ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅತ್ರಿ ಅಶೋಕವರ್ಧನ ಕಂಡಂತೆ ಬಿಳಿಮಲೆ

ಅವಧಿಯಲ್ಲಿ ಬೊಳುವಾರು ಬರೆದ ಬಿಳಿಮಲೆ ಕಥನ ಪ್ರಕಟವಾಗಿತ್ತು. (ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಬರಹ ಓದಿದ ಅತ್ರಿ ಅಶೋಕ ವರ್ಧನ ಅವರು ಬರೆದ ಪ್ರತಿಕ್ರಿಯೆ, ಕೇವಲ ಪ್ರತಿಕ್ರಿಯೆಯಲ್ಲ, ಬಿಳಿಮಲೆ ಅವರ ಬಗ್ಗೆ ಒಂದು ಲೇಖನವಾಗುತ್ತದೆ ಅನ್ನಿಸಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಅಶೋಕವರ್ಧನ ಜಿ.ಎನ್

“ಆತ CCC – Communist, Communal, (ಮತ್ತೆಂತದ್ದೋ ಒಂದು)” ಹೀಗೊಬ್ಬ ಜಮೀನ್ದಾರರು ನನ್ನಲ್ಲಿ ಬಂದಿದ್ದಾಗ ಬಯ್ದು (ಹಿಂದೆಬಿಟ್ಟು) ಪರಿಚಯಿಸಿದ ವ್ಯಕ್ತಿಯೇ ಪುರುಷೋತ್ತಮ ಬಿಳಿಮಲೆ; ಅಂದು ನೆಹರೂ ಮೆಮೊರಿಯಲ್ ಕಾಲೇಜ್, ಸುಳ್ಯದ ಕನ್ನಡ ಅಧ್ಯಾಪಕ. ಪ್ರಸಂಗ – ಈ ಪುರುಷೋತ್ತಮ ಮಂಡೆಕೋಲು ಬಾಂಜಾರವನ್ನು ತನ್ನದೇ ತಂಡ ಕಟ್ಟಿ, ಶೋಧಿಸಿ, ಉದಯವಾಣಿಯಲ್ಲಿ ಲೇಖನ ಬರೆದಿದ್ದರು. ನಾನೂ ಆ ಕಾಲದಲ್ಲಿ ನನ್ನ ತಾಕತ್ತಿನಲ್ಲಿ ಗುಹಾಶೋಧ ನಡೆಸಿದ್ದೆ. ಇವರ ಲೇಖನದಲ್ಲಿ ಪ್ರಾಯ ಸಹಜವಾದ ಸಣ್ಣ ಕೊಂಕುನುಡಿ ಜಮೀನ್ದಾರರ ಬಗ್ಗೆ (ನಮ್ಮ ಬಗ್ಗೆಯೂ ಇತ್ತು) ಇದ್ದಿರಬೇಕು. ನಾನು ಜಮೀನ್ದಾರರ ಮಾತು ಅವಗಣಿಸಿ, ನೇರ ಬಿಳಿಮಲೆಗೆ ಅವರ ಶೋಧದ ಸಣ್ಣ ಒಂದೆರಡು ತಪ್ಪುಗಳ ಕುರಿತು ಪತ್ರ ಹಾಕಿದೆ. ಮರು ಟಪಾಲಿನಲ್ಲಿ ಅವರ ವಿನಯ ಪೂರ್ಣ ಪತ್ರ ಬಂತು, ಅಯಾಚಿತವಾಗಿ ತನ್ನ ದುಡುಕಿನ ಟಿಪ್ಪಣಿಗಳ ಬಗ್ಗೆ ವಿಷಾದವೂ ಇತ್ತು. ಕೇವಲ ಪುಸ್ತಕ ವ್ಯಾಪಾರಿ ಮತ್ತು ಗಿರಾಕಿಯ ಸಂಬಂಧದಿಂದ ನಮ್ಮ ಬಂಧ ಉತ್ತಾರಣೆ ಪಡೆದಿತ್ತು. ಜಮೀನ್ದಾರರ ಉಕ್ತಿಯನ್ನು ನಾನೇನೂ ನಂಬಿರದಿದ್ದರೂ ಅದು ಎಲ್ಲಾ ಅವೈಚಾರಿಕರ ಸುಲಭೀಕರಣ ಮಾರ್ಗ ಎನ್ನುವುದು ಸ್ಪಷ್ಟವಾಗಿತ್ತು. (ಹುಟ್ಟಿನ ಆಕಸ್ಮಿಕದಲ್ಲಿ ಉಚ್ಚ ವರ್ಣೀಯನೆಂದೇ ಗುರುತಿಸಲ್ಪಡುವ ನನ್ನ ಆಚಾರ ನೋಡಿ, ನನಗೇ ಈ ಬಗೆಯ ಹೆಸರು ಕೊಟ್ಟವರಿದ್ದಾರೆ.)

ದಕ ಜಿಲ್ಲಾ ಸಾಹಿತ್ಯ ಸಮ್ಮೇಳನ ಆ ಬಾರಿ ಸುಳ್ಯದಲ್ಲಿ ನಡೆದಿತ್ತು. ಸಂಘಟನೆಯಲ್ಲಿ ನಾವೀನ್ಯ ಬಯಸಿ ಸೇರಿಕೊಂಡಿದ್ದ ಬಿಳಿಮಲೆ, ಒಂದು ಅಪರಾಹ್ನದ (ಪುಷ್ಕಳ ಭೋಜನ ಮಾಡಿ ಸಭಾಸದರು ತೂಕಡಿಸುವ ಹೊತ್ತು) ಪುಸ್ತಕೋದ್ಯಮದ ಗೋಷ್ಠಿಗೆ ನನ್ನನ್ನು ಒಪ್ಪಿಸಿದರು. ಅದುವರೆಗೆ ನನ್ನೆಲ್ಲ ಗೋಷ್ಠಿ ಮಂಡನೆಗಳೂ ಬಿಗಿದ ಹುಬ್ಬಿನ ಶೋತೃಗಳಿಗೆ ಉರಿಯ ಮಳೆಯಂತಿರುತ್ತಿತ್ತು. ಆದರೆ ಸುಳ್ಯದ ವಿಷಯ – ಪುಸ್ತಕೋದ್ಯಮದಲ್ಲಿ ರಂಜನೆ, ನನಗೇ ಆಶ್ಚರ್ಯ. ಅಂದು ಸಭಾಭವನದಿಂದ ದೂರ ಸರಿದು `ಗಂಭೀರ ಸಮಾಧಿ’ಸ್ಥರಾಗಿದ್ದವರೂ ಬಂದು ಚಪ್ಪಾಳೆ ಹಾಕಿದ್ದರು! ನನ್ನಲ್ಲಿನ ವಿನೋದ ಪ್ರಜ್ಞೆಗೆ ಅಪಾರ ಮನ್ನಣೆ ಸಿಕ್ಕಿತ್ತು.

ಬಿಳಿಮಲೆ ಮಂಗಳೂರಿನಲ್ಲಿದ್ದಾಗ ಅವರ ಹೊಸದೊಂದು (ಕರಾವಳಿ ಜಾನಪದ?) ಪುಸ್ತಕದ ಕಟ್ಟು ನನ್ನಂಗಡಿಗೆ ತಂದು ಗಲ್ಲಾದ ಮೇಲೆ ಇಟ್ಟರು. ಜೊತೆಗೆ ಅವರದೇ ಸಾಹಿತ್ಯಾಸಕ್ತ ಒಂದೆರಡು ಮಿತ್ರರೂ ಇದ್ದರು. ನನ್ನ ನೆನಪಿನಲ್ಲಿ ಅದು ಅಪೂರ್ವ ಅನೌಪಚಾರಿಕ ಆದರೆ ಅರ್ಥಪೂರ್ಣ ಸಮಾರಂಭ – ಮಳಿಗೆಯಲ್ಲೇ ಪುಸ್ತಕ ಲೋಕಾರ್ಪಣ.

ಕೋಟೆಕಾರಿನ ಕಲಾಗಂಗೋತ್ರಿಯ ಸಹಯೋಗದಲ್ಲಿ ಇವರ ಯಕ್ಷ ನರ್ತನದ ಬಗ್ಗೆ ಕೇಳಿದ್ದೆ. ಅಮೃತ ಸೋಮೇಶ್ವರರ ಸಾಮಾಜಿಕ ಸಮಸ್ಯೆಗಳ ವಿರುದ್ಧ ಯಕ್ಷಗಾನ ಒಂದರಲ್ಲಿ ಬಿಳಿಮಲೆ ಕುಣಿದದ್ದು ನೋಡಲು ನಾನು ಸಸಿಹಿತ್ಲುವಿನ ಭಗವತಿ ದೇವಳ ವಠಾರಕ್ಕೇ ಹೋಗಿದ್ದೆ.

ಬಿಳಿಮಲೆ ಹಂಪಿಯಲ್ಲಿದ್ದಾಗ `ನವ ಸಾಕ್ಷರರಿಗೆ ಪುಸ್ತಕ ನಿರ್ಮಾಣ’ದ ಬಗ್ಗೆ ನನಗೂ ಒಂದು ವಿಷಯ ಕಳಿಸಿದ್ದರು – ಬೆಟ್ಟ ಗುಡ್ಡಗಳು. ವಿವಿನಿಲಯದ ಮಾರ್ಗಸೂಚೀಯಂತೆ ನಾನು (ಲೇಖಕರು) ಕರಡು ಹಸ್ತಪ್ರತಿಯನ್ನು ಹಿಡಿದುಕೊಂಡು ಹೋಗಿ, ಅಲ್ಲಿನ ಸಂಪಾದಕ ಮಂಡಳಿಯ ಎದುರು ಅಭ್ಯಾಗತನಾಗಿ ಕುಳಿತು (ಪರೀಕ್ಷೆ ಅಲ್ಲ), ಪರಿಷ್ಕರಿಸಿ ಮುಗಿಸುವ ಕೆಲಸ ವಿಶಿಷ್ಟ ಅನುಭವ.

ನನ್ನ ಭಾರತ ಬೈಕ್ ಯಾತ್ರೆಯ ಒಂದು ರಾತ್ರಿಯ ಹೊಸಪೇಟೆ ವಾಸಕ್ಕೆ ಕಡಿಮೆ ಖರ್ಚಿನ ವ್ಯವಸ್ಥೆಗೆ ಬಿಳಿಮಲೆಯ ಮೊರೆಹೊಕ್ಕೆ. ಆ ವಲಯದ ಉಗ್ರೋಗ್ರ ಬೇಸಗೆಯ ದಿನಗಳವು. ಅವರ ಹೆಂಡತಿ, ಮಗ ಊರಿಗೆ ಹೋಗಿದ್ದರೂ ಹಿಂಜರಿಯದೆ ತಮ್ಮ ಮನೆಗೇ ಕರೆಸಿಕೊಂಡು, ಅಷ್ಟಕ್ಕೆ ಬಿಡದೆ ರಾತ್ರಿಯ ಊಟವನ್ನು ಜಪಾನೀ ವಿದ್ವಾಂಸ ಮೊರಿಜಿರಿ, ರಹಮತ್ ತರೀಕೆರೆಯಾದಿ ಮಿತ್ರವೃಂದದೊಂದಿಗೆ ಭರ್ಜರಿ ಹೋಟೆಲಿನಲ್ಲೇ ಕೊಟ್ಟು ಉಪಚರಿಸಿದ್ದರು.

ನನ್ನ ತಂದೆಗೆ ದೆಹಲಿ ಕರ್ನಾಟಕ ಸಂಘದ ಕಾರಂತ ಪ್ರಶಸ್ತಿ ಬಂದಾಗ (ನಾನು ಜೊತೆಯಲ್ಲಿದ್ದೆ) ಆತಿಥೇಯರ ಬಳಗದಲ್ಲಿದ್ದು ಉಪಚರಿಸುವಲ್ಲೂ ಬಿಳಿಮಲೆ ಚುರುಕಾಗಿದ್ದರು.

ಪರಿಸ್ಥಿತಿಗಳೊಡನೆ ರಾಜಿ ಮಾಡಿಕೊಳ್ಳದ ಈ ಬಿಳಿಮಲೆಯ ಹೋರಾಟಗಾರ ಮುಂದುವರಿದು ದೆಹಲಿ ಸಂಘದ ಶುದ್ಧೀಕರಣಕ್ಕೆ ಇಳಿದಾಗಲೇ ನನಗೆ ತಿಳಿದದ್ದು ಇವರ ಆರೋಗ್ಯದ ಸೂಕ್ಷ್ಮ (ಮಧುಮೇಹಿ). ಇತ್ತ ಮಂಗಳೂರಿನಲ್ಲಿ ಅವರ ತಂಗಿ ಗಂಡ, ನನ್ನ ಗೆಳೆಯ ಶ್ರೀನಿವಾಸ ಕಾರ್ಕಳ, ಅಪಘಾತ್ಕೊಳಗಾದಾಗ ನನ್ನ (ಉಪಕಾರಕ್ಕೇನೂ ಒದಗದ) ಆತಂಕ ಹೆಚ್ಚಿತ್ತು. ಆಗ ಬಿಳಿಮಲೆ ದಿಲ್ಲಿಯಿಂದ ದೂರವಾಣಿಸಿ ದುಃಖಾರ್ತರು ಪುಸ್ತಕ ಒಂದನ್ನು ಶ್ರೀನಿಗೆ ಓದಲು ಕೊಡಿ. ನನ್ನ ಹಲವು ದುರ್ಭರ ದಿನಗಳಲ್ಲಿ ಸ್ಥೈರ್ಯಕೊಟ್ಟ ಕೃತಿ ಅದು ಎಂದದ್ದು ಈಗಲೂ ನನ್ನ ಕಿವಿಯಲ್ಲಿದೆ.

ಕಲಾಗಂಗೋತ್ರಿಯ ಗೆಳೆಯ ಸದಾಶಿವ ಮಾಸ್ಟ್ರು ಅವರ ಮಹಾಮೌನದಲ್ಲೂ ಒಮ್ಮೆ ಬಿಳಿಮಲೆಗೆ ಗಂಭೀರ ಮೂತ್ರಪಿಂಡಗಳ ಸಮಸ್ಯೆಯುಂಟಾಗಿದೆ ಎಂದಾಗ ನನ್ನ ಛೆಗೆ ಗಾತ್ರ, ಬಣ್ಣ ದೊಡ್ಡದಾಗಿತ್ತು. ಮತ್ತೆಂದೋ ಅವರು ಸಿಕ್ಕಾಗ ಇಲ್ಲ, ಶೋಭನಾರ `ಪಿಂಡ ದಾನ’ದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಾಗ ಉಸ್ ಎಂದಿದ್ದೆ. ನನ್ನ ಅಂತರ್ಜಾಲ ಕೆಲಸಗಳ ನಡುವೆ ಆಗೀಗ ಚಾಟ್-ಪಟ್ಟಿಯಲ್ಲಿ ಬಿಳಿಮಲೆಯ ದೀಪ ಉರಿಯುತ್ತಿರುವುದು ಕಾಣಿಸಿದರೂ ಸದಾ ಕೆಂಪೇ ಇರುತ್ತಿತ್ತು. ಔಪಚಾರಿಕ ಭೇಟಿ, ಮಾತುಗಳಲ್ಲಿ ನನಗೆ ಯಾವಾಗಲೂ ಸಂಕೋಚ, ಹಿಂಜರಿಕೆ ಹೆಚ್ಚು. ಹಾಗೂ ತಡೆಯದೇ ಒಂದೆರಡು ಬಾರಿ ಎರಡು ಮಾತು ಎಂದವರ ಕೆಲಸದ ನಡುವೆ ನಾನು ತೂರಿಕೊಂಡದ್ದುಂಟು. ಪುಣ್ಯಾತ್ಮ ಅವರ ಸಮಸ್ಯೆಯ ಸೂಚನೆ ಕೊಟ್ಟಿದ್ದರಾದರೂ ತೀವ್ರತೆ ನನ್ನ ಮಂಡೆಗೆ ಹೊಕ್ಕಿರಲಿಲ್ಲ.

ಇದ್ದಕ್ಕಿದ್ದಂತೆ ಬೊಳುವಾರು ಇಲ್ಲಿ For ಹಾಕಿ ಬಿಳಿಮಲೆಯ ಆತ್ಮಕಥನಕ್ಕಿಳಿದಾಗ ನನಗೆಲ್ಲಾ ಮುಗಿದೇ ಹೋಯ್ತೇ ಎಂಬಷ್ಟು ಬೇಸರವಾಗಿತ್ತು. ಓದುಗರಿಂದ ಕಥನ ಕುತೂಹಲ, ಶೈಲಿಯ ಚಂದ, ಸಣ್ಣ ಪುಟ್ಟ ಆತಂಕಗಳೆಲ್ಲ ಪ್ರತಿಕ್ರಿಯೆಗಳಾಗಿ ಬರುತ್ತಿದ್ದಾಗ ನನ್ನ ಕೈ ಕಟ್ಟಿತ್ತು. ಮೊನ್ನೆ ಇನ್ನೂ ನಾಲ್ಕನೇ ಕಂತು ಓದಿ ಮುಗಿದಾಗ ಮತ್ತೆ ಬಿಳಿಮಲೆ ಚಾಟಿನಲ್ಲಿ ಕೆಂಗಣ್ಣು ತೆರೆದಿದ್ದರು. ಎಷ್ಟೂ ಜನ ತಮ್ಮ ಅಸಹಾಯಕತೆಯ ಸಂದರ್ಭಗಳಲ್ಲಿ ತಮ್ಮ ವಿ-ಖಾತೆಯನ್ನು ಆತ್ಮೀಯರ ಮೂಲಕ ಏನೋ ತುರ್ತು ಕಾರ್ಯಗಳಿಗಾಗಿ ನಿರ್ವಹಿಸುವುದು ನೋಡಿದ್ದೇನೆ. ಹಾಗಾಗಿ ತಡೆಯದೆ ಕೇಳಿದೆ – ದಯವಿಟ್ಟು ನಿಮ್ಮ ಆರೋಗ್ಯ ಎಲ್ಲ ಸರಿಯಿದೆ ಎಂದು ಒಂದು ಮಾತು ಹೇಳಿಬಿಡಿ. ಅದೃಷ್ಟಕ್ಕೆ ಮಿನಿಟು ತಡೆದು ಬರೆದರು ಶೋಭನಾ ಕೃಪೆಯಿಂದ ಈಗ ಸ್ವಸ್ಥ. ಅಷ್ಟೇ ಕಾಳಜಿಯಲ್ಲಿ, ಚುರುಕಿನಲ್ಲಿ ಈಗ ಮುಗಿಸಿಕೊಟ್ಟ ಬೊಳುವಾರು ಮತ್ತು ಅವಧಿಗೂ (ಮೂಲದಲ್ಲಿ ವಾರ್ತಾಭಾರತಿ) ನಾನು ಕೃತಜ್ಞ. ಪ್ರಿಯರ ಸತ್ಕೃತಿಗಳನ್ನು ಆತಂಕದ ಕ್ಷಣಗಳಲ್ಲಿ ನೆನೆಸಿಕೊಳ್ಳುವುದರಿಂದಾಚೆಗೆ ನಾನೇನೂ ಹೇಳಲಾರೆ. ಅದರ ಮುಂದುವರಿಕೆಯ ಭರವಸೆಯಾಗಿ ಅವರು ನಮ್ಮೊಡನಿರುವುದಕ್ಕಿಂತ ಹೆಚ್ಚಿಗೆ ನಾನೇನೂ ಬಯಸಲಾರೆ. ಎಲ್ಲರಿಗೂ ಶುಭವಾಗಲಿ.

 

‍ಲೇಖಕರು G

13 October, 2012

1 Comment

  1. ಪಂಡಿತಾರಾಧ್ಯ ಮೈಸೂರು

    ಪ್ರಿಯರೆ, ಬಿಳಿಮಲೆಯವರ ಆತ್ಮಕಥೆಯನ್ನು ಬೊಳುವಾರು ಬರೆಯುವ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೆ. ದೆಹಲಿಗೆ ಹೋಗಿದ್ದಾಗ ಅವರ ಆತಿಥ್ಯದ ಆತ್ಮೀಯತೆಯನ್ನು ನಾನೂ ಸವಿದಿದ್ದೇನೆ. ಅವರು ನನಗೆ ಚಹಾ ಕೊಡಿಸುವಾಗಲೆಲ್ಲ ತಮ್ಮಗೆ ಪೀಕೀ(ಸಪ್ಪೆ)ಬೇಕೆಂದು ಕೇಳುವಾಗ ಮರುಗಿದ್ದೆ. ನಿಮ್ಮ ಲೇಖನ ನೋಡಿ ಆತಂಕ ಏರಿ ಸಮಾಧಾನವೆನಿಸಿತು. ಅವರು, ಶೋಭನಾ ದೀರ್ಘಕಾಲ ಆರೋಗ್ಯವಾಗಿರಲಿ. ಅವರ ಸೊದರಿ ಕಿರಿಮಲೆ ಮಂಗಳಗಂಗೋತ್ರಿಯಲ್ಲಿ ನನ್ನ ವಿದ್ಯಾರ್ಥಿನಿ.ಈಗ ಪ್ರಸಿದ್ಧ ಲೇಖಕಿ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading