ಅನುರಾಗದ ಝಲಕ್‌ ನ ಮಿಸ್ಟ್ರಿ ಥ್ರಿಲ್ಲರ್‌ ‘ಮೆರ್ರಿ ಕ್ರಿಸ್‌ಮಸ್’

ಮ ಶ್ರೀ ಮುರಳಿ ಕೃಷ್ಣ

**

 ಶ್ರೀರಾಮ್‌ ರಾಘವನ್‌ ಅವರು ನಮ್ಮ ದೇಶದ ನಿಯೊ-ನಾಯರ್(‌Neo-Noir) ಸಿನಿಮಾಗಳನ್ನು ನಿರ್ದೇಶಸಿರುವ ಪೈಕಿ ಗಮನಾರ್ಹವಾದ ಸ್ಥಾನವನ್ನು ಪಡೆದಿದ್ದಾರೆ. ಪುಣೆಯ ಫಿಲ್ಮ್‌ ಮತ್ತು ಟೆಲಿವಿಷನ್‌ ಇನ್ಸ್ಟಿಟ್ಯೂಟ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗ, ಕೋರ್ಸಿನ ಭಾಗವಾಗಿ ಒಂದು ಸ್ಟುಡೆಂಟ್‌ ಫಿಲ್ಮ್‌ನ್ನು ಮಾಡಿದ್ದರು. ಅವರು ಆರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅವರಿಗೆ  ಕ್ರೈಮ್‌ ಥ್ರಿಲ್ಲರ್ಸ್‌  ಅಚ್ಚುಮೆಚ್ಚಿನ ಜಾನ್ರ್‌ (Genre) ಆಗಿದೆ.

ಮೆರ್ರಿ ಕ್ರಿಸ್‌ಮಸ್, ಜಾನ್‌ ಲೆನನ್‌ ಒಂದು ಉಲ್ಲೇಖ ಮತ್ತು ಒಂದು ಸ್ಪ್ಲಿಟ್‌̈ (Split Screen) ಶಾಟ್‌ ಮೂಲಕ ಶುರುವಾಗುತ್ತದೆ.  ಒಂದು ಭಾಗದಲ್ಲಿ ಒಂದು ಮಿಕ್ಸಿರ್‌- ಗ್ರೈಂಡರ್‌ನಲ್ಲಿ ಮಾತ್ರೆಗಳು ಪುಡಿಯಾಗುತ್ತಿರುವುದನ್ನು, ಇನ್ನೊಂದರಲ್ಲಿ ಅದೇ ಸಾಧನದಲ್ಲಿ  ಚಟ್ನಿಪುಡಿ ತಯಾರಾಗುತ್ತಿರುವುದನ್ನು ಮಾರ್ಮಿಕವಾಗಿ ತೋರಿಸಲಾಗಿದೆ. ಇದು ವೀಕ್ಷಕರಲ್ಲಿ ಕುತೂಹಲವನ್ನು ಮೂಡಿಸುತ್ತದೆ.

ಓದುಗರೇ, ಜೋಕೆ ……ಈಗ ಒಂದಿಷ್ಟು Spoilers. ಆಲ್ಬರ್ಟ್‌( ನಟ ವಿಜಯ್‌ ಸೇತುಪತಿ) ಏಳು ವರ್ಷಗಳ ತರುವಾಯ ಬಾಂಬೆಗೆ(1980ರ ಅವಧಿ) ವಾಪಸ್ಸಾಗುತ್ತಾನೆ. ಆತನ ತಾಯಿ ಅಸುನೀಗಿದ್ದು ಪಕ್ಕದ ಮನೆಯ ವೃದ್ಧನಿಂದ ತಿಳಿಯುತ್ತದೆ.  ಅದು ಕ್ರಿಸ್‌ಮಸ್‌ನ ಮುನ್ನ ದಿನವಾಗಿರುತ್ತದೆ. ಒಂದಿಷ್ಟು ದುಃಖ ,ನೆನಪುಗಳನ್ನು ಹೊದ್ದುಕೊಂಡು ಹೊರಗೆ ಅಡ್ಡಾಡಲು ಮುಂದಾಗುತ್ತಾನೆ.  ಬಾರ್‌ –ರೆಸ್ಟೋರಾಂಟ್ನಲ್ಲಿ ಅಚನಕ್ಕಾಗಿ ಮರಿಯಾ(ನಟಿ ಕತ್ರಿನಾ ಕೈಫ್) ಮತ್ತು ಆಕೆಯ ಸಣ್ಣ ವಯಸ್ಸಿನ ಮಗಳ ಭೇಟಿಯಾಗುತ್ತದೆ. ಆಕೆಯ ಮಗಳಿಗೆ ಮರಿಯಾ ಒಂದರ್ಥದಲ್ಲಿ ಒಂಟಿ ತಾಯಿಯಾಗಿರುತ್ತಾಳೆ. ನಂತರ ಒಂದು ಸಿನಿಮಾ ಥಿಯೇಟರ್‌ನಲ್ಲಿ ಪುನಃ ಪರಸ್ಪರ ಮುಖಾಮುಖಿಯಾಗುತ್ತಾರೆ.  ಆಕೆಯ ಹಳೆಯ ಕಾಲದ ಮನೆಗೆ ಆಲ್ಬರ್ಟ್‌ ಹೋಗುತ್ತಾನೆ. ಅಲ್ಲಿ ಆಕೆ ತನ್ನ ಕಥೆಯನ್ನು ಹೇಳುತ್ತಾಳೆ.  ಆತ ಆಕೆಯ ಕಥೆಗೆ ಕಿವಿಯಾಗುತ್ತಾನೆ. ಇಬ್ಬರೂ ನಗುತ್ತಾರೆ, ನಿಟ್ಟುಸಿರನ್ನೂ ಬಿಡುತ್ತಾರೆ! ಇವರೀರ್ವರ ನಡುವೆ ಒಂದು ಬಗೆಯ ಬೆಸುಗೆಯ ತಂತು ಮೂಡುತ್ತದೆ! ತರುವಾಯ ಊಹಿಸದ ಬೆಳವಣಿಗೆಗಳಾಗುತ್ತವೆ.  ಅವುಗಳಲ್ಲಿ ಆಲ್ಬರ್ಟ್‌, ಮರಿಯಾಳ ಜೊತೆ ಇನ್ನೊಬ್ಬ ವ್ಯಕ್ತಿಯ ಪಾತ್ರವಿರುತ್ತದೆ!

ಈ ಸಿನಿಮಾದ ಕಥಾಹಂದರಕ್ಕೆ ಫೆಡರಿಕ್ ದಾರ್ದ್(‌ ಉಚ್ಚರಣೆ : ದಾ)ನ ಫ್ರೆಂಚ್‌ ಕಥೆಯೊಂದು ಆಧಾರವಾಗಿದೆ.   ಶ್ರೀರಾಮ್‌ ರಾಘವನ್‌ ಜೊತೆ ಇನ್ನು ಮೂವರು ಚಿತ್ರಕಥೆಯನ್ನು ಬರೆದಿದಾರೆ.  ಸಿನಿಮಾದ ಮೊದಲರ್ಧ slow burner ರೀತಿಯಲ್ಲಿ ಸಾಗುತ್ತದೆ.   ಆಲ್ಬರ್ಟ್‌ ಮತ್ತು ಮರಿಯಾಳ ಒಂಟಿತನ ಸಖ್ಯದ ನವಿರು ಭಾವನೆಯ (ಪ್ರೇಮ?) ನೀರಿನಲ್ಲಿ ಕರಗಿಹೋಗುವುದೇನೋ ಎಂದು ವೀಕ್ಷಕರಿಗೆ ಭಾಸವಾಗುತ್ತದೆ.  ತೆಳು ರೋಮಾನ್ಸ್‌ (?) ಎಂದು ಕರೆಯಬಹುದಾದ ಭಾವದ ಛಾಯೆ ಇವರೀರ್ವರ ನರ್ತನ( ಮರಿಯಾಳ ಮನೆಯಲ್ಲಿ ಜರಗುವ)ವೊಂದರಲ್ಲಿ ಕಂಡುಬರುತ್ತದೆ.  ಇದು ಮಾಗಿದ ಹಣ್ಣಿನಂತಿಲ್ಲ! ಹೀಚಿನ ತರಹ ಇದೆ! ಆದರೂ ಆಪ್ಯಾಯಮಾನವಾಗಿದೆ!

ಮೊದಲರ್ಧದಲ್ಲಿ ರೀಗಲ್‌ ಥಿಯೇಟರ್‌ನಲ್ಲಿ ಆಲ್ಫ್ರೆಡ್‌ ಹಿಚ್ಕಾಕ್‌ನ ʼ ರಿಬೆಕ್ಕಾ ʼಮತ್ತು ʼ ದಿ ಅಡ್ವೆಂಚರ್ಸ್‌ ಆಫ್‌ ಪಿನೊಷಿಯೊ ʼ ಸಿನಿಮಾಗಳನ್ನು ನಡೆಯುತ್ತಿರುವಂತೆ ತೋರಿಸಲಾಗಿದೆ.  ಒಂದು ತೂಗುಯಂತ್ರದಿಂದ ಹೊರಬರುವ ಅದೃಷ್ಟದ ಕಾರ್ಡ್ನನಲ್ಲಿ ರಾಜೇಶ್‌ ಖನ್ನಾನ ಚಿತ್ರವಿದ್ದು, ʼ The night is darkest before dawn ʼ ಎಂಬ ವಾಕ್ಯವಿರುತ್ತದೆ! ಇವು ಮುಂದೆ ಈ ಸಿನಿಮಾ ಹಿಡಿಯುವ ಹಾದಿಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತವೆ. ಈ ಸಿನಿಮಾದಲ್ಲಿ ಕ್ಲೋಸ್‌ ಅಪ್‌ನಲ್ಲಿ ಬಳಸಿರುವ ಮಿಕ್ಸರ್‌ ಗ್ರೈಂಡರ್‌, ಕನ್ನಡಕ, ಅಲ್ಬರ್ಟ್‌ ಮಾಡುವ ಆರಿಗಮಿ(Origami)ಯ ಬಾತುಗಳು, ಟೆಡ್ಡಿ ಬೇರ್‌,  ಲಿಫ್ಟ್‌ನ ಬಟನ್‌ಗಳು, ಎರಡು ಮೀನುಗಳಿರುವ ಸಣ್ಣ ತೊಟ್ಟಿ ಮತ್ತು ಆಲ್ಬರ್ಟ್‌ ಖರೀದಿಸಿದ ಪಂಜರದ ಹಕ್ಕಿಯ ಸಣ್ಣ ಗಿಫ್ಟ್‌ Propಗಳು ವೀಕ್ಷಕರ ಗಮನವನ್ನು ಸೆಳೆಯುತ್ತವೆ.  ಹಾಗೆಯೇ ಹಸಿರು ವಾಲ್ ಪೇಪರ್, ಕೆಂಪು ಕರ್ಟನ್‌ಗಳು, ಮಂದ ಬೆಳಕು, ಜಗಮಗಿಸುವ ಕ್ರಿಸ್‌ಮಸ್ ಗಿಡ ಕೂಡ. ಪಕ್ಷಿಗಳನ್ನು ಒಂದು Motifನಂತೆ ಬಳಸಲಾಗಿದೆ.  ಇವೆಲ್ಲವೂ ಸಿನಿಮಾದ ನಿಗೂಢತೆಯನ್ನು ಪ್ರತಿಫಲಿಸುವ ಸಾಧನಗಳನ್ನಾಗಿ ಬಳಸಲ್ಪಟ್ಟಿವೆಯೇನೋ ಎಂದೆನಿಸಿತು!

ಮಾತನಾಡದ ಸ್ಥಿತಿಯ ಮರಿಯಾಳ ಮಗಳು ಎತ್ತಿಕೊಂಡಿರುವ ದೊಡ್ಡ ಟೆಡ್ಡಿ ಬೇರ್, ಮರಿಯಾ/ಆಕೆಯ ಮಗಳ ಭೂತದ ಅಹಿತಕರ ಭಾರವನ್ನು, ಆಲ್ಬರ್ಟನಲ್ಲಿ ಮಡುಗಟ್ಟಿರುವ, ವ್ಯಕ್ತಪಡಿಸಲಾಗದ ರಹಸ್ಯವನ್ನು ಬಿಂಬಿಸುತ್ತಿರುವಂತೆ ಭಾಸವಾಯಿತು. ಅದನ್ನು ಆಲ್ಬರ್ಟ್‌ ಅಕೆಯಿಂದ ತೆಗೆದುಕೊಳ್ಳುತ್ತಾನೆ.  ದ್ವಿತೀಯಾರ್ಧದ ಒಂದು ಹಂತದಲ್ಲಿ ಟೆಡ್ಡಿ ಬೇರನ್ನು ಮರಿಯಾ ಬೆಂಕಿಗೆ ಒಗೆಯುತ್ತಾಳೆ.  ಒಂದರ್ಥದಲ್ಲಿ ಆಕೆಯ ಭಾರವನ್ನು ಕಳೆದುಕೊಳ್ಳುತ್ತಾಳೆ!

ಈಗಾಗಲೇ ತಿಳಿಸಿರುವ ರಾಜೇಶ್‌ ಖನ್ನಾ ಚಿತ್ರಿವಿರುವ ಅದೃಷ್ಟದ ಕಾರ್ಡ್‌, ಅಮಿತಾಬ್‌ ಬಚ್ಚನ್‌ನ  ಕಟೌಟ್‌, ʼ ಜಬ್‌ ಆಂಧೆರಾ ಹೋತಾ ಹೈ ಆಧಿ ರಾತ್‌ ಕೆ ಬಾದ್……‌ʼಸಿನಿಮಾ ಹಾಡು, ಡಬ್ಬಲ್‌ ಡೆಕ್ಕರ್‌, ರೆಕಾರ್ಡ್‌ ಪ್ಲೇಯರ್‌ ಇತ್ಯಾದಿ ಬಾಂಬೆ ಕುರಿತ Retro feelಅನ್ನು  ಪಾತ್ರ, ಸ್ಥಳ ಮತ್ತು ಪರಿಕರಗಳ nostalgiaದ ಮೂಲಕ ಸಮರ್ಥವಾಗಿ ಕಟ್ಟಿಕೊಡಲಾಗಿದೆ. 

ವಿಜಯ್‌ ಸೇತುಪತಿ ಮತ್ತು ಕತ್ರಿನಾ ಕೈಫ್‌ ಒಂದು odd combination ಎಂದು ಭಾಸವಾಗುವುದಿಲ್ಲ.  ಅವರ ನಡುವಿನ chemistry ಚೆನ್ನಾಗಿಯೇ ಮೂಡಿ ಬಂದಿದೆ.  ವಿಜಯ್‌ ಸೇತುಪತಿ ತಮ್ಮ ಆಂಗಿಕ ಮತ್ತು ಕಂಗಳ ನಟನೆಯ ಮೂಲಕ ಮಿಂಚಿದ್ದಾರೆ.  ಅವರು ಮಾತನಾಡುವ ಹಿಂದಿ ವಹಿಸಿರುವ ತಮಿಳನ ಪಾತ್ರಕ್ಕೆ ಸರಿಹೊಂದುತ್ತದೆ.  ಹೆಚ್ಚಾಗಿ ಗ್ಲಾಮರಸ್‌ ಪಾತ್ರಗಳಲ್ಲಿ ನಟಿಸಿರುವ ಕತ್ರಿನಾ ಕೈಫ್‌ ತನ್ನಲ್ಲಿ ಒಬ್ಬ ಒಳ್ಳೆಯ ಅಭಿನೇತ್ರಿಯೂ ಇದ್ದಾಳೆ ಎಂಬುದನ್ನು ಸಾಬೀತುಗೊಳಿಸಿದ್ದಾರೆ.  ಇತರ ನಟ-ನಟಿಯರು ನಿರ್ದೇಶಕರ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ!

ಆಲ್ಬರ್ಟ್‌ ಮರಿಯಾಳೊಡನೆ ಮಾತನಾಡುವಾಗ, “ ಕೆಲವೊಮ್ಮೆ ಹಿಂಸೆ ತ್ಯಾಗಕ್ಕಿಂತ ಉತ್ತಮ..” ಎಂದು ಹೇಳತ್ತಾನೆ. ಇದನ್ನು ಕ್ಲೈಮಾಕ್ಸ್‌ ಯಾವ ತೆರನಾಗಿ  ದಾಟಿಸುತ್ತದೆ ಎಂಬುದನ್ನು  ಸಿನಿಮಾ ನೋಡಿಯೇ ತಿಳಿಯಬೇಕು!

ಶ್ರೀರಾಮ್‌ ನಿರ್ದೇಶನದ ʼ ಅಂಧಧೂನ್‌ʼ 2018ರಲ್ಲಿ ಲೋಕಾರ್ಪಣೆಗೊಂಡಿತು.  ಅದು ವೀಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.  ಸುಮಾರು ಐದು ವರ್ಷಗಳ ತರುವಾಯ ʼ ಮೆರ್ರಿ ಕ್ರಸ್‌ಮಸ್ ʼ ತೆರೆಕಂಡಿದೆ.  ಪುನಃ ಈ ನಿರ್ದೇಶಕರು ಒಂದು ಒಳ್ಳೆಯ ಮಿಸ್ಟರಿ ಥ್ರಿಲ್ಲರ್‌ ಸಿನಿಮಾವನ್ನು ನೀಡಿದ್ದಾರೆ.

‍ಲೇಖಕರು avadhi

January 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: