ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅನಭಿಜ್ಞ ಶಾಕುಂತಲೆಗೆ ಈಗ ನೂರರ ನಿರೀಕ್ಷೆ!’ – ಪ್ರಕಾಶ್ ಶೆಟ್ಟಿ

2012 ಏಪ್ರಿಲ್ 27, ರವೀಂದ್ರ ಕಲಾಕ್ಷೇತ್ರದಲ್ಲಿ ಅನಭಿಜ್ಞ ಶಾಕುಂತಲ ನಾಟಕ. ನಾಟಕ ನೋಡಿ ಹೊರಬಂದವರು ಜೊನ್ನ ಮಳೆಯಲ್ಲಿ ತೊಯ್ದಂತಿದ್ದರು. ನಾಟಕ, ನಿರ್ದೇಶನ, ಸಂಗೀತ, ನಟನೆ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ ಎಲ್ಲವೂ ಅಲ್ಲಿ ಗೆದ್ದಿತ್ತು. ಹಾಗೆ ಆ ಎಲ್ಲಾ ಅಂಶಗಳೂ ಪರಸ್ಪರ ಪೂರಕವಾಗಿ ಗೆದ್ದಾಗ ಅಂತಹ ಒಂದು ನಾಟಕ ಮೂಡಿಬರುತ್ತದೆ. ನಾಟಕದ ರಚನೆ – ನಾಟಕಗಳಿಗೆ ಕಾವ್ಯದ ತೀವ್ರತೆ ಕಟ್ಟಿಕೊಡುವ ಕೆ ವೈ ನಾರಾಯಣಸ್ವಾಮಿ ಅವರದ್ದು, ನಿರ್ದೇಶನ – ಅದು ಮೊದಲ ನಾಟಕ ಎಂದು ಯಾರಿಗೂ ಅನಿಸದ ಹಾಗೆ ಅದ್ಭುತವಾಗಿ ನಿರ್ದೇಶಿಸಿದ ಪ್ರಕಾಶ್ ಶೆಟ್ಟಿ, ಸಂಗೀತ – ನಾರಾಯಣ ರಾಯಚೂರು, ಹಾಡಿದವರು ರಾಮಚಂದ್ರ ಹಡಪದ್, ವಸ್ತ್ರಾಲಂಕಾರ ಎನ್ ಮಂಗಳಾ, ರಂಗಸಜ್ಜಿಕೆ ಅಪ್ಪಯ್ಯ, ಬೆನ್ನಿಗೆ ನಿಂತಿದ್ದವರು ’ಪ್ರಸಂಗ’ ತಂಡದ ರೂವಾರಿ ಕೃಷ್ಣ ರಾಯಚೂರು, ಜೊತೆಯಲ್ಲಿ ಒಂದು ಅದ್ಭುತ ನಟವರ್ಗ. ಹೀಗೆ ಒಂದು ಇಡೀ ತಂಡ ತಮ್ಮೆಲ್ಲಾ ಕಸುವನ್ನೂ ಸುರಿದು ಕಟ್ಟಿದ ನಾಟಕ ಅದು. ನಾಟಕ ಮುಗಿದಾಗ ನಾಟಕದ ಯಶಸ್ಸಿನ ಬಗ್ಗೆ ನೋಡಿದವರ್ಯಾರಿಗೂ ಅನುಮಾನವೇ ಇರಲಿಲ್ಲ. ಅಂದು ಕಲಾಕ್ಷೇತ್ರದ ಮೆಟ್ಟಿಲುಗಳನ್ನು ಇಳಿಯುವಾಗ ಇಷ್ಟು ದಿನ ನಾಟಕದ ರಚನಕಾರರನ್ನು ಕಾಡಿದ ’ನೇಸ್ತುಡಾ, ನೆಲಬಾಲುಡಾ..’ ಎಲ್ಲರ ಗೆಳೆಯನಾಗಿದ್ದ, ಎಲ್ಲರ ಹಾಡಾಗಿದ್ದ.
ಅನಭಿಜ್ಞ ಶಾಕುಂತಲ ಹಲವು ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ತನ್ನ ೫೦ ನೆಯ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಆಗಸ್ಟ್ ೨ ರಂದು ರಂಗಶಂಕರದಲ್ಲಿ ನಾಟಕದ ೪೯ ಮತ್ತು ೫೦ ನೆಯ ಪ್ರದರ್ಶನ. ಈ ಸಂದರ್ಭದಲ್ಲಿ ನಾಟಕದ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಅವರು ’ಅನಭಿಜ್ಞ…’ ಮೂಡಿ ಬಂದ ಬಗೆಯನ್ನು ’ಅವಧಿ’ಯೊಡನೆ ಹಂಚಿಕೊಂಡಿದ್ದು ಹೀಗೆ :

ಮೊದಲ ಸಲ ’ಅನಭಿಜ್ಞ ಶಾಕುಂತಲ’ ಓದಿದಾಗ ನಿಮಗೆ ಬಂದ ಭಾವನೆ ಏನು?
ನಾಟಕವನ್ನು ನಾನು ಮೊದಲು ’ಓದಲಿಲ್ಲ’, ಕೇಳಿದೆ. ಕೇಳಿದ ಕೂಡಲೇ ಇದು ಒಳ್ಳೆ ನಾಟಕವಾಗುತ್ತದೆ ಅನ್ನಿಸಿತು. ಮೊದಲ ಸಲ ನಾಟಕ ಓದಿದಾಗ ಅದು ಈಗಿರುವ ಹಾಗೆ ಇರಲಿಲ್ಲ. ಮೂರ್ನಾಲ್ಕು ಸಲ ಬದಲಾವಣೆ ಆಗಿ ಬಂದ ನಾಟಕ ಇದು. ನಾಟಕವನ್ನು ನಿರ್ದೇಶಿಸುವ ಮೊದಲು ನಾನು ಒಂದು ವಿಷಯದಲ್ಲಿ ಸ್ಪಷ್ಟವಾಗಿದ್ದೆ, ನಾಟಕ ಮೊದಲು ನನಗೆ ಅರ್ಥವಾಗಬೇಕು, ಹಾಗಾದಾಗ ನಾನು ಅದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸಬಲ್ಲೆ ಅಂತ. ನನಗೆ ನಾಟಕ ಕೇವಲ ಬುದ್ಢಿಯ ಕಸರತ್ತಲ್ಲ, ಒಂದು ಅಬ್ ಸ್ಟ್ರಾಕ್ಟ್ ಅನುಭೂತಿ ಅಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ.
ನಾನು ನಾಟಕವನ್ನು ಕೈಗೆತ್ತಿಕೊಳ್ಳುವಾಗ ನನಗೆ ಒಂದು ಭಯ ಇತ್ತು, ಏಕೆಂದರೆ ಅದು ಕೆ ವೈ ನಾರಾಯಣ ಸ್ವಾಮಿ ಅವರ ನಾಟಕ. ಅವರು ಈಗಾಗಲೇ ನಾಟಕಕಾರರಾಗಿ ರಿಜಿಸ್ಟರ್ ಆಗಿದ್ದವರು, ನನಗೆ ಅದು ನಿರ್ದೇಶಕನಾಗಿ ಮೊದಲ ನಾಟಕ. ಕಾಲೇಜು ದಿನಗಳಲ್ಲಿ, ಯೂನಿವರ್ಸಿಟಿಯಲ್ಲಿ, ಸಾಕ್ಷರತಾ ಆಂದೋಲನದಲ್ಲಿ ನಾಟಕ ಮಾಡಿದ್ದೆ, ಆದರೆ ಪ್ರೊಸೇನಿಯಂ ನಾಟಕ ನನಗೆ ಒಂದು ಸವಾಲಾಗಿತ್ತು. ನಾಟಕದೊಂದಿಗೆ ನಡೆಯುತ್ತ, ನಡೆಯುತ್ತ ನನಗೆ ಒಂದು ದೃಶ್ಯಕಲ್ಪನೆ ಮೂಡಲು ಶುರು ಆಯ್ತು. ಮೊದಲು ನನಗೆ ಪೂರ್ತಿ ಸ್ಕ್ರಿಪ್ಟ್ ಸಿಕ್ಕಿರಲಿಲ್ಲ. ಕಥಾಹಂದರ ಇತ್ತು, ಅದನ್ನಿಟ್ಟುಕೊಂಡು ನಾನು ದೃಶ್ಯಗಳನ್ನು ಕಟ್ಟಿಕೊಳ್ಳುತ್ತಿದ್ದೆ. ಮೊದಲ ರೀಡಿಂಗ್ ನಲ್ಲಿ ನನ್ನಲ್ಲಿ ಅಳುಕಿತ್ತು, ಆಮೇಲೆ ಮೂರ್ನಾಲ್ಕು ರೀಡಿಂಗ್ ಗಳಾಗುವಷ್ಟರ ಹೊತ್ತಿಗೆ ನನಗೆ ಅದರ ಮೇಲೆ ಹಿಡಿತ ಸಿಗುತ್ತಿದೆ ಅನ್ನಿಸಿತು.
ನಾಟಕದ ಕಥೆ ಸರಳ ಅನ್ನಿಸಿದರೂ ನಾಟಕದ ತಂತ್ರ ಅಷ್ಟೇನೂ ಸರಳವಲ್ಲ, ಒಂದು ನಾಟಕದಲ್ಲಿ ಭೂತ ಮತ್ತು ವರ್ತಮಾನ ಮುಖಾಮುಖಿ ಆಗುತ್ತಲೇ ಇರುತ್ತದೆ, ಎರಡನೆಯದಾಗಿ ನಾಟಕದ ಪಾತ್ರಗಳು ಮತ್ತು ಕಾಳಿದಾಸನ ಕಾವ್ಯಗಳ ಪಾತ್ರಗಳು ಮುಖಾಮುಖಿ ಆಗುತ್ತಿರುತ್ತವೆ. ಇದನ್ನು ನೀವು ಹೇಗೆ ಟ್ಯಾಕಲ್ ಮಾಡಿದಿರಿ?
ಹೌದು, ಇದನ್ನು ಓದುವಾಗ ಸರಳವಾಗಿ ಕಂಡರೂ ಇದನ್ನು ದೃಶ್ಯವಾಗಿಸುವಾಗ ಅದು ಒಂದು ಸವಾಲು. ನಾಟಕದಲ್ಲಿ ಹಲವಾರು ಫ್ಲಾಶ್ ಬ್ಯಾಕ್ ಗಳು ಇವೆ. ಆದರೆ ನಾಟಕದ ಬಗ್ಗೆ ನನಗೆ ಈಗಾಗಲೇ ಒಂದು ಕ್ಲಾರಿಟಿ ಇತ್ತು. ಅಲ್ಲಿ ದೃಶ್ಯಗಳ ಮತ್ತು ಪಾತ್ರಗಳ ಬಗ್ಗೆ ಒಂದು ಸ್ಪಷ್ಟತೆ ಇತ್ತು. ಹಾಗಾಗಿ ನನಗೆ ಎಲ್ಲೂ ಗೊಂದಲ ಅನ್ನಿಸಲಿಲ್ಲ. ಓದುವಾಗಲೇ ನನಗನ್ನಿಸಿದ್ದು ಭೂತ ಮತ್ತು ವರ್ತಮಾನದ ಪಾತ್ರಗಳನ್ನು ಒಬ್ಬರೇ ಮಾಡುವ ಬದಲು, ಅದನ್ನು ಇಬ್ಬರಿಂದ ಮಾಡಿಸಿದರೆ ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು. ಹಾಗಾಗಿ ಆ ಮೂರೂ ಜನ ಹೆಣ್ಣು ಮಕ್ಕಳ ಪಾತ್ರಗಳನ್ನು ಇಬ್ಬಿಬ್ಬರಿಂದ ಮಾಡಿಸಿದೆ, ಒಂದು ಬಿಂಬ, ಮತ್ತೊಂದು ಪ್ರತಿಬಿಂಬ. ಹಾಗಾಗಿ ನೋಡುವವರಿಗೂ ಎಲ್ಲೂ ಗೊಂದಲ ಉಂಟಾಗಲಿಲ್ಲ, ಒಮ್ಮೆ ನಾಟಕ ನೋಡಿದ ಮೇಲೆ, ’ಅರೆ ಹೌದಲ್ಲ, ಇದು ಇಷ್ಟು ಸರಳವಾಗಿದೆಯಲ್ಲಾ’ ಎಂದೇ ಅನ್ನಿಸುತ್ತಿದೆ. ಆ ಸಂಕೀರ್ಣ ಪರಿಸ್ಥಿಗಳು ಮತ್ತು ಪಾತ್ರಗಳನ್ನು ಸರಳವಾಗಿ ಕಟ್ಟಿಕೊಡುವುದೇ ನಿರ್ದೇಶಕ ಎದುರಿಸುವ ಸವಾಲು ಅನ್ನಿಸಿತು. ಆದರೆ ಈ ಸವಾಲನ್ನು ಸರಳಗೊಳಿಸಿದ್ದು ಚಂಪಾ ಶೆಟ್ಟಿಯನ್ನೂ ಒಳಗೊಂಡು ಇಡೀ ತಂಡ ಎಂದೇ ನನಗನ್ನಿಸುತ್ತದೆ.
ನಾನು ಅನೇಕ ನಾಟಕಕಾರರ ಅದ್ಭುತವಾದ ನಾಟಕಗಳನ್ನು ನೋಡಿದ್ದೇನೆ. ಆದರೆ ಕೆಲವು ನಾಟಕಗಳು ನಾಟಕದ ಹಿನ್ನಲೆ ಇರುವ ನನ್ನಂತಹವನಿಗೇ ಸುಲಭದಲ್ಲಿ ಅರ್ಥ ಆಗುವುದಿಲ್ಲ. ನಮ್ಮ ನಾಟಕ ಹಾಗಾಗಬಾರದು, ಎಲ್ಲರನ್ನೂ ತಾಕಬೇಕು ಎನ್ನುವುದು ನಮ್ಮ ಕಾಳಜಿ ಆಗಿತ್ತು. ಮೊದಲ ಪ್ರದರ್ಶನ ಆದ ಕೂಡಲೇ ನಾನು ನನ್ನ ತಂಗಿಯ ಅಭಿಪ್ರಾಯವನ್ನು ಕೇಳಿದೆ. ಅವಳು ರಂಗಭೂಮಿಯೊಡನೆ ಹೆಚ್ಚಿನ ಒಡನಾಟ ಇರುವವಳಲ್ಲ. ಹೆಚ್ಚಾಗಿ ಸಾಹಿತ್ಯ ಓದಿದವಳೂ ಅಲ್ಲ. ಯಾವಾಗಲೋ ಒಮ್ಮೆ ನಾಟಕ ನೋಡುವವಳು. ಯಾವಾಗ ಅವಳು ನಾಟಕ ಸ್ಪಷ್ಟವಾಗಿ ಅರ್ಥವಾಯಿತು, ಇಷ್ಟ ಆಯಿತು ಎಂದಳೋ ಆಗ ನನಗೆ ಸಮಾಧಾನ ಆಯಿತು.

ಮೊದಲ ಪ್ರದರ್ಶನದಲ್ಲೇ ನೋಡುಗರ ಗಮನ ಸೆಳೆದದ್ದು ರಂಗದ ಮೇಲಿದ್ದ ಕನ್ನಡಿ. ಅದು ಬಿಂಬ ಪ್ರತಿಬಿಂಬವೂ ಹೌದು, ನಾಟಕ ಪಾತ್ರಗಳು ಮೂಡಿಬರುವ ದ್ವಾರವೂ ಹೌದು. ಆ ಕಲ್ಪನೆ ಬಂದದ್ದು ಹೇಗೆ?
ಕನ್ನಡಿ ನಂತರದ ಹಂತದಲ್ಲಿ ಮೂಡಿಬಂದ ಕಲ್ಪನೆಯಲ್ಲ, ನಾಟಕದ ಸ್ಕ್ರಿಪ್ಟ್ ನಲ್ಲೇ ಇತ್ತು. ಕನ್ನಡಿಯೊಳಗಿಂದ ಸೂತ್ರಧಾರ ಬರುತ್ತಾನೆ. ಆ ಕಲ್ಪನೆಯನ್ನು ಸಾಕಾರಗೊಳಿಸುವುದು ನಮಗೆ ನಿಜಕ್ಕೂ ಸವಾಲೇ ಆಗಿತ್ತು. ಆ ಬಗ್ಗೆ ನಮಗೆ ಎರಡು ಮೂರು ಐಡಿಯಾಗಳಿದ್ದವು, ನಾನು ನಮ್ಮ ಕಲಾನಿರ್ದೇಶಕರಿಗೆ ಒಂದು ಐಡಿಯಾ ಕೊಟ್ಟಿದ್ದೆ. ನನ್ನ ಕಲ್ಪನೆಯಲ್ಲಿ ಕನ್ನಡಿ ಎರಡು ಭಾಗವಾಗಿ ಮೂಡಿ ಬರುತ್ತಿತ್ತು. ಆದರೆ ನಮ್ಮ ಕಲಾನಿರ್ದೇಶಕರು ಅದನ್ನು ಮುಂದುವರಿಸಿಕೊಂಡು ಹೋಗಿ ಬ್ಯಾಕ್ ಲೈಟ್ ಮತ್ತು ಕನ್ನಡಿ ಬಳಸಿ ಆ ಕಲ್ಪನೆಯನ್ನು ರಂಗಕ್ಕೆ ತಂದಿದ್ದರು. ಆದರೆ ಇಲ್ಲಿ ನಿರೂಪಕ ಕನ್ನಡಿಯ ಬದಿಯಿಂದ ಮೂಡಿಬರುತ್ತಾನೆ. ಕನ್ನಡಿಯ ನಡುವಿನಿಂದಲೇ ಬಂದಿದ್ದರೆ ಅದು ಇನ್ನೂ ಪರಿಣಾಮಕಾರಿ ಆಗಿರುತ್ತಿತ್ತೇನೋ ಅನ್ನಿಸಿದೆ ನನಗೆ. ಆದರೆ ಈ ಕನ್ನಡಿ ಒಂದು ಮ್ಯಾಜಿಕ್ ರೀತಿ ಕಾಣುತ್ತದೆ. ಹಾಗಾಗಿ ಇದೇ ಒಳ್ಳೆಯದಾಯಿತೇನೋ.
ಇಡೀ ನಾಟಕದಲ್ಲಿ ಒಬ್ಬ ನಿರ್ದೇಶಕನಾಗಿ ನಿಮಗೆ ತುಂಬಾ ಇಷ್ಟವಾದ ದೃಶ್ಯಗಳು ಯಾವುವು?

ಈ ಪ್ರಶ್ನೆಗೆ ಹೇಗೆ ಉತ್ತರಿಸಲಿ?! ಇಡೀ ನಾಟಕ ನಾನೇ ನಿರ್ದೇಶಿಸಿರುವಾಗ?!! ಆದರೂ ಕೆಲವು ದೃಶ್ಯಗಳು ನನಗೆ ತುಂಬಾ ವಿಶೇಷ ಅನ್ನಿಸಿವೆ. ಅದರಲ್ಲಿ ಒಂದು ಆ ಕನ್ನಡಿಯಿಂದ ಪಾತ್ರಗಳು ಮೂಡಿ ಬರುವ ದೃಶ್ಯ, ಇನ್ನೊಂದು ಮೊದಲ ಬಾರಿಗೆ ಆ ಗಂಧರ್ವ ಕನ್ಯೆ ಮೂಡಿ ಬರುವ ದೃಶ್ಯ. ಇಡೀ ನಾಟಕ ಒಂದು ಬೆಳಕಿನ ಯಾತ್ರೆಯಂತಿದ್ದರೆ ಇಂತಹ ದೃಶ್ಯಗಳು ನಡುನಡುವೆ ಒಂದು ಸ್ಪಾರ್ಕ್ ನಂತೆ ಇವೆ.
ನಾಟಕ ನೋಡಿದ ನಂತರ ಗಿರೀಶ್ ಕಾಸರವಳ್ಳಿ ಅವರು ಒಂದು ಮಾತು ಹೇಳಿದರು, ’ಬಹಳ ವರ್ಷಗಳ ನಂತರ ಎಲ್ಲಾ ವಿಭಾಗಗಳಲ್ಲೂ ಪರಿಪೂರ್ಣತೆಯನ್ನು ಕಂಡ ನಾಟಕ ಇದು’ ಎಂದು. ಆಗ ನಮ್ಮ ಶ್ರಮ ಸಾರ್ಥಕವಾಯಿತು ಅನ್ನಿಸಿತ್ತು.
ಬೆಳಕು ಮತ್ತು ರಂಗಪರಿಕರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೀರಿ. ಈ ದಿಕ್ಕಿನಲ್ಲಿ ನೀವು ಹೇಗೆ ಕೆಲಸ ಮಾಡಿದಿರಿ?
ಇಲ್ಲಿ ಬೆಳಕು, ರಂಗಪರಿಕರ ಅದ್ಭುತವಾಗಿ ಬಂತು ಆ ಬಗ್ಗೆ ಎರಡು ಮಾತಿಲ್ಲ, ಆದರೆ ಅಷ್ಟೇ ಸೊಗಸಾಗಿ ಬಂದಿದ್ದು, ನಾರಾಯಣ ರಾಯಚೂರ್ ಸಂಗೀತ, ಹಡಪದ್ ಹಾಡುಗಾರಿಕೆ ಎಲ್ಲವೂ. ಇದು ಒಂದು ಟೀಮ್ ವರ್ಕ್ ಆಗಿದ್ದರಿಂದಲೇ ಗೆಲ್ಲಲು ಸಾಧ್ಯ ಆಯಿತು. ನಾನು ನಿರ್ದೇಶಕನಾಗಿದ್ದರೂ ಇಡೀ ತಾಂತ್ರಿಕ ವರ್ಗ ಆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಗಂಧರ್ವ ಕನ್ಯೆ ಮೇಲಿನಿಂದ ಇಳಿದು ಬರುವ ದೃಶ್ಯ ವಿಶೇಷವಾಗಿ ಕಾಣಬೇಕು ಎಂದುಕೊಂಡಾಗ ಮಂಗಳಾ ಆ ಬಿಳಿ ಬಟ್ಟೆಯ ಐಡಿಯಾ ಕೊಟ್ಟರು. ನಾನು ನನ್ನ ಕಲ್ಪನೆಯ ಕನ್ನಡಿ ಹೇಳಿದಾಗ ಅಪ್ಪಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡಿ ತಯಾರಿಸಿಕೊಟ್ಟರು. ಅಜ ಮತ್ತು ಇಂದುಮತಿಯರ ದೃಶ್ಯವನ್ನೂ ಅಷ್ಟೇ ಇಡೀ ತಂಡ ವಿಶುವಲೈಸ್ ಮಾಡಿತ್ತು. ಹಾಗೆಯೇ ನಂದಕಿಶೋರ್ ಲೈಟಿಂಗ್. ಸಾಧಾರಣವಾಗಿ ಲೈಟಿಂಗ್ ನವರು ಕೊನೆ ಕೊನೆಯಲ್ಲಿ ಇನ್ವಾಲ್ವ್ ಆಗುತ್ತಾರೆ. ಆದರೆ ನಂದಕಿಶೋರ್ ನಾಟಕದ ರೀಡಿಂಗ್ ಹಂತದಿಂದಲೂ ಆ ಪ್ರಕ್ರಿಯೆಯ ಭಾಗವಾಗಿದ್ದು, ಆ ದೃಶ್ಯಗಳಿಗೆ ಬೆಳಕು ನೀಡಿದ್ದಾರೆ.
ಈ ನಾಟಕದಲ್ಲಿ ಕಾಳಿದಾಸ ಸ್ವಂತ ನೆಲೆಯಲ್ಲಿ ಪ್ರಕಟವಾಗುವುದಿಲ್ಲ. ಅವನು ಬರುವುದು ಆ ಮೂರು ಹೆಣ್ಣುಗಳ ನೆನಪಿನ ಭಾಗವಾಗಿ ಮತ್ತು ಆತನ ಕೃತಿಗಳ ಮೂಲಕವಾಗಿ. ನಿಮ್ಮ ಮನಸ್ಸಿನಲ್ಲಿ ನೀವು ಕಾಳಿದಾಸನನ್ನು ಕಟ್ಟಿಕೊಂಡಿದ್ದು ಹೇಗೆ?
ನಿಜ ಹೇಳಬೇಕು ಎಂದರೆ ’ಕವಿರತ್ನ ಕಾಳಿದಾಸ’ ಸಿನಿಮಾ ನೋಡಿದ್ದು ಬಿಟ್ಟರೆ ಆತನ ಯಾವುದೇ ಕೃತಿಯನ್ನು ನಾನು ಪೂರ್ಣವಾಗಿ ಓದಿಲ್ಲ. ಆದರೆ ಈ ನಾಟಕ ಮಾಡುತ್ತೇನೆ ಎಂದಾದಾಗ ಸಾಧ್ಯವಾದಷ್ಟೂ ಅವನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ನಾಟಕದ ಸ್ಕ್ರಿಪ್ಟ್ ನಲ್ಲಿ ಕಾಳಿದಾಸ ಆ ಮೂರು ಹೆಣ್ಣುಗಳ ನೆನಪಿನ ಭಾಗವಾಗಿ ಬಂದರೂ ಆ ನೆನಪುಗಳಿಗೆ ಒಂದಕ್ಕೊಂದು ಕೊಂಡಿ ಇದೆ. ಅವನು ಆ ಮೂರೂ ಪಾತ್ರಗಳಲ್ಲೂ ಬೆಳೆಯುತ್ತಾ ಹೋಗುತ್ತಾನೆ. ಕಾಳಿದಾಸನ ಬಗ್ಗೆ ಪ್ರತಿಯೊಬ್ಬರಲ್ಲೂ ಒಂದು ಕಲ್ಪನೆ ಇರಬಹುದು. ನಾನು ಕಟ್ಟಿಕೊಟ್ಟ ಕಾಳಿದಾಸ ನನ್ನ ಗ್ರಹಿಕೆಗೆ ಸಿಕ್ಕವನು. ನನಗೆ ತುಂಬಾ ಇಷ್ಟವಾಗಿದ್ದೆಂದರೆ ಇಲ್ಲಿ ಕಾಳಿದಾಸ ’ಕವಿರತ್ನ’ ಆಗುವುದಕ್ಕೂ ಮೊದಲು ಸಾಮಾನ್ಯ ಯುವಕನ ರೀತಿಯಲ್ಲೇ ಇದ್ದವನು, ಎಲ್ಲರಂತೆ ಪ್ರೀತಿ, ಪ್ರೇಮ, ಹುಡುಗಾಟ, ಗೊಂದಲಗಳನ್ನು ಉಳ್ಳವನು. ಆ ಎಲ್ಲಾ ಶೇಡ್ ಗಳೂ ಇರುವ ಕಾಳಿದಾಸನನ್ನು ನಾನು ಕಟ್ಟಿಕೊಳ್ಳುತ್ತಾ ಹೋದೆ. ಅದು ಎಷ್ಟರ ಮಟ್ಟಿಗೆ ಗೆದ್ದಿದೆ ಎಂದು ನೋಡಿದವರು ಹೇಳಬೇಕು.
ನಿಮ್ಮ ನಾಟಕದಲ್ಲಿ ಕನ್ನಡಿ ಮತ್ತು ಉಂಗುರ ಎರಡೂ ಪಾತ್ರಗಳೇ. ಅಭಿಜ್ಞಾನ ಶಾಕುಂತಲದಲ್ಲಿ ಒಂದು ಉಂಗುರ ಇರುತ್ತದೆ, ಅನಭಿಜ್ಞದಲ್ಲೂ ಒಂದು ಉಂಗುರ ಇದೆ. ಅಲ್ಲಿ ಉಂಗುರ ನೆನಪನ್ನು ತರುತ್ತದೆ. ಆದರೆ ಈ ಉಂಗುರ ನೆನಪಿನ ನೀರಿಗೆ ಬಿದ್ದಾಗ ಕರಗಿ ಹೋಗುತ್ತದೆ. ಈ ಉಂಗುರ ನಾಟಕದ ಸೂತ್ರ ಆಗಿದ್ದು ಹೇಗೆ?
ಕೆ ವೈ ಎನ್ ತಮ್ಮ ಬಾಲ್ಯದಲ್ಲಿ ಕೇಳಿದ್ದ ಒಂದು ಹಾಡಿನ ನೆನಪಿನ ಎಳೆಯಿಂದ ಮೂಡಿ ಬಂದ ನಾಟಕ ಇದು. ನಾವು ಒಮ್ಮೆ ಪ್ರವಾಸ ಹೋಗಿದ್ದಾಗ ಅವರು ಈ ಹಾಡು ಹಾಡಿದ್ದರು. ಹಾಗೆ ಉಂಗುರದಿಂದಲೇ ಈ ನಾಟಕ ಹುಟ್ಟಿತ್ತು. ಕಾಳಿದಾಸನ ಕಾವ್ಯದಲ್ಲಿ ಅದು ದುಷ್ಯಂತನ ಶಾಕುಂತಲೆಯ ಉಂಗುರ, ಇಲ್ಲಿ ಅದು ಕಾಳಿದಾಸನ ಶಾಕುಂತಲೆಯ ಉಂಗುರ. ಆ ಕೊಂಡಿ ಒಂದಕ್ಕೊಂದು ಪೂರಕವಾಗಿ ಬಂದಿದೆ. ಉಂಗುರ ಸಂಪೂರ್ಣವಾಗಿ ಕೆ ವೈ ಎನ್ ಅವರ ಕಾನ್ಸೆಪ್ಟ್.
ನಿಮ್ಮ ನಾಟಕದಲ್ಲಿ ನಲವತ್ತಕ್ಕೂ ಹೆಚ್ಚು ನಟ ನಟಿಯರಿದ್ದಾರೆ. ಅಂತಹ ದೊಡ್ಡ ತಂಡವನ್ನು ಇಟ್ಟುಕೊಂಡು ನಾಟಕ ಕಟ್ಟುವುದೇ ನಾಟಕಕ್ಕೆ ಒಂದು ಮಿತಿ ಆಗಬಹುದು ಅನ್ನಿಸಲಿಲ್ಲವಾ?
ಈ ನಾಟಕವನ್ನು ನೋಡಿದ ಸುಮಾರು ಜನ ಇದೇ ಮಾತು ಹೇಳಿದ್ದಾರೆ. ಆದರೆ ನನ್ನ ಪ್ರಕಾರ ನೀವು ನಾಲ್ಕೇ ನಾಲ್ಕು ಜನರನ್ನು ಇಟ್ಟುಕೊಂಡು ನಾಟಕ ಮಾಡುವಾಗಲೂ ಈ ಸಮಸ್ಯೆ ಎದುರಾಗಬಹುದು. ಐವತ್ತು ಅರವತ್ತು ಜನರನ್ನು ಸೇರಿಸಿಕೊಂಡು ನಾಟಕ ಮಾಡುವಾಗ ಈ ಸಮಸ್ಯೆಯ ಪ್ರಮಾಣ ಸ್ವಲ್ಪ ಹೆಚ್ಚಾಗಬಹುದೇ ಹೊರತು, ಅಸಾಧ್ಯ ಏನೂ ಇಲ್ಲ. ನಾವು ’ಗಾಂಧಿ ಬಂದ’ ಮಾಡಿದಾಗಲೂ ಬಹಳಷ್ಟು ಜನ ಇದೇ ಮಾತನ್ನು ಕೇಳಿದ್ದರು. ನಮಗೆ ಒಳಗೆ ಒಂದು ಅಳುಕಿದ್ದರೂ ಈ ನಾಟಕ ಅಷ್ಟು ನಟರನ್ನು ಕೇಳುವ ಸಬ್ಜೆಕ್ಟ್ ಆದ್ದರಿಂದ ಅದರಲ್ಲಿ ಹೊಂದಾಣಿಕೆಯ ಪ್ರಶ್ನೆ ಇರಲಿಲ್ಲ. ಒಂದು ಮೂವತ್ತು ಮೂವತ್ತೈದು ಪ್ರದರ್ಶನಗಳಾಗುವ ಹೊತ್ತಿಗೆ ನಮ್ಮಲ್ಲೊಂದು ಧೈರ್ಯ ಬಂದುಬಿಟ್ಟಿತ್ತು. ಎಷ್ಟೇ ಸಮಸ್ಯೆಗಳಿದ್ದರೂ ನಾಟಕ ಮಾಡಬಹುದು ಎನ್ನುವ ಧೈರ್ಯ. ಜೊತೆಯಲ್ಲಿ ಎಲ್ಲಾ ಸಂಭಾಷಣೆಗಳು ಎಲ್ಲರಿಗೂ ಗೊತ್ತಿರುತ್ತವೆ, ಹಾಗಿರುವಾಗ ಯಾರಿಗೇ ಏನೇ ಸಮಸ್ಯೆ ಬಂದರೂ ಒಂದೆರಡು ಮೂರು ದಿನಗಳಲ್ಲಿ ಇನ್ನೊಬ್ಬರು ಆ ಪಾತ್ರಕ್ಕೆ ಸಿದ್ಧರಾಗುತ್ತಿದ್ದರು. ಪಾತ್ರಧಾರಿಗಳು ಬದಲಾಗುತ್ತಿರುತ್ತಾರೆ, ಆದರೆ ಪಾತ್ರಗಳು ಯಾವುದೂ ನಿಂತಿಲ್ಲ. ನಾವು ದೆಹಲಿಯಲ್ಲಿ ಒಮ್ಮೆ ಶೋ ಮಾದುವಾಗ ೧೫ ಪಾತ್ರಧಾರಿಗಳು ಬದಲಾಗಿದ್ದರು, ಏಕೆಂದರೆ ಒಂದು ವಾರ ರಜೆ ಹಾಕಿ ಬರುವುದು ಎಲ್ಲರಿಗೂ ಸಾಧ್ಯ ಇರಲಿಲ್ಲ. ಒಂದು ವಾರದಲ್ಲಿ ಆ ಹದಿನೈದು ಪಾತ್ರಗಳನ್ನು ಬದಲಾಯಿಸಿ ಪ್ರದರ್ಶನ ಕೊಟ್ಟಾಗಲೂ ಯಾವುದೇ ನ್ಯೂನತೆಗಳು ಕಾಣಲಿಲ್ಲ. ಹಾಗಾಗಿ ಅಷ್ಟು ಪಾತ್ರಗಳು ನಮಗೆ ಎಂದೂ ಸಮಸ್ಯೆ ಅನ್ನಿಸಲೇ ಇಲ್ಲ.
ಮೊದಲ ಪ್ರದರ್ಶನ ಆದಾಗ ೫೦ ಶೋ ಇಷ್ಟು ಬೇಗ ಮಾಡಬಹುದು ಅನ್ನಿಸಿತ್ತಾ ನಿಮಗೆ?
ನಾಟಕ ಶುರು ಮಾಡುವಾಗ ಇದೊಂದು ಒಳ್ಳೆಯ ನಾಟಕ ಆಗುತ್ತದೆ ಎನ್ನುವ ನಂಬಿಕೆ ನನಗಿತ್ತು. ನಾಟಕದ ಮೂದಲ ಪ್ರದರ್ಶನಕ್ಕೆ ಮೊದಲು ಒಂದು ಟೆಕ್ನಿಕಲ್ ಶೋ ಆಗುತ್ತದೆ. ಸಾಧಾರಣವಾಗಿ ಅದು ನೂರಕ್ಕೆ ನೂರು ಸಮರ್ಪಕವಾಗಿ ಬರುವುದಿಲ್ಲ, ನನಗೆ ಅದು ಗೊತ್ತಿತ್ತು. ಈ ನಾಟಕದ ಟೆಕ್ನಿಕಲ್ ಶೋ ಆದಾಗಲೂ ಹಾಗೆಯೇ ಆಯಿತು. ಕೃಷ್ಣ ರಾಯಚೂರ್ ಅವರಿಗೂ ಇದು ಆತಂಕ ತಂದಿತ್ತು. ಆಗ ಶೋಗೆ ಇನ್ನೆರಡೇ ದಿನಗಳು ಬಾಕಿ ಇದ್ದವು. ಆದರೆ ನನಗೆ ಶೋ ಚೆನ್ನಾಗಿ ಆಗಿಯೇ ಆಗುತ್ತದೆ ಎನ್ನುವ ನಂಬಿಕೆ ಇತ್ತು. ಮೊದಲ ಶೋ ಮುಗಿದ ಕೂಡಲೇ ಬಂದ ಪ್ರತಿಕ್ರಿಯೆ ನೋಡಿದಾಗ ೫೦ ಒಂದು ದೊಡ್ಡ ಸಂಖ್ಯೆ ಎಂದು ತಂಡದ ಯಾರಿಗೂ ಅನ್ನಿಸಲಿಲ್ಲ.

ಈ ನಾಟಕದಲ್ಲಿ ’ನೇಸ್ತುಡಾ ನೆಲಬಾಲುಡಾ’ ಹಾಡಿನ ಪಾತ್ರ ಏನು?
ನಾನು ಮೊದಲೇ ಹೇಳಿದ ಹಾಗೆ ಈ ಹಾದು ನಾಟಕವನ್ನು ಕಟ್ಟಿಕೊಟ್ಟಿದೆ. ಬಹಳ ವರ್ಷಗಳ ನಂತರ, ಬಿ ವಿ ಕಾರಂತರ ದಿನಗಳ ನಂತರ ಮತ್ತೆ ಒಂದು ಹಾಡು ಇಡೀ ನಾಟಕವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದೆ ಎಂದು ನನಗನ್ನಿಸುತ್ತದೆ. ನಾಟಕದ ಎಲ್ಲಾ ಹಾಡುಗಳೂ ಮತ್ತೆ ಮತ್ತೆ ಕೇಳುವಂತಿವೆ.
ಕರ್ನಾಟಕದ ಸುತ್ತಲೂ ಮತ್ತು ಕರ್ನಾಟಕದ ಹೊರಗಡೆಯೂ ನೀವು ಪ್ರದರ್ಶನಗಳನ್ನು ಕೊಟ್ಟಿದ್ದೀರಿ. ಜನಗಳ ಪ್ರತಿಕ್ರಿಯೆ ಹೇಗಿತ್ತು?
ಎಲ್ಲಾ ಕಡೆಯಲ್ಲೂ ನಾಟಕಕ್ಕೆ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ. ಕರ್ನಾಟಕದ ಒಳಗೆ ಅಷ್ಟೇ ಅಲ್ಲ, ಕನ್ನಡ ಬರದವರೂ ಸಹ ನಾಟಕವನ್ನು ನೋಡಿ ಮೆಚ್ಚಿದ್ದಾರೆ. ೨೦೧೨ರಲ್ಲಿ ಹೈದರಾಬಾದಿನಲ್ಲಿ ನಾವು ಅಭಿನಯಾ ಥಿಯೇಟರ್ ಫೆಸ್ಟಿವಲ್ ಗೆ ಹೋದಾಗ ರಂಗಭೂಮಿಯಲ್ಲೇ ೬೦ ವರ್ಷಗಳನ್ನು ಕಳೆದ ಸುಮಾರು ೮೦ ವರ್ಷಗಳ ವೃದ್ಧರೊಬ್ಬರು ಬಂದು ಈ ನಾಟಕದ ರಚನಾಕಾರರಿಗೆ, ನಿರ್ದೇಶಕರಿಗೆ, ಸಂಗೀತ ನೀಡಿರುವವರಿಗೆ ನಾನು ಕಾಲಿಗೆ ನಮಸ್ಕರಿಸಬೇಕು ಎಂದು ನಮ್ಮ ಹತ್ತಿರ ಬಂದಿದ್ದರು. ನಮಗೆಲ್ಲಾ ಶಾಕ್ ಆಗಿತ್ತು ಆಗ. ಅಲ್ಲಿ ನಾಟಕ ಪ್ರಾರಂಭಕ್ಕೂ ಮೊದಲು ಹಲವು ತಾಂತ್ರಿಕ ಸಮಸ್ಯೆಗಳಾಗಿದ್ದವು. ಸೌಂಡ್ ಕೈ ಕೊಟ್ಟಿತ್ತು, ಇದ್ದಕ್ಕಿದ್ದಂತೆ ಫ್ಯೂಸ್ ಹೋಗಿ ಲೈಟ್ ನ ಸಮಸ್ಯೆ ಆಯಿತು, ಹತ್ತು ನಿಮಿಷ ಆ ಗೊಂದಲದಲ್ಲೇ ನಾಟಕ ಪ್ರಾರಂಭಿಸಿದೆವು. ನಾಟಕ ಮುಗಿಯುವಷ್ಟರಲ್ಲಿ ಹಲವರ ಕಣ್ಣುಗಳಲ್ಲಿ ನೀರಿತ್ತು, ಅಂದಿನ ನಮ್ಮ ಕರ್ಟನ್ ಕಾಲ್ ಸಮಯ ಸುಮಾರು ೪೦ ನಿಮಿಷಗಳು! ರಂಗಭೂಮಿ ಸಾರ್ಥಕ ಅನ್ನಿಸಿದ ಕ್ಷಣ ಅದು. ಅದಕ್ಕಿಂತ ಹೆಚ್ಚಿನ ಕಾಂಪ್ಲಿಮೆಂಟ್ ಏನು ಬೇಕು ಹೇಳಿ. ಮುಂಬೈಯಲ್ಲಿ ಶೋ ಮಾಡುವಾಗ ಯಾರೋ ಬಂದು ಕೆ ವೈ ಎನ್ ಮೇಷ್ಟ್ರಿಗೆ ’ಇದು ನೀವು ಬರೆದ ಕಥೆ ಅಲ್ಲ ಸಾರ್, ಕಾಳಿದಾಸ ಕನಸಲ್ಲಿ ಬಂದು ನಿಮಗೆ ಕಥೆ ಹೇಳಿದ್ದಾನೆ’ ಅಂದಿದ್ದರು!
ನಾಟಕ ಮಾಡುವಾಗ ನೀವು ಮರೆಯಲಾರದ ಅನುಭವ ಏನಾದರೂ ಇದೆಯಾ?
’ಅನಭಿಜ್ಞ ಶಾಕುಂತಲ’ ನಾಟಕವೇ ನಾನು ಜೀವನದಲ್ಲಿ ಮರೆಯಲಾಗದ ಅನುಭವ.
೫೦ ನೆಯ ಪ್ರದರ್ಶನದ ನೆನಪಿಗೆ ಏನಾದರೂ ಯೋಜನೆಗಳಿವೆಯಾ?
ಆಗಸ್ಟ್ ೨ ಕ್ಕೆ ರಂಗಶಂಕರದಲ್ಲಿ ೪೯ ಮತ್ತು ೫೦ ನೆಯ ಪ್ರದರ್ಶನಗಳು ನಡೆಯುತ್ತಿವೆ. ಅಲ್ಲಿ ಯಾವುದೇ ಸೆಲಬ್ರೇಶನ್ ಗೆ ಅವಕಾಶ ಇಲ್ಲ. ೪೯ನೆಯ ಶೋ ನಂತರ ಒಂದು ಸಂವಾದ ನಡೆಸುವ ಯೋಜನೆ ಇದೆ. ಧಾರವಾಡದಲ್ಲಿ ೫೧ ನೆಯ ಶೋ ನಾವು ಆಚರಿಸುತ್ತಿದ್ದೇವೆ. ಆಗಸ್ಟ್ ೨೧ ಶೋ ಇದೆ. ಅವತ್ತು ನಿರ್ದೇಶಕ ಮತ್ತು ನಾಟಕ ಕಾರರ ಜೊತೆಯಲ್ಲಿ ಒಂದು ಸಂವಾದ, ಚರ್ಚೆ ಇರುತ್ತದೆ. ನಾಟಕ ಇನ್ನೂ ಹಲವಾರು ಕಡೆ ಹೋಗುವ ಹಾದಿಯಲ್ಲಿದೆ. ಈಗ ತಂಡದ್ದು ನೂರರ ನಿರೀಕ್ಷೆ!
 

‍ಲೇಖಕರು G

1 August, 2015

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. MythriSreenivas

    ಸುವರ್ಣ ಪ್ರದರ್ಶನಕ್ಕೆ ಶುಭಾಶಯಗಳು..
    ಆದಷ್ಟು ಬೇಗ ಶತಕ ಬಾರಿಸಲಿ…
    ನಾವೂ ನಿಮ್ಮೊಂದಿಗಿದ್ದೇವೆ…

  2. MythriSreenivas

    ಸುವರ್ಣ ಪ್ರದರ್ಶನಕ್ಕೆ ಶುಭಾಶಯಗಳು..
    ಆದಷ್ಟು ಬೇಗ ಶತಕ ಬಾರಿಸಲಿ…
    ನಾವೂ ನಿಮ್ಮೊಂದಿಗಿದ್ದೇವೆ…
    ಸಾಧನೆ
    ಈ ದಿನದಲ್ಲಿ ದೊಡ್ಡ ಸಾಧನೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading