ಅನಿತಾ ನರೇಶ್ ಮಂಚಿ
ಚಿತ್ರಗಳು: ನರೇಶ್ ಮಂಚಿ
ನಮ್ಮ ಪರಿಚಯದ ಪ್ರಪಂಚದಲ್ಲಿ ಎಷ್ಟೆಲ್ಲಾ ಮಂದಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಆಪ್ತರೂ, ಇನ್ನು ಕೆಲವೇ ಕೆಲವರು ಪರಮಾಪ್ತರೂ ಆಗುತ್ತಾರೆ. ಮತ್ತೆ ಕೆಲವರು ನಗೆ ಸೂಸುವಷ್ಟಕ್ಕೆ ಸೀಮಿತಗೊಂಡರೆ, ಮತ್ತೂ ಹಲವರು ಕುತೂಹಲದ ದೃಷ್ಟಿ ಬೀರುವವಷ್ಟರಲ್ಲೆ ಮರೆತು ಹೋಗಿರುತ್ತಾರೆ. ಯಾಕೆ ಹೀಗೆ ?
ಈ ಸಮಸ್ಯೆಗೆ ಉತ್ತರ ವಿಜ್ಞಾನಿಗಳಲ್ಲಿ ನಾವಾಗಿ ಕೇಳದಿದ್ದರೂ, ಅವರೇ ನಮ್ಮನ್ನು ಕೂರಿಸಿಕೊಂಡು ನಮ್ಮ ನಾಲಗೆಯಲ್ಲಿ ಹೊರಳದಂತಹ ಯಾವು ಯಾವುದೊ ಹಾರ್ಮೋನ್ ಗಳ ಹೆಸರುಗಳನ್ನು ಹೇಳಿ, ಅವುಗಳ ಸ್ರವಿಸುವಿಕೆಯೇ ಕಾರಣ. ನೀವಂದುಕೊಂಡಂತೆ ಇದಕ್ಕೇನು ಭಾವನಾತ್ಮಕ ಮಹತ್ವವಿಲ್ಲ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ.
ಆದರೆ ಅಷ್ಟು ಸುಲಭವಾಗಿ ಒಪ್ಪಲಿಕ್ಕೆ ನಾವೇನು ಪೆಕರರೇ..? ಅವರನ್ನು ಇಂತಹ ವಿಷಯದಲ್ಲಿ ತಲೆ ಹಾಕಿಕೊಂಡು ಬರಬೇಡಿ ಎಂದು ಮೊದಲೇ ಎಚ್ಚರಿಕೆ ನೀಡಿ ಬಿಡೋದೆ ವಾಸಿ.
ಆದರೆ ಈ ವಿಷ0ು ನಮ್ಮನ್ನು ಸದಾ ಕಾಡುವುದಂತೂ ಸತ್ಯ.
ಈ ಪರಿಚ0ು ಎಂಬುದರೊಂದಿಗೆ ಮರೆವು ಎಂಬುದು ಯಾವತ್ತೂ ಸೇರಿಕೊಂಡೇ ಇರುತ್ತದೆ.ನೀವೇ ಯೋಚಿಸಿ ನೋಡಿ. ಶಾಲಾ ಕಾಲೇಜಿನ ದಿನಗಳಲ್ಲಿ ಪ್ರತಿ ತರಗತಿಯಲ್ಲೂ ಕಡಿಮೆ ಎಂದರೆ ಐವತ್ತು ವಿದ್ಯಾರ್ಥಿ ಗಳಾದರೂ ಇರುತ್ತಾರೆ. ಒಂದಿಪ್ಪತ್ತೈದು ವರ್ಷ ಕಳೆದು ನೆನಪಿಸಿಕೊಳ್ಳಿ! ಎಷ್ಟು ಮುಖಗಳು ನಿಮ್ಮೆದುರಿಗೆ ನಿಲ್ಲುತ್ತವೆ? ಬೆರಳಲ್ಲಿ ಲೆಕ್ಕ ಮಾಡುವಷ್ಟು ಮಾತ್ರ ..! ಕೆಲವರಂತೂ ಕೇವಲ ಹೆಸರುಗಳಾಗಿಯೇ ನೆನಪಾಗುತ್ತಾರೆ. ಎಷ್ಟು ತಿಣುಕಾಡಿದರೂ ಅವರ ಚಿತ್ರ ನಿಮ್ಮ ಕಣ್ಣೆದುರು ಮೂಡುವುದೇ ಇಲ್ಲ. ಮತ್ತುಳಿದ ಮಂದಿ 0ಾವುದೇ ನೆನಪಿನ ಕೋಶದಲ್ಲೂ ದಾಖಲಾಗದೇ ನೇಪಥ್ಯಕ್ಕೆ ಸರಿದು ಹೋಗಿರುತ್ತಾರೆ.
ನೆನಪು ಅಂದಾಗ ನೆನಪಿಗೆ ಬಂತು ನೋಡಿ. ಯಾರಾದರೂ ನೆನಪಾಗಿ ಕಾಡಬೇಕಾದರೆ ಪರಿಚಯ ಅನಿವಾರ್ಯವೇನಲ್ಲ.
ಕೆಲವೊಮ್ಮೆ ಬಸ್ ನಿಲ್ದಾಣದಲ್ಲ್ಲೋ, ರಸ್ತೆ ಬದಿಯಲ್ಲೋ, ಅಥವಾ ಯಾವುದೋ ಮನೆಯ ತೆರೆದ ಕಿಟಕಿಯ ಸಂದಿನಲ್ಲೋ, ದುತ್ತೆಂದು ಸುಳಿದು ಮಾಯವಾಗುವ ಮುಖಗಳು ಹಲವಾರು ದಿನ ನಮ್ಮ ನೆನಪಿನ ಮಡಿಕೆಯೊಳಗೆ ತಣ್ಣಗೆ ಕುಳಿತು ಬಿಡುತ್ತಾರೆ. ಅವರಿಂದೇನೂ ಹಾನಿಯಿಲ್ಲ ಬಿಡಿ.
ಆದ್ರೆ ಈ ಎಲ್ಲೊ ನೋಡಿದಂತಿದೆ , ಪರಿಚಯ ಇದ್ದ ಹಾಗೆ ಇದೆ, ಎಂದೆನಿಸುವವರನ್ನು ಗುರುತಿಸಲು ಆಗದೆ ಅವಾಂತರಗಳು ಸಂಭವಿಸುವುದುಂಟು. ಹೆಚ್ಚಾಗಿ ಇಂತಹ ತೊಂದರೆಗಳು ಹುಟ್ಟಿಕೊಳ್ಳುವುದು ಸಭೆ ಸಮಾರಂಭಗಳಲ್ಲಿ!
ಈಗ ಯಾವುದೊ ಮದುವೆಗೋ, ಮುಂಜಿಗೋ ಹೋಗಿರುತ್ತೀರಿ ಅಂದುಕೊಳ್ಳಿ. ಯಾರಾದರು ಹತ್ತಿರ ಬಂದು, ಪರಿಚಯ ಆಯಿತೋ ? ಎಂದು ಕೊಶ್ಚನಿಸಿದಾಗ, ಇಲ್ಲ ಎಂದು ಹೇಳಿದರೆ ಅವರಿಗೆಲ್ಲಿ ಬೇಸರವಾಗುವುದೊ ಎಂಬ ಆತಂಕದಲ್ಲಿ ಕೋಲೆ ಬಸವನಂತೆ ಕುತ್ತಿಗೆ ಅಲುಗಿಸಿದಿರೊ, ನಿಮ್ಮ ತಲೆಯ ಮೇಲೆ ನೀವೇ ಚಪ್ಪಡಿ ಕಲ್ಲು ಎಳೆದುಕೊಂಡಂತಾಗುವುದು ಗ್ಯಾರಂಟಿ! ಯಾಕೆ ಅಂತೀರಾ..? ಮತ್ತೆ ವಕೀಲರ ಪಾಟೀ ಸವಾಲಿನಂತೆ ಒಂದರ ಮೇಲೊಂದರಂತೆ ಬಂದು ಅಪ್ಪಳಿಸುವ ಪ್ರಶ್ನೆಗಳಿಗೆ ಉತ್ತರಿಸಬೇಕಾದ ತುರ್ತು ಅಥವ ದುಃಖ ನಿಮ್ಮ ಪಾಲಿಗೊದಗುತ್ತದೆ. ಈಗಿನ ಪ್ರಶ್ನೆ ಪತ್ರಿಕೆಗಳಲ್ಲಿದ್ದಂತೆ ಆರಿಸಿಕೊಳ್ಳಲು ನಾಲ್ಕು ಉತ್ತರಗಳೇನೂ ಇರುವುದಿಲ್ಲ. ನೀವೇ ನಿಮ್ಮ ತಲೆಯನ್ನು ಉಪಯೋಗಿಸಬೇಕಾಗುತ್ತದೆ.
ಮೊದಲಿಗೆ ‘ಹಾಗಿದ್ದರೆ ಯಾರು ಹೇಳು ನೋಡೋಣ’ ಎಂಬ, ಲಕ್ಷ ರೂಪಾಯಿ ನಿಮಗೆ ಕೊಡುತ್ತೇನೆಂದರೂ, ನೀವು ಉತ್ತರಿಸಲಾರದ ಪ್ರಶ್ನೆ ಅಪ್ಪಳಿಸುತ್ತದೆ. ಆಗಲೇ ಸೋಲೊಪ್ಪಿಕೊಂಡು ಸುಮ್ಮನಾಗುವುದು ಒಳ್ಳೆಯದು. ಇಲ್ಲದಿದ್ದರೆ ಎಲ್ಲರೆದುರು ನಿಮ್ಮ ನೆನಪಿನ ಶಕ್ತಿ0ು ಮಾನ ಹರಾಜಾಗುವುದು ಖಂಡಿತ.
ಕೆಲವೊಮ್ಮೆ ನೀವು ಅನ್ಯಮನಸ್ಕರಾಗಿ ಮಾರ್ಕೆಟ್ಟಲ್ಲೊ, ಪಾರ್ಕ್ನಲ್ಲೋ ಹೆಜ್ಜೆ ಹಾಕುತ್ತಿರುತ್ತೀರಿ. ಅಷ್ಟರಲ್ಲಿ ಹಿಂದಿನಿಂದ ನಿಮ್ಮ ಮೂಳೆ ಶಾಶ್ವತವಾಗಿ ಜಖಂ ಆಗುವಂತಹ ಹೊಡೆತ ಬಿದ್ದು, ನೀವು ಮುಗ್ಗರಿಸಿ ಬೀಳದೆ ಹೇಗೋ ಸಾವರಿಸಿಕೊಂಡು ಹಿಂದೆ ತಿರುಗಿ ನೋಡಿದರೆ ಯಾವುದೋ ಅಪರಿಚಿತ ಮುಖ ಪೆಚ್ಚಾಗಿ ಸ್ಸಾರಿ ರೀ .. ನನ್ನ ಸ್ನೇಹಿತರೊಬ್ಬರು ಹಿಂದಿನಿಂದ ನಿಮ್ ತರನೇ ಕಾಣಿಸ್ತಾರೆ, ಅಲ್ಲದೆ ನೀವು ಹಾಕಿದ ಶರ್ಟು ಕೂಡಾ ಅದೇ ತರ ಇತ್ತು ಅಂತ ತಪ್ಪನ್ನೆಲ್ಲ ನಿಮ್ಮ ಮೇಲೆ ವರ್ಗಾಯಿಸಿ ಅಲ್ಲಿಂದ ಕಾಲು ಕೀಳುತ್ತಾರೆ.
ಹಲವು ಬಾರಿ ನಾವೇ ಕೆಲವರನ್ನು ಪ್ರಯತ್ನ ಪೂರ್ವಕವಾಗಿ ಮರೆಯಬೇಕೆಂದುಕೊಳ್ಳುತ್ತೇವೆ. ಆದರೆ ಅಂತವರು ಸದಾ ನೆನಪಲ್ಲೆ ಉಳಿಯುತ್ತಾರೆ. ಈಗ ನೀವೇ ನೋಡಿ, ನಿಮಗೆ ಯಾರಾದರೂ ಸಾಲ ಕೊಟ್ಟಿರುತ್ತಾರೆ. ಅವರನ್ನು, ಅವರು ನೀಡಿದ ಸಾಲವನ್ನು ಶತಾಯ ಗತಾಯ ಮರೆಯಬೇಕೆಂಬ ಪ್ರಯತ್ನದಲ್ಲಿರುತ್ತೀರಿ. ಆದರೆ ಅದೆಲ್ಲಿ ಸಾಧ್ಯವಾಗುತ್ತದೆ ಅಲ್ಲವೇ?! ‘ನೀ ಮರೆತೇನೆಂದರೂ, ನಾ ಹ್ಯಾಂಗ ಮರೆಯಲಿ ನಿನ್ನ’ ಎಂದು ಹಾಡುತ್ತಾ ಕೈಗೆ ಬಂದ ಸಂಬಳ ಎಣಿಸುವ ಮೊದಲೇ ಕಿತ್ತು ಕೊಳ್ಳಲು ಹಾಜರಾಗುತ್ತಾರೆ.
ಅವರನ್ನು ಬಿಡಿ. ಈಗ ನನಗೆ ಒಬಾಮಾ, ಒಸಾಮಾ, ಎಲ್ಲ ತುಂಬಾ ಪರಿಚಯದವರು ಅಂದರೆ ನಾನ್ಯಾವಾಗ ಅವರ ಮನೆಗೆ ಹೋಗಿ ಚಹಾ ಕುಡಿದು, ಅವಲಕ್ಕಿ ತಿಂದು ಬಂದಿದ್ದೆ ಅಂತ ನನ್ನನ್ನು ಕಣ್ಣು ಕೆಕ್ಕರಿಸಿ ನೋಡಬೇಡಿ. ಸುದ್ದಿ ವಿಪ್ಲವದ ಈ ದಿನಗಳಲ್ಲಿಇದೂ ಒಂದು ರೀತಿಯ ಪರಿಚಯವೇ.
ಇನ್ನು ಈ ಸೆಲಬ್ರೆಟಿಸ್, ರಾಜಕಾರಿಣಿಗಳು ಇವರೆಲ್ಲ ನಮಗೆ ನಿತ್ಯವೂ ಮಾಧ್ಯಮಗಳ ಮೂಲಕ ಮುಖ ತೋರಿಸಿ ತೋರಿಸಿ ಜನ್ಮ ಜನ್ಮಾಂತರಕ್ಕೂ ಮರೆಯದಂತಾಗಿರುತ್ತಾರೆ. ಆದರೆ ಅವರಿಗೆ ನಮ್ಮ ಪರಿಚಯ ಎಲ್ಲಿದೆ ಅನ್ನಬೇಡಿ. ಅವರಿಗೂ ನಾವು ಪರಿಚಿತರೇ.. ಇಲ್ಲದಿದ್ದರೆ ರಾಜಕಾರಿಣಿಗಳು ಭೀಷಣವಾಗಿ ಭಾಷಣ ಸುರು ಮಾಡುವಾಗ ನಮ್ಮನ್ನೆಲ್ಲ ನನ್ನ ಪ್ರೀತಿಯ.. ಅಂತ ಸಂಭೋದಿಸುವ ಔಚಿತ್ಯವೇನಿದೆ ಅಲ್ಲವೇ? ಚಿತ್ರ ತಾರೆಯರಂತೂ ಗಾಳಿಯಲ್ಲೇ ಸಿಹಿ ಮುತ್ತುಗಳನ್ನು ತೂರಿ ಬಿಟ್ಟು ತಮ್ಮ ಆತ್ಮೀಯತೆಯ ಪ್ರದರ್ಶನ ಮಾಡುತ್ತಾರೆ. ಹಾಗಂತ ನಾವೆಲ್ಲಾದರೂ ಹತ್ತಿರ ಹೋಗಿ ಮಾತನಾಡಲೆತ್ನಿಸಿದರೆ ನಮ್ಮನ್ನು ಯಾವುದೋ ಲೋಕದ ಕ್ಷುದ್ರ ಜೀವಿಯಂತೆ ನೋಡಿದರೂ ಅಚ್ಚರಿಯಿಲ್ಲ.
ಅಂದ ಹಾಗೆ ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ ವರದಿಯೊಂದರ ಪ್ರಕಾರ ನಮ್ಮ ಮೆದುಳು ಗರಿಷ್ಟ ನೂರೈವತ್ತರಿಂದ ಮೇಲ್ಪಟ್ಟು ಹೆಚ್ಚಿನ ಜನರೊಂದಿಗೆ ಆತ್ಮೀಯ ಸಂಬಂಧಗಳನ್ನು ನಿಭಾಯಿಸುವ ಸಾಮಥ್ರ್ಯವನ್ನು ಹೊಂದಿಲ್ಲವಂತೆ . ಅಮೆರಿಕಾದ ಪ್ರೊ. ರಾಬಿನ್ ಡಂಬಾರ್ ಎಂಬವರು ಈ ಬಗೆಗೆ ಆಳವಾದ ಅಧ್ಯಯನ ಮಾಡಿದ್ದಾರಂತೆ. ಹಾಗಾಗಿ ಲಕ್ಷಗಟ್ಟಲೆ ಅಭಿಮಾನಿಗಳನ್ನು ನೆನಪಿಟ್ಟುಕೊಳ್ಳುವುದು ಯಾವ ಸೆಲಬ್ರೆಟಿಗಳಿಂದಲೂ ಸಾಧ್ಯವಿಲ್ಲವೆಂದು ಅವರನ್ನು ಕ್ಷಮಿಸಿ ಬಿಡೋಣಾ ಆಗದೇ..?
ಮತ್ತೆ ಈಗ ನೀವು ಮಾಡಬೇಕಾದ ಕೆಲಸ ಇಷ್ಟೆ. ನಿಮಗೆ ನೆನಪಿರುವ ನೂರೈವತ್ತು ಜನ ಯಾರೆಲ್ಲ ಎಂದು ಲೆಕ್ಕ ಹಾಕುತ್ತಾ ನನ್ನನ್ನು ಸದ್ಯಕ್ಕೆ ಮರೆತು ಬಿಡಿ









ಮನುಷ್ಯ ಮನುಷ್ಯನ ಮದ್ಯೆ ಎಂತದೋ ಅವ್ಯಕ್ತ ಸೇತುವೆ ಇದೆ. ಮನೊವೈಙ್ಞಾನಿಕ ಲೇಖನದಂತೆ ಸವಿಸ್ತಾರವಾಗಿತ್ತು.
ನನ್ನ ಮುಖ ಪರಿಚಯ ಮರೀಬೇಡಿ ಮೇಡಂ.
Shreemathi Anitha Naresh manchiyavare!!Neevu ishtu chandada lekhanavannu baredu nimmannu mareyalu helidare hege?
Nimma Parichayayyana tumbaa chennagide.
vishista baraha
ನಿಮ್ಮ ಕವನಗಳನ್ನು ಓದಿ ಆನಂದಿಸಿದ್ದೆ, ಆದರೆ ನೀವು ಗದ್ಯವನ್ನೂ ಬರೆಯುವುದು ಗೊತ್ತೇ ಇರಲಿಲ್ಲ. ಸುಲಲಿತವಾಗ ಬರವಣಿಗೆ. ಖುಶಿಕೊಡುತ್ತದೆ.
ಹೌದು ,ನನ್ನ ಅನುಭವಕ್ಕೂ ಅನೇಕ ಸಾರಿ ಬಂದಿದೆ .ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಆತ್ಮೀಯವಾಗಿ ನಮ್ಮ ಮನೆಯವರ ಬಗ್ಗೆ ಎಲ್ಲಾ ವಿಚಾರಿಸುತ್ತಾರೆ .ಅವರ ಹೆಸರು ನೆನಪಾಗುವುದಿಲ್ಲ ..:) ಛೆ …ಅನ್ನಿಸುತ್ತದೆ .ಕೆಲವು ವ್ಯಕ್ತಿಗಳು ಎಲ್ಲೊ ಒಮ್ಮೆ ಭೇಟಿಯಾಗಿದ್ದರೂ ಮನಸ್ಸಿಗೆ ಹಿತವೆನ್ನಿಸಿರುತ್ತಾರೆ .ಅವರ ಮುಖ ಕಣ್ಮುಂದೆ ಆಗಾಗ ಬರುತ್ತಿರುತ್ತದೆ .ಓದುತ್ತ ಹೋದಂತೆ ,ನನಗೂ ಇಂಥ ಅನುಭವಗಳೇ ಆಗಿದೆಯಲ್ಲ ಎನ್ನಿಸಿತು .ಚೆನ್ನಾಗಿದೆ .ಅಭಿನಂದನೆಗಳು .
Anitha olleya lekhana .. :)ninna yake mareyali.. 🙂
ಸರಳ ವಿಚಾರಗಳನ್ನು ಲಘು ಹಾಸ್ಯದ ದಾಟಿಯಲ್ಲಿ, ಕುತೂಹಲಕಾರಿಯಾಗಿ ನಮ್ಮೆದಿರಿಗಿಡುವ ನಿಮ್ಮ ಲೇಖನಕ್ಕೂ ,ಎಂದೂ ನೋಡದ ನನ್ನ ಮೋರೆಯನ್ನು ಚಿರಪರಿಚಿತ ನನ್ನ ಅಣ್ಣನ ತಂಗಿಯೆಂದು ಗುರುತಿಸಿದ ನಿಮ್ಮ ಊಹಾ ಸಾಮರ್ಥ್ಯಕ್ಕೂ ನಮೋ ನಮಃ
chennagide anitha …
ವಂದನೆಗಳು