ಎಷ್ಟೇ ಅವಸರಿಸಿ ಪ್ರವಾಸೀ ತಾಣಗಳನ್ನು ನೋಡಿ ಬಂದರೂ ಕಚೇರಿಗೆ ಬಂದಾಗ ಸಂಜೆ 3.00 ಗಂಟೆ ಮೀರುತ್ತಿತ್ತು. ಮೀಟಿಂಗ್ ಕೂಡಲೇ ಪ್ರಾರಂಭವಾಯಿತು. ಸಂಜೆಯಾದರೂ ಸಭೆ ಮುಕ್ತಾಯವಾಗುವ ಲಕ್ಷಣಗಳು ಗೋಚರಿಸಲಿಲ್ಲ. ತಮ್ಮ ಪ್ರವಾಸದಲ್ಲಿ ಜೊತೆಗಿದ್ದ ಈ ಅಪ್ಪ, ಜರೂರು ಕಾರ್ಯವೊಂದಕ್ಕೆ ತೆರಳುವವರಂತೆ ಏಳುತ್ತಿದ್ದಂತೆಯೇ, ಇವರತ್ತ ಸಿಟ್ಟಿನಿಂದಲೇ ಕೆರಳಿ, ಯಾರೂ ಸಭೆ ಮುಗಿಯುವವರೆಗೆ ಹೋಗಕೂಡದು ಎಂದು ಆಜ್ಙಾಪಿಸಿದರು. ಅವರ ದರ್ಪದ ನಡುವಳಿಕೆಯನ್ನು ಮೊದಲೇ ಕೇಳಿ ತಿಳಿದಿದ್ದ ಅಪ್ಪ ಅನಿವಾರ್ಯವಾಗಿ ತಮ್ಮ ಸ್ಥಳದಲ್ಲಿ ಸಭೆ ಮುಗಿಯುವುದನ್ನೇ ಎದುರು ನೋಡುತ್ತಿದ್ದರು… ಕೆಲಸಗಳಲ್ಲಿ ಅಲ್ಪವೇ ಲೋಪವಿದ್ದರೂ ಸಸ್ಪೆಂಡ್ ಮಾಡುವ ಗೀಳಿತ್ತು ಆ ಅಧಿಕಾರಿಗೆ. ಅದರಿಂದ ತಮಗೆ ಒಳ್ಳೆಯ ಹೆಸರು, ಅಂತಸ್ತು ಬಂದಿದೆ ಎಂದು ಅಭಿಮಾನವನ್ನು ತೋರ್ಪಡಿಸುತ್ತಿದ್ದರು, ಇದು ಅವರ ನಡುವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಸಭೆಯಲ್ಲಿ ಚಹ ಬಿಸ್ಕಿಟ್ಸ್ ಸರಬರಾಜು ಮಾಡುತ್ತಿದ್ದ ಜವಾನನೊಂದಿಗೆ ಇನ್ನೊಬ್ಬ ಅವರ ಸಹೋದ್ಯೋಗಿ ಬಂದು ಅವರ ಕಿವಿಯಲ್ಲಿ ಕೈಯಲ್ಲಿರುವ ಗಡಿಯಾರ ತೋರಿಸುತ್ತ ಅದೇನೋ ಹೇಳಿ ಹೊರಗೆ ಹೋದ. ಆದರೂ ಅಧಿಕಾರಿಯ ದರ್ಪಕ್ಕೆ ಇನ್ನಷ್ಟು ಹೊತ್ತು ತಡೆದು ಕುಳಿತ ಅಪ್ಪನಿಗೆ ಇನ್ನು ಕುಳಿತುಕೊಳ್ಳಲಾಗಲಿಲ್ಲ. ಕೆಂಗಣ್ಣಿನಿಂದ ನೋಡುತ್ತಿದ್ದ ಅಧಿಕಾರಿಯ ಹತ್ತಿರ ದೈನ್ಯದಿಂದ ಹೋಗಿ, ಅವರತ್ತ ಬಗ್ಗಿ, ಕೈಮುಗಿದು ನಮ್ರನಾಗಿ ಕೋರುತ್ತಿದ್ದ ನಡುಗುವ ದನಿಯಲ್ಲಿ, ‘`ಸರ್, ದಯಮಾಡಿ ನನಗೆ ಅನುಮತಿ ನೀಡಿ. ನಾನು ಹೋಗಲೇಬೇಕಿದೆ. ಇಂದು ಬೆಳಿಗ್ಗೆಯೇ ನನ್ನ ಮಗ, ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಎಲ್ಲ ವಿಧಿವಿಧಾನವನ್ನು ನೆರವೇರಿಸಿ, ನನ್ನ ರುಜುವಿಗಾಗಿ ಆಸ್ಪತ್ರೆಯಲ್ಲಿ ಬಂಧು ಬಾಂಧವರು ನನ್ನ ಸ್ನೇಹಿತರು ಕಾಯುತ್ತಿದ್ದಾರೆ,

ಅನೇಕ ಡಾಕ್ಯುಮೆಂಟ್ ಗಳಿಗೆ ನನ್ನ ಸಹಿ ಅವಶ್ಯಕತೆ ಇದೆ. ಮತ್ತೆ ಸ್ಮಶಾನದಲ್ಲಿ ಚಿತೆಗೆ ಅಗ್ನಿ ಸ್ಪರ್ಶವನ್ನು ತಂದೆಯಾದ ನಾನೇ ನೆರವೇರಿಸಬೇಕಿದೆ. ಆದ್ದರಿಂದ ಈ  ಸಂಜೆಯೇ ಅಗ್ನಿ ಸಂಸ್ಕಾರ ಮಾಡಬೇಕಾಗಿದೆ. ರಾತ್ರಿಯಾಧರೆ ಇಲ್ಲಿ ಶವಸಂಸ್ಕಾರ ಮಾಡುವ ಸಂಪ್ರದಾಯವಿರುವುದಿಲ್ಲ. ಇನ್ನಷ್ಟು ವಿಳಂಬವಾದರೆ, ಎಲ್ಲವನ್ನೂ ನಾಳೆಗೆ ಮಾಡಬೇಕಾಗುತ್ತದೆ. ಅಲ್ಲಿಯವರೆಗೆ ಬಂದವರೆಲ್ಲರೂ ಕಾಯಬೇಕಾಗುತ್ತದೆ. ಆದ್ದರಿಂದ ತೆರಳಲು ದಯಮಾಡಿ ಅನುಮತಿ ನೀಡಬೇಕು” ಎಂದು ಇದುವರೆವಿಗೂ ತಡೆದಿದ್ದ ಕಂಬನಿಗಳನ್ನು ಕಣ್ಣಾಲಿಗಳಲ್ಲಿ ತುಂಬಿ ನಿಂತಿದ್ದ.

ಇಷ್ಟು ಹೊತ್ತು, ಮಗ ತೀರಿಕೊಂಡಿದ್ದರೂ, ತಮ್ಮ ಮಗನಿಗಾಗಿ ಸಂಯಮದಿಂದ ಸ್ಥಳಗಳನ್ನು ತೋರಿಸುತ್ತಲಿದ್ದ ಈ ಮನುಷ್ಯನ ಎರಡೂ ಕೈಗಳನ್ನು ಹಿಡಿದುಕೊಂಡು ಮಾತು ಹೊರಬರದೇ ದಿಙ್ಮೂಢರಾಗಿ ನಿಂತು ಬಿಟ್ಟಿದ್ದರು ಅಧಿಕಾರಿ. ಹಾಗೆಯೇ ತನ್ನ ತಪ್ಪನ್ನು ಕ್ಷಮಿಸಲು ಕೋರುತ್ತ ದಂಪತಿಗಳಿಗೆ ಸಾಂತ್ವನ ಹೇಳುವಾಗ ಗೊತ್ತಾದ ಇನ್ನೊಂದು ಸಂಗತಿಯೆಂದರೆ, ಅವರ ಧರ್ಮಪತ್ನಿಗೆ ಈ ಸುದ್ದಿ ಕೇಳಿದ ತಕ್ಷಣ  ಶಾಕ್ ನಿಂದ ಹೃದಯಾಘಾತವಾಗಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಲು ತಾನೇ ಸಮೀಪದ ಹಳ್ಳಿಗಳಿಂದ ನಿರ್ದೇಶನವನ್ನು ಕೂಡ ನೀಡುತ್ತಲಿದ್ದೆ ಎಂದು ಗ್ರಾಮಗಳಲ್ಲಿ ದೊರಕುತ್ತಿದ್ದ ದೂರವಾಣಿಯಲ್ಲಿ ಇದೆಲ್ಲವನ್ನೂ ನಿರ್ವಹಿಸುತ್ತ ಬಂದುದನ್ನು ವಿವರಿಸಿದರು.

ಅಧಿಕಾರಿ ದಿಙ್ಮೂಢರಾಗಿದ್ದರು. ತಕ್ಷಣ ಸಭೆಯನ್ನು ಬರಖಾಸ್ತುಗೊಳಿಸಿ ಅವರೊಂದಿಗೆ ಮುಂದಿನ ಕಾರ್ಯಕ್ಕೆ ತಾವೂ ತೆರಳಿದ್ದರು. ಇಂತಹ ಅಸಂಭವ ಘಟನಾವಳಿಗಳು ಸಂಭವಿಸುತ್ತ ಸಾಗಿ ಜ್ಞಾನಪಟಲದಿಂದ  ಒಮ್ಮೆ ಮರೆಯಾಗಿ ಬಿಡುತ್ತವೆ. ಈಗಲೂ ಹಾಗೆಯೇ ಆಗಿತ್ತು.

ಕೆಲ ವರ್ಷಗಳೇ ಸಂದರೂ, ಮೊನ್ನೆಯೇ ನಡೆದಂತಿದ್ದ ಈ ಘಟನೆಯ ಕೆಲ ದಿನಗಳ ನಂತರ ಆ ಅಪ್ಪ ನನ್ನನ್ನು ಹುಡುಕುತ್ತ ಬಂದು ಒಂದು ಲಕೋಟೆ ನನ್ನ ಕೈಗಿತ್ತರು. ಬಿಡಿಸಿ ನೋಡಿದೆ. ಆಪ್ತ ಸ್ನೇಹಿತನಂತಿದ್ದ ಆ ತನ್ನ ಮಗನ ನೆನಪಿಗಾಗಿ, ತಮ್ಮ ಹಿರಿಯರು ಬಾಳಿದ ಊರಿನಲ್ಲಿ ಕಟ್ಟಿದ ಸುಂದರ ಮಂಗಲ ಭವನದ ಉದ್ಘಾಟನೆಯ ಆಮಂತ್ರಣವದು. ನನ್ನ ಬಗ್ಗೆ ಅಪಾರ ಗೌರವವಿರಿಸಿಕೊಂಡಿದ್ದ ಅವರು ನನ್ನೊಂದಿಗೆ ಮಾತನಾಡುತ್ತ, ನಿಮ್ಮಂಥವರು ದಯವಿಟ್ಟು ಅದರ ಉದ್ಘಾಟನೆ ದಿನ ಬರಲೇಬೇಕೆಂದು ಸ್ನೇಹಿತನ ಒತ್ತಾಸೆಯಿಂದ ಆತ್ಮೀಯವಾಗಿ ಕೋರಿದರು. ಸುಮಾರು ವರ್ಷಗಳಿಂದ ಇವರನ್ನು ಬಲ್ಲ ನಾನು, ‘ಇದೆಲ್ಲ ಹೇಗೆ ಸಾಧ್ಯವಾಗಿಸಿದಿರಿ’ ಎಂದು ಕಣ್ಣಾಲಿಗಳನ್ನು ತುಂಬಿ ಕೇಳಲಷ್ಟೆ ನನಗೆ ಸಾಧ್ಯವಾಯಿತು.

ಅವರಿಂದಲೂ ಮಾತೇ ಹೊರಡಲಿಲ್ಲ. ಆದರೂ ಕಷ್ಟಪಟ್ಟು ಗದ್ಗದಿತ ದನಿಯಲ್ಲಿ ಹೇಳಿದ್ದಿಷ್ಟೇ. ‘ಹಿರಿಯರಿಂದ ಬಂದ ಹೊಲದ ಆಸ್ತಿ ಇತ್ತು. ಅದರೊಂದಿಗೆ ನನ್ನಲ್ಲಿದ್ದುದನ್ನೂ ಮಾರಿ, ಅವನ ಹೃದಯಭಾಗದಲ್ಲಿ ಎಂದೆಂದೂ ಮಂಗಲ ಕಾರ್ಯಗಳು ನೆರೆವೇರುತ್ತಿರಲಿ ಎಂದು ಈ ಕಾರ್ಯ ಕೈಗೊಂಡೆ’ ಎಂದರು. ವಾಹ್ ! ಎಂದು  ಸ್ನೇಹಿತನಿಗಿಂತಲೂ ಆಪ್ತವಾಗಿದ್ದ ಅವರೊಂದಿಗೆ ಬಹು ಅನುಕರಣೀಯ ಕೆಲಸ ಮಾಡಿದ್ದೀರಿ ಎಂದು ಅಭಿಮಾನದಿಂದ  ತಬ್ಬಿಕೊಂಡೆ. ಕಣ್ಣಾಲಿಗಳು ತುಂಬಿಬಂದಿದ್ದವು…. ಎದ್ದು ಹೋದ ಮಗ ಕನಸಿನಂತೆ ಕರಗಿ, ದಂತಕಥೆಯಾಗಿದ್ದರೆ, ಇದ್ದ ಅಪ್ಪನೂ ಕನಸನ್ನು ಕೈಹಿಡಿದು ಕರೆತಂದು ದಂತಕಥೆಯಂತಾಗಿಸಿದ್ದಾರೆ.

ಅಗಾಧ ಆಂತ:ಶಕ್ತಿಯ ವ್ಯಕ್ತಿತ್ವವುಳ್ಳ ಇವರು ಕತ್ತಲೆಯಲ್ಲಿ ಅರಳಿ ಪರಿಮಳ ಬೀರುವ ಬ್ರಹ್ಮಕಮಲದಂಥವರು. ಬೆಳಗಾವಿ ಜಿಲ್ಲೆಯ ಪೂನಾ – ಬೆಂಗಳೂರು ರಸ್ತೆಯ ಮೇಲಿರುವ ಮೇ ತಿಂಗಳಿನಲ್ಲಿ ಅರಳುವ ಕೆಂಪು ಹೂ ಮರದ  ಹೆಸರೊಂದನ್ನು ಸೂಚಿಸುವ ಸಕ್ಕರೆಯಂಥ ಪಟ್ಟಣದಲ್ಲಿ ಈ ಮಗನ ನೆನಪಿನ ಮಂಗಲ ಭವನವೆಂಬ ತಾಜ್ ಮಹಲ್ ವೊಂದನ್ನು ರೂಪುಗೊಳಿಸಿ ಸಾಕಾರಗೊಳಿಸಿದ್ದಾರೆ… ಮಗನನ್ನು ಅಮರನನ್ನಾಗಿಸಿ, ತಾವೂ ಸಾರ್ಥಕ್ಯದ ದಾರಿಯಲ್ಲಿ ತುಂಬ ಎತ್ತರವಾಗಿ ನಿಂತಿದ್ದಾರೆ  ನಮಗೆಲ್ಲ ಬೆಳಕಾಗಿ, ದಾರಿ ದೀವಿಗೆಯಂತೆ !

‍ಲೇಖಕರು avadhi

January 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

    • ಲಕ್ಷ್ಮೀಕಾಂತ ಇಟ್ನಾಳ

      ಮೆಚ್ಚುಗೆಗೆ ಧನ್ಯವಾದ ಸರ್

      ಪ್ರತಿಕ್ರಿಯೆ
  1. Ramesh kamath

    ಅಪ್ಪ ನೆಂಬ ಆ ಪದಕ್ಕೆ ಒಂದಿಷ್ಟೂ ಚ್ಯುತಿ ಬರದಂತೆ ಸದಾ ಮಗನ ಏಳ್ಗೆಯಲ್ಲೇ ತನ್ಮಯನಾಗಿ ಕಡೆಗೆ ತಾನು ಕೆಲಸಮಾಡುವ ಕಛೇರಿಯಲ್ಲಿ ಮಗನ ಸಾವಿನ ದಿನದಂದು ಸಹ ಕರ್ತವ್ಯಪಾಲನೆ ನಿರ್ವಹಿಸಿದ ಹೃದಯವಿದ್ರಾವಕ ಕ್ಷಣವಂತೂ ನಮ್ಮ ಮನಸ್ಸನ್ನು ಹಿಂಡಿ ಕಣ್ಣಂಚಿನಲ್ಲಿ ನೀರುನಿಂತಿಸಿದ್ದು ಸುಳ್ಳಲ್ಲ ,ಇಟ್ನಾಳರೆ.
    ಕಡೆಗೆ ಮಗನ ನೆನಪಿನಾರ್ಥ ಮಂಗಲ ಸಭಾಭವನ ಕಟ್ಟಿಸಿ ‘ ಅಪ್ಪ ನೀನೊಂದು ಆಲದಮರ ‘ ಈ ಪದಗುಚ್ಛಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ಆ ಅಪ್ಪನಿಗೆ ನನದೊಂದು ಸಲಾಂ.

    ಪ್ರತಿಕ್ರಿಯೆ
    • ಲಕ್ಷ್ಮೀಕಾಂತ ಇಟ್ನಾಳ

      ಬದುಕಿನ ದಾರಿಯಲ್ಲಿ ಅಲ್ಲಲ್ಲಿ ಪರಿಮಳ ಬೀರುವ ಹೂವುಗಳು ಇದ್ದೇ ಇರುತ್ತವಲ್ಲವೇ ಸರ್, ಪ್ರತಿಯೊಬ್ಬರ ಬದುಕಿನಲ್ಲಿ ಇಂತಹ ಕೆಲವಾದರೂ ಘಟನೆಗಳು ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಅಂತಹುದರಲ್ಲೊಂದು ನನ್ನ ಈ ಅನುಭವ. ತಮ್ಮ ಮೆಚ್ಚುಗೆಗೆ ಧನ್ಯ ಕಾಮತ ಸರ್

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: