ಕೃಷ್ಣ ಮಾಸಡಿ
ಅನಂತಮೂರ್ತಿ ಹುಟ್ಟಿದ ದಿನ ಡಿಸೆಂಬರ್ 21. ಅವರು ಬದುಕಿದ್ದರೆ 85 ನೇ ವಸಂತಕ್ಕೆ ಕಾಲಿಡುತ್ತಿದ್ದರು. ಸುಮಾರು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಅವರ ಹುಟ್ಟಿದ ಹಬ್ಬಕ್ಕೆ ಶುಭಾಶಯ ಕೋರುತ್ತಾ ಬಂದವನು ನಾನು. ಮಾತು ಕೃತಿಗಳೆಲ್ಲವೂ ಕೃತ್ರಿಮವಾಗಿರುವ ಕಾಲಘಟ್ಟದಲ್ಲಿ ನಾನು ಕೆಲವು ಮಾತುಗಳನ್ನಾಡಬೇಕಿದೆ. ಮೊದಲು ಅನಂತಮೂರ್ತಿಯವರೊಂದಿಗಿನ ನನ್ನ ಕೊನೆಯ ಭೇಟಿಯಲ್ಲಿ ಮಾಡಿದ ಊಟದ ಕುರಿತು ಹೇಳುತ್ತೇನೆ.

ನಾನು ಎರಡು ವರ್ಷದವನಿರುವಾಗ ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ 18-20 ವರ್ಷದ ಸಮಯದಲ್ಲಿ ಈ ಲಂಕೇಶ್, ಅನಂತಮೂರ್ತಿಗಳು ನನ್ನ ಬದುಕಿನಲ್ಲಿ ಬಂದರು. ನೆಲೆಯಿಲ್ಲದ ಬದುಕಿನಲ್ಲಿ ಈ ಸಾಹಿತ್ಯ, ಸಮಾಜವಾದ, ಸಿನಿಮಾ ಮತ್ತು ಕೋಟಿ ಕನಸುಗಳ ಗಿರಗಟ್ಲೆಯಿಂದ ತಿರುಗುತ್ತಿದ್ದ ನನಗೆ ಲಂಕೇಶ್ರು ಒಂದು ದಾರಿ ತೋರಿಸಲು ಮುಂದಾದರು. ಆದರೆ ಅವರೊಂದಿಗಿನ ನನ್ನ ಜಗಳ `ಪತ್ರಿಕೆ’ ಆರಂಭದ ನಂತರ ವಿಕೋಪಕ್ಕೆ ಹೋಗಿ ಲಂಕೇಶ್ರ ಹಿಟ್ಲಿಸ್ಟ್ ನಲ್ಲಿ ಮೊದಲಿಗನಾದೆ.
ಅನಂತಮೂರ್ತಿ ಒಬ್ಬ ಮಹಾ ಬ್ರಾಹ್ಮಣ ಎಂಬ ಒಕ್ಕೂಟದ ಹಿನ್ನಲೆಯಿಂದಲೇ ಅವರ ಬಳಿ ಹತ್ತಿರವಾದವನು ನಾನು. ಬರು ಬರುತ್ತಾ ನನ್ನ ಅಲೆಮಾರಿ ಜೀವನಕ್ಕೆ ಒಂದು ನೆಲೆ ಎಂಬ ಅಥವಾ ದಿಕ್ಕು ತೋರಿಸಿದ ಮತ್ತು ತೋರಿಸುತ್ತಲೇ ಅಗಲಿದ ಅನಂತಮೂರ್ತಿ ನನಗೆ ತಂದೆ ಸಮಾನರು.
ನಲವತ್ತು ವರ್ಷಗಳ ಒಡನಾಟ ಹೇಳಲಿಕ್ಕೆ ಬೇಕಾದಷ್ಟು ಇದೆ. ನಾನು ಅವರ ಎರಡು ಕಾದಂಬರಿಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಿದವನು. `ಅವಸ್ಥೆ’ ಸಿನಿಮಾ ಆಗಿ `ಭಾರತೀಪುರ’ ವನ್ನು ಸರಣಿಗಳಾಗಿ ನಿರ್ಮಿಸಿದವನು. ಈ `ಭಾರತೀಪುರ’ ಮಾಡಿದ ನಂತರ ಅವರೊಂದಿಗೆ ಎರಡು ವರ್ಷ ಜಗಳ ಮಾಡಿಕೊಂಡು ದೂರ ಇದ್ದದ್ದು ಬಿಟ್ಟರೆ ಉಳಿದ ಕಾಲವೆಲ್ಲಾ ಅವರೊಂದಿಗೆ ಕಳೆದಿದ್ದೇನೆ. ಹೀಗೆ ಬೆಳೆಯುತ್ತಲೇ ಹೋಗುವ ನಾಲ್ಕು ದಶಕಗಳ ನೆನಪುಗಳು.
ಇಲ್ಲಿ ನಾನು ಅನಂತಮೂರ್ತಿಯವರ ಸಾಹಿತ್ಯ, ಸಮಾಜವಾದ ಇತ್ಯಾದಿ ಹೇಳಲಿಕ್ಕೆ ಹೊರಟಿಲ್ಲ. ಹೇಳಲಿಕ್ಕೆ ಹೊರಟಿರುವುದು ಹೇಗೆ ಹೇಳಿಕೊಳ್ಳುವುದು ಎಂಬ ಮನುಷ್ಯ ಸಹಜ ಸಂಬಂಧಗಳಷ್ಟೇ ಎಂಬುದಾಗಿದೆ. ಅನಂತಮೂರ್ತಿಗಳು ತೀರಿಕೊಂಡು ಎರಡು ವರ್ಷಕ್ಕೂ ಹೆಚ್ಚು ಆಗಿದೆ. ಇನ್ನೂ ನನಗೆ ಅವರಿದ್ದ ಮನೆಗೆ ಹೋಗಲು ಧೈರ್ಯವೇ ಬರುತ್ತಿಲ್ಲ. ಏಕೆಂದರೆ ಅವರಿಲ್ಲದ ಆ `ಸುರಗಿ’ ಮನೆಯನ್ನು ಊಹಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ.
ಹಳೆಯ ಸೆಂಟಿಮೆಂಟಲ್ ಫೂಲ್ಗಳ ತರಹ ನಾನು ಗತಕಾಲವನ್ನಷ್ಟೇ ಆನಂದಿಸುವ ವಿಲಕ್ಷಣ ಬುದ್ದಿಯವನು ಆಗಿಬಿಟ್ಟಿದ್ದೇನೆ. ಅಥವಾ ಅವರ ಇಲ್ಲದಿರುವಿಕೆಯನ್ನು ನನ್ನ ಪ್ರಜ್ಞೆ ಒಪ್ಪುತ್ತಿಲ್ಲವೆಂದು ಕಾಣುತ್ತದೆ. ಅನಂತಮೂರ್ತಿಯಿಂದ ಪಡೆದುಕೊಂಡ ನನ್ನ ನೆಲೆಯ ಬದುಕು ಅವರನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲವೆಂದು ಕಾಣುತ್ತೆ. ಮನುಷ್ಯ ಸಹಜ ರಾಗ-ದ್ವೇಷಗಳ ನಡುವೆ ಸಮತೋಲನ ಕಾಪಾಡವಲ್ಲಿಯೇ ನನ್ನ ಪಡಿಪಾಟಲು.
`ಸುರಗಿ’ ಮನೆಯಲ್ಲಿ ನಾನು ಅವರೊಂದಿಗೆ ಮಾಡಿದ ಊಟವೇ ನನ್ನ ಅವರ ಕೊನೆಯ ಭೇಟಿ. ಎಸ್ತರ್ ಅವರು ಮೈಸೂರಿಗೆ ಹೋಗಿದ್ದರು ಅಂತ ಕಾಣುತ್ತೆ. ಅವರನ್ನು ನೊಡಿಕೊಳ್ಳಲು ಗುಲ್ಬರ್ಗದಿಂದ ಬಂದಿದ್ದ ರಾಜಶೇಖರ್ ಮಾತ್ರ ಇದ್ದರು. ಅವರೊಂದಿಗಿನ ನನ್ನ ಕೊನೆಯ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಅವರನ್ನು ಕುರಿತು ಬಹಳಷ್ಟು ಜನ ತಿರು ತಿರುಗಿ ಮುಗಿಬೀಳುತ್ತಿದ್ದರಿಂದ ಬಹಳ ನೋಂದುಕೊಂಡಿದ್ದರು. ಅವರು ಹೀಗೆ ತೀವ್ರವಾಗಿ ಘಾಸಿಕೊಂಡಾಗ ಮೌನಕ್ಕೆ ಜಾರುತ್ತಿದ್ದರು. ಹಿಂದೆಲ್ಲಾ ಆಗಿದ್ದರೆ ನಾನು `ನೀವು ಅವರಿಗೆಲ್ಲಾ ಅಷ್ಟೊಂದು ಸಲಿಗೆ ಕೊಡಬಾರದಿತ್ತು ಸಾರ್’ ಎಂದು ಹೇಳುತ್ತಿರುತ್ತಿದ್ದೆ. ಏಕೆಂದರೆ ಬಹಳಷ್ಟು ಸಂದರ್ಭಗಳಲ್ಲಿ ಅವರಿಗೆ ತಿರುಗಿ ಬೀಳುತ್ತಿದ್ದವರು ಒಂದೋ ಅವರಿಂದ ಅನೇಕ ಅನುಕೂಲ ಮಾಡಿಕೊಂಡವರು ಅಥವಾ ಅವರೇ ಬೆಳೆಸಿದ ಶಿಷ್ಯರು ಆಗಿರುತ್ತಿದ್ದರು. ಈಗಲೂ ಅವರಿಗೆ ಬೇಕೆಂದು ಹೊಡೆಯುತ್ತಿದ್ದವರಲ್ಲಿ ಇವರಿಂದ ಅನುಕೂಲ ಪಡೆದವರೇ ಆಗಿದ್ದರು ಮತ್ತು ಜಾತಿಯನ್ನು ಆಳದಲ್ಲಿ ಆಚರಿಸುವ ಮೋದಿ ಭಕ್ತರೂ ಬೇರೆ ಸೇರಿಕೊಂಡಿದ್ದರು.
ಯಾಕೋ ಅವರ ಮೌನ ನೋಡಿ ಏನನ್ನು ಹೇಳದೆ ಸುಮ್ಮನಾದೆ. ಬೆಳಗ್ಗಿನ 11 ಗಂಟೆ ಸಮಯವಾಗಿತ್ತು. `ಸ್ವಲ್ಪ ಹೊತ್ತು ಮಲಗುತ್ತೇನೆ, ಕೂತಿರು’ ಎಂದು ರೂಂನೆಡೆ ಹೋದರು. ಒಂದು ಗಂಟೆಯ ನಂತರ ಎದ್ದು ಬಂದರು. ಅದೂ ಇದೂ ಎಂದು ಮಾತನಾಡಿದೆವು. ಊಟ ಮಾಡಲು ಕುಳಿತೆವು.
`ಕೃಷ್ಣ, ಒಟ್ಟಿಗೆ ಊಟ ಮಾಡೋಣ ಇರು ಅಂತ ಯಾಕೆ ಹೇಳಿದೆ, ಗೊತ್ತಾ? ಈಚೆಗೆ ನಾನೋಬ್ಬನೇ ಕೂತು ಊಟ ಮಾಡಿ ಬೇಜಾರು. ಬಹಳಷ್ಟು ಬಾರಿ ನಾನು ಎಸ್ತರ್ ಇಬ್ಬರೇ ಕಣೋ..’
`ಅದ್ಸರಿ ಸಾರ್, ಎಲ್ಲರೂ ಎಲ್ಲಾ ಸಮಯದಲ್ಲಿ ಎಲ್ಲಿ ಇರಲಿಕ್ಕೆ ಆಗುತ್ತೆ..’ ಎನ್ನುತ್ತಿದ್ದಂತೆ ಮಗಳು ಅನುರಾಧರ ಫೋನ್ ಬಂತು. ಹೀಗೆ ಕೃಷ್ಣ ಬಂದ ಅವನೊಂದಿಗೆ ಊಟ ಮಾಡುತ್ತಿರುವೆ ಎಂದು ಹೇಳಿ ಫೋನಿಟ್ಟರು. `ನೋಡಿದಿರಾ ಅನು ವಿಚಾರಿಸಲಿಲ್ವೆ..’ ಎಂದೆ.
`ಹಂಗಲ್ಲ.. ನಾವೆಲ್ಲಾ ಊರುಗಳಲ್ಲಿ ಜೊತೆ ಜೊತೆ ಊಟ ಮಾಡ್ತಾ ಬಂದವರು ಹೀಗೆ ಒಂಟಿಯಾಗಿ..’
ಏನೋ ಹೇಳಲು ಹೋಗಿ ಸುಮ್ಮನಾದರು. `ನೀವೆಂದೂ ಒಂಟಿಯಾಗಿ ಇಲ್ಲವೇ ಇಲ್ಲಬಿಡಿ ಸಾರ್’ ಎಂದೆ. ಅವರು ಸಹಜವಾಗಿ ನಡೆದಾಡಲು ಕಷ್ಟಪಡುತ್ತಿದ್ದರು. ದಿನಕ್ಕೆ ಹಲವು ಬಾರಿ ಮಾಡುವ ಡಯಾಲಿಸಿಸ್ನಿಂದ ಅವರ ದೇಹ ಬಳಲಿತ್ತು. ಸದಾ ಕಾಲ ಚಟುವಟಿಕೆಗಳಿಂದ ಅಂದರೆ ದೈಹಿಕವಾಗಿ ತೊಡಗಿಸಿಕೊಂಡಿರುತ್ತಿದ್ದ ಅವರ ದೇಹ ಅವರ ಮಾತನ್ನು ಕೇಳುತ್ತಿರಲಿಲ್ಲ. ಇದು ಅವರಿಗೆ ಯೋಚನೆಗೀಡು ಮಾಡಿತ್ತೆಂದು ಕಾಣುತ್ತದೆ. ಆದರೆ ಅವರು ಯಾವುದನ್ನೂ ಅಷ್ಟು ಸುಲುಭವಾಗಿ ಬಿಟ್ಟುಕೊಡುವವರಾಗಿರಲಿಲ್ಲ.
ಊಟದ ನಂತರ ಬೇರೆಡೆ ಕೂರಲು ಸಹಾಯವೆಂದು ಕೈ ನೀಡಲು ಹೋದೆ. ಅವರು ತಿರಸ್ಕರಿಸಿ ಕಷ್ಟಪಟ್ಟು ಎದ್ದು ಸೋಫಾ ಮೇಲೆ ಕುಳಿತರು. ಎಂತಹ ಸಮಯದಲ್ಲೂ ಅವರು ಅಸಹಾಯಕರಂತೆ ತೋರಿಸಿಕೊಳ್ಳುವುದನ್ನು ಇಷ್ಟಪಡುತ್ತಿರಲಿಲ್ಲ.
`ನನಗೆ ಇಲ್ಲಿಂದ ಆಸ್ಪತ್ರೆಗೆ ಓಡಾಡಿ ಓಡಾಡಿ ಸಾಕಾಗಿದೆ, ಕಣೋ. ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಗಾಡಿ ನಿಂತು ಬಿಡ್ತವೆ, ಸುಸ್ತಾಗಿ ಬಿಟ್ಟಿದೆ.’
`ಹೌದು ಸಾರ್, ಬೆಂಗಳೂರು ಹುಚ್ಚು ಬಂದಂತೆ ಬೆಳೀತಾ ಇದೆ.’
`ನನಗೇನೋ ದುಡ್ಡಿದೆ ಈ ಕಾಯಿಲೆ ಡಯಾಲಿಸಿಸ್ ಅಂತೆಲ್ಲಾ ಮಾಡಿಸ್ಕಳ್ತಾ ಇದೇನಿ. ಅಂದ್ರೆ ದುಡ್ಡಿರುವ ತನಕ ಬದುಕಬಹುದು ಕಣೋ.. ಅಲ್ವಾ..?’
`ಹಾಗೇನಿಲ್ಲಾ ಬಿಡಿ ಸಾರ್’
`ಹೌದು ಕಣೋ ದುಡ್ಡಿಲ್ಲದವರು ಅದೂ ಹಳ್ಳಿಗಳಲ್ಲಿ ಜನ ಸತ್ತು ಹೋಗಿರ್ತಾರೆ. ಗೊತ್ತಾ ನಿನಗೆ ಈ ಡಯಾಲಿಸಿಸ್ ಎಷ್ಟು ದುಬಾರಿ ಎಂದು, ಎಲ್ಲರಿಗೂ ಇದನ್ನು ಭರಿಸೋ ಶಕ್ತಿ ಎಲ್ಲಿ ಇರುತ್ತೆ ಹೇಳು? ನಾನೂ ಒಂಥರಾ ದುಡ್ಡಿನ ಅಹಂಕಾರದಿಂದ ಬದುಕಿದೇನೆ..’
ಹೀಗೆ ಅವರು ಹೇಳುತ್ತಾ ಹೋಗಿದ್ದು ನನಗೆ ಇಷ್ಟವಾಗಲಿಲ್ಲವೆಂದು ಹೇಳಿದೆ.
`ನಿಜ ಕಣಯ್ಯ ಎಂದೋ ಸತ್ತು ಹೋಗಬೇಕಿರುವ ನಾನು ಇನ್ನೊಬ್ಬರ ಕೃಪೆಯಲ್ಲಿ ಬದುಕುತ್ತಿದ್ದೇನೆ ಅನ್ನಿಸಿ ಬಿಟ್ಟಿದೆ.’ ನಾನು ಸುಮ್ಮನೆ ಕುಳಿತೆ.
`ಮಿಡೀವಲ್ ಯುರೋಪ್ನಲ್ಲಿ ಪ್ಲೇಗ್ ತರಹ ರೋಗ ಬಂದು ಜನ ಸಾಯ್ತಿರಬೇಕಾದರೆ ಇಟಲಿಯಲ್ಲಿ ನಡೆದ ಘಟನೆ ಹೇಳ್ತೇನೆ ಕೇಳು. ಆಗೆಲ್ಲಾ ಚರ್ಚ್ಗಳೇ ನಿರ್ಣಾಯಕವಾಗಿರುತ್ತಿದ್ದವು. ಒಂಥರಾ ಸುಪ್ರೀಂ ಕೋರ್ಟ್ಗಳ ತರಹ ಅದರ ಹೆಡ್ ಫಾದರ್ ಬಿಷಪ್ ಮಾತೇ ಅಂತಿಮವಾಗಿರುತ್ತಿತ್ತು. ( ಇಲ್ಲಿ ಅವರು ಹೇಳಿದ ಚರ್ಚ್ ಮತ್ತು ಬಿಷಪ್ ಹೆಸರು ನನಗೆ ನೆನಪಾಗುತ್ತಿಲ್ಲ) ಆಗ ತಾನೇ ಕಂಡು ಹಿಡಿದ ಔಷಧದಿಂದ ಕಾಯಿಲೆ ಗುಣವಾಗುತ್ತಿತ್ತು. ಆದರೆ ಈ ಔಷಧಕ್ಕೆ ಲೆಕ್ಕವಿಲ್ಲದಷ್ಟು ಬೆಲೆ. ಜೊತೆಗೆ ಈ
ಔಷಧವನ್ನು ಯಾರಿಗೆ ನೀಡಬೇಕೆಂದು ತೀರ್ಮಾನವಾಗುವುದು ಈ ಚರ್ಚ್ನಲ್ಲಿ. ಊರಿಗೆ ಬಂದಿದ್ದ ರೋಗ ಚರ್ಚ್ಗೆ ಬಂದಿತು. ಇದ್ದ ಹದಿನೆಂಟು ಜನ ಫಾದರ್ಗಳಲ್ಲಿ ಆರು ಜನಕ್ಕೆ ರೋಗ ತಗುಲಿತು. ಆಗ ಬಿಷಪ್ ಇಬ್ಬರಿಗೆ ಔಷಧ ಕೊಡುತ್ತಾನೆ. ನಾಲ್ಕು ಜನ ಸಾಯುತ್ತಾರೆ. ಇದನ್ನು ನೋಡಿದ್ದ ಒಬ್ಬ ಸದಾ ಕಾಲ ಬಿಷಪ್ನಿಗೆ – ನೀನೊಬ್ಬ ಕೊಲೆಗಡುಕ ಜೀವ ಉಳಿಸುತ್ತಲೇ ನಮ್ಮ ನಾಲ್ಕು ಜನ ಕೊಂದಂತೆ ಶ್ರೀಮಂತರಿಗೆ ಈ ಔಷಧ ಮಾರಿಕೊಂಡು ಬಡವರನ್ನು ಸಾಯಿಸಿದ್ದೀಯ ಎಂದು ಹೀಗೆಳೆಯುತ್ತಿರುತ್ತಾನೆ. ರೋಗ ಹೋಗಿ ವರ್ಷಗಳೇ ಕಳೆದರೂ ಅವನು ಬಿಷಪ್ ಕಂಡಾಗಲೆಲ್ಲಾ ಕೊಲೆಗಡುಕ ಎಂದು ಮೂದಲಿಸುತ್ತಿರುತ್ತಾನೆ. ಬಿಷಪ್ ಕಡೆಗೆ ಶ್ರೀಮಂತರನ್ನು ಮತ್ತು ತನಗಾದವರನ್ನಷ್ಟೇ ಬದುಕಿಸಿದೆ ಎಂಬ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ..’
ಹೇಳುತ್ತಲೇ ಅವರು ಭಾವುಕರಾದಂತೆ ಕಂಡುಬಂದರು. `ಈ ಹೋಲಿಕೆಗೂ ನಿಮ್ಮ ಕಾಯಿಲೆಗೂ ಸಂಬಂಧವೇ ಇಲ್ಲ ಬಿಡಿ.’
`ಇದೆ ಕಣೋ ಈ ಡಯಾಲಿಸಿಸ್ ಇಟ್ಟಕೊಂಡಿರೋರು ಒಂಥರಾ ಶ್ರೀಮಂತರ ಪರ ಇದ್ದ ಬಿಷಪ್ ತರದವರು…’
`ಅದೇನೋ ನಿಜ ಸಾರ್ ನಮ್ಮ ಸರ್ಕಾರಗಳ ತೀರ್ಮಾನಗಳಿಂದ ಈ ಆಸ್ಪತ್ರೆಗಳು ಬಿಜಿನೆಸ್ ಸೆಂಟರ್ಗಳಾಗಿವೆ. ಹೇಳೋದು ಬಡವರ ಹೆಸರು..’ ಎಂದು ಸುಮ್ಮನೆ ಕುಳಿತೆ. ಟೇಬಲ್ ಮೇಲಿಟ್ಟಿದ್ದ ಹಣ್ಣನ್ನು ಕೇಳಿದರು.
`ನೋಡು ನನಗೆ ತಿನ್ನಲಿಕ್ಕೆ ಚಪಲವಿದೆ. ನಾಲಗೆಗೆ ರುಚಿಯಿದೆ. ಆದರೆ ದೇಹ ಜೀರ್ಣಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟಿದೆ. ನಾನೇ ನಿರ್ವಹಿಸುವ ಕ್ರಿಯೆಯನ್ನು ಯಾರೋ ದುಡ್ಡು ಪಡೆದು ವಿಸರ್ಜನೆ ಕೆಲಸ ಮಾಡೋದು ನಂಗೂಚೂರು ಇಷ್ಟವಿಲ್ಲ ಕಣೋ ಕೃಷ್ಣ..’ ಎಂದು ಹೇಳಿದರು.
ನಾವಿಬ್ಬರು ಸುಮಾರು ಮಧ್ಯಾಹ್ನ ಮೂರು ಗಂಟೆಯವರೆಗೆ ಮಾತಾಡುತ್ತಾ ಕುಳಿತಿದ್ದೆವು. ನನ್ನ ಮಗಳು ಚೆಲುವೆಯ ಬಗ್ಗೆ ಕೇಳುತ್ತಾ ಬೆಂಗಳೂರಲ್ಲಿ ಬೆಳೆಯುವ ಮಕ್ಕಳು ಕನ್ನಡ ಮರೆತೇ ಬಿಡುತ್ತಾರೆ, ಅವಳ ಕೈಯಲ್ಲಿ ಕನ್ನಡದಲ್ಲಿ ಕತೆ ಬರೆಸು ಅಂತ ಹೇಳಿದರು.
ಸಾಮಾನ್ಯವಾಗಿ ಅವರೇ ಮಲಗುತ್ತೇನೆಂದು ಹೊರಡುವುದು ವಾಡಿಕೆ ಆದರೆ ಆ ದಿನ ಅವರಿಗೆ `ಸರಿ ಸಾರ್ ನಾನು ಹೊರಡ್ತೇನೆ ರೆಸ್ಟ್ ತಗೊಳ್ಳಿ’ ಅಂತ ಹೇಳಿ ನಾನೇ ಎದ್ದುನಿಂತೆ. ಅವರು ಸಹ ಎದ್ದು ಯಥಾ ರೀತಿ ಹೇಳುವಂತೆ ‘ಸರಿ ಹೊರಡು.. ಬರ್ತಾ ಇರು.. ನೀ ಬಂದ್ರೆ ನಂಗೆ ಖುಷಿ ಆಗುತ್ತೆ..’ ಅಂದರು. ಸಾಮಾನ್ಯವಾಗಿ ಎಂದೂ ಹೇಳದ ಅವರ ` ಬಂದರೆ ಖುಷಿ ಆಗುತ್ತೆ..’ ಎನ್ನುವ ಪದ ನನಗೆ ಹೊಸದಾಗಿತ್ತು.
ಅಲ್ಲದೇ ಅದೇ ಮಾತು ನಾನು ಇನ್ನೂ `ಸುರಗಿ’ ಯ ಅವರ ಮನೆಗೆ ಹೋಗದಂತೆ ತಡೆದು ಬಿಟ್ಟಿದೆ.
ಏಕೆಂದರೆ ಅವರನ್ನು ಮತ್ತೆ ನೋಡಿದ್ದು ಕೊನೆಯ ಬಾರಿ ಸಾವಿನ ಮುಂಚೆ ಮಣಿಪಾಲ್ ಆಸ್ಪತ್ರೆಯ ಹಾಸಿಗೆಯಲ್ಲಿ ಆಗಿತ್ತು.




ಪ್ರಿಯ ಕೃಷ್ಣ ಮಾಸಡಿ,
ನಿಮ್ಮನ್ನು ನಾನು ಕಾಣದೆ ತುಂಬಾ ವರ್ಷಗಳಾದವು. ಅನಂತಮೂರ್ತಿಯವರ ಬಗೆಗಿನ ನಿಮ್ಮ ಈ ಲೇಖನದ ಮೂಲಕ ನಿಮ್ಮನ್ನೂ ನಿಮ್ಮ ಮೂಲಕ ಅನಂತಮೂರ್ತಿಯವರನ್ನೂ ಕಂಡ ಹಾಗಾಯಿತು.
‘ಕೊನೆಯ ಊಟ’ ಹಲವು ಅರ್ಥಗಳಿಂದ ತುಂಬಿದ ಪದ. ಯೇಸುವನ್ನು ನೆನಪಿಸುವುದು. ಅನಂತಮೂರ್ತಿ ನಮಗೆಲ್ಲರಿಗೂ ಒಬ್ಬ ಅವಧೂತನಂತೆ ಅಲ್ಲವೇ?
ಕಳೆದೆರಡು ದಿನಗಳಿಂದ ನಾನು ಅನಂತಮೂರ್ತಿಯವರ ಗುಂಗಿನಲ್ಲೇ ಇದ್ದೆ: ಅವರದೊಂದು ಕವಿತೆಯ ಕುರಿತು ಲೇಖನ ಬರೆಯುತ್ತ. ಕವಿಯಾಗಿ ಅನಂತಮೂರ್ತಿ ನನಗೆ ಯಾವತ್ತೂ ವಿಸ್ಮಯ ಹುಟ್ಟಿಸುತ್ತಾರೆ; ನನಗವರು ಅತಿ ಹತ್ತಿರವಾಗುವುದು ಅವರ ಕವಿತೆಗಳ ಮೂಲಕವೇ.
ಕೆ.ವಿ. ತಿರುಮಲೇಶ್
ಪ್ರಿಯ ತಿರುಮಲೇಶ್,
ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಖುಷಿಯಾಯಿತು. ನೀವು ಈಚೆಗೆ ಬೆಂಗಳೂರಿಗೆ ಬಂದಿದ್ದಾಗ ಭೇಟಿಯಾಗಬೇಕೆಂದು ಕೊಂಡಿದ್ದೆ, ಆಗಲಿಲ್ಲ. ನಮ್ಮ ಎಳೆಯದಲ್ಲಿ ಪ್ರಭಾವಿಸಿದ ಕವಿಗಳಲ್ಲಿ ಮತ್ತು ನಾವುಗಳು ಬಾಯಲ್ಲಿ ಹೇಳಿಕೊಂಡು ಓಡಾಡುತ್ತಿದ್ದ ಕವಿಗಳಲ್ಲಿ ನೀವು ಒಬ್ಬರು. ಇನ್ನೊಬ್ಬರು ಅಂದರೆ ರಾಮಾನುಜನ್. ನಿಮ್ಮ ಕೆಫೆಟೇರಿಯಾ, ತಿರುವ ತಿರುವ ತಿರುಗತ್ತಲೇ ಇರುವ ತಿರುವನಂತಪುರ ಹೀಗೆ.. ಲಂಕೇಶ್ ಮತ್ತು ಅನಂತಮೂರ್ತಿ ಇಬ್ಬರ ಮೇಲೆ ಬರೆಯುತ್ತಿದ್ದೇನೆ. ಏಕೆಂದರೆ ನನಗೆ ಅವರಿಬ್ಬರೊಂದಿಗೆ ಹೆಚ್ಚು ಒಡನಾಟವಿತ್ತು. ಬರುವಾಗ ತಿಳಿಸಿ.