ಇತ್ತೀಚಿನವರೆಗೆ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುವುದು ಕೇವಲ ವಸ್ತುಗಳು ಮತ್ತು ತಮ್ಮ ನಡತೆಯಿಂದಾಗಿ ಮನುಷ್ಯರು ಮಾತ್ರ ಅಂದುಕೊಂಡಿದ್ದೆ. ನಾನೇನೂ ಡೆಪ್ರಿಸಿಯೇಷನ್ ಬಗ್ಗೆಯೋ ಅಥವಾ ಸನ್ನಡತೆಯ ಬಗ್ಗೆಯೋ ಉಪನ್ಯಾಸ ನೀಡಲು ಮುಂದಾಗುತ್ತಿಲ್ಲ. ನನ್ನ ಚಿಂತೆಯೇ ಬೇರೆ!
ನಾವು ಚಿಕ್ಕವರಿದ್ದಾಗ ಸ್ವಾರಸ್ಯಕರವಾದ ಆಟವೊಂದಿತ್ತು. ಎರಡು ಪ್ರಶ್ನೆಗಳಿಗೆ ಒಂದೇ ಉತ್ತರ ಕೊಡುವಂತದ್ದು. ಈಗ ನಿಮ್ಮೊಂದಿಗೆ ಆಡಿ ನೋಡೋಣ! ಈಗ ಒಬ್ಬಾತ ಮಡದಿಯೊಂದಿಗೆ ಆಕೆ ಅಂಗಡಿಯಿಂದ ತಂದ ವಸ್ತುವೊಂದರ ಬೆಲೆಯೆಷ್ಟು ಎಂದು ಕೇಳಿದ ಅಂದುಕೊಳ್ಳಿ. ಅಷ್ಟರಲ್ಲಿ ಅವಳ ಅತ್ತೆಯೂ ನನ್ನ ಎಲೆ ಅಡಿಕೆಯ ಸಂಚಿ ಎಲ್ಲಿ ಎಂದು ಪ್ರಶ್ನಿಸುತ್ತಾಳೆ. ಈಗ ಅವಳು ಇಬ್ಬರಿಗೂ ಒಂದೇ ಉತ್ತರವನ್ನೀಯುತ್ತಾಳೆ! ಏನದು? ಗೊತ್ತಿಲ್ಲವೇ? ಸರಿ ಬಿಡಿ ನಾನೇ ಹೇಳಿ ಬಿಡುತ್ತೇನೆ… ನಾಕಾಣೆ!
ಹೌದು ಉತ್ತರ ನಾಕಾಣೆ! ಛೆ.. ಇದು ಮೊದಲೇ ಗೊತ್ತಿತ್ತಲ್ಲಪ್ಪ ಅಂದುಕೊಳ್ಳುತ್ತಿದ್ದೀರಾ… ಹೋಗಲಿ ಬಿಡಿ.ನಾನೀಗ ಅಲವತ್ತುಕೊಳ್ಳುತ್ತಿರುವುದೂ ನಿಮಗೆ ಮೊದಲೇ ತಿಳಿದಿದ್ದ ಈ ನಾಕಾಣೆಯ ಬಗ್ಗೆಯೇ!
ಇದರ ಮುಖ ಬೆಲೆಗಿಂತ ಉತ್ಪಾದನ ವೆಚ್ಛವೇ ಅಧಿಕವೆಂಬ ಕಾರಣದಿಂದ ಇವುಗಳು ದೇಶದ ಟಂಕಸಾಲೆಗಳಿಂದ ಹೊರಬರುವುದು ನಿಂತು ಕೆಲವು ವರ್ಷಗಳೇ ಕಳೆದಿದೆ. ಹಾಗಾಗಿ ಆರತಿ ತಟ್ಟೆಗಳಲ್ಲಿ, ಮಿಠಾಯಿ ಅಂಗಡಿಗಳ ಗಲ್ಲಾದಲ್ಲಿ, ಹೋಟೆಲ್ ಮಾಣಿಗಳ ಜೇಬಿನಲ್ಲಿ, ಬಸ್ ಕಂಡಕ್ಟರ್ ಗಳ ಬ್ಯಾಗಿನಲ್ಲಿ ಝಣ ಝಣ ಶಬ್ಧ ಮಾಡುತ್ತಾ ನಲಿಯುತ್ತಿದ್ದ ಈ ನಾಕಾಣೆ ಕೊನೆಗೆ ಭಿಕ್ಷುಕರಿಗೂ ಬೇಡವಾಗಿ ಕಣ್ಮರೆಯಾಗಿತ್ತು. ಆದರೀಗ ಸರಕಾರ ಜೂನ್ 30 2011ರಿಂದ ಚಲಾವಣೆಯಿಂದ ಸಂಪೂರ್ಣವಾಗಿ ಹಿಂಪಡೆಯಲಾಗುವುದೆಂದು ಘೋಷಿಸಿದ ಮೆಲೆ ನನಗೆ ಇದರ ಮೇಲೆ ವ್ಯಾಮೋಹ ಹೆಚ್ಚಿದ್ಯಾಕೋ ನಾಕಾಣೆ!
ಒಂದು ಕಾಲದಲ್ಲಿ ಚಿಣ್ಣರೋಪಾದಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದ ಈ ಪುಟ್ಟ ನಾಣ್ಯ , ಕಾಯಿನೇಜ್ ಯಾಕ್ಟ್ 1906, ಸೆಕ್ಷನ್ 15 ಎ ಎಂಬ ಕಾಯಿದೆಯ ಚೌಕಟ್ಟಿಗೆ ಒಳಪಟ್ಟು ಮೊಟ್ಟ ಮೊದಲ ಬಾರಿಗೆ ಸ್ವತಂತ್ರ ಭಾರತದಲ್ಲಿ ಚಲಾವಣೆಗೆ ಬಂದದ್ದು 1950ರಲ್ಲಂತೆ. ಇದರಲ್ಲಿ ತಮಾಷೆಯ ವಿಷಯವೆಂದರೆ, ಸ್ವಾತಂತ್ರ ಸಿಕ್ಕಿದ ಮೇಲೂ ಕೂಡಾ ಬಳಸಿದೆವು ಅದನೆ ಇದಕು ಅದಕು ಎದಕು ಎಂಬ ಕವಿನುಡಿಯಂತೆ ಬಹುತೇಕ ಎಲ್ಲದಕ್ಕೂ ನಾವು ಬ್ರಿಟಿಷರ ಹಳೆ ಕಾನೂನು ಕಾಯಿದೆಗಳನ್ನ ಅನುಸರಿಸಿದ್ದು. ಅದೇನೇ ಇರಲಿ, ನಾಲ್ಕಾಣೆ, ಚಾವಾಣೆ ಎಂದೆಲ್ಲಾ ಕರೆಸಿಕೊಂಡು ಮುಂದೆ 25 ನಯಾ ಪೈಸೆ ಎಂದು ಬದಲಾದರೂ ಎಲ್ಲರೂ ಇದನ್ನು ಪ್ರೀತಿಯಿಂದ ನಾಕಾಣೆ ಎಂದೇ ಕರೆಯುತ್ತಿದ್ದದ್ದು ವಾಡಿಕೆ.
ಈಗಿನ ಮಕ್ಕಳಿಗೆ ಚಿಲ್ಲರೆ ಮೇಲೆ ಖಾಯಸ್ಸಿಲ್ಲ ಅನ್ನಿ. ಅವರದ್ದೇನಿದ್ದರೂ ನೋಟಿನ ಪ್ರಪಂಚ. ಆದರೆ ನಮ್ಮ ಶಾಲಾ ದಿನಗಳಲ್ಲಿ ಐದು ಹತ್ತು ಪೈಸೆಗಳೇ ನಮ್ಮನ್ನಾಳುತ್ತಿದ್ದ ರಾಜರು. ನಾಕಾಣೆಯೆಂದರೆ ದೈವ ಸಮಾನ! ಒಮ್ಮೆ ನಮ್ಮ ಮನೆಗೆ ಬಂದಿದ್ದ ನೆಂಟರೊಬ್ಬರು ತೆರಳುವಾಗ ನನ್ನ ಗಲ್ಲ ಸವರಿ ಕೈಲ್ಲಿ ನಾಣ್ಯವೊಂದನ್ನು ತುರುಕಿ, ಮಿಠಾಯಿ ತಿನ್ನು ಪುಟ್ಟಿ ಎಂದು ಹೇಳಿದರು. ಅವರು ಮರೆಯಾದ ಮೇಲೆ ಮೆತ್ತಗೆ ಕೈ ಬಿಡಿಸಿ ನೋಡಿದರೆ ಚಕ್ರಾಕಾರದ ಸುಂದರ ನಾಕಾಣೆ ಪಾವಲಿ ! ಅಪ್ಪನ ಕಿಸೆಯಲ್ಲೊ ಅಥವಾ ಅಮ್ಮನ ಪಸರ್ಿನಲ್ಲೊ ಮಾತ್ರ ಕಾಣಸಿಗುತ್ತಿದ್ದ ಈ ಅದ್ಭುತ ಪುಟ್ಟ ನಾಣ್ಯ ಈಗ ನನ್ನ ಕೈಲ್ಲೂ ಧುತ್ತನೆ ಪ್ರತ್ಯಕ್ಷವಾಗಿತ್ತು! ನಾನದರ ಅಂದ ಚೆಂದವನ್ನು ಬೇರೆ ಕಾಯಿನ್ ಗಳಿಗೆ ಹೋಲಿಸಿ ಹೊಗಳಿ ನಲಿದದ್ದೇ ನಲಿದದ್ದು.
ನಾವೆಲ್ಲ ಇದನ್ನು ಬರೇ ಹಣವಾಗಿ ಮಾತ್ರ ಉಪಯೊಗಿಸುತ್ತಿರಲಿಲ್ಲ. ಹೂವಿನ ಚಿತ್ರ ಬರೆಯುವಾಗ ನಡುವೆ ಉರುಟು ಮಾಡಲು ಇದನ್ನಿಟ್ಟು ಗೆರೆ ಸುತ್ತ ಗೆರೆ ಎಳೆದು ಬಿಡುತ್ತಿದ್ದೆವು. ವಾಹನಗಳ ಚಿತ್ರ ಬರೆಯುವುದಾದರೆ ಚಕ್ರಗಳ ಜಾಗದಲ್ಲಿ ನಾಕಾಣೆಯಿಟ್ಟು ಟ್ರೇಸ್ ಮಾಡಿದರಾಯಿತು. ಕೆಲವೊಮ್ಮೆ ಗೃಹೋಪಯೋಗಿ ವಸ್ತುಗಳು ಕೈಗೊಟ್ಟಾಗ ಸ್ಕ್ರೂಡ್ರೈವರ್ ಇಲ್ಲದಿದ್ದರೂ ನಾಕಾಣೆಯನ್ನೇ ಬಳಸಿ ಸ್ಕ್ರೂಗಳನ್ನು ಕಳಚಿ ನಮ್ಮಪ್ಪ ಎಲ್ಲರನ್ನೂ ಚಕಿತಗೊಳಿಸುತ್ತಿದ್ದರು. ಮಾತಿನ ಚಕಮಕಿಗಳಲ್ಲಂತೂ ಇವು ತಲೆದೋರದೆ ಇರುತ್ತಲೇ ಇರಲಿಲ್ಲ. ಏ ನಾಕಾಣೆಯಷ್ಟು ಬುದ್ದಿಯಿಲ್ಲ ನನಗೇ ಹೇಳಕ್ಕೆ ಬತರ್ಿಯೇನೋ ಅಥವಾ ಜಾಸ್ತಿ ಎಗರಾಡ್ಬೇಡ , ಮಾನ ನಾಕಾಣೆಗೆ ಹರಾಜು ಹಾಕಿಬಿಟ್ಟೇನು ಅಂತಲೋ ಇವುಗಳನ್ನು ಉಲ್ಲೇಖಿಸುವುದು ಸರ್ವ ಸಾಧಾರಣ!
ಒಟ್ಟಿನಲ್ಲಿ ದೈವದ ಹಣೆಯಿಂದ ಹಿಡಿದು ದೇವರ ಭಂಡಾರದವರೆಗೆ ಮೆರೆದಾಡಿದ್ದ ನಾಲ್ಕಾಣೆ ವ್ಯಾಪಾರಸ್ತರು ಬಿಡಿ, ಯಾಚಕರಿಗೂ ಬೇಡವೆನಿಸಿ ಅದೆಷ್ಟೊ ಕಾಲವಾಯಿತು. ಆದರೂ, 0ಾವುದೊ ಸಮೀಕ್ಷೆಯ ಪ್ರಕಾರ, ನಮ್ಮ ಘನ ಸರಕಾರದವರು ಮೊನ್ನೆ ಚಲಾವಣೆಯಿಂದ ಹಿಂಪಡೆಯುತ್ತಿದ್ದೆವೆಂದು ಅಧಿಕೃತವಾಗಿ ಘೋಷಿಸುವಾಗ ಒಟ್ಟು ಒಂದು ಸಾವಿರದ ನಾನೂರ ಐವತ್ತೈದು ಕೋಟಿ ರೂಪಾಯಿ ಮೌಲ್ಯದ ನಾಣ್ಯಗಳು ಜನ ಸಾಮಾನ್ಯರಲ್ಲಿ ಉಳಿದಿದೆಯಂತೆ. ಅಬ್ಬಾ ಹಾಗಂದ್ರೆ ಎಷ್ಟು ಅಂತ ನೀವು ಕೇಳಿದರೆ, ಹಳೇ ಶೈಲಿಯಲ್ಲಿ ಒಂದು ಆನೆಯ ಮೇಲೆ ನಿಂತು ನಾಣ್ಯವೊಂದನ್ನು ಚಿಮ್ಮಿದಷ್ಟು ಅನ್ನುವುದೋ ಅಥವಾ ಇತ್ತೀಚಿಗಿನ ಕೇಂದ್ರ ಸರಕಾರದ ಬಹುಕೋಟಿ ಹಗರಣವೊಂದಕ್ಕೆ ಹೋಲಿಸಿವುದೋ ಅನ್ನುವ ಗೊಂದಲ ನನ್ನನ್ನು ಕಾಡೀತು!
ಹೋಗಲಿ ಬಿಡಿ ನಮಗ್ಯಾಕೆ ದೊಡ್ಡವರ ಸಮಾಚಾರ. ಈಗಷ್ಟೇ ದೇವರ ಭಂಡಾರ ಎಂದು ಮಾತು ಸಾಗಿತ್ತಲ್ಲ, ಅಲ್ಲಿಗೆ ಬನ್ನಿ. ನಮ್ಮ ಕಡೆ ಎಲ್ಲಾ ಮನೆಗಳಲ್ಲಿ ದೇವರ ಕೋಣೆಯಲ್ಲಿ ಗ್ರಾಮ ದೇವತೆಯ ಕಾಣಿಕೆ ಹುಂಡಿಯನ್ನಿಡುವ ಸಂಪ್ರದಾಯವಿದೆ. ವರ್ಷಕ್ಕೊಮ್ಮೆ ದೇವಾಲಯದ ಕಮಿಟಿಯ ಕಡೆಯವರು ಮನೆಗೆ ಬಂದು ಎಣಿಸಿ ರಶೀದಿ ಕೊಟ್ಟು ತೆಗೆದುಕೊಂಡು ಹೋಗುವುದು ವಾಡಿಕೆ.ಇತ್ತೀಚೆಗೆ ಅವರು ಹುಂಡಿ ಕಾಲಿ ಮಾಡಿ ಹೋದ ಮೇಲೂ ಡಬ್ಬವನ್ನು ಆಡಿಸಿದರೆ ಕಿಣಿ ಕಿಣಿ ಶಬ್ದ ಕೇಳುತ್ತದೆ. ಏನು ವಿಚಿತ್ರ ಅಂದುಕೊಂಡು ಬೋರಲು ಹಾಕಿದರೆ ಒಂದೆರಡು ನಾಕಾಣೆಯ ಪುಟ್ಟ ಪಾವಲಿಗಳು ಹೊರ ಬೀಳುತ್ತವೆ! ನಾವು ಚಿಕ್ಕವರಿದ್ದಾಗ ನೆನೆದಾಕ್ಷಣ ಪುಳಕಿತಗೊಳಿಸುತ್ತಿದ್ದ ಈ ಪುಟ್ಟ ನಾಣ್ಯದ ದುರವಸ್ಥೆಯನ್ನು ಕಂಡು ಮನಸ್ಸು ಮರುಗುತ್ತದೆ. ಕುರುಡು ಕಾಂಚಾಣ ಕುಣಿಯುತಲಿತ್ತು , ಕಾಲಿಗೆ ಸಿಕ್ಕವರ ತುಳಿಯುತಲಿತ್ತು ಎಂಬ ಪದ ಬದಲಾಗಿ ಪಾಪದ ನಾಕಾಣೆ ಕಂಡವರ ಕಾಲಲ್ಲಿ ತುಳಿಸಿಕೊಳ್ಳುವುದನ್ನು ನೆನೆದರೆ ಬೇಸರವೆನಿಸುತ್ತದೆ. ಅದರ ಬದಲು ನಮ್ಮ ನಿಮ್ಮಂತವರ ನೆನಪಿನ ಗೂಡಲ್ಲಿ ಹಾಗೂ ನಾಣ್ಯ ಸಂಗ್ರಾಹಕರ ಆಕರ್ಷಕ ಥೈಲಿಗಳಲ್ಲಿ ಬೆಚ್ಚಗೆ ಭದ್ರವಾಗಿರುವುದೇ ವಾಸಿಯೆನಿಸುತ್ತದೆ.
ಬಾಲ್ಯದಲ್ಲಿ ನಾಕಾಣೆಗೆ ಎರಡು ಐಸ್ ಕ್ಯಾಂಡಿ ಕೊಂಡು ಚಪ್ಪರಿಸುತ್ತಿದ್ದ ನೆನಪು ಒತ್ತರಿಸಿ ಬಂದು ಹೇಗೋ ಹತ್ತಿಕ್ಕಿಕೊಂಡು ಬೇಸರ ಕಳೆಯಲು ಎಫ್ ಎಂ ಆನ್ ಮಾಡಿದರೆ ಅಲ್ಲೂ ಎಲ್. ಆರ್. ಈಶ್ವರಿಯವರ ಮತ್ತೇರಿಸುವ ಆವಾಜ್ ನಲ್ಲಿ ‘ನಾಕಾಣೆ ನಾಕಾಣೆ ನನ್ನ ದೇವರಾಣೆ’ ಎಂಬ ಹಾಡು ಕೇಳಿ ಬರಬೇಕೆ !!








beautiful article…
ಅಯ್ಯೋ…..ನಾಕಾಣೆಯ ನಾಕಾಣೆ …..ಮೊದಲು ಐದೈದು ಪೈಸೆಗೊಂದರಂತೆ ಐದು ಯೆಕ್ಲೆರ್ಸ್ ಸಿಗ್ತಾಯಿತ್ತಲ್ಲೋ …..:):)
‘ನಾಕಾಣೆ ನಾಕಾಣೆ ನನ್ನ ದೇವರಾಣೆ’ , Nice Blog on a Useless ನಾಕಾಣೆ
Superb!.. double liked…
ನಾಕಾಣೆ ಬಗೆಗಿನ ಲಲಿತ ಪ್ರಭ೦ಧ ಚೆನ್ನಾಗಿ ಬ೦ದಿದೆ.
ಬಹುತೇಕ ಮರೆತೇ ಹೋಗಿದ್ದ ನಾಲ್ಕಾಣೆಯನ್ನು ನೆನಪಿಸಿದ್ದು ಖುಷಿಯಾಯಿತು. ನಿಮ್ಮ ಬರವಣಿಗೆಗಳು ಸರಳವಾಗಿದ್ದರೂ, ಬದುಕಿನ ಧಾವಂತದಲ್ಲಿ ಗಮನಿಸದೇ ಬಿಟ್ಟ ಅದೆಷ್ಟೊ ವಿಷಯಗಳ ಬಗ್ಗೆ ಬೆಳಕು ಚೆಲ್ಲಿ ಯೋಚನೆಗೆ ಹಚ್ಚುವಲ್ಲಿ ಯಶಸ್ವಿಯಾಗುತ್ತವೆ. ಒಟ್ಟಿನಲ್ಲಿ ನಾನು ನಿಮ್ಮ ಬರವಣಿಗೆಗಳನ್ನು ಸಾರಾ ಸಗಟಾಗಿ ಮೆಚ್ಚುವವರಲ್ಲಿ ಒಬ್ಬ.
I want to coment in kannada , but i domt have kannada script, very nice discription of -NAAKANE- thank you.
priyare http://www.kannada google.com ge hogi prati shabda bareda nantara space odeyiri adu kannadakke tranlate aagutte,nanagoo ide samasye ittu,avadhi nanage margadarshana needittu.eega todalu kannadadalli bareyuttiruve.
ravi varma hospet