'ಕಾವ್ಯಮನೆ'ಯ ಅತಿಜಮ್ಮಳ ಸ್ವರ್ಗ

ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017
ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ
ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ‘ಕಾವ್ಯ ಮನೆ’ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು,
ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು ಆಯ್ಕೆ ಮಾಡಿ ಫಲಿತಾಂಶ ನೀಡಿದ್ದಾರೆ.
ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಎಲ್ಲಾ ಕಥೆಗಳನ್ನೂ ಅವಧಿಯಲ್ಲಿ ಪ್ರಕಟಿಸಲಾಗುವುದು 
ಇಲ್ಲಿರುವುದು ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಪಡೆದ ಕಥೆ 
ಇಸ್ಮತ್ ಫಜೀರ್
ಅದು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸಮಾರೋಪಗೊಳ್ಳುತ್ತಿರುವ ಮತಪ್ರವಚನ ಕಾರ್ಯಕ್ರಮದ ವೇದಿಕೆ. ಜಗಮಗಿಸುವ ಬಣ್ಣ ಬಣ್ಣದ ಬೆಳಕಿನಿಂದಾವೃತವಾದ ಆ ವೇದಿಕೆಯಲ್ಲಿ ಮೈಕ್ ಮುಂದೆ ಭಕ್ತಿ ನಿರ್ಭರ ದುವಾ ಮಾಡುತ್ತಿರುವವರು ಅಂತಿಂತವರಲ್ಲ. ಅಂತಾರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ಪ್ರವಚನಕಾರ ಮೌಲಾನಾ ವಹೀದುದ್ದೀನ್ ಅರ್ಮಾನಿ!!! “ಅಲ್ಲಾಹನ ಭವನಕ್ಕಾಗಿ ಧನ ಸಹಾಯ ಮಾಡಿ ಸ್ವರ್ಗದಲ್ಲಿ ನಿಮಗೊಂದು ಭವನವನ್ನು ಖಚಿತಪಡಿಸಿಕೊಳ್ಳಿ” ಎಂಬ ಮೌಲಾನಾರ ಒಂದು ಕರೆಗೆ ಪುಳಕಿತಗೊಂಡು ಐದು ಸಾವಿರ, ಹತ್ತು ಸಾವಿರ, ಇಪ್ಪತ್ತು ಸಾವಿರ, ಐವತ್ತು ಸಾವಿರವೆಂದು ಬರೆಸಿದರು. ಕೆಲವು ಮಹಿಳೆಯರು ತಮ್ಮ ಕೈಯಲ್ಲಿದ್ದ ಉಂಗುರ, ಬಳೆ ಇತ್ಯಾದಿ ಚಿನ್ನಾಭರಣಗಳನ್ನು ಕಳಚಿ ಕೊಟ್ಟು ಸ್ವರ್ಗದಲ್ಲಿ ಹವಾನಿಯಂತ್ರಿತ ಮಹಲ್ ಬುಕ್ ಮಾಡಿಕೊಂಡರು. ಕುದ್ರುಪಾಡಿಯ ಬಡ ವಿಧವೆ ಅತಿಜಮ್ಮಳೂ ಹಿಂದೆ ಮುಂದೆ ಯೋಚಿಸದೇ ತನಗೆ ಸ್ವರ್ಗದಲ್ಲಿ ಕನಿಷ್ಠ ಒಂದು ಗುಡಿಸಲಾದರೂ ಸಿಗಲಿ ಎಂದು ಒಂದು ಸಾವಿರ ರೂಪಾಯಿ ಬರೆಸಿದಳು.
ಮೌಲಾನಾರ ಭಕ್ತಿ ನಿರ್ಭರ ದುವಾದ ಬಳಿಕ ವೇದಿಕೆಯೇರಿ ಮೈಕ್ ಮುಂದೆ ನಿಂತ ಮಸೀದಿ ಆಡಳಿತ ಸಮಿತಿಯ ಸೆಕ್ರೆಟರಿ ಮೊೈದಿ ಕುಂಞ “ಇಂದು ಮೌಲಾನಾರ ಕರೆಗೆ ಓಗೊಟ್ಟು ತಾವುಗಳು ಬರೆಸಿದ ಮೊತ್ತವನ್ನು ಮೂರು ತಿಂಗಳೊಳಗಾಗಿ ತಲಪಿಸತಕ್ಕದ್ದು. ಮಾರ್ಚ್ ಹದಿನೆಂಟನೇ ತಾರೀಕು ಶುಕ್ರವಾರ ಅಸರ್ ನಮಾಝಿನ ಬಳಿಕ ನೂತನ ಮಸೀದಿಯ ಶಿಲಾನ್ಯಾಸ ಕಾರ್ಯಕ್ರಮ ಜರಗಲಿರುವುದು.
ಕೇರಳದ ಪ್ರಸಿದ್ಧ ವಿದ್ವಾಂಸ ಮೌಲಾನಾ ಶೈಕ್ ಅಸದುದ್ದೀನ್ ಜಬ್ಬಾರಿಯವರು ಈಗಾಗಲೇ ನಮ್ಮ ಮಸೀದಿ ಶಿಲಾನ್ಯಾಸಕ್ಕೆ ಆಗಮಿಸಲು ಒಪ್ಪಿಕೊಂಡಿರುವುದು ನಮ್ಮೆಲ್ಲರ ಭಾಗ್ಯ. ಎಲ್ಲರೂ ಕ್ಲಪ್ತ ಸಮಯದೊಳಗಾಗಿ ಬರೆಸಿದ ಮೊತ್ತವನ್ನು ತಲಪಿಸಿ ಅವರ ದುವಾಕ್ಕೆ ಭಾಜನರಾಗಿ ಸ್ವರ್ಗವನ್ನು ಖಚಿತಪಡಿಸಿಕೊಳ್ಳಿ” ಎಂದು ಘೋಷಿಸಿದರು. ಇತ್ತ ದುವಾ ಮುಗಿಸಿದ ಮೌಲಾನಾರು ಮಸೀದಿಯ ಖತೀಬರ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಆಡಳಿತ ಸಮಿತಿಯ ಅಧ್ಯಕ್ಷ, ಸೆಕ್ರೆಟರಿ, ಉಪಾಧ್ಯಕ್ಷರು ಕೊಠಡಿಗೆ ತೆರಳಿ ಮೌಲಾನಾರಿಗೆ ದುಡ್ಡಿನ ಕಟ್ಟೊಂದನ್ನು ನೀಡಿದರು.
ಮೌಲಾನಾ “ಒಟ್ಟು ಎಷ್ಟು ಚಿನ್ನ ಮತ್ತು ದುಡ್ಡು ಈಗಾಗಲೇ ಬಂದಿದೆ? ಬರೆಸಿದ ಒಟ್ಟು ಮೊತ್ತ ಎಷ್ಟು ಒಂದು ಅಂದಾಜು ಮೌಲ್ಯ ಹೇಳಿ” ಎಂದರು. ಏಳೂವರೆ ಲಕ್ಷ ರೂಪಾಯಿಗಳಾಗಬಹುದು ಎಂದು ಅಬ್ಬುಹಾಜಿ ಮೆಲುದನಿಯಲ್ಲಿ ಹೇಳಿದರು. ಇದರಲ್ಲಿ ಎಷ್ಟಿದೆ ಎಂದು ತನ್ನ ಕೈಯಲ್ಲಿದ್ದ ದುಡ್ಡಿನ ಕಟ್ಟನ್ನು ಎತ್ತಿ ತೋರಿಸಿ ಪ್ರಶ್ನಿಸಿದರು. ಮೂವತ್ತು ಸಾವಿರವಿದೆ ಉಸ್ತಾದ್. ಮೌಲಾನಾ ಒಂದಿನಿತೂ ಮುಲಾಜು ತೋರಿಸದೇ ನಾನು ಭಟ್ಕಳ, ಕಾಸರಗೋಡುಗಳಲ್ಲೆಲ್ಲಾ ಇಪ್ಪತ್ತು ಪರ್ಸೆಂಟ್ ತಗೊಳ್ಳುತ್ತೇನೆ. ನಿಮ್ಮದು ಬಡ ಜಮಾಅತ್ ಅಂತ ನಾನು ಎಷ್ಟೆಂದು ಬಾಯಿ ಬಿಟ್ಟು ಹೇಳಲಿಲ್ಲ.
ಒಂದು ಹತ್ತು ಪರ್ಸೆಂಟಾದರೂ ನೀಡದಿದ್ದರೆ ಹೇಗೆ ಹಾಜಾರೆ…..? ಇಲ್ಲಾಂದ್ರೆ ಇದನ್ನೂ ನೀವೇ ಇಟ್ಕೊಳ್ಳಿ ಎಂದರು. ಅಬ್ಬುಹಾಜಿಗೆ ಒಂಥರಾ ಕಸಿವಿಸಿಯಾಯಿತು. ಆದರೂ ತೋರ್ಪಡಿಸದೇ ಅಲ್ಲಿಂದ ತೆರಳಿ ಮತ್ತೆ ನಲ್ವತ್ತೈದು ಸಾವಿರ ಸೇರಿಸಿ ಕೊಟ್ಟು ಮನದಲ್ಲೇ ಮೌಲಾನಾರಿಗೆ ಹಿಡಿಶಾಪ ಹಾಕಿದರು.

ಅತಿಜಮ್ಮಳ ಗಂಡ ಪೆÇೀಕೊರು ಬ್ಯಾರಿ ಆಕೆಗೆ ಒಂದಾದ ಮೇಲೊಂದರಂತೆ ಬರೋಬ್ಬರಿ ನಾಲ್ಕು ಹೆಣ್ಮಕ್ಕಳನ್ನು ಕರುಣಿಸಿ ವ್ಯಾಪಾರಕ್ಕೆಂದು ಘಟ್ಟ ಹತ್ತಿದವನು ಮತ್ತೆ ಮರಳಿ ಬರಲೇ ಇಲ್ಲ. ಅತಿಜಮ್ಮಳ ಕಿರಿಮಗಳು ಹಸೀನಾಳಿಗೆ ಹದಿಮೂರು ತುಂಬಿ ಮೈ ನೆರೆತರೂ ಗಂಡ ಬದುಕಿದ್ದಾನೋ ಇಲ್ಲವೋ ಎಂದು ಯಾವೊಂದು ವರ್ತಮಾನವೂ ದೊರಕದೆ, ಕಂಡ ಕಂಡವರಲ್ಲಿ ತನ್ನ ಗಂಡನ ಹುಡುಕಿಕೊಡಿ ಎಂದು ಗೋಗರೆಯುತ್ತಿದ್ದಳು. ಹಿಂದೆಲ್ಲಾ ಪ್ರತೀ ಮಳೆಗಾಲ ಬರುವಾಗಲೂ ತನ್ನ ಗಂಡ ಇವತ್ತು ಬರ್ತಾನೆ, ನಾಳೆ ಬರ್ತಾನೆ ಎಂದು ಆಸೆಯಿಂದ ಕಾಯುತ್ತಿದ್ದಳು. ಬರಬರುತ್ತಾ ಬದುಕಿನ ಘೋರ ವಾಸ್ತವದೊಂದಿಗೆ ಮುಖಾಮುಖಿಯಾಗಿ ಬದುಕುವುದನ್ನು ಆಕೆ ಕಲಿತಳು. ಅತಿಜಮ್ಮಳ ಹಿರಿಮಗಳು ನಸೀಮಳಿಗೆ ಇಪ್ಪತ್ತನಾಲ್ಕು ದಾಟಿತು. ಅತಿಜಮ್ಮ ತನ್ನ ಮಗಳಿಗೊಂದು ಗಂಡು ಹುಡುಕಿ ಕೊಡಿ ಎಂದು ಕಂಡ ಕಂಡ ದಲ್ಲಾಳಿಗಳಿಗೆ ದುಂಬಾಲು ಬೀಳುತ್ತಿದ್ದಳು. ಅತಿಜಮ್ಮಳ ಅಸಹಾಯಕತೆಯನ್ನು ಚೆನ್ನಾಗಿ ಅರಿತ ದಲ್ಲಾಳಿಗಳು ಕಾಸರಗೋಡಿನಲ್ಲೊಬ್ಬ ಹುಡುಗನಿದ್ದಾನೆ, ಪುತ್ತೂರಿನಲ್ಲಿ ಇನ್ನೊಬ್ಬ ಹುಡುಗನಿದ್ದಾನೆ, ನಾಳೆ ಆತನ ಕುರಿತು ವಿಚಾರಿಸಲು ಅವನ ಊರಿಗೆ ಹೋಗುತ್ತಿದ್ದೇನೆ.
ಬಸ್ ಖರ್ಚಿಗೆ ಇನ್ನೂರು ಕೊಡು, ಮುನ್ನೂರು ಕೊಡು ಎಂದು ವಸೂಲಿ ಮಾಡಿಕೊಂಡು ಹೋಗುತ್ತಿದ್ದರು. ಅವರಿಗೆ ಮತ್ತೆ ಏನಾದರೂ ಅತಿಜಮ್ಮ ಎದುರಾದರೆ ಹುಡುಗ ಬೊಂಬಾಯಿಗೆ ಕೆಲಸಕ್ಕೆ ಹೋಗಿದ್ದಾನೆ, ವ್ಯಾಪಾರಕ್ಕೆಂದು ಘಟ್ಟಕ್ಕೆ ಹೋಗಿದ್ದಾನೆ, ಹೀಗೆ ಏನಾದರೊಂದು ಸುಳ್ಳು ಹೇಳಿ ಜಾಗ ಖಾಲಿ ಮಾಡುತ್ತಿದ್ದರು. ಮತ್ತೆ ಮತ್ತೆ ಅತಿಜಮ್ಮ ಬೆನ್ನು ಬಿದ್ದು ವಿಚಾರಿಸಿದರೆ “ನಾನು ಅವನ ಊರಿಗೆ ಹೋಗಿ ಅಲ್ಲಿನ ಮಸೀದಿಯ ಮೊೈಲಾರರೊಂದಿಗೆ ಆತನ ಕುರಿತಂತೆ ವಿಚಾರಿಸಿದಾಗ ಆತ ಮೈಗಳ್ಳನೆಂದೂ, ಕುಡುಕನೆಂದೂ ಸುದ್ಧಿ ಸಿಕ್ಕಿತು. ಅಂತವುಗಳನ್ನು ನಿನ್ನಂತಹ ಪಾಪದವರಿಗೆ ತಗಲಿಸಿದರೆ ಅಲ್ಲಾಹು ಮೆಚ್ಚಲಾರ ಎಂದು ಅದನ್ನು ಬಿಟ್ಟುಬಿಟ್ಟೆ. ಬೇರೆಲ್ಲಾದರೂ ಒಳ್ಳೆಯದು ಸಿಕ್ಕಿದರೆ ತಿಳಿಸುತ್ತೇನೆ” ಎಂದು ಜಾರಿಕೊಳ್ಳುತ್ತಿದ್ದರು.
ಊರಿನ ಉಂಡಾಡಿ ದಲ್ಲಾಳಿಗಳೆಲ್ಲಾ ಖರ್ಚಿಗೆ ಕಾಸಿಲ್ಲದಾಗ ಇಂತಹ ಬಡಪಾಯಿಗಳಿಂದ ವಸೂಲಿ ಮಾಡುತ್ತಿದ್ದರು. ಒಮ್ಮೆ ಬ್ರೋಕರ್ ಈಸುಬು ಅತಿಜಮ್ಮಳನ್ನು ಪ್ರಕಾಶ್ ಬೀಡಿ ಕಂಟ್ರಾಕ್ಟರ್ ಅಮ್ಮದೆ ಬ್ಯಾರಿಯ ಅಂಗಡಿ ಬಳಿ ಕಂಡವನೇ ಓಡೋಡಿ ಬಂದು ಆಕೆಯನ್ನು ದೂರ ಕರೆದು “ಮಂಜೇಶ್ವರದಲ್ಲಿ ಒಬ್ಬ ಒಳ್ಳೆಯ ಹುಡುಗನಿದ್ದಾನೆ. ಮಂಗಳೂರು ದಕ್ಕೆಯಲ್ಲಿ ಮೀನಿನ ಲೋಡಿಂಗ್ ಅನ್‍ಲೋಡಿಂಗ್ ಕೆಲಸ ಮಾಡುವವನಂತೆ. ಇಬ್ಬರು ಮಕ್ಕಳು, ತಂಗಿಗೆ ಕಳೆದ ವರ್ಷ ಮದುವೆ ಮಾಡಿಕೊಟ್ಟಿದ್ದಾನಂತೆ. ದೊಡ್ಡ ಡಿಮ್ಯಾಂಡೇನಿಲ್ಲ. ಹತ್ತು ಪವನ್ ಚಿನ್ನ ಮತ್ತು ಒಂದು ಲಕ್ಷ ಕಾಸು ಕೊಟ್ಟರೆ ಸಾಕಂತೆ, ಸ್ವಂತ ಮನೆಯೂ ಇದೆಯಂತೆ. ನಿನ್ನ ಮಗಳಿಗೆ ಮಾತಾಡುವನಾ ಹೇಗೆ?”.ಈಸುಬಾಕ ಅದೊಂದು ಕೆಲಸ ಮಾಡಿ. ನಿಮಗೆ ಅಲ್ಲಾಹು ಒಳ್ಳೆಯದು ಮಾಡ್ತಾನೆ ಎಂದು ತನ್ನ ಸೊಂಟಕ್ಕೆ ನೇತು ಹಾಕಿದ್ದ ಸಂಚಿಯಿಂದ 20 ರ ಐದು ನೋಟು ತೆಗೆದು ಕೊಟ್ಟಳು. ಹಾಗೆ ದುಡ್ಡು ಹಿಡಿದುಕೊಂಡು ಹೋದವ ಮತ್ತೆ ಅತಿಜಮ್ಮಳನ್ನು ಕಂಡಾಗೆಲ್ಲಾ ತಲೆ ತಪ್ಪಿಸುತ್ತಿದ್ದ. ಅತಿಜಮ್ಮ ಮತ್ತು ಆಕೆಯ ಹೆಣ್ಮಕ್ಕಳು ಸೊಂಟ ಮುರಿದು ಬೀಡಿ ಕಟ್ಟಿ ಸಂಪಾದಿಸಿದ ಇಂತಹ ಅದೆಷ್ಟೋ ದುಡ್ಡು ಇಂತಹ ಉಂಡಾಡಿ ದಳ್ಳಾಳಿಗಳ ಹೊಟ್ಟೆ ಸೇರಿತ್ತು.

ಕೆಟ್ಟ ಮೇಲೆ ಬುದ್ಧಿ ಎಂಬಂತೆ ಅತಿಜಮ್ಮ ಮದುವೆ ದಲ್ಲಾಳಿಗಳ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದಳು. ಒಮ್ಮೆ ಬ್ರೋಕರ್ ಪೆÇಡಿಮೋನುವನ್ನು ಹಿಡಿಸೂಡಿ ಹಿಡಿದು ಓಡಿಸಿದ್ದೂ ಇದೆ. ಅತಿಜಮ್ಮಳಿಗೆ ಇತ್ತೀಚೆಗೆ ಪ್ರಾರಂಭವಾದ ಹೊಸ ಚಾಳಿ ಮೊೈಲಾರ್‍ಗಳಿಗೆ ದುಡ್ಡು ಕೊಟ್ಟು ದುವಾ ಮಾಡಿಸುವುದು. ಅಂತೆಯೇ ಹೊಸ ಮಸೀದಿ ನಿರ್ಮಾಣಕ್ಕೆ ಒಂದು ಸಾವಿರ ರೂಪಾಯಿ ಬರೆಸಿ ದುವಾವನ್ನು ಗಿಟ್ಟಿಸಿಕೊಂಡಿದ್ದಳು ಮತ್ತು ಸ್ವರ್ಗದಲ್ಲೊಂದು ಗುಡಿಸಲನ್ನು ಬುಕ್ ಮಾಡಿಸಿದ್ದಳು.
ನೂತನ ಮಸೀದಿಗೆ ದುಡ್ಡು ಕೊಡುತ್ತೇನೆಂದು ಬರೆಸಿದಾಗ ಸೆಕ್ರೆಟರಿ ಮೊೈದಿ ಕುಂಞ ದುಡ್ಡು ತಲುಪಿಸಲು ನಿಗದಿಪಡಿಸಿದ್ದ ಮೂರು ತಿಂಗಳ ಅವಧಿ ಮುಗಿಯಲು ಇನ್ನೇನು ಮೂರು ದಿನಗಳು ಮಾತ್ರ ಉಳಿದಿತ್ತು. ಅಧ್ಯಕ್ಷ ಅಬ್ಬುಹಾಜಿ ತನ್ನ ಪಟಾಲಂನ ಸದಸ್ಯರನ್ನು ಕರೆಸಿ ಬರೆಸಿದ ದುಡ್ಡು ವಸೂಲಿ ಮಾಡಲು ಕಳುಹಿಸಿದ. ಕೆಲವರು ಬರೆಸಿದ ಮೊತ್ತ ಕೊಟ್ಟರೆ, ಮತ್ತೆ ಕೆಲವರು ಒಂದು, ಎರಡು ದಿನಗಳ ಕಾಲಾವಕಾಶ ಕೇಳಿದರು. ಅಬ್ಬುಹಾಜಿಯ ಪಟಾಲಂ ಅತಿಜಮ್ಮಳ ಗುಡಿಸಲಿನ ಹೊರಗೆ ನಿಂತು ವಿಷಯ ಪ್ರಸ್ತಾಪಿಸಿದರು. ಅತಿಜಮ್ಮಳಿಗೆ ದಿಕ್ಕೇ ತೋಚದಂತಾಗಿ ಒಂದು ತಿಂಗಳ ಕಾಲಾವಕಾಶ ಕೋರಿದಳು. ಅದಕ್ಕೊಬ್ಬಾತ ಈಗಾಗಲೇ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದ.
ಇನ್ನೊಬ್ಬಾತ ಆಗದವಳು ಬರೆಸಿದ್ದು ಯಾಕೆ? ನಿನ್ನನ್ನೇನು ನಾವು ದುಡ್ಡು ಬರೆಸಲು ಒತ್ತಾಯಿಸಿದ್ದೇವಾ ಎಂದ. ಮತ್ತೊಬ್ಬ ಆ ಬ್ರೋಕರ್‍ಗಳಿಗೆ ತಿನ್ನಿಸುವ ದುಡ್ಡನ್ನು ಮಸೀದಿಗೆ ಕೊಟ್ಟಿದ್ದರೆ ಪುಣ್ಯ ಬರುತ್ತಿತ್ತು ಎಂದ. ಅತಿಜಮ್ಮಳ ತಲೆಗೆ ಕಟ್ಟಿದ್ದ ಯಲಾಸರ ಜಾರಿ ಕಿವಿಯಲ್ಲಿದ್ದ ಅಲಿಕಾತಿನ ಗೊಂಚಲು ಅವರಿಗೆ ಕಾಣಿಸಿತು. ಅದು ಕಂಡದ್ದೇ ತಡ ಮೊೈದಿಕುಂಞ ನೀನು ಮುದುಕಿಯಾಗಿದ್ದೀಯಾ, ಇಷ್ಟು ಚಿನ್ನದ ಅಲಿಕಾತು ಎಂತಕ್ಕೆ…. ಕಬುರಿಗೆ ಹೋಗುವಾಗ ಕೊಂಡುಹೋಗಲಿಕ್ಕುಂಟಾ? ಅದನ್ನು ಮಾರಿಯಾದರೂ ಮಸೀದಿಯ ಸಾಲ ತೀರಿಸು ಎಂದ. ಸೇರಿದವರೆಲ್ಲಾ ಹೋ ಎಂದು ನಕ್ಕು ಹೌದೌದು ಎಂದರು. ಅತಿಜಮ್ಮನಿಗೆ ಪೇಚಿಗೆ ಸಿಲುಕಿದಂತಾಯ್ತು. ಇದರಲ್ಲಿ ಒಂದು ಒಲಿ ಮಾತ್ರ ಚಿನ್ನದ್ದು ಉಳಿದದ್ದೆಲ್ಲಾ ಗಿಲೀಟಿನದ್ದು ಎಂದಳು. ಅದಕ್ಕಾತ ಒಂದು ಒಲಿ ಮಾರಿದರೆ ಒಂದು ಸಾವಿರವಲ್ಲ ಎರಡು ಸಾವಿರ ಸಿಗುತ್ತದೆ. ಏನಾದ್ರೂ ಮಾಡು ಮೂರು ದಿನಗಳೊಳಗಾಗಿ ಬರೆಸಿದ ದುಡ್ಡು ತಲಪಿಸು.
ನಿಮ್ಮಂತವರು ಯಾವತ್ತೂ ಇದಕ್ಕೆ ಬರ್ಕತ್ತಾಗುವುದಿಲ್ಲ. ಮಸೀದಿಯ ದುಡ್ಡು ಬಾಕಿ ಇರಿಸುವುದಕ್ಕೆ. ನೀನು ಮಸೀದಿಯ ತಿಂಗಳ ವಂತಿಗೆ ಕೊಡದೇ ಒಂದೂವರೆ ವರ್ಷವಾಯಿತು. ಅದೂ 1,800 ರೂಪಾಯಿ ಬಾಕಿ ಉಂಟು. ಹೇಳಿಲ್ಲಾ ಅಂತ ಬೇಡ, ಮಸೀದಿಯ ದುಡ್ಡು ಬಾಕಿ ಇರಿಸಿದರೆ ನಾಳೆ ಜಹನ್ನಮ್ ಎಂಬ ನರಕದಲ್ಲಿ ಹಾಕಿ ಅಲ್ಲಾಹು ಸುಡುತ್ತಾನಷ್ಟೆ ಎಂದು ಅಲ್ಲಿಂದ ಮೊೈದಿಕುಂಞ ಮತ್ತವನ ಪಟಾಲಂ ಹೊರಟು ಹೋಯಿತು. ಇದನ್ನೆಲ್ಲಾ ಬಿಜ್ಜದ ಮರೆಯಿಂದ ನೋಡುತ್ತಿದ್ದ ಅತಿಜಮ್ಮನ ಮಕ್ಕಳು ನಿನಗ್ಯಾಕೆ ಬೇಡದ ಕೆಲಸ…? ನಮ್ಮಲ್ಲಿ ಎಂತ ಮಣ್ಣು ಉಂಟು ಅಂತ ನೀನು ಒಂದು ಸಾವಿರ ರೂಪಾಯಿ ಬರೆಸಿದ್ದು….? ಉಳ್ಳವರು ಬರೆಸ್ತಾರೆಂತ ನೀನೂ ಬರೆಸುವುದಾ…? ಆ ಮೊೈಲಾರ್ ಏನು ಸ್ವರ್ಗದ ಟಿಕೆಟ್ ಕೊಡುವ ಏಜೆಂಟಾ? ಎಂದು ಚೆನ್ನಾಗಿ ಜಾಡಿಸಿದರು.
ಅತಿಜಮ್ಮ ಅಂದು ಇಶಾ ನಮಾಜು ಮಾಡಿದವಳೇ ಹೊಟ್ಟೆಗೇನೂ ತಿನ್ನದೇ ನಮಾಝಿನ ಚಾಪೆಯಲ್ಲಿ ಮಲಗಿ ನಿದ್ದೆ ಹೋದಳು. ಕಿರಿಮಗಳು ಹಸೀನಾ ರಾತ್ರಿ ಹತ್ತೂವರೆ ಗಂಟೆಗೆಲ್ಲಾ ಆ ದಿನ ಕಟ್ಟಿದ ಬೀಡಿಯ ಕಟ್ಟು ತಿರುಗಿಸಿ ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಮನೆಯ ಹಿಂಬದಿಯಿರುವ ಬಚ್ಚಲು ಕೋಣೆಗೆ ಚಿಮಿನಿ ಹಿಡಿದುಕೊಂಡು ಹೋದಳು. ಒಂದರೆ ನಿಮಿಷ ಕಳೆದಿರಬಹುದಷ್ಟೆ. ಉಮ್ಮಾ ಎಂದು ಬೊಬ್ಬಿರಿಯುತ್ತಾ ಮನೆಯತ್ತ ಓಡಿ ಬಂದಳು. ಬಲಗಾಲಿನ ಮಣಿಗಂಟಿನ ಬಳಿ ರಕ್ತ ತೊಟ್ಟಿಕ್ಕುತ್ತಿತ್ತು. ಅಕ್ಕಂದಿರು ಏನಾಯಿತು ಎಂದು ಕೇಳುವಷ್ಟರಲ್ಲಿ ಹಾವು ಎಂದು ಹೇಳಿದ್ದೊಂದಿದೆ. ಮತಿ ತಪ್ಪಿ ಬಿದ್ದವಳ ಮುಖಕ್ಕೆ ಅಕ್ಕಂದಿರು ನೀರು ಚಿಮುಕಿಸಿದರು. ಆಕೆಯ ಕಾಲು ಹದ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು. ಇದನ್ನು ಕಂಡು ಗಾಬರಿಯಾದ ಹಿರಿಮಗಳು ಓಡೋಡಿ ಹೋಗಿ ಪಕ್ಕದ ಮನೆಯ ತೋಮ ಮತ್ತು ಆತನ ಹೆಂಡ್ತಿ ಕೊಗ್ಗಿಯನ್ನು ಕರೆದುಕೊಂಡು ಬಂದಳು. ಕೊಗ್ಗಿ ಹಸೀನಾಳನ್ನು ನೋಡಿದವಳೇ ಇನಿತೂ ತಡ ಮಾಡದೇ ಉಟ್ಟಿದ್ದ ಸೀರೆಯ ತುದಿಯನ್ನು ಬಾಯಲ್ಲಿ ಕಚ್ಚಿ ಹರಿದು ಮಣಿಗಂಟಿಗಿಂತ ತುಸು ಮೇಲ್ಭಾಗಕ್ಕೆ ಪಟ್ಟಿ ಕಟ್ಟಿದಳು. ತೋಮ ಟಾರ್ಚ್ ಹಿಡಿದುಕೊಂಡು 108 ಆ್ಯಂಬುಲೆನ್ಸ್ ಕರೆತರಲು ಓಡಿದ. ಕೊಗ್ಗಿ ಮತ್ತು ನಸೀಮಾ ಹಸೀನಾಳನ್ನು ಎತ್ತಿ ಆ್ಯಂಬುಲೆನ್ಸ್‍ನಲ್ಲಿ ಮಲಗಿಸಿದರು.

ಕೊಗ್ಗಿ, ತೋಮ ಮತ್ತು ಅತಿಜಮ್ಮ ಆಕೆಯನ್ನು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದರು. ಆಸ್ಪತ್ರೆಯಲ್ಲಿ ಹಸೀನಾಳಿಗೆ ತುರ್ತು ಚಿಕಿತ್ಸೆ ಪ್ರಾರಂಭಿಸಿದರು. ಹಸೀನಾಳನ್ನು ಬದುಕಿಸಬೇಕಾದರೆ ಕೆಲವು ದುಬಾರಿ ಬೆಲೆಯ ಇಂಜೆಕ್ಷನ್‍ಗಳು ಬೇಕಾದೀತು. ಅವು ಇಲ್ಲಿ ಸಿಗುವುದಿಲ್ಲ. ಹೊರಗಿನಿಂದ ದುಡ್ಡು ಕೊಟ್ಟು ತರಬೇಕೆಂದು ವೈದ್ಯರು ಸೂಚಿಸಿದರು. ಮರುದಿನ ಬೆಳಗಾಗುತ್ತಲೇ ಅತಿಜಮ್ಮ ತನ್ನ ಕಿವಿಯಲ್ಲಿದ್ದ ಅಲಿಕಾತಿನ ಏಕೈಕ ಒಲಿಯನ್ನು ಬಿಚ್ಚಿ ತೋಮನ ಕೈಗಿತ್ತಳು. ತೋಮ ಅದನ್ನು ಮಂಗಳೂರಿನ ಕಾರ್‍ಸ್ಟ್ರೀಟ್‍ನಲ್ಲಿರುವ ಚಿನ್ನದ ಅಂಗಡಿಯೊಂದಕ್ಕೆ ಮಾರಿ 1,800/- ರೂಪಾಯಿ ಬೆಲೆಗೆ ಎರಡು ಇಂಜೆಕ್ಷನ್ ಖರೀದಿಸಿ ತಂದನು. ಐ.ಸಿ.ಯು.ವಿನ ಹೊರಗಡೆ ತೋಮ ಕಾದು ನಿಂತು ಅತಿಜಮ್ಮ ಮತ್ತು ಕೊಗ್ಗಿಯನ್ನು ಕಳುಹಿಸಿ ಇದ್ದಷ್ಟು ದುಡ್ಡು ತರಲು ಸೂಚಿಸಿದ. ಅತಿಜಮ್ಮಳ ಎಲ್ಲಾ ಮಕ್ಕಳು ಬೀಡಿ ಕಟ್ಟಿ ಪಿಗ್ಮಿಗೆ ಹಾಕಿದ್ದ ದುಡ್ಡು 2,800 ರೂಪಾಯಿಯಿತ್ತು. ಅತಿಜಮ್ಮ ಪಿಗ್ಮಿಯ ಪುಸ್ತಕ ತೆಗೆದುಕೊಂಡವಳೇ ಬ್ಯಾಂಕಿಗೆ ತೆರಳಿ ಅದನ್ನು ಪಡಕೊಂಡು ಬಂದರೆ ಇತ್ತ ಕೊಗ್ಗಿ ಹಿಂದಿನ ದಿನದ ಕೂಲಿಯ ಇನ್ನೂರು ರೂಪಾಯಿಯನ್ನು ಹಿಡಿದುಕೊಂಡಳು.
ಅತಿಜಮ್ಮ ತನ್ನ ಬೀಡಿ ಸೂಪಿನ ತರ್ಪಾಲ್ ಹೊದಿಕೆಯಡಿ ಇಟ್ಟಿದ್ದ ನೂರಿಪ್ಪತ್ತು ರೂಪಾಯಿಯನ್ನು ಬಸ್ಸಿನ ಖರ್ಚಿಗೆ ಇರಲೆಂದು ಇಟ್ಟುಕೊಂಡಳು. ಇತ್ತ ಆಸ್ಪತ್ರೆಯ ಐ.ಸಿ.ಯು.ನ ಹೊರಗಡೆ ಕಾಯುತ್ತಿದ್ದ ತೋಮನನ್ನು ಕರೆದ ವೈದ್ಯರು “ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ವಿಷ ಆಕೆಯ ದೇಹದ ತುಂಬಾ ವ್ಯಾಪಿಸಿದೆ. ಇನ್ನೂ ಏಳೆಂಟು ಇಂಜೆಕ್ಷನ್ ಬೇಕಾದೀತು” ಎಂದರು. ವೈದ್ಯರು ಕೊಟ್ಟ ಚೀಟಿಯನ್ನು ಕೈಯಲ್ಲಿ ಹಿಡಿದು ಗರಬಡಿದವನಂತೆ ನಿಂತಿದ್ದ ಹಳ್ಳಿಗಮಾರ ತೋಮನನ್ನು ಕಂಡು ಅಲ್ಲಿನ ಸೀನಿಯರ್ ನರ್ಸ್ ಸಿಸ್ಟರ್ ಕೆರೋಲಿನಾಗೆ ಕರುಣೆ ಉಕ್ಕಿ ಬಂತು. ಆಕೆ ತೋಮನನ್ನು ಕೈಸನ್ನೆ ಮಾಡಿ ದೂರ ಕರೆದು ಆತನ ಕೈಯಲ್ಲಿದ್ದ ಚೀಟಿಯನ್ನು ತೆಗೆದು ಓದಿದಳು. ಒಂದೆರಡು ನಿಮಿಷ ಹಾಗೆ ಯೋಚಿಸಿದ ಸಿಸ್ಟರ್, ನೋಡಿ ಇವರೇ, ಈ ಇಂಜೆಕ್ಷನ್‍ಗೆ ಒಂದಕ್ಕೆ ಒಂಭೈನೂರು ರೂಪಾಯಿ ಬೆಲೆಯಿದೆ. ಕದ್ರಿಯಲ್ಲಿ ಔಷಧಿಯ ಅಂಗಡಿಗಳಿಗೆಲ್ಲಾ ಔಷಧಿ ವಿತರಿಸುವ ದೊಡ್ಡ ಔಷಧಿ ಅಂಗಡಿಯಿದೆ. ಅಲ್ಲಿ ಅರ್ಧ ಬೆಲೆಗೆ ಇಂಜೆಕ್ಷನ್‍ಗಳು ಸಿಗುತ್ತವೆ. ಅಲ್ಲಿ ಹೋಗಿ ನೀವು ಈ ಚೀಟಿ ತೋರಿಸಿ ಎಂದು ಒಂದು ಚೀಟಿ ಬರೆದು ಅದರಲ್ಲಿ ಆಕೆಯ ಹೆಸರನ್ನು ಬರೆದುಕೊಟ್ಟಳು. ಇನ್ನೊಂದು ಚೀಟಿಯಲ್ಲಿ ವಿಳಾಸವನ್ನೂ ಬರೆದುಕೊಟ್ಟಳು. ಅತಿಜಮ್ಮ ಮತ್ತು ಕೊಗ್ಗಿ ತಾವು ತಂದ ಮೂರು ಸಾವಿರ ರೂಪಾಯಿಯನ್ನು ತೋಮನ ಕೈಗಿತ್ತರು. ತೋಮ ಸಿಸ್ಟರ್ ಕೆರೋಲಿನಾ ಕೊಟ್ಟ ವಿಳಾಸ ಹುಡುಕಿಕೊಂಡು ಹೋಗಿ ಇಂಜೆಕ್ಷನ್‍ಗಳನ್ನು ತಂದು ಸಿಸ್ಟರ್‍ಳ ಕೈಗಿತ್ತ. ವೈದ್ಯರು ತಮ್ಮೆಲ್ಲಾ ಪ್ರಯತ್ನ ಮುಂದುವರಿಸಿದರು.
ಇಂಜೆಕ್ಷನ್‍ನ ಮೇಲೆ ಇಂಜೆಕ್ಷನ್ ಚುಚ್ಚಿದರು. ಅತಿಜಮ್ಮ ಉಳ್ಳಾಲ ದರ್ಗಾಕ್ಕೆ ಕೋಳಿ ಕೊಡುವ ಹರಕೆ ಹೊತ್ತರೆ, ಕೊಗ್ಗಿ ಕೊರಗಜ್ಜನಿಗೆ ಒಂದು ಕ್ವಾರ್ಟರ್ ಕೊಡುವುದಾಗಿ ಹರಕೆ ಹೊತ್ತಳು. ಅತ್ತ ಐ.ಸಿ.ಯು.ನಲ್ಲಿ ಜೀವಚ್ಚವವಾಗಿ ಮಲಗಿದ್ದ ಹಸೀನಾ ಸಾವು ಬದುಕಿನ ನಡುವಿನ ಹೋರಾಟದಲ್ಲಿ ನಿರತಳಾಗಿದ್ದಳು. ಮೂರನೇ ದಿನ ಬೆಳಗ್ಗೆ ಒಂಬತ್ತೂವರೆ ಗಂಟೆಗೆಲ್ಲಾ ಐ.ಸಿ.ಯು.ನಿಂದ ಹೊರಬಂದ ವೈದ್ಯರು ತೋಮನನ್ನು ಕರೆದು ಮುಂದಿನ ವ್ಯವಸ್ಥೆ ಮಾಡಿ ಎಂದಷ್ಟೇ ಹೇಳಿದರು.
ಸಿಸ್ಟರ್ ಕೆರೋಲಿನಾ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆಲ್ಲಾ ಪೆÇೀಸ್ಟ್‍ಮಾರ್ಟಂ ಮುಗಿಸಿ ಮೃತದೇಹ ಬಿಟ್ಟು ಕೊಡುತ್ತೇವೆ ಎಂದಳು. ತೋಮ ನಿಂತಲ್ಲೇ ಕೆಲಕ್ಷಣಗಳ ಕಾಲ ಕಲ್ಲಾದ. ತೋಮನ ಮುಖ ನೋಡಿದ ಕೂಡಲೇ ಅತಿಜಮ್ಮ ಮತ್ತು ಕೊಗ್ಗಿಗೆ ವಿಷಯ ಮನವರಿಕೆಯಾಯಿತು. ಹಸೀನಾ, ಮೋಳೇ ಹಸೀನಾ… ಯಾರಬ್ಬೇ ನನ್ನ ಹಸೀನಾ…. ಎಂಬ ಅತಿಜಮ್ಮಳ ಆರ್ತನಾದ ಮುಗಿಲು ಮುಟ್ಟಿತು.
ತೋಮ ಕೊಗ್ಗಿಯನ್ನು ಕರೆದು ನೀನು ಅತಿಜಮ್ಮಳನ್ನು ಕರಕೊಂಡು ಹೋಗು. ಊರಲ್ಲಿ ವಿಷಯ ತಿಳಿಸಿ ಮುಂದಿನ ವ್ಯವಸ್ಥೆ ಮಾಡಿ. ನಾನು ಮರಣದೊಂದಿಗೆ ಆ್ಯಂಬುಲೆನ್ಸ್‍ನಲ್ಲಿ ಬರುತ್ತೇನೆಂದ. ಹಸೀನಾಳ ಮರಣದ ಸುದ್ಧಿ ಊರಿಡೀ ಹಬ್ಬಿತು. ಸೆಕ್ರೆಟರಿ ಮೊೈದಿಕುಂಞ ಅತಿಜಮ್ಮಳ ಗುಡಿಸಲಿನತ್ತ ಬಂದ. ಅತಿಜಮ್ಮಳನ್ನು ದೂರ ಕರೆದು ಕಬುರಿನ ವ್ಯವಸ್ಥೆಯಾಗಬೇಕಲ್ವಾ…..?ಕಬುರಿನ ಕೆಲಸವೇನೋ ನಮ್ಮ ಹುಡುಗರು ಮಾಡುತ್ತಾರೆ.
ಅವರಿಗೇನೂ ಕೊಡುವುದು ಬೇಡ. ಕಬುರಿನ ಕಲ್ಲು, ಮೀಝಾನ್ ಕಲ್ಲು ಇತ್ಯಾದಿಗಳಿಗೆಲ್ಲಾ ನಾಲ್ಕು ನೂರು ರೂಪಾಯಿ ಖರ್ಚು ತಗಲುತ್ತದೆ. ನಮ್ಮ ಜಮಾಅತ್‍ನ ನಿಯಮ ಪ್ರಕಾರ ದಫನ್ ಮಾಡಬೇಕಾದರೆ ಮಸೀದಿಯ ಬಾಕಿ ಚುಕ್ತಾ ಮಾಡಬೇಕು. ಅತಿಜಮ್ಮಳಿಗೆ ನಿಂತ ನೆಲವೇ ಕುಸಿದಂತಾಯ್ತು. ಸಾವರಿಸಿಕೊಂಡ ಅತಿಜಮ್ಮ ಕಾಕ ಹಾಗೆನ್ನಬೇಡಿ ಕಾಕ, ನಿಮ್ಮ ಕಾಲು ಹಿಡಿಯುತ್ತೇನೆ. ಕಬುರಿನ ಖರ್ಚು ನಾನು ಹೇಗಾದರೂ ಮಾಡಿ ಕೊಡುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಬಾಕಿ ದುಡ್ಡಿಗೆ ಹಿಡಿದಿಡಬೇಡಿ ಕಾಕ. ನೋಡು, ಅತಿಜಮ್ಮ ನಿನ್ನ ಕಷ್ಟ ನನಗೆ ಅರ್ಥಾಗ್ತದೆ. ಮಸೀದಿ ಅಲ್ಲಾಹನ ಭವನ. ಅದರ ಸಾಲ ಬಾಕಿ ಇಟ್ಟು ದಫನ ಮಾಡಿದ್ರೆ ಅವಳು ಕಬುರಿನಲ್ಲಿ ಮಲಗಬೇಡವೇ…..?ಮತ್ತೆ ನಾನೊಬ್ಬ ಎಂತ ಮಾಡ್ಲಿಕ್ಕೂ ಆಗುವುದಿಲ್ಲ. ಮಸೀದಿ ನನ್ನೊಬ್ಬನದಲ್ಲ. ಜಮಾಅತರಿಗೆ ನಾನು ಜವಾಬು ಕೊಡಬೇಡವೇ…? ನಿನ್ನ ತಿಂಗಳ ವಂತಿಗೆ ಮತ್ತು ಹೊಸ ಮಸೀದಿಗೆ ಬರೆಸಿದ್ದು 2,800 ರೂಪಾಯಿ ಬಾಕಿ ಇದೆ. ನೀನೊಂದು ಕೆಲಸ ಮಾಡು, ಬಾಕಿ ಇದ್ದ ವಂತಿಗೆ 1,800 ಕೊಡು. ಉಳಿದದ್ದು ಮತ್ತೆ ನೋಡುವಾ…. ಕಬುರಿನ ಖರ್ಚಿನ ದುಡ್ಡು ಜಮಾಅತ್ ವತಿಯಿಂದ ಹಾಕ್ತೇವೆ. ಇದರಾಚೆ ನಾನೇನೂ ಮಾಡುವಂತಿಲ್ಲ ಎಂದು ಕಡಕ್ಕಾಗಿ ಹೇಳಿಬಿಟ್ಟ.
ಇವರ ಮಾತುಕತೆಯನ್ನು ಪಕ್ಕದಲ್ಲೇ ನಿಂತು ಆಲಿಸುತ್ತಿದ್ದ ಅತಿಜಮ್ಮನ ಮೂವರೂ ಹೆಣ್ಮಕ್ಕಳೂ ಅಳುತ್ತಾ ಬಂದು ಹಾಗೆನ್ನಬೇಡಿ ಕಾಕ, ನಮಗೆ ನಮ್ಮ ಜಮಾಅತರಲ್ಲದೇ ಬೇರೆ ಯಾರಿದ್ದಾರೆ ಕಾಕ… ಮುಂದಿನ ತಿಂಗಳು ಬೀಡಿಯ ಬೋನಸ್ ಸಿಕ್ಕಾಗ ಮಸೀದಿಯ ಸಾಲ ಸಂದಾಯ ಮಾಡ್ತೇವೆ ಕಾಕ…..ಅದೆಲ್ಲಾ ನನಗೆ ಗೊತ್ತಿಲ್ಲ. ಎಲ್ಲಿಂದಾದರೂ ಸಾಲ ಮಾಡಿ ತನ್ನಿ. ನಿಮ್ಮಮ್ಮನ ಕಿವಿಯಲ್ಲಿರುವ ಅಲಿಕಾತು ಮಾರಿಯಾದರೂ ಮಸೀದಿಯ ಸಾಲ ಚುಕ್ತಾ ಮಾಡಿ. ಕಾಕ ನನ್ನ ಹಸೀನಾಳಿಗಾಗಿ ಅಲಿಕಾತೂ ಮಾರಿದೆ ಕಾಕ….. ನನ್ನ ಹಸೀನಾಳೂ ನಮ್ಮನ್ನು ಬಿಟ್ಟು ಹೋದಳು ಕಾಕ…..ಏನಾದ್ರೂ ಮಾಡು, ನಿನ್ನ ಮಗಳ ಮಯ್ಯತ್ ದಫನ ಮಾಡ್ಬೇಕಾದ್ರೆ ಮಸೀದಿಯ ಸಾಲ ಚುಕ್ತಾ ಮಾಡು ಎನ್ನುತ್ತಾ ಮೊೈದಿಕುಂಞ ಬಿರಬಿರನೇ ನಡೆದು ಹೋದ…..
ತೋಮ ಮರಣದೊಂದಿಗೆ ಬಂದ. ಮರಣವನ್ನು ಗುಡಿಸಲಿನೊಳಗೆ ಕೊಂಡೊಯ್ದು ನೆಲದ ಮೇಲೆ ಚಾಪೆ ಹಾಸಿ ಅಂಗಾತ ಮಲಗಿಸಿದರು. ಸುತ್ತಮುತ್ತಲ ಜನರೆಲ್ಲಾ ಬಂದು ಮಯ್ಯತ್ ನೋಡಿ ಹೋದರೇ ಹೊರತು ಕಬುರಿನ ವಿಷಯ ಯಾರೂ ಮಾತನಾಡಲಿಲ್ಲ. ಕೊನೆಗೆ ತೋಮನೇ ಮಸೀದಿಯ ಅಧ್ಯಕ್ಷ ಅಬ್ಬುಹಾಜಿಯ ಮನೆಗೆ ಹೊರಟ. ಅಬ್ಬುಹಾಜಿಯ ಅಂಗಳದಲ್ಲೇ ನಿಂತು ಅತಿಜಮ್ಮಳ ಗೋಳನ್ನು ತನ್ನದೇ ಗೋಳೆಂಬಂತೆ ವಿವರಿಸಿದ. ಅಬ್ಬುಹಾಜಿ ತನ್ನ ತೋರ್ಬೆರಳು ಮತ್ತು ದೊಡ್ಡ ಬೆರಳನ್ನು ತುಟಿಗಡ್ಡ ಇಟ್ಟು ಜಗಿಯುತ್ತಿದ್ದ ತಾಂಬೂಲದ ರಸವನ್ನು ಪಿಚಕ್ಕನೇ ಉಗುಳಿ…. ಹೋಹೋಹೋ ನೀನೂ ಒಬ್ಬ ಸಮಾಜಸೇವಕ ಅಲ್ವಾ…. ಒಂದು ಕೆಲಸ ಮಾಡು ಅವಳ ಸಾಲ ನೀನು ಚುಕ್ತಾ ಮಾಡು. ಹಾಜಾರೇ ನಾನೆಲ್ಲಿಂದ ಅಷ್ಟು ದುಡ್ಡು ತರಲಿ….. ಥೂ, ನಿನಗ್ಯಾಕೋ ನಮ್ಮವರ ಉಸಾಬರಿ…..? ನಿನ್ನ ಕೆಲಸ ನೀನು ನೋಡಿಕೋ….. ನನಗೆ ಬುದ್ಧಿ ಹೇಳಲು ಬಂದಿದ್ದಾನೆ. ತೊಲಗು ಇಲ್ಲಿಂದ ಎಂದು ಅಬ್ಬರಿಸಿದ. ಸಪ್ಪೆ ಮೋರೆ ಹಾಕಿಕೊಂಡು ಬಂದ ತೋಮನನ್ನು ಅತಿಜಮ್ಮ, ಕೊಗ್ಗಿ, ಅತಿಜಮ್ಮನ ಮಕ್ಕಳು ಪ್ರಶ್ನಾರ್ಥಕವಾಗಿ ನೋಡಿದರು.
ಅವನ ಹಾಂಕಾರಕ್ಕೆ ಮಣ್ಣು ಹಾಕ, ಹಾಜಿಯಂತೆ ಹಾಜಿ….. ಬಡವರನ್ನು ಗೋಳು ಹೊಯ್ದು ಮಸೀದಿ ಕಟ್ಟಿ ಇವರು ಯಾವ ಸ್ವರ್ಗಕ್ಕೆ ಹೋಗ್ತಾರೆ ನೋಡೋಣ ಎಂದ ತೋಮ. ನೀವೇನು ಚಿಂತಿಸಬೇಡಿ, ನನಗೆ ಸರಕಾರದಿಂದ ಸಿಕ್ಕಿದ ದರ್ಕಾಸು ಉಂಟಲ್ಲಾ…. ಅಲ್ಲೇ ಹೂತು ಬಿಡುವ ಎಂದು ಪಿಕ್ಕಾಸು ಹೆಗಲಿಗೇರಿಸಿ ಹೊರಡಲನುವಾದ. ಅಷ್ಟೊತ್ತಿಗೆ ಅಲ್ಲಿಗೆ ತಲಪಿದ ಪಕ್ಕದ ಮನೆಯ ಬಡ ವಿಧವೆ ಪಾತಾದ ‘ನಮ್ಮ ಉಳ್ಳಾಲದ ದೊಡ್ಡ ಮಸೀದಿಯುಂಟಲ್ಲಾ….. ಅಲ್ಲಿ ದಫನ ಮಾಡಬೇಕಾದರೆ ಏನೂ ಕೊಡಲಿಕ್ಕಿಲ್ಲವಂತೆ, ಅಲ್ಲಿಗೆ ಮಯ್ಯತ್ ಕೊಂಡು ಹೋಗೋಣ. ಇಲ್ಲಿ ತೋಮನ ಕೈಯಲ್ಲಿ ದಫನ ಮಾಡಿಸಿದರೆ ನಿನಗೆ ಕಾಫಿರ್ ಪಟ್ಟ ಕಟ್ಟುತ್ತಾರೆ ಎಂದಳು. ತೋಮನಿಗೂ ಅದೇ ಸರಿಯೆನಿಸಿತು.
ಪಾತಾದ ಮತ್ತು ಅತಿಜಮ್ಮನ ಮಕ್ಕಳು ಸೇರಿ ಮಯ್ಯತ್ ಸ್ನಾನ ಮಾಡಿಸಿದರು. ಕಫನ್ ಮಾಡಲು ಪಾತಾದ ತನ್ನ ಹಳೇ ಕಮೀಸ್ ಮಕ್ಕನೆ ಹಿಡಿದುಕೊಂಡು ಬಂದಳು. ತೋಮ 108 ಆ್ಯಂಬುಲೆನ್ಸ್‍ನ ಡ್ರೈವರ್‍ಗೆ ನೂರು ರೂಪಾಯಿ ಭಕ್ಷೀಸು ಕೊಟ್ಟು ಕರೆದುಕೊಂಡು ಬಂದ. ಉಳ್ಳಾಲದ ದೊಡ್ಡ ಮಸೀದಿಗೆ ಕೊಂಡೊಯ್ದು ಸುಸೂತ್ರವಾಗಿ ದಫನ್ ಕಾರ್ಯ ಮುಗಿಸಿದರು. ಅತಿಜಮ್ಮ ಮತ್ತು ತೋಮನ ಮನೆಯಲ್ಲಿ ಸೂತಕದ ಛಾಯೆ ದಟ್ಟವಾಗಿದ್ದರೆ ಅತ್ತ ಮಸೀದಿಯಲ್ಲಿ ನೂತನ ಮಸೀದಿಗೆ ಶಿಲಾನ್ಯಾಸಗೈಯುವ ಸಂಭ್ರಮ. ಅಸರ್ ನಮಾಜಿನ ಬಳಿಕ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದರೂ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೇ ಜನ ಜಮಾಯಿಸತೊಡಗಿದರು. ಮದ್ರಸದ ಪುಟಾಣಿ ಮಕ್ಕಳ ದಫ್ ನೃತ್ಯವೂ ಪ್ರಾರಂಭವಾಯಿತು. ಇನ್ನೇನು ಅಸರ್ ಆಝಾನಿಗೆ ಹದಿನೈದು ನಿಮಿಷಗಳಷ್ಟೇ ಉಳಿದಿತ್ತು. ಮಸೀದಿಯ ಇಮಾಮ್ ಕಮೀಸ್ ಧರಿಸಿ ಬಂದವರೇ ವೇದಿಕೆಯ ಮೇಲೇರಿ ಪೆÇೀಡಿಯಂ ಬಳಿ ನಿಂತು ಮೈಕ್‍ಗೆ ಬೆರಳಲ್ಲಿ ಎರಡು ಬಾರಿ ಮೆಲ್ಲನೆ ಬಡಿದರು.

ದಫ್ ಉಸ್ತಾದ್ ಹಾಡು ನಿಲ್ಲಿಸಿದರು. ಮೈಕ್ ಮುಂದೆ ನಿಂತ ಉಸ್ತಾದ್ ಅಸ್ಸಲಾಂ ಅಲೈಕುಂ ಎನ್ನುವಾಗ ಒಮ್ಮೆಗೇ ಮೌನ ಮೈದಾಳಿ ನಿಂತು. “ಬಂಧುಗಳೇ ನಮ್ಮ ನೂತನ ಮಸೀದಿಗೆ ಶಿಲಾನ್ಯಾಸಗೈಯಲಿರುವ, ದೇಶ ವಿದೇಶಗಳಲ್ಲೆಲ್ಲಾ ಮುಸ್ಲಿಂ ಜನಕೋಟಿಯ ಮನಸೂರೆಗೈದ ಸುಪ್ರಸಿದ್ಧ ವಾಗ್ಮಿ, ಅಂತಾರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ವಿದ್ವಾಂಸ ಕೇರಳದ ಶರೀಅತ್ ಕಾಲೇಜಿನ ಸ್ಥಾಪಕ ಮೌಲಾನಾ ಶೈಕ್ ಅಸದುದ್ದೀನ್ ಜಬ್ಬಾರಿಯವರು ಈಗಾಗಲೇ ಮಂಜೇಶ್ವರ ದಾಟಿರುವುದಾಗಿ ಸುದ್ಧಿ ತಲುಪಿದೆ. ದೂರದಲ್ಲಿರುವ ಎಲ್ಲಾ ಬಂಧುಗಳು ಆದಷ್ಟು ಬೇಗನೇ ತಮಗಾಗಿ ಕಾದಿರಿಸಿದ ಆಸನದಲ್ಲಿ ಆಸೀನರಾಗಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನಾಳೆಯಿಂದಲೇ ನಮ್ಮ ನೂತನ ಮಸೀದಿ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಈಗಾಗಲೇ ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಕೊಡುವುದಾಗಿ ವಾಗ್ದಾನ ಮಾಡಿದವರು ಆದಷ್ಟು ಬೇಗನೇ ವೇದಿಕೆಯ ಬಲಭಾಗದಲ್ಲಿರುವ ಕೌಂಟರ್‍ನಲ್ಲಿ ನಿಮ್ಮ ದೇಣಿಗೆ ಪಾವತಿಸಿ ರಶೀದಿ ಪಡಕೊಳ್ಳತಕ್ಕದ್ದು. ನಿಮಗೆಲ್ಲಾ ಮೌಲಾನಾರು ಭಕ್ತಿ ನಿರ್ಭರ ದುವಾದೈಯಲಿದ್ದಾರೆ. ಮಸೀದಿಗೆ ದಾನ ನೀಡುತ್ತೇನೆಂದು ವಾಗ್ದಾನ ಮಾಡಿದವರು ದಯಮಾಡಿ ವಿಳಂಬಿಸದಿರಿ. ಅಲ್ಲಾಹನ ಕ್ರೋಧಕ್ಕೆ ಪಾತ್ರದಾಗದಿರಿ. ಇಲ್ಲಿ ನೀವು ಅಲ್ಲಾಹನ ಭವನಕ್ಕೆ ಮಾಡುವ ದಾನವು ನಿಮಗೆ ಸ್ವರ್ಗವನ್ನು ಖಾತರಿಪಡಿಸಲಿದೆ.
ಒಂದು ವೇಳೆ ವಾಗ್ದಾನ ಮಾಡಿಯೂ ನೀಡದೇ ವಂಚಿಸಿದರೆ ನಾಳೆ ನಿಮ್ಮ ಕಬರ್‍ನಲ್ಲಿ ಅದು ಚೇಳಾಗಿ ಕುಟುಕಬಹುದು, ಹಾವಾಗಿ ಕಡಿಯಬಹುದು, ಬೆಂಕಿಯಾಗಿ ಸುಡಬಹುದು. ಇಮಾಮರ ಭಾಷಣ ಅತಿಜಮ್ಮಳ ಗುಡಿಸಲಿನ ಸೂರು ಹೊಕ್ಕು ಆಕೆಯ ಕಿವಿತಮಟೆಗಳಿಗೆ ಬಡಿಯಿತು. ಅತಿಜಮ್ಮ ದುಃಖದ ನಡುವೆಯೂ ಗಹಗಹಿಸಿ ನಗತೊಡಗಿದಳು.
 

‍ಲೇಖಕರು avadhi

January 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shabir

    ನಮ್ಮ ಸಮುದಾಯದ ಇಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ ನಿಮ್ಮ ಈ ಕಥಾನಕ. ಶುಭವಾಗಲಿ ಇಸ್ಮತ್ ರವರೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: