ಪೂರ್ಣಾವಧಿ ಕಾರ್ಯಕರ್ತ ಅಥವಾ ಉಪನ್ಯಾಸಕನಾಗುವುದು ಎರಡೂ ನನಗಿಷ್ಟವೇ..

ಅಣ್ಣನ ನೆನಪು ೪೭

ನಾನೊಂದು ಒಳ್ಳೆಯ ನೌಕರಿ ಮಾಡಬೇಕೆಂಬುದು ಅಣ್ಣನ ಯಾವತ್ತಿನ ಹಂಬಲ. ಬದುಕ ತುಂಬಾ ಬಡತನದ ಕಂಬಳಿ ಹೊದ್ದ ಯಾವುದೇ ಪಾಲಕರಿಗೂ ಇರುವ ಆಸೆ ಇದೇ. ಶಾಲೆಯಲ್ಲಿ ನಾನು ಪಡೆಯುವ ಅಂಕಕ್ಕೆ ಒಳ್ಳೆಯ ನೌಕರಿ ಸಿಗುತ್ತದೆಂದು ಆತ ಎಂದೂ ನಂಬಿರಲಿಲ್ಲ. ಆದರೆ ನಾನು ಪಡೆಯುವ ಕಡಿಮೆ ಅಂಕದ ಬಗ್ಗೆ ಆತನಿಗೆ ಯಾವುದೇ ರೀತಿಯ ಬೇಸರ ಇರಲಿಲ್ಲ. ಹಿಂದೆ ಒಂದು ಅಂಕಣದಲ್ಲಿ ಇದನ್ನು ಹೇಳಿದ್ದೆ. ‘ಒಳ್ಳೆಯ ಮನುಷ್ಯನಾಗು’ ಎನ್ನುವುದೇ ಆತನ ಹಂಬಲವಾಗಿತ್ತು.

ಈ ಸಂಘಟನೆಗೆ ಸೇರಿದ ಮೇಲೆ ನನಗ್ಯಾಕೋ ಈ ನೌಕರಿ ಬಗ್ಗೆ ಅಲರ್ಜಿ ಇತ್ತು. ಸರಳವಾಗಿ ಬದುಕುವ ರೂಢಿ ಅಣ್ಣನಿಂದಲೇ ಬಂದಿತ್ತು. ಹಾಗಾಗಿ ಹಣ ಗಳಿಸುವ, ಮನೆ ಕಟ್ಟುವ, ಆಸ್ತಿ ಖರೀದಿಸುವ, ಚಿನ್ನ ಮಾಡಿಸುವ ಯಾವ ಆಲೋಚನೆಯೂ ಇರಲಿಲ್ಲ. ಅಣ್ಣ ಮಾಡಿದ ಚಳುವಳಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವ ಕನಸು ಮಾತ್ರ ನನ್ನದು ಅಷ್ಟೇ.

ತರಗತಿಯಲ್ಲಿ ಇಂಗ್ಲಿಷ್ ವಿಷಯ ಇರುವವರೆಗೆ ಫೇಲಾಗುವುದು, ಅಥವಾ ಜಸ್ಟ್ ಪಾಸಾಗುವುದು ನನ್ನ ಬೆನ್ನಿಗೇ ಇತ್ತು. ಹಾಗಾಗಿ ಎಸ್.ಎಸ್.ಎಲ್.ಸಿ ಮುಗಿದ ಮೇಲೆ ನನ್ನ ಗೆಳೆಯರಂತೆ ನಾನೂ ವಿಜ್ಞಾನ ವಿಷಯ ತೆಗೆದುಕೊಳ್ಳುವುದಾಗಿ ಹೇಳಿದೆ. ಅಣ್ಣ ಅದು ಕಷ್ಟವೆಂದೂ ‘ಕಲಾ’ ವಿಷಯವನ್ನೇ ತೆಗೆದುಕೊಳ್ಳುವುದು ಒಳ್ಳೆಯದೆಂದು ಸಲಹೆ ಕೊಟ್ಟ.

ಎಲ್ಲರೂ ಮಕ್ಕಳನ್ನು ಸೈನ್ಸ್ ಮಾಡಿಸಲು ಮುಂದಾದರೆ ಈತ ಇದು ಬೇಡ ಅನ್ನುತ್ತಾನಲ್ಲಾ ಎಂದು ಆಲೋಚಿಸಿದೆ. ಆಯ್ಕೆಯ ವಿಷಯದಲ್ಲಿ ಆತ ಎಂದೂ ಯಾರ ಮೇಲೂ ಒತ್ತಡ ಹೇರುತ್ತಿರಲಿಲ್ಲ. ಆದರೆ ಈಗ ಕೊಟ್ಟಿದ್ದು ಮಾತ್ರ ಒಳ್ಳೆಯ ಸಲಹೆ. ಯಾಕೆಂದರೆ ಆರ್ಟ್ಸ್ ತೆಗೆದುಕೊಂಡಾಗಲೇ ಪಿ.ಯು.ಸಿ ಎರಡನೇ ವರ್ಷದಲ್ಲಿ ಫೇಲಾದೆ. ಇನ್ನು ವಿಜ್ಞಾನ ತೆಗೆದುಕೊಂಡಿದ್ದರೆ? ಕತೆ ಅಲ್ಲಿಗೆ ಮುಗಿಯುತ್ತಿತ್ತು. ಸ್ನಾತಕೋತ್ತರ ಪದವಿಯ ಕನಸು ಈಡೇರುತ್ತಿರಲಿಲ್ಲ.

ನಾನು ಅಂತಲ್ಲ; ಯಾರೇ ಆದರೂ ಉನ್ನತ ಶಿಕ್ಷಣ ಪಡೆಯಬೇಕೆನ್ನುವುದು, ವಿಶ್ವವಿದ್ಯಾಲಯಕ್ಕೆ ಹೋಗಿ ಕಲಿಯಬೇಕೆನ್ನುವುದು ಅಣ್ಣನ ಆಸೆ. ನಾನೂ ಎಂ.ಎ ಸೇರಿದೆ. ಅಲ್ಲಿ ಹೋಗಿ ಮಾಡಿದ್ದು SfI ಕೆಲಸವನ್ನು. ಇದಕ್ಕಾಗಿ ಹಲವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಎಲ್ಲಾ ಗೊಂದಲ, ವಿರೋಧ, ಪಿತೂರಿಯ ನಡುವೆ ಪ್ರಥಮ ದರ್ಜೆ ಸಿಕ್ಕಿತು. ಅಣ್ಣನ ಆಸೆ, ನನ್ನ ಕನಸಿನಂತೆ ಪಿಎಚ್.ಡಿ ಮಾಡಲು ಕನ್ನಡ ವಿ.ವಿ. ಸೇರಿದೆ; ಮತ್ತೆ ವಾಪಾಸಾದೆ ಪಾಠ ಮಾಡುವ ಹುಚ್ಚಿಗೆ.

ಹೇಗೂ ನಾನು ಸಿ.ಪಿ.ಐ(ಎಂ) ಪಕ್ಷದಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಹೋಗುತ್ತೇನೆ ಅಂದುಕೊಂಡಿದ್ದ ಅಣ್ಣನಿಗೆ ನಾನು ನೌಕರಿಯ ಕಡೆಗೆ ವಾಲಿದ್ದು ಆಶ್ಚರ್ಯವನ್ನುಂಟು ಮಾಡಿತ್ತು. ಒಂದು ನೌಕರಿ ಮಾಡಬೇಕೆಂದು ಯಾವತ್ತೂ ಆತ ಹೇಳುತ್ತಿದ್ದ. ಅದರಲ್ಲೂ ‘ನನ್ನಂತೆ ಪ್ರಾಥಮಿಕ ಶಾಲೆಯ ಶಿಕ್ಷಕ ಆಗಬೇಡ. ಜನರು ಗೌರವ ಕೊಡುವಾಗಲೂ ನಿನ್ನ ಸ್ಥಾನಮಾನ ನೋಡುತ್ತಾರೆ. ಸಾಧ್ಯ ಆದರೆ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗು’ ಎನ್ನುತ್ತಿದ್ದ. ಎನ್ನುತ್ತಿದ್ದ ಅಂದರೆ ಯಾವತ್ತೂ ಹೇಳುತ್ತಿದ್ದುದಲ್ಲ. ಒಂದೋ ಎರಡೋ ಬಾರಿ ಹೇಳಿದ ನೆನಪು. ಆತ ಬೈಯುವುದಿದ್ದರೂ, ಹೊಗಳುವುದಿದ್ದರೂ ತಿಳಿ ಹೇಳುವುದಿದ್ದರೂ ಹೀಗೆ… ಒಂದೆರಡು ಬಾರಿ ಮಾತ್ರ. ಮತ್ತೆ ಮತ್ತೆ ಹೇಳಿ ಕಿರಿಕಿರಿ ಮಾಡುವವನಲ್ಲ.

“ಒಂದು ನೌಕರಿ ಮಾಡು. ಆಮೇಲೆ ಬೇಡವೆನ್ನಿಸಿದರೆ ಬಿಟ್ಟು ಬಾ. ಯಾವ ನೌಕರಿಯೂ ಸಿಗದೆ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಕಾರ್ಯಕರ್ತ ಆದ ಎಂದು ಯಾರಿಗೂ ಅನ್ನಿಸಬಾರದು. ನೌಕರಿ ಬಿಟ್ಟು ಬಂದೆ ಎಂದರೆ ಅದಕ್ಕೊಂದು ಗೌರವ; ಅದರಿಂದ ಸಂಘಟನೆಗೂ ಅನುಕೂಲ” ಎಂದು ಹೇಳುತ್ತಿದ್ದ. ನಾನು ಪಾರ್ಟ್ ಟೈಂ ಕೆಲಸಕ್ಕೆ ಕಾಲೇಜು ಉಪನ್ಯಾಸಕನಾಗಿ ಸೇರಿದಾಗ ಆತ ತುಂಬಾ ಖುಷಿಯಾಗಿದ್ದ. ಬರುವ ಸಂಬಳವನ್ನು ಸಂಘಟನೆಗೆ ಖರ್ಚು ಮಾಡು ಎಂದು ಹೇಳಿ ನನ್ನ ವೈಯಕ್ತಿಕ ಖರ್ಚಿಗೆ ಪಾಕೆಟ್‌ಮನಿಯೆಂದು ತನ್ನ ಸಂಬಳದಲ್ಲಿ ಉಳಿಸಿ ಸ್ವಲ್ಪ ಕೊಡುತ್ತಿದ್ದ.

ಆದರೆ ಅವನಿಗೆ ಸ್ವಲ್ಪ ಬೇಸರ ಆಗುವಂತ ಒಂದು ಘಟನೆ ನನ್ನಿಂದ ನಡೆಯಿತು. ೧೯೯೬ ಇರಬೇಕು. ನಾನಾಗ SFI ನಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ೧೯೯೨ರಿಂದ ೧೯೯೬ ರವರೆಗೆ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಮೂರು ದಿನ ಸಿದ್ದಾಪುರದ ಕಾಲೇಜಿನಲ್ಲಿ ಕೆಲಸ ಉಳಿದ ಮೂರು ದಿನ (ಆಗಲೇ ನನ್ನನ್ನು ಹೊನ್ನಾವರದ ಕಾಲೇಜಿನಿಂದ ಕೈ ಬಿಟ್ಟಿದ್ದರು.) ಸಂಘಟನೆಯ ಕೆಲಸ… ಹೀಗೆ ನಡೆದಿತ್ತು.

ಸಂಘಟನೆಯ ಮೇಲ್ಸಮಿತಿಯಿಂದ ಪೂರ್ಣಾವಧಿ ಕಾರ್ಯಕರ್ತನಾಗಲು ಒತ್ತಾಯ ಇದ್ದೇ ಇತ್ತು. SFI ಸಂಘಟನೆಯ ನನ್ನ ಸ್ನೇಹಿತನಾದ ಕೆ. ಪ್ರಕಾಶ, ಕೆ. ಮಹಾಂತೇಶ ಮೊದಲಾದವರು ಪುರ್ಣಾವಧಿ ಕಾರ್ಯಕರ್ತರಾಗಿ ಸೇರಿದ್ದರು. ಹಾಗಾಗಿ ನನಗೂ ಪೂರ್ಣಾವಧಿ ಕಾರ್ಯಕರ್ತನಾಗುವ ಬಯಕೆ. ಈ ಪಾಠ, ಕಾಲೇಜು, ಸ್ವಾತಂತ್ರ್ಯವೇ ಇಲ್ಲದಿರುವ ಸ್ಥಿತಿ ಇತ್ಯಾದಿ ನೋಡಿ ನನಗೂ ಬೇಸರ ಎನ್ನಿಸಿತ್ತು. ಹಾಗಾಗಿ ನೌಕರಿಗೆ ಗುಡ್‌ಬೈ ಹೇಳಿ ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತನಾದೆ.

ಹೀಗೆ ನಾನು ಉಪನ್ಯಾಸಕ ಕೆಲಸ ಬಿಟ್ಟಿದ್ದನ್ನು ಅಣ್ಣನಿಗೆ ಹೇಳಲು ಪ್ರಯತ್ನಿಸಿದರೂ ಸಾಧ್ಯ ಆಗಲಿಲ್ಲ. ಆತ ಬೇಸರ ಮಾಡಿಕೊಳ್ಳಬಹುದೆಂದು ಸುಮ್ಮನಾದೆ. ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಸಂಘಟನೆಯಲ್ಲಿ ತಿಂಗಳಿಗೆ ೩೦೦ ರೂ. ಗೌರವಧನ ನೀಡುತ್ತಿದ್ದರು. ನಾನೂ ಹಾಗೆ ಸುಮ್ಮನಾದೆ ಹೇಳಲಿಲ್ಲ. ಶಿರಸಿಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಬಂದ ಅಣ್ಣ ನನ್ನನ್ನು ಕರೆದು “ನೀನು ಪೂರ್ಣಾವಧಿ ಕಾರ್ಯಕರ್ತನಾಗಿದ್ದೆಯಂತೆ, ನನಗೆ ಹೇಳಲೇ ಇಲ್ಲ, ಸಿ. ಆರ್. ಶ್ಯಾನಭಾಗ ಅವರು ಹೇಳಿದರು; ನನಗೆ ಹೇಳಿದ್ದರೆ ನಾನು ಬೇಡ ಅನ್ನುತ್ತಿರಲಿಲ್ಲ. ನನಗೂ ಅದು ಇಷ್ಟವೆ. ನನಗೆ ಹೇಳಬಹುದಾಗಿತ್ತಲ್ಲ’ ಎಂದು ಆತ ಹೇಳಿದ ನೆನಪು.

“ಒಂದು ನೌಕರಿ ಮಾಡು; ನನಗಂತೂ ನಿನ್ನ ಅಕ್ಕನನ್ನು (ತಾಯಿ) ಇನ್ನೂ ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ, ನೀನಾದರೂ ನೋಡಿಕೊಳ್ಳಬೇಕಲ್ಲಾ! ನೀನು ಮಾಡಿದ ಎಲ್ಲಾ ಹಣವನ್ನು ಸಂಘಟನೆಗೆ ಕೊಡು, ಬಡ ಕಾರ್ಯಕರ್ತರಿಗೆ ಕೊಡು; ಪಾಪ ಅವರು ಕಷ್ಟದಿಂದ ಬದುಕುತ್ತಿದ್ದಾರೆ. ನಿನ್ನೊಬ್ಬನ ನೌಕರಿಯಿಂದ ಕನಿಷ್ಟ ಗೌರವಧನ ಪಡೆಯುತ್ತಿದ್ದ ನಿಮ್ಮ ಪೂರ್ಣಾವಧಿ ಕಾರ್ಯಕರ್ತರಿಗೆ ಅನುಕೂಲ ಆಗಬಹುದು”. ಎನ್ನುತ್ತಿದ್ದ. ನಾನು ಬೇರೆಯವರಿಂದ ಈ ಮಾಹಿತಿ ಪಡೆಯಬೇಕಾಯಿತಲ್ಲ! ಅಂತ ಒಂದು ಕ್ಷಣ ಮರುಗಿರಬೇಕು.. ಮತ್ತೆ ‘ನೀನು ಪೂರ್ಣಾವಧಿ ಕಾರ್ಯಕರ್ತ ಆಗುವುದು ಅಥವಾ ಉಪನ್ಯಾಸಕನಾಗುವುದು ಎರಡೂ ನನಗಿಷ್ಟವೆ. ಯೋಚಿಸಿ ನೋಡು’ ಎಂದು ಹೇಳಿದ.

ಆದರೆ ನಾನು ತೀರ್ಮಾನಿಸಿ ಆಗಿತ್ತು. ಅದರಂತೆ ೨೦೦೬ ರವರೆಗೂ ಪೂರ್ಣಾವಧಿಯಾಗಿ ಕೆಲಸಕ್ಕೆ ಹೋದೆ. ಆಗೆಲ್ಲಾ ಅಣ್ಣ ಪ್ರತಿ ತಿಂಗಳು ೬೦೦ ರೂ. ಗಳನ್ನು ಕೊಡುತ್ತಿದ್ದ. ವಿಠ್ಠಲ ನೌಕರಿ ಮಾಡಬೇಕಾಗಿತ್ತು ಅಂತ ಯಾರೇ ಎಂದರೂ ‘ಆತ ಪೂರ್ಣಾವಧಿ ಕಾರ್ಯಕರ್ತ ಆಗಿರುವುದು ಒಳ್ಳೆಯದೇ’ ಎಂದು ನನ್ನನ್ನು ಸಮರ್ಥನೆ ಮಾಡುತ್ತಿದ್ದ. ನೌಕರಿಗಿಂತ ಇದೇ ಒಳ್ಳೆಯ ಕೆಲಸ ಎಂದು ಅಕ್ಕನಿಗೂ (ತಾಯಿ) ಹೇಳುತ್ತಿದ್ದ.

೨೦೦೫ ಡಿಸೆಂಬರಿನಲ್ಲಿ ಕಾಲೇಜು ಉಪನ್ಯಾಸಕನಾಗಿ ಮತ್ತೆ ನೌಕರಿ ಸೇರಬಹುದೆಂದು ಆದೇಶ ಬಂತು. ಆಗಲೂ ನಾನು ಗೊಂದಲದಲ್ಲಿ ಇದ್ದೆ; ನೌಕರಿಗೆ ಹೋಗಬೇಕೊ ಬೇಡವೋ ಎಂದು. ಒಂದೆಡೆ ಪಾಠ ಮಾಡಬೇಕೆಂಬ ಆಸೆ. ಇನ್ನೊಂದೆಡೆ ಯುವಜನ ಸಂಘ ಮತ್ತು ರೈತ ಸಂಘಟನೆಯನ್ನು ಬಿಟ್ಟು ಹೋಗಬೇಕಲ್ಲಾ ಎನ್ನುವ ಬೇಸರ. ಒಂದು ವಿದ್ಯಾವಂತ, ಪ್ರಗತಿಪರ ಕುಟುಂಬದಲ್ಲಿ ಬಂದೂ ನಾನು ಕಮ್ಯುನಿಸ್ಟ್ ಕೆಲಸಕ್ಕಾಗಿ ಪೂರ್ಣಾವಧಿ ಆಗದಿದ್ದರೆ ಹೇಗೆ? ಮತ್ಯಾರು ಆಗುತ್ತಾರೆ? ಎಂದು ನನ್ನನ್ನೇ ಕೇಳಿಕೊಳ್ಳುವ ಒಳಮನಸ್ಸು. ಗಟ್ಟಿ ತೀರ್ಮಾನ ಮಾಡಿ ಅಗತ್ಯ ಕಾಗದ ಪತ್ರದ ಕೆಲಸ ಮಾಡಿಸಲು ಬೆಂಗಳೂರಿನ ಸ್ನೇಹಿತರಿಗೆ ಹೇಳಿದೆ. ಅದು ೬-೭ ತಿಂಗಳ ಅವಧಿಯನ್ನೇ ಪಡೆಯಿತು. ಆದರೂ ಈ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಸಂಘಟನೆಯಲ್ಲಿಯೂ ಹೇಳಿರಲಿಲ್ಲ. ಅಣ್ಣನಿಗೂ ಗೊತ್ತಿರಲಿಲ್ಲ. ಯಾಕೆಂದರೆ ನಾನು ನೌಕರಿಗೆ ಹೋಗುವ ಮನಸ್ಸನ್ನೇ ಗಟ್ಟಿಗೊಳಿಸಿಕೊಂಡಿರಲಿಲ್ಲ.

ಅಂತೂ ಆ ದಿನ ಬಂತು. ಉಪನ್ಯಾಸಕ ಹುದ್ದೆಯ ಆದೇಶ ಪೋಸ್ಟಿಗೆ ಮನೆಗೆ ಬಂತು. ನಾನಿರಲಿಲ್ಲ. ಅಣ್ಣನ ಕೈಗೆ ಸಿಕ್ಕಿತು; ಮನೆಗೆ ಹೇಳಲೇಬೇಕಾಯ್ತು; ‘ಆದೇಶ ಬಂದಿದೆ. ಆದರೆ ಹೋಗುವ ಬಗ್ಗೆ ಖಚಿತ ನಿರ್ಧಾರ ಮಾಡಿಲ್ಲ’ ಎಂದೆ. ಯಮುನಾಳಿಗೆ ನಾನು ಕೆಲಸಕ್ಕೆ ಹೋಗದಿದ್ದರೆ ಒಳ್ಳೆಯದು ಎನ್ನುವ ಆಸೆ. ಅಣ್ಣನಿಗೊ.. ಈತ ನೌಕರಿ ಮಾಡಿದರೆ ಒಳ್ಳೆಯದು ಎಂದು ಅವನ ಸ್ನೇಹಿತರ ಹತ್ತಿರ ಹೇಳಿದವನು, ಈಗ…. ಗೊಂದಲಕ್ಕೆ ಬಿದ್ದ.

ಅಷ್ಟೊತ್ತಿಗೆ ಆತನ ಆರೋಗ್ಯವೂ ಕೈಕೊಡುತ್ತಿತ್ತು. ಸರ್ಪಸುತ್ತಿನಿಂದ ಬಳಲಿದ್ದ. ಕೂಡ್ರಿಸಿಕೊಂಡು ಹೇಳಿದ. “ಒಳ್ಳೆಯ ನೌಕರಿ ನಿನ್ನ ಮನಸ್ಸಿನಂತೆ ಮಾಡು. ಸಂಬಳವೂ ಚೆನ್ನಾಗಿರ‍್ತದೆ. ನಿಮ್ಮ ಕಾರ್ಯಕರ್ತರಿಗೆ, ಸಂಘಟನೆಗೆ ಸಹಾಯ ಮಾಡಬಹುದು. ಕುಟುಂಬಕ್ಕೆ ನೀ ಕೊಡುವುದು ಬೇಡ. ನನಗೆ ಪೆನ್ಶನ್ ಬರ‍್ತದೆ; ನನ್ನ ನಂತರ ಕೂಡ ನಿನ್ನ ಅಕ್ಕನಿಗೆ ಪೆನ್ಶನ್ ಬರುವಂತೆ ಮಾಡಿದ್ದೆನೆ. ನಿನ್ನದಷ್ಟನ್ನು ನೀನು ನೋಡಿಕೊಂಡರೆ ಸಾಕು. ಯಮುನಾಳೂ ಸಂಘಟನೆಯಲ್ಲಿ ಪೂರ್ತಿ ತೊಡಗಿಸಿಕೊಂಡಿದ್ದಾಳೆ. ನಾಳೆ ನೀ ಆರ್ಥಿಕವಾಗಿ ಸಂಕಷ್ಟಕ್ಕೆ ಬೀಳಬಾರದು. ‘ಛೇ….. ನಾನು ನೌಕರಿ ಸೇರಬೇಕಾಗಿತ್ತು’ ಅಂತ ನಿನಗೆ ಅನ್ನಿಸಬಾರದು..

..ನೌಕರಿ ಮಾಡಿಕೊಂಡೇ, ಅಲ್ಲಿಯ ಕೆಲಸವನ್ನೂ ಮಾಡಬಹುದು. ಇದು ನನ್ನ ಒತ್ತಾಯ ಅಲ್ಲ, ಸಲಹೆ ಅಷ್ಟೆ. ನಿನ್ನ ತೀರ್ಮಾನ ತೆಗೆದುಕೊಳ್ಳುವಲ್ಲಿ ನೀನು ನನಗಿಂತ ಸಮರ್ಥ ಇದ್ದೀಯ ನೌಕರಿಗೆ ಹೋಗದಿದ್ದರೆ ನಿನ್ನ ಅಕ್ಕ ಬೇಸರ ಮಾಡ್ಕೋತಾಳೆ. ಮಗ ಕಾಲೇಜು ಶಿಕ್ಷಕ ಅಂದ್ಕೊಳ್ಳೋಕೆ ಅವಳಿಗೂ ಖುಷಿ. ಆದರೂ ಅವಳಿಗೆ ನಾನು ತಿಳಿ ಹೇಳ್ತೇನೆ. ನೀನು ನೌಕರಿ ಮಾಡಿದರೂ ನನಗೆ ಖುಷಿಯೆ. ನೀನು ಮಾಡದಿದ್ದರೂ ಖುಷಿಯೆ; ಆಲೋಚನೆ ಮಾಡಿ ನೋಡು. ಉಳಿದವರ ಮಾತು ಕೇಳಬೇಡ. ನೀನು ಯಮುನಾ ಸೇರಿ ತೀರ್ಮಾನಿಸಿ” ಎಂದು ಹೇಳಿದ. ಅಷ್ಟು ಮಾತ್ರವಲ್ಲ ನಾನಿಲ್ಲದಿದ್ದಾಗ ಮನೆಯಲ್ಲಿ “ಮರಿ (ನನಗೆ ಆತ ಹಾಗೆ ಕರೆಯುವುದು) ಕಾಲೇಜಿನ ನೌಕರಿಗೆ ಹೋಗದಿದ್ದರೆ ಏನೂ ಹೇಳಬಾರದು. ಯಾರೂ ಅವನ ಮೇಲೆ ಒತ್ತಡ ತರಬಾರದು. ಅವನ ಇಷ್ಟದಂತೆ ಮಾಡಲಿ” ಎಂದು ಮೊದಲ ಬಾರಿಗೆ ಫರ್ಮಾನು ಹೊರಡಿಸಿದ.

ಅಂತಿಮವಾಗಿ ನೌಕರಿಗೆ ಸೇರಿದೆ. ಈಗಲೂ ನೌಕರಿ ಬಿಡುವುದಕ್ಕೆ ಕಾರಣ ಅರಸುತ್ತಿದ್ದೇನೆ.
ನಾನು ಸಿದ್ದಾಪುರಕ್ಕೆ ಓಡಾಡುವುದು, ಅದರೊಂದಿಗೆ ಪ್ರಕಾಶನದ ಕೆಲಸ, ‘ಚಿಂತನ’ದ ಕೆಲಸ ಇತರೆ ಸಂಘಟನೆಯ ಕೆಲಸ ಇತ್ಯಾದಿಗಳನ್ನು ಎಡಬಿಡದೆ ಮಾಡುವುದನ್ನು ನೋಡಿ ‘ನಾನೇ ನಿನಗೆ ಕಷ್ಟಕ್ಕೆ ಸಿಕ್ಕಿಸಿ ಹಾಕಿದೆ ಅನ್ನಿಸುತ್ತಿದೆ. ಸಾಕು ಬಿಟ್ಟುಬಿಡು. ಹೇಗೂ ಒಂದು ವರ್ಷ ಮಾಡಿದ್ಯಲ್ಲಾ’ ಅಂತ ೨೦೦೭ರಲ್ಲಿ ಹೇಳಿದ್ದ.

ಯಾವ ಕೆಲಸ ಮಾಡಿದರೂ ಅದನ್ನು ‘ಎಂಜಾಯ್’ ಮಾಡ್ಬೇಕು, ಮಾಸ್ತರಿಕೆಯನ್ನು ಕೂಡ ಅಂತಿದ್ದ; ಅದು ನಿನಗೆ ಖುಷಿ ಕೊಡ್ಬೇಕು. ಇಲ್ಲದಿದ್ದರೆ ಪ್ರಯೋಜನ ಇಲ್ಲ ಅಂತಿದ್ದ. ಆತನ ವಿದ್ವತ್ತಿಗೆ ಆತ ವಿಶ್ವವಿದ್ಯಾಲಯದಲ್ಲಿ ಇರಬೇಕಾಗಿತ್ತು. ಬದಲಿಗೆ ಪ್ರಾಥಮಿಕ ಶಾಲೆಯ ಮಾಸ್ತರನಾದ. ಆದರೆ ಎಂದೂ ಆ ವೃತ್ತಿಯ ಬಗ್ಗೆ ಆತ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಅದನ್ನೇ ಆತ ‘ಎಂಜಾಯ್’ ಮಾಡಿದ. ನಾನೂ ಕ್ಲಾಸಿಗೆ ಹೋಗುವಾಗ ಜಗದ ಜಂಜಾಟದಿಂದ ದೂರ ಇರಲು ಪ್ರಯತ್ನಿಸ್ತೇನೆ.

ಅಣ್ಣ ಹೇಳಿದಂತೆ ಕಾಲೇಜು ಮಾಸ್ತರನಾಗಿ ಮಕ್ಕಳೊಂದಿಗೆ ಕಳೆಯುವ ಕ್ಷಣ ಬದುಕಿನ ಸುಖದ ಕ್ಷಣ. ಒಂದಿಷ್ಟು ವಿದ್ಯಾರ್ಥಿಗಳು “ನಾನು ಭಂಡಾರಿ ಸರ್ ಅವರ ವಿದ್ಯಾರ್ಥಿಗಳು”. ಅಂತ ಪ್ರೀತಿಯಿಂದ ಹೇಳಿಕೊಂಡಾಗೆಲ್ಲ ಆಗುವ ಹೆಮ್ಮೆ, ಖುಷಿಗೆ ಕಾರಣ ಅಣ್ಣ ಎಂದುಕೊಂಡಾಗಲೆಲ್ಲಾ ನನ್ನೊಳಗೆ ಆತ ಇನ್ನಷ್ಟು ಬೆಳೆಯುತ್ತಾ ಹೋಗುತ್ತಾನೆ.

‍ಲೇಖಕರು avadhi

May 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. ಅಶೋಕ ಶೆಟ್ಟರ್

    ಸಾಹಿತ್ಯ ಸಮಾವೇಶಗಳಲ್ಲಿ ನಾನು ನಿಮ್ಮ ತಂದೆಯವರನ್ನು ನಾಲ್ಕಾರು ಸಲ‌ ಭೇಟಿಯಾಗಿದ್ದೆ. ಅವರದು ತುಂಬ ಗಟ್ಟಿ ವ್ಯಕ್ತಿತ್ವ. ಸಮಾವೇಶಗಳಲ್ಹೊಲಿ ಸಾಮಾನ್ಯವಾಗಿ ಹೊನಾನಾವರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಅವಧಾನಿಯವರೂ ನಿಮ್ಮ ತಂದೆಯವರೂ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ನನಗೆ ಅವರಿಬ್ಬರಲ್ಲಿ ಆರ್.ವಿ.ಭಂಡಾರಿಯವರೇ ವಿಶಿಷ್ಟ ಎನ್ನಿಸುತ್ತಿದ್ದರು. ಕೊಪ್ಪಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ಪ್ರಕಟವಾದ “ತಿರುಳ್ಗನ್ನಡ” ಎಂಬ ಸ್ಮರಣ ಸಂಚಿಕೆಯ ತಮ್ಮ ಲೇಖನದಲ್ಲಿ ನನ್ನ ಕವನ ಸಂಕಲನದ ಬಗ್ಗೆ ಬರೆದಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅವರಿಗೆ ತಮ್ಮ ಮಗ ಕಾಲೇಜ್ ಲೆಕ್ಚರರ್ ಆಗಲಿ ಎಂಬ ಬಯಕೆ ಇದ್ದುದು ಸಹಜ. ಅದಕ್ಕಿಂತ ನಿಮ್ಮ ಸೈದ್ಧಾಂತಿಕ ಸೆಳೆತಗಳಿಗೆ ಬೆನ್ನೆಲುಬಾಗಿ ತುಸು ಆರ್ಥಿಕ ಭದ್ರತೆ ಇರಬೇಕೆಂಬ ಅವರ ಯೋಚನೆ ಪ್ರ್ಯಾಕ್ಟಿಕಲ್ ಆದುದೇ. ಅಂತೂ ಉಪನ್ಯಾಸಕರಾಗಿ ಅವರ ಆಶಯವನ್ನು ಈಡೇರಿಸಿದಿರಿ. ಅವರ ಜೊತೆಗಿನ ಮಾತು ಚರ್ಚೆಗಳ ನೆನಪು ಮರುಕಳಿಸಿದಂತಾಯಿತು ನಿಮ್ಮ ಈ ಲೇಖನದಿಂದ.

    ಪ್ರತಿಕ್ರಿಯೆ
    • Shivakumar kampli

      ತುಂಬಾ ಆಪ್ತ ಬರಹ.ನೀ ಉಪನ್ಯಾಸಕ ಹುದ್ದೆಗೆ ಬಂದದ್ದು ಒಳ್ಳೆಯದಾಯಿತು.ಮಕ್ಕಳ ಬೆಳಕು ಮಾಸದಿರಲಿ.ಲೇಖನದ ಉದ್ದಕ್ಕೂ ಅಪ್ಪಾಜಿಯ ಮಾನವೀಯ ಬೆಳದಿಂಗಳು,ಅಮ್ಮನ ತ್ಯಾಗ ಕಾಡುವಂತಿದೆ.

      ಪ್ರತಿಕ್ರಿಯೆ
  2. Shivakumar kampli

    ನಿನ್ನ ಯೋಚನೆಗಳು ನಮ್ಮನ್ನೆಲ್ಲಾ ಪರವಶಗೊಳಿಸುತ್ತಿದ್ದವು ಹಾಸ್ಟಲ್ ನ ರಾತ್ರಿಗಳಲ್ಲಿನ ಆ ಬೆಳಕಿಗೆ ಶರಣೆಂಬೆ.ನೀ ಉದ್ಯೋಗಕ್ಕೆ ಬಂದದ್ದು ತುಂಬಾ ಒಳ್ಳೆಯ ಸಂಗತಿ.ಸಾವಿರ ವಿದ್ಯಾಥಿ೯ಗಳನ್ನ ತಯಾರು ಮಾಡುವ ಕೆಲಸ ಸಣ್ಣದೇನಲ್ಲ.ಒಳ್ಳೆಯ ಚಿಂತಕರು ಅಧ್ಯಾಪಕರಾಗುವುದು ಸಾಮಾಜಿಕ ಅಗತ್ಯ.ಮಕ್ಕಳ ಬೆಳಕು ಮಾಸದಿರಲಿ .ಲೇಖನದ ಉದ್ದಕ್ಕೂ ಅಪ್ಪಾಜಿಯ ಮಾನವೀಯ ಕಾಳಜಿಯ ಬೆಳದಿಂಗಳು ಆಹಾ ಎನ್ನುವಂತಿದೆ.ಜೀವಪರ ಸಂಗಾತಿ ಯಮುನಾ ತ್ಯಾಗಮಯಿ ಅಮ್ಮಾ ಎಲ್ಲರಿಗೂ ನನ್ನದೊಂದು ಸಲಾಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: