ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಸ್ಸು ಅತ್ಯಂತ ಭಾರವಾಗಿದೆ.. ಭೂಪತಿ

ಬಹುಕಾಲದ ಗೆಳೆಯ ಯು.ಭೂಪತಿ ನಿಧನ ವಾರ್ತೆ ಆಘಾತ ತಂದಿದೆ; ನಿಜಕ್ಕೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಮ್ಮೂರು ವಡ್ಡು ಪಕ್ಕದ ತೋರಣಗಲ್ಲಿನ ಭೂಪತಿ ತಮ್ಮ ಇಪ್ಪತ್ತೇಳನೇ ವಯಸ್ಸಿಗೇ ಸಂಡೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಮನೆ ದೇವರು ನಮ್ಮೂರ ಹಳ್ಳದರಾಯ. ಅವರು ಶಾಸಕರಾಗಿದ್ದಾಗಲೂ ಬಳ್ಳಾರಿಯಲ್ಲಿ ನನ್ನ
ಸೈಕಲ್ನಲ್ಲಿ ಡಬಲ್‌ ರೈಡ್‌ ಹೊಡೆದದ್ದು ನೆನಪಾಗುತ್ತಿದೆ. ವಿಜಯನಗರ ಉಕ್ಕು ಕಾರ್ಖಾನೆ ಹೋರಾಟ, ನನ್ನ ಪತ್ರಿಕೋದ್ಯಮ ಸಾಹಸ, ಪುಸ್ತಕ ಪ್ರಕಾಶನ, ಬದುಕಿನ ಕಷ್ಟ ಸುಖ…. ಎಲ್ಲದರಲ್ಲೂ ನನ್ನ ಜತೆಗಿದ್ದ ಗೆಳೆಯ.

ಇವರು ನಮ್ಮಮ್ಮನ ಪಕ್ಕ ಕುಳಿತು ಬಳ್ಳಾರಿ ಭಾಷೆಯಲ್ಲಿ ಹರಟಲು ಶುರುಮಾಡಿದರೆ ಸಮಯದ ಅರಿವಿರುತ್ತಿರಲಿಲ್ಲ. ನನ್ನ ಮಗ ಅನಿಕೇತನನ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ, ಸ್ನೇಹ; ಅವನನ್ನು ‘ಬ್ರದರ್‌’ ಎಂದೇ ಸಂಬೋಧಿಸುತ್ತಿದ್ದರು.

ಮೊನ್ನೆಯಷ್ಟೇ ಫೋನ್‌ ಮಾಡಿದ್ದ ಭೂಪತಿ ಫೆಬ್ರವರಿ ಐದನೇ ತಾರೀಖು ಸಂಡೂರಿನಲ್ಲಿ ತಾವು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಬೇಕಿರುವುದರಿಂದ ಅಂಕುರ ಪ್ರಕಾಶನದ ಬಳ್ಳಾರಿ ಕಾರ್ಯಕ್ರಮಕ್ಕೆ ಹಾಜರಾಗಿ ಬೇಗ ತೆರಳುವುದಾಗಿ ತಿಳಿಸಿದ್ದರು. ಈಗ ಅವರಿಲ್ಲದ್ದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಅವರ ವೃದ್ಧ ತಾಯಿ, ಮಡದಿ ಡಾ.ವಸುಂಧರಾ ಭೂಪತಿ, ಮಕ್ಕಳಾದ ಅಭಿಮನ್ಯು ಸಿದ್ಧಾರ್ಥ ಅವರು ಈ ದುರಂತ-ದುಃಖವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೆನೆದರೆ ಭಯವಾಗುತ್ತದೆ.

-ಚಂದ್ರಕಾಂತ ವಡ್ಡು 

 

ನಾವೆಲ್ಲ ಅಂದರೆ ದರ್ಗಾ, ನಾಶಿಮಠ, ನಾನು ಎಪ್ಪತ್ತರ ದಶಕದಲ್ಲಿ ಕಮ್ಯೂನಿಸ್ಟ್‌ ಚಳವಳಿಗೆ ಬಂದವರು

ನಂತರದ ಎಂಭತ್ತರ ದಶಕದಲ್ಲಿ ಬಂದವರು ಭೂಪತಿ

ಅವರು ಶಾಸಕರಾಗಿದ್ದು ಆಕಸ್ಮಿಕ. ಸದನಕ್ಕೆ ಪ್ರವೇಶ ಮಾಡಿದ ದಿನದಿಂದಲೇ ಉತ್ತಮ ಮಾತುಗಾರ ಎಂದು ಹೆಸರು ಮಾಡಿದರು.

ಶಾಸಕರಿದ್ದಾಗಲೆ ಜಾತಿಯ ಅಡ್ಡಗೋಡೆ ದಾಟಿ ಡಾ ವಸುಂಧರಾ ಅವರನ್ನು ಭೂಪತಿ ಮದುವೆ ಆದರು. ಆ ಮದುವೆಗೆ ನಾನು, ನಾಶಿಮಠ ಸಾಕ್ಷಿಯಾಗಿದ್ದೆವು. ಜಾತಿಬಿಟ್ಟ ನಮ್ಮೆರಡು ಕುಟುಂಬಗಳ ನಡುವೆ ಅನ್ಯೋನ್ಯ ಸಂಬಂಧವಿತ್ತು.

ಎಂಭತ್ತರ ದಶಕದ ಸೋವಿಯತ್ ರಷ್ಯದ ಕುಸಿತ ನಮ್ಮ ನಂಬಿಕೆಯ ಬುಡವನ್ನೇ ಅಲ್ಲಾಡಿಸಿತು. ಭೂಪತಿ ನಂತರ ಕಾಂಗ್ರೆಸ್ ಗೆ ಹೋದರು. ಶಾಣಪ್ಪ ದಳಕ್ಕೆ ಹೋಗಿ ಈಗ ಬಿಜೆಪಿಯಲ್ಲಿದ್ದಾರೆ. ನಾಶಿಮಠ ಸ್ವಾಮಿ ಆಗಿದ್ದಾರೆ.

ಏನೇ ಆಗಿದ್ದರೂ ನಮ್ಮ ನಡುವಿನ ಮಾನವೀಯ ಸಂಬಂಧದ ಸೆಲೆ ಬತ್ತಿ ಹೋಗಿಲ್ಲ. ನಮ್ಮ ಬದುಕಿನ ಇಳಿ ಸಂಜೆಯಲ್ಲಿ ಭೂಪತಿ ಒಮ್ಮಿಂದೊಮ್ಮಲೆ ಎದ್ದು ಹೋಗಿದ್ದಾರೆ. ವಸುಂಧರಾ ಅವರು ಭೂಪತಿ ಅವರನ್ನು ಬಿಟ್ಟು ಒಂದು ಹೆಜ್ಜೆಯನ್ನೂ ಮುಂದಿಡುತ್ತಿರಲಿಲ್ಲ. ಅಂಥ ದಾಂಪತ್ಯ ಅವರದು. ಈ ಆಘಾತದಿಂದ ಅವರು ಚೇತರಿಸುತ್ತಾರೆ ಎಂಬ ನಂಬಿಕೆ ನಮಗಿದೆ.

-ಸನತ್ ಕುಮಾರ್ ಬೆಳಗಲಿ 

ಭೂಪತಿಯವರ ಅಕಾಲಿಕ ಅಗಲಿಕೆಯಿಂದ ಒಬ್ಬ ಸುಸಂಸ್ಕೃತ, ಮಾನವೀಯ, ಜೀವಪರ ನಾಯಕ ಮತ್ತು ಗೆಳೆಯನನ್ನು ಕಳೆದುಕೊಂಡಿದ್ದೇವೆ. ಅವರ ಹಸನ್ಮುಖಿ ವ್ಯಕ್ತಿತ್ವ ಮತ್ತು ನಕ್ಕು-ನಗಿಸುವ ಹಾಸ್ಯದ ಪ್ರವೃತ್ತಿ ಕಣ್ಕಟ್ಟಿದಂತಿದೆ. ಒಂದು ಸ್ನೇಹಮಯಿ, ಜೀವಂತ ಜ್ಞಾನಭಂಡಾರವಿಂದು ನಮ್ಮಿಂದ ದೂರವಾಗಿದೆ…

ಮನಸ್ಸು ಅತ್ಯಂತ ಭಾರವಾಗಿದೆ.

-ಜ್ಯೋತಿ ಅನಂತಸುಬ್ಬರಾವ್ 

‍ಲೇಖಕರು admin

26 January, 2017

2 Comments

  1. ಸುಧಾ ಚಿದಾನಂದಗೌಡ

    ಅತ್ಯಂತ ಅನಿರೀಕ್ಷಿತ ಆಘಾತಕಾರಿ ಸಂಗತಿ.

    ಬಳ್ಳಾರಿ ಜಿಲ್ಲೆಯವರೇ ಆದರೂ ವಸುಂಧರಾ-ಭೂಪತಿ ದಂಪತಿಗಳನ್ನು ಮೊದಲ ಬಾರಿ ಭೇಟಿಯಾದದ್ದು ದೂರದ ಸೇಡಂನಲ್ಲಿ.
    ವೇದಿಕೆಯ ಮೇಲೆಯೇ ಮಾತನಾಡಿಸಿದ ಸರಳಮನಸಿನ ವಸುಂಧರಾ ನಂತರ ಕಲೇಸಂ ಬಳ್ಳಾರಿ ಜಿಲ್ಲಾ ಶಾಖೆಯನ್ನು ಆರಂಭಿಸಿ ಅಧ್ಯಕ್ಷತೆ ಜವಾಬ್ದಾರಿಯನ್ನು ನನಗೆ ವಹಿಸಿದರು. ಆ ದಿನ ..ಹೊಸಪೇಟೆ ಸಮಾರಂಭದಲ್ಲಿ ಭೂಪತಿ ಅಣ್ಣನವರು ಸಡಗರದಿಂದ ಓಡಾಡಿದ್ದು, ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕಣ್ಣಿಗೆ ಕಟ್ಟಿದಂತಿದೆ..
    “ಮಹಿಳೆಯರಿಗೆ ಸಂಬಂಧ ಪಟ್ಟಂತೆ ಕಾರ್ಯಕ್ರಮ ಮಾಡ್ರಿ ತಂಗೀ, ನಾವಿದೀವಿ ಜೊತೆಗೆ” ಎಂದು ಆಪ್ತವಾಗಿ ಮಾತಾಡಿದ್ದು ನೆನೆಸಿಕೊಂಡರೆ…
    ಕೊರಳು ಕಟ್ಟಿ ಬರುತ್ತಿದೆ..
    ಕಾಲೆಳೆಯುವುದರಲ್ಲೇ ನಿರತರಾದ ಅನೇಕರ ಮಧ್ಯೆ ಈ ರೀತಿಯ ಪ್ರೋತ್ಸಾಹಕರ ಮಾತುಗಳನ್ನಾಡುವವರೆ ಅಪರೂಪ.
    ಕಷ್ಟಕರ ದಿನಗಳು ವಸುಂಧರಾ, ಅಭಿಮನ್ಯು, ಸಿದ್ಧಾರ್ಥರ ಎದುರಿಗಿವೆ..

    ವಸುಂಧರಾ- ಭೂಪತಿ ಜೊತೆಜೊತೆಗೇ ಇರುತ್ತಿದ್ದ ಪ್ರೇಮಜೋಡಿ..
    ಯಾವ ಮಹಿಳೆಗೇ ಆಗಲಿ, ಇದಕ್ಕಿಂತ ದುರ್ಭರಗಳಿಗೆ ಮತ್ತೊಂದಿರಲಾರದು..
    ಎದೆ ಒಡೆದುಹೋಗುವಂಥಹಾ ಶೋಕ ಇದು.. ತುಂಬ ಕಷ್ಟ..

    ಏನು ಹೇಳುವುದು…?
    “ನಾವು ನಿಮ್ಮ ದುಃಖದಲ್ಲಿ ಭಾಗಿ “ಎಂಬ ಗದ್ಗದ ಮಾತುಗಳನ್ನು ಬಿಟ್ಟು..?
    ಇನ್ನೇನು ತಾನೇ ಹೇಳಬಹುದು..! ಹೀಗಾಗಬಾರದಿತ್ತು…
    ಧೈರ್ಯ ತಂದುಕೊಳ್ಳಿ ವಸುಂಧರಾ..
    ನಿಮ್ಮ ದುಃಖದಲ್ಲಿ ಭಾಗಿಯಾಗಿ ನಾವು- ಕಲೇಸಂ ನ ಒಳಗೂ ಹೊರಗೂ ತುಂಬ ಜನ ಇದ್ದೇವೆ..
    ಬಂದದ್ದನ್ನು ಎದುರಿಸಿ, ಮಕ್ಕಳಿಗೂ ಧೈರ್ಯ ಹೇಳಿ.
    ಭೂಪತಿ ಅಣ್ಣನವರ ಆತ್ಮಕ್ಕೆ ಶಾಂತಿ ಸಿಗಲಿ.

  2. nagraj harapanahalli

    ನಿನ್ನೆ ರಾತ್ರಿ 7,30 ರ ಸಮಯ. ಕಾರವಾರ ಬೀಚ್ ನಲ್ಲಿ ಸಚಿವರ ಕಾರ್ಯಕ್ರಮವಿತ್ತು. ಪ್ರಜಾವಾಣಿ ವರದಿಗಾರ ಗೆಳೆಯ ರವಿಕುಮಾರ್ ನಾನು ಸಮಾರಂಭದಲ್ಲಿದ್ದೆವು. ರವಿ ಮೊಬೈಲ್ ಗೆ ವ್ಯಾಟ್ಸ್ ಪ್ ಮೇಸೇಜ್ ಬಂತು,. ಗೋವಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ಮಾಜಿ ಶಾಸಕ ಭೂಪತಿ ಎಂಬುವವರು ಹಠಾತ್ ಕುಸಿದು ಬಿದ್ದರು ಎಂದು. ಭೂಪತಿ ಅವರ ಹೆಸರು ಕೇಳುತ್ತಲೇ ಅವರು ನಮ್ಮ ಊರಿನ ಕಡೆಯವರು, ಚೆಕ್ ಮಾಡಿರಿ. ಅವರ ಪತ್ನಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಿದ್ದಾರೆ ಎಂದೆ. ಸ್ವಲ್ಪ ಹೊತ್ತಿನಲ್ಲಿ ಮಾಜಿ ಶಾಸಕ ಭೂಪತಿ ಅವರು ಇನ್ನಿಲ್ಲ ಎಂಬ ಸುದ್ದಿ ಖಚಿತವಾಯಿತು. ತುಂಬಾ ನೋವಿನಿಂದ ಅಲ್ಲಿಂದ ಹೊರಟೆವು. ಅನಿರೀಕ್ಷಿತವಾಗಿ ಎರಗುವ ಸಾವು !!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading