ಅಪ್ಪನ ಆನ್‌ಲೈನ್, ಮಕ್ಕಳ ಆಫ್ ಲೈನ್ ಕ್ಲಾಸಿನ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂವೀಕ್ನೆಸ್ಸುಗಳೆರಡೂ ಹಿಮಾಲಯವೇಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಇನ್ನೂ ಬೆಳಕು ಹರಿದಿರಲಿಲ್ಲ. ನಮ್ಮದೂ ಕೂಡಾ ತೀರಾ ಬೇಗ ಎದ್ದು ಹೊರಡುವ ಪ್ಲಾನು ಇರಲಿಲ್ಲ. ನಿಧಾನಕ್ಕೆ ಫ್ರೆಶ್‌ ಆಗಿ ಒಂದು ಚಹಾ ಕುಡಿದು ಸ್ವಲ್ಪ ಹರಟೆ ಹೊಡೆದು ಎಂಟು ಗಂಟೆಯ ಹೊತ್ತಿಗೆ ಆ ಹಳ್ಳಿ ಬಿಡೋಣ ಎಂದು ನಿರ್ಧರಿಸಿ ಮಲಗಿದ್ದೆವು. ಸುಸ್ತು ಬೇರೆ. ರಾಜಸ್ಥಾನದ ಜೋಧಪುರದ ಒಂದು ಮೂಲೆಯ ಮರಳುಗಾಡು ಹಳ್ಳಿಯದು. ಅತಿ ಹೆಚ್ಚೂ ಅಲ್ಲದ ಹಿತವಾದ ಚಳಿ ಬೇರೆ, ಹೊದ್ದು ಮಲಗಲು ಇನ್ನೇನು ಬೇಕು! ಇಂತಹ ಚಳಿಯೇ ಸಾಕು ಮರಳುಗಾಡಿನ ಬೇಸಗೆಯ ಕಡು ಕಠೋರ ಧಗೆಯನ್ನು ಮರೆತು ಬಿಡಲು.

ಇದು ಎರಡನೇ ಸಲ ಇದೇ ಹಳ್ಳಿಯ ಇದೇ ಹಟ್‌ ವಾಸ. ಮತ್ತೆ ಈ ಹಟ್ಟಿಗೆ ಬರುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಯೋಚನೆಯೇ ಇಲ್ಲದೆ ಪಯಣ ಆ ಜಾಗಕ್ಕೆ ನಮ್ಮನ್ನು ತಂದು ನಿಲ್ಲಿಸಿತ್ತು. ಒಮ್ಮೆ ಬಂದರೆ ಮತ್ತೊಮ್ಮೆ ಬರಬೇಕು ಅನಿಸುವ ಜಾಗವೇ ಅದು. ವೃತ್ತಾಕಾರದ ಹುಲ್ಲುಹಾಸಿನ ಛಾವಣಿಯ, ಗೋಡೆಯ ಮೇಲೆ ಸಾಂಪ್ರದಾಯಿಕ ಶೈಲಿಯ ಚಿತ್ರಗಳನ್ನು ಬಿಡಿಸಿದ ಮಣ್ಣಿನ ತಂಪಾದ ಮನೆಗಳವು.

ಇಂಥ ಮನೆಯಲ್ಲಿ ಚಂದದ ಸುಖನಿದ್ರೆಯಿಂದ ಹೊರಬಂದು, ಏಳಕ್ಕೆಲ್ಲ ರೆಡಿಯಾಗಿ ಹೊರಗೆ ಬಂದು ನೋಡಿದರೆ ಮಜವಾದ ಚಳಿ ಚಳಿ ಬಿಸಿಲು. ಜೊತೆಗೆ ಛೋಟಾರಾಮನ ಹೆಂಡತಿ ತಂದು ಕೊಟ್ಟ ಶುಂಠಿ ಹಾಕಿದ ಚಹಾ. ಹಾ.. ಎನ್ನುತ್ತಾ, ಸ್ವಲ್ಪ ಸ್ವಲ್ಪವೇ ಹೀರುತ್ತಾ ಕುಳಿತಿರಬೇಕಾದರೆ ಛೋಟಾರಾಮ ಕುಂಟುತ್ತಾ ಬಂದ. ನಿನ್ನೆಯಿಂದ ಕಾಲು ನೋವು, ಓಡಾಡಲಾಗುತ್ತಿಲ್ಲ. ಅದೇನಾಯಿತೋ ಗೊತ್ತಿಲ್ಲ ಸಡನ್ನು ಹೀಗಾಯ್ತುʼ ಎಂದು ಗೋಳು ತೋಡಿಕೊಂಡ. ಅಯ್ಯೋ ಪಾಪವೇ ಅನಿಸಿ, ʻಮತ್ತೆ, ಇಷ್ಟು ಬೇಗ ಎದ್ರಿ, ಸ್ವಲ್ಪ ಹೊತ್ತು ರೆಸ್ಟು ತೆಗೊಂಡ್ರೆ ಒಳ್ಳೆದಿತ್ತಲ್ವಾʼ ಎಂದಿದ್ದಕ್ಕೆ, ʻಅಯ್ಯೋ, ರೆಸ್ಟಾ? ಬೆಳ್ಬೆಳಿಗ್ಗೇ ಆರು ಗಂಟೆಗೇ ಕ್ಲಾಸಿದ್ಯಲ್ಲಾ, ಏಳಲೇ ಬೇಕುʼ ಅಂದ.

ʻಕ್ಲಾಸಾ? ಈತನಿಗೆಂಥಾ ಕ್ಲಾಸಪ್ಪ ಇಲ್ಲಿ! ಅದೂ ಬೆಳಗಿನ ಜಾವ ಆರಕ್ಕೆʼ ಅಂತ ಆಶ್ಚರ್ಯವಾಗಿ ಕೇಳಿದರೆ, ಆತ ನಿರಾಯಾಸವಾಗಿ ನಗು ಚೆಲ್ಲುತ್ತಾ, ʻಅದೇ ಕುಕ್ಕಿಂಗ್‌ ಕ್ಲಾಸುʼ ಎಂದ. ನನಗೆ ಇನ್ನೂ ಆಶ್ಚರ್ಯ. ʻಕುಕ್ಕಿಂಗ್‌ ಕ್ಲಾಸಾ? ನೀವಾ? ಇದ್ಯಾವಾಗಿಂದ ಶುರುವಾಯ್ತು?ʼ ಎಂದೆ. ʻಐದಾರು ತಿಂಗಾಳಾಯ್ತು ಶುರುವಾಗಿ. ಸಕತ್‌ ಚೆನ್ನಾಗಿ ನಡೀತಿದೆʼ ಎಂದ.

ಈ  ಛೋಟಾರಾಮ ಇದ್ದಾನಲ್ಲ, ಬಹಳ ಇಂಟರೆಸ್ಟಿಂಗ್‌ ಮನುಷ್ಯ. ಈತನನ್ನು ಮೊದಲ ಸಾರಿ ಭೇಟಿಯಾಗಿದ್ದಾಗಲೇ ಗಮನಿಸಿದ್ದೆ, ಈತನ ಬತ್ತದ ಜೀವನ ಪ್ರೀತಿಯನ್ನು. ಈ ಸಾರಿ ಅದು ಪಕ್ಕಾಯಿತು. ರಾಜಸ್ಥಾನದ ಅದ್ಯಾವುದೋ ಹಿಂದುಳಿದ ಹಳ್ಳಿಯಲ್ಲಿ ಕೂತರೂ ಬದುಕುವ ಕಲೆ ಈತನನ್ನು ನೋಡಿ ಕಲಿಯಬೇಕು ನಾವು, ಅಂಥಾ ಜೀವನ.

ಓದಿದ್ದು ಅಲ್ಲೇ ಹಳ್ಳಿಯಲ್ಲಿ ಪಿಯುಸಿವರೆಗೆ. ಆದರೂ, ಹೊಸ ಹೊಸ ವಿಚಾರಗಳನ್ನು ತಿಳಿದು ಅದನ್ನು ಬದುಕಿಗೆ ಅಳವಡಿಸಲು ಗೊತ್ತು. ಹೊಸ ತಂತ್ರಜ್ಞಾನವನ್ನು ಕಲಿತುಕೊಂಡು ಈಗಿನ ಓಟಕ್ಕೆ ಸಮನಾಗಿ ಓಡೋದು ಗೊತ್ತು. ಜೊತೆಗೆ ಕುಲಕಸುಬಾದ ಧರಿ (ಕಾರ್ಪೆಟ್) ನೇಯ್ಗೆಯನ್ನೂ ಬಿಡದೆ ಅದನ್ನೂ ಜೊತೆಜೊತೆಯಾಗಿ ಮುಂದುವರಿಸೋದು ಕೂಡಾ ಗೊತ್ತು. ಅಳಿದುಳಿದ ಸಮಯದಲ್ಲಿ, ಅಂಥಾ ಬರಡು ಭೂಮಿಯಲ್ಲೂ ಅದೆಲ್ಲಿಂದಲೋ ನೀರು ತರಿಸಿಕೊಂಡು, ಇನ್ಯಾವುದೋ ಜಮೀನು ಲೀಸಿಗೆ ಪಡೆದು, ಅಲ್ಲಿ ಅಲ್ಪಸ್ವಲ್ಪ ವ್ಯವಸಾಯವನ್ನೂ ಮಾಡೋದು ಗೊತ್ತು.

ಜೋಧಪುರದ ಸಾಲವಾಸ್‌ ಎಂಬ ನಿಗಿನಿಗಿ ಸುಡುವ ಹಳ್ಳಿಯೆಂಬ ಬಿಸಿಲೂರಿನಲ್ಲಿ ಯಾವುದಾದರೊಂದೇ ಒಂದು ಕಾಯಕ ನೆಚ್ಚಿ ಬದುಕ ಕಟ್ಟಬಹುದೇ ಎಂದರೆ ಖಂಡಿತಾ ಸುಲಭದ ಕೆಲಸವಲ್ಲ. ಹಾಗೆ ನೋಡಿದರೆ, ದಕ್ಷಿಣದ ನಮಗೆ ಬದುಕಿನಲ್ಲಿ ಇಂತಹ ಕಷ್ಟಗಳೆಲ್ಲ ಇಲ್ಲ. ಉತ್ತರದ ಪರ್ವತದೂರಿನ ಮಂದಿಯನ್ನೂ, ಮರಳುಗಾಡಿನ ಜನರನ್ನೂ ನೋಡುವಾಗ ಪ್ರತಿ ಸಾರಿಯೂ ಹೀಗೆ ಅನಿಸಿದ್ದಿದೆ. ಮಳೆಗಾಲದಲ್ಲೊಂದು, ಬೇಸಗೆಯಲ್ಲೊಂದು, ಚಳಿಯಲ್ಲೊಂದು ಉದ್ಯೋಗ ವರ್ಗೀಕರಿಸಿಕೊಂಡು ಕೆಲಸ ಮಾಡುವ ಅವರಿಗೆ ಯಾವುದಾದರೊಂದಕ್ಕೆ ಪೆಟ್ಟು ಬಿದ್ದರೂ, ಆ ಕ್ಷಣಕ್ಕೆ ಇನ್ನೊಂದೇನು ಮಾಡಬಹುದು ಎಂದು ಯೋಚಿಸಿ ಮಾಡಬೇಕಾದ ಅನಿವಾರ್ಯತೆ ಬಂದುಬಿಡುತ್ತದೆ. ಇಲ್ಲದಿದ್ದರೆ ಜೀವನ ಸಾಗದು.

ಬಹುತೇಕರು ಸೋಲುವುದೇ ಇಲ್ಲಿ. ಪ್ರವಾಸಿಗರು ಬರುವ ಸೀಸನ್ನಿಗೊಂದು ಉದ್ಯೋಗ. ಅವರಿಲ್ಲದಾಗ ಇನ್ನೊಂದು. ವರ್ಷದ ನಾಲ್ಕೈದು ತಿಂಗಳು ಒಂದೂರಿನಲ್ಲಿ ಕೆಲಸ ಮಾಡಿ, ಉಳಿದ ತಿಂಗಳಲ್ಲಿ ತಮ್ಮೂರಿಗೆ ಹೋಗಿ ವ್ಯವಸಾಯ ಮಾಡುವ ಪರ್ವತನಾಡಿನ ಎಷ್ಟೋ ಜೀವಗಳನ್ನು ನೋಡಿದ್ದೇನೆ. ಪ್ರವಾಸೋದ್ಯಮ ಅವರಿಗೆ ಅನ್ನ. ಅದು ಇಲ್ಲದಿದ್ದರೆ, ವ್ಯವಸಾಯದಿಂದ ವರ್ಷವಿಡೀ ಕೂತು ಉಣ್ಣಲು ದಕ್ಕುವುದಿಲ್ಲ. ಇಷ್ಟೆಲ್ಲ ಇದ್ದರೂ, ಅದೆಲ್ಲವನ್ನೂ ಮೀರಿ, ಬರಡಾದರೂ ತನ್ನೂರಿನ ಅದೇ ನೆಲದಲ್ಲಿ ಕಾಲೂರಿ ಕೂತು, ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನೂ ಕೂಡಾ ಏನೆಲ್ಲ ಮಾಡಬಹುದು ಎಂಬುದಕ್ಕೆ ಈ ಛೋಟಾರಾಮನೇ ಸಾಕ್ಷಿ.

ಅದು ಯಾಕೆ ಹೇಗೆ ಶುರುವಾಯಿತು ಈ ಕುಕ್ಕಿಂಗ್‌ ಪುರಾಣ ಎಂದು ಛೋಟಾರಾಮ್‌ ಕಥೆ ಬಿಚ್ಚಿದಾಗಲೇ ಅರ್ಥವಾಗಿದ್ದು. ʻನೋಡಿ, ಮಾರ್ಚ್‌ ಅರ್ಧದಲ್ಲಿ ಲಾಕ್‌ಡೌನ್‌ ಆಗಿ ಬಿಟ್ಟಿತಲ್ಲ. ಅದಕ್ಕೂ ಮೊದಲು ನಮ್ಮ ಹಟ್‌ಗಳೆಲ್ಲ ವಿದೇಶಿಯರಿಂದ ಭರ್ತಿಯಾಗಿತ್ತು. ಕೆಲವರು ಹೊರಟಾಗಿತ್ತು. ಇನ್ನೂ ಒಂದಿಬ್ಬರು ಲಾಕ್‌ಡೌನ್‌ ನಂತರವೂ ಹತ್ತು ಹದಿನೈದು ದಿವಸ ಇದ್ದು, ಕೊನೆಗೆ ಏನೋ ವ್ಯವಸ್ಥೆಗಳನ್ನು ಮಾಡಿಕೊಂಡು ಹೊರಟುಬಿಟ್ಟರು. ಇದ್ದಕ್ಕಿದ್ದಂತೆ ಪ್ರವಾಸೋದ್ಯಮ ನಿಂತುಬಿಟ್ಟಿತು. ನಮಗೆ ಬೇಸಿಗೆ ಕಾಲ ಹೇಗೂ ಆಫ್‌ ಸೀಸನ್ನೇ. ಪ್ರವಾಸಿಗಳು ಕಡಿಮೆಯೇ ಆದರೂ, ನನ್ನಲ್ಲಿಗೆ ವಿದೇಶಿಯರು ಬರೋದು ಹೆಚ್ಚು.

ವಿದೇಶೀ ಪ್ರವಾಸಿಗರು ಭಾರತೀಯರಂತೆ ಒಂದೆರಡು ದಿನಕ್ಕೆ ಬರುವವರಲ್ಲ. ಅವರು ಬಂದರೆ ಕಡಿಮೆಯೆಂದರೂ ಒಂದು ವಾರ ಇದ್ದೇ ಇರುತ್ತಾರೆ. ಇಲ್ಲಿನ ಜನಜೀವನ ತಿಳಿದುಕೊಳ್ಳಲು ಅವರಿಗೆ ಹೆಚ್ಚು ಆಸಕ್ತಿಯಿರುತ್ತದೆ. ನಮ್ಮ ಕುಟುಂಬದ ಜೊತೆ ಬೆರೆಯುತ್ತಾರೆ. ಅಡುಗೆ ಕೆಲಸಕ್ಕೂ ನೆರವಾಗಿ ಹೊಸತು ಕಲಿಯುತ್ತಾರೆ. ಸಂಜೆಗಳಲ್ಲಿ ಹಳ್ಳಿ ಸುತ್ತುತ್ತಾರೆ. ಭಾರತೀಯ ಸಾಂಪ್ರದಾಯಿಕ ಶೈಲಿಯ ಚಿತ್ರಕಲೆ ಕಲಿತು, ನಮ್ಮ ಹಟ್‌ಗಳ ಗೋಡೆಗಳಲ್ಲಿ ಚಿತ್ರ ಬರೆಯುತ್ತಾರೆ. ಹೀಗೆ, ತುಂಬ ಖುಷಿಖುಷಿಯಾಗಿ ಕಳೆಯುವ ಅವರಿದ್ದರೆ ನಮಗೂ ಖುಷಿ.ʼ

ಆದರೆ ಈ ಸಾರಿ ಈ ಲಾಕ್‌ಡೌನು ಸಡನ್ನಾಗಿ ನಮ್ಮನ್ನೊಂದು ಮೌನಕ್ಕೆ ತಳ್ಳಿಬಿಟ್ಟಿತು. ಪ್ರವಾಸೋದ್ಯಮ ಹೇಗೂ ನಿಂತೇ ಬಿಟ್ಟಿತ್ತು. ನಮಗೆ ಹಳ್ಳಿಯಲ್ಲಿ ತಿರುಗಾಟಕ್ಕೆ ಹೆಚ್ಚು ತೊಂದರೆ ಆಗಲಿಲ್ಲ ಎಂಬುದು ಬೇರೆ ಮಾತು. ಇಲ್ಲೆಲ್ಲ ಹೇಳಲು ಕೇಳಲು ಯಾರಿದ್ದಾರೆ ಹೇಳಿ. ಹೊರಜಗತ್ತಲ್ಲಿ ನಡೆಯುತ್ತಿದ್ದುದರ ಪರಿಣಾಮ ಇಲ್ಲಿ ಆಗುತ್ತಿದ್ದು ಬಿಟ್ಟರೆ, ಬೇರೆ ತೊಂದರೆಗಳಾಗಲಿಲ್ಲ. ಅಂತಹ ಸಂದರ್ಭ ಏನಾದರೊಂದು ಹೊಸತು ಮಾಡಲೇಬೇಕಲ್ಲ ಎಂದು ಶುರುವಾದ ಹೊಸ ಅಧ್ಯಾಯವಿದು ಎಂದು ನಕ್ಕ ಛೋಟಾರಾಮ.

ಅದ್ಹೇಗೆ ಅಡುಗೆ ಐಡಿಯಾ ಬಂತು ಎಂದೆ. ʻನೋಡಿ ವಿದೇಶೀಯರ ಜೊತೆ ಒಡನಾಟ ಮೊದಲಿನಿಂದಲೇ ಇತ್ತಲ್ಲ. ಅವರಿಗೆ ನಮ್ಮ ರಾಜಸ್ಥಾನಿ ಸಾಂಪ್ರದಾಯಿಕ ಅಡುಗೆ ಇಷ್ಟವಾಗುತ್ತಿದ್ದುದು ಗೊತ್ತಿತ್ತು. ಲಾಕ್‌ಡೌನ್‌ ಆದ ಕೂಡಲೇ ಪ್ರಪಂಚವಿಡೀ ಒಂದೇ ತಿಂಗಳಲ್ಲಿ ಆನ್‌ಲೈನಾಗಿ ಬದಲಾಗಿಬಿಟ್ಟಿತಲ್ಲ. ಸಹಜವಾಗಿಯೇ ನಾನೂ ಆನ್‌ಲೈನಿನಲ್ಲಿ ಏನು ಮಾಡಬಹುದು ಎಂದು ಯೋಚಿಸತೊಡಗಿದೆ. ಆಗ ಹೊಳೆದ ಐಡಿಯಾ ಇದುʼ ಎಂದ.

ʻನನಗೆ ಮೊದಲಿಂದಲೂ ಹೊಸತು ಕಲಿಯೋದರಲ್ಲಿ ಆಸಕ್ತಿ. ಹೊಸ ತಂತ್ರಜ್ಞಾನ ಇದ್ದರೆ ನನಗದು ಯಾಕೆ ಗೊತ್ತಾಗಲ್ಲ ಎಂದು ಅದರ ಹಿಂದೆ ಬಿದ್ದು ಕಲಿತು ಬಿಡುವೆ. ಇದೂ ಹಾಗೆಯೇ. ನನ್ನ ಹಟ್ಟಿನ ಪ್ರೊಮೋಷನ್ನೆಲ್ಲ ಬೇರೆ ಮಧ್ಯವರ್ತಿ ವೆಬ್‌ಸೈಟುಗಳ ಮುಖಾಂತರ ಮಾಡುವುದು ಗೊತ್ತಾಗಿತ್ತು. ಹಾಗೆಯೇ ಇದನ್ನೂ ಶುರು ಮಾಡಿದೆ. ಆಮೇಲೆ ಹಿಂತಿರುಗಿ ನೋಡಲೇ ಇಲ್ಲ. ನನ್ನ ಕ್ಲಾಸಿಗೆ ಒಳ್ಳೆ ರೇಟಿಂಗ್‌ ಇದೆ. ಪ್ರತಿ ಕ್ಲಾಸಿಗೂ ಒಂದ್ಹತ್ತು ಮಂದಿ ಪ್ರಪಂಚದೆಲ್ಲೆಡೆಯಿಂದ ಭಾಗವಹಿಸ್ತಾರೆ.

ಪ್ರತಿಯೊಬ್ಬರಿಗೂ ಪ್ರತಿ ಕ್ಲಾಸಿನ ಆಧಾರದಲ್ಲೇ ಶುಲ್ಕವಿದೆ. ಈ ಶುಲ್ಕದಲ್ಲಿ ಶೇ.೧೫ನ್ನು ನಾನು ಈ ಕ್ಲಾಸನ್ನು ಪ್ರೊಮೋಟ್‌ ಮಾಡುವ ಮಧ್ಯವರ್ತಿ ವೆಬ್‌ಸೈಟಿಗೆ ಕೊಡಬೇಕಾಗುತ್ತದೆ. ಒಂದಿಷ್ಟು ಹಣ ಪ್ರತಿ ರೆಸಿಪಿಗೆ ಬೇಕಾದ ಸಾಮಾನುಗಳನ್ನು ಕೊಳ್ಳಲು ವ್ಯಯವಾಗುತ್ತದೆ. ಅದು ಬಿಟ್ಟರೂ ನನಗೆ ಇದರಿಂದ ಬಹಳ ಅನುಕೂಲವಾಗಿದೆ. ವಾರದಲ್ಲಿ ಎರಡರಿಂದ ಮೂರು ಕ್ಲಾಸು ತೆಗೆದುಕೊಳ್ಳುತ್ತೇನೆ. ಹೆಂಡತಿ ಅಡುಗೆ ಮಾಡಿ ತೋರಿಸಿದರೆ, ನಾನು ಇಂಗ್ಲಿಷಿನಲ್ಲಿ ವಿವರಿಸುತ್ತೇನೆ.

ನಮ್ಮಲ್ಲಿಗೆ ಬರುವ ವಿದೇಶೀಯರ ಜೊತೆಗೆ ಪಳಗಿ ನನಗೀಗ ಭಾಷೆ ಸಮಸ್ಯೆಯೇ ಆಗುವುದಿಲ್ಲ. ಒಂದು ಗಂಟೆಯ ಕ್ಲಾಸು. ಪ್ರತಿಯೊಬ್ಬರಿಂದರೂ ೨೦ ಡಾಲರ್ ಶುಲ್ಕ.‌ ಲಾಕ್‌ಡೌನ್‌ ಸಮಯದಲ್ಲಿ ಬಹಳ ಖುಷಿ ಕೊಟ್ಟ ಕೆಲಸವಿದುʼ ಎಂದು ಹೇಳಿ ಆತ ಬಾಯಿ ಮುಚ್ಚಿದರೆ, ನನ್ನ ಬಾಯಿ ಮಾತ್ರ ಆಶ್ಚರ್ಯದಲ್ಲೀ ತೆರೆದೇ ಇತ್ತು.

ರಾಜಸ್ಥಾನಿ ಅಡುಗೆ ಕಲಿಯಲು ಇಷ್ಟೆಲ್ಲ ಆಸಕ್ತಿ ತೋರಿಸ್ತಾರಾ ವಿದೇಶೀಯರು? ಕಲಿತ ಮೇಲೆ ಹೆಂಗಿದೆ ರೆಸ್ಪಾನ್ಸು ಅವರದ್ದು? ಒಮ್ಮೆ ಒಂದು ಕ್ಲಾಸಿಗೆ ಬಂದವರು ಮತ್ತೆ ಇನ್ನೊಂದು ಕ್ಲಾಸಿಗೆ ಶುಲ್ಕ ಕಟ್ಟಿ ಬರುತ್ತಾರಾ? ಎಂದು ಇನ್ನೂ ತಣಿಯದಿದ್ದ ನನ್ನ ಕುತೂಹಲವೆಲ್ಲಾ ಮೂರ್ನಾಲ್ಕು ಪ್ರಶ್ನೆಗಳಾಗಿ ಒಂದೇ ಉಸಿರಿಗೆ ಹೊರಬಿತ್ತು.

ʻಭಾರತೀಯ ಅಡುಗೆ ಕಲಿಯಲು ವಿದೇಶೀಯರಿಗೆ ಬಹಳ ಆಸಕ್ತಿಯಿದೆ ಗೊತ್ತಾ? ಅದು ನನಗೆ ಮೊದಲೇ ತಿಳಿದಿತ್ತು. ಇಲ್ಲಿ ವಿದೇಶೀಯರ ಜೊತೆಗೇ ಒಡನಾಡಿ ನನಗವರ ನಾಡಿಮಿಡಿತ ತಿಳಿದಿತ್ತು. ಬಹುಶಃ ಇದು ನನಗೆ ಬಹಳ ಹೆಲ್ಪ್‌ ಆಯಿತು. ಒಮ್ಮೆ ಬಂದವರು ಮತ್ತೆ ಬಂದಿದ್ದೂ ಇದೆ. ಕೇವಲ ಆ ದಿನದ ರೆಸಿಪಿ ಏನೆಂದು ನೋಡಿ, ಅದನ್ನು ಮಾತ್ರ ಕಲಿಯಲು ಆಸಕ್ತಿ ತೋರಿಸಿ ಒಂದೆರಡು ಕ್ಲಾಸು ತೆಗೆದುಕೊಳ್ಳುವವರೂ ಇದ್ದಾರೆ. ನನ್ನ ಕ್ಲಾಸಿಗೆ ಒಳ್ಳೆ ರೇಟಿಂಗ್‌ ಇದೆ. ಹಾಗಾಗಿ ಇಷ್ಟರವರೆಗೆ ಒಳ್ಳೆ ಪ್ರತಿಕ್ರಿಯೆ ಇದೆʼ ಎಂದು ನಕ್ಕ. ಹೊಸತು ಕಲಿಯಲು ಉತ್ಸಾಹ, ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ ಸಾಕು, ಏನು ಬೇಕಾದರೂ ಮಾಡಬಹುದುʼ ಅಂತ ನಾನು ನಂಬೋದು ನೋಡಿ ಎಂದೂ ಸೇರಿಸಿದ.

ಅಷ್ಟರಲ್ಲಿ ಛೋಟಾರಾಮನ ಹೆಂಡತಿ ಒಂದು ಕೈಯಲ್ಲಿ ತಲೆ ಮೇಲಿನ ಸೆರಗು ಜಾರದಂತೆ ಹಿಡಿದು, ಇನ್ನೊಂದರಲ್ಲಿ ಹಿಡಿದಿದ್ದ ಪೊಟ್ಟಣವನ್ನು ನಮ್ಮ ಕೈಗಿಡುತ್ತಾ, ʻಬಿಸಿಬಿಸಿ ಆಲೂ ಪರಾಠ ಇದೆ ಇದರಲ್ಲಿ, ದಾರೀಲಿ ತಿನ್ತಾ ಹೋಗಕ್ಕೆʼ ಎಂದು ಪ್ರೀತಿಯಿಂದ ಕೈಲಿಟ್ಟಳು. ನಾವು ಆಶ್ಚರ್ಯವೆಂಬಂತೆ ಛೋಟಾರಾಮನ ಮುಖ ನೋಡಿದರೆ, ʻನೀವು ಬೇಡ ಎಂದಿದ್ದಿರಿ ನಿಜ. ಆದ್ರೆ ಇದರಲ್ಲಿ ಜಾಸ್ತಿ ಇಲ್ಲ. ತೆಗೊಳ್ಳಿʼ ಎಂದ. ಮತ್ತೆ ಬೇಡವೆನ್ನಲಾಗಲಿಲ್ಲ. ಎಂಟು ಗಂಟೆಗೆ ಹೊರಡಲೆಂದು ಹೊರಟವರು, ಛೋಟಾರಾಮನ ಬಡಾ ಕಥೆ ಕೇಳಿ ಇನ್ನೂ ಅರ್ಧ ಗಂಟೆ ತಡವಾಗಿತ್ತು. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಅಷ್ಟೂ ಹೊತ್ತು ಮಣ್ಣಲ್ಲಿ ಮಗನ ಜೊತೆ ಆಡುತ್ತಿದ್ದ ಛೋಟಾರಾಮನ ಇಬ್ಬರು ಮಕ್ಕಳು ಟಾಟಾ ಮಾಡಲು ಓಡಿ ಬಂದರು.

ಮಕ್ಕಳನ್ನು ಕಾಣುತ್ತಲೇ ಏನೋ ನೆನಪಾಗಿ ಮತ್ತೆ ಛೋಟಾರಾಮನನ್ನು ಕರೆದು, ʻಲಾಕ್‌ಡೌನಾದ ಮೇಲೆ ಮಕ್ಕಳೇನು ಮಾಡಿದರು? ಈ ಹಳ್ಳಿ ಶಾಲೆಗಳೂ ಆನ್‌ಲೈನ್‌ ಕ್ಲಾಸು ಮಾಡ್ತಿವೆಯಾ? ಎಂದೆ. ʻಅಯ್ಯೋ ಆನ್‌ಲೈನು ಕ್ಲಾಸನ್ನೇನೋ ಮಾಡ್ತಿವೆ ಶಾಲೆಗಳು. ಆದ್ರೆ ಅದ್ಯಾವುದೂ ಸರಿಯಿಲ್ಲ ಬಿಡಿ. ಒಂದೆರಡು ತಿಂಗಳು ನೋಡಿದೆ. ಇದ್ಯಾಕೋ ಸರಿಯಿಲ್ಲ ಅನಿಸಿತು. ಅದಕ್ಕೆ ಮಕ್ಕಳನ್ನು ಶಾಲೆ ಬಿಡಿಸಿ ಹೋಂ ಟ್ಯೂಟರನ್ನು ನೇಮಿಸಿ ಬಿಟ್ಟಿದ್ದೇನೆ. ಇಬ್ಬರು ಮಕ್ಕಳಿಗೂ ಒಂದೇ ಟೀಚರ್‌ ಮನೆಗೆ ಬಂದು ಪಾಠ ಮಾಡುತ್ತಾರೆ. ಶಾಲೆಗೆ ಕೊಡುವ ಫೀಸನ್ನು ಇಲ್ಲಿ ಕೊಡುತ್ತೇನೆ. ಈಗ ನೆಮ್ಮದಿಯಿಂದಿದ್ದೇನೆ. ಈ ಪುಟಾಣಿ ಮಕ್ಕಳು ಆನ್‌ಲೈನೆಂದು ಮೊಬೈಲು ಹಿಡಿಯೋದೇ ಚಿಂತೆಯಾಗಿಬಿಟ್ಟಿತ್ತು ಎಂದು ನಕ್ಕ.

ʻಒಂದು ಕಡೆ ನಿಮ್ಮ ಆನ್‌ಲೈನು ಕ್ಲಾಸು ಶುರುವಾಗಿದ್ದು, ಇನ್ನೊಂದೆಡೆ ಈ ಮಕ್ಕಳನ್ನು ಆಫ್‌ಲೈನು ಮಾಡಿದ್ದು ಎರಡೂ ಚಂದದ ಕಥೆಗಳೇ ಬಿಡಿʼ ಎಂದು ನಾನೂ ನಕ್ಕು ಟಾಟಾ ಹೇಳಿ ಕಾರು ಹತ್ತಿದೆ.

‍ಲೇಖಕರು ರಾಧಿಕ ವಿಟ್ಲ

January 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: