ಅಶ್ವಥ್ಥ್ ಅವರ ಸುಳಿದಾಟವಿಲ್ಲದ ನರಸಿಂಹರಾಜ ಕಾಲೋನಿಯ ಮಾರುಕಟ್ಟೆ ಇವತ್ತಿಗೂ ನನ್ನ ಪಾಲಿಗೆ ಭಣ, ಭಣ.

 

 

 

 

ಆರ್ ಟಿ ವಿಠ್ಠಲಮೂರ್ತಿ

 

 

 

 

ಆ ಹಾಡನ್ನು ಹಾಡುವಾಗ ನಿಮಗೆ ಯಾವ ಬಾವ ಕಾಡುತ್ತಿತ್ತು ಸಾರ್?ಅಂತ ನಾನು ಕೇಳಿದೆ.

ಈ ಪ್ರಶ್ನೆಯನ್ನು ಕೇಳುವ ಹೊತ್ತಿಗಾಗಲೇ ಅವರನ್ನು ನಾನು ಕನಿಷ್ಟ ನೂರು ಬಾರಿಯಾದರೂ ನೋಡಿದ್ದೆ. ಹತ್ತಾರು ಸಲ ಮಾತನಾಡಿದ್ದೆ. ಆದರೂ ಅವರ ಮುಖದಲ್ಲಿದ್ದ ಗಾಂಭೀರ್ಯ, ಯಾವತ್ತೂ ಆ ಪ್ರಶ್ನೆಯನ್ನು ಕೇಳಲು ಬಿಟ್ಟಿರಲಿಲ್ಲ.

ಆದರೆ ಎಂದಿನಂತೆ ಅವತ್ತು ಬೆಂಗಳೂರಿನ ನರಸಿಂಹರಾಜ ಕಾಲೋನಿಗೆ ಹೋದಾಗ ಅವರು ಮನೆಯಿಂದ ಲೆಫ್ಟು ಸೈಡು ತಿರುಗಿಕೊಂಡಿದ್ದರು. ತ್ಯಾಗರಾಜ ನಗರದ ಮೇನ್ ರೋಡಿನಿಂದ ನಾನು ಅದೇ ಕ್ರಾಸಿಗೆ ತಿರುಗಿಕೊಂಡಿದ್ದೆ.

ಬಾ, ವೆಂಕಟೇಶ್ ಮೂರ್ತಿ. ನಾನು ಹೂವು ತೆಗೆದುಕೊಳ್ಳಬೇಕು. ನೀನೇನಾದರೂ ತೆಗೆದುಕೊಳ್ಳುವುದಿದ್ದರೆ ಮುಗಿಸು. ವಾಪಸ್ಸು ಬರುವಾಗ ಸ್ವಲ್ಪ ಹೊತ್ತು ನಿಂತು ಮಾತನಾಡೋಣ ಅಂತ ಅವರು ಹೇಳಿದರು. ನಾನವರನ್ನು ನರಸಿಂಹರಾಜ ಕಾಲೋನಿಯಲ್ಲಿ ನೋಡಿದ ಬಹುತೇಕ ಸಂದರ್ಭಗಳಲ್ಲಿ ಅವರ ಕೈಲಿ ನಾಯಿಯ ಕೊರಳಿಗೆ ಸುತ್ತಿಕೊಂಡ ಸರಪಳಿ ಇರುತ್ತಿತ್ತು.

ಸರಿ, ಐದೇ ನಿಮಿಷದಲ್ಲಿ ಕೆಲಸವಾಯಿತು. ನಾನೇ ಬಂದು ಅವರು ಹೂವು ತೆಗೆದುಕೊಳ್ಳುತ್ತಿದ್ದ ಜಾಗಕ್ಕೆ ಬಂದು ನಿಂತೆ. ಹೂವು ಖರೀದಿಸಿದವರೇ ಈ ಕಡೆ ತಿರುಗಿ ನನ್ನನ್ನು ನೋಡಿದ ಅವರು, ಬಾ ವೆಂಕಟೇಶ್ ಮೂರ್ತಿ. ಆ ಹಾಡನ್ನು ಹಾಡುವಾಗ ನಾನೆಂತಹ ಮನ:ಸ್ಥಿತಿಯಲ್ಲಿದ್ದೆ ಅಂತ ಕೇಳುತ್ತಿದ್ದಿ. ರಿಯಲಿ,ಇಟ್ ಈಸ್ ಪ್ರೊವೋಕಿಂಗ್ ಸಾಂಗ್ ಅಂದರು.

ಅವರ ಹೆಸರು ಸಿ.ಅಶ್ವಥ್ಥ್!

ಅವರ ಮೆಮೋರಿ ಚಿಪ್ಪಿನಲ್ಲಿ ನನ್ನ ಹೆಸರು ವೆಂಕಟೇಶ ಮೂರ್ತಿ ಅಂತ ಯಾಕೆ ದಾಖಲಾಗಿತ್ತೋ? ನನಗೆ ಗೊತ್ತಿಲ್ಲ. ಒಂದೆರಡು ಬಾರಿ ಅವರು ಹೆಸರು ಕೇಳಿದಾಗ, ನನ್ನ ಹೆಸರು ವಿಠ್ಠಲಮೂರ್ತಿ ಅಂತ ನಾನು ಹೇಳಿದ್ದರೂ ಅವರ ಮನಸ್ಸಿನಲ್ಲಿ ನಾನು ವೆಂಕಟೇಶಮೂರ್ತಿಯಾಗಿ ನೆಲೆಯಾಗಿದ್ದೆ. ಹಾಗಂತ ಅವರೆದುರು, ನನ್ನ ಹೆಸರು ವೆಂಕಟೇಶ ಮೂರ್ತಿ ಅಲ್ಲ. ವಿಠ್ಠಲಮೂರ್ತಿ ಅಂತ ಹೇಳಿದ್ದರೆ ಪಕ್ಕಾ ದೂರ್ವಾಸ ಮುನಿಯಂತಿದ್ದ ಅಶ್ವಥ್ಥ್ ಅವರೇನಾದರೂ ಮುನಿಸಿಕೊಂಡು ಬಿಟ್ಟಾರು ಅಂತ ನನಗನ್ನಿಸುತ್ತಿತ್ತು.

ಅವರು ಅಂತಲ್ಲ. ಹಿಂದೆ ಸಚಿವರಾಗಿದ್ದ ಡಿ.ಟಿ.ಜಯಕುಮಾರ್ ಅವರು ಶುರುವಿನಲ್ಲಿ ನನ್ನನ್ನು ನೋಡಿದಾಗಲೆಲ್ಲ ,ಸಮೀವುಲ್ಲಾ ಹೇಗಿದ್ದೀರಿ?ಅಂತ ಕೇಳುತ್ತಿದ್ದರು. ಅವರ ಕಣ್ಣಿನಲ್ಲಿ ನಾನು ಸಮೀವುಲ್ಲಾ. ಅದೇ ರೀತಿ ಸಮೀವುಲ್ಲಾ ಅವರು ವಿಠ್ಠಲಮೂರ್ತಿ.

ತುಂಬ ದೂರ ಹೋಗಿ ಹೇಳುವುದೇನು? ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ್ ಇದ್ದಾರಲ್ಲ? ಅವರು ನನಗೆ ಕಳೆದ ಇಪ್ಪತ್ತು ವರ್ಷಕ್ಕೂ ಹೆಚ್ಚು ವರ್ಷಗಳಿಂದ ಪರಿಚಿತರು. ಬಸವನಗುಡಿಯ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ನಾನು ಅವರು ಹಲವು ಸಲ ವಾಕ್ ಮೇಟುಗಳು. ಆದರೆ ಇವತ್ತಿಗೂ ಅವರು ನನ್ನನ್ನು ಮಾತನಾಡಿಸುವಾಗ ಸತ್ಯ ಅಂತ ಕರೆಯುತ್ತಾರೆ.

ಸತ್ಯ ಇವತ್ತು ಏನಾಯಿತು ಎಂದರೆ ಅಂತ ಅವರು ಮಾತು ಶುರುವಿಟ್ಟುಕೊಂಡರೆ ಅದನ್ನು ಪೂರ್ಣವಾಗಿ ಹೇಳುವ ತನಕ ನಾನು ಮೌನಿ. ಹಾಗಂತ ಇವತ್ತಿನ ತನಕ ನಾನವರಿಗೆ ನನ್ನ ಹೆಸರು ಸತ್ಯ ಅಲ್ಲ. ವಿಠ್ಠಲಮೂರ್ತಿ ಅಂತ ಹೇಳಲು ಯತ್ನಿಸಿಲ್ಲ. ಹೆಸರಿನಿಂದ ಏನಾಗಬೇಕು?ಪ್ರೀತಿಯಿದ್ದರೆ ಸಾಕು ಎಂಬಂತೆ.

ಅದೇನೇ ಇರಲಿ. ನಾವು ಬೆಂಗಳೂರಿನ ತ್ಯಾಗರಾಜನಗರದ ಫ್ಲ್ಯಾಟಿಗೆ ಬಾಡಿಗೆಗೆ ಅಂತ ಬಂದಾಗ ಅಪೂರ್ವ ಗಾಯಕಿ ಕಸ್ತೂರಿ ಶಂಕರ್ ಕೂಡಾ ಎದುರಿಗಿದ್ದ ಮನೆಯಲ್ಲೇ ವಾಸವಾಗಿದ್ದರು. ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ..ಎಂಬುದೂ ಸೇರಿದಂತೆ ಹಲವಾರು ಅದ್ಭುತ ಹಾಡುಗಳನ್ನು ಹಾಡಿದವರು ಕಸ್ತೂರಿ ಶಂಕರ್. ತುಂಬ ಸಲ ಅವರ ಮನೆಗೇ ಹೋಗಿ ಪರಿಚಯ ಮಾಡಿಕೊಂಡು ಬಿಡಬೇಕು ಅನ್ನಿಸಿದರೂ ಮನಸ್ಸೆಂಬ ನದಿಯನ್ನು ಸಂಕೋಚವೆಂಬ ಆಣೆಕಟ್ಟು ಹಿಡಿದುಕೊಂಡು ಬಿಡುತ್ತಿತ್ತು.

ಇವತ್ತಿಗೂ ಅಷ್ಟೇ. ನಾನು ಯಾರಿಗೂ ಮುಂಚಿತವಾಗಿ ಹೇಳದೆ ಒಬ್ಬರ ಮನೆಗೆ ಹೋಗುವುದಿಲ್ಲ. ಒಬ್ಬ ವ್ಯಕ್ತಿ ಬಯಸದೆ ಅವರ ಮನಸ್ಸಿಗೆ ನುಗ್ಗುವ ಯತ್ನವನ್ನೂ ಮಾಡುವುದಿಲ್ಲ. ಅವರ ಬಗ್ಗೆ ನನಗೆ ಗೌರವ ಇದ್ದರೆ ಸಾಕು. ಹಾಗೆ ನಡೆದುಕೊಂಡರೆ ಸಾಕು ಎಂಬಂತಹ ಬಾವ. ಅಂದ ಹಾಗೆ ನಮ್ಮ ಮನೆಯಿಂದ ಎಡಕ್ಕೆ ತಿರುಗಿ ಐವತ್ತು ಹೆಜ್ಜೆ ಇಟ್ಟರೆ ತ್ಯಾಗರಾಜನಗರದ ಮೇನ್ ರೋಡು. ಅಲ್ಲಿಂದ ಮತ್ತೆ ಎಡಕ್ಕೆ ತೆಗೆದುಕೊಂದು ಎರಡು ಕ್ರಾಸು ದಾಟಿದರೆ ಕರ್ನಾಟಕದ ಗಾನ ಲೋಕ ಕಂಡ ಅಪೂರ್ವ ಗಾಯಕ ಸಿ.ಅಶ್ವಥ್ಥ್ ಅವರ ಮನೆ.

ನಾನು ನೋಡುವ ಹೊತ್ತಿಗಾಗಲೇ ಅವರು ಶಿಶುನಾಳ ಶರೀಫರು ಬರೆದ ಹಾಡುಗಳನ್ನು ಹಾಡಿ ಇಡೀ ನಾಡಿಗೆ ಚಿರಪರಿಚಿತರಾಗಿದ್ದರು. ಇವತ್ತೂ ಆ ಹಾಡುಗಳನ್ನು ಕೇಳಿ ನೋಡಿ. ನಿಮಗೆ ಸಿ.ಅಶ್ವಥ್ಥ್ ಎಂತಹ ಅದ್ಭುತ ಗಾಯಕ ಅನ್ನಿಸಿಬಿಡುತ್ತದೆ. ಹೀಗೆ ಯಾವುದೇ ಹಾಡುಗಳನ್ನು ಅವರು ಹೈ ಪಿಚ್ಚಿಗೆ ತೆಗೆದುಕೊಂಡು ಹೋಗುವ ರೀತಿಯೇ ಅನನ್ಯ.

ಆದರೆ ತಮ್ಮ ಹಾಡುಗಳ ಮೂಲಕ ಹೀಗೆ ಲಪಕ್ಕಂತ ಕೇಳುಗರ ಮನಸ್ಸಿಗೆ ಸುತ್ತಿಕೊಳ್ಳುತ್ತಿದ್ದ ಅಶ್ವಥ್ಥ್ ಬಹಿರಂಗ ಬದುಕಿನಲ್ಲಿ ಟಫ್ ಮನುಷ್ಯ. ಹೀಗಾಗಿ ಶುರು ಶುರುವಿನಲ್ಲಿ ಅವರಿಗೆ ನಮಸ್ಕಾರ ಮಾಡಿ, ಸಣ್ಣಗೆ ನಗುತ್ತಿದ್ದೆ. ಒಂದು ಸಲ ಅವರೇ ಹತ್ತಿರ ಕರೆದು, ಏಯ್, ಬಾಪ್ಪಾ ಇಲ್ಲಿ. ಏನು ನಿನ್ನ ಹೆಸರು?ಎಂದರು. ವಿಠ್ಠಲಮೂರ್ತಿ ಅಂತ ಸಾರ್. ನಾನು ನಿಮ್ಮ ಅಭಿಮಾನಿ ಅಂದೆ. ಅದಕ್ಕವರ ತುಟಿಯಂಚಿನಲ್ಲಿ ನಗು ಸುಳಿಯಿತು.

ಹೀಗೇ ಎಷ್ಟೋ ದಿನಗಳು ಕಳೆದವು. ನಾನು ಮತ್ತವರು ಮೇಲಿಂದ ಮೇಲೆ ಸಿಗುತ್ತಲೇ ಇದ್ದೆವು. ನೋಡಿದ ಕೂಡಲೆ ಅವರು, ಹೇಗಿದ್ದೀಯ ವೆಂಕಟೇಶ್ ಮೂರ್ತಿ?ಅಂತ ಕೇಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ನಾನು, ಚೆನ್ನಾಗಿದ್ದೇನೆ ಸಾರ್ ಎನ್ನುತ್ತಿದ್ದೆ. ಇದೇ ರೀತಿ ನೋಡಿನೋಡಿ ಅವರಿಗೆ ನಾನು ಚಿರಪರಿಚಿತನಾಗಿದ್ದೆ. ಹೀಗಾಗಿ ಒಂದು ದಿನ ಧೈರ್ಯ ಮಾಡಿ ಕೇಳಿಯೇ ಬಿಟ್ಟೆ.

ಸಾರ್, ನಿಮ್ಮನ್ನು ಒಂದು ಮಾತು ಕೇಳಬೇಕು ಅನ್ನಿಸಿದೆ. ಕೇಳಲಾ? ಎಂದೆ. ಅದಕ್ಕವರು ನಕ್ಕು: ಅದೇನು ಕೇಳಯ್ಯಾ ವೆಂಕಟೇಶ್ ಮೂರ್ತಿ ಎಂದರು. ನಾನು ಗಪ್ಪಂತ ಕೇಳಿಯೇ ಬಿಟ್ಟೆ. ಸಾರ್. ನೀವು ಜಿ.ಎಸ್.ಶಿವರುದ್ರಪ್ಪ ಅವರು ಬರೆದ ‘ಕಾಣದಾ ಕಡಲಿಗೇ ಹಂಬಲಿಸಿದೇ ಮನ’ ಅಂತ ಹಾಡು ಹೇಳಿದ್ದೀರಲ್ಲ? ಅದನ್ನು ಹಾಡುವಾಗ ನಿಮಗೇನನ್ನಿಸಿತ್ತು? ಅಂದರೆ ನಿಮ್ಮ ಮನ:ಸ್ಥಿತಿ ಹೇಗಿತ್ತು? ಕ್ಯೂರಿಯಾಸಿಟಿಗೆ ಕೇಳುತ್ತಿದ್ದೇನೆ. ತಪ್ಪು ತಿಳಿದುಕೊಳ್ಳಬೇಡಿ ಎಂದೆ.

ಅದಕ್ಕವರು ಕೆಲಸ ಮುಗಿಸಿ ವಾಪಸ್ಸು ಬರುವಾಗ ನನ್ನನ್ನು ಕರೆದುಕೊಂಡು ಅಲ್ಲೇ ಇದ್ದ ಹಣ್ಣಿನಂಗಡಿಯ ಮುಂದೆ (ಕಾಫಿ ಡೇ ಅಂಗಡಿ ಇರುವ ಜಾಗ) ಬಂದು ನಿಂತರು. ಕೈಲಿದ್ದ ಸರಪಳಿಯನ್ನು ನಾಯಿ ಎಳೆಯುತ್ತಲೇ ಇತ್ತು. ಇವರದನ್ನು ತಡೆಯುವ ಪ್ರಯತ್ನ ಮಾಡುತ್ತಲೇ ಹೇಳತೊಡಗಿದರು.

ವೆಂಕಟೇಶ್ ಮೂರ್ತಿ. ಕಡಲು ಅಂದರೆ ಸಮುದ್ರ. ಆದರೆ ಇಲ್ಲಿ (ಕಾವ್ಯದಲ್ಲಿ) ಕಡಲು ಎಂಬುದು ಬದುಕಿನ ಹೋಲಿಕೆ. ಯಾಕೆಂದರೆ ನಾವೇನೂ ಕಾಣುವ ಕಡಲಲ್ಲಿ ಈಜುವುದಿಲ್ಲ. ಆದರೆ ಬದುಕಿನಲ್ಲಿ ಈಜುತ್ತೇವೆ. ಈಜಿ ಈಜಿ ಬೇಸರವಾದಾಗ ಕಾಣದ ಕಡಲು ಮನಸ್ಸನ್ನು ಕಾಡತೊಡಗುತ್ತದೆ. ಅಂದ ಹಾಗೆ ಇವೆಲ್ಲ ನಿಮಗೆ ಜಿಯಾಗ್ರಫಿ, ಸೈನ್ಸು, ಫಿಲಾಸಫಿಯ ಅರಿವಿದ್ದರೆ ಸುಲಭವಾಗಿ ಅರ್ಥವಾಗುತ್ತದೆ. ಅರ್ಥಾತ್, ನಾನು ಹೇಳುವ ವಿಷಯ ಮ್ಯಾಚಿಂಗ್ ಆಗುತ್ತದೆ.

ಅಂದರೆ ನಾವು ನೋಡುತ್ತಿರುವ ಈ ಭೂಮಿ ಏನಿದೆ? ಅದು ಈ ಸೃಷ್ಟಿಯಲ್ಲಿ ಸಣ್ಣದೊಂದು ಮರಳ ಕಣ. ಸೂರ್ಯನ ಸುತ್ತ ಅದು ಸುತ್ತುತ್ತಿದೆ. ಇದೇ ರೀತಿ ಎಷ್ಟೊಂದು ಗ್ರಹಗಳು, ಉಪಗ್ರಹಗಳು ಯಾವುದೇ ನಿಯಂತ್ರಣವಿಲ್ಲದೆ ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುತ್ತಲೇ ಇವೆ. ಇವನ್ನೆಲ್ಲ ಯಾವುದೋ ಒಂದು ಶಕ್ತಿ ನಿಯಂತ್ರಿಸುತ್ತಲೇ ಇರಬೇಕಲ್ಲವಾ ವೆಂಕಟೇಶ್ ಮೂರ್ತಿ? ಈ ಶಕ್ತಿ ಯಾವುದು ಅಂತ ಯಾರೂ ನೋಡಿಲ್ಲ. ನನ್ನ ದೃಷ್ಟಿಯಲ್ಲಿ ಇದೇ ಕಾಣದ ಕಡಲು. ಮನುಷ್ಯ ತೀರಿಕೊಂಡ ನಂತರ ಈ ಶಕ್ತಿಯಲ್ಲೇ ಲೀನವಾಗಬೇಕು ಎಂಬುದು ನನ್ನ ಬಾವನೆ.

ಮೊದಲ ಬಾರಿ ಈ ಹಾಡು ಕೇಳಿದಾಗ ನನ್ನ ಮೈ ನಡುಗಿಹೋಯಿತು ವೆಂಕಟೇಶ್ ಮೂರ್ತಿ. ಅದರ ಹಿಂದೆಯೇ ಈ ಎಲ್ಲ ಕಲ್ಪನೆಗಳು ನನ್ನ ಮನಸ್ಸೆಂಬ ಸೂರ್ಯನ ಸುತ್ತ ಸುತ್ತತೊಡಗಿದವು. ಆ ಬಾವದಲ್ಲೇ ಈ ಹಾಡು ಹಾಡಿದೆ ಎಂದರು.

ನಿಜಕ್ಕೂ ಅದು ಅದ್ಭುತ ಹಾಡು ಸಾರ್. ಮತ್ಯಾರೂ ಆ ರೀತಿ ಈ ಹಾಡನ್ನು ಹಾಡಲು ಸಾಧ್ಯವಿಲ್ಲ ಅನ್ನಿಸುತ್ತದೆ ಅಂತ ನಾನು ಹೇಳಿದೆ. ಅದಕ್ಕವರು ನಕ್ಕು: ವೆಂಕಟೇಶ್ ಮೂರ್ತಿ. ನಾವು ಯಾವತ್ತೂ ಒಬ್ಬರ ಜತೆ ಹೋಲಿಕೆ ಮಾಡಿಕೊಳ್ಳಬಾರದು. ನಾನು ಈ ಹಾಡನ್ನು ಹಾಡುವ ಅವಕಾಶ ದಕ್ಕಿತು. ಹಾಡಿದೆ. ಬೇರೆಯವರಿಗೆ ಸಿಕ್ಕಿದ್ದರೆ ಅವರೂ ಹಾಡಬಹುದಿತ್ತೇನೋ? ಇದನ್ನೇಕೆ ಹೇಳಿದೆನೆಂದರೆ ಒಂದು ಸಲ ನಮ್ಮ ಮನಸ್ಸಿನಲ್ಲಿ ಆ ಬಾವ ಸುಳಿದೊಡನೆ ನಾವೇ ಪ್ರತಿಸ್ಪರ್ಧಿಯನ್ನು ಸೃಷ್ಟಿಸಿಕೊಳ್ಳುತ್ತೇವೆ.

ಹಾಗೆ ಒಬ್ಬ ಪ್ರತಿಸ್ಪರ್ಧಿಯನ್ನು ಸೃಷ್ಟಿಸಿಕೊಳ್ಳುವುದಕ್ಕಿಂತ, ನಮಗೆ ನಾವೇ ಸ್ಪರ್ಧಿಗಳಾಗಬೇಕು. ಇವತ್ತು ಮಾಡಿದ ತಪ್ಪನ್ನು ನಾಳೆ ತಿದ್ದಿಕೊಳ್ಳಬೇಕು. ಆಗ ದಿನದಿಂದ ದಿನಕ್ಕೆ ನಾವು ಮೇಲೇರುತ್ತೇವೆ. ಹಾಗೆ ಮಾಡಿಕೊಳ್ಳದಿದ್ದರೆ ನಮ್ಮನ್ನು ಕೆಳಗೆ ತಳ್ಳುವ ಸಲುವಾಗಿ ಬೇರೊಬ್ಬರು ಹುಟ್ಟಿಕೊಂಡಿದ್ದಾರೆ ಅನ್ನಿಸುತ್ತದೆ. ನೆನಪಿಡಿ. ಪ್ರತಿಯೊಂದು ಬದುಕಿಗೂ ಅದರದ್ದೇ ಆದ ದಾರಿ ಇರುತ್ತದೆ. ವಿನಾ ಕಾರಣ,ಆ ಬದುಕು ಇನ್ನೊಬ್ಬರ ದಾರಿಯ ಮಧ್ಯೆ ನುಗ್ಗಬಾರದು. ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದರು ಅಶ್ವಥ್ಥ್.

ನಾನು ಧನ್ಯವಾದ ಹೇಳಿ ಬಂದೆ. ಇದಾದ ಕೆಲವೇ ಕಾಲದಲ್ಲಿ ಅವರು ತೀರಿಕೊಂಡರು. ಅಶ್ವಥ್ಥ್ ಅವರ ಸುಳಿದಾಟವಿಲ್ಲದ ನರಸಿಂಹರಾಜ ಕಾಲೋನಿಯ ಮಾರುಕಟ್ಟೆ ಇವತ್ತಿಗೂ ನನ್ನ ಪಾಲಿಗೆ ಭಣ,ಭಣ.

‍ಲೇಖಕರು avadhi

January 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sathyakama Sharma K

    ಸುಮಾರು ಎರಡು ದಶಕಗಳಿಂದ ಬೆಂಗಳೂರಿನ ಎ ನ್ ಆರ್ ಕಾಲನಿ ಸಮೀಪವಿರುವ ತ್ಯಾಗರಾಜ ನಗರದಲ್ಲಿ ನೆಲೆಸಿರುವ ನನಗೆ ಕೂಡಾ ಇದೇ ಅನುಭವವಾಗಿದೆ. ಆಗೊಮ್ಮೆ ಈಗೊಮ್ಮೆ ಎನ್ ಆರ್ ಕಾಲನಿಯ ರಸ್ತೆಗಳಲ್ಲಿ ಅಶ್ವಥ್ ಅವರು ಧುತ್ತನೆ ಎದುರಾದರೆ ನನಗೆ ಸಾವರಿಸಿಕೊಳ್ಳಲು ಸಮಯ ಹಿಡಿಯುತ್ತಿತ್ತು. ಅವರಾದರೋ used-to-all-this ಎಂಬ ಅರ್ಥದ ಮುಗುಳ್ನಗೆ ಬೀರಿ, ಮುಂದೆ ಸಾಗುತ್ತಿದ್ದರು. ಮುಂದೆ,ಈ ಕಸಿವಿಸಿ ಯಿಂದ ತಪ್ಪಿಸಿಕೊಳ್ಳಲು,ಅವರು ಎದುರಾದರೆ, ನಾನು ‘ನಮಸ್ಕಾರ ಸಾರ್ ‘ಅನ್ನಲು ಶುರು ಮಾಡಿದೆ. ಅದಕ್ಕೆ ಉತ್ತರವಾಗಿ ಅವರು, ತುಂಬು ನಗೆ ಬೀರಿ ಕೈ ಮುಗಿದು ‘ನಮಸ್ಕಾರ’ ಅಂದಾಗ ಲೆಲ್ಲಾ, ನನಗೆ ಅವರು ನನ್ನನ್ನು ಕೂಡಾ, ‘ಇವನು ಯಾರೋ ಸಿಲೆಬ್ರೆಟಿ ಇರಬಹುದೇನೋ’, ಎಂದು ಊಹಿಸಿರಬೇಕು ಎಂದು ಸ್ವಲ್ಪ ಹಿಡಿದಿಟ್ಟು ಕೊಂಡ ಹಾಗೆ ಆಗುತ್ತಿತ್ತು. ಅವರು ಕೂಡಾ ಎನ್ ಆರ್ ಕಾಲನಿಯ ನಿವಾಸಿ ಎಂದು ಆಮೇಲೆ ತಿಳಿದು ಬಂತು. ಆದರೆ, ಅವರ ಮನೆ ಮತ್ತು ನಾನು ಬಾಡಿಗೆ ಹಿಡಿದ ಮನೆಯ ನಡುವಿನ ಅಂತರ ಒಂದೈವತ್ತು ಹೆಜ್ಜೆ ಅಷ್ಟೇ ಮಾತ್ರವಲ್ಲ ಒಂದೇ ರಸ್ತೆಯ ಒಂದೇ ಬದಿ ಎಂದು ತಿಳಿದುಬಂದಾಗ ಅವರು ಅಸುನೀಗಿ ದಿನಗಳಾಗಿದ್ದವು. ನಾನು ಕವನಗಳನ್ನು ಗೀಚುವ ನೋಟ್ ಬುಕ್ ನಲ್ಲಿ ‘ನಡೆಯುತ್ತೇನೆ ಅಶ್ವತ್ಥರ ಮನೆಯೆದುರು, ತಾಳ ತಪ್ಪಿದ ಹೆಜ್ಜೆಗಳನ್ನು ಹಾಕುತ್ತಾ… ‘ಎಂದು ಬರೆಯಲು ಹೊರಟ ಕವಿತೆಯ ಸಾಲುಗಳು ದೀನವಾಗಿ ದಿಟ್ಟಿಸುತ್ತಾ, ಮುಂದಿನ ಸಾಲುಗಳಿಗೆ ತಹತಹಿಸಿದಾಗಲೆಲ್ಲ ‘ಹುಟ್ಟು, ಸಾವು ಮತ್ತು ಕವಿತೆ ನಮ್ಮ ಕೈಯಲ್ಲಿ ಇರುವುದಿಲ್ಲ’ ಅನ್ನುತ್ತೇನೆ-ಹುಟ್ಟಿದ ದಿನದಂದೇ ನಮ್ಮನ್ನು ಅಗಲಿದ ಅವರನ್ನು ನೆನೆದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: