ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪನ Rallies ಸೈಕಲ್…

ದರ್ಶನ್ ಜಯಣ್ಣ 

ಅಪ್ಪ ಹುಟ್ಟಿದ್ದು, ಬೆಳೆದದ್ದು, ಬದುಕಿದ್ದು, ಕಡೆಗೆ ತೀರಿಹೋಗಿದ್ದೂ ತುಮಕೂರಿನ ಹೃದಯಭಾಗದ ಅರಳೆಪೇಟೆ ಮತ್ತು ಹೊರಪೇಟೆಗಳಲ್ಲೇ. ಇವುಗಳಾಚೆಗೆ ಅಪ್ಪನಿಗೆ ವ್ಯವಹಾರವಿತ್ತೇ ಹೊರತು ಸೆಳೆತವಿರಲಿಲ್ಲ.

ಹೀಗಿದ್ದೂ ಅಪ್ಪನಿಗೆ ಐದಾರು ಭಾಷೆಗಳು ನಿರರ್ಗಳವಾಗಿ ಮಾತನಾಡಲು ಬರುತ್ತಿತ್ತು. ಹತ್ತಾರು ಕಸುಬುಗಳು ಗೊತ್ತಿದ್ದವು. ಅದಕ್ಕೆ ಕೆಲವರು ಅಪ್ಪನನ್ನು ಕುರಿತು “ನಿಂದು ಭುಜಂಗಯ್ಯನ ದಶವತಾರ” ಎನ್ನುತ್ತಿದ್ದರು. ಅಪ್ಪನಿಗೆ ನಮ್ಮ ರಾಜ್ಯದ ಸುಮಾರು ಬುಡಕಟ್ಟುಗಳ ಮತ್ತು ಅವರ ಜೀವನೋಪಾಯ, ತಾಪತ್ರಯದ ಬಗ್ಗೆ ಗೊತ್ತಿತ್ತು. ರಾಜಕೀಯ, ಸಾಂಸ್ಕೃತಿಕ ಮತ್ತು ಎಲ್ಲಕ್ಕಿಂತಾ ಹೆಚ್ಚಾಗಿ ಸಾಮಾಜಿಕ ಪ್ರಜ್ಞೆ ಮತ್ತು ಕಾಳಜಿ ಇತ್ತು.

ಹೀಗಾಗಿಯೇ ನನಗೆ ಅಪ್ಪನನ್ನು ನೆನೆದಾಗಲೆಲ್ಲ ಆತನ ‘ಜಂಗಮ’ ಗುಣ ನೆನಪಾಗುತ್ತದೆ. ಆತ ತನ್ನ 62 ವರ್ಷಗಳ ಬದುಕಿನಲ್ಲಿ ಒಂದೇ ಪ್ರದೇಶದ ಒಂದೇ ಭಾಗದಲ್ಲಿದ್ದರೂ ಮನಸ್ಸು, ಆಚಾರ, ಕನಸುಗಳು ಮತ್ತು ಆಸಕ್ತಿಗಳು ಜಂಗಮವಾಗಿದ್ದವು.

ಅಪ್ಪ ಯಾವ ಸಂಶೋಧನೆಯ ವಿದ್ಯಾರ್ಥಿಯಾಗಿರದಿದ್ದರೂ ಕೂಡ, ಗಿಡಮೂಲಿಕೆಗಳ ಆಧಾರಗಳನ್ನು ಮತ್ತು ಅವುಗಳ ಉಪಯುಕ್ತತೆಗಳನ್ನು ಹಳೆಯ ಗ್ರಂಥಗಳಲ್ಲಿ ಹುಡುಕುತ್ತಿದ್ದ ಪರಿ ನನ್ನನ್ನು ಹಲವು ಬಾರಿ ಆಶ್ಚರ್ಯಚಕಿತನನ್ನಾಗಿ ಮಾಡಿದೆ. ಪುಟ್ಟ ಊರೊಂದರ ಗ್ರಂಥಿಗೆ ಅಂಗಡಿಯ ಅಪ್ಪ ಕೆಲವೊಮ್ಮೆ ರಾತ್ರಿ ಎಲ್ಲಾ ಟೇಬಲ್ ಲ್ಯಾಂಪ್ನ ಅಡಿಯಲ್ಲಿ ಆಧಾರ ಹುಡುಕುತ್ತಿದ್ದೂ, ಬೆಳಿಗ್ಗೆ ಅದರ ಬಗ್ಗೆ ತನ್ನನ್ನು ಅರಸಿ ವಾತ, ಪಿತ್ತ, ಕಫ ಮುಂತಾದವುಗಳ ನಿವಾರಣೆಗೆ ಬಂದ ಹಳ್ಳಿಯವರಿಗೆ ಕುತೂಹಲದಿಂದ ಹೇಳುತ್ತಿದ್ದದ್ದು ಕಣ್ಣಿಗೆ ಕಟ್ಟಿದ ಹಾಗಿದೆ.

ಅಪ್ಪ ತನ್ನಂತೆಯೇ ಬದುಕಿ, ತನಗೇನು ಅನಿಸುವುದೋ ಅದನ್ನೇ ಮಾಡಿ, ಯಾರ ಮರ್ಜಿಗೂ ಮುಲಾಜಿಗೂ ಬೀಳದೆ, ಯಾರಿಗೂ ತಲೆಬಾಗದೆ, ಪೂಜಾ ಸಾಮಗ್ರಿ ಅಂಗಡಿ ಮತ್ತು ಮಠಗಳ ಊರಿನಲ್ಲಿ ಇದ್ದರೂ ಸ್ವಾಮಿಗಳ ಹಿಂದೆ ಬೀಳದೆ, ಐನೋರುಗಳಿಗೆ ಒಂದು ರೂಪಾಯಿಯೂ ಕಮಿಷನ್ ಕೊಡದೆ ತನ್ನಷ್ಟಕ್ಕೆ ತಾನು ಎಂಬಂತೆ ಇದ್ದುಬಿಟ್ಟ ಆಸಾಮಿ.

ಇದರ ಜೊತೆ ಜೊತೆಗೆ ತನ್ನ ಆರೋಗ್ಯದ ಕಡೆಗೆ ಸರಿಯಾಗಿ ಗಮನಕೊಡದೆ ತಿನ್ನುವಾಗ ತಿನ್ನದೆ, ತೊಡುವಾಗ ತೊಡದೆ, ಆದರೂ ವಿಲಾಸಿಯಾಗದೆ ಹೆಂಡತಿ ಮಕ್ಕಳ ಕಾಳಜಿಗೆ ಎಂದೂ ಕಿವಿಗೊಡದೆ ಬದುಕಿದ ಸೀದಾ ಸಾದಾ ಮನುಷ್ಯ. He was a very complex character!

ಒಟ್ಟಿನಲ್ಲಿ ನನಗನಿಸುವುದು ನಮ್ಮೂರಿನಲ್ಲಿ ಅಪ್ಪನಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಅದು ಅವರನ್ನು ಸ್ವಲ್ಪ ಮಟ್ಟಿಗೆ ಕಾಡಿತ್ತು. ಅದಕ್ಕೆ ಕಾರಣ ” ಕಾಣಿಸಿಕೊಳ್ಳಲು ಬಯಸದಿರುವಿಕೆ” ಎಂದು ಅವರಿಗೂ ಗೊತ್ತಿತ್ತು. He was ok with it!

ಇವೆಲ್ಲವನ್ನೂ ಮೀರಿ ಅಪ್ಪನಿಗೆ ಪ್ರಾಣಿ, ಪಕ್ಷಿ, ಪಶು, ಕೀಟ, ಕಾಡು, ಮೂಲಿಕೆ, ಮರ ಗಿಡ, ತೊರೆ ಹಳ್ಳ, ಬುಡಕಟ್ಟು ಬವಣೆ, ಭಾಷೆ ಇವೆಲ್ಲದರ ಬಗ್ಗೆ ಮಗುವಿನ ಬೆರಗು ಹಾಗು ಸಂಶೋಧಕನ ಕುತೂಹಲವಿತ್ತು. ಇದು ಅವರ ಮಾತಿನಲ್ಲಿ ಪ್ರತಿನಿತ್ಯ ಅನಾವರಣಗೊಳ್ಳುತ್ತಿತ್ತು.

ಅಂದ ಹಾಗೆ ಆತ ಒಬ್ಬ ಅದ್ಭುತ ಮಾತುಗರ, He was a great narrator.

‍ಲೇಖಕರು Admin

1 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading