‘ಅತ್ರಿ’ ಅಶೋಕವರ್ಧನ್ recommends.. 127 hours

-ಜಿ ಎನ್ ಅಶೋಕ ವರ್ಧನ

ಪರ್ವತಾರೋಹಿ ಸಾಹಸಿಯೊಬ್ಬ ಏಕಾಂಗಿಯಾಗಿ ವಿರಳ ಜನಸಂಚಾರ ವಲಯದ ಭಾರೀ ಪ್ರಾಕೃತಿಕ ಕೊರಕಲುಗಳ ಶೋಧಕ್ಕೆ ಹೋಗುತ್ತಾನೆ. ಅಲ್ಲಿ ಅಕಸ್ಮಾತಾಗಿ ಈತ ಕೊರಕಲೊಂದರ ಆಳಕ್ಕೆ ಉರುಳುತ್ತಾನೆ. ಆಗ ಜೊತೆಗುರುಳಿದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ಜಜ್ಜಿ ಹಿಡಿದು, ಪಾರುಗಾಣಲಾಗದ ಬಂಧನಕ್ಕೇ ಸಿಕ್ಕಿಸುತ್ತದೆ. ಮುಂದೆ ಒಂದೆರಡು ದಿನವಲ್ಲ, ಹೆಚ್ಚು ಕಡಿಮೆ ಐದೂಕಾಲು ದಿನ ಅಥವಾ ೧೨೭ ಗಂಟೆಗಳ ಕಾಲ ಈತ ಏಕಾಂಗಿಯಾಗಿಯೇ ನಡೆಸಿದ ಅಸಾಧಾರಣ ದೇಹ-ಮನಸ್ಸುಗಳ ಸಾಹಸದ ಫಲವಾಗಿ ಬದುಕಿ ಬರುತ್ತಾನೆ. ಇದು ಒಂದು ಸತ್ಯ ಘಟನೆ. ಇಂದೂ ತನ್ನ ಮೊಂಡುಗೈಯೊಡನೆ ಈ ಅಮೆರಿಕನ್ ಪ್ರಜೆ ಸಾಹಸಾನ್ವೇಷಣೆಯನ್ನು ಮುಂದುವರಿಸಿದ್ದಾನೆ! ಅದರ ಕಥಾ ಸಿನಿಮಾ ರೂಪವೇ ‘127 Hours’.

ಅಭಯ ಹತ್ತಿಪ್ಪತ್ತು ದಿನಗಳ ಹಿಂದೆಯೇ ಈ ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿದ ಮೇಲೆ ಹೇಳಿದ್ದ. ಗೆಳೆಯ ನಿರೇನ್ ಎಂದೂ ಕರೆಯದವರು “ಸಂಜೆ ಏಳೂಮುಕ್ಕಾಲರ ಶೋಗೆ ನಮ್ಮೊಡನೆ ಬನ್ನಿಯಪ್ಪಾ” ಎಂದು ಒತ್ತಾಯಿಸಿದರು. ಅಂಗಡಿಯನ್ನು ದಿಢೀರ್ ಬಿಡಲಾಗದ ಕಷ್ಟಕ್ಕೆ ನಾನು ಹೋಗಲಿಲ್ಲ. ಅಡ್ಲ್ಯಾಬ್ಸಿನ ಬಿಗ್ ಸಿನಿಮಾದಲ್ಲಿ (ಮಲ್ಟಿಪ್ಲೆಕ್ಸ್) ಮೊನ್ನೆಯವರೆಗೆ ಅದು ದಿನಕ್ಕೆ ಮೂರು ಪ್ರದರ್ಶನ ಕಾಣುತ್ತಿದ್ದದ್ದು ಇಂದು ಒಂದೇ ಎಂದು ಕಂಡಾಗ ನಾನು ಯೋಚನೆಗೆ ಬಿದ್ದೆ. ಮೂಡಬಿದ್ರೆಯಿಂದ ಇನ್ನೋರ್ವ ಗೆಳೆಯ ಕೃಶಿ ದೂರವಾಣಿಸಿ ಒತ್ತಾಯಿಸಿದಾಗ ಸೋತೆ. ದೇವಕಿಯನ್ನು ಅಂಗಡಿಗೆ ಮಾಡಿ ಮಧ್ಯಾಹ್ನ ಒಂದೂವರೆಯ ಪ್ರದರ್ಶನಕ್ಕೆ ಹಾಜರಾದೆ.

ಪ್ರದರ್ಶನ ಪೂರ್ವ ಬರುವ ‘ಇದು ಸತ್ಯ ಕಥೆ’ ಎನ್ನುವ ಶೀರ್ಷಿಕೆ, ಚಿತ್ರದ ಕೊನೆಯಲ್ಲಿ ಕಥಾನಾಯಕ ತನ್ನ ಮೊಂಡುಗೈ ಹೊಡೆತದಲ್ಲಿ ಈಜಿಕೊಂಡು ಬರುವುದು, ಮತ್ತದೇ ಕೈಗೆ ಶಿಲಾರೋಹಣದ ಸಲಕರಣೆ ಬಿಗಿದುಕೊಂಡು ಹಿಮನಾಡಿನಲ್ಲಿ ಸಾಹಸಾನ್ವೇಷಣೆಗೆಳಸುವುದು ಕಾಣುವಾಗ ಯಾರ ಭಾವಕೋಶವಾದರೂ ಉಕ್ಕಿ ಕಣ್ಣು ತುಂಬಿಸುತ್ತದೆ. ಆದರೆ ಒಟ್ಟಾರೆ ಸಿನಿಮಾ ಗ್ರಹಿಸುವಾಗ ಒಳ್ಳೆಯ ವಸ್ತುವೊಂದನ್ನು ಕೆಟ್ಟದ್ದಾಗಿ ನಿರ್ವಹಿಸಿದ್ದಾರೆಂದೇ ಹೇಳಬೇಕು. ನಗರದ ಗೌಜು ಗದ್ದಲದಿಂದ ಬಲುದೂರ (‘ಮುಂದಿನ ಸವಲತ್ತುಗಳು ಒಂದು ನೂರು ಮೈಲಿಯಾಚೆ’ ಎಂಬ ರಸ್ತೆ ಬದಿಯ ಬೋರ್ಡೂ ಕಾಣಿಸುತ್ತಾರೆ) ಹೊರಟ ಕಥಾನಾಯಕ ಮೊದಲು ಕಾರಿನಲ್ಲಿ ಹೆದ್ದಾರಿ ಜ಼ೂಮಿಸಿ, ಡಿಕ್ಕಿಯಿಂದ ತೆಗೆದ ಮೌಂಟೇನ್ ಬೈಕ್ ಏರಿ ಮತ್ತೆಷ್ಟೋ ಹಳ್ಳ ದಿಣ್ಣೆ ಕಚ್ಚಾದಾರಿ ಹಾರಿಸಿ, ಕೊನೆಯಲ್ಲಿ ನಡೆದೂ ಸಾಗುತ್ತಾನೆ. ಅಲ್ಲಿ ಆಕಸ್ಮಿಕವಾಗಿ ಸಿಕ್ಕುವ ಎರಡು ಅನನುಭವೀ ಚಾರಣಿಗರಿಗೆ ಈತ ಸಹಾಯಕ್ಕೊದಗುವುದು, ಅವರಿಗೂ ಸಣ್ಣದಾಗಿ ಸಾಹಸ ಕಲಾಪಗಳ ರುಚಿ ಹತ್ತಿಸುವುದೆಲ್ಲ ಪ್ರೇಕ್ಷಕರಲ್ಲಿ ಸಾಮಾನ್ಯ ಪೂರ್ವರಂಗವನ್ನು ಚೆನ್ನಾಗಿಯೇ ಸೃಷ್ಟಿಸುತ್ತದೆ. ಮುಂದುವರಿದಾಗ ನಿಜ ಕಥಾಕೇಂದ್ರದ ದುರ್ಘಟನೆ ಸಂಭವಿಸುತ್ತದೆ. ಮತ್ತೆ ಒಂಟಿಯಾಗಿ, ಪುಟಿಪುಟಿದು ಕೊರಕಲೊಂದಕ್ಕೆ ಇಳಿಯಲು ತೊಡಗಿದವನು ಕ್ಷಣ ಮಾತ್ರದಲ್ಲಿ ಆಳಕ್ಕುರುಳುತ್ತಾನೆ. ಉರುಳಿದ ಆಘಾತ ದೊಡ್ಡದಾಗುವುದಿಲ್ಲ. ಆದರೆ ಜೊತೆಗೆ ಕಳಚಿ ಕೆಳಬಿದ್ದ ಭಾರೀ ಬಂಡೆಯೊಂದು ಈತನ ಬಲ ಮುಂಗೈಯನ್ನು ತೀವ್ರವಾಗಿ ಜಜ್ಜಿಹಿಡಿದುಕೊಂಡು ಕೊರಕಲಿನ ಒಂದು ಎತ್ತರದಲ್ಲಿ ಕೀಲುಗಲ್ಲಾಗಿಯೇ ನಿಲ್ಲುತ್ತದೆ. ಈ ಆಕಸ್ಮಿಕವನ್ನು ವಿಷದಪಡಿಸುವಲ್ಲಿ ಮತ್ತು ಸಾಹಸಿಯ ಪೂರ್ಣ ಅನಿಶ್ಚಿತ ಭವಿಷ್ಯವನ್ನು ನಮಗೆ ಒಪ್ಪಿಸುವಲ್ಲಿ ಸಿನಿಮಾ ಸೋಲುತ್ತದೆ.

ಶಿಲಾರೋಹಣಕ್ಕೆ ಸಹಜವಾಗಿ ಒಯ್ದ ಸಣ್ಣಪುಟ್ಟ ಸಲಕರಣೆಗಳ ಸಹಾಯದಲ್ಲಿ ಕೈ ಪಾರುಗಾಣಿಸಲು ಆತ ಮಾಡುವ ಪ್ರಯತ್ನಗಳನ್ನು ಮೊದಲು ತೀರಾ ಅವಸರದಲ್ಲಿ ಕಾಣಿಸಿದ್ದಾರೆ. ಆದರೆ ಆ ಪ್ರಯತ್ನಗಳು, ಹಸಿವು ನೀರಡಿಕೆ ಮತ್ತು ವಿಶ್ರಾಂತಿಯಂಥ ಅನಿವಾರ್ಯತೆಗಳು ಐದು ದಿನಕ್ಕೂ ಮಿಕ್ಕು ಲಂಬಿಸಿದ್ದನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ನಿರ್ದೇಶಕ ಏನೇನೂ ಸರಕಿಲ್ಲದೆ ಸೋಲುತ್ತಾನೆ. (ಕಥಾನಾಯಕನೇ ಸ್ವಗತದಲ್ಲಿ ಹೇಳಿಕೊಂಡಂತೆ) ಕನಿಷ್ಠ ಎಂಟು ಜನ ದಾಂಡಿಗರಲ್ಲದೆ ಮಿಸುಕಲರಿಯದ ಕೀಲುಗಲ್ಲು, ಬಿಡಿಸಿಕೊಳ್ಳಲಾಗದ ಕೈ, ದಿನಗಟ್ಟಳೆ ಬೊಬ್ಬೆ ಹೊಡೆದರೂ ಕೇಳುಗರಿಲ್ಲದ ಬಂಡೆಗಾಡು, ಯಾವುದಕ್ಕೂ ಪರ್ಯಾಪ್ತವಾಗಲಾರದ ಸಲಕರಣೆಗಳು ನಿಧಾನ ಸಾವನ್ನಷ್ಟೇ ಮುನ್ನುಡಿಯುವುದರ ಪೂರ್ಣ ಅರಿವು ಕಥಾನಾಯಕನಿಗಿದೆ. ಜಜ್ಜಿಯೇ ಹೋದ ಮುಂಗೈ ಭಾಗ ಕೊಳೆಯುವ ಪ್ರಕ್ರಿಯೆ ದೇಹದ ಮೇಲುಂಟು ಮಾಡಬಹುದಾದ ಪರಿಣಾಮಗಳ ಮತ್ತು ಒಟ್ಟಿನಲ್ಲಿ ಮನಸ್ಸಿನಿಂದೇಳುವ ಭ್ರಮೆಗಳ ಕುರಿತೂ ಆತ ತಿಳಿಯದವನೇನಲ್ಲ. ಅವನ್ನೆಲ್ಲ ನಿಭಾಯಿಸಿದ ಕಥನವನ್ನು ಚಿತ್ರ ತೇಲಿಸಿದೆ. ಬದಲು ವಿಡಿಯೋ ಕ್ಯಾಮರಾದೆದುರು ಕೇವಲ ಕೌಟುಂಬಿಕ ನೆನಕೆಗಳನ್ನು ದಾಖಲಿಸುವುದು ಪ್ರಮುಖವಾಗಿ ಕಾಣಿಸುತ್ತದೆ. ಭ್ರಮೆಗಳಲ್ಲಿ ಭಾರೀ ಮಳೆ ಸುರಿದು ಎಲ್ಲ ಮುಳುಗಿಸುವುದು, ಈತನ ಆರ್ತಧ್ವನಿ ನಿರ್ಜನ ಕಲ್ಲ ಕೊರಕಲುಗಳ ವಿಸ್ತಾರದಲ್ಲಿ ಕಳೆದು ಹೋಗುವುದು, ಬಾಲ್ಯದ, ಪ್ರೇಮದ, ಮತ್ತು ವೃತ್ತಿಯ ಸಂಬಂಧಗಳು ಕಾಡುವುದೇ ಮೊದಲಾದ ಕಲ್ಪನೆಗಳು ಸುಂದರವಾಗಿಯೇ ಮೂಡಿವೆ. ಪುಟ್ಟ ಚೂರಿ ಹಿಡಿದು ಎಡಗೈಯಲ್ಲಿ ಬಂಡೆ ಒಡೆಯುವ ಪ್ರಯತ್ನದಲ್ಲಿ ನಮ್ಮ ಕಥಾನಾಯಕ ಸೋತಾಗ, ಚೂರಿಯ ಅಸಾಮರ್ಥ್ಯವನ್ನು ಅದರ ತಯಾರಕ ದೇಶ – ಚೀನಾ ಟೀಕೆಗೆ ಬಳಸಿದ್ದು ನಿರ್ದೇಶಕನ ಕೆಟ್ಟ ಅಭಿರುಚಿಯನ್ನು ತೋರಿಸುತ್ತದೆ. ಅವನ್ನೆಲ್ಲ ಮೀರುವಂತೆ ಒಂದೆರಡು ಹಗ್ಗ ಮತ್ತು ಪುಟ್ಟ ಚೂರಿಯೊಡನೆ ಸ್ವಂತ ಕೈಯನ್ನೇ ತುಂಡರಿಸಿ, ಸುದೀರ್ಘ ಬಳಲಿಕೆಯನ್ನು ಮೀರಿ ನಾಗರಿಕ ತೆಕ್ಕೆಗೆ ಸ್ವಂತ ಕಾಲಿನ ಮೇಲೇ ಮರಳಿದ ಸಾಹಸ ಕೇವಲ ಪವಾಡದಂತೆ ನಿರೂಪಣೆಗೊಂಡದ್ದು ನನಗಂತೂ ದೊಡ್ಡ ನಿರಾಶೆಯನ್ನೇ ಉಂಟುಮಾಡಿತು.

ಸದ್ಯ ಇಲ್ಲೇ ಬ್ಲಾಗಿನಲ್ಲಿ ಕೊಡಂಜೆಕಲ್ಲಿನ ಶಿಲಾರೋಹಣದ ಲೇಖನ ಸರಣಿಯಲ್ಲಿ ನಾನು ತೊಡಗಿಕೊಂಡಿರುವುದು ನೀವು ಓದಿಯೇ ಇದ್ದೀರಿ. ಅದರಲ್ಲೂ ಈಗ ಬರಹಕ್ಕಿಳಿಯುತ್ತಿರುವ ಕೊಡಂಜೆ ಅನುಭವವೊಂದು ‘೧೨೭ ಗಂಟೆಗಳು’ ಅನುಭವಕ್ಕೆ ಭಾರೀ ದೂರದ್ದೇನೂ ಅಲ್ಲ ಎಂದು ನನ್ನ ಭಾವನೆ. ನನ್ನ-ದುಃಖದ ಮೋಹ ಸಿನಿಮಾ ಮೆಚ್ಚಿಕೊಳ್ಳಲು ಅಡ್ಡಿಯಾಗಿರಬಹುದೇ? ಸುಮಾರು ಹತ್ತು ದಿನಗಳನಂತರ ಬರಲಿರುವ ನನ್ನ ಲೇಖನ ಓದಿ ನಿರುಮ್ಮಳವಾಗಿ ನಿರ್ಧರಿಸಲು, ಏನಲ್ಲದಿದ್ದರೂ ಅಸಾಧಾರಣ ಸಾಹಸ ಒಂದನ್ನು ಥಿಯೇಟರಿನ ಭದ್ರ ನೆಲೆ ಹಾಗೂ ತಂಪು ವಾತಾವರಣದಲ್ಲಿ ಮೆತ್ತನೆ ಖುರ್ಚಿಯಲ್ಲಿ ಕುಳಿತು ಒಮ್ಮೆ ವೀಕ್ಷಿಸಲು ಖಂಡಿತಾ ಒಳ್ಳೆಯ ಸಿನಿಮಾ ೧೨೭ ಗಂಟೆಗಳು

 

‍ಲೇಖಕರು avadhi

February 14, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Padmaraj S

    ನಾನೂ ಈ ಸಿನೆಮಾ ನೋಡಿದೆ, ಒಬ್ಬ ಮನುಷ್ಯ ತನ್ನ ಮುಂಗೈ ಕತ್ತರಿಸಿಕೊಂಡು ಅಷ್ಟು ದೂರ ನಡೆಯೋವುದೂ ಹಾಗೆ ನೀರು ಕುಡಿಯಲು ರಾಪ್ಪ್ಲಿಂಗ್ ಮಾಡಿಕೊಂಡು ಕೆಳಗಿಲಿಯುವುದೂ ಸ್ವಲ್ಪ ರಜನಿಕಾಂತ್ ಸ್ಟೈಲ್ ಅನ್ನಿಸಿದ್ದು ನಿಜ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: