ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಇಲ್ಲ TV  ಮತ್ತು ಅಮ್ಮ ಇಲ್ಲ TV

ನನ್ನನ್ನು ನಂಬಿ ಪ್ಲೀಸ್… ಈ ದೇಶದ “ಇಲೆಕ್ಟ್ರಾನಿಕ್” ಮೀಡಿಯಾವನ್ನು ಈವತ್ತಿಗೂ ಆಳುತ್ತಿರುವುದು “ಇಲೆಕ್ಟ್ರಿಸಿಟಿ” ಕಾನೂನು!

ಬಹುಮಾಧ್ಯಮ ಪ್ರಸಾರಗಳು (MSO), ಮನೆಬಾಗಿಲಿಗೆ ಟೆಲಿವಿಷನ್ ಪ್ರಸಾರ (DTH),  ಬಾಗಿಲು ತಟ್ಟುತ್ತಿವೆ; ಫೇಸ್ ಬುಕ್ ನಂತಹ ಸೋಷಿಯಲ್ ಮೀಡಿಯಾಗಳು ವ್ಯಕ್ತಿಗತ ಮಟ್ಟದಲ್ಲಿ LIVE ಪ್ರಸಾರಕ್ಕೆ ಅನುವು ಮಾಡಿಕೊಡುತ್ತಿವೆ (ನಿನ್ನೆ ಸ್ವೀಡನ್ನಿನಲ್ಲಿ ಸಾಮೂಹಿಕ ಅತ್ಯಾಚಾರವೊಂದನ್ನೂ LIVE ಪ್ರಸಾರ ಮಾಡಿದ ಬಗ್ಗೆ ಓದಿ ಆಗಿದೆ!). ಇಂತಹದೊಂದು ಸ್ಥಿತಿಯಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ನಮ್ಮ ಸರ್ಕಾರಿ ನಿಯಂತ್ರಣ ಹೇಗಿದೆ ಎಂದು ಕೇಳಿದರೆ ಚಳಿಜ್ವರ ಬರುವುದೊಂದು ಬಾಕಿ ಇದೆ!

1885ರಲ್ಲಿ ಇಂಡಿಯನ್ ಟೆಲಿಗ್ರಾಫ್ ಕಾಯಿದೆಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು.  ಆ ಕಾಲಕ್ಕೆ ಭಾರತದೊಳಗೆ ಟೆಲಿಗ್ರಾಫ್ ಸ್ಥಾಪನೆ, ನಿಯಂತ್ರಣ ಮತ್ತು ನಿರ್ವಹಣೆಗಳಿಗೆಂದು ಬಂದ ಕಾಯಿದೆ ಅದು. ಟೆಲಿಫೋನು, ಟೆಲಿವಿಷನ್, ರೇಡಿಯೊ, ವೈರ್ ಲೆಸ್, ಮೊಬೈಲ್ ಮತ್ತು ವಿಡಿಯೋ ಪರಿಕರಗಳು ಇದೇ ಕಾಯಿದೆಯಡಿ ಬರುತ್ತವೆಂದು ನ್ಯಾಯಾಂಗ ಕೂಡ ಹೇಳಿದ್ದಿದೆ.

ಆದರೆ 1990ರ ವೇಳೆಗೆ ಉಪಗ್ರಹ ಆಧರಿತ ಟೆಲಿವಿಷನ್ ಪ್ರಸಾರ ಆರಂಭಗೊಂಡಾಗ, ಸರ್ಕಾರಕ್ಕೆ ಈ ಮಾಧ್ಯಮಗಳ ಮೇಲಿದ್ದ ಸಂಪೂರ್ಣ ಸ್ವಾಮ್ಯ ಸಡಿಲಾಯಿತು. ಖಾಸಗಿ ಚಾನೆಲ್ಲುಗಳ ನಿಯಂತ್ರಣಕ್ಕೆಂದು ಕೇಬಲ್ ಟೆಲಿವಿಷನ್ ಕಾಯಿದೆ ಬಂತು, ರೇಡಿಯೋ – ದೂರದರ್ಶನಗಳನ್ನು ಪ್ರಸಾರಭಾರತಿ ಕಾನೂನು (1990) ತರಲಾಯಿತು, ಟೆಲಿಕಮ್ಯೂನಿಕೇಷನ್, IPTV ಸೇರಿದಂತೆ ಪ್ರಸಾರಗಳಿಗಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಕಾಯಿದೆ (TRAI Act 1997) ಜಾರಿಗೆ ಬಂತು.

ಆದರೆ ಇವೆಲ್ಲ ಆಧರಿಸಿದ್ದದ್ದು, ದಿ ವೈರ್ ಲೆಸ್ ಟೆಲಿಗ್ರಾಫ್ ಕಾಯಿದೆ ಎಂಬ 1933ರ ಕಾಯಿದೆಯನ್ನು.

ಈ ಕಾಯಿದೆ ಜಾರಿಗೆ ಬಂದದ್ದು ಸಾರ್ವಜನಿಕ ತುರ್ತು, ಸುರಕ್ಷತೆಯ ಸನ್ನಿವೇಶಗಳಲ್ಲಿ ಪ್ರಸಾರಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ. ಪ್ರಸಾರ ಸಂಬಂಧಿ ಅಪರಾಧಗಳು, ಲೈಸನ್ಸ್ ಫೀಗಳ ವಸೂಲಿಗಳೆಲ್ಲ ಈವತ್ತಿಗೂ ನಡೆಯುವುದು ಇದೇ ಓಬೀರಾಯನ ಕಾಲದ ಕಾಯಿದೆಯ ಅಡಿ.

ಈಗ ಇರುವ TRAI  ಕಾಯಿದೆ ಕೂಡ ಸುದ್ದಿ ಪ್ರಸಾರವನ್ನು ಒಳಗೊಂಡಿಲ್ಲ. ಅದು ಹೀಗೆ ಹೇಳುತ್ತದೆ: Sec 2(1)(k): “Service of any description (including electronic mail, voice mail, data services, audio-text services, video-text services, radio paging and cellular mobile telephones services) which is made available to users. It means of a transmission or reception of signals, writing, images, and sounds or intelligence of any nature, by wire, radio, visual or any other electronic means but shall not include broadcasting services.”

ಹಾಗಾಗಿಯೇ ಸುಪ್ರೀಂ ಕೋರ್ಟು ಕ್ರಿಕೆಟ್ ಪ್ರಸಾರದ ಹಕ್ಕಿಗೆ ಸಂಬಂಧಿಸಿದಂತೆ ಬೆಂಗಾಲದ ಕ್ರಿಕೆಟ್ ಅಸೋಸಿಯೇಷನ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗಳ ನಡುವಿನ ಪ್ರಕರಣದಲ್ಲಿ (AIR 1995 SC 1235), ಸಾರ್ವಜನಿಕ ಹಿತಾಸಕ್ತಿ ಮತ್ತು ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯಗಳ ನಡುವಿನ ಗೊಂದಲ ನಿವಾರಿಸಲು ಸಮರ್ಥವಾದ ಕಾಯಿದೆಯೊಂದನ್ನು ಇಲೆಕ್ಟ್ರಾನಿಕ್ ಮೀಡಿಯಾಕ್ಕಾಗಿ ಸಿದ್ಧಪಡಿಸಬೇಕಿದೆ ಎಂದು ಅಭಿಪ್ರಾಯಪಟ್ಟಿತ್ತು.

ಇಂಗ್ಲಂಡ್, ಅಮೆರಿಕಗಳಲ್ಲಿ ಈ ಬಗ್ಗೆ ಕಾನೂನುಗಳಿವೆ, ಯುರೋಪಿನಲ್ಲಿ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿವೆ. ಇವೆಲ್ಲ ರೇಡಿಯೋ ಸ್ಪೆಕ್ಟ್ರಂ ವಿತರಿಸುವ ಅಂತಾರಾಷ್ಟ್ರೀಯ ಟೆಲಿಕಮ್ಯೂನಿಕೇಷನ್ ಒಕ್ಕೂಟ (ITU)ದ ನಿಯಮಗಳು, ಅಂತಾರಾಷ್ಟ್ರೀಯ ಇಂಟಲೆಕ್ಚುವಲ್ ಪ್ರಾಪರ್ಟಿ ಕಾಯಿದೆಗಳು, ಪತ್ರಿಕೋದ್ಯಮದ ಕಾಯಿದೆಗಳು , ಮಾಹಿತಿ ತಂತ್ರಜ್ನಾನ ಕಾಯಿದೆ, ಸೈಬರ್ ಕಾನೂನುಗಳು ಮತ್ತಿತರ ಹಲವು ಜಿಡುಕುಗಳನ್ನು ಒಳಗೊಂಡಿವೆ.

ಈಗಾಗಲೇ ಈ ಎಲ್ಲ ಜಿಡುಕುಗಳನ್ನು ಮರುಪರಿಶೀಲಿಸಿ ಬ್ರಾಡ್ ಕಾಸ್ಟಿಂಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಕಾಯಿದೆ (BRAI Act) ಗಾಗಿ 2007, 2013ರಲ್ಲಿ ಪ್ರಯತ್ನಗಳು ನಡೆದವಾದರೂ ಅವು ಸಂಸತ್ತನ್ನು ದಾಟಿ ಹೊರಬಂದು ಕಾಯಿದೆಗಳಾಗಲಿಲ್ಲ.

ಈವತ್ತು ರಿಪಬ್ಲಿಕ್ ಡೇ ದಿನ ಆರಂಭಗೊಳ್ಳುತ್ತಿರುವ ಅರ್ನಬ್ ಗೋಸ್ವಾಮಿಯವರ ‘ರಿಪಬ್ಲಿಕ್’ TVಯು ರಿಪಬ್ಲಿಕ್ ಎಂಬ ಹೆಸರನ್ನು ಬಳಸಿಕೊಳ್ಳುತ್ತಿರುವುದಕ್ಕೆ “ಸರ್ಕಾರಿ ಲಾಂಛನಗಳನ್ನು, ಹೆಸರುಗಳನ್ನು ಬಳಸಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ” ಎಂದು ಸುಬ್ರಹ್ಮಣ್ಯ ಸ್ವಾಮಿಯವರು ಕೇಂದ್ರ ಸರ್ಕಾರಕ್ಕೆ ದೂರಿರುವ ಹಿನ್ನೆಲೆಯಲ್ಲಿ ಹೇಳಬೇಕೆಂದರೆ, ಈವತ್ತು ಮೀಡಿಯಾಕ್ಕೆ ಸಂಬಂಧಿಸಿದಂತೆ  “… ಮದುವೇಲಿ ಉಂಡವರೇ ಜಾಣರು!”

ಹೆಚ್ಚಿನ ಓದಿಗಾಗಿ:

http://www.livemint.com/ Politics/ ODrFIOcKkGoiLXlT6ibVAL/Trai- eyes-revamp-of-broadcast- regulation.html

‍ಲೇಖಕರು admin

26 January, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading