‘ಅಪ್ಪನ ಅಂಗಿ’ ತನ್ನ ಶ್ರೇಷ್ಠತೆಯಿಂದಾಗಿಯೇ ಪ್ರಶಸ್ತಿ ಪಡೆಯಿತು..

ಡಾ ವಿ ಎ ಲಕ್ಷ್ಮಣ್ ಅವರ ಹೊಸ ಕವಿತಾ ಸಂಕಲನ ‘ಅಪ್ಪನ ಅಂಗಿ’ ಇಂದು ‘ಅವಧಿ’ಯ ಅಂಗಳದಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಬಿಡುಗಡೆಯಾಗುತ್ತಿದೆ.

ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಈ ಸಂಕಲನವನ್ನು ‘ಬಹುರೂಪಿ’ ಪ್ರಕಟಿಸಿದೆ. 

ಈ ಸ್ಪರ್ಧೆಯ ತೀರ್ಪುಗಾರರಾಗಿದ್ದ ಖ್ಯಾತ ಕವಿಗಳಾದ ಪ್ರತಿಭಾ ನಂದಕುಮಾರ್ ಹಾಗೂ ಸುಬ್ಬು ಹೊಲೆಯಾರ್ ಈ ಕೃತಿಯನ್ನು ಕಂಡ ರೀತಿ ಇಲ್ಲಿದೆ-

ಪ್ರತಿಭಾ ನಂದಕುಮಾರ್ 

ಸುಬ್ಬು ಹೊಲೆಯಾರ್

ವಿಭಾ ಪ್ರಶಸ್ತಿಯ ಅಂತಿಮ ಹಂತಕ್ಕೆ ಬಂದ ಹನ್ನೊಂದು ಹಸ್ತಪ್ರತಿಗಳನ್ನು ಪರಿಶೀಲಿಸಿ ಒಂದನ್ನು ಆಯ್ಕೆ ಮಾಡುವ ಕೆಲಸಕ್ಕೆ ನಮ್ಮನ್ನು ಕೇಳಿದ್ದು ನಿಜಕ್ಕೂ ದೊಡ್ಡ ಜವಾಬ್ದಾರಿ.  ವಿಭಾ ನಮಗೆಲ್ಲ ಬಹಳ ಪ್ರೀತಿಯ ಹೆಣ್ಣುಮಗಳು. ಆಕೆಯ ಹೆಸರಿನಲ್ಲಿ ಕೊಡುತ್ತಿರುವ ಈ ಪ್ರಶಸ್ತಿಗೆ ತನ್ನದೇ ಆದ ಪ್ರತಿಷ್ಠೆ ಇದೆ.  ಅಂತಿಮ ಹಂತಕ್ಕೆ ಬಂದ ಹನ್ನೊಂದು ಸಂಕಲನಗಳನ್ನು ಎರೆಡೆರೆಡು ಸಲ ಓದಿ, ಖುಷಿ ಪಟ್ಟು ಬಹಳ ಎಚ್ಚರಿಕೆಯಿಂದ ಚಿಂತಿಸಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಮೊದಲೆಲ್ಲ ಮನುಷ್ಯನಿಗೆ ಮಾತ್ರ ಕಷ್ಟ ಬರುತ್ತಿತ್ತು.  ಆದರೆ ಇವತ್ತು ಒಟ್ಟು ಪ್ರಕೃತಿಗೆ ದೊಡ್ಡ ಸಮಸ್ಯೆ, ಗಂಡಾಂತರ ಎದುರಾಗಿದೆ.  ಕೇವಲ ಒಂದು ಆಯಾಮದಿಂದ ಮಾತ್ರ ಜಗತ್ತನ್ನು ಗ್ರಹಿಸುವುದು ಇಂದು ಸಾಲದು. ಹತ್ತು ಕಡೆ ಕಣ್ಣಿಟ್ಟು ಸಕಲವನ್ನೂ ಗಮನಿಸುತ್ತಾ ಪರಿಶೀಲಿಸುತ್ತಾ ಅದಕ್ಕೆ ಸ್ಪಂದಿಸುತ್ತಾ ಆ ನಡುವೆಯೇ ತನ್ನ ನಿಲುವನ್ನೂ ಕಾಪಾಡಿಕೊಳ್ಳುತ್ತಾ ಬದುಕುವುದು ಇಂದಿನ ಸೃಜನಶೀಲ ಮನಸ್ಸುಗಳಿಗೆ ಅನಿವಾರ್ಯವಾಗಿಬಿಟ್ಟಿದೆ.  ಸ್ಪರ್ಧೆಗೆ ಬಂದ ಕವನ ಸಂಕಲನಗಳು ವಿವಿಧ ತಲೆಮಾರಿನ ಕವಿಗಳೆಂದು ಭಾಸವಾಯಿತು. ಅವರೆಲ್ಲರೂ ತಮ್ಮ ಅಂತರಂಗ ಮತ್ತು ಬಹಿರಂಗವನ್ನು ಕುರಿತು ಇಷ್ಟೆಲ್ಲಾ ಚಿಂತಿಸಿ ಕಾವ್ಯದಲ್ಲಿ ಅಭಿವ್ಯಕ್ತಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅನ್ನಿಸುತ್ತದೆ.

 

ಜಗದೊಳಗೆ ತಮ್ಮನ್ನು ಕುರಿತು ತಮ್ಮ ಸಮುದಾಯವನ್ನು ಕುರಿತು ತಮ್ಮ ಒಳಗೊಳಗಿನ ಬೇಗುದಿಯನ್ನು ಕುರಿತು ಬರೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅನ್ನಿಸುತ್ತೆ. ಇಂದಿನ ಮನರಂಜನೆಯ ಕ್ರಾಂತಿಯ ಯುಗದಲ್ಲೂ ಕಾವ್ಯವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಆರಿಸಿಕೊಂಡಿರುವುದೇ ಒಂದು ಹೆಗ್ಗಳಿಕೆಯಾಗಿದೆ.  ಎಲ್ಲಿ ಕಲೆ ಸಾಹಿತ್ಯಗಳಿಗೆ ಸ್ಥಾನವಿಲ್ಲವೋ ಅಲ್ಲಿ ಬರಡುತನ ಆವರಿಸಿಕೊಳ್ಳುತ್ತದೆ.  ಕಲೆ ಸಾಹಿತ್ಯ ಬೆಳಕಿನ ದಾರಿ.   ದೇಶದ ಕಾವ್ಯಶಕ್ತಿ ಬಹಳ ದೊಡ್ಡದು. ಕನ್ನಡ ಕಾವ್ಯ ಇವತ್ತಿನ ಸಂದರ್ಭಕ್ಕೆ ಉತ್ಕಟವಾಗಿ ಸಂವಹಿಸುತ್ತಿದೆ. ಹಾಗಾಗಿ ಈ ಕಾವ್ಯ ನಮಗೆ ಕೊಟ್ಟಿಸುವ ಭರವಸೆ ಮತ್ತು ಸಾಂತ್ವನಕ್ಕೆ ನಾವು ಆಭಾರಿಯಾಗಿದ್ದೇವೆ.

ಹನ್ನೊಂದು ಸಂಕಲನಗಳಲ್ಲಿ ಮೊದಲು ಐದನ್ನು ಶಾರ್ಟ್ ಲಿಸ್ಟ್ ಮಾಡಿ ಅದರಲ್ಲಿ ಒಂದೊಂದನ್ನೇ ತೆಗೆದುಹಾಕುತ್ತಾ ಕೊನೆಗೆ ಎರಡು ಸಂಕಲನಗಳಿಗೆ ಬಂದು ತಲುಪಿ ಅವೆರಡನ್ನೂ ಬಿಡಿಬಿಡಿಯಾಗಿ ಹಿಂಜಿ ನೋಡಿ ಕೊನೆಗೆ ಅತಿ ಕಡಿಮೆ ಅಂತರದಲ್ಲಿ “ಅಪ್ಪನ ಅಂಗಿ” ಪ್ರಶಸ್ತಿಗೆ ಅರ್ಹತೆಯನ್ನು ಪಡೆದುಕೊಂಡಿತು. ಅಂದರೆ ಅಂತಿಮ ಹಂತಕ್ಕೆ ಬಂದಿದ್ದ ಮೂರೂ ಸಂಕಲನಗಳು ಉತ್ಕೃಷ್ಠವಾಗಿದ್ದವು ಮತ್ತು “ಅಪ್ಪನ ಅಂಗಿ” ತನ್ನ ಶ್ರೇಷ್ಠತೆಯಿಂದಾಗಿಯೇ ಪ್ರಶಸ್ತಿ ಪಡೆಯಿತು ಎಂದು ಹೇಳಬೇಕು.

ಆ ಅರ್ಹತೆಯ ಅಂಶಗಳೆಂದರೆ:

ವಸ್ತು ವೈವಿಧ್ಯ – ಲಕ್ಷ್ಮಣ ವಿ ಎ ಅವರ ಸಂಕಲನದಲ್ಲಿ ತರಹೆವಾರಿ ಸಂಗತಿಗಳ ಬಗ್ಗೆ ಸ್ಪಂದಿಸಿ ಬರೆದ ಕವನಗಳಿವೆ.  ಕವಿ ಆಧುನಿಕ ಜಗತ್ತಿನ ಸಕಲ ಮಜಲುಗಳನ್ನು ಮುಟ್ಟಿದ್ದಾರೆ. ತಮ್ಮ ಅನುಭವಗಳನ್ನು  ಅಂತರ್ಗತವಾಗಿಸಿಕೊಂಡು ಅವನ್ನು ದಟ್ಟವಾಗಿ ಸಾಂದ್ರವಾಗಿ ಕಾವ್ಯದಲ್ಲಿ ಅಭಿವ್ಯಕ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಇದನ್ನು ಅನುಭವ ಕಾವ್ಯ ಎಂದು ವರ್ಣಿಸಬಹುದು.  ಪರಿಣಾಮಕಾರಿ ಪ್ರತಿಮೆಗಳಲ್ಲಿ ಅನುಭವಗಳನ್ನು ಬೊಗಸೆಯಲ್ಲಿ ಚೆಲ್ಲಿದ ಹಾಗೆ ಹರಡಿದ್ದಾರೆ.  ಹಾಗಾಗಿ ಒಂದು ವಿಶಿಷ್ಠ ದನಿ ಇಲ್ಲಿ ಕೇಳಿಬರಲಿ ಸಾಧ್ಯವಾಗಿದೆ.  ನಿಜವಾದ ಅರ್ಥದಲ್ಲಿ ಅಂಗಿ ತೊಟ್ಟಿಲ್ಲದ ನಿಜಕಾವ್ಯ ಇಲ್ಲಿದೆ.

ಶೈಲಿ –  ಒಂದು ಒಳ್ಳೆಯ ಕಾವ್ಯದಲ್ಲಿ ವಸ್ತು, ಕಾವ್ಯ ಬಂಧ, ಭಾಷೆ, ಪ್ರತಿಮೆ ಎಲ್ಲವೂ ಪರಸ್ಪರ ಪೂರಕವಾಗಿರಬೇಕು.  ಅಂಗಿಯ ಪ್ರತಿಮೆಯನ್ನು ಮತ್ತೆ ಮತ್ತೆ ಬಳಸುವಾಗಲೂ ಅದು ಪುನರಾವರ್ತನೆಯಂತಲ್ಲದೆ ಹೊಸ ಆಯಾಮಗಳನ್ನು ಪಡೆದು ಪ್ರಯೋಗವಾಗುತ್ತದೆ. ಕೊನೆಗೆ ಸೆಕೆಂಡ್ ಹ್ಯಾಂಡ್ ಅಂಗಿ ಕೂಡಾ ಜಂಗಮ ಪಿಶಾಚಿಗಳಂತೆ, ಶಿವಕಾಶಿಯ ಪೋರರು ಮುಗಿಬಿದ್ದು ಕೊಳ್ಳುವಾಗ ಅವರ ಪಕ್ಕ ಬೀಡಿ ಅಂಟಿಸಬೇಡಿ ಎಂದು ಗೋಗರೆಯುತ್ತದೆ. ಅದೊಂದು ಪರಿಶೋಧನೆ ಕವಿಗೆ. ಗಂಭೀರ ಕಾವ್ಯ ಒಂದು ಬಿಂದುವಿನಿಂದ ತೊಡಗಿ ಬೆಳೆದು ಹರಡಿ ಕೊನೆಗೆ ಮತ್ತೊಂದು ಬಿಂದುವಿನಲ್ಲಿ ಮುಗಿಯುತ್ತದೆ.  ಈ ಯಾನದಲ್ಲಿ ಕವಿ ಒಂದು ಕಡೆ ಹೆಚ್ಚು ತಂಗಿದರೆ ಮತ್ತೊಂದು ಕಡೆ ಅವಸರದಲ್ಲಿ ಸರಿದುಹೋದರೆ ಅದು ಕಾವ್ಯದಲ್ಲಿ ಏರುಪೇರಾಗಿಸುತ್ತದೆ.  ಬರಿ ಶಬ್ದಗಳನ್ನು ಇಡಿಕಿರಿಸುವುದು ಕೂಡಾ ಕಾವ್ಯಕ್ಕೆ ಒಗ್ಗುವುದಿಲ್ಲ.

ಒಂದು ಕವನ ಪರಿಪೂರ್ಣವಾಗಬೇಕಾದರೆ ಅದರಲ್ಲಿ ಎಲ್ಲವೂ ಹದವಾಗಿ ಇರಬೇಕು. ಲಕ್ಷ್ಮಣ ಅವರಿಗೆ ಈ ಹದ ಒಗ್ಗಿದೆ. ಅದಕ್ಕೇ ಅವರು ಪ್ರಶ್ನೆಗಳನ್ನು ಕೇಳುತ್ತಲೇ ಉತ್ತರಗಳನ್ನೂ ಧ್ವನಿಸುತ್ತಿರುತ್ತಾರೆ.  ತಾಯಿಯ ತಿಥಿಯ ಕಾರ್ಡಿನಲ್ಲಿ  ಮುದ್ರಿಸಲು ಅವಳ ಒಂಟಿ ಫೋಟೋಗಾಗಿ ಮದುವೆಯ ಆಲ್ಬಮ್ಮಿನಲ್ಲಿ ಹುಡುಕುತ್ತಾ “ಎಲ್ಲಿ ಹುಡುಕುವುದು ಈಗ ಅವಳ ಫೋಟೋ?” ಎಂದು ಪ್ರಶ್ನಿಸುತ್ತಲೇ ಅದಿಲ್ಲ ಎನ್ನುವುದನ್ನೂ ಹೇಳುತ್ತಾರೆ.  “ಸವೆದ ಹವಾಯಿ ಚಪ್ಪಲಿಗಳ ಹಟ್ಟಿಯೆದುರು ಅನಾಥ ಬಿಟ್ಟು ಎತ್ತ ನಡೆದು ಹೋದನೋ ವಿಶ್ವನಾಥ?” ಎನ್ನುವ ಪ್ರಶ್ನೆ ಅವನದೇ ಹುಡುಕಾಟ ಮತ್ತು ಕವಿಯ ಹುಡುಕಾಟಗಳೆರಡನ್ನೂ ಮೇಳೈಸಿಕೊಂಡು  ಮೊಘಲ್ ದರಬಾರನ್ನು ವೇಟರ್ ಆದ ವಿಶ್ವನಾಥನ ಬದುಕಿನ ಮಜಲುಗಳನ್ನು ದಾಖಲಿಸುತ್ತಲೇ, “ಯಾವಾಗ ಮರಳಿತು ಮಹಾಪ್ರಾಣ?” ಎಂದು ವಿಹ್ವಲಗೊಳ್ಳುತ್ತಲೇ ಕೊನೆಗೆ “ನಗರದಲ್ಲಿ ನಿನ್ನೆ ಬಿದ್ದ ಭಾರೀ ಮಳೆಗೆ ಯಾವ ಮರದ ಕೆಳಗೆ ಇವನು ಕಂಪಿಸುತ್ತ ನಿಂತಿರುವನೋ?” ಎನ್ನುವ ಪ್ರಶ್ನೆಯನ್ನೂ, ಉತ್ತರವನ್ನೂ ಜೊತೆಗೆ ಹಲವಾರು ಸಾಧ್ಯತೆಗಳನ್ನೂ ಒಟ್ಟಿಗೇ ಕಟ್ಟಿಕೊಡುತ್ತಾರೆ.

ಏನೂ ಹೇಳದೆಯೇ ಎಲ್ಲವನ್ನೂ ಹೇಳುವ ಕವಿತೆಗಳು ಇಲ್ಲಿವೆ.  ಹಾಗೆಯೇ ಎಲ್ಲವನ್ನೂ ಹೇಳಿಯೂ  ನಿಗೂಢವನ್ನು ಬಚ್ಚಿಟ್ಟುಕೊಂಡ ಕವನಗಳೂ ಇವೆ.  ಇಲ್ಲಿ ತಥಾಗತನಿಂದ ಹಿಡಿದು ಸಿಲಿಕಾನ್ ಮೊಲೆಯ ಸನ್ನಿಲಿಯೊನಿವರೆಗೆ, ನಟ್ಟಿರುಳಲ್ಲಿ ಸುಳಿದಾಡುವ ನರಭಕ್ಷಕನಿಂದ ತೊಡಗಿ  ಸಿಡಿಲು ಬಿದ್ದ ಬಯಲು ಶಿಲಾಬಾಲೆಯಿಂದ, ಸೆಲ್ಫಿಯಿಂದ, ನೆಲಕ್ಕೆ ಬಿದ್ದು ಮಣ್ಣಾಗಿ ಮತ್ತೆ ಕೊಡವಿಕೊಂಡು ತಲೆಯೇರುತ್ತಿದ್ದ ಅಪ್ಪನ ಗಾಂಧೀ ಟೋಪಿವರೆಗೆ ಸಕಲವೂ ಹಾದುಹೋಗಿವೆ.

ಇಷ್ಟೆಲ್ಲಾ ಹೇಳಿಯೂ ಕೆಲವು ಕವನಗಳಲ್ಲಿ ಕಾವ್ಯ ಬಂಧದಲ್ಲಿ ಇನ್ನಷ್ಟು ಬಿಗಿತನ ಬೇಕು ಎನ್ನಿಸಿದರೆ ಅದಕ್ಕೆ ಸಂಕಲನಕ್ಕೆ ಆಯ್ಕೆ ಮಾಡುವಾಗ ಸ್ವಲ್ಪ ವಿಶಾಲ ಧೋರಣೆ ಹೊಂದಿದ್ದೇ ಕಾರಣ.  ಒಂದು ಸಂಕಲನದ ಎಲ್ಲಾ ಕವನಗಳೂ ಒಂದೇ ಮಟ್ಟದಲ್ಲಿರುವುದು ಕಷ್ಟ. ಕನ್ನಡದಲ್ಲಿ ಕಾವ್ಯ ಪ್ರಯೋಗಗಳ ಕೊರತೆ ಇಲ್ಲ.  ಭರವಸೆ ಹುಟ್ಟಿಸುವ ಕವನ ಸಂಕಲನ ಕೈಗೆ ಸಿಕ್ಕಾಗ ಆ ಕವಿಯ ಮೇಲೆ ಕಣ್ಣಿಡುವ ಸಹೃದಯರು ಬೇಕಾದಷ್ಟು ಇದ್ದಾರೆ. ಹಾಗಾಗಿ ಈ ಕವಿಗೆ ಮತ್ತುಈ ಸಂಕಲನಕ್ಕೆ ಅದ್ಭುತ ಸ್ವಾಗತ ಸಿಗುತ್ತದೆ ಅನ್ನುವ ಬಗ್ಗೆ ಸಂಶಯವಿಲ್ಲ. ಶುಭವಾಗಲಿ.

‍ಲೇಖಕರು avadhi

January 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. T S SHRAVANA KUMARI

    ಲಕ್ಷ್ಮಣ್ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು

    ಪ್ರತಿಕ್ರಿಯೆ
  2. kusuma patel

    ಲಕ್ಷ್ಮಣ್ ಅವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  3. ಕಲಿಗಣನಾಥ ಗುಡದೂರು

    ಅಭಿನಂದನೆಗಳು ಕಾವ್ಯದ ಸಹಪಾಠಿ ಡಾ ವಿ.ಎ. ಲಕ್ಷ್ಮಣ್. ಅಪ್ಪನ ಅಂಗಿ ಎಲ್ಲ ಕಾವ್ಯಾಸಕ್ತರ ಮನೆ ಮನ ತಲುಪಲಿ

    ಪ್ರತಿಕ್ರಿಯೆ
  4. ಡಿ ಎಸ್ ರಾಮಸ್ವಾಮಿ

    ಸಂಕಲನದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವ ಬರಹ ಇದು. ಪೈಪೋಟಿ ಕೊಟ್ಟ ಇತರ ನಾಲ್ಕು ಸಂಕಲನಗಳ ಬಗ್ಗೆಯೂ ಇಂಥದೇ ಕುತೂಹಲ. ಆದರೆ ಕವಿಯೊಬ್ಬ ಸಕಲೆಂಟು ಸಮಸ್ಯೆಗೂ ಉತ್ತರಿಸಬೇಕು ಅಥವ ಸ್ಪಂದಿಸಬೇಕು ಅನ್ನೋದು ಯಾಕೋ ಪಥ್ಯ ಅಲ್ಲ.

    ಪ್ರತಿಕ್ರಿಯೆ
  5. ಡಿ ಎಸ್ ರಾಮಸ್ವಾಮಿ

    ಸಂಕಲನದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವ ಬರಹ ಇದು. ಪೈಪೋಟಿ ಕೊಟ್ಟ ಇತರ ನಾಲ್ಕು ಸಂಕಲನಗಳ ಬಗ್ಗೆಯೂ ಇಂಥದೇ ಕುತೂಹಲ. ಆದರೆ ಕವಿಯೊಬ್ಬ ಸಕಲೆಂಟು ಸಮಸ್ಯೆಗೂ ಉತ್ತರಿಸಬೇಕು ಅಥವ ಸ್ಪಂದಿಸಬೇಕು ಅನ್ನೋದು ಯಾಕೋ ಪಥ್ಯ ಅಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: