
ಹೇಮಾ ಹೆಬ್ಬಗೋಡಿ
ಹೇಮಾ ಹೆಬ್ಬಗೋಡಿ ಕನ್ನಡದಲ್ಲಿ ಎಂ.ಎ ಹಾಗೂ ಪಿ.ಎಚ್ ಡಿ ಪದವೀಧರೆ. ಕನ್ನಡ ಉಪನ್ಯಾಸಕಿಯಾಗಿ ಕೆಲಸಮಾಡಿದ್ದಾರೆ. ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಇವು ಮಯೂರ, ಅವಧಿ, ಕಸ್ತೂರಿ, ಕೆಂಡಸಂಪಿಗೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಬ್ಬಾಸ್ ಕಿರಸ್ತೊಮಿಯ ಹಾಯ್ಕುಗಳ ಅನುವಾದ ʼಹೆಸರಿಲ್ಲದ ಹೂʼ, ಅನುವಾದಿತ ಲೇಖನಗಳ ಸಂಕಲನ ʼಉರಿವ ಬನದ ಕೋಗಿಲೆಗಳುʼ ಪ್ರಕಟಗೊಂಡಿವೆ. ಅಕಿರಾ ಕುರೋಸಾವಾನ ಆತ್ಮಕತೆಯ ಅನುವಾದವು ಕೆಂಡಸಂಪಿಗೆಯಲ್ಲಿ ಪ್ರಕಟಗೊಂಡಿದೆ.
ಈ ಸಂಚಿಕೆಗಾಗಿ ಜುಂಪಾ ಲಾಹಿರಿಯ ಪ್ರಬಂಧವೊಂದನ್ನು ಅನುವಾದಿಸಿದ್ದಾರೆ.

ಜುಂಪಾ ಲಾಹಿರಿ ಪ್ರಸಿದ್ಧ ಅಮೆರಿಕನ್ ಸಣ್ಣಕತೆಗಾರ್ತಿ, ಕಾದಂಬರಿಕಾರ್ತಿ. ಈಗ ಇಟ್ಯಾಲಿಯನ್‌ನಲ್ಲಿ ಕೂಡ ಬರವಣಿಗೆ ಆರಂಭಿಸಿದ್ದಾರೆ. ಇವರ ಮೊದಲ ಕಥಾಸಂಕಲನ Interpreter of Maladies ಪ್ರತಿಷ್ಟಿತ ಪುಲಿಟ್ಜರ್ ಪುರಸ್ಕಾರವನ್ನು ಪಡೆದಿದೆ. The Namesake ಇವರ ಪ್ರಸಿದ್ಧ ಕಾದಂಬರಿ ಚಲನಚಿತ್ರವಾಗಿದೆ. ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ಕ್ರಿಯೇಟಿವ್ ರೈಟಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆಸಲ್ಲಿಸಿದ್ದಾರೆ. Interpreter of Maladies, Unaccustomed Earth, The Namesake ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಪೆನ್ ಹೆಮಿಂಗ್ವೆ ಪ್ರಶಸ್ತಿ, ಪುಲಿಟ್ಜರ್ ಪ್ರಶಸ್ತಿ, ಏಷ್ಯನ್ ಅಮೆರಿಕನ್ ಲಿಟರರಿ ಪ್ರಶಸ್ತಿ, ನ್ಯಾಷನಲ್ ಹ್ಯುಮ್ಯಾನಿಟೀಸ್ ಮೆಡಲ್, ಓ ಹೆನ್ರಿ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಸಂದಿವೆ.
ಎಕೋ ಮತ್ತು ನಾರ್ಸಿಸಿಸ್ ಪುರಾಣವು ಅನುವಾದಕನ ದೃಷ್ಟಿಕೋನದಿಂದ ನೋಡಿದಾಗ ವಿಶೇಷವಾಗಿದೆ. ವೈಯುಕ್ತಿಕವಾಗಿ ಲೇಖಕಿಯಿಂದ ಅನುವಾದಕಿಯಾಗಿ ಮತ್ತೆ ಲೇಖಕಿಯಾದ ನನಗೆ ಇನ್ನೂ ವಿಶೇಷವಾಗಿ ಕಾಣುತ್ತದೆ.
ಫೆಬ್ರವರಿ ೨೦೧೬ರಲ್ಲಿ ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯಿಕ ಅನುವಾದದ ಸೆಮಿನಾರಿಗೆ ಬಂದ ವಿದ್ಯಾರ್ಥಿಗಳಿಗೆ ಹೇಳಿಕೊಡುವುದರ ಜೊತೆಗೆ ಅವರಿಂದ ಕಲಿಯುವುದರ ಕುರಿತು ಉತ್ಸುಕಳಾಗಿದ್ದೆ. ಇದೇ ಸಮಯದಲ್ಲಿ ಡೊಮೆನಿಕೊ ಸ್ಟಾರ್ನೋನ್ ಅವರ ಇಟಾಲಿಯನ್ ಕಾದಂಬರಿ Lacci ಓದಿ ಇಷ್ಟಪಟ್ಟು ಅದನ್ನು ಅನುವಾದಿಸಲು ನಿರ್ಧರಿಸಿದ್ದೆ. ಅದೇ ನನ್ನ ಮೊದಲ ಅನುವಾದವಾಗಿತ್ತು.
Lacciಯ ಅನುವಾದ ಒಂದು ರೀತಿಯಲ್ಲಿ ನನ್ನ ಬದುಕಿನ ರೂಪಾಂತರ. ೨೦೧೨ರಲ್ಲಿ ಇಟಾಲಿಯನ್ ಭಾಷೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ರೋಮ್‌ಗೆ ಹೋದೆ. ನಂತರ ಇಟಾಲಿಯನ್‌ನಲ್ಲೇ ಬರೆಯುವ ಪ್ರಯೋಗ ಮಾಡಿದೆ. ೨೦೧೫ರಲ್ಲಿ ಆ ಭಾಷೆಯಲ್ಲಿ ಬರೆದ In altre parole ಪ್ರಕಟವಾಯಿತು. ಮನಸ್ಸಿನ ಮೂಲೆಯಲ್ಲಿ ಅನುವಾದದ ಕುರಿತು ಯೋಚಿಸುವಾಗೆಲ್ಲ ಎಲ್ಲೋ ಒಂದೆಡೆ ಹೊಸ ಭಾಷೆಯನ್ನು ತಿಳಿಯುವ, ಕಲಿಯುವ ಹಾದಿಯಲ್ಲಿ ಏನನ್ನೋ ಬಿಟ್ಟು ಮುಂದೆಹೋಗಿದ್ದೇನೆ ಅನ್ನಿಸುತ್ತಿತ್ತು.
ನನ್ನ ಸ್ನೇಹಿತರೊಬ್ಬರು Lacciಯನ್ನು ಅನುವಾದಿಸುವಂತೆ ಹೇಳಿದಾಗ ಉತ್ಸಾಹದಿಂದಲೇ ಒಪ್ಪಿಕೊಂಡೆ. ಅದು ನನ್ನ ಮಟ್ಟಿಗೆ ಇಂಗ್ಲೀಷಿನಿಂದ ಇಟಾಲಿಯನ್‌ನಲ್ಲಿ ಬರವಣಿಗೆಗೆ ತೊಡಗಿಕೊಳ್ಳುವ ರೂಪಾಂತರ ಪ್ರಕ್ರಿಯೆಯಾಗಿತ್ತು. ಅದೊಂದು ರೀತಿಯಲ್ಲಿ ಲೇಖಕಿಯಾಗಿ ನನ್ನ ಕಾದಂಬರಿಗಳನ್ನು ಬರೆಯುವುದರಿಂದ ಮತ್ತೊಬ್ಬರ ಮಾತುಗಳ ಅನುವಾದಕಿಯಾಗುವ ಬಗೆ. ಒಂದು ರೀತಿಯಲ್ಲಿ ಮೊದಲನೆಯದಕ್ಕಿಂತ ಎರಡನೆಯ ಬಗೆಯ ರೂಪಾಂತರ ಹೆಚ್ಚು ಅಮೂಲಾಗ್ರವಾಗಿತ್ತು. ಅದೊಂದು ಹೊಣೆಗಾರಿಕೆಯ ಕ್ರಿಯೆಯಾಗಿತ್ತು. ಕೌಶಲದೊಂದಿಗೆ ಬೇರೆ ಬಗೆಯ ಮನಸ್ಥಿತಿಯನ್ನು ಬೇಡುವ ಕ್ರಿಯೆಯಾಗಿತ್ತು.

ಪ್ರಿನ್ಸಟನ್‌ನಲ್ಲಿ ಮೊದಲ ಅನುವಾದದ ಸೆಮಿನರ್ ಯೋಜಿಸುವಾಗ ಅದರ ಸ್ವರೂಪದ ಕುರಿತು ಯೋಚಿಸುತ್ತಿದ್ದೆ. ಅನುವಾದ ಕುರಿತು ಹಲವಾರು ಪ್ರಬಂಧಗಳನ್ನು, ಸಿದ್ಧಾಂತಗಳನ್ನು ಓದಿದ್ದೆ. ವಾಲ್ಟರ್ ಬೆಂಜಮಿನ್ (ಜರ್ಮನ್ ತತ್ವಶಾಸ್ತ್ರಜ್ಞ) ಇಲ್ಲವೆ ವಾಲ್ಡಮಿರ್ ನಬೊಕೊವ್ (ರಷ್ಯನ್-ಅಮೆರಿಕನ್ ಕಾದಂಬರಿಕಾರ) ಪ್ರಬಂಧಗಳ ಉಲ್ಲೇಖದಿಂದ ಮಾತನ್ನು ಆರಂಭಿಸಬಹುದಿತ್ತು. ಬದಲಿಗೆ ಓವಿಡ್ (ರೋಮನ್ ಕವಿ) ಕವಿಯ ಮೆಟಾಮಾರ್ಫಸಿಸ್ ಯಾವಾಗಲೂ ಬದುಕಿನ ನಿಗೂಢತೆಗಳನ್ನು ತೋರುವ ಕಾವ್ಯವಾಗಿದ್ದು ಅದನ್ನೇ ಆರಿಸಿಕೊಂಡೆ. ಓವಿಡ್‌ನ ಈ ಅದ್ಭುತ ಕೃತಿ ಗ್ರೀಕ್ ಪುರಾಣದ ಕತೆಗಳನ್ನಾಧರಿಸಿದ್ದು ಒಂದು ರೀತಿಯಲ್ಲಿ ಅನುವಾದವೇ ಆಗಿದೆ. ಈ ಕವಿ ತನ್ನ ಯೌವನದಲ್ಲಿ ಗ್ರೀಸಿನಲ್ಲಿ ಓಡಾಡುತ್ತಾ ಗ್ರೀಕ್ ಭಾಷೆ ಹಾಗೂ ಸಂಸ್ಕೃತಿಯನ್ನು ಅಭ್ಯಸಿಸಿದ. ಆ ಪ್ರಭಾವದ ಹಿನ್ನಲೆಯಲ್ಲಿ ಈ ಕಾವ್ಯ ಮೂಡಿಬಂದಿದೆ. ಅದರಲ್ಲಿನ ಎಕೋ ಮತ್ತು ನಾರ್ಸಿಸಿಸ್ ಕತೆ ನನ್ನ ಕಾಡುತ್ತಿತ್ತು. ಅದು ಒಂದು ಭಾಷೆಯ ಪಠ್ಯವನ್ನು ಮತ್ತೊಂದಕ್ಕೆ ಅನುವಾದಿಸುವುದರ ಕುರಿತು ಕೆಲವು ಸುಳುಹುಗಳನ್ನು ನೀಡಿತು.
ಮೊದಲ ದಿನದ ತರಗತಿಯಲ್ಲಿ ಎಲ್ಲ ಅನುವಾದಗಳನ್ನು ಮೊದಲಿಗೆ ರೂಪಾಂತರಗಳೆಂದೇ ನೋಡಬೇಕೆಂದು ಹೇಳಿದೆ. ಅದೊಂದು ರೀತಿ ಅಮೂಲಾಗ್ರವಾದ, ನೋವು ತುಂಬಿದ, ಅದ್ಭುತವಾದ ಪರಿವರ್ತನೆ. ಅದರಲ್ಲಿ ಕೆಲವು ನಿರ್ದಿಷ್ಟ ಗುಣಗಳು ಇರುತ್ತವೆ ಮತ್ತೆ ಕೆಲವನ್ನು ಹೊಸದಾಗಿ ಪಡೆಯಲಾಗುತ್ತದೆ. ಓವಿಡ್‌ನ ಮೆಟಾಮಾರ್ಫಸಿಸ್ ಕಾವ್ಯವನ್ನು ಅನುವಾದಕ್ಕೆ ಉದಾಹರಣೆಯಾಗಿ ನೋಡಬಹುದು. ಜೀವಿಗಳು ನಿರಂತರವಾಗಿ ಬದಲಾಗುತ್ತಿರುತ್ತಾರೆ ಎನ್ನುವುದನ್ನು ಇಲ್ಲಿ ಕಾಣಬಹುದು. ಎಕೋ ಮತ್ತು ನಾರ್ಸಿಸಿಸ್ ಕತೆಯನ್ನು ಅನುವಾದಕರ ದೃಷ್ಟಿಕೋನದಿಂದ ನೋಡಿದಾಗ ನನಗದು ಲೇಖಕಿಯಿಂದ ಅನುವಾದಕಿಯಾಗಿ ಮರಳಿ ಲೇಖಕಿಯಾಗುವುದರ ಕುರಿತು ಹೇಳುತ್ತಿದೆ ಅನ್ನಿಸಿತು.
ಮೆಟಾಮಾರ್ಫಸಿಸ್‌ನ ಮೂರನೆಯ ಪುಸ್ತಕದಲ್ಲಿ ಬರುವ ಈ ಕತೆಯಲ್ಲಿ ಪ್ರೀತಿಸಿದವಳು ಮತ್ತವಳ ಪ್ರೇಮಿ ಇಬ್ಬರೂ ಪರಿವರ್ತನೆಗೆ ಒಳಗಾಗುತ್ತಾರೆ. ಬೆಟ್ಟಗಳ ನಾಡಿನ ಅಪ್ಸರೆ ಎಕೋ ತನ್ನ ಅದ್ಭುತ ಇನಿದನಿಗೆ ಹೆಸರಾದವಳು. ಆಕಾಶ ದೇವತೆ ಜೀಯಸ್ ತನ್ನ ಹೆಂಡತಿ ಜುನೋಳ ಗಮನವನ್ನು ತನ್ನಿಂದ ಬೇರೆ ಕಡೆ ತಿರುಗಿಸಲು ಅವಳೊಡನೆ ಮಾತಾಡುತ್ತಿರು ಎಂದು ಎಕೋಗೆ ಹೇಳುತ್ತಾನೆ. ಜುನೋಗೆ ವಿಷಯ ತಿಳಿದು ಕೋಪದಿಂದ ಎಕೋಳನ್ನು ಶಪಿಸುತ್ತಾಳೆ. “ಇನ್ನುಮುಂದೆ ಬೇರೆಯವರು ಹೇಳಿದ ವಾಕ್ಯದ ಕೊನೆಯ ಪದಗಳನ್ನಷ್ಟೇ ಹೇಳುವಂತಾಗಲಿ” ಎನ್ನುವುದು ಆ ಶಾಪ. ಇದರಿಂದಾಗಿ ಎಕೋ ತನ್ನ ಮಾತುಗಳನ್ನು ಕಳೆದುಕೊಂಡು ಬೇರೆಯವರು ಹೇಳಿದ್ದರಲ್ಲಿ ಭಾಗಶಃ ಮಾತ್ರ ಪುನರುಚ್ಚರಿಸುವಂತಾಗುತ್ತದೆ.
ಅನುವಾದ ಎನ್ನುವುದು ಯಾವಾಗಲೂ ವಿವಾದಾತ್ಮಕ ಸಾಹಿತ್ಯಿಕ ರೂಪವಾಗಿದೆ. ಅದನ್ನು ಸಮರ್ಥಿಸಿಕೊಳ್ಳುವವರು ಇಲ್ಲವೇ ನಿರಾಕರಿಸುವವರು ಅದು ಮೂಲದ “ಪ್ರತಿಧ್ವನಿ” ಮಾತ್ರ ಎನ್ನುತ್ತಾರೆ. ಅದು ಕೂಡ ಒಂದು ಭಾಷೆಯಿಂದ ಮತ್ತೊಂದಕ್ಕೆ ಬರುವಾಗ ಬಹಳಷ್ಟು ಕಳೆದುಹೋಗಿರುತ್ತದೆ ಎನ್ನುತ್ತಾರೆ. ಓವಿಡ್‌ನ ಕತೆ ಹೀಗೆ ಕಳೆದುಹೋಗುವುದರತ್ತ ನಮ್ಮ ಗಮನ ಸೆಳೆಯುತ್ತದೆ. ಎಕೋ ಎನ್ನುವುದು ಗ್ರೀಕ್ ಮೂಲದ ಪದ. ಅದರರ್ಥ ದನಿ ಹೊರಟಲ್ಲಿಂದ ದೂರ ಸಾಗಿ ಮರಳಿ ಬರುವಾಗ ಮೂಲದ ಭಾಗಶಃ ದನಿಯಷ್ಟೇ ಹೊಮ್ಮುತ್ತದೆ ಎಂದು. ಪ್ರತಿಧ್ವನಿ ಎಂದರೆ ಕೇವಲ ಪುನರುಕ್ತಿ ಎಂದುಕೊಳ್ಳಬಾರದು. ಓವಿಡ್ ಎಕೋ ಪದಕ್ಕೆ ಶೇಖರಿಸು, ಪುನರುತ್ಪಾದಿಸು ಎನ್ನುವ ಅರ್ಥವನ್ನು ಕೊಡುತ್ತಾನೆ. ಇದನ್ನು ಅನುವಾದವೆಂದು ಕರೆಯಬಹುದು.
ಮೊದಲಿಗೆ ಪ್ರತಿಭಾನ್ವಿತ ಕತೆಗಾರಳಾಗಿದ್ದ ಎಕೋ ಜುನೋಳ ಶಾಪದಿಂದಾಗಿ ಅನುವಾದಕಿ ಆಗಬೇಕಾಗುತ್ತದೆ. ಎಕೋಳಂತೆಯೇ ಅನುವಾದಕನ ಕೆಲಸ ಪಠ್ಯವನ್ನು ಓದುವಾಗ ಗಮನವಿಟ್ಟು “ಕೇಳುವುದು”. ಅದರರ್ಥವನ್ನು ಗ್ರಹಿಸಿ ಅದನ್ನು ಪುನರುಚ್ಚರಿಸುವುದು. ಅನುವಾದಕರು ಈಗಾಗಲೇ ಬರೆದಿರುವ ಪದಗಳನ್ನು ನಕಲಿಸುತ್ತಾರೆ. ಪ್ರತಿಧ್ವನಿಯ ರೀತಿಯಲ್ಲಿಯೇ ಅನುವಾದಕರ ಕಲೆಯು ಮೂಲದ ಅಸ್ತಿತ್ವವನ್ನು ಸೂಚಿಸುತ್ತದೆ. ಜೊತೆಗೆ ಮೂಲವನ್ನು ಅನನ್ಯವಾಗಿಸಿರುವ ಸಂಗತಿಯನ್ನು ಮತ್ತೊಂದು ಭಾಷಾ ಸಂದರ್ಭದಲ್ಲಿಯೂ ಯಥಾವತ್ತಾಗಿ ಹಿಡಿದಿಡುವುದು ಕಷ್ಟ ಎನ್ನುತ್ತದೆ. ಓವಿಡ್ ಹೇಳುವ ಪುರಾಣದಲ್ಲಿ ಎಕೋಳಿಗೆ ಅವಳ ದನಿ ಹಾಗೂ ಪದಗಳನ್ನು ಕಿತ್ತುಕೊಂಡು ಶಿಕ್ಷಿಸಲಾಗಿದೆ. ಆದರೆ ಅನುವಾದ ಮಾಡುವವರು ಈ “ಶಿಕ್ಷೆ”ಯನ್ನು ಸವಾಲಾಗಿಸಿಕೊಂಡು ಅದನ್ನು ಆನಂದಿಸುತ್ತಾರೆ. ಅನುವಾದಕರು ಪಠ್ಯವನ್ನು “ಪುನರಾವರ್ತನೆ” ಮಾಡುತ್ತಾರೆ ಎಂದರೆ ಅದು ಯಥಾರ್ಥದಲ್ಲಿ ಅಲ್ಲ. ನಿರ್ಬಂಧನೆಗಳ ನಡುವೆಯೂ ಅನುವಾದಕರು ಪಠ್ಯದ ಅರ್ಥವನ್ನು ವಿಸ್ತೃತವಾಗಿ ಹಿಡಿಯುತ್ತಾರೆ. ಇದಕ್ಕೆ ಕಲ್ಪನೆ, ಜಾಣ್ಮೆ ಹಾಗೂ ಸ್ವಾತಂತ್ರ್ಯದ ಅಗತ್ಯವಿರುತ್ತದೆ. ಪುನರಾವರ್ತಿಸುವ ಅಥವ ಪ್ರತಿಧ್ವನಿಸುವ ಅನುವಾದದ ಪ್ರಕ್ರಿಯೆಯಲ್ಲಿ ಇದು ಕೇವಲ ಆರಂಭ ಬಿಂದು ಮಾತ್ರ.
ಪುರಾಣದ ಕತೆಯನ್ನು ನೋಡೋಣ. ಎಕೋ ಒಂದು ದಿನ ನಾರ್ಸಿಸಿಸ್‌ನನ್ನು ನೋಡಿ ಪ್ರೀತಿಗೆ ಬೀಳುತ್ತಾಳೆ. ಆದರೆ ಅವಳ ಶಾಪಗ್ರಸ್ತ ಸ್ಥಿತಿಯಿಂದಾಗಿ ಪ್ರೀತಿ ದುರಂತದಲ್ಲಿ ಕೊನೆಯಾಗುತ್ತದೆ. ನಾರ್ಸಿಸಿಸ್‌ನನ್ನು ಪ್ರೀತಿಸಿದರೂ ಅವಳಿಗೆ ಅವನ ಹೆಸರನ್ನು ಹೇಳಲಾಗುವುದಿಲ್ಲ. ಅವಳು ಅವನೆಡೆಗೆ ಬಂದಾಗ ಅವನು ತಿರಸ್ಕರಿಸುತ್ತಾನೆ. ತನ್ನದೇ ರೂಪಿನ ಮೋಹಕ್ಕೆ ಅವನು ಬೀಳುವುದೊಂದು ಕ್ರೂರ ವ್ಯಂಗ್ಯ. ಎಕೋ ಅವಮಾನಿತಳಾಗಿ ಈ ತಿರಸ್ಕಾರವನ್ನು ತಡೆಯಲಾಗದೆ ಉಪವಾಸ ಬೀಳುತ್ತಾಳೆ. ಅವಳ ದೇಹ ನವೆದುಹೋಗಿ ಕೇವಲ ಮೂಳೆಚಕ್ಕಳವಾಗಿ ದನಿಯಷ್ಟೇ ಉಳಿಯುತ್ತದೆ. ಆಕೆಯ ಮೂಲ ಪ್ರತಿಭೆಯನ್ನು ಒಪ್ಪಿಕೊಳ್ಳುತ್ತಲೇ ಅವಳ ಶಾಪವನ್ನೂ ಒಪ್ಪಿಕೊಳ್ಳಬೇಕೆಂಬ ವೈರುಧ್ಯ. ಇಲ್ಲಿ ಎರಡು ವಿವರಣೆಗಳು ಮುಖ್ಯವಾಗುತ್ತದೆ. ಎರಡೂ ಎಕೋಗೆ ಸಂಬಂಧಿಸಿದ್ದು. ಮೊದಲನೆಯದು ಅವಳು ಬಯಸಿ ಪ್ರೀತಿಗೆ ಬಿದ್ದದ್ದು. ಇದು ಅನುವಾದಕ್ಕೆ ಮುಂದಾಗುವ ಸ್ಥಿತಿಯನ್ನು ಸೂಚಿಸುತ್ತದೆ. ನಾನು ಅನುವಾದಕ್ಕೆ ಮುಂದಾದದ್ದು ಇದೇ ರೀತಿ. ನಾವಿಷ್ಟ ಪಟ್ಟದ್ದನ್ನು ಅನುವಾದಿಸುವುದಕ್ಕಿಂತ ಬೇರೆ ಸಂತೋಷ ಇನ್ನೊಂದಿಲ್ಲ. ಒಂದು ಪುಸ್ತಕವನ್ನು ಅನುವಾದಿಸುವುದೆಂದರೆ ಅದರೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದು, ಅದರೊಡನಾಡುವುದು, ಒಂದೊಂದು ಪದವನ್ನೂ ಅರಿಯುವುದು ಅದರ ಸಾಂಗತ್ಯವನ್ನು ಸಂತೋಷದಿಂದ ಅನುಭವಿಸುವುದು.

ಈ ಸಂಬಂಧ ಹಿಂಬಾಲಿಸುವ ಕ್ರಿಯೆಯನ್ನು ಒಳಗೊಂಡಿರುತ್ತದೆ. ಹಿಂಬಾಲಿಸುವವರು ಎರಡನೆಯ ಸ್ಥಾನದಲ್ಲಿರುತ್ತಾರೆಯೇ ಹೊರತು ಮೊದಲಲ್ಲಿ ಅಲ್ಲ. ಓವಿಡ್‌ನ ಎಕೋ ತನ್ನ ಪ್ರೇಮಿಯನ್ನು ಅನುಸರಿಸಿದಂತೆ ಅನುವಾದಕರು ಕೂಡ ಮೂಲ ಲೇಖಕರ ಪಠ್ಯವನ್ನು ಅನುಸರಿಸುತ್ತಾರೆ. ಮೂಲದ ಬನಿಯನ್ನು ಹಿಡಿದಿಟ್ಟಿದ್ದಾರೆ ಎನ್ನುವಾಗ ಅನುವಾದಕರ ಶ್ರಮವನ್ನು ಹೊಗಳುತ್ತಿರುತ್ತೇವೆ. ಈ ಕ್ರಿಯೆ ಸಾಂಕೇತಿಕವಾಗಿ ಬೇಟೆಯಿದ್ದಂತೆ. ಪಠ್ಯದ ಮರುಸೃಷ್ಟಿಗಾಗಿ ಸೂಕ್ತ ಪದಗಳ ಬೇಟೆಯಾಡಬೇಕಾಗುತ್ತದೆ. ಪಠ್ಯವನ್ನು ನೆರಳಿನಂತೆ ಹಿಂಬಾಲಿಸುತ್ತ, ಅದರ ಸ್ವರೂಪ, ಅರ್ಥ, ರಚನೆಯನ್ನು ಅರಿಯಲು ಮತ್ತೆ ಮತ್ತೆ ಓದಬೇಕು. ಈ ಕತೆಯಲ್ಲೊಂದು ವಿಪರ್ಯಾಸವಿದೆ. ಬೇಟೆಗಾರನೆಂದು ವರ್ಣಿಸಲಾದ ನಾರ್ಸಿಸಿಸ್ ಓಡಿಹೋಗುತ್ತಾನೆ. ಎಕೋ ಬೇಟೆಯಾಡುತ್ತ ಬೆನ್ನಟ್ಟುತ್ತಾಳೆ. ಇಬ್ಬರ ಪಾತ್ರಗಳು ಅದಲುಬದಲಾಗಿವೆ. ಎಕೋಳ ಬೇಟೆ ಯತ್ನ ವಿಫಲವಾಗುತ್ತದೆ. ಅವಳ ಪಾತ್ರ ಅನುವಾದಕನ ಪಾತ್ರವನ್ನು ವಿವರಿಸುತ್ತದೆ. ಅನುವಾದಕ ಹಿಂಬಾಲಕನಾಗಿ ಎರಡನೆಯ ಸ್ಥಾನದಲ್ಲಿ ಬಂದರೂ ಮತ್ತೊಂದು ಭಾಷೆಯಲ್ಲಿ ಪಠ್ಯವನ್ನು ತರಲು ಅದರೊಂದಿಗೆ ಗುದ್ದಾಡುತ್ತಾನೆ.
ನಾನೀಗ ಲೇಖಕಿಯೂ ಹೌದು ಅನುವಾದಕಿಯೂ ಹೌದು. ಅನುವಾದವು “ದ್ವಿತೀಯ ದರ್ಜೆ”ಯದು ಹಾಗಾಗಿ ಅದು ಕೀಳು ಎಂದು ಭಾವಿಸುತ್ತಾರೆ. ಅನುವಾದವನ್ನು ಅನುಕರಣೆ ಎನ್ನಲಾಗುತ್ತದೆ. ನಾನು ಅನುವಾದ ಮಾಡುತ್ತಿದ್ದೇನೆ ಎಂದು ಹೇಳಿದಾಗ ಅವರು ನನ್ನನ್ನು ಅಯ್ಯೋ ಪಾಪ ಎನ್ನುವಂತೆ ನೋಡಿದ್ದುಂಟು. ನನ್ನ ಐಡಿಯಾಗಳು ಸತ್ತಹೋದ, ನನ್ನ ದನಿ ಉಡುಗಿದ ಕಾಲದಲ್ಲಿ ಕಂಡುಕೊಂಡ ಪರಿಹಾರ ಅನುವಾದ ಎನ್ನುವಂತೆ ಅವರ ನೋಟವಿರುತ್ತದೆ. ಅನುವಾದಿತ ಕೃತಿಯನ್ನು ಓದುವವರು ಕೂಡ ಮೂಲ ಕೃತಿಯ ಅನುಕರಣೆಯಂತೆಯೇ ನೋಡುತ್ತಾರೆ.
ಈ ಶ್ರೇಣಿಕರಣವು ಯಾವುದು ಅಧಿಕೃತ, ಯಾವುದು ಅನುಕರಣೆ ಎನ್ನುವ ರೀತಿಯಲ್ಲಿ ಪ್ರಚಲಿತದಲ್ಲಿದೆ. ವಿಷಾದದ ಸಂಗತಿಯೆಂದರೆ ಯಾವುದು ಶುದ್ಧ ಯಾವುದು ಅಶುದ್ಧ ಎನ್ನುವುದು ನಾವು ಸಾಹಿತ್ಯವನ್ನು ಹೇಗೆ ನೋಡುತ್ತೇವೆ ಎನ್ನುವುದನ್ನು ಮಾತ್ರವಲ್ಲ ನಾವು ಪರಸ್ಪರರನ್ನು ಹೇಗೆ ನೋಡುತ್ತೇವೆ ಎನ್ನುವುದನ್ನು ಕೂಡ ಪ್ರಭಾವಿಸುತ್ತದೆ. ಕತೆಯ ಎರಡನೆಯ ಮುಖ್ಯ ಅಂಶ ಎಕೋ ಅಂತಿಮವಾಗಿ ದನಿಯ “ಅವತಾರ” ತಾಳಿದ್ದು. ಅನುವಾದಕರನ್ನು ಕೂಡ ಕಣ್ಣಿಗೆ ಕಾಣಿಸಿದ, ಸ್ವಯವನ್ನು ತ್ಯಾಗ ಮಾಡಿದ ಜೀವಿಗಳೆಂದು ವರ್ಣಿಸಲಾಗುತ್ತದೆ. ಅವರ ಹೆಸರುಗಳು ಪುಸ್ತಕದ ಮುಖಪುಟದಲ್ಲಿ ಕಾಣುವುದಿಲ್ಲ. ಅವರದು ಕೇವಲ ಪೂರಕ ಪಾತ್ರವೆನ್ನಲಾಗುತ್ತದೆ. ಪುಸ್ತಕದ ಅನುವಾದ ಮುಗಿಯುತ್ತಿದ್ದಂತೆ ಅವರು ತಮ್ಮನ್ನು ತಾವು ಅಳಿಸಿಕೊಂಡು ಕೃತಿಗೆ ಮಾತಾಡಲು ಅವಕಾಶ ನೀಡಬೇಕೆಂದು ನಿರೀಕ್ಷಿಸಲಾಗುತ್ತದೆ. ಸ್ತ್ರೀವಾದಿ ವಿದ್ವಾಂಸರು ಅನುವಾದವು ಸಾಂಪ್ರದಾಯಿಕವಾಗಿ ಹೆಣ್ಣಿನ ಸ್ಥಾನವು ಗಂಡಿಗೆ ಅಧೀನವಾದದ್ದು ಎನ್ನುವ ಬಗೆಯದು ಎಂದು ಕೂಡ ವಾದಿಸುತ್ತಾರೆ.
ಮೂರು ವರ್ಷಗಳಲ್ಲಿ ಸ್ಟಾರ್ನೋನ್‌ನ Lacci ಮತ್ತು Scherzetto ಎನ್ನುವ ಕೃತಿಗಳನ್ನು ಅನುವಾದಿಸಿದೆ. ಅವುಗಳಿಗೆ ಪ್ರವೇಶಿಕೆಯನ್ನು ಬರೆಯುವಾಗ ಸ್ಟಾರ್ನೋನ್‌ನ ಕೃತಿಗಳ ಬಗೆಗಿನ ನನ್ನ ಅಭಿಪ್ರಾಯಗಳನ್ನು ವಿಮರ್ಶಾತ್ಮಕವಾಗಿ ದಾಖಲಿಸಿದೆ. ಇದಕ್ಕೆ ಹಲವು ಬಗೆಯ ಟೀಕೆಗಳು ವ್ಯಕ್ತವಾದವು. ಕೃತಿಕಾರನ ದನಿಯನ್ನು ಮೀರಿ ನನ್ನ ಆಲೋಚನೆಗಳನ್ನು ಹೇರುತ್ತಿದ್ದೇನೆ ಎನ್ನುವುದರಿಂದ ಹಿಡಿದು “ಮುಂದಿನ ಸಲದಿಂದ ಲಾಹರಿ ಈ ರೀತಿಯ ಪ್ರವೇಶಿಕೆಯನ್ನು ಬರೆಯಬಾರದು. ಕೃತಿಯನ್ನೇ ಓದಲು ಬಿಡಬೇಕು” ಎನ್ನುವವರೆಗೆ ಟೀಕೆಗಳು ಬಂದವು. ಎಕೋಳಂತೆಯೇ ನನ್ನನ್ನು ವಾಚಾಳಿ ಎಂದು ಕರೆದರು.
ಸಾಹಿತ್ಯದ ಕೃತಿಗಳನ್ನು ತಮ್ಮ ಭಾಷೆಗಳಲ್ಲಿ ಪಡಿಮೂಡಿಸಲು ಶ್ರಮಿಸುವ ಅನುವಾದಕರು ತಮ್ಮ ದೃಷ್ಟಿಕೋನ, ವ್ಯಾಖ್ಯಾನಗಳ ನಡುವೆ ಹೇಗೆ ಸಮತೋಲನವನ್ನು ಸಾಧಿಸಬೇಕು? ನಾರ್ಸಿಸಿಸ್ ಎಕೋಳನ್ನು ತಿರಸ್ಕರಿಸಿದ ಬಳಿಕ ಎಕೋ ದೈಹಿಕವಾಗಿ ಅಳಿದುಹೋಗುತ್ತಾಳೆ : “ಆಮೇಲೆ ಅವಳೆಂದೂ ಬೆಟ್ಟಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕಾಡಿನಲ್ಲಿ ಕಳೆದುಹೋಗುತ್ತಾಳೆ”. ಮುಂದಿನ ಸಾಲು ಹೀಗಿದೆ : “ಅವಳನ್ನು ಎಲ್ಲರೂ ಕೇಳಬಹುದು. ದನಿಯಲ್ಲಿ ಅವಳಿದ್ದಾಳೆ”. ಅವಳು ಅದೃಶ್ಯವಾಗಿದ್ದರೂ ಅವಳ ದನಿ ಉಳಿದಿದೆ. ಅವಳ ಅಸ್ತಿತ್ವವೊಂದು ವೈರುಧ್ಯ. ಎಲ್ಲೂ ಕಾಣುವುದಿಲ್ಲ ಆದರೆ ಯಾವಾಗಲೂ ಕೇಳಿಸುತ್ತಾಳೆ.
(ಮೂಲ: Wordswithoutborders.org. ಮೇ ೧೭, ೨೦೨೨)






0 Comments