ಅನಾಮಿಕಾ @ ಹ್ಯಾಂಡ್ ಪೋಸ್ಟ್: ಮಾತು ಮರೆತ ಗಳಿಗೆಯಲ್ಲಿ..

ಕಾಲಿಗೆ ಬೇರು ಚಿಗುರುತ್ತಿವೆ..

ಏನನ್ನ ಬರೆಯಲಿ? ನನಗೆ ಬರವಣಿಗೆ ಎನ್ನುವುದು ನನ್ನ ಅಂತರಂಗದೊಡನೆ ನಾನೆ ಸಂವಹನ ನಡೆಸುವ ಕ್ರಿಯೆ. ಆದರೆ ಈ ಒಳನಾಡಿಯ ಮಿಡಿತಕ್ಕೆ ಹೊರಗಿನ ಜಗತ್ತು ಅನುಭವಗಳನ್ನು ಕೊಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಎಂದಿಗೆ ಸಾಧ್ಯ? ಅದಕ್ಕು ಉತ್ತರವಿಲ್ಲ. ‘ಒಂದು ಜನ್ಮಕ್ಕಾಗುವಷ್ಟು ಅನುಭವಗಳಿವೆ,’ ಎನ್ನುತ್ತಿದ್ದ ಮಾತು ಎಷ್ಟು ಸವಕಲು ಎನಿಸುತ್ತಿದೆ.

ಇದೆಲ್ಲ ಮುಗಿದ ಕೂಡಲೆ ಎಲ್ಲರು ಒಟ್ಟಿಗೆ ಹೊರ ಬಿದ್ದರೆ, ಗೊಂಬೆಗಳ ಅಂಗಡಿಯಲ್ಲಿದ್ದ ಗೊಂಬೆಗಳಿಗೆಲ್ಲ ಒಮ್ಮೆಲೆ ಕೀ ಕೊಟ್ಟು ಚಾಲೂ ಮಾಡಿದಂತಾಗುತ್ತದೆ ಎಂದು ಊಹಿಸಿಕೊಂಡು ನಗುತ್ತಿರುವ ಈ ಹೊತ್ತಿನಲ್ಲಿ, ಭಾಷೆ-ಸಂವಹನ ಕುರಿತಾಗಿ ನನ್ನಿಷ್ಟದ ಸಿತಾರ್ ವಾದಕ ಭಾಸ್ಕರ್ ಚಂದಾವರ್ಕರ್ ರ ಮಾತುಗಳನ್ನು (ಕನ್ನಡಕ್ಕೆ ತಂದಿದ್ದು ವೈದೇಹಿ) ಎರವಲು ಪಡೆಯುವುದು ನನ್ನ ಹೊತ್ತಿನ ಅನಿವಾರ್ಯತೆ.

ಭಾಷೆ ಎಷ್ಟೊ ಸಲ ನಮ್ಮ ಅನುಭವಗಳನ್ನು ವ್ಯಕ್ತಪಡಿಸುವಲ್ಲಿ ಸೋಲುತ್ತದೆ. ಸಂವಹನ ಸಮಸ್ಯೆ ಏಳುವುದು ಇಲ್ಲಿಯೆ. ಅನೇಕ ಸಂದರ್ಭಗಳಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಾಗುವುದಿಲ್ಲ! ‘ನಿಮಗೆ ಹೇಗನಿಸುತ್ತದೆ ಈಗ?’ ಅಂತ ಕೇಳಿದರೆ, ‘ಹೇಳಲು ಶಬ್ದಗಳೆ ಇಲ್ಲ’ ಎನ್ನುವುದಿದೆ. ಆನಂದದ ತುರಿಯಾವಸ್ಥೆಯಲ್ಲಂತೂ ಶಬ್ದ ಕಳೆಯುವ ಸಮಸ್ಯೆ ಬಿಡಿ. ಹೇಳಬೇಕೆಂದು ತೋಚುವುದು ಕೂಡ ಇಲ್ಲ! ಹೆಚ್ಚೆಂದರೆ ‘ಅದೊಂದು ಶುಭ್ರ, ಅನಾದೃಶ‌ ಅನುಭವ’ ಎಂಬಂತಹ ಪುಟ್ಟ ಸವಕಲು ವಾಕ್ಯವೊಂದು ಚಿಮ್ಮಬಹುದು.

ಆಗೆಲ್ಲ ನಾವು ಮಾತು‌ ಮರೆತು ಕುಳಿತಂತಿರುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿಯು ಅದು ಹೀಗೆಯೆ ಇದೆ. ಕಡ್ಡಾಯ ರಜೆ ಬಳಿಗೆ ಬಂದಿರುವ ಈ ಸಮಯದಲ್ಲಿ ನನ್ನೊಳಗೆ ಏನಾಯಿತು, ಏನಾಗುತ್ತಿದೆ ಹೇಳಿ ಎಂದರೆ ಹೇಳುವುದು ಬಹಳ ಕಷ್ಟ. ಕಷ್ಟವೇನು ಅಸಾಧ್ಯವೆ. ಸಾವಿರಾರು ವರ್ಷಗಳಿಂದಲು ಈ ಅವ್ಯಕ್ತತೆಯನ್ನು ಭೇದಿಸಿ ವ್ಯಕ್ತವಾಗಿಸಲು ಆಗಿಲ್ಲ. ಏಕಾಂತದ ಶಕ್ತಿ ಅಡಗಿರುವುದು ಇಲ್ಲಿಯೆ. ಏಕಾಂತ, ಒಂಟಿತನ ಜೀವಿಗಳನ್ನು ಆಕರ್ಷಿಸುತ್ತದೆ, ಸಮುದಾಯಗಳನ್ನು ಒಗ್ಗೂಡಿಸುತ್ತದೆ, ಜಾತಿ ಧರ್ಮ ರಾಜಕೀಯ ಏನೇ ಭೇದ ಭಿತ್ತಿಗಳನ್ನು ದಾಟಿ ನೇರ ಮನಸ್ಸನ್ನೆ ಸ್ಪರ್ಶಿಸುತ್ತದೆ. ಆದರೆ ಅದು ನಮ್ಮ ಆತ್ಮಕ್ಕೆ ಏನು ತಲುಪಿಸುತ್ತದೊ ಅದನ್ನು ಹೀಗೆ ಅಂತ ಶಬ್ದದಲ್ಲಿ ಕಡೆದು ನಿಲ್ಲಿಸಲು ಮಾತ್ರ ಯಾರಿಂದಲು ಆಗಿಲ್ಲ.

ಈ ವರೆಗೆ ಅಪರಿಚಿತವಾಗಿದ್ದ ಅನುಭವವೊಂದನ್ನು ಶಬ್ದದಲ್ಲಿ ಹಿಡಿಯ ಹೊರಟೆವೆಂದರೆ ಆಗ ಆ ಅನುಭವದೊಂದಿಗೆ ಪ್ರಜ್ಞಾಪೂರ್ವಕವಾದೊಂದು ವ್ಯವಹಾರಕ್ಕು ತೊಡಗುತ್ತೇವೆ! ಅದರ ತಾಜಾತನವನ್ನು ಕಳೆದುಕೊಳ್ಳುತ್ತೇವೆ. ಜೆ. ಕೃಷ್ಣಮೂರ್ತಿ ಇದನ್ನೇ – Nameless Experience ಎಂದಿರುವುದು. ಮನುಷ್ಯ ತನ್ನ ಅನುಭವಗಳಿಗೆ ಹೆಸರು ಕೊಟ್ಟುಕೊಳ್ಳಲು ಯತ್ನಿಸುತ್ತಾನೆ. ಅಯಾಚಿತವಾಗಿ ಒದಗಿ ಬರುವ ಹೊಸ ಅನುಭವಗಳನ್ನು ಹೀಗೆ ಶಬ್ದದಲ್ಲಿ ಬಂಧಿಸಲು ಹೊರಟು ಅವನ್ನು ನಾಶ ಮಾಡಿಕೊಳ್ಳುತ್ತಾನೆ -ಅಂತ.

ಗೃಹಬಂಧನದ ಅನುಭವ ಕೂಡ ನನ್ನ ಪೀಳಿಗೆಗೆ ಮಾತ್ರವಲ್ಲ ಹಿಂದು, ಮುಂದಿನ ಎರಡು ತಲೆಮಾರಿನವರಿಗು ಅನಾಯಾಸವಾಗಿ ಒದಗಿ ಬಂದ ಹೊಸ ಅನುಭವ. ಎಲ್ಲರಿಂದ, ಎಲ್ಲದರಿಂದ ಸ್ವಯಂ ಗಡಿಪಾರಾಗುವುದು ನನಗೆ ಹೊಸದಲ್ಲ. ಅದಕ್ಕೆ ಈ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವ ಮೂಲಕ ನಾಶ ಮಾಡಿಕೊಳ್ಳಬಾರದು ಎಂತಲೆ ಸುಮ್ಮನಿದ್ದೆ. ಆದರೆ ಹೊತ್ತು ಕಳೆಯಲು ಓದುವುದು, ಬರೆಯುವುದು ರೂಢಿಸಿಕೊಂಡಿದ್ದರೆ ಸುಮ್ಮನಿರಲು ಸಾಧ್ಯವಿಲ್ಲವಲ್ಲ!

ಮನೆಯಿಂದಲೆ ಕೆಲಸ ಮಾಡಿ ಎಂದ ಮೇಲು ಬಸ್ಸುಗಳು ಓಡಾಡುತ್ತಿವೆಯಲ್ಲ, ಖಾಲಿ ರಸ್ತೆಯಲ್ಲಿ ಓಡಾಡುವ ಸುಖವನ್ನು ಯಾಕೆ ಕಳೆದುಕೊಳ್ಳುವುದು ಎಂದು ಓಡಾಡಿದೆ. ಕಡ್ಡಾಯವಾಗಿ ಮನೆಯಿಂದ ಕೆಲಸ ಮಾಡಿ ಎಂದ ಮೇಲೆ ಊರಿಗೆ ಯಾಕೆ ಹೋಗುವುದು ಇಲ್ಲಿಂದಲೆ ಕೆಲಸ ಮಾಡಿದರಾಯ್ತು ಅಂತ ಸುಮ್ಮನಾದೆ. ನಾಳೆಯಿಂದ ಟ್ರೈನ್ ಬಸ್ ಓಡಾಡಲ್ಲ ಎಂದಾಗ ಅಯ್ಯೊ ಊರಿಗೆ ಹೋಗಿದ್ದರೆ ಛೋಲೋ ಇತ್ತಾ ಎಂದು ಪೇಚಾಡಿ ಸುಮ್ಮನೆ ಉಳಿದ ಗಳಿಗೆ, ಅಚಾನಕ್ ಆಗಿ ಊರಿನ ಭಾಗ್ಯ ಒಲಿಯಿತು. ಊರು ತಲುಪಿದ ಮೊದಲಲ್ಲಿ ಎಲ್ಲ ಧಾವಂತಗಳ ನಡುವೆ ತುಸು ನೆಮ್ಮದಿ ಸಾಧ್ಯವಾಗಿಸುವ ಮನೆಯಲ್ಲಿ ಸುಖದ ಭಾವ. ಅವ್ವನ ಕೈಯ್ಯಡುಗೆ ಉಣ್ಣುವ ಭಾಗ್ಯ ಎಂದು ಬೀಗಿದ್ದು ಮುಂದಿನ ನಾಲ್ಕು ದಿನ.

ಮನೆಕೆಲಸಕ್ಕೆ ಆಫೀಸ್ ಕೆಲಸಕ್ಕೆ ಸಮಯ ಫಿಕ್ಸ್ ಮಾಡಿ, ಅದರಂತೆ ನಡೆದ ಸಂತೃಪ್ತ ಭಾವದಲ್ಲಿ ತೇಲಿದ್ದು ನಂತರದ ನಾಲ್ಕು ದಿನ. ದೇಹ ತುಸು ದಣಿದರೆ ಈ ರಿಲ್ಯಾಕ್ಸ್ ಸಮಯ ಇನ್ನೂ ಚೆನ್ನಾಗಿರತ್ತೆ ಅಂತ ವಾಕಿಂಗು ಮತ್ತು ಕೃಷಿ. ಉಡಲು, ಉಣ್ಣಲು ತೊಂದರೆಯಿಲ್ಲ. ಮನುಷ್ಯನ ಅಗತ್ಯ ಇವರೆಡೆ ಅಲ್ಲವಲ್ಲ. ‘ಅವಸರವೂ ಸಾವಧಾನದ ಬೆನ್ನೇರಿದ’ ಈ ಹೊತ್ತಿನಲ್ಲಿ ಮಾತು- ಅಕ್ಷರಗಳಲ್ಲಿ ಹೇಳಲಾಗದ ಚಟಪಡಿಕೆಯೊಂದು ಕಾಡುತ್ತಿದೆ.

ಬೀದಿಯಲ್ಲಿ ಓಡಾಡಿದರೆ ಪೊಲೀಸರು ಬರುತ್ತಾರೆಂದು ಹೆದರಿಕೆಯಿಲ್ಲದ, ಯಾರ ನಜರು ನನ್ನ ಮೇಲಿಲ್ಲವೆಂದು ಮನಸಿಗೆ ಬಂದಲ್ಲಿ ತಿರುಗುವುದರಲ್ಲಿ ಎಷ್ಟೊಂದು ಹಿತವಿದೆ! ಜನರ ಗುಂಪಿನಲ್ಲಿ ಅನಾಮಧೇಯಳಾಗಿ ಸಾಗಿ ಹೋಗುವುದು, ಹದಿಹರೆಯದ ಮಕ್ಕಳ ಕಣ್ಣಲ್ಲಿ ಪ್ರತಿಫಲಿಸುವ ಸುಖ-ದುಃಖ, ಸಂಭ್ರಮಗಳಲ್ಲಿ ನೋಟದಲ್ಲೆ ಭಾಗಿಯಾಗುವ ಅನುಭವ ಎಷ್ಟು ಅಪೂರ್ವವಾದದ್ದು ಎನಿಸುತ್ತಿದೆ.

ಕಾಲಿಗೆ ಬೇರು ಚಿಗುರುತ್ತಿರುವ ಈ ಹೊತ್ತಿನಲ್ಲಿ… ಅವನು ಮನಸಿನಲ್ಲಿ ಓಡುತ್ತಿರುವ ಭಾವಗಳಿಗೆ ಮಾತಿನ ರೂಪ ಕೊಡುತ್ತಿಲ್ಲ ಎಂದರೆ ಈ ಸಲದ ಭೇಟಿಯಲ್ಲಿ ನನ್ನನ್ನು ಇನ್ನು ತೀವ್ರವಾಗಿ ಮುಟ್ಟಲು ಬಯಸುತ್ತಿದ್ದಾನೆ ಎನ್ನುವ vibration ಕೂಡ ನನ್ನನ್ನು ತಲುಪುತ್ತಿಲ್ಲ. Suck ಮಾಡುವ ಮುಂಚೆ ನನ್ನ ಎದೆಗಳನ್ನು ಮುಟ್ಟುವ ಆ ಕ್ಷಣ ಅವನ ಅಷ್ಟು ದಿನಗಳ ಕಾಯುವಿಕೆ, ಕಾತರ ಎಲ್ಲವು ನನಗೆ ವೇದ್ಯವಾಗುತ್ತಿತ್ತು. ಗದ್ದ, ಗಲ್ಲ, ಹಣೆ, ಕಣ್ಣಿಗೆಲ್ಲ ಚಿಟ್ಟೆ ಮುತ್ತಿದಂತೆ ಮುತ್ತುಕೊಟ್ಟು, ಮುತ್ತಿಡಿಸಿಕೊಳ್ಳುವುದು ಇನ್ಯಾವತ್ತಿಗೊ ಎಂದು ಮನಸು ವಿಲಗುಡುವಾಗ… “ಉಳವಿಯ ದಾರಿಯಾಗ ಕವಳಿಯ ಪೆಳಿss ಬಾಳ, ತಿಂದೇsನಿss ಎಂದರ ಹುಳಿ ಬಾಳ, ಬಂದೇsನಿss ಎಂದರ ಗಿರಿ ದೂರ ಬಾಳ…” ಅವ್ವನ ಜೋಗುಳ ಜೀವಕ್ಕೆ ಜೊತೆಯಾಗುತ್ತ ಕಿವಿ ತುಂಬುತ್ತಿದೆ.

ನಿದ್ದೆ ಇರದ ಕಣ್ಣುಗಳು, ರಾಜೀವ ತಾರಾನಾಥಾರ -ನನ್ನ creative corpus ನಿಂದ ನನ್ನದೆ ಆದ ಒಂದು ದೂರವನ್ನು ಸಂಗೀತದಿಂದ ಅಂತರ್ಗತ ಮಾಡಿಕೊಂಡೆ. ಕೇವಲ ಸಂಗೀತರಸಿಕರಾದ ನನ್ನ ತಂದೆಯನ್ನು ಒಪ್ಪಲಾರದೆ ಹೋದೆ. ಸುಮ್ಮನೆ culture picker ಆಗಿ, ಅಥವಾ ಸಂಗೀತದಲ್ಲಿ, “ಇದು ಉತ್ತಮ–ಇದಲ್ಲ,” ಎಂದು ನಿರ್ಣಿಯಿಸುತ್ತ ಹೋಗುವುದು ನನಗಿದ್ದ ಉತ್ಕಟ ಹಂಬಲದಿಂದ ಬಲು ದೂರ. ನನ್ನ ದೇವರನ್ನು ನಾನೆ ಹುಡುಕಬೇಕಿತ್ತು. ಅವನ ಸಂಗೀತವನ್ನು ನನ್ನಲ್ಲಿ ತುಂಬಿಕೊಳ್ಳಬೇಕಿತ್ತು. ಇದರಲ್ಲಿ ನನ್ನದೆ ಜಾಗೆ, ನನ್ನದೆ ಕಾಲ ಇವುಗಳನ್ನು ಸೃಷ್ಟಿಸಬೇಕಿತ್ತು. ಈ ಸಮಯದಲ್ಲಿ ಅಲಿ ಅಕ್ಬರ್ ನನ್ನಲ್ಲಿ ಹರಿದು ಬಂದರು. ಅವರ ಸಂಗೀತ ನನಗೆ ಹೆಚ್ಚು ಹೆಚ್ಚು ವೈವಿಧ್ಯತೆಯ ಅರಿವನ್ನು ಕೊಟ್ಟಿತ್ತು -ನನ್ನ ಕಲ್ಪನೆಯ ಈ ಉಪಖಂಡವನ್ನು ನೋಡುವುದು, ಹಾಗೂ ರೂಪಿಸುವುದರಲ್ಲಿ. ಈ ಮೂವತ್ತು ವರ್ಷಗಳಲ್ಲಿ ಪ್ರಜ್ಞಾಪೂರ್ವಕ, ಅಥವಾ ಅರೆ ಪ್ರಜ್ಞಾಪೂರ್ವಕವಾಗಿ, ಅಲಿ ಅಕ್ಬರರ ಚಲನೆಗಳನ್ನು ನಾನು ನನ್ನ ಭಾವನೆಗಳು, ಸನ್ನಿವೇಶಗಳು, ದೃಶ್ಯಗಳು ಎಲ್ಲವನ್ನು ತಿಳಿಯಾಗಿಸಿ, ವ್ಯವಸ್ಥಿತಗೊಳಿಸಬಲ್ಲ ಮಾದರಿಗಳನ್ನಾಗಿ ನೋಡುತ್ತ ಬಂದಿದ್ದೇನೆ. ಭಾರತೀಯ ಸಂಗೀತವನ್ನು ಏಕೆ abstract ಎನ್ನುತ್ತಾರೆಂದು ನನಗೆ ಅರ್ಥವಾಗುವುದಿಲ್ಲ. ಇಷ್ಟು ಹೇಳಬಲ್ಲೆ, ಅಲಿ ಅಕ್ಬರನಂತಹ ಸಂಗೀತಗಾರನೊಬ್ಬ ಈ ಸಂಗೀತದಲ್ಲಿ ದೇಹಕಾತರದ, ಕತ್ತಲಿನ, ಹೇಳಲಾರದ ನೋವಿನ, ಒಂಟಿತನದ, ಹೊಳಪಿನ, ಹೊನ್ನ ಮೌನದ ಭಾವಗಳನ್ನೆಲ್ಲ – ಇರುಳಿನಲ್ಲು ಪ್ರೇಯಸಿಯ ದೇಹವನ್ನು ತಿಳಿಯಬಲ್ಲ ಇನಿಯನಷ್ಟೆ ನಿರ್ದಿಷ್ಟವಾಗಿ ಸೃಷ್ಟಿಸಬಲ್ಲ. ನನ್ನ ಗುರುವಿನ ಕೃಪೆ. ನನಗಿಂದು ಭಾರತದ ಒಂದು ಸಣ್ಣ ಕಲ್ಲ ಹರಳಿನಿಂದ ಹಿಡಿದು ಸಮಗ್ರ ಭಾರತಕ್ಕೆ ಸ್ಪಂದಿಸುವ ಸಾಧ್ಯತೆ ಕೊಟ್ಟಿದೆ. ಅಲಿ ಅಕ್ಬರರು ನೀಡಿದ ಆ ಸಂಗೀತದ ಮಾಧ್ಯಮ. ನನ್ನ ಕಲೆಯಲ್ಲಿ ಈ ನೆಲ ನನ್ನ ಜಾಗವಾಗಿದೆ. ನನ್ನದೆ ಜಾಗ, ನನ್ನದೆ ಹೊತ್ತು, ಈ ದೇಶಿಯತೆಯಲ್ಲಿ ಹರ್ಷಿಸುತ್ತಿದ್ದೇನೆ… ಸಾಲುಗಳನ್ನು ಓದುತ್ತಿವೆ.

‘ಸ್ವಪ್ನ ಸಾರಸ್ವತ’ ಕಾದಂಬರಿಯಲ್ಲಿ ನಾಗ್ಡೊ ಬೇತಾಳನ, “…ಮಾತುಗಳಲ್ಲಿ ಬರುವ ಶಬ್ದಗಳು ಅರ್ಥ ಕಳೆದುಕೊಳ್ಳುತ್ತವೆ. ಶಾಪಗಳು ತಗುಲುವುದಿಲ್ಲ. ಅಂಥ ದಿನಗಳು ಬರಲಿವೆ…’ ಮಾತುಗಳು ಈ ಸರಿರಾತ್ರಿಯಲ್ಲಿ ವಿಪರೀತವಾಗಿ ಕಾಡುತ್ತಿವೆ.

‍ಲೇಖಕರು avadhi

May 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: