
ಅನಿಲ್ ಕುಮಾರ್
ಭಾರತೀಯ ತತ್ವ ಶಾಸ್ತ್ರಗಳ ಹೃದಯ ಭಾಗವಿರುವುದು ಪ್ರಸ್ಥಾನತ್ರಯಗಳಲ್ಲಿ ಎಂಬ ಮಾತಿದೆ. ಅದರಲ್ಲಿಯೂ ಮುಖ್ಯವಾದುದು ಬ್ರಹ್ಮಸೂತ್ರಗಳು. ಇವು ಚಿಕ್ಕ ಚಿಕ್ಕ ಪದಗುಚ್ಛಗಳಾಗಿದ್ದು ಅವುಗಳನ್ನು ನೇರವಾಗಿ ಓದಿಕೊಂಡರೆ ಏನೂ ಅರ್ಥವಾಗುವುದಿಲ್ಲ. ಹಾಗಾಗಿ ಶ್ರೀ ವೇದವ್ಯಾಸರು ಮತ್ತು ಶ್ರೀ ಆದಿ ಶಂಕರಾಚಾರ್ಯರು ಇವುಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಆದರೆ ಆ ಭಾಷ್ಯಗಳು ಕೂಡ ಅರ್ಥ ಮಾಡಿಕೊಳ್ಳಲು ಗಡುಚಾಗಿರುವುದರಿಂದ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ ಹೇಳಲು ಇವಕ್ಕೆ ವ್ಯಾಖ್ಯಾನದ ಅವಶ್ಯಕತೆ ಇತ್ತು. ಅದನ್ನು ಪೂರೈಸಿದವರು ಶ್ರೀಮದಾಚಾರ್ಯರ ನಿಕಟೋತ್ತರವಾಗಿ ಬಂದ ವಾಚಸ್ಪತಿ ಮಿಶ್ರರು.
ಇವರ ಜನ್ಮಸ್ಥಳ ಭಾರತ ಮತ್ತು ನೇಪಾಳದ ಗಡಿಭಾಗದಲ್ಲಿರುವ ಮಿಥಿಲಾ. ಅಪಾರ ಪ್ರತಿಭಾಸಂಪನ್ನರೂ ಅಧ್ಯಯನಶೀಲರೂ ಆದ ಮಿಶ್ರರಿಗೆ ಏಕಾಗ್ರತೆ ಸಹಜವಾಗಿಯೇ ಸಿದ್ಧಿಸಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಇವರು ಬ್ರಹ್ಮಸೂತ್ರ ಭಾಷ್ಯಗಳಿಗೆ ವ್ಯಾಖ್ಯಾನವನ್ನು ಬರೆಯಲು ಕುಳಿತರು. ಆ ಗ್ರಂಥವನ್ನು ಮುಗಿಸಲು ಅವರಿಗೆ ಸುದೀರ್ಘ ವರ್ಷಗಳೇ ಬೇಕಾದವು. ಕೆಲವರ ಪ್ರಕಾರ ಅದು ೭ ವರ್ಷಗಳು, ಕೆಲವರ ಪ್ರಕಾರ ೧೨, … … ೧೫, ೩೦ ವರ್ಷಗಳುಹೀಗೆ ಹೇಳುತ್ತಾರೆ. ಇದು ಹತ್ತನೇ ಶತಮಾನದಲ್ಲಿ ನಡೆದ ಘಟನೆಯಾದ್ದರಿಂದ ವರ್ಷಗಳ ಲೆಕ್ಕಾಚಾರ ಸರಿಯಾಗಿ ಸಿಕ್ಕಿಲ್ಲ. ಒಟ್ಟಿನಲ್ಲಿ ಈ ದಿನಗಳಲ್ಲಿ ಅವರಿಗೆ ಎಷ್ಟು ಏಕಾಗ್ರತೆ ಇತ್ತೆಂದರೆ ಶೌಚ-ಸ್ನಾನ, ಮಿತಾಹಾರ, ಮಿತನಿದ್ರೆಯ ವಿನಾ ಅವರು ಬೇರಾವುದಕ್ಕೂ ತಮ್ಮ ಕೋಣೆಯಿಂದ ಹೊರಬರಲೇ ಇಲ್ಲ.
ಅಂತೂ ಸುದೀರ್ಘ ವರ್ಷಗಳ ನಂತರ ಒಂದು ದಿನ ಅವರ ಗ್ರಂಥವು ಪರಿಪೂರ್ಣವಾಯಿತು. ಆಗ ಸಂಜೆ ಕತ್ತಲಾಗುತ್ತಲಿತ್ತು! ಮಿಶ್ರರಿಗೆ ವಯಸ್ಸಾಗಿತ್ತು! ಆಗ ಆ ಕತ್ತಲ ಕೋಣೆಯನ್ನು ಬೆಳಗಿಸಲು ಸ್ತ್ರೀಯೊಬ್ಬಳು ದೀಪವನ್ನು ತಂದಿಟ್ಟಳು. ಆಗ ತಾನೇ ಗ್ರಂಥವನ್ನು ಪೂರ್ಣಗೊಳಿಸಿದ್ದ ಮಿಶ್ರರು ಇಹಲೋಕಕ್ಕೆ ಬಂದರು. ತಮ್ಮ ಕೋಣೆಯಲ್ಲಿ ಸ್ತ್ರೀಯೊಬ್ಬಳಿರುವುದನ್ನು ಕಂಡು “ಯಾರು ತಾಯಿ ನೀವು?” ಎಂದು ಪ್ರಶ್ನಿಸಿದರು.
ಅದಕ್ಕೆ ಆಕೆ “ನಾನು ನಿಮ್ಮ ಪತ್ನಿ” ಎಂದಳು!
ಮಿಶ್ರರು ಹೌಹಾರಿದರು! ಅವರಿಗೆ, ತಮಗೆ ಮದುವೆಯಾಗಿತ್ತೆಂಬುದಾಗಲೀ, ತಮಗೊಬ್ಬ ಹೆಂಡತಿ ಇದ್ದಾಳೆ ಎಂಬುದಾಗಲೀ ಚೂರೂ ನೆನಪೇ ಇರಲಿಲ್ಲ! ಎಲ್ಲವೂ ಮರೆತುಹೋಗಿತ್ತು!
“ನಿನ್ನ ಹೆಸರೇನು?” ಎಂತಲೂ ಕೇಳಿದರು! ಹೇಳಿದಳು!

“ಮತ್ತೆ ನೀನೇಕೆ ನನಗೆ ನೆನಪಿಸಲಿಲ್ಲ” ಎಂದು ಕೇಳಿದ್ದಕ್ಕೆ “ನಿಮ್ಮ ಏಕಾಗ್ರತೆಗೆ ಭಂಗ ಬಾರದಿರಲಿ, ಕೈಹಿಡಿದ ಕಾರ್ಯವು ಸಾಂಗೋಪಾಂಗವಾಗಿ ನೆರವೇರಲಿ ಎಂಬ ಉದ್ದೇಶದಿಂದ” ಎಂದಳು.
ಮಿಶ್ರರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿತ್ತು. ಆಗ ಅವರ ಹೆಂಡತಿ ಷೋಡಶಿ. ಮದುವೆಯಾದ ದಿನದಿಂದಲೇ ಮಿಶ್ರರು ಗ್ರಂಥರಚನೆಗೆ ಕೂತುಬಿಟ್ಟರು ಎಂಬ ಪ್ರತೀತಿ ಇದೆ. ಅಲ್ಲಿಂದ ಇಲ್ಲಿಯವರೆವಿಗೂ ಸುದೀರ್ಘ ವರ್ಷಗಳ ಕಾಲ ತುಟಿಪಿಟಕ್ಕೆನ್ನದೆ ಅವರ ಹೆಂಡತಿ “ಯೋಗಕ್ಷೇಮಂವಹಾಮ್ಯಹಮ್” ಎಂದು ಮಿಶ್ರರ ಬೇಕು-ಬೇಡಗಳನ್ನು, ಜೊತೆಗೆ ಮನೆಯ ದೇಖರೇಖಿಯನ್ನೂ ನೋಡಿಕೊಳ್ಳುತ್ತ ಬಂದರು. ಮಿಶ್ರರ ಊಟೋಪಚಾರಗಳಿಗಾಗಲೀ ಸ್ನಾನ-ಶೌಚಾದಿಗಳಿಗಾಗಲೀ ಎಂದೂ ಕೊಂಚವೂ ಲೋಪವಾಗಲಿಲ್ಲ. ಬರೆಯಲು ತಾಳೆಗರಿಗಳನ್ನು ತಂದು ಇಡುವುದರಿಂದ ಹಿಡಿದು, ಸಂಜೆ ಕೋಣೆಯಲ್ಲಿ ದೀಪ ಹಚ್ಚಿಡುವುದರವರೆಗೆ, ಹಚ್ಚಿದ ದೀಪ ರಾತ್ರೋರಾತ್ರಿ ಆರದಂತೆ ನೋಡಿಕೊಳ್ಳುವುದರವರೆಗೆ ಮಿಶ್ರರಿಗೆ ಸಕಲಾನುಕೂಲಗಳನ್ನೂ ಮಾಡಿಕೊಡುತ್ತಲೇ ಬಂದರು. ಆದರೆ ಮಿಶ್ರರಿಗೆ ಆಗ ಇದು ಗೋಚರಿಸಲೇ ಇಲ್ಲ!
ಆದರೆ ಈಗ, ತನಗಾಗಿ ತನ್ನ ಹೆಂಡತಿಯು ನಡೆಸಿದ ತ್ಯಾಗ ಜೀವನವು ಕಣ್ಣಿಗೆ ಕಾಣಿಸಿತು! ಆಕೆಯ ಮೇಲೆ ಪ್ರೀತಿ ಉಕ್ಕಿ ಬಂತು! ಆಕೆಯನ್ನು ಬಿಗಿದಪ್ಪಿಕೊಂಡು ಆನಂದ ಬಾಷ್ಪವನ್ನು ಸುರಿಸಿದರು. ಅದರ ಹಿಂದೆಯೇ, ಹೆಂಡತಿಗೆ ತಮ್ಮಿಂದಾದ ಘೋರ ಅನ್ಯಾಯವೂ ಕಣ್ಮುಂದೆ ಬಂದಿತು! ಅದಕ್ಕಾಗಿ ಅವರು ಬಹುವಾಗಿ ನೊಂದುಕೊಂಡರು; ದು ಃಖಿಸಿ ಕಣ್ಣೀರು ಹರಿಸಿದರು. ಏನು ದು ಃಖಿಸಿದರೆ ಏನು ಫಲ? ಆಗಲೇ ಕಾಲ ಮಿಂಚಿ ಹೋಗಿತ್ತು! ಸುದೀರ್ಘ ವರ್ಷಗಳು ಉರುಳಿ ಹೋಗಿದ್ದವು!

ಮಿಶ್ರರ ಕೃತಿಗೆ ಪಂಡಿತ ಪಾಮರರೆನ್ನದೆ ಎಲ್ಲ ಕಡೆಯಿಂದಲೂ ಅಪಾರ ಜನ ಮನ್ನಣೆ ದೊರೆಯಿತು. ಅವರು ಲೋಕವಿಖ್ಯಾತರಾದರು. ಇಂದಿಗೂ ಪೌರ್ವಾತ್ಯ ಪಾಶ್ಚತ್ಯವೆನ್ನದೆ ಜಗತ್ತಿನಾದ್ಯಂತ ದೊಡ್ಡ ದೊಡ್ಡ ವಿದ್ವಾಂಸರೂ ಪ್ರಕಾಂಡ ಪಂಡಿತರೆಲ್ಲ ಬ್ರಹ್ಮಸೂತ್ರಗಳನ್ನು ಅರ್ಥೈಸಿಕೊಳ್ಳಲು ಆಶ್ರಯಿಸುವ ಏಕೈಕ ಗ್ರಂಥವೆಂದರೆ ಅದು ಮಿಶ್ರರ ವ್ಯಾಖ್ಯಾನ ಗ್ರಂಥವೇ. ಅಮಲಾನಂದರು, ಅಪ್ಪಯ್ಯ ದೀಕ್ಷಿತರು ವ್ಯಾಖ್ಯಾನ ಬರೆದಿರುವರಾದರೂ ಅವುಗಳ ಸ್ಥಾನ ನಂತರದ್ದು.
ಈ ಗ್ರಂಥದಲ್ಲಿ ಅತ್ಯಂತ ಸೂಕ್ಷ್ಮವಾದ ಆಧ್ಯಾತ್ಮಿಕ ವಿಚಾರಗಳಿವೆ. “ಬ್ರಹ್ಮ ಸತ್ಯ, ಜಗನ್ಮಿಥ್ಯ”. ಪರಮಾತ್ಮನೊಬ್ವನೇ ಸತ್ಯ, ಈ ಜಗತ್ತೆಲ್ಲವೂ ಮಿಥ್ಯ. ಈ ಬದುಕು ನಶ್ವರ, ಅಶಾಶ್ವತವಾದುದು. ಈ ಭವಬಂಧನದಿಂದ ನಾವು ಬಿಡಿಸಿಕೊಳ್ಳಬೇಕಾದರೆ, ಹೆಂಡತಿ ಮಕ್ಕಳೆಂಬ ಸಂಸಾರವನ್ನು ತ್ಯಜಿಸಿ … … …!
ಮಿಶ್ರರ ಗ್ರಂಥ ಪೂರ್ಣವಾಗಲು ಇನ್ನೊಂದೇ ಅಂಶ ಬಾಕಿ ಇತ್ತು! ಆದಕಾರಣ ಅಪ್ಪಿಕೊಂಡಿದ್ದ ಹೆಂಡತಿಯನ್ನು ಬಿಟ್ಟು ಕಾರ್ಯೋನ್ಮುಖರಾದರು. ತಾವು ಇಷ್ಟು ಸುದೀರ್ಘ ವರ್ಷಗಳು ಅಹೋರಾತ್ರಿ ಶ್ರದ್ಧೆಯಿಂದ ಸಿದ್ಧಪಡಿಸಿದ ಗ್ರಂಥದ ಬಳಿಗೆ ಬಂದರು. ಅದನ್ನೊಮ್ಮೆ ಗಾಢವಾಗಿ ದಿಟ್ಟಿಸಿದರು! ಕೈಗಳಿಂದ ಮೃದುವಾಗಿ ತಾಳೆ ಗರಿಗಳನ್ನು ನೇವರಿಸಿದರು! ನಂತರ ಅದರ ಮೇಲು ಹೊದಿಕೆಯ ಮೇಲೆ ಗ್ರಂಥದ ಹೆಸರನ್ನು ಪ್ರೀತಿಯಿಂದ, ಮುದ್ದಾಗಿ, ದಪ್ಪ ಅಕ್ಷರಗಳಲ್ಲಿ ಹೀಗೆ ಬರೆದರು – “ಭಾಮತಿ”! ಇದು ಅವರ ಹೆಂಡತಿಯ ಹೆಸರು!!
ಅದಕ್ಕೆ ಆಕೆ "ನಾನು ನಿಮ್ಮ ಪತ್ನಿ" ಎಂದಳು!
ನಿಮಗೆ ಇವೂ ಇಷ್ಟವಾಗಬಹುದು…





0 Comments