ಅನುಮಾನವೇಕೆ ಗುರುಗಳ ಹಸ್ತಾಕ್ಷರಕೆ..

 

 

ಕುಪ್ಪಳಿಯ ಕವಿಶೈಲ ಎಂದರೆ ಅದು ಕುವೆಂಪು ಅವರ ಹಸ್ತಾಕ್ಷರವಿರುವ ತಾಣವೇ. ಅದು ಈಗ ಎಷ್ಟು ಹೆಸರಾಗಿದೆಯೆಂದರೆ ಅಲ್ಲಿ ಕುಳಿತು ಹಸ್ತಾಕ್ಷರಗಳ ಗುಚ್ಛದೊಂದಿಗೆ ಫೋಟೋ ತೆಗೆಸಿಕೊಳ್ಳದೆ ಬರುವವರೇ ಇಲ್ಲ. 

ಆದರೆ ಇತ್ತೀಚೆಗೆ ಅದನ್ನು ವಿರೂಪಗೊಳಿಸುವ ಪ್ರಯತ್ನ ಮಾಡಿದ್ದಾರೆ. ಸಾಹಿತ್ಯದ ಅಭಿಮಾನಿಗಳು ನೊಂದಿದ್ದಾರೆ. 

ಈ ಹಿನ್ನೆಲೆಯಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಸತ್ಯನಾರಾಯಣ ಅವರ ಬರಹ ಇಲ್ಲಿದೆ- 

 

ಈಕ್ಷಿತಾ ಸತ್ಯನಾರಾಯಣ

ಕುಪ್ಪಳಿ ಕವಿಶೈಲದಲ್ಲಿನ ಬಂಡೆಯ ಮೇಲೆ ಇರುವ ಕವಿ-ಗುರುಗಳ ಹಸ್ತಾಕ್ಷರದ ಬಗ್ಗೆ ಕೆಲವರು ಎತ್ತಿದ ಅನುಮಾನಗಳಿಗೆ ಈ ಟಿಪ್ಪಣಿ

ನೆನಪಿನ ದೋಣಿಯಲ್ಲಿ ಪುಟ 1086-87ರಲ್ಲಿ ಟಿ.ಎಸ್. ವೆಂಕಣ್ಣಯ್ಯನವರು ಬೇಟಿಯಿತ್ತಾಗ, ಗುರು ಶಿಷ್ಯರು ತಮ್ಮ ತಮ್ಮ ಹೆಸರುಗಳ ಪ್ರಥಮಾಕ್ಷರಗಳನ್ನು ಕಲ್ಲಿನ ತುಂಡುಗಳಿಂದ ಕೆತ್ತಿದ್ದು ದಾಖಲಾಗಿದೆ. ದಿನಾಂಕ ಸ್ಪಷ್ಟವಿಲ್ಲ. ಅಲ್ಲಿಯೇ ಕೆತ್ತಿರುವ ದಿನಾಂಕದ ಪ್ರಕಾರ 16.05.1936 ಇದ್ದಿರಬಹುದು. (ಆ ವರ್ಷ ಮೈಸೂರು ವಿಶ್ವವಿದ್ಯಾಲಯದವರು ಚಿಕಕಮಗಳೂರಿನಲ್ಲಿ ಏರ್ಪಡಿಸಿದ್ದ ಉಪನ್ಯಾಸ ಸಪ್ತಾಹ ಕಾರ್ಯಕ್ರಮಕ್ಕೆ ಬಂದಿದ್ದ ಟಿ.ಎಸ್.ವೆಂ. ಮತ್ತು ಸಂಗಡಿಗರು ಕುಪ್ಪಳಿಗೆ ಬಂದಿದ್ದರು. (ನೆ.ದೋ. ಪುಟ 1084-85)

ನೆನಪಿನ ದೋಣಿಯ ಪುಟ 1104ರಲ್ಲಿ ಕುವೆಂಪು ಇದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಬಿಎಂಶ್ರೀ ಬಂದಿದ್ದರು. ಕವಿಶೈಲದಲ್ಲಿ 25.05.1936ರಂದು ಬಂಡೆಯ ಮೇಲೆ ಕುವೆಂಪು ಮತ್ತು ಬಿ.ಎಂ.ಶ್ರೀ.ಯವರು ತಮ್ಮ ತಮ್ಮ ಹೆಸರು/ಇನ್ಷಿಯಲ್ಲುಗಳನ್ನು ಕಲ್ಲುಗಳಿಂದಲೇ ಹೊಡೆದು ಕೆತ್ತುತ್ತಾರೆ.

ಹಲವು ವರ್ಷಗಳ ನಂತರ ತೇಜಸ್ವಿ, ಜೀಶಂಪ. ಮತ್ತು ಚಿತ್ರಕಲಾವಿದ ತಿಪ್ಪೇಸ್ವಾಮಿಯವರು ಮೈಸೂರಿನಿಂದ ಸೈಕಲ್ಲಿನಲ್ಲಿ ಕುಪ್ಪಳಿಗೆ ಬಂದು ಉಳಿದುಕೊಳ್ಳುತ್ತಾರೆ. ಆಗ ಮೊದಲೇ ನಿರ್ಧರಿಸಿದಂತೆ, ಬರುವಾಗಲೇ ಉಳಿ, ಸುತ್ತಿಗೆ ತಂದು ಆ ಹೆಸರುಗಳನ್ನು ಆಳವಾಗಿ ಕಂಡರಿಸುತ್ತಾರೆ. ಅಲ್ಲಿಯೇ ತಮ್ಮ ತಮ್ಮ ಹೆಸರುಗಳನ್ನೂ ಕೆತ್ತುತ್ತಾರೆ.

ಹೀಗೆ ತಮ್ಮ ತಮ್ಮ ಹೆಸರನ್ನು ಬಂಡೆಗಲ್ಲಿನಲ್ಲಿ ಕೆತ್ತಿದ ಪ್ರಖ್ಯಾತರಲ್ಲಿ ಕುವೆಂಪು, ಬಿಎಂಶ್ರೀ, ಟಿಎಸ್ವೆಂ ಮೊದಲಿಗರೇನಲ್ಲ. ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿ, ಕವಿರನ್ನ ಮತ್ತು ಚಾವುಂಡರಾಯರ ಹಸ್ತಾಕ್ಷರಗಳನ್ನು ಕಾಣಬಹುದು. ಇಬ್ಬರೂ ಎದುರು ಬದುರಿಗೆ ಕುಳಿತು ತಮ್ಮ ಹೆಸರುಗಳನ್ನು ಕೆತ್ತಿದ್ದಾರೆ. ಇನ್ನೊಂದು ಕಡೆ KRW ಎಂಬ ಇನ್ಷಿಯಲ್ಲುಗಳಿವೆ. ಅವುಗಳನ್ನು ಸ್ವತಃ ಕೃಷ್ಣರಾಜ ಒಡೆಯರ್ ಅವರೆ ತಮ್ಮ ಭೇಟಿಯ ಸಮಯದಲ್ಲಿ ಕೆತ್ತಿದರೆಂದು ಹೇಳಲಾಗುತ್ತದೆ.

ಕವಿಶೈಲ ಕುವೆಂಪು ಅವರ ಮನೆಯ ಹತ್ತಿರವಿದ್ದ ಜಾಗ. ಅದು ಅವರಿಗೆ ಸೇರಿದ್ದಲ್ಲ (ಆಸ್ತಿಯ ಲೆಕ್ಕಾಚಾರದಲ್ಲಿ) ಎಂಬುದು ಸ್ಪಷ್ಟ. ಆದರೆ, ಅಲ್ಲಿಯ ಬಂಡೆಯ ಮೇಲೆ ಕುಳಿತು ಅವರು, ‘ದಿಗ್ವಧೂ ಭ್ರೂಮಧ್ಯೆ ರಂಗುಮಾಣಿಕ ಬಿಂದು’ವಿನಂತೆ ಕಂಡ ಅದೆಷ್ಟು ಸೂರ್ಯಾಸ್ತಗಳನ್ನು ನೋಡಿದ್ದಾರೊ, ಕಾಡು ಮೇಡು ಗುಡ್ಡಗಳನ್ನು ನೋಡಿದ್ದಾರೊ, ಶಿವವಾಣಿಯರ ನೃತ್ಯದಂತೆ ಕಾಣುವ ಮೋಡಗಳ ನೆರಳಿನಾಟವನ್ನು ಕಂಡಿದ್ದಾರೊ, ಶಿವಮುಖಚಂದ್ರಿಕೆಯ ಸೌಂದರ್ಯದಿಂ ಶಿವನುದ್ಭವಿಪಂತೆ ಕಂಡುಬರುತ್ತಿದ್ದ ಸೃಷ್ಟಿಸೊಬಗನ್ನುಂಡಿದ್ದಾರೊ ಯಾರಿಗೆ ಗೊತ್ತು. ಅದರಿಂದ ಅದೆಷ್ಟು ಪ್ರಭಾವಿತರಾಗಿದ್ದಾರಂಬುದು ಅವರ ಸಾಹಿತ್ಯವನ್ನು ಓದಿದವರೆಲ್ಲರಿಗೂ ಗೊತ್ತು. ಒಂದೇ ವಾರದಲ್ಲಿ ಐದು ಸಾನೆಟ್ಟುಗಳನ್ನು ಕವಿಶೈಲದ ಬಗ್ಗೆಯೆ ಕವಿ ಬರೆದಿದ್ದಾರೆ ಎಂದರೆ ಅದರ ಪ್ರಭಾವ ಎಷ್ಟೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಿಗ್ ಬ್ಯಾಂಗ್ ಥಿಯರಿಯನ್ನು ಹೇಳುವ ಶಿಲಾತಪಸ್ವಿ ಎಂಬ ಪದ್ಯಕ್ಕೆ ಕವಿಶೈಲದಲ್ಲಿದ್ದ ನಿಲುಗಲ್ಲೊಂದು ಸಾಕ್ಷಿಯಾಗಿದೆ. ಶ್ರೀರಾಮಾಯಣ ದರ್ಸನಂ ಮಹಾಕಾವ್ಯದಲ್ಲಿ ಬರುವ ಹಲವಾರು ವರ್ಣನೆಗಳಿಗೆ ಕವಿಶೈಲವೇ ಪ್ರೆರಣೆಯಾಗಿದೆ.

ಕುವೆಂಪು ಅವರ ಸಾಹಿತ್ಯಕ ರಚನೆಗಳನ್ನು ಓದಿದ್ದ, ಪ್ರೋತ್ಸಾಹಿಸಿದ್ದ ಗುರುಗಳು ಅಲ್ಲಿಗೆ ಬಂದಾಗ, ಅಲ್ಲಿ ನೆರೆದಿದ್ದವರ (ಕುವೆಂಪು ಅವರ ಅಲ್ಲ) ಕೋರಿಕೆಯಂತೆ ತಮ್ಮೆ ಹೆಸರುಗಳನ್ನು ಕೆತ್ತಿದ್ದಾರೆ. ಅವರ್ಯಾರಿಗೂ ಆ ಸ್ಥಳ ಮುಂದೊಂದು ದಿನ ಇಷ್ಟೊಂದು ಖ್ಯಾತವಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರ್ಯಾರಿಗೂ ಗುಡ್ಡವನ್ನು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳುವ ಬಯಕೆಯಂತೂ ಇರಲಿಲ್ಲ!! ಎಲ್ಲಕ್ಕಿಂತ ಮುಖ್ಯವಾಗಿ, ಅವರ್ಯಾರಿಗೂ ತಮ್ಮ ಹೆಸರುಗಳನ್ನು ಬಂಡೆಯ ಮೇಲೆ ಕೆತ್ತಿ ಅಜರಾಮರಗೊಳಿಸುವ ಅಗತ್ಯವೂ ಇರಲಿಲ್ಲ. ಕನ್ನಡಿಗರು, ಕನ್ನಡ ಇರುವವರೆಗೂ (ಈ ಸೃಷ್ಟಿ ಇರುವವರಗೂ!!!!) ಆ ಮೂವರು ಮಹನೀಯರ ಹೆಸರು ಇದ್ದೇ ಇರುತ್ತದೆ.

ಬೇಲೂರು ಹಳೇಬೀಡು ಮೊದಲಾದ ಐತಿಹಾಸಿಕ ಹಾಗೂ ಕಲಾತ್ಮಕ ಮಹತ್ವವುಳ್ಳ ಸ್ಥಳಗಳಿಗೆ ಹೋದವರು, ಅವರು ಕೆತ್ತಿದ್ದಾರೆ ನಾನೇಕೆ ಕೆತ್ತಬಾರದು ಎಂದು, ಹೋದವರೆಲ್ಲಾ ಕೆತ್ತಲಾದೀತೆ? ಈಗ ಕವಿಶೈಲ ಒಂದು ಮಹತ್ವದ ಸ್ಥಾನವಾಗಿದೆ. ಪ್ರವಾಸಿ ಸ್ಥಳವಾಗಿದೆ. ಐತಿಹಾಸಿಕ ಮಹತ್ವ ಅದಕ್ಕಿದೆ. ಅಲ್ಲಿಗೆ ಹೋದವರು ಆ ಸ್ಥಳದ ಘನತೆಯನ್ನು ಎತ್ತಿ ಹಿಡಿಯಬೇಕೆ ಹೊರತು ವಿರೂಪಗೊಳಿಸಬಾರದು ಎಂಬ ಕನಿಷ್ಠ ಸೌಜನ್ಯ ಅಲ್ಲಿಗೆ ಹೋದವರಿಗೆ ಇರಬೇಕು. ಹೋಗದೇ ಮಾತನಾಡುವವರಿಗೂ ಇರಬೇಕು!.

‍ಲೇಖಕರು Admin

December 29, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: