ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಾಗರೀಕ ಪದ್ಧತಿಗೆ ಅಧಿಕೃತ ಮೊಹರು..

ನಾ ದಿವಾಕರ

ದೈವ ಸನ್ನಿಧಿಯಲ್ಲಿ ಮಾನವೀಯತೆಗೆ ಹೆಚ್ಚು ಮೌಲ್ಯ ಇರಬೇಕಾದ್ದು ಮಾನವ ಧರ್ಮ. ಯಾವ ಮತ ಧರ್ಮದಲ್ಲೇ ಆಗಲಿ ಆಚರಣೆಗಳು ಮಾನವ ಸಂವೇದನೆಗಳನ್ನು ನಿಕೃಷ್ಟವಾಗಿ ಕಾಣುವ ಹಂತಕ್ಕೆ ತಲುಪಿದಾಗ ಅಲ್ಲಿ ದೇವ ಸನ್ನಿಧಾನದಲ್ಲೂ ದಾನವತ್ವವೇ ಪ್ರಧಾನವಾಗಿ ಗೋಚರಿಸುತ್ತದೆ. ಧರ್ಮದ ಅನುಯಾಯಿಗಳು ಮತ್ತು ಪ್ರವಾದಿಗಳು ತಮ್ಮ ತಮ್ಮ ಧರ್ಮಗಳಲ್ಲಿನ ಆಚರಣೆಗಳಿಗೆ ಏನೇ ವ್ಯಾಖ್ಯಾನ ನೀಡಿದರೂ ಮಾನವತೆಯನ್ನು ಬಿಂಬಿಸದ ಆಚರಣೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳಲಾಗುವುದಿಲ್ಲ. ದೇವರ ಹೆಸರಿನಲ್ಲಿ ತಮ್ಮ ಆತ್ಮತೃಪ್ತಿಗಾಗಿ ಮನುಕುಲ ರೂಪಿಸಿಕೊಂಡಿರುವ ಧಾಮರ್ಿಕ ವಿಧಿ ವಿಧಾನಗಳು ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಶಾಸ್ತ್ರ ಗ್ರಂಥಗಳಲ್ಲೂ ಸಮ್ಮತಿ ದೊರೆಯುವುದಿಲ್ಲ. ಇಂತಹ ಆತ್ಮ ತೃಪ್ತಿಯ ಸಾಧನಗಳು ಆತ್ಮರತಿಯ ಸಾಧನಗಳಾಗಿ ಪರಿಣಮಿಸಿದಾಗ ಅವು ಸಾಂಪ್ರದಾಯಿಕತೆಯ ಹೆಸರಿನಲ್ಲಿ ಅಮಾನುಷರನ್ನೂ ನಾಚಿಸುವ ರೀತಿಯಲ್ಲಿ ಒಂದು ದುಷ್ಟ ಹವ್ಯಾಸವಾಗಿ ಪರಿಣಮಿಸುತ್ತದೆ.

ಧರ್ಮ ರಕ್ಷಣೆ, ಸಂಪ್ರದಾಯ ನಿಷ್ಠೆ ಮತ್ತು ಸ್ಪಷ್ಟ ವ್ಯಾಖ್ಯಾನವೇ ದೊರೆಯದ ಸಂಸ್ಕೃತಿಯ ರಕ್ಷಣೆ ಈ ರೀತಿಯ ಅಮಾನುಷ ಪದ್ಧತಿಗಳಿಗೆ ನೀರೆರೆದು ಪೋಷಿಸುತ್ತವೆ. ಇಲ್ಲಿ ರಕ್ಷಣೆಯಾಗುವ ಧರ್ಮ ಯಾವುದು ? ನಿಷ್ಠೆ ಬೇಡುವ ಸಂಪ್ರದಾಯ ಯಾವುದು ? ಈ ಮೌಢ್ಯಾಧಾರಿತ ಪದ್ಧತಿಗಳು ಪ್ರತಿನಿಧಿಸುವ ಸಂಸ್ಕೃತಿಯಾದರೂ ಯಾವುದು ? ಈ ಎಲ್ಲ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಸಂಪ್ರದಾಯ-ಸಂಸ್ಕೃತಿ ಮತ್ತು ಧರ್ಮ ಸ್ಥಾಪಿತ ಹಿತಾಸಕ್ತಿಗಳ ಆಶ್ರಯ ತಾಣಗಳಾಗಿ ಪರಿಣಮಿಸಿದಲ್ಲಿ ಅಂತಹ ಸಮಾಜದಲ್ಲಿ ಮೂಢ ನಂಬಿಕೆಗಳಿಗೂ ಒಂದು ಅಧಿಕೃತ ಮನ್ನಣೆ ದೊರೆಯುವುದು ಇತಿಹಾಸದಲ್ಲಿ ಕಂಡಿರುವ ಸತ್ಯ. ಇದು ಎಲ್ಲ ಧರ್ಮಗಳಲ್ಲೂ ಕಂಡುಬರುವ ವಿದ್ಯಮಾನ. ಈ ಮೂಢ ನಂಬಿಕೆಗಳನ್ನು ಪ್ರಶ್ನಿಸುವುದಿರಲಿ, ವೈಜ್ಞಾನಿಕವಾಗಿ ವಿಶ್ಲೇಷಿಸುವುದೂ ಸಹ ಅಪರಾಧವಾಗಿ ಪರಿಣಮಿಸುತ್ತವೆ. ಇದರ ಒಂದು ಆಯಾಮವನ್ನು ಕುಕ್ಕೆ ಸುಬ್ರಮಣ್ಯದಲ್ಲಿ ಕಾಣುತ್ತಿದ್ದೇವೆ.

ಕುಕ್ಕೆ ಸುಬ್ರಮಣ್ಯದಲ್ಲಿ ಪ್ರತಿವರ್ಷ ನಡೆಯುವ ಮಡೆ ಸ್ನಾನ ಎಂಬ ಅಮಾನವೀಯ ಆಚರಣೆಯನ್ನು ಮೌಢ್ಯತೆಯ ಚೌಕಟ್ಟಿನಲ್ಲೇ ಬಂಧಿಸಿಡಲು ಸಾಧ್ಯವಿಲ್ಲ. ಇದು ಜನಸಾಮಾನ್ಯರಲ್ಲಿ ಬೇರು ಬಿಟ್ಟಿರುವ ಮೌಢ್ಯ ಮತ್ತು ನಂಬಿಕೆಗಳನ್ನೂ ಮೀರಿದ ಒಂದು ವಿದ್ಯಮಾನ. ದೇವಾಲಯದ ಗರ್ಭಗುಡಿಯಲ್ಲಿನ ದೇವರಿಗೂ, ಕುಕ್ಕೆ ಯಾತ್ರಾಸ್ಥಳದ ಐತಿಹ್ಯಕ್ಕೂ, ಈ ಮಡೆ ಸ್ನಾನದ ಆಚರಣೆಗೂ ಇರುವ ಸಂಬಂಧ ಸೂಕ್ಷ್ಮವಾದುದು. ಬ್ರಾಹ್ಮಣರು ತಿಂದು ಬಿಟ್ಟ ಎಂಜಲೆಲೆಗಳ ಮೇಲೆ ಉರುಳಿದರೆ ಚರ್ಮರೋಗ ವಾಸಿಯಾಗುತ್ತದೆ, ತಮ್ಮ ಅಭೀಷ್ಟಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಬೇರೂರಿದ್ದರೆ ಅದರ ಹಿಂದಿನ ಜಾತಿ ವ್ಯವಸ್ಥೆಯ ಕರಾಳ ಮುಖವನ್ನೂ ನೋಡಬೇಕಾಗುತ್ತದೆ. ಎಂಜಲೆಲೆಯ ಮೇಲೆ ಉರುಳುವುದರಿಂದ ಚರ್ಮರೋಗ ವಾಸಿಯಾಗುವುದಾದರೆ ಬ್ರಾಹ್ಮಣರ ಎಂಜಲೇ ಏಕಾಗಬೇಕು ? ದ್ವಿಜರ ಎಂಜಲಲ್ಲಿ ರೋಗ ನಿವಾರಕ ರಾಸಾಯನಿಕ ವಸ್ತುಗಳೇನಾದರೂ ಇರುವುದೇ ? ಇಲ್ಲಿ ಎಲೆಯ ಮೇಲೆ ಉರುಳುವುದು ಸಾಂಕೇತಿಕ ಮಾತ್ರ.

ವಾಸ್ತವವೆಂದರೆ ಜನಪದ ಸಂಸ್ಕೃತಿಯ ಮೂಲ ನೆಲೆಯಿಂದ ಸೃಷ್ಟಿಯಾಗಿರುವ ಕುಕ್ಕೆ ಸುಬ್ರಮಣ್ಯದಂತಹ ದೇವಲಗಳಲ್ಲಿ ಮೇಲ್ಜಾತಿಯ ಬ್ರಾಹ್ಮಣಶಾಹಿ ತನ್ನ ಅಧಿಪತ್ಯವನ್ನು ಸಾಧಿಸಲು ಈ ತಂತ್ರವನ್ನು ಹೂಡಿರುವುದನ್ನು ಇಲ್ಲಿ ಕಾಣಬಹುದು. ಇದೇ ಪ್ರಕ್ರಿಯೆಯನ್ನು ಶಬರಿಮಲೆಯಲ್ಲೂ ಕಾಣಬಹುದಾಗಿದೆ. ಮಡೆ ಸ್ನಾನ ಮಾಡಬಯಸುವವರಲ್ಲಿ ವಿದ್ಯಾವಂತರೂ ಇರುತ್ತಾರೆ ಹಾಗಾಗಿ ಇದು ಜನಸಮುದಾಯಗಳ ನಂಬಿಕೆಯ ಪ್ರಶ್ನೆ ಎಂದು ಸಮಜಾಯಿಷಿ ನೀಡುವವರು ಗ್ರಹಿಸಬೇಕಾದ ಒಂದು ಸತ್ಯವೆಂದರೆ ವಿದ್ಯೆ, ಶಿಕ್ಷಣ ಮತ್ತು ಅಂತಸ್ತುಗಳು ಮೂಢ ನಂಬಿಕೆಗಳಿಗೆ ಅಡ್ಡಿ ಬರುವುದಿಲ್ಲ. ಮಡೆ ಸ್ನಾನದ ಹಿಂದೆ ಕಾಣುವುದು ಒಂದು ಅಮಾನುಷ ಪ್ರವೃತ್ತಿ. ನಾವು ತಿಂದು ಬಿಟ್ಟ ಎಂಜಲಿನ ಮೇಲೆ ನೀವುಗಳು ಉರುಳಾಡಿ, ನಿಮಗೆ ಸನ್ಮಂಗಳವಾಗುತ್ತದೆ ಎಂಬ ಬ್ರಾಹ್ಮಣಶಾಹಿಯ ಅಹಮಿಕೆಯ ಒಂದು ಆಯಾಮವನ್ನು ಇಲ್ಲಿ ಕಾಣುತ್ತಿದ್ದೇವೆ. ಜಾತಿ ಅಹಮಿಕೆಗಳು ಭಾರತದ ಇತಿಹಾಸದಲ್ಲಿ ಹೊಸತೇನೂ ಅಲ್ಲ. ಈ ಅಹಂನಿಂದ ಉಂಟಾಗಿರುವ ಭ್ರಾತೃಘಾತುಕ ಘಟನೆಗಳಿಗೂ ಇಲ್ಲಿ ಬರವಿಲ್ಲ. ಇಲ್ಲಿ ಬ್ರಾಹ್ಮಣಶಾಹಿ ಎಂದರೆ ಜಾತಿಯಲ್ಲಿ ಬ್ರಾಹ್ಮಣರೇ ಆಗಬೇಕಿಲ್ಲ. ಇಂತಹ ಕ್ರೂರ ಪದ್ಧತಿಯನ್ನು ಸಮಥರ್ಿಸುವ ಶೂದ್ರರೂ ಬ್ರಾಹ್ಮಣಶಾಹಿಯ ಭಾಗವಾಗಿಯೇ ಕಾಣುತ್ತಾರೆ.

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣಶಾಹಿ ತನ್ನ ಮೂಲ ಸ್ವರೂಪವನ್ನು ಕಾಪಾಡಿಕೊಳ್ಳಲು ನಾನಾ ಮಾರ್ಗಗಳನ್ನು ಅನುಸರಿಸುತ್ತಲೇ ಇದೆ. ದೇವಾಲಯದ ಗರ್ಭಗುಡಿ ಸಂಸ್ಕೃತಿಯಿಂದ ಹಿಡಿದು ಮಡೆ ಸ್ನಾನದವರೆಗೂ ಈ ಮಾರ್ಗಗಳು ಸಮಾಜದ ಇತರ ಸಮುದಾಯಗಳನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳಲು ತಂತ್ರಗಳನ್ನು ರೂಪಿಸುತ್ತಲೇ ಇರುತ್ತವೆ. ಈ ತಂತ್ರಗಳ ಒಂದು ಆಯಾಮವನ್ನು ಮಡೆ ಸ್ನಾನದಲ್ಲಿ ಕಾಣಬಹುದು. ತಮ್ಮ ಎಂಜಲಿನ ಮೇಲೆ ಇತರರು ಉರುಳುವುದನ್ನು ಹೆಮ್ಮೆಯಿಂದ ವೀಕ್ಷಿಸುವ ಜನತೆ ಅಥವಾ ಸಮಾಜವನ್ನು ಮಾನವೀಯ ಎಂದು ಗುರುತಿಸುವುದಾದರೂ ಹೇಗೆ ? ಬ್ರಾಹ್ಮಣ ಸಮುದಾಯವೇ ಆಗಲಿ, ಆಧುನಿಕ-ನಾಗರೀಕ-ಸುಸಂಸ್ಕೃತ ಎಂಬ ಹಣೆಪಟ್ಟಿ ಹೊತ್ತ ಯಾವುದೇ ಸಮುದಾಯವಾಗಲಿ ಇಂತಹ ಅಮಾನುಷ ಪದ್ಧತಿಯ ವಿರುದ್ಧ ದನಿ ಎತ್ತದಿದ್ದರೆ ನಮ್ಮ ಸಮಾಜವನ್ನು ಸಂವೇದನಾಶೀಲ ಮಾನವತೆಯ ಸಂಕೇತವಾಗಿ ಪರಿಗಣಿಸುವುದಾದರೂ ಹೇಗೆ ?

ಮಡೆ ಸ್ನಾನದ ವಿರುದ್ಧ ಹೋರಾಡುವ ವ್ಯಕ್ತಿ ಸಂಘಟನೆಗಳ ಮೇಲೆ ಹಲ್ಲೆ ನಡೆಸುವ ಸಾಂಪ್ರದಾಯಿಕ ಶಕ್ತಿಗಳು ಏನು ಬಯಸುತ್ತವೆ ಎಂದು ಹೇಳಬೇಕಿಲ್ಲ. ಆದರೆ ಇಂತಹ ಆಕ್ರಮಣಕಾರಿ ಸಂಸ್ಕೃತಿಯನ್ನು ದೈವ ಸನ್ನಿಧಿಯಲ್ಲಿ ಅನಾವರಣಗೊಳಿಸುವ ವಿಚ್ಚಿದ್ರಕಾರಕ ಶಕ್ತಿಗಳ ವಿರುದ್ಧ ದನಿ ಎತ್ತದೆ, ತಮ್ಮ ಮೌನದಿಂದಲೇ ಸಮ್ಮತಿ ವ್ಯಕ್ತಪಡಿಸುತ್ತಿರುವ ಮಠಮಾನ್ಯಗಳು, ಜಾತಿ ಸಂಘಟನೆಗಳು ಮತ್ತು ವಿಪ್ರೋತ್ತಮರು ಏನು ಬಯಸುತ್ತಾರೆ ಎನ್ನುವುದು ಇಲ್ಲಿ ಮೂರ್ತ ಪ್ರಶ್ನೆಯಾಗುತ್ತದೆ. ಸಕರ್ಾರ ನಿಷೇಧ ಹೇರುವುದರಿಂದ, ಪ್ರತಿಭಟನೆಗಳಿಂದ ಈ ಅಮಾನುಷ ಪದ್ಧತಿಯನ್ನು ತಡೆಗಟ್ಟಲಾಗುವುದಿಲ್ಲ. ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ಸಹಿಸಿಕೊಳ್ಳುವ ಸಂವೇದನಾರಹಿತ ಸಮಾಜವೇ ಮಡೆ ಸ್ನಾನದಂತಹ ಅಮಾನುಷ ಪದ್ಧತಿಯನ್ನೂ ಸಮಥರ್ಿಸುತ್ತವೆ ಎಂಬುದನ್ನು ಗಮನಿಸಬೇಕು. ಇಲ್ಲಿ ಪ್ರಶ್ನೆ ಉದ್ಭವಿಸುವುದು ನಮ್ಮ, ಅಂದರೆ ಆಧುನಿಕ, ಪ್ರಜ್ಞಾವಂತ ಎಂದು ಹೇಳಿಕೊಳ್ಳುವ, ನಮ್ಮ ನಾಗರಿಕ ಸಮಾಜದ ನೈತಿಕತೆಯ ಬಗ್ಗೆ. ಸಮಸ್ಯೆ ನಮ್ಮೆದುರಿನಲ್ಲೇ ಇದೆ. ಪರಿಹಾರವೂ ನಮ್ಮೊಳಗೇ ಇದೆ. ಇವೆರಡರ ಸೂಕ್ಷ್ಮ ತರಂಗಗಳನ್ನು ಗ್ರಹಿಸುವ ಸಂವೇದನೆ ಇಲ್ಲವಾಗಿದೆ. ಯಾರು ಹೊಣೆ ?

ಚಿತ್ರ ಕೃಪೆ-ಗಲ್ಱ್ ಕನ್ನಡಿಗ

‍ಲೇಖಕರು avadhi

2 December, 2011

20 Comments

  1. Balu

    ಹೌದು ಮೇಲ್ಜಾತಿಯ ಬ್ರಾಹ್ಮಣಶಾಹಿ ಗಳಿಗೆ ಬುದ್ದಿ ಕಲಿಸಬೇಕಿದೆ. ಮಡೇ ಸ್ನಾನ ನಿಲ್ಲಿಸಬೇಕು ಅಂದ್ರೆ ಬ್ರಾಹ್ಮಣರು ಊಟ ಮಾಡೋದನ್ನ ನಿಷೆದಿಸಬೇಕು. ಅವಾಗ ಎಂಜಲು ಎಲೆ ಇಲ್ಲದೆ, ಆ ಅನಿಷ್ಟ ಪದ್ಧತಿ ನಿಲ್ಲುತ್ತೆ. ಅಷ್ಟೇ ಅಲ್ಲ, ಎಲ್ಲಾ ಬ್ರಾಹ್ಮಣರನ್ನು, ಅವರನ್ನು ಬೆಂಬಲಿಸುವವರನ್ನು ಸಾಮೂಹಿಕವಾಗಿ ಮತಾಂತರ ಮಾಡಿಬಿಡಬೇಕು. ಅವಾಗ ಮಾತ್ರ ಸೂಕ್ಷ್ಮ ತರಂಗಗಳನ್ನು ಗ್ರಹಿಸುವ ಸಂವೇದನೆ ಜನಕ್ಕೆ ಬರುತ್ತೆ.

    • shreeram

      ಮಾನ್ಯ ಬಾಲು ರವರೇ.. ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವ ಧಾಟಿಯಲ್ಲಿ ತಾವು ಮಾತನಾಡುತ್ತಿದ್ದೀರಿ.. ಬ್ರಾಹ್ಮಣರನ್ನು ಮತಾಂತರಿಸಲು ತಾವು ಯಾರು ? ಬ್ರಾಹ್ಮಣರು ತಮಗೇನು ಮಾಡಿದ್ದಾರೆ ? ತಾನುಂಡ ಎಲೆಯಮೇಲೆ ಉರುಳಾಡಿ ಎಂದು ಯಾರಾದರೂ ಬ್ರಾಹ್ಮಣರು ಹೇಳುತ್ತಿದ್ದಾರೆಯೇ ?

      “ಮಡೇ ಸ್ನಾನ ನಿಲ್ಲಿಸಬೇಕು ಅಂದ್ರೆ ಬ್ರಾಹ್ಮಣರು ಊಟ ಮಾಡೋದನ್ನ ನಿಷೆದಿಸಬೇಕು” ಎಂದು ಹೇಳುವ ತಾವು,
      ಮಲಹೊರುಪ ಪದ್ದತಿ ನಿಷೇಧವಾಗಬೇಕೆಂದರೆ ಸಾರ್ವಜನಿಕರು ಮಲವಿಸರ್ಜನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಲು ಸಾಧ್ಯವೇ ?

      • Balu

        ಮತ್ತೊಮ್ಮೆ ಓದಿ ಶ್ರೀರಾಮ್, ನಿಮಗೆ ನನ್ನ ಮಾತಿನ ವ್ಯಂಗ್ಯ ಅರ್ಥ್ವಾದಂತಿಲ್ಲ.

  2. ಮಂಜುನಾಥ ಕೊಳ್ಳೇಗಾಲ

    ಹ್ಮ್, ಮತ್ತೊಂದು brahmin bashing. ಪ್ರತಿಯೊಂದಕ್ಕೂ ಬ್ರಾಹ್ಮಣರ ಮೇಲೆಯೇ ಗೂಬೆ ಕೂರಿಸುವುದು ಒಂದು ಪ್ರಗತಿಪರ fashion ಆಗಿದೆಯೆನ್ನಿಸುತ್ತದೆ. ಇರಲಿ, ಮೊದಲಿಗೆ ಸ್ಪಷ್ಟಪಡಿಸಿಬಿಡುತ್ತೇನೆ, ನನಗೆ ಈ ಗಲಾಟೆ ಶುರುವಾಗುವವರೆಗೂ ಮಡೆಸ್ನಾನವೆಂದರೆ ಏನೆಂಬುದೂ ಗೊತ್ತಿರಲಿಲ್ಲ. ಚಿಕ್ಕಂದಿನಲ್ಲಿ ನಮ್ಮಮ್ಮ ಹೇಳುತ್ತಿದ್ದ ನೆನಪು, ಸುಬ್ರಹ್ಮಣ್ಯದಲ್ಲಿ ಭಕ್ತರ ಎಂಜಲೆಲೆಯ ಮೇಲೆ ಉರುಳಿದರೆ, ಅಲ್ಲಿಯ ಹುತ್ತದ ಮಣ್ಣನ್ನು ಮೈಗೆ ಸವರಿಕೊಂಡರೆ ಚರ್ಮರೋಗ ವಾಸಿಯಾಗುತ್ತೆ ಅಂತ, ಮತ್ತೊಬ್ಬ ಬ್ರಾಹ್ಮಣ ಚರ್ಮರೋಗಿಗೆ ಹೇಳುತ್ತಿದ್ದುದು ಇದು. ಅದು ಸರ್ವೇಸಾಮಾನ್ಯ ನಂಬಿಕೆ, ಅದರಂತೆ ಅವರು ಹೋಗಿಬಂದುದೂ ಗೊತ್ತಿತ್ತು. ಇದು ಬಹಳ ಹಿಂದೆ, ನಾನು ಮುಂದೆ ಮೂಢನಂಬಿಕೆಗಳನ್ನು ಹೀಯಾಳಿಸಿ ನಗುವುದನ್ನು ಕಲಿಯುವುದಕ್ಕೂ ಹಿಂದಿನ ಮಾತು.

    ಮೂಢ ನಂಬಿಕೆ, ಕೆಲವು ಅಮಾನವೀಯ ಆಚರಣೆಗಳು ಸಮಾಜದ ಮಾರಿ, ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಅದಕ್ಕೆ ಒಂದು ಜನಾಂಗವನ್ನೇ ಗುರಿಯಾಗಿಟ್ಟುಕೊಂಡು ನಾಲಿಗೆ ಚಪಲ ತೀರಿಸಿಕೊಳ್ಳುವ ಕೀಳು ರಾಜಕೀಯ ಬೇಕೇ? ನಮ್ಮ ಚರ್ಚೆಯ ಮೂಲವಿರುವುದು ವರ್ಣಾಶ್ರಮ ಪದ್ಧತಿಯಲ್ಲಿ ಅಂದುಕೊಂಡರೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವಿಭಾಗಗಳನ್ನು ಕಾಣುತ್ತೇವೆ. ಇವರನ್ನು ಸವರ್ಣೀಯರೆಂದೂ ಇದು ಯಾವುದಕ್ಕೂ ಸೇರದ ಐದನೆಯವರನ್ನು (’ಅನಾರ್ಯ’ರನ್ನು) ಪಂಚಮರೆಂದೂ ಕರೆಯುವುದು ವಾಡಿಕೆ. ಸವರ್ಣೀಯರಿಂದ ಅವರ್ಣೀಯರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು/ತ್ತಿದೆ ಎಂಬುದು ಹೇಳಿಕೆ. ಆಮೇಲೆ ನೋಡಿದರೆ ನಿಧಾನಕ್ಕೆ ’ಶೂದ್ರ’ರು ಹೀಗೆ ’ತುಳಿಯಲ್ಪಟ್ಟ’ ವರ್ಗಕ್ಕೆ ಸೇರಿದರು. ವರ್ಣೀಯರ ಗುಂಪಿನಲ್ಲೆಲ್ಲಾ ಬಲಶಾಲಿಗಳಾದ, ’ಆಳುವ’ ವರ್ಗಕ್ಕೆ ಸೇರಿದ ಕ್ಷತ್ರಿಯರೆಲ್ಲಿ? ಯಾವುದೋ ಜಾತಿ ಉಪಜಾತಿಗಳ ಹೆಸರಿನಲ್ಲಿ ಅವರೂ ಈಗ ’ತುಳಿಯಲ್ಪಟ್ಟ’ ವರ್ಗಕ್ಕೆ ಸೇರಿದ್ದಾಯಿತು! ಹಣಕಾಸುವಂತರಾದ ವಣಿಕೋತ್ತಮ ವೈಶ್ಯರೆಲ್ಲಿ ಈಗ? ಅವರೂ ಯಾವಯಾವುದೋ ಜಾತಿ ಉಪಜಾತಿಗಳ ಹೆಸರಲ್ಲಿ ’ತುಳಿಯಲ್ಪಟ್ಟ’ ವರ್ಗಕ್ಕೆ ಸೇರಿದ್ದಾಯಿತು. ಇವತ್ತಿನ ಜನಸಂಖ್ಯೆಯಲ್ಲಿ ಕೇವಲ ೮-೯ ಶೇಕಡ ಇರುವ, ಎಂದೆಂದಿಗೂ “ಬಡಬ್ರಾಹ್ಮಣ”ನಾಗೇ ಉಳಿದ ವಿಪ್ರೋತ್ತಮ (ಅಥವ ವಿಪ್ರಾಧಮ) ಮಾತ್ರ ತ್ರಿವಿಕ್ರಮನಂತೆ ನಿಂತು ಎಲ್ಲರನ್ನೂ ತುಳಿಯುತ್ತಿದ್ದಾನೆ! ಭಲೇ ಭಲೇ, ಎಷ್ಟು ಸುಂದರ ಚಿತ್ರಣ!

    ಪುಣ್ಯ! ಮುಸ್ಲಿಮರು ಸುನ್ನತ್ ಮಾಡಿಸಿಕೊಳ್ಳುವುದು (ಆ ಬ್ಲೇಡು ಎಷ್ಟು ಸುರಕ್ಷಿತ ಅನ್ನುವುದು ಬೇರೆ ವಿಷಯ), ಇತರ ಹಿಂದೂ ವರ್ಗದವರು ಕುರಿ ಕೋಳಿ ಬಲಿ ಕೊಡುವುದು, ಮತ್ತಾರೋ ದನ ತಿನ್ನುವುದು, ದಿನಬೆಳಗಾದರೆ ಆಸ್ಪತ್ರೆಯ ಕಸದ ಬುಟ್ಟಿಗಳಲ್ಲಿ ಸಿಗುವ ಹೆಣ್ಣು ಭ್ರೂಣ ಇವಕ್ಕೆಲ್ಲಾ ಬ್ರಾಹ್ಮಣ ಸಂಬಂಧ ಇರುವ ದಾಖಲೆಗಳನ್ನು ಯಾರೂ ಸಂಶೋಧಿಸಿಲ್ಲ. ಇಲ್ಲದಿದ್ದರೆ ಅದಕ್ಕೂ ಬಡಬ್ರಾಹ್ಮಣನೇ ಹೊಣೆಯಾಗುತ್ತಿದ್ದ!

    ಅದಿರಲಿ, ಇನ್ನು ಮಡೆಸ್ನಾನದ ವಿಷಯಕ್ಕೆ ಬಂದರೆ, ನನಗೆ ತಿಳಿದ ಪ್ರಕಾರ ಭಕ್ತರ ಎಂಜಲೆಲೆಯ ಮೇಲೆ ಉರುಳುವುದು ಎಂದಿದ್ದೆ. ಅದು ಬ್ರಾಹ್ಮಣರ ಎಂಜಲೆಲೆ ಎಂದು ಯಾವಾಗ ಆಯ್ತೋ ತಿಳಿಯಲಿಲ್ಲ. ಹಾಗೊಂದುವೇಳೆ ಆದರೂ ಅದು ಉರುಳುವವರ ತಪ್ಪೋ ಬ್ರಾಹ್ಮಣರ ತಪ್ಪೋ. ಯಾರಾದರೂ ಹಾಗೆ ಉರುಳು ಎಂದು ಹೇಳಿದ್ದರೇ? ಕೆಲವು ಜನಾಂಗದವರು ಇದನ್ನು ಕಾಲದಿಂದ ನಡೆಸಿಕೊಂಡು ಬಂದಿದ್ದಾರೆ. ದೇಶದಲ್ಲಿ ಚಾಲ್ತಿಯಲ್ಲಿರುವ ಅನೇಕ ಮೂಢನಂಬಿಕೆಗಳಂತೆಯೇ ಇದೂ establish ಆಗಿದೆ. ಇದನ್ನು ನಿಲ್ಲಿಸಿರೆಂದರೆ ಅದು ಬಡಿಯುವುದು ಹಾಗೆ ಸೇವಮಾಡಬೇಕೆಂದಿರುವ ಅಂತಃಪ್ರಜ್ಞೆಗೇ ಹೊರತು ಬ್ರಾಹ್ಮಣರ ಅಂತಃಪ್ರಜ್ಞೆಗಲ್ಲ. ನಂಬಿಕೆ ವೈಯಕ್ತಿಕ. ಅದನ್ನು ಗೌರವಿಸಬೇಕೆನ್ನುವವನು ನಾನು. ಎಲ್ಲಿಯವರೆಗೆ ಅದು ಇತರರಿಗೆ ತೊಂದರೆಯಾಗುವುದಿಲ್ಲವೋ ಅಲ್ಲಿಯವರೆಗೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ತಲೆಯ ಮೇಲೆ ಮಲಹೊರುವ ಪದ್ದತಿಗೂ ಇದಕ್ಕೂ ವ್ಯತ್ಯಾಸವಿದೆ. ಅದು ವ್ಯಕ್ತಿ-ಜನಾಂಗದ ಆರ್ಥಿಕ ನಿಸ್ಸಹಾಯಕತೆಯಿಂದ ಬಂದದ್ದು, ನೀಚ ಪದ್ದತಿ, ಆದ್ದರಿಂದ ಅದನ್ನು ’ನಿಷೇಧಿಸು’ವುದು ಸರಿ. ದೇವದಾಸಿ/ಬೆತ್ತಲೆ ಸೇವೆ, ಸಾಮಾಜಿಕ ಕಳಂಕ, ನಿಷೇಧಿಸುವುದು ಸರಿ. ಆದರೆ ಮಡೆ ಸ್ನಾನ, ವೈಯಕ್ತಿಕ ಆಯ್ಕೆ. ಅದು ನನ್ನ ದೃಷ್ಟಿಯಲ್ಲಿ ನೈಚ್ಯಾನುಸಂಧಾನವೇ ಸರಿ, ಅದು ಹೀನಾಯವೂ ಹೌದು. ಆದರೆ ಅದು ನನಗೆ ಹೀನಾಯವೆನಿಸಿದ ಮಾತ್ರಕ್ಕೆ ಮಾಡುವವರಿಗೂ ಅನ್ನಿಸಬೇಕಿಲ್ಲ. ಅದನ್ನು ಮಾಡುವವರಿಗೆ ಸರಿಯಾಗಿ ತಿಳಿಹೇಳಬೇಕೆಂಬುದು ಸರಿ. ಆದರೆ ಅದನ್ನು ನಿಷೇಧಿಸುವುದು, ಮಾಡುವ ಅವಕಾಶವನ್ನು ಕಿತ್ತುಕೊಳ್ಳುವುದು, ಅತೀ ಧಾರ್ಮಿಕ ಭಾವನೆಯುಳ್ಳ ಮನಸ್ಸಿನಲ್ಲಿ ಹರಕೆ ತೀರಿಸಲಾರದ ಪಾಪಪ್ರಜ್ಞೆಗೆ ಅವಕಾಶ ಮಾಡುವುದು ಮನಸ್ವಾಸ್ಥ್ಯ ಹಾಳುಮಾಡುವುದಷ್ಟೇ. ಹಾಗೆಂದು ನಾನು ಬ್ರಾಹ್ಮಣ ಪರ, ಆದ್ದರಿಂದ ಮಡೆಸ್ನಾನವನ್ನು ಸಮರ್ಥಿಸುತ್ತಿದ್ದೇನೆಂದು ತಿಳಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ. ವಿಷಯದ ಸೂಕ್ಷ್ಮವನ್ನು ಗಮನಿಸಿರೆಂದಷ್ಟೇ ನನ್ನ ಕಳಕಳಿ.

    ಎಲ್ಲಕ್ಕಿಂತ ಮುಖ್ಯ ಪರಿಹಾರವೊಂದು ನನಗೆ ಹೊಳೆಯುತ್ತಿದೆ. ಈ ಅನಿಷ್ಟ ಪದ್ಧತಿಗೆ ಕಾರಣ ಏನು? ಜನರಲ್ಲಿರುವ ಮೂಢ ನಂಬಿಕೆ. ಮಡೆಸ್ನಾನವನ್ನು ನಿಷೇಧಿಸಿ ಅದರಲ್ಲಿ ನಂಬಿಕೆಯಿಟ್ಟವರ ಭಾವನೆಗಳಿಗೆ ಘಾಸಿಮಾಡಿ ಪಾಪಪ್ರಜ್ಞೆಗೀಡುಮಾಡುವ ಬದಲು, ಅದಕ್ಕೆ ಮೂಲಪರಿಕರವಾದ ಬ್ರಾಹ್ಮಣರ ಎಂಜಲೆಲೆಯೇ ಬೀಳದಂತೆ ಮಾಡಿಬಿಟ್ಟರೆ? ಇನ್ನೂ ಮೂಲಕ್ಕೆ ಹೋದರೆ ಬ್ರಾಹ್ಮಣರು ಊಟಮಾಡುವುದನ್ನೇ ನಿಷೇಧಿಸಿಬಿಟ್ಟರಾಯಿತು. ಇರುವುದು ಎಂಟೊಂಭತ್ತು ಶೇಕಡಾ ಮಂದಿ. ಹೋದರೆ ಸಮಾಜದ ಅನಿಷ್ಟವೇ ಹೋಗುತ್ತದಲ್ಲ!

    • ದಿವಾಕರ

      ಮಾನ್ಯರೆ
      ಇಲ್ಲಿ ನಾನು ಸ್ಪಷ್ಟ ಕನ್ನಡದಲ್ಲಿ ಹೇಳಿದ್ದೇನೆ, ಇದು ಬ್ರಾಹ್ಮಣಶಾಹಿಯ ಒಂದು ತಂತ್ರವೆಂದು. ದಯವಿಟ್ಟು ಭಾರತದ ಪ್ರಾಚೀನ ಮತ್ತು ಆಧುನಿಕ ಇತಿಹಾಸದ ಮೇಲೆ ಕಣ್ಣು ಹಾಯಿಸಿ ಬ್ರಾಹ್ಮಣ ಮತ್ತು ಬ್ರಾಹ್ಮಣ ಶಾಹಿಯ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ. ಭಾರತದ ಪ್ರತಿಯೊಂದು ಜಾತಿಯಲ್ಲೂ ಬ್ರಾಹ್ಮಣಶಾಹಿಯ ಮನೋಭಾವ ಹಾಸುಹೊಕ್ಕಾಗಿದೆ ಎಂಬುದನ್ನು ಗಮನಿಸಿ. ನಂತರ ನಿಮ್ಮ ಅನಿಸಿಕೆ ವ್ಯಕ್ತಪಡಿಸಿ.
      ನಾ ದಿವಾಕರ

    • Ashwath

      ಮಂಜುನಾಥ್ ಅವರು ನಾನು ಹೇಳಲು ಹೋರಾಟ ವಿಷಯವನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ … ಮಾನ್ಯ ದಿವಾಕರ್, ನಿಮ್ಮ ಕಲ್ಪನೆಯ ಇತಿಹಾಸದಲ್ಲಿ ನಾವುಗಳು ಬದುಕುತ್ತಿಲ್ಲ…. ಯಾವುದೇ ಮೂಢ ನಂಬಿಕೆಗಲ್ಲಿ ಎಲ್ಲಾ ವರ್ಗದವರೂ ಇದ್ದಾರೆ … ಇಲ್ಲಿ ಬ್ರಾಹ್ಮಣರೂ ಇದ್ದಾರೆ … ಆದರೆ ಈ ಬ್ರಾಹ್ಮಣರ ಊಟ ಎನ್ನುವುದು ಏನು ಎನ್ನುವುದರ ತಿಳುವಳಿಕೆ ನಿಮಗಿದ್ದಂತಿಲ್ಲ! ಕೇವಲ ಜನಿವಾರ ಹಾಕಿಕೊಂಡ ವ್ಯಕ್ತಿ ಅಲ್ಲ … ಶ್ರದ್ದೆಯಿಂದ ಪೂಜೆಗೆ ನೇರವಾಗಿ ಸರ್ವೇ ಜನ ಸುಖಿನೋ ಭವಂತಿ ಎಂದು ಹಿತ ಬಯಸುವ ಪುರೋಹಿತ.(ಪುರಕ್ಕೆ ಹಿತಬಯಸುವವ ಎಂದು ಅರ್ಥ!) ದಯವಿಟ್ಟು ವಿಷಯದ ಬಗ್ಗೆ ಮಾತಾಡಿ, ಚರ್ಚಿಸಿ ನಾವು ನೀವು ಕಟ್ಟಿರುವ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ಎಷ್ಟೆಲ್ಲಾ ಮಾತಾಡುವ ಬುದ್ದೀಜೀವಿಗಳು ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಉದ್ಯೋಗದಲ್ಲಿ, ಸರ್ಕಾರಿ ಸವಲತ್ತುಗಳಲ್ಲಿ ಕೇವಲ ಬ್ರಾಹ್ಮಣ ಎಂಬ ಕಾರಣಕ್ಕೆ ಅವಕಾಶ ವಂಚಿತರಾದ ಸಾವಿರ ಯಾರ ಕಣ್ಣಿಗೆ ಕಾಣುವುದಿಲ್ಲವೇ ? ಜಾತ್ಯಾತೀತ ಭಾರತದಲ್ಲಿ ಅರ್ಜಿಯಲ್ಲಿ “ಜಾತಿ” ಇರಲೇಬೇಕು .. ಮೀಸಲಾತಿ ವ್ಯವಸ್ಥೆ ಮಾತ್ರ ಮೀಸಲಾಗಿರಬೇಕು! ಎಂಥಾ ವಿಪರ್ಯಾಸ… ಕೆಟ್ಟ ವ್ಯವಸ್ಥೆಯನ್ನು ಧಿಕ್ಕರಿಸಿ ಎಲ್ಲಾರ ಸಹಕಾರವಿರುತ್ತದೆ, ಒಂದು ಜನಾಂಗವನ್ನು ದೂಷಿಸುವ ಚಪಲವೇಕೆ? ಅವರವರ ಸಂಸ್ಕೃತಿ ಅವರಿಗೆ ದೊಡ್ಡದು.. ಇದು ನಾಗರೀಕ ಸಮಾಜ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿಲ್ಲ… ಸ್ನೇಹವಿರಲಿ … ಅನಾವಶ್ಯಕ ದ್ವೇಷದಿಂದ ಏನಾದರೂ ಸಾಧಿಸಲಾದೀತೇ? ಸ್ವಾಮಿ ಈ ಕೆಳಗಿನ ಲಿಂಕ್ ಓದಿ.

      http://ashwath.wordpress.com/%E0%B2%B5%E0%B3%88%E0%B2%9A%E0%B2%BE%E0%B2%B0%E0%B2%BF%E0%B2%95-%E0%B2%95%E0%B2%A5%E0%B3%86/

  3. kartheek

    ಮಾಡೆ ಸ್ನಾನ ಮಾದುವುಧು ತಪ್ಪಲ್ಲ….ಎಲ್ಲರ ಎಲೆಯಲ್ಲಿ ಎಲ್ಲರೂ ಉರುಳಿದರೆ ಅದು ಆಚರಣೆ…..ಕೇವಲ ಬ್ರಾಹ್ಮಣರ ಎಲೆಯಲ್ಲಿ ಉರುಳಿದರೆ ಅದು ಮೂಡ ನಮ್ಬಿಕೆಯಾಗುತದೆ….ಮೊದಲೆಯಧಾಗಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ತಪ್ಪು…..ಜಾತಿಗಿಂತ ಮಿಗಿಲು ಮಾನವ ಧರ್ಮ….ಮೊದಲು ಮಾನವನಲ್ಲಿ ಸಮಾನತೆ ಬೆಳೆಯಬೇಕು…ಆಮೇಲೆ ಆಚರಣೆ, ಸಂಸ್ಕೃತಿ ಎಲ್ಲ…. ಎಲ್ಲ ಮೂದನಂಬಿಕೆಗಳಲ್ಲಿ ಇದ್ಹೂ ಒಂದು….ಸ್ವತಃ ಬ್ರಾಹ್ಮಣನಾಗಿ ನಾನು ಏಎ ಮಾತನ್ನು ಹೇಳುತಿದ್ದೇನೆ…. ಕೇವಲ ಜನೀವರಾಧ ಆಧಾರಧ ಮೇಲೆ ಅವನಿಗೆ ಊಟಕ್ಕೆ ಒಳಗಿ ಬಿಡುವುದು ಮಾನವನ ಸಂಸ್ಕೃತಿಯಲ್ಲ….ಅನ್ನಧ ಆಗಲು ಕಾಯುವುದು ಹಸಿದ ಹೊಟ್ಟೆಗೆ ಹೊರತು, ಬ್ರಾಹ್ಮನನಿಗಲ್ಲ….ದೇವಸ್ಥಾನದ ಆವರಣದ ಒಳಗೆ ಎಲ್ಲರೂ ಒಂಧೆ…..ಕೇವಲ ಮಡಿ-ಮೈಲಿಗೆ ಯಲ್ಲಿ ಜನರನ್ನು ಪ್ರಥ್ಯೇಕಿಸುವುಧು ತರವಲ್ಲ… ಜನಿವಾರ ನೋಡಿ ಊಟದ ಮನೆಗೆ ಬಿಡುವ ಪದ್ದತಿ ಸುಬ್ರಹ್ಮನ್ಯದಲ್ಲಿಧೆ…..ಧಾರಕ್ಕಿರುವ ಬೆಲೆ ಮನುಶನಿಗಿಲ್ಲ ಎಂಧು ಹೇಳಲು ಬಾಗಿಲ ಬಳಿ ನಿನ್ಥಿರುಥಾನೆ….. ಹಾಲ್ ಫುಲ್ ಐತ್ಹೆಂಬ ಕಾರಣಕ್ಕೆ ಮೂಲಾಜಿಲ್ಲಧೆ ಬಾಗಿಲನ್ನು ಹಾಕಿಕೊಳ್ಳುವ ಅವನಿಗೆ, ಆ ಕ್ಷಣದಲ್ಲಿ ಸಿಡಿಲಿನಂತೆ ಬಂದೆರಗುವ ಅವಮಾನವನ್ನು ತಮ್ಮ ಮುಗುಳ್ನಗೆಯಲ್ಲೇ ಸಾವರಿಸಿಕೊಂಡು ಹತ್ತಿರದಲ್ಲೇ ಜಾತಿ-ಧರ್ಮ ಕೆಲಧೆ ಹೋಟೆಲಿನಲ್ಲಿ ತಿಂದುಂಡು, ಬೀಡವನ್ನು ಜಗಿಯುಥಾ ಬಸ್ಸನ್ನು ಹತ್ತುವ ಮುಗ್ಧತೆ ನಮ್ಮಧು….ಅಲ್ಲಿಗೆ ನಮ್ಮ ಜನಿವಾರಕ್ಕೆಲ್ಲಿಧೆ ಬೆಲೆ ? ದೇವಸ್ಥಾನದಲ್ಲಿ ಕಾಲು ತ್ಹೊಲೆಧು ಆವರಣದ ಒಳಗೆ ಮಡಿ ಇಂದ ಕಾಲಿಟ್ಟರೆ ಮಾತ್ರ ಬ್ರಹ್ಮನನಾಗುವುದಿಲ್ಲ….. ಬ್ರಾಹ್ಮೀ ವಿಧ್ಯೆಯನ್ನು ಮಾನವೀಯತೆಯಲ್ಲಿ ತೋರಬೇಕು, ಮಡಿ – ಮೈಲಿಗೆ ಇಂದ ಅಲ್ಲ…..ಆಗ ಅದು ಶೋಷಣೆ- ಧೌರ್ಜನ್ಯ ವಾಗುಥಧೆ…. ಹಲ್ಲು ಬಿಟ್ಟುಕೊಂಡು ತೀರ್ಥ-ಮಂಗಳಾರತಿ ಕೊಡುವ ನೆಪದಲ್ಲಿ ದೇವಸ್ಥಾನದ ಆವರಣದಲ್ಲಿ ಓಡಾಡಿಕೊಂಡು ಹೆಣ್ಣು ಮಕ್ಕಳನ್ನು ನೋಡಿ ಪೋಲಿ ಮಾತುಗಳನ್ನು ಆಡುವ ಹುಡುಗರನ್ನು ನಾನು ಸ್ವತಃ ನೋಡಿಧೆನಿ…..ಅವರು ನಿಜವಾದ ಬ್ರಾಹ್ಮಣರಲ್ಲ…. ಇಂಥವರ ಮಾಡಿಕೊಂಡ ಅಚಾರ-ವಿಚಾರಗಳಲ್ಲಿ ಸಾರ್ವಜನಿಕರನ್ನು olapadisabaaradhu…. ಮಡಿ-ಮೈಲಿಗೆ ಎಂಬುದು ಅವರ ಮನೆಯೋಳಗಿತ್ತಾರೆ ಚೆನ್ನ, ಬೀಧಿಗೆ ಹರಿಬಿದಬಾರಧು….. ನಿಮ್ಮ ಅನಿಸಿಕೆಗಳಿಗೆ ನಾನು ಸಧಾ ಸಿಧ……ನನ್ನ ಮೇಲ್ ಈದ್…. yem jee kartheek @ gಮೇಲ್ . ಕಂ

  4. ಮಂಜುನಾಥ ಕೊಳ್ಳೇಗಾಲ

    @ ಕಾರ್ತೀಕ್: “ಮೊದಲೆಯಧಾಗಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ತಪ್ಪು…..ಜಾತಿಗಿಂತ ಮಿಗಿಲು ಮಾನವ ಧರ್ಮ….ಮೊದಲು ಮಾನವನಲ್ಲಿ ಸಮಾನತೆ ಬೆಳೆಯಬೇಕು” – ಇದೀಗ ಮಾತು. ಒಪ್ಪಿದೆ ಒಪ್ಪಿದೆ.

    @ ದಿವಾಕರ್: ಸ್ವಾಮಿ, ನನ್ನಂತೆಯೇ ಬಹಳಷ್ಟು ಜನರು ಇತಿಹಾಸ ಬಲ್ಲವರಲ್ಲ, ಸೂಕ್ಷ್ಮತರಂಗಗಳ ಗ್ರಹಿಕೆಯಲ್ಲ. ಹಾಗೆಂದು ನಮ್ಮಂಥಾ ಸೂಕ್ಷ್ಮತೆಯಿಲ್ಲದ ಜನದ ಮುಂದೆ ಹೀಗೆ ಬ್ರಾಹ್ಮಣ-ಬ್ರಾಹ್ಮಣಶಾಹಿ ಎಂದೆಲ್ಲಾ ಸುಲಭವಾಗಿ ಕನ್ಫ್ಯೂಸ್ ಆಗಬಹುದಾದ ಪದಪುಂಜಗಳನ್ನು ಬಳಸಿಬಿಟ್ಟು ಆಮೇಲೆ ಇತಿಹಾಸದ ಪುಸ್ತಕವನ್ನೋದಿ ಎಂದುಬಿಟ್ಟರೆ ಹೇಗೆ? ಹಾಗೆ ಓದುವ ಸೌಲಭ್ಯವಿಲ್ಲದ, ಇದ್ದರೂ ಓದಲಿಚ್ಛೆಯಿಲ್ಲದ ಜನ, ನಿಮ್ಮಂಥ ತಿಳಿದವರ ಮಾತನ್ನಷ್ಟನ್ನೇ ಓದಿಕೊಂಡು, ನನ್ನಂತೆಯೇ ಅಪಾರ್ಥ ಮಾಡಿಕೊಂಡು, ಬ್ರಾಹ್ಮಣಶಾಹಿಯನ್ನು ಬಡಿಯುವ ಬದಲು ಬ್ರಾಹ್ಮಣರನ್ನೇ ಬಡಿಯುವ ಅಪಾಯವಿದೆಯಲ್ಲವೇ? ತಿಳಿದವರಾಗಿ ಇಂಥಾ ಅಪಾರ್ಥಗಳನ್ನು ಹರಡುವುದು ನೀವು ವಿರೋಧಿಸುತ್ತಿರುವ ಮಡೆ ಸ್ನಾನಕ್ಕಿಂತ ಕೆಟ್ಟದಲ್ಲವೇ? ತಿಳಿದವರು, ದಯವಿಟ್ಟು ಯೋಚಿಸಿ.

    ಬ್ರಾಹ್ಮಣ-ಬ್ರಾಹ್ಮಣಶಾಹಿ ವ್ಯತ್ಯಾಸ ತಿಳಿಯಲು ಇತಿಹಾಸದ ಪುಸ್ತಕವೋದಲು ಅಪ್ಪಣೆ ಕೊಡಿಸಿದ ತಾವು ಬ್ರಾಹ್ಮಣ-ಬ್ರಾಹ್ಮಣ್ಯದ ವ್ಯತ್ಯಾಸ ತಿಳಿಯಲು ಕೆಲವು ಶಾಸ್ತ್ರಗ್ರಂಥಗಳನ್ನೂ ಸಮಾಜಶಾಸ್ತ್ರ ಗ್ರಂಥಗಳನ್ನೂ ತಿರುವಿಹಾಕುವುದು ಒಳ್ಳಿತಲ್ಲವೇ? ಯಜನ-ಯಾಜನ, ಅಧ್ಯಯನ-ಅಧ್ಯಾಪನ, ಚಿಂತನ-ಬ್ರಹ್ಮಜಿಜ್ಞಾಸೆ, ಜಪ-ತಪ ಇವು ಬ್ರಾಹ್ಮಣನ ಕೆಲಸವೆಂದು ಹೇಳುತ್ತದೆ ಶಾಸ್ತ್ರ. ಐಹಿಕ ವಿಷಯಗಳಾದ ಧರ್ಮಾರ್ಥಕಾಮಗಳಂತೆಯೇ ಪಾರಮಾರ್ಥಿಕವಾದ ಮೋಕ್ಷವೂ ಸಮಾಜದ ಅಗತ್ಯಗಳಲ್ಲಿ ಒಂದೆಂದು ಸಮಾಜ ಮನಗಂಡಿದ್ದ ಕಾಲದ ಮಾತು. ಈ ಕಾರ್ಯಗಳು ಉಚ್ಛ ಮಟ್ಟದ್ದೆಂದು ಪರಿಗಣಿತವಾದ್ದರಿಂದ, ಸಹಜವಾಗಿಯೇ ಬ್ರಾಹ್ಮಣನಿಗೆ ಪೂಜ್ಯ ಸ್ಥಾನ (ಗಮನಿಸಿ, ’ಕಾಸಿನ’ಸ್ಥಾನವಲ್ಲ) ದೊರೆಯಿತು. ಬ್ರಾಹ್ಮಣನ ಕೆಲಸ ಪಾರಮಾರ್ಥಿಕವಾದರೂ ಅವನೂ ಲೋಕದಲ್ಲಿ ಜೀವಿಸಬೇಕಿದ್ದುದರಿಂದ ಅದಕ್ಕೆ ವ್ಯವಸ್ಥೆ ಮಾಡಿಕೊಡುವ ಸಮಾಜದ ಜವಾಬ್ದಾರಿಯ ಅಂಗವೇ ಬ್ರಾಹ್ಮಣನ ಜೀವನಾಧಾರಗಳಾದ ದಾನ, ದಕ್ಷಿಣೆ ಇತ್ಯಾದಿ. ಇದು ಅಂದಿನ ಅರ್ಥವ್ಯವಸ್ಥೆ. ಮುಂದೆ ಇತರ ಬೇರೆ ’ಕಸುಬು’ಗಳಂತೆಯೇ ಬ್ರಾಹ್ಮಣ್ಯವೂ ಒಂದು ಕಸುಬಾಯಿತು, ಇತರ ಕಸುಬುಗಳಂತೆಯೇ ಅದೂ ವಂಶಪಾರಂಪರ್ಯವಾಯಿತು, ಜಾತಿ ಆಧಾರಿತವಾಯಿತು. ಇತರ ಕಸುಬುಗಳಂತೆಯೇ ಅದಕ್ಕೂ ಈ specializationನ್ನು ಕಾಯ್ದುಕೊಳ್ಳುವ ಹಿತಾಸಕ್ತಿ ಬಂತು.

    ಸ್ವಾಮೀ, ಪುರೋಹಿತ ಶಾಹಿ ಅಂದದ್ದಕ್ಕೆ ಹೇಳುತ್ತೇನೆ. ಶಾಹಿ ಅಂದ್ರೆ ಆಡಳಿತ/ರಾಜ್ಯಭಾರ/ಕಾರುಬಾರು ಇತ್ಯಾದಿ. ನನಗೆ ತಿಳಿದಂತೆ ನಮ್ಮನ್ನು ಆಳಿದ ವರ್ಗ ಬಲಿಷ್ಟರಾದ ಕ್ಷತ್ರಿಯರದು. ಧನಿಕ ವರ್ಗ ವ್ಯಾಪಾರ-ವ್ಯವಹಾರದಲ್ಲಿ ತೊಡಗಿದ್ದ ವೈಶ್ಯರದ್ದು. ಬ್ರಾಹ್ಮಣನದ್ದು ಹಣವೂ ಅಲ್ಲ ಅಧಿಕಾರವೂ ಅಲ್ಲ; ಕೇವಲ ಆಧ್ಯಾತ್ಮ, ಪೌರೋಹಿತ್ಯ, ಮಂತ್ರಾಲೋಚನೆ. ಮೊದಲಿಬ್ಬರಿಗಿಲ್ಲದ ಪಟ್ಟಭದ್ರ ಹಿತಾಸಕ್ತಿ ಬ್ರಾಹ್ಮಣನದೇ? ಇದು ಕ್ಷತ್ರಿಯಶಾಹಿ ಆಗಲಿಲ್ಲ, ವೈಶ್ಯಶಾಹಿ ಆಗಲಿಲ್ಲ, ಬ್ರಾಹ್ಮಣಶಾಹಿ ಆಗಿಬಿಟ್ಟಿತು. ಏಕೆ? ಬರೀ ಹತ್ತು ಜನ ಉಪಯೋಗಿಸಿದ ಪದಗಳನ್ನು ಉಪಯೋಗಿಸಿದರೆ ಬಂದಿತೇ? ನಾನು ಮೊದಲೇ ತಿಳಿಸಿದಂತೆ ಶೂದ್ರರನ್ನೂ ಒಳಗೊಂಡಂತೆ ನಾಲ್ಕೂ ವರ್ಣೀಯರು ಸವರ್ಣೀಯರು. ಇದೊಂದಕ್ಕೂ ಸೇರದ ಪಂಚಮರು ಅವರ್ಣೀಯರು. ಸವರ್ಣೀಯರು ಅವರ್ಣೀಯರನ್ನು ತುಳಿದರು ಎಂದೇ ಕೂಗು ಕೇಳಿಬರುತ್ತಿದ್ದುದು. ಆಮೇಲೆ ಶೂದ್ರವರ್ಗವೂ ಈ ತುಳಿತಕ್ಕೊಳಪಟ್ಟವರ ಗುಂಪಿಗೆ ಸೇರಿಬಿಟ್ಟಿತು! ನೋಡನೋಡುತ್ತಿದ್ದಂತೆಯೇ ಕ್ಷತ್ರಿಯ-ವೈಶ್ಯರೂ ಅದಾವುದೋ ಚಾಣಾಕ್ಷನದಿಂದ ಯಾವಯಾವದೋ ಹೆಸರಿನಲ್ಲಿ ಇದೇ ಗುಂಪಿಗೆ ಸೇರಿಬಿಟ್ಟರು! ಉಳಿದು ನಿಂತು ತುಳಿಯುತ್ತಿದ್ದುದು ಈ ತೂಕಡಿಸುತ್ತಿದ್ದ ಬಡಬ್ರಾಹ್ಮಣನೊಬ್ಬನೇ! ಈ ಕಾಲಘಟ್ಟದಲ್ಲಿ ಹುಟ್ಟಿದ್ದು ಪುರೋಹಿತಶಾಹಿ, ಬ್ರಾಹ್ಮಣ ಶಾಹಿ ಇತ್ಯಾದಿ. ಏಕೆ? ಉಳಿದೆಲ್ಲ ವರ್ಗಗಳಿಗೆ ಹೋಲಿಸಿದರೆ ಪರಮಾರ್ಥ ಇತ್ಯಾದಿ “ಸಮಾಜಕ್ಕೆ ಬೇಡದ, ನಿಷ್ಪ್ರಯೋಜಕ” ಕೆಲಸಗಳಲ್ಲಿ ಜೀವಿಸುತ್ತಿದ್ದು ಈ ಬ್ರಾಹ್ಮಣನೊಬ್ಬನೇ, ಏಕೆಂದರೆ ಈಗಿನ ಸಮಾಜಕ್ಕೆ ಅದು ಬೇಡ! ಸರಿ, ಅದೆಷ್ಟು ಬ್ರಾಹ್ಮಣರು ಇನ್ನೂ ಅದೇ ಕೆಲಸಗಳಲ್ಲಿ ಜೀವಿಸುತ್ತಿದ್ದಾರೆ? ಅದೆಷ್ಟು ಬ್ರಾಹ್ಮಣರು ಇವತ್ತು ಗಾಡಿಯೆಳೆಯುತ್ತಿಲ್ಲ, ಕೂಲಿ ಮಾಡುತ್ತಿಲ್ಲ, ಅದೆಷ್ಟು ಬ್ರಾಹ್ಮಣರು ಸೇನೆಯಲ್ಲಿಲ್ಲ, ಅದೆಷ್ಟು ಬ್ರಾಹ್ಮಣರು ಐಟಿ ಉದ್ಯಮದಲ್ಲಿಲ್ಲ. ಬ್ರಾಹ್ಮಣರ ಸಂಖ್ಯೆಯೇ ಎಂಟೋ ಒಂಬತ್ತೋ ಶೇಕಡಾ. ಅದರಲ್ಲಿ ಅಬ್ರಾಹ್ಮಣ ಜೀವನೋಪಾಯಗಳಲ್ಲಿ ತೊಡಗಿದವರೇ ಅದರ ಅರ್ಧದಷ್ಟು. ಉಳಿದವರಲ್ಲಿ ನಿರುದ್ಯೋಗಿಗಳು ಅದೆಷ್ಟೋ. ಅಂದಮೇಲೆ ಇಲ್ಲಿ ಶಾಹಿ ಎಲ್ಲಿ ಬಂತು ಸ್ವಾಮಿ? ಇದು ಕ್ರೂರ ವ್ಯಂಗ್ಯವಲ್ಲವೇ? ಸುಲಿದವರು ತಿಂದವರು ಎಲ್ಲೋ ಹೋದರು, ಬ್ರಾಹ್ಮಣನೊಬ್ಬ ನಿಮಗೆ ಸಿಕ್ಕ ಅಲ್ಲವೇ ಬೆರ್ಚಪ್ಪನಂತೆ? ಅದು ಸರಿ, ಈ ಥರ ಬಣ್ಣದ ಹೂವು ಹೂವಿನ ಮಾತಾಡಿಕೊಂಡು ಸಮಾಜದಲ್ಲಿ ಭೇದ ಬಿತ್ತುತ್ತಾ ತಿರುಗುವ ಬುದ್ಧಿಜೀವಿಗಳು ನೀವೇ ಹೇಳಿದ “ಶಾಹಿ” ಮನಸ್ಥಿತಿಯ ಭಾಗವಲ್ಲವೇ ಸ್ವಾಮಿ? ಅವರ “ಕೆಲಸ” ಬ್ರಾಹ್ಮಣರ ನಿಷ್ಪ್ರಯೋಜಕ ಬ್ರಾಹ್ಮಣಾರ್ಥಕ್ಕಿಂತಾ ಹೆಚ್ಚಿನದ್ದೇನಾದರೂ ಸಮಾಜಕ್ಕೆ ಕೊಡುತ್ತಿದೆಯೇ? ಇರಲಿ, ನನ್ನ ಮೊದಲ ಕಮೆಂಟಿಗೆ ತಾವಿನ್ನೂ ಉತ್ತರಿಸಿಲ್ಲ. ತಮ್ಮ clarification ಅಲ್ಲದ clarificationಗಷ್ಟೇ ಈ ಉತ್ತರ.

    • ದಿವಾಕರ

      ಒಂದು ಪ್ರಶ್ನೆ ಕಾಡುತ್ತಿದೆ. ನಿಜ, ವಿಪ್ರ ಸಮುದಾಯಕ್ಕೂ ಮಡೆ ಸ್ನಾನವೆಂಬ ಅಮಾನವೀಯ ಪದ್ಧತಿಗೂ ನೇರ ಸಂಬಂಧ ಕಲ್ಪಿಸಲಾಗುವುದಿಲ್ಲ. ಬ್ರಾಹ್ಮಣಶಾಹಿ, ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಈ ಮೂರುಪದಗಳ ನಡುವಿನ ವ್ಯತ್ಯಾಸವನ್ನು ಎಲ್ಲರಿಗೂ ಗ್ರಹಿಸುವುದು ಕಷ್ಟ. ಆದರೆ ಸಾಮಾಜಿಕ ಕಳಕಳಿ ಇರುವ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಚಯವಿರುವ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಗೆ ಬದ್ಧವಾಗಿರುವವರಿಗೆ ಈ ವ್ಯತ್ಯಾಸ ತಿಳಿಯದೆ ಇದ್ದರೆ ಅಪಾಯವೇ ಹೆಚ್ಚು. ಜಾತಿ ವ್ಯವಸ್ಥೆಯ ಸುತ್ತಲಿನ ಸಂಕಥನಗಳಲ್ಲಿ ಈ ಸೂಕ್ಷ್ಮ ತರಂಗಗಳನ್ನು ಗ್ರಹಿಸುವ ಸಾಧ್ಯತೆಗಳು ಇಲ್ಲವಾದರೆ ವಾದ ವಿವಾದಗಳೆಲ್ಲವೂ ಶುಷ್ಕವಾಗುತ್ತದೆ. ಇರಲಿ, ಇದು ಪಂಡಿತ ಪಾಮರರ ನಡುವಿನ ಸಂಘರ್ಷವಾಗುವ ಅಗತ್ಯವಿಲ್ಲ. ಆದರೆ ಮಡೆ ಸ್ನಾನದಂತಹ ಅಮಾನವೀಯ ಪದ್ಧತಿಯ ವಿರುದ್ಧ ಸಮಾಜದ ಎಲ್ಲ ಸಮುದಾಯಗಳೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಕ್ರಯಿಸುತ್ತಿರುವಾಗ ಮೇಲ್ಜಾತಿಯ ಮಠಾಧೀಶರು, ಆಗಮ ಪಂಡಿತರು, ವಿಪ್ರೋತ್ತಮರು, ಬ್ರಾಹ್ಮಣ ಸಂಘಗಳು ಏಕೆ ತೆಪ್ಪಗಿವೆ. ಅಥವಾ ಪೇಜಾವರರು ಹೇಳಿದಂತೆ ತಾವು ನಿಷೇಧವನ್ನೂ ವಿರೋಧಿಸುವುದಿಲ್ಲ. ಪದ್ಧತಿಯನ್ನೂ ವಿರೋಧಿಸುವುದಿಲ್ಲ ಎಂದು ಎಡಬಿಡಂಗಿ ಹೇಳಿಕೆ ನೀಡಿದರಾಗುವುದೇ. ಮೌನ ಸಮ್ಮತಿಯ ಲಕ್ಷಣವಾಗಬಹುದಲ್ಲವೇ ? ಅತಿ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಒಂದು ಸಮುದಾಯದಿಂದ ಇಂತಹ ಅನಿಷ್ಠ ಪದ್ಧತಿಯ ವಿರುದ್ಧ ಅಧಿಕೃತ ಪ್ರತಿಕ್ರಿಯೆಯೇ ಹೊರಬರದಿದ್ದರೆ ಏನೆಂದು ಭಾವಿಸಬಹುದು. ಬ್ರಾಹ್ಮಣ-ಲಿಂಗಾಯತ-ವೈಶ್ಯ-ಕ್ಷತ್ರಿಯ ಮತ್ತ ದಲಿತರನ್ನೂ ಒಳಗೊಂಡಂತೆ ಬ್ರಾಹ್ಮಣ/ಪುರೋಹಿತಷಾಹಿ ಮನೋಭಾವವುಳ್ಳ ಎಲ್ಲ ಸಮುದಾಯಗಳೂ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. Treating this as brahmin bashing is just an escapism. ಭಾರತೀಯ ಸಮಾಜದ ಸ್ವಾಸ್ಥ್ಯ ಕಾಪಾಡಲು ಇಂದು ಅಗತ್ಯವಾಗಿ ಬೇಕಿರುವುದು ಒಂದು ಮಾನವೀಯ ಪರಿಕಲ್ಪನೆಯ ನಿರ್ದಿಷ್ಟ ಚೌಕಟ್ಟು. ಇನ್ನು ಶಾಹಿಯ ಪರಿಕಲ್ಪನೆಯನ್ನು ಪರಿಗಣಿಸಿದಾಗ, ವ್ಯವಸ್ಥೆಯ ಆಡಳಿತಾರೂಢ ಶಾಹಿಗೂ, ಸಮಾಜವನ್ನು ನಿಯಂತ್ರಿಸುವ ಸಾಂಸ್ಕೃತಿಕ ಶಾಹಿಗೂ ಇರುವ ವ್ಯತ್ಯಾಸವನ್ನು ಗ್ರಹಿಸುವುದು ಒಳಿತು. ಭಾರತದ ಜಾತಿ ವ್ಯವಸ್ಥೆ ಒಂದು ನಾಗರಿಕತೆಯಂತೆ, ಕೇವಲ ವ್ಯವಸ್ಥೆ ಮಾತ್ರವಲ್ಲ. ವರ್ಣಾಶ್ರಮ ಧರ್ಮದ ಚೌಕಟ್ಟಿನಿಂದ ಹೊರನಿಂತು ನೋಡಿದರೂ ಈ ನಾಗರೀಕತೆ ದೇಶದಲ್ಲಿ ಒಂದು ಶ್ರೇಣೀಕೃತ ಮನಸ್ಥಿತಿಯನ್ನು ಸ್ಥಾಪಿಸಿರುವುದನ್ನು ಗಮನಿಸಬಹುದು. ಎಲ್ಲ ಜಾತಿ ವರ್ಗಗಳನ್ನೂ ಆವರಿಸಿರುವ ಈ ಮನಸ್ಥಿತಿಯ ಮೂಲ ಇರುವುದು ಬ್ರಾಹ್ಮಣ-ಪುರೋಹಿತಷಾಹಿ ಮನೋಭಾವದಲ್ಲೇ. ಮೊದಲೇ ಹೇಳಿದಂತೆ ಬ್ರಾಹ್ಮಣ-ಬ್ರಾಹ್ಮಣ್ಯ ಮತ್ತು ಬ್ರಾಹ್ಮಣಶಾಹಿಯ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸಿದಲ್ಲಿ ಮಾತ್ರ ಆರೋಗ್ಯಕರ ಚರ್ಚೆ ಸಾಧ್ಯ. ಈ ಮೂರೂ ಪದಗಳಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರುತಿಸದೆ ಸಾಮಾಜಿಕ ಆಯಾಮಗಳನ್ನು ಗುರುತಿಸಲು ಯತ್ನಿಸಿದಾಗ ಮಡೆ ಸ್ನಾನದ ಹಿಂದಿನ ಐತಿಹ್ಯ ಮತ್ತು ಸಾಂಸ್ಕೃತಿಕ ಸಾಮಾಜಿಕ ಹಿನ್ನೆಲೆಯನ್ನು ಗ್ರಹಿಸಲು ಸಾಧ್ಯ.
      ನಾ ದಿವಾಕರ

  5. ಮಂಜುನಾಥ ಕೊಳ್ಳೇಗಾಲ

    @ ದಿವಾಕರ: If you can not convince, confuse ಎನ್ನುವ ನುಡಿ ನನಗೀಗ ನೆನಪಾಗುತ್ತಿದೆ. “ಸಾಮಾಜಿಕ ಕಳಕಳಿ ಇರುವ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಚಯವಿರುವ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಗೆ ಬದ್ಧವಾಗಿರುವವರಿಗೆ ಈ ವ್ಯತ್ಯಾಸ ತಿಳಿಯದೆ ಇದ್ದರೆ ಅಪಾಯವೇ ಹೆಚ್ಚು. ಜಾತಿ ವ್ಯವಸ್ಥೆಯ ಸುತ್ತಲಿನ ಸಂಕಥನಗಳಲ್ಲಿ ಈ ಸೂಕ್ಷ್ಮ ತರಂಗಗಳನ್ನು ಗ್ರಹಿಸುವ ಸಾಧ್ಯತೆಗಳು ಇಲ್ಲವಾದರೆ ವಾದ ವಿವಾದಗಳೆಲ್ಲವೂ ಶುಷ್ಕವಾಗುತ್ತದೆ. ಇರಲಿ, ಇದು ಪಂಡಿತ ಪಾಮರರ ನಡುವಿನ ಸಂಘರ್ಷವಾಗುವ ಅಗತ್ಯವಿಲ್ಲ” (!?!?!?). ಅಲ್ಲಾ ಸ್ವಾಮಿ, ಬ್ರಾಹ್ಮಣರು ಯಾವಯಾವುದೋ ಯುಗದಲ್ಲಿ ಅರ್ಥವಾಗದ ಭಾಷೆಯಲ್ಲಿ ಬರೆದು, ಮಾತಾಡಿ ದಲಿತರ ನುಡಿಸೌಲಭ್ಯವನ್ನೇ ಕಿತ್ತುಕೊಂಡುಬಿಟ್ಟರು, ಅವರ ಅಜ್ಞಾನವನ್ನು ಪೋಷಿಸಿ ಅವರನ್ನು ಸುಲಿದುಬಿಟ್ಟರು ಎಂದೆಲ್ಲಾ ಬೊಬ್ಬೆಹೊಡೆಯುವ ನೀವು, ನನ್ನ ನೇರ ಪ್ರಶ್ನೆಗಳಿಗೆ ನೇರ ಉತ್ತರ ಕೊಡದೆ ಮೇಲಿನ ರೀತಿ ಹೂವುಹೂವಿನ ಗೋಜಲು ನಾರು ನಾರಿನ ಭಾಷೆಯಲ್ಲಿ ಅದೇನೋ ಹೇಳಿ ತಪ್ಪಿಸಿಕೊಳ್ಳುತ್ತೀರಲ್ಲ? ನನ್ನ ಪ್ರಶ್ನೆಗೂ ನಿಮ್ಮ ಉತ್ತರಕ್ಕೂ ನನಗಾವ ಸಂಬಂಧವೂ ತೋರುತ್ತಿಲ್ಲ. “ಈ ವ್ಯತ್ಯಾಸ ತಿಳಿಯದಿದ್ದರೆ” ಎಂದು ಪದೇ ಪದೇ ಅನ್ನುತ್ತಿದ್ದೀರಿ, ನಾನು ಅದೇ “ಏನು ವ್ಯತ್ಯಾಸ” ಅಂತ ಕೇಳಿದೆ, ಆದರೆ ನೀವು ಅದಕ್ಕೆ ಉತ್ತರ ಕೊಡದೇ ಮತ್ತೆ ಮತ್ತೆ “ಬ್ರಾಹ್ಮಣ-ಬ್ರಾಹ್ಮಣ್ಯ ಮತ್ತು ಬ್ರಾಹ್ಮಣಶಾಹಿಯ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಗ್ರಹಿಸಿದಲ್ಲಿ ಮಾತ್ರ ಆರೋಗ್ಯಕರ ಚರ್ಚೆ ಸಾಧ್ಯ” ಎಂಬಂಥಾ ಉತ್ತರಗಳನ್ನೇ ಕೊಡುತ್ತಿದ್ದೀರಿ. ನಿಮ್ಮದೇ ’ಉತ್ತರ’ವನ್ನು ಉದ್ಧರಿಸಿ ಹೇಳುವುದಾದರೆ “ಬ್ರಾಹ್ಮಣ-ಲಿಂಗಾಯತ-ವೈಶ್ಯ-ಕ್ಷತ್ರಿಯ ಮತ್ತ ದಲಿತರನ್ನೂ ಒಳಗೊಂಡಂತೆ ಬ್ರಾಹ್ಮಣ/ಪುರೋಹಿತಷಾಹಿ ಮನೋಭಾವವುಳ್ಳ ಎಲ್ಲ ಸಮುದಾಯಗಳೂ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ” ಇದಪ್ಪ ವರಸೆ. ಬ್ರಾಹ್ಮಣ, ಲಿಂಗಾಯತ, ವೈಶ್ಯ, ಕ್ಷತ್ರಿಯ ಎಲ್ಲರನ್ನೂ ಅದಾವುದೋ ಮನೋಭಾವವುಳ್ಳದ್ದು ಎಂದು ಹೇಳುತ್ತೀರಿ, ಆದರೆ ಅದರ ಹೆಸರನ್ನು ಮಾತ್ರ “ಬ್ರಾಹ್ಮಣ/ಪುರೋಹಿತಶಾಹಿ” ಎಂದು ಕರೆಯುತ್ತೀರಿ. ನನ್ನ ಪ್ರಶ್ನೆ ಅದೇ, ಅದೇಕೆ ಬ್ರಾಹ್ಮಣ/ಪುರೋಹಿತಶಾಹಿ? ಅದೇಕೆ ಲಿಂಗಾಯತಶಾಹಿ ಅಲ್ಲ, ಗೌಡಶಾಹಿ ಅಲ್ಲ, ಹೋಗಲಿ ಅದೇಕೆ ಕ್ಷತ್ರಿಯಶಾಹಿಯೋ ವೈಶ್ಯಶಾಹಿಯೋ ಅಲ್ಲ. ದಯವಿಟ್ಟು ಕಲಿತ ಮಾತಾಡದೇ ಈ ಮನೋಭಾವಗಳಿಗೆ ಈ ಹೆಸರಿಟ್ಟ ಮನಸ್ಸುಗಳ ಕುತ್ಸಿತತೆ ಕುರಿತು ತುಸು ಯೋಚಿಸುವಂಥವರಾಗಿ. ನಿಮಗೆ ನೇರ ಉತ್ತರಿಸಲು ಅನುಕೂಲವಾಗಲೆಂದು ನನ್ನ ಪ್ರಶ್ನೆಗಳನ್ನು rephrase ಮಾಡಿ ಇಲ್ಲಿ ಹಾಕುತ್ತಿದ್ದೇನೆ, ದಯವಿಟ್ಟು ಉತ್ತರಿಸಿ:

    ೧) ಬ್ರಾಹ್ಮಣಶಾಹಿ/ಪುರೋಹಿತಶಾಹಿ ಅಂದರೆ ಏನು, ಬ್ರಾಹ್ಮಣನಿಗೂ ಪುರೋಹಿತನಿಗೂ ಈ ಶಾಹಿಗೂ ಏನು ವ್ಯತ್ಯಾಸ/ಸಂಬಂಧ (ದಯವಿಟ್ಟು ಲಿಂಕುಗಳನ್ನು ಕೊಡದೇ ಪ್ರಶ್ನೆಗೆ ನೇರ ಉತ್ತರ ಕೊಡುವಂಥವರಾಗಿ)

    ೨) ಮಡೆಸ್ನಾನವನ್ನು ಸಮರ್ಥಿಸುವವರೆಲ್ಲಾ ಬ್ರಾಹ್ಮಣಶಾಹಿಗಳು, ವಿರೋಧಿಸುವವರೆಲ್ಲಾ ದಲಿತರು ಎಂದು ನಿಮ್ಮ ನಿಲುವಿದ್ದಂತಿದೆ, ಹೌದೇ?

    ೩) ಹಾಗಿದ್ದರೆ ಇದು “ನೀನು ನನ್ನಂತಿಲ್ಲ, ಆದ್ದರಿಂದ ನೀನು ಕೆಟ್ಟವನು” ಎಂಬ ಮೂಲಭೂತವಾದದ ಮನಸ್ಥಿತಿಯನ್ನು ತೋರಿಸುವುದಿಲ್ಲವೇ? ಅಥವಾ ಅದೇ ಈ ದಿನಗಳಲ್ಲಿ “ಪ್ರಗತಿಪರವೋ”?

    ೪) ಮಡೆಸ್ನಾನವನ್ನು ಯಾರಾದರೂ ಯಾರಮೇಲಾದರೂ ಹೇರುತ್ತಿದ್ದಾರೆಯೋ ಅಥವಾ ಅದು ಸ್ವಯಂಪ್ರೇರಿತವೋ (ಅದರ ನಿಷೇಧವನ್ನು ವಿರೋಧಿಸುತ್ತಿರುವುದು ಮಡೆಸ್ನಾನ ಮಾಡಬೇಕೆನ್ನುವವರ ಗುಂಪೇ, ಇದು ತಮಗೆ ತಿಳಿದಿದೆಯೇ? ಮತ್ತೆ ಮಡೆಸ್ನಾನ ಮಾಡುವವರಲ್ಲಿ ಬ್ರಾಹ್ಮಣರೂ ಸೇರಿರುತ್ತಾರೆನ್ನುವುದು ತಮಗೆ ತಿಳಿದಿದೆಯೇ?)

    ೫) ಅಲ್ಲಿ ಊಟಕ್ಕೆ ಕೂಡುವ ಬ್ರಾಹ್ಮಣರು ಮಡೆಸ್ನಾನಕ್ಕೆ ಎಲೆ ಹಾಕಲೆಂದೇ ಕೂರುತ್ತಾರೋ ಪ್ರಸಾದಕ್ಕೋಸ್ಕರ ಕೂಡುತ್ತಾರೋ?

    ೬) ಮಾತುಮಾತಿಗೆ ಸೂಕ್ಷ್ಮತರಂಗಗಳ ಬಗ್ಗೆ ಮಾತಾಡುವ ನೀವು, ಭಾರತೀಯತೆಯಲ್ಲಿ ಹಾಸುಹೊಕ್ಕಾಗಿರುವ ಹರಕೆ, ನಂಬಿಕೆ, ಕ್ಷೇತ್ರಮಹಿಮೆಯಬಗ್ಗೆ ವಿಶ್ವಾಸ, ಹರಕೆ ತೀರಿಸಲೇ ಬೇಕೆಂಬ ಬದ್ಧತೆ ಇತ್ಯಾದಿಗಳ ಸೂಕ್ಷ್ಮತರಂಗಗಳನ್ನೇಕೆ ಗ್ರಹಿಸುತ್ತಿಲ್ಲ? ಮಡೆಸ್ನಾನ ಮಾಡುವವರು ಕೆಲವು ಹರಕೆಗಳ ಕಾರಣದಿಂದ ಬರುತ್ತಾರೆ. ಹಾಗೆಯೇ ಅಲ್ಲಿ ಊಟಮಾಡುವವರೂ ಪ್ರಸಾದಕ್ಕೋಸ್ಕರ ಊಟ ಮಾಡುತ್ತಾರೆ, ಅವರಲ್ಲೂ ಬಹುಪಾಲು “ನಂಬಿಕೆ” ಹೊಂದಿದವರೇ, ತಮ್ಮ ಪ್ರಗತಿಪರ ಧೋರಣೆ ಅವರಿಗೆ ಅರ್ಥವಾಗುವುದಿಲ್ಲ (ಅವರನ್ನು ಮಡೆಸ್ನಾನಕ್ಕೆ ಜವಾಬ್ದಾರಿ ಮಾಡುವುದು ತರವೇ). ಮೊನ್ನೆ ಮಡೆಸ್ನಾನ ವಿರೋಧಿಸಿದವರು ಹೀಗೆ ಹರಕೆತೀರದ ಬಗ್ಗೆ ಭಯಗೊಂಡವರೇ, ಅವರು ತಮ್ಮ ಎಲೆಗಳ ಮೇಲೆ ಉರುಳಲಿ ಎಂದು ಹೆಮ್ಮೆಪಡುವ ಪುರೋಹಿತರಲ್ಲ! ಈ ಗಲಾಟೆ ಕೂಡ ನಂಬಿದ ಮನಸ್ಸುಗಳ ಸೂಕ್ಷ್ಮತರಂಗಗಳನ್ನು ತಮಗೆ ತಲುಪಿಸದಿದ್ದರೆ ಏನೆನ್ನೋಣ!

    ೭) ತಲೆಮೇಲೆ ಮಲಹೊರುವ, ದೇವದಾಸಿ/ಬೆತ್ತಲೆಸೇವೆಗಳಲ್ಲಿರುವ ಆರ್ಥಿಕ, ಸಾಮಾಜಿಕ, ಲೈಂಗಿಕ ಶೋಷಣೆಗೂ ಮಡೆಸ್ನಾನದಂಥಾ ಸ್ವಯಂಪ್ರೇರಿತ ಹರಕೆಗೂ ಇರುವ ಸೂಕ್ಷ್ಮವ್ಯತ್ಯಾಸವನ್ನು ಗ್ರಹಿಸಿದವರು ಸೂಕ್ಷ್ಮತರಂಗಗಳ ಬಗ್ಗೆ ಮಾತಾಡುವುದು ಹಾಸ್ಯಾಸ್ಪದವಲ್ಲವೇ?

    ೮)

  6. ರಾಘವೇಂದ್ರ ಜೋಶಿ

    ಇಲ್ಲಿ ಮಂಜುನಾಥ ಕೊಳ್ಳೇಗಾಲ ಅವರ ಮಾತುಗಳನ್ನು ನಾನೂ ಸಮರ್ಥಿಸುತ್ತೇನೆ.ನಮ್ಮಲ್ಲೊಂದು ವಿಚಿತ್ರ ರೀತಿಯ ಶೋಕಿ ಶುರುವಾಗಿದೆ.ಎಲ್ಲದಕ್ಕೂ ಬ್ರಾಹ್ಮಣರನ್ನು target ಮಾಡಿಕೊಂಡು hammering ಮಾಡೋದು..ಇದೊಂಥರಾ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು ಎಂಬಂತೆ.ಶ್ರೀಯುತ ದಿವಾಕರ್ ಅವರಿಗೆ ಬ್ರಾಹ್ಮಣರ ಬಗ್ಗೆ ಸಿಟ್ಟಿಲ್ಲದೆ ಇರಬಹುದು.ಬ್ರಾಹ್ಮಣರ ಬಗ್ಗೆ ಅಪವಾದ ಹೊರಿಸುವ ಲೇಖನ ಬರೆಯುವ ಇರಾದೆಯೂ ಅವರಿಗಿರಲಿಕ್ಕಿಲ್ಲ,ಆದರೆ ಮಾನ್ಯ ಲೇಖಕರೇ,ನೀವೇ ಹೇಳಿದಂತೆ “ಬ್ರಾಹ್ಮಣಶಾಹಿ, ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ” ಈ ಮೂರುಪದಗಳ ನಡುವಿನ ವ್ಯತ್ಯಾಸ ಎಷ್ಟು ಜನಕ್ಕೆ ಅರ್ಥವಾಗುತ್ತದೆ? ನೀವೇನೋ ಅರ್ಥಗರ್ಭಿತವಾಗಿ ಬರೆದು ಸುಮ್ಮನಾದಿರಿ.ಆದರೆ ಈಗಾಗಲೇ ‘ಮಡೆಸ್ನಾನ’ ಕುರಿತಂತೆ,ಇದು ಬ್ರಾಹ್ಮಣರದೇ ಹುನ್ನಾರವೆಂದು ಕಣ್ಣುಮುಚ್ಚಿ ಧಾಂದಲೆ ಮಾಡುತ್ತಿರುವವರಿಗೆ,ನಿಮ್ಮ ಲೇಖನ ಮತ್ತಷ್ಟು ಉತ್ತೇಜನ ಮಾಡಿಕೊಡುವ ಅಪಾಯವೇ ಹೆಚ್ಚಿದೆ.

  7. kartheek

    hammering ಮಾಡುವ ಶೋಕಿಯನ್ನು ಸ್ವತಃ ನಾವೇ ಬ್ರಾಹ್ಮಣರು ಮಾಡಿಕೊಂದದ್ಧು…… ಶೋಕಿ ಎಂಬುದು ಸರ್ವಜನಿಕವಾದಧು , ಬ್ರಾಹ್ಮಣರು ಮಾಡಿಕೊಂದದ್ಧು ಅಧೆ…. ಕೇವಲ ಜನೀವರವೆಂಬ ಧಾರದಲ್ಲಿ ಶೋಕಿ ಮಾಡಿ ಈ ರಾಧಾಂಥ ಮಾಡಿಕೊಂದಿದ್ಧಾನೆ….ಅವರ ಕೂಗಿನಲ್ಲಿ ನಿಜವಾದ arthavidhe . ಕೇವಲ ಜನೀವರ ತೊಟ್ಟು ಬ್ರಾಹ್ಮಣ ಎಂಧು ಬೀಗಿ ಕೊಂದು ಹೊರದುಥಿದ್ದರೆ ಅದು ಥಪ್ಪಗುಥಿರಲಿಲ್ಲ…. ಬೇಧಿ ಬಧಿಯಲ್ಲಿ ಹೋದ ಕಡೆಯೆಲ್ಲ ತೀಕಿಸಿದ್ಧಾರೆ, ಅನುಕಿಸಿಧಾರೆ…..ನಮಗೆ ಚಪ್ಪಲಿ ಹೊಳೆಯಲು ಒಂದು ಜನಾಂಗ ಬೇಕು, ಅವನು ಹೊಲಿಧು ಕೊಡುವ ಚಪ್ಪಲಿಯನ್ನು ಮೃದುವಾಗಿ ಹಾಕಿಕೊಂಡು ಮಾರುಧ ದೂರದಿಂದಲೇ ಸಿಡುಕಿನಿಂದ ಧುಡನ್ನು ಎರಚಿ ಮುನ್ನೆದೆಯುಥೆವೆ…. aa ಕ್ಷಣದಲ್ಲಿ ಚಪ್ಪಲಿಗಿರುವ ಬೆಲೆ, ಅವನಿಗಿಲ್ಲ…. ನಮ್ಮ ಹೊಲಸನ್ನು ಯೆಥಲು ನಮಗೊಬ್ಬ ಬೇಕು, ಅದರ ಜೊತೆಗೆ ಅವನನ್ನು ಅಸ್ಸಯಿಸಿಕೊಲ್ಲುಥೆವೆ….. ಇದಕ್ಕೆನ್ಧೆ ಅಲ್ಲವೇ ಅಂಬೇಡ್ಕರ್ ಹೋರಾಡಲು ನಿನ್ಥಧು ? ಮೀಸಲಾತಿಯ ಬಗ್ಗೆ ಇಷ್ಟಗಲಕು ಮಾತನಾಡುವ ನಾವು, ತುತಿನ ಅನ್ನದಲ್ಲೂ ಬ್ರಾಹ್ಮಣರೇ ಆಗಬೇಕೆನ್ಧು ಬಯಸುಥೆವೆ ? ಅನ್ನದ ಅಗಲಿನ ಮೇಲೆ ನಮ್ಮ ಹೆಸರನ್ನು ಬರೆಧುಕೊಳ್ಳುವ ಹಕ್ಕು ನಮಗೆಲ್ಲಿಧೆ… ? ಇನ್ಧಿಗು ನಡೆಯುತಿರುವ “ಮೇಡ್ ಸ್ನಾನದ” ಪರವಾಗಿ ಮಾತನಾಡುವ ನಾವು ಅಂಬೇಡ್ಕರ್ ಹೊರಾಡಿದ್ದನ್ನು ಹಾಗು ಮೀಸಲಾತಿಯನ್ನು ಕಂಡಿಸುಥೆವೆ….. ಕಂಡಿಸುವ ಹಕ್ಕು ನಮಗೆಲ್ಲಿಧೆ…. ? ಕೇವಲ ಬ್ರಾಹ್ಮಣನಾಗಿ ಮಾಥದುಥಿದ್ದರೆ ನಿಮ್ಮಲ್ಲಿ ನಾನೊಬ್ಬ ನಾಗುಥಿದ್ಧೆ, ಅದಕ್ಕಿಂತ ಮಿಗಿಲಾದ “ಮಾನವ ಧರ್ಮ” ವನ್ನು ಮಾಥನಾದುಥಿರುವೇನು !!!

    • ರಾಘವೇಂದ್ರ ಜೋಶಿ

      ಕಾರ್ತಿಕ್ ಅವರೇ,
      ಮೊಟ್ಟ ಮೊದಲನೇಯದಾಗಿ,ನಾನಿಲ್ಲಿ ಒಬ್ಬ ಬ್ರಾಹ್ಮಣನಾಗಿ ಮಾತನಾಡಲು ನಿಂತಿಲ್ಲ.ಇಷ್ಟಕ್ಕೂ ‘ಬ್ರಾಹ್ಮಣ’ ಎಂಬ ಪದವೇ ನನ್ನ ಪರಿಕಲ್ಪನೆಯಲ್ಲಿ ಬೇರೆ ಥರ ಇದೆ.ಬರೀ ಹುಟ್ಟಿನಿಂದ,ಬರೀ ಜನಿವಾರದಿಂದ ಬ್ರಾಹ್ಮಣನಾಗೋದು ಸಾಧ್ಯವಿಲ್ಲ ಅಂತ ನನ್ನ ವೈಯಕ್ತಿಕ ನಂಬಿಕೆ.ಹಾಗೆಯೇ,ರಾತ್ರೋ ರಾತ್ರಿ ಈ ಜಗತ್ತನ್ನು ಬದಲಾಯಿಸುತ್ತೇನೆ,ಜಾತೀಯತೆಯನ್ನು ನಿರ್ಮೂಲನೆ ಮಾಡುತ್ತೇನೆ ಅಂದುಕೊಂಡು,ಹಾಕಿಕೊಂಡ ಜನಿವಾರ ಕಿತ್ತೊಗೆದು,ಮಾಂಸ ಭಕ್ಷಣೆ ಮಾಡುವ ಹುಂಬ ಬ್ರಾಹ್ಮಣರೂ ನಮ್ಮಲ್ಲುಂಟು.ಇವೆಲ್ಲ ನನ್ನ ಪಾಲಿಗೆ ನಿರರ್ಥಕ ಹುಚ್ಚಾಟಗಳು.ತಲೆತಲಾಂತರಗಳಿಂದ ತುಳಿತಕ್ಕೊಳಗಾದ ಕೆಳಜಾತಿಯ ಜನತೆಗೆ ಒಂದು ವಿಶ್ವಾಸ,ಆತ್ಮಸ್ಥೈರ್ಯ ತುಂಬುವದು ಯಾವುದೇ ನಿರ್ಮಲ ಮನಸ್ಸಿನ ಮನುಷ್ಯ ಯೋಚಿಸುವ ರೀತಿ..ಅದಕ್ಕಾಗಿಯೇ ಮೀಸಲಾತಿಯೆಂಬ ಕಾನೂನು ಕೂಡ ಇಂಥ ದಮನಿತರ ಜೊತೆಗಿದೆ.(ಇಲ್ಲಿ ಮೀಸಲಾತಿಯ ಬಗ್ಗೆಯೂ ಅನೇಕ ರೀತಿಯ loop hole ಗಳಿವೆ.ಆದರೆ ಅದನ್ನೆಲ್ಲ ಚರ್ಚಿಸಲು ಇದು ವೇದಿಕೆಯಲ್ಲ.) ನಿಜ,ಒಂದು ಕಾಲದಲ್ಲಿ ಈ ಜನತೆಯನ್ನು ಅತ್ಯಂತ ಕೀಳುಮಟ್ಟದಲ್ಲಿ ಕಂಡಿದ್ದುಂಟು.ಅದು ಅನೇಕರಿಗೆ ತಪ್ಪು ಅಂತ ಇವತ್ತು ಗೋಚರಿಸುತ್ತಿದೆ.ಹಾಗಾಗಿ ಅವರ್ಯಾರೂ ಇಂಥ ತಪ್ಪುಗಳನ್ನು ಮಾಡಲು ಬಯಸುವದಿಲ್ಲ.ಹಾಗಂತ,”ಓಹ್ ನೀವಾ?ಆವತ್ತು ನೀವು ನಮ್ಮನ್ನೆಲ್ಲ ತುಳಿದ್ರಿ,ಇವತ್ತು ನಾವು ನಿಮ್ಮನ್ನು ಬಾರಿಸ್ತೇವೆ..” ಅನ್ನುವ ಭಾವವನ್ನು ಯಾವ ನಾಗರೀಕ ಸಮಾಜವೂ ಒಪ್ಪುವದಿಲ್ಲ.ಕ್ಷಮಿಸಿ,ಎಲ್ಲೋ ಒಂದು ಕಡೆ ನಿಮ್ಮ ಮಾತಿನ ಅರ್ಥ ಇದೇ ಧ್ವನಿಯನ್ನು ಹೊರಡಿಸುತ್ತಿದೆ ಅಂತ ಭಾವಿಸಿ ಇದನ್ನೆಲ್ಲ ಹೇಳಬೇಕಾಯಿತು.ಇದು ನನ್ನ ತಪ್ಪು ತಿಳುವಳಿಕೆಯೇ ಆಗಿದ್ದಲ್ಲಿ ನಿಮ್ಮ ಕ್ಷಮೆ ಇರಲಿ..

  8. ಮಂಜುನಾಥ ಕೊಳ್ಳೇಗಾಲ

    ಕಾರ್ತಿಕ್, “ಕೇವಲ ಬ್ರಾಹ್ಮಣನಾಗಿ ಮಾತಾಡುತ್ತಿದ್ದರೆ ನಮ್ಮಲ್ಲಿ ನಾನೊಬ್ಬನಾಗುತ್ತಿದ್ದೆ” – ಬಹುಶಃ ಇಲ್ಲಿ ಅತಿಯಾದ ಪೂರ್ವಗ್ರಹ ಕೆಲಸ ಮಾಡಿರುವಂತಿದೆ. ಇಲ್ಲಿ ಬ್ರಾಹ್ಮಣಜನಾಂಗದ ವಿಷಯ ಬಂದ ಕಾರಣಕ್ಕೆ ಅದನ್ನು (ಜನಾಂಗವೊಂದನ್ನು target ಮಾಡುವುದನ್ನು) ವಿರೋಧಿಸಬೇಕಾಯಿತೇ ಹೊರತು ಬ್ರಾಹ್ಮಣರ ಬಗ್ಗೆ ಬ್ರಾಹ್ಮಣ್ಯದ ಬಗ್ಗೆ ವಿಶೇಷ ಪ್ರೀತಿಯಿಂದಲ್ಲ. ಹಾಗೊಂದುವೇಳೆ ನನಗೆ ವಿಶೇಷ ಪ್ರೀಯಿಯಿದ್ದರೆ ಅದು ವೈಯಕ್ತಿಕ, ಜೊತೆಗೆ ಕೆಟ್ಟದೇನು ಅಲ್ಲ (ಅದರಿಂದ ಮತ್ತೊಬ್ಬರಿಗೆ ಅನ್ಯಾಯವಾಗದಿರುವ ವರೆಗೆ). ಇಲ್ಲಿ ಬ್ರಾಹ್ಮಣರು ಚರ್ಚೆಯ ವಸ್ತುವಾದ್ದರಿಂದ ಬ್ರಾಹ್ಮಣರ ಬಗ್ಗೆ ಮಾತಾಡುತ್ತಿದ್ದೇನೆ. ಹಾಗೆಯೇ ಮುಸ್ಲಿಮರು ಚರ್ಚೆಯ ವಸ್ತುವಾಗಿರುವಲ್ಲಿ ಮುಸ್ಲಿಮರ ಬಗ್ಗೆ ಮಾತಾಡಿ ಅಲ್ಲೂ ಇದೇ ರೀತಿಯ ವಿರೋಧ ಕಟ್ಟಿಕೊಂಡದ್ದಿದೆ. ಇದನ್ನು ನನ್ನ ಪ್ರಗತಿಪರ ಧೋರಣೆ ತೋರಿಸಿಕೊಳ್ಳಲು ಹೇಳುತ್ತಿಲ್ಲ, ತಮ್ಮ ಪೂರ್ವಗ್ರಹ ಚರ್ಚೆಯ ದಿಕ್ಕು ತಪ್ಪಿಸದಿರಲೆಂದು ಉದ್ದೇಶವಿಟ್ಟು ಹೇಳುತ್ತಿದ್ದೇನೆ.

    “ಚಪ್ಪಲಿ ಹೊಲೆಯಲು ಮತ್ತೊಬ್ಬ ಬೇಕು, ಹೊಲಸು ಎತ್ತಲು ಒಬ್ಬ ಬೇಕು ಆದರೆ ಅವನನ್ನು ಕಂಡರೆ ಅಸಹ್ಯಿಸಿಕೊಳ್ಳುತ್ತೇವೆ” ಖಂಡಿತಾ ಇದು ಕಳಂಕದ ಮನಸ್ಥಿತಿಯೇ ಸರಿ, ಆದರೆ ನಾವು ಇವತ್ತಿನ ದೃಷ್ಟಿಕೋನದಿಂದ ನೆನ್ನೆಯನ್ನು ಜಡ್ಜ್ ಮಾಡುತ್ತಿದ್ದೇವೆ ಎಂಬುದನ್ನು ಮರೆಯಬಾರದು. ನಾಗರಿಕತೆಯ ವಿವಿಧ ಹಂತಗಳಲ್ಲು ಮನುಷ್ಯರು, ಜನಾಂಗಗಳು ಬೆಳೆಯುತ್ತಾ, ಅರಿಯುತ್ತಾ ಹೋಗುತ್ತವೆ. ಆ ಕಾಲಕ್ಕೆ ಅದೇ ಸರಿಯೆನಿಸಿತ್ತು. ದಿನಗಳೆದಂತೆ ಅದು ತಪ್ಪೆಂಬ ಅರಿವು ಮೂಡಿತು. ನೆನ್ನಿನ ಬಗ್ಗೆ ಮಾತಾಡುತ್ತೀರಲ್ಲ, ಇವತ್ತಿನ ಅದೆಷ್ಟು ಬ್ರಾಹ್ಮಣರು ಹಾಗೆ ಮಾಡುತ್ತಾರೆ? ನೆನ್ನಿನ ತಪ್ಪಿಗೆ ಇವತ್ತಿಗೆ ಶಿಕ್ಷೆಯೇ? ಅದರಿಂದ ಪ್ರಯೋಜನವಾದರು ಏನು? ಅದಿರಲಿ, ಹೀಗೆ ಚಮ್ಮಾರನನ್ನೂ ಜಾಡಮಾಲಿಯನ್ನೂ ಕಂಡು ಅಸಹ್ಯಿಸಿಕೊಳ್ಳುತ್ತಿದ್ದವರು ಬರೀ ಬ್ರಾಹ್ಮಣರೇನೇ? ಮತ್ತಾರೂ ಇರಲಿಲ್ಲವೇ? ಅಂದಮೇಲೆ ಮತ್ತಾರಮೇಲೂ ಕೂಡದ ಗೂಬೆ ಬ್ರಾಹ್ಮಣರ ಮೇಲಷ್ಟೇ ಏಕೆ? ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಭಯೋತ್ಪಾದಕರ ಕಾರಣಕ್ಕಾಗಿ ಇಡೀ ಒಂದು ಸಮುದಾಯವನ್ನೇ ಟೆರರಿಷ್ಟ್ ಗಳೆಂದು ಜರಿದಂತಲ್ಲವೇ ಈ ಮನಸ್ಥಿತಿ?

    ಅಂದಹಾಗೆ ಕ್ಷಮಿಸಿ, ತಮ್ಮ ಬರಹ ಓದಲು ಬಹಳ ಕಷ್ಟವಾಗಿದೆ. ಇದು ತಾವು ಬಳಸುತ್ತಿರುವ ಸಾಫ್ಟ್ ವೇರಿನ ತೊಂದರೆಯೋ ಅಥವಾ ತಮ್ಮ ಟೈಪಿಂಗಿನ ತೊಂದರೆಯೋ ತಿಳಿಯುತ್ತಿಲ್ಲ. ಬದಲಿಗೆ ತಾವು ಇಂಗ್ಲಿಷಿನಲ್ಲೇ ಬರೆದರೂ ಅನುಕೂಲವೇ.

  9. kartheek

    ದೇವಸ್ಥಾನದ ಆವರಣದ ಒಳಗೆ ಇಸ್ಟೆಲ್ಲಾ ಮಡಿ-ಮೈಲಿಗೆ ತೋರಿಸುವ ನಾವು, ಆಚೆ ಬಂತೆಂದರೆ ಅಧೆ ಬಾರಿನಲ್ಲಿ ಕುಳಿತು ಕಂಠ ಪೂರ್ತಿ ಕುಡಿಧು ಮತ್ತಿನಲ್ಲಿ cigerate ಗೆ ಬೆಂಕಿ ಹಚಲು ಪರಧಾದುಥೆವೆ. ಮಡಿ – ಮೈಲಿಗೆ ಯಲ್ಲಿ ಎಲ್ಲರನ್ನು ಧೂರ ಇದುವ ನಾವು, ಭೀಧಿ – ಭಾದಿಯಲ್ಲಿ ಮಾರುವ ಪಾನಿ ಪುರಿ ಗಾಡಿಯಲ್ಲಿ ಅವನ ಕೊಳಕು ಉಗುರಿನಿನ್ಧ ಒದೆಧು ಕೊಡುವ ಪಾನಿ ಪುರಿಯನ್ನು, ನಾವು ತಿನ್ಧು ನಯವಾಗಿಯೇ ಕಾರವನ್ನು ನೆತಿಗೆ ಹತ್ತಿಸಿಕೊಳ್ಳುಥೆವೆ…..ಬೇಕೆಂದಾಗ ಮಡಿ-ಮೈಲಿಗೆ ಎಂಧು, ಬೇಡವೆಂದಾಗ ಮೋಜಿಗೆ ಇಳಿಧು ಜೀವನ ನಡೆಸುವುಧು ಒಂದು ಬ್ರಹ್ಮನಥನವೇ…..??? ನಮಗೆ ಬ್ರಾಹ್ಮೀ ಬೇಕಿದ್ದರೆ ಅದು ನಮ್ಮ ಮನೆಯ ಒಳಗೆ ಇತ್ತು ಕೂಡಿ ಹಾಕಿ ಕೊಂದು ಆಚರಿಸಬೇಕು…. ಸಾರ್ವಜನಿಕರು ಪ್ರದರ್ಶಿವುದಲ್ಲ…..!!! ಇಷ್ಟು ದಿನ ನಮ್ಮ ಬೇಡಧ ಆಟವನ್ನು ಪಾಪ ಮುಗ್ಧ ಜನರು ಸಹಿಸಿಕೊಂದದ್ದಕ್ಕೆ ನಾವು ವಿಶಾದಿಸಬೇಕು, ಸಾರ್ವಜನಿಕ ವಾಗಿ ಕ್ಷಮೆ ಕೋರಬೇಕು….ಅದು ಬಿಟ್ಟು ಇನ್ನು ತಮ್ಮ ಉಬ್ಬು ಹಲ್ಲು ಗಳನ್ನೂ ಹೊರ ಚಾಚಿ ತಲೆ-ಪ್ರತಿಷ್ಠೆ ತೋರಿದರೆ,ಇಷ್ಟು ದಿನ ನಿಮ್ಮ(ನಮ್ಮ) ಅದೃಷ್ಟ ಸರಿ ಇತ್ಹೆಂಧು ಭಾವಿಸುಥೆನೆ ,ಹೊಲಸೆತ್ತುವವರು ಬುಟ್ಟಿಯ ಸಮೇತ ನಿಮ್ಮ ತಲೆಯ ಮೇಲೆ ಸುರಿಯಲಿಲ್ಲ, ಹಾಗೆ ಚಪ್ಪಲಿ ಹೊಲೆಯುವಾಥ ನಿಮ್ಮ ಹೊಲೇಧ ಚಪ್ಪಲಿಯನ್ನು ನಿಮ್ಮ ಮುಕಕ್ಕೆ ಎಸೆಯಲಿಲ್ಲ…..ಅದು ನಿಮ್ಮ(ನಮ್ಮ) ಪುಣ್ಯ……

  10. ಮಂಜುನಾಥ ಕೊಳ್ಳೇಗಾಲ

    ಕಾರ್ತೀಕರೇ, ಅದೇಕೋ ಈ ಚರ್ಚೆ ದಿಕ್ಕು ತಪ್ಪುತ್ತಿರುವಂತಿದೆ. ನಾನಾಗಲೇ ಹೇಳಿದೆ:

    ““ಚಪ್ಪಲಿ ಹೊಲೆಯಲು ಮತ್ತೊಬ್ಬ ಬೇಕು, ಹೊಲಸು ಎತ್ತಲು ಒಬ್ಬ ಬೇಕು ಆದರೆ ಅವನನ್ನು ಕಂಡರೆ ಅಸಹ್ಯಿಸಿಕೊಳ್ಳುತ್ತೇವೆ” ಖಂಡಿತಾ ಇದು ಕಳಂಕದ ಮನಸ್ಥಿತಿಯೇ ಸರಿ, ಆದರೆ ನಾವು ಇವತ್ತಿನ ದೃಷ್ಟಿಕೋನದಿಂದ ನೆನ್ನೆಯನ್ನು ಜಡ್ಜ್ ಮಾಡುತ್ತಿದ್ದೇವೆ ಎಂಬುದನ್ನು ಮರೆಯಬಾರದು. ನಾಗರಿಕತೆಯ ವಿವಿಧ ಹಂತಗಳಲ್ಲು ಮನುಷ್ಯರು, ಜನಾಂಗಗಳು ಬೆಳೆಯುತ್ತಾ, ಅರಿಯುತ್ತಾ ಹೋಗುತ್ತವೆ. ಆ ಕಾಲಕ್ಕೆ ಅದೇ ಸರಿಯೆನಿಸಿತ್ತು. ದಿನಗಳೆದಂತೆ ಅದು ತಪ್ಪೆಂಬ ಅರಿವು ಮೂಡಿತು. ನೆನ್ನಿನ ಬಗ್ಗೆ ಮಾತಾಡುತ್ತೀರಲ್ಲ, ಇವತ್ತಿನ ಅದೆಷ್ಟು ಬ್ರಾಹ್ಮಣರು ಹಾಗೆ ಮಾಡುತ್ತಾರೆ? ನೆನ್ನಿನ ತಪ್ಪಿಗೆ ಇವತ್ತಿಗೆ ಶಿಕ್ಷೆಯೇ? ಅದರಿಂದ ಪ್ರಯೋಜನವಾದರು ಏನು? ಅದಿರಲಿ, ಹೀಗೆ ಚಮ್ಮಾರನನ್ನೂ ಜಾಡಮಾಲಿಯನ್ನೂ ಕಂಡು ಅಸಹ್ಯಿಸಿಕೊಳ್ಳುತ್ತಿದ್ದವರು ಬರೀ ಬ್ರಾಹ್ಮಣರೇನೇ? ಮತ್ತಾರೂ ಇರಲಿಲ್ಲವೇ? ಅಂದಮೇಲೆ ಮತ್ತಾರಮೇಲೂ ಕೂಡದ ಗೂಬೆ ಬ್ರಾಹ್ಮಣರ ಮೇಲಷ್ಟೇ ಏಕೆ? ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಭಯೋತ್ಪಾದಕರ ಕಾರಣಕ್ಕಾಗಿ ಇಡೀ ಒಂದು ಸಮುದಾಯವನ್ನೇ ಟೆರರಿಷ್ಟ್ ಗಳೆಂದು ಜರಿದಂತಲ್ಲವೇ ಈ ಮನಸ್ಥಿತಿ?”

    ಇದನ್ನು ನೀವು ಬಹುಶಃ ಓದಿದಂತಿಲ್ಲ, ಅಥವ ಓದಿದ್ದರೂ ನೀವು ಇವೇ ಮಾತುಗಳನ್ನು repeat ಮಾಡುತ್ತಿದ್ದರೆ ಇದರಬಗ್ಗೆ ನಾನೇನೂ ಹೇಳುವುದು ಉಳಿದಿಲ್ಲ. ಇನ್ನು ನಿಮ್ಮ ಇತರ ಮಾತುಗಳು “ಇಷ್ಟು ದಿನ ನಮ್ಮ ಬೇಡಧ ಆಟವನ್ನು ಪಾಪ ಮುಗ್ಧ ಜನರು ಸಹಿಸಿಕೊಂದದ್ದಕ್ಕೆ ನಾವು ವಿಶಾದಿಸಬೇಕು, ಸಾರ್ವಜನಿಕ ವಾಗಿ ಕ್ಷಮೆ ಕೋರಬೇಕು….ಅದು ಬಿಟ್ಟು ಇನ್ನು ತಮ್ಮ ಉಬ್ಬು ಹಲ್ಲು ಗಳನ್ನೂ ಹೊರ ಚಾಚಿ ತಲೆ-ಪ್ರತಿಷ್ಠೆ ತೋರಿದರೆ,ಇಷ್ಟು ದಿನ ನಿಮ್ಮ(ನಮ್ಮ) ಅದೃಷ್ಟ ಸರಿ ಇತ್ಹೆಂಧು ಭಾವಿಸುಥೆನೆ ,ಹೊಲಸೆತ್ತುವವರು ಬುಟ್ಟಿಯ ಸಮೇತ ನಿಮ್ಮ ತಲೆಯ ಮೇಲೆ ಸುರಿಯಲಿಲ್ಲ, ಹಾಗೆ ಚಪ್ಪಲಿ ಹೊಲೆಯುವಾಥ ನಿಮ್ಮ ಹೊಲೇಧ ಚಪ್ಪಲಿಯನ್ನು ನಿಮ್ಮ ಮುಕಕ್ಕೆ ಎಸೆಯಲಿಲ್ಲ…..ಅದು ನಿಮ್ಮ(ನಮ್ಮ) ಪುಣ್ಯ” ಅದೇಕೋ ಒಂದೇ ಜನಾಂಗದ ಬಗ್ಗೆ ನಿಮಗಿರುವ ವಿಪರೀತ ಅಸಹನೆಯನ್ನು ತೋರಿಸುತ್ತವೆ, ತೀರ ವೈಯಕ್ತಿಕ ಮಟ್ಟಕ್ಕಿವೆ ಈ ಮಾತುಗಳು. ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ, ನನಗಂತೂ ಉಬ್ಬು ಹಲ್ಲಿಲ್ಲ (ಬೇಕೆಂದರೆ ತಮಗೆ ನನ್ನ ಫೋಟೋ ಕಳಿಸುತ್ತೇನೆ) ಆದ್ದರಿಂದ ಉಬ್ಬುಹಲ್ಲುಗಳನ್ನು ಹೊರಚಾಚಿ ಪ್ರತಿಷ್ಟೆ ತೋರುವ ಮಾತೇ ಇಲ್ಲ. ಯಾರೋ ಮಾಡುವ (ಮಾಡಿದ) ತಪ್ಪಿಗೆ ನಾನು ವಿಷಾದಿಸಬಹುದೇ ಹೊರತು ಕ್ಷಮೆ ಕೋರುವ ಅಗತ್ಯವೇನೂ ಇಲ್ಲ. ಹಾಗೂ ನನ್ನ ಜಾತಿಯ ಕಾರಣಕ್ಕಾಗಿ ಯಾವನೋ ಬುಟ್ಟಿಯ ಸಮೇತ ನನ್ನ ತಲೆಯ ಮೇಲೆ ಸುರಿದರೆ, ಅಥವ ಚಪ್ಪಲಿಯನ್ನು ನನ್ನ ಮುಖಕ್ಕೆ ಎಸೆದರೆ ಅದಕ್ಕೆ ತಿರುಗಿಸಿ ಬಿಡುವ ಬಗೆ ನನಗೆ ಗೊತ್ತು. ಕೇವಲ ಉಪಚಾರಕ್ಕಾಗಿ “ನಮ್ಮ” ಎಂದು ಬ್ರಾಕೆಟ್ಟಿನಲ್ಲಿ ಸೇರಿಸಿಬಿಟ್ಟ ಮಾತ್ರಕ್ಕೆ ನೀವು ಬಳಸಿದ “ನಿಮ್ಮ” ಪದದಲ್ಲಿರುವ “ಥೂ”ಕಾರವಾಗಲೀ ಅಸಹನೆಯಾಗಲೀ ಮರೆಯಾಗುವುದಿಲ್ಲ. ಅಂದ ಹಾಗೆ ಬ್ರಾಹ್ಮಣನೆಂಬ “ಮುಸುಕು” ಇಟ್ಟುಕೊಂಡು ತಾವು ಇದನ್ನೆಲ್ಲಾ ಬರೆಯಬೇಕಿಲ್ಲ. You can come out in open and write with your original identity. Of course, it is your right 🙂

    ಮತ್ತೆ, ಚರ್ಚೆ ದಿಕ್ಕು ತಪ್ಪುತ್ತಿದೆಯೆನ್ನಿಸುತ್ತಿದೆ. ದಿವಾಕರರ ಉತ್ತರಕ್ಕೆ ಕಾಯೋಣ.

  11. ಸಂದೀಪ್ ಕಾಮತ್

    ಹಿಂದಿನ ಕಾಲದಲ್ಲಿ ನಡೆದ ಅಚಾತುರ್ಯಗಳನ್ನೇ ಇಂದಿಗೂ ನಡೆಯುತ್ತಿವೆ ಅನ್ನೋದು ಅಷ್ಟೊಂದು ಸರಿಯಲ್ಲ.

    ಹೊಲಸು ಎತ್ತೋದರ ಬಗ್ಗೆ ಮಾತಾಡೋವಾಗ ಹೋಟಲ್ ಗಳಲ್ಲಿ ಎಂಜಲು ಪಾತ್ರೆ ತಿಕ್ಕೋರ ಬಗ್ಗೆ ಯಾರೂ ಯೋಚಿಸಲ್ಲ. ಅಥ ಕೆಲಸ ಮಾಡೋರು ಯಾವುದೇ ಜಾತಿಗೆ ಸಿಮೀತರಾದವರಲ್ಲ. ಅವರೆಲ್ಲಾ ಪಾಪ ಯಾವುದೋ ದುರದೃಷ್ಟಕ್ಕೆ ಸಿಲುಕಿದವರು.

    ಚಪ್ಪಲಿ ಹೊಲೆಯೋದೂ ಈಗ ಯಾವುದೇ ಜಾತಿಗೆ ಸೀಮಿತವಾದ ಕೆಲಸ ಅಲ್ಲ. ಬಾಟಾ, ಲಿಬರ್ಟಿ ಅಂಥ ಕಂಪನಿಗಳಲ್ಲಿ ಕೆಲಸ ಮಾಡೋರೂ ಯಾವುದೇ ಜಾತಿಗೆ ಸೀಮಿತರಾದವರಲ್ಲ.

  12. ರಾಘವೇಂದ್ರ ಜೋಶಿ

    ಇಲ್ಲಿ “ಮುಸುಕುಧಾರಿ”ಗಳ ಪಾತ್ರ ನನಗೆ ಎದ್ದುಹೊಡೆಯುತ್ತಿರುವದರಿಂದ ಮತ್ತು ಇಂಥವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವದು ನಿರರ್ಥಕ ಅನಿಸುತ್ತಿದೆಯಾದ್ದರಿಂದ ನಾನು ಈ ಚರ್ಚೆಯಿಂದ ಹೊರಗೆ ಹೋಗುತ್ತಿದ್ದೇನೆ.It’s ridiculous and disgusting!

  13. Balu

    ಕಾರ್ತೀಕ ಅವರೇ,
    ಸಾರ್ವಜನಿಕವಾಗಿ ವಿಷಾದಿಸಬೇಕು , ಕ್ಷಮೆ ಕೇಳಬೇಕು? ಹಾಗು ಎಲ್ಲ ಸೇರಿ brahmanarannu tulibeku ?
    ಅಂದು ನೀವು ಹಾಗೆ ಮಾಡಿದಿರಿ, ಅದಕ್ಕೆ ಇಂದು ನಾವು ನಿಮ್ಮನ್ನು ತುಳಿಯುತ್ತೇವೆ ಅನ್ನುವುದು ಒಂದು ಹೀನ ಮನಸ್ತಿತಿಯೇ ಹೊರತು ಸಮಾಜದ ಒಳಿತಿಗಂತೂ ಅಲ್ಲ. ಮತ್ತೊಂದು ಮಾತು, ಅಸ್ಪ್ರುಷ್ಯತೆಯನ್ನು ಕೇವಲ ಬ್ರಾಹ್ಮಣರು ಮಾತ್ರ ಮಾಡುತ್ತಿದ್ದರ? ಉದಾ: ಚಮ್ಮಾರರನ್ನು ಬೇರೆಲ್ಲಾ ಜಾತಿಯವರು ಮನೆಯೊಳಗೇ ಕರೆದು ಕೂರಿಸಿ ಊಟ ಹಾಕುತ್ತಿದ್ದರ? ನೀವು ಹಾಗೆ ತಿಳಿದು ಕೊಂಡಿದ್ದರೆ ತಪ್ಪು, ಇತಿಹಾಸ ಸ್ವಲ್ಪ ನೋಡುವುದು ಒಳಿತು.
    ಅದೇನೋ ಹೇಳಿದ್ರಲ್ಲ ಸಾರ್ವಜನಿಕವಾಗಿ ಕ್ಷಮೆ? ಅವರು ಕೇಳದೆ ಇದ್ರೆ? ಎಲ್ಲ ಸೇರಿ ಕೇಳೋ ಹಾಗೆ madabeku ತಾನೇ ನಿಮ್ಮ ಅರ್ಥ. ನೂರಾರು ವರುಷಗಳ ಹಿಂದೆ ಘಜನಿ ಭಾರದ ಮೇಲೆ ಹಲವಾರು ಭಾರಿ ಧಾಳಿ ಮಾಡಿದ, ಕೊಂದ, ಅತ್ಯಾಚಾರ, ಸುಲಿಗೆ ಎಲ್ಲಾ ಮಾಡಿದ. ಈಗ ನಾವು ಪಾಕಿಕೆ ಹೋಗಿ ಹಂಗೆ ಮಾಡಬೇಕ?
    ಬೇಡ ಬಿಡಿ. ಇಗ ಧಾರ್ಮಿಕ ವಿಚಾರಕ್ಕೆ ಹೋಗೋಣ. ಹಿಂದೊಮ್ಮೆ ಭಾರತದಲ್ಲಿ ಜೈನ ಧರ್ಮ ವ್ಯಾಪಕವಾಗಿ ಬೆಳೀತಾ ಇತ್ತು. ಅದನ್ನು ತಡೆಯಲು ದೇಶದ ತುಂಬೆಲ್ಲಾ ಹಿಂದೂ ಧರ್ಮದ ಬಗ್ಗೆ ಪ್ರಚಾರ ಹುಟ್ಟಿತು ಅದೆಷ್ಟೋ ಬಸದಿಗಳು ದೇಗುಲಗಲಾದವು. (ತಿರುಪತಿ ತಿಮ್ಮಪ್ಪ ನ ದೇಗುಲ ಕೂಡ ಜೈನರಿಗೆ ಸೇರಿದ್ದು ಅನ್ನೋ ಮಾತು ಕೇಳಿದ್ದಿರ? ನಿಮ್ಮ ಮಾತಿನ ಪ್ರಕಾರ ಎಲ್ಲ ವಾಪಸ್ ಜೈನ ಧರ್ಮಕ್ಕೋ, ಬೌದ್ದ ಧರ್ಮಕ್ಕೋ ಹೋಗಬೇಕ? ನಿಮಗೆ ತಿರುಪತಿ ಉದಾಹರಣೆ ಯಾಕೆ ಕೊಟ್ಟೆ ಅಂದ್ರೆ ಅಲ್ಲಿಗೆ ಕೇವಲ ಬ್ರಾಹ್ಮಣರು ಅಂತ ಇಲ್ಲ. ಎಲ್ಲಾ ಪಂಗಡವರು ಹೋಗ್ತಾರೆ. )

  14. Rankusa

    dude kartheek,

    lemme tell you that i lost interest in this discussion the moment it took the shape of bashing/defending a particular caste. it just doesn’t make any sense to me; and won’t make until you guys start fighting for the removal of the “caste system” altogether (which as it is evident, none of you is interested in). anyway,

    but you know what, though they are not interested, people still cling to the discussion in order to enjoy the usage of the language at least. and it really hurts to witness the most beautiful language in the world (my personal opinion) getting mercilessly slaughtered in your hands. i hope it has happened due to time constraint but not because of illiteracy. please invest time on getting your words typed right, and try your level best to be grammatically correct. worst case, take the help of a friend who knows the language to express your views. thanks in advance!

    and FYI, if i were in any of the person’s shoes that you have been arguing with here, i wouldn’t even have entertained you coz of the poor usage of the language. it is irritating even to read such carelessly written stuff and at times, it can simply reflect how much learned a person is….

    regs,
    -r

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading