ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನ್ನದಾತ ಸುಖೀಭವ….!

ಸಾವಯವ ಕೃಷಿ ಅಂದರೆ ಜಾಹೀರಾತು ಕಟ್

ಸುಘೋಷ್ ನಿಗಳೆ

ಪರಿಚಯಸ್ಥ ರೈತರೊಬ್ಬರು ಹಂಚಿಕೊಂಡ ಘಟನೆ.

ಅವರ ಪರಿಚಯದ ರೈತರೊಬ್ಬರು ತುಂಬಾ ಚೆನ್ನಾಗಿ ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರಂತೆ. ಅವರ ಕೃಷಿ ಪ್ರಗತಿಯನ್ನು ನೋಡಿ ಖುಷಿಕೊಂಡ ಮಿತ್ರರೊಬ್ಬರು “ಟಿವಿ ಚಾನಲ್ಲುಗಳಲ್ಲಿ ಕೃಷಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ನಿಮ್ಮ ತೋಟ, ನಿಮ್ಮ ಸಾಧನೆ ಟಿವಿಯಲ್ಲಿ ಬರಲು ಸೂಕ್ತವಾಗಿದೆ. ನೀವೇ ಅವರಿಗೆ ನಿಮ್ಮ ಕೆಲಸದ ಬಗ್ಗೆ ಹೇಳಿ. ಅವರು ಬಂದು ಕವರ್ ಮಾಡಿಕೊಂಡು ಹೋಗುತ್ತಾರೆ” ಅಂದರಂತೆ.

ಮಾಡಬಹುದಲ್ಲಾ ಎಂದುಕೊಂಡ ರೈತರು, ಖ್ಯಾತ ಖಾಸಗಿ ಟಿವಿ ಚಾನಲ್ ಒಂದರ ಕೃಷಿ ಕಾರ್ಯಕ್ರಮದ ನಿರ್ಮಾಪಕರನ್ನ ಸಂಪರ್ಕಿಸಿ ತಮ್ಮ ಎಲ್ಲ ವಿವರಗಳನ್ನ ನೀಡದರಂತೆ. ಇವರ ಸಾಧನೆಯಿಂದ ಖುಷಿಯಿಂದ ನಿರ್ಮಾಪಕರು ಶೀಘ್ರವೇ ಕಾರ್ಯಕ್ರಮ ಮಾಡುವುದಾಗಿ ಭರವಸೆ ನೀಡಿದರಂತೆ. ಒಂದೆರಡು ದಿನಗಳ ನಂತರ ಮತ್ತೆ ಕಾಲ್ ಮಾಡಿದ ನಿರ್ಮಾಪಕರು, “ಸಾರ್, ನಿಮ್ಮ ಬಗ್ಗೆ ಕಾರ್ಯಕ್ರಮ ಮಾಡಲು ನಾವು ಒಪ್ಪಿದ್ದೇವೆ. ಆದರೆ ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಬೇಕು. ಅದಕ್ಕೆ ನೀವು ಒಪ್ಪಬೇಕು” ಅಂದರಂತೆ. ಏನು ಬದಲಾವಣೆ ಅಂದಾಗ,

”ನೀವು ಸಾವಯವ ಕೃಷಿ ಮಾಡಿದ್ದೀರಿ. ತುಂಬಾ ಸಂತೋಷದ ವಿಚಾರ. ಸಾವಯವ ಕೃಷಿ ಮಾಡಿ ಹಲವು ರೈತರು ಅಭಿವೃದ್ಧಿ ಹೊಂದಿದ್ದಾರೆ. ನಾವು ನಿಮ್ಮ ಬಗ್ಗೆ ಕಾರ್ಯಕ್ರಮ ಮಾಡುತ್ತೇವೆ. ಆದರೆ ನಿಮ್ಮ ಸಂದರ್ಶನದಲ್ಲಿ ನೀವು ರಾಸಾಯನಿಕ ಗೊಬ್ಬರ ಬಳಸಿ ಇಷ್ಟು ಇಳುವರಿ ಪಡೆದಿದ್ದೀರಾ ಅಂತ ಹೇಳಬೇಕು” ಅಂದರಂತೆ. ಆದರೆ ರೈತರು ಇದಕ್ಕೆ ಒಪ್ಪಲಿಲ್ಲ. ಮಾಡಿದ್ದು ಸಾವಯವ ಕೃಷಿ, ಅಭಿವೃದ್ಧಿ ಕಂಡಿದ್ದು ಕೂಡ ಸಾವಯವ ಕೃಷಿಯಲ್ಲಿಯೇ. ಅಂತಹದ್ದರಲ್ಲಿ ಟಿವಿಯಲ್ಲಿ ಕಾರ್ಯಕ್ರಮ ಬರಬೇಕು ಎಂಬ ಒಂದೇ ಕಾರಣಕ್ಕೆ ಯಾಕೆ ಈ ರೀತಿ ಸುಳ್ಳು ಹೇಳಿಕೆ ನೀಡಬೇಕು ಅಂತ ರೈತರು ಸುಮ್ಮನಾದರು.

ನಂತರ ಆ ರೈತರಿಗೆ ಗೊತ್ತಾಗಿದ್ದು, ಖಾಸಗಿ ಚಾನಲ್ ನ ಕೃಷಿ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಜಾಹೀರಾತು ಬರುವುದು ರಾಸಾಯನಿಕ ಗೊಬ್ಬರ ಕಂಪನಿಗಳಿಂದ. ಆ ಕಂಪನಿಗಳು ಹೇಳಿದಂತೆ ಕಾರ್ಯಕ್ರಮಗಳು ಆಗುತ್ತವೆಯೇ ಹೊರತು, ಕಾರ್ಯಕ್ರಮ ನಿರ್ಮಾಪಕರು ಅಥವಾ ಚಾನಲ್ ಹೇಳಿದ ಹಾಗಲ್ಲ. ಸಾವಯವ ಕೃಷಿ, ಸಹಜ ಕೃಷಿ, ಶೂನ್ಯ ಬಂಡವಾಳ, ದೇಸೀ ಪದ್ಧತಿ ಎಂಬ ಹೆಸರು ಕೃಷಿ ಕಾರ್ಯಕ್ರಮದಲ್ಲಿ ಕೇಳಿ ಬಂದರೆ, ಜಾಹೀರಾತು ಕಟ್, ದುಡ್ಡೂ ಕಟ್.

ಅನ್ನದಾತ ಸುಖೀಭವ….

 

‍ಲೇಖಕರು G

27 October, 2012

1 Comment

  1. anand prasad

    ಮಾಧ್ಯಮಗಳಿಗೆ ಅದರಲ್ಲೂ ದೃಶ್ಯ ಮಾಧ್ಯಮಗಳಿಗೆ ಅತಿಯಾದ ಲಾಭದ ಹುಚ್ಚು ಹಿಡಿದಿದೆ. ಇದರಿಂದಾಗಿ ಪ್ರತಿಯೊಂದು ಕಾರ್ಯಕ್ರಮವನ್ನೂ ಜಾಹೀರಾತಿನಿಂದಲೇ ನಡೆಸಬೇಕೆಂದು ಹೊರಟಾಗ ಇಂಥ ಅಸಂಬದ್ಧಗಳು ಸಂಭವಿಸುತ್ತವೆ. ದೇಶದ ಅಥವಾ ರಾಜ್ಯದ ಕೃಷಿಕರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡಾ ೬೦ರ ಆಸುಪಾಸು ಇರುವಾಗ ನಮ್ಮ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕೃಷಿ ಸಂಬಂಧಿ ಕಾರ್ಯಕ್ರಮಗಳು ಶೂನ್ಯದ ಸಮೀಪ ಇದೆ. ಎಲ್ಲವನ್ನೂ ಲಾಭದ ದೃಷ್ಟಿಕೋನದಿಂದ ನೋಡುವುದರಿಂದ ಮಾಧ್ಯಮಗಳನ್ನು ನಡೆಸುವವರಲ್ಲಿ ದೇಶಭಕ್ತಿ ಹಾಗೂ ಸಮುದಾಯದ ಹಿತದೃಷ್ಟಿ ಕಣ್ಮರೆಯಾಗಿದೆ. ಬೇರೆ ಕಾರ್ಯಕ್ರಮಗಳ ಪ್ರಸಾರದಿಂದ ಬರುವ ಲಾಭದ ಒಂದು ಅಂಶವನ್ನು ದೇಶದ ಅತಿ ದೊಡ್ಡ ಜನಸಮೂಹವಾದ ಕೃಷಿಕರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಪ್ರಸಾರಕ್ಕೆ ಬಳಸಲು ಸಾಧ್ಯವಿದೆ. ಆದರೆ ಅಂಥ ವಿಶಾಲ ಮನೋಭಾವ ಯಾವುದೇ ಖಾಸಗಿ ವಾಹಿನಿಗಳಲ್ಲೂ ಕಂಡು ಬರುತ್ತಿಲ್ಲ. ಖಾಸಗಿ ಟಿವಿ ವಾಹಿನಿಗಳ ಮಾಲಕರುಗಳಲ್ಲಿ ದೇಶಭಕ್ತಿಯ ತೀವ್ರ ಕೊರತೆ ಕಂಡುಬರುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading