ಅಣ್ಣನಿಗೆ ತಾನು ತಾಳಮದ್ದಲೆಯಲ್ಲಿ ಕರ್ಣನ ಪಾತ್ರ ಮಾಡಿದ್ದು ನೆನಪಿಗೆ ಬಂದಿರಬೇಕು..

ಕಳೆದುಕೊಳ್ಳುವುದರಲ್ಲಿ ಸುಖ

ಸಂಪತ್ತು ಕಳೆದುಕೊಳ್ಳುವುದರಲ್ಲಿ ಆತನಿಗಿರುವ ಸುಖ ಅಪಾರವಾದದ್ದು

ವಿದ್ಯೆ, ಜ್ಞಾನವನ್ನು ಗಳಿಸುವುದರಲ್ಲಿ ಇರುವ ಸುಖಕ್ಕಿಂತ ಸಂಪತ್ತನ್ನು ಕಳೆದುಕೊಳ್ಳುವುದರಲ್ಲಿ ಆತನಿಗಿರುವ ಸುಖ ಹತ್ತುಪಟ್ಟು ಹೆಚ್ಚು.

ಬಾಲ್ಯದಿಂದಲೂ ಆತನ ಸ್ವಭಾವ ಹಾಗೆಯೇ ಎಂದು ಅವನ ತಂಗಿ ಮೀರಾ ಹೇಳುತ್ತಿದ್ದಳು. ಕೈಯಲ್ಲಿ ಹತ್ತು ರೂಪಾಯಿ ಇದ್ದರೆ ಆತ ಒಂದು ಪುಸ್ತಕ ತರುತ್ತಿದ್ದ. ಅಥವಾ ನನ್ನಂತೆ ಕಷ್ಟ ಇದ್ದವರಿಗೆ ಕೊಡುತ್ತಿದ್ದ, “ಇವನು ಹೀಗೆ ಆದ್ರೆ ನನ್ನನ್ನೂ ಎಲ್ಲಾದ್ರೂ ಕೊಟ್ರೂ ಕೊಟ್ಟ” ಎಂದು ಆಯಿ (ತಾಯಿ ಸರಸ್ವತಿ) ಬಾಲ್ಯದಲ್ಲಿ ಹೇಳುತ್ತಿರುವುದನ್ನು ನೆನಪಿಸಿಕೊಳ್ಳುತ್ತಿದ್ದಳು.

ಘಟನೆ 1

ಆಯಿ (ಅಣ್ಣನ ತಾಯಿ-ನಾವೂ ಅವಳಿಗೆ ಆಯಿ ಎಂದೇ ಕರೆಯುವುದು) ಅಣ್ಣ ಮತ್ತು ಅತ್ತೆಯೊಂದಿಗೆ ತವರಿಗೆ (ಬೋಳ್ಗೆರೆ) ವಾಪಾಸಾದಳು. ಆಗ ನಮ್ಮೂರಿನಲ್ಲಿ ಒಡೆಯನಾಗಿದ್ದ ಕೃಷ್ಣ ಹೆಗಡೆಯರ 15-20 ಗುಂಟೆ ತೋಟವನ್ನು (ಅಡಿಕೆ ತೆಂಗು ಇತ್ಯಾದಿ ಬೆಳೆದ ಭಾಗಾಯತ) ಗೇಣಿಗೆ ಮಾಡಿಕೊಂಡಿದ್ದಳು. ಏನೋ ವರ್ಷಕ್ಕೆ ಇಂತಿಷ್ಟು ಅಂತ ಒಡೆಯನಿಗೆ ಕೊಡಬೇಕು. ಕೊಟ್ಟ ನಂತರ ಕೂಡ ಉಳಿದದ್ದೆಷ್ಟು? ಬೇರೆ ಮನೆ ಕೆಲಸ ಮಾಡೇ ಹೊಟ್ಟೆ ಹೊರೆದುಕೊಳ್ಳುವುದು ತಪ್ಪಿರಲಿಲ್ಲ. ಒಡೆಯನಿಗೆ ಶ್ರಮವಿಲ್ಲದೆ ಸಂಪತ್ತು ಮಾಡಿಕೊಡುವ ಕೆಲಸ ಅಷ್ಟೇ; ಹೆಚ್ಚು ಕಡಿಮೆ ನಮ್ಮ ಕೇರಿಯಲ್ಲಿ ಬಹುತೇಕರು ಈ ಕೃಷ್ಣ ಹೆಗಡೆಯವರ ಒಕ್ಕಲಾಗಿದ್ದರು.

ಅಣ್ಣನ ಬಾಲ್ಯದಲ್ಲಿಯೇ ಈ ಭೂಮಿಯನ್ನು ಬಿಡಿಸುವುದಕ್ಕೆ ಮುಂದಾಗಿದ್ದರು. ಆದರೆ ಅಜ್ಜಿಯ ಮತ್ತು ಅವಳ ತಮ್ಮ-ಮಂಜ ಭಂಡಾರಿ ಮತ್ತು ಅಣ್ಣ ಸುಬ್ರಾಯ ಭಂಡಾರಿಯ ಒತ್ತಾಯದ ಮೇರೆಗೆ ಭೂಮಿಯನ್ನು ತಪ್ಪಿಸಿರಲಿಲ್ಲ. ಆ ಭೂಮಿಗೆ ಹೋಗಲು ಸ್ವತಂತ್ರ ದಾರಿ ಇರಲಿಲ್ಲ. ಸುತ್ತಲೂ ಅವರ ಭೂಮಿ, ಮಧ್ಯದಲ್ಲಿ ಈ 15-20 ಗುಂಟೆ ತೋಟ. ಅಲ್ಲಿ ಹೋಗಲು ಒಡೆಯನ ತೋಟವನ್ನು ದಾಟಿ ಹೋಗಬೇಕು. ಸುತ್ತಲೂ ಬೇಲಿ ಹಾಕಿದರೆ ಭೂಮಿಗೆ ಹೋಗುವಂತಿಲ್ಲ. ಹಾಗಾಗಿ ಭೂ ಸುಧಾರಣೆಯ ಸಂದರ್ಭದಲ್ಲಿ ಅರ್ಜಿ ಹಾಕಿದರೂ ಅಲ್ಲಿ ಓಡಾಡಿ, ಮನೆ ಕಟ್ಟಲು ಸಾಧ್ಯವಿಲ್ಲವೆಂದು ಒಡೆಯನ ಜೊತೆ ಒಂದು ಒಪ್ಪಂದ ಮಾಡಿಕೊಂಡರು.

ಈಗಿರುವ 20 ಗುಂಟೆ ತೋಟವನ್ನು ಒಡೆಯನಿಗೆ ವಾಪಾಸು ಕೊಡುವುದು. ಅದಕ್ಕೆ ಬದಲಾಗಿ ಅವರು ಬೇರೆ ಕಡೆ ಅರ್ಧ ಎಕರೆ ಜಾಗವನ್ನು ಆಯಿಯ ಹೆಸರಿಗೆ ಮಾಡಿಕೊಡುವುದು ಎಂದು ಒಂದು ಒಪ್ಪಂದ ಆಯಿತು. ಆಯಿಗೆ, ಅಕ್ಕನಿಗೆ ಇದರ ಬಗ್ಗೆ ಆಸಕ್ತಿ ಇಲ್ಲದಿದ್ದರೂ ಅಣ್ಣನ ಒತ್ತಾಯಕ್ಕೆ ಅವರ ಭೂಮಿಯನ್ನು ಅವರಿಗೆ ಒಪ್ಪಿಸಲಾಯಿತು. ‘ಉಳುವವನೆ ಭೂಮಿ ಒಡೆಯ’ ಎನ್ನುವ ಕಾನೂನಿನ ನ್ಯಾಯ ಕೊಡಿಸಲು ಊರಲ್ಲಿ ಹಲವರಿಗೆ ಅರ್ಜಿ ನಮೂನೆ ತುಂಬಿ ಕೊಟ್ಟನಾದರೂ ಇವನು ಮಾತ್ರ ಅದನ್ನು ತುಂಬಲಿಲ್ಲ. ಹಾಗಾಗಿ ಇದ್ದ 15-20 ಗುಂಟೆ ತೋಟವೂ ಕೈ ತಪ್ಪಿತು.

ಅದಕ್ಕೆ ಪ್ರತಿಯಾಗಿ ಅವರು ತೋರಿಸಿದ ಜಾಗದಲ್ಲಿ ಬಂದು ಮನೆ ಕಟ್ಟಲು ಪ್ರಾರಂಭಿಸಿದಾಗ ಆ ಜಾಗದ ನಿಜವಾದ ಮಾಲಿಕ ಬಂದು ಇದು ತನ್ನ ಜಾಗ ಎಂದು ಹಠ ಹಿಡಿದ. ಅಲ್ಲಿಯ ಜಾಗ ಮೂಲ ಮಾಲಿಕನಿಗೆ ಕೊಟ್ಟಾಯ್ತು. ಈ ಜಾಗದ ಮೂಲ ಮಾಲಕ ಬಂದು ಕುಳಿತಿದ್ದಾನೆ.

ಆಮೇಲೆ ಮೂಲ ಮಾಲಕನಿಗೆ ಹಣಕೊಟ್ಟು 7.8 ಗುಂಟೆ ಸ್ಥಳವನ್ನು ಕೊಂಡುಕೊಳ್ಳಲಾಯಿತು. ಕೋರ್ಟು ಕಛೇರಿ ತಿರುಗಿ ಆದ ಮೇಲೆ 20 ಗುಂಟೆ ತೋಟದ ಬದಲಿಗೆ 7 ಗುಂಟೆ ಒಣಭೂಮಿ ಸಿಕ್ಕಿತು. ಬಾವಿ ಇಲ್ಲ, ನೀರಿಲ್ಲ, ಅಂತೂ ನಿಲ್ಲಲು ಒಂದು ಜಾಗ ಅಷ್ಟೇ.
ಮತ್ತೆ ಹೋಗಿ ಒಡೆಯನೊಂದಿಗೆ ಜಗಳ ಮಾಡಬಹುದಾಗಿತ್ತು. ಕೋರ್ಟ್ ಗೆ ಹೋಗಬಹುದಾಗಿತ್ತು. ಅದಕ್ಯಾಕೆ ಸಮಯ ಹಾಳು ಮಾಡುವುದು ಎಂದು ಬಿಟ್ಟುಬಿಟ್ಟ. ಅದರ ಬದಲಿಗೆ ಓದಿನ ಕಡೆ ಗಮನ ಹರಿಸಿದ.

ಘಟನೆ 2

ಹಿಂದೆ ಹಣ್ಣು ಬೆಳೆಯಲೆಂದು ಸರ್ಕಾರ 2 ಎಕರೆ ಕಾಡು ಜಮೀನನ್ನು ಪ್ರತಿ ಕುಟುಂಬಕ್ಕೆ ನೀಡಿತ್ತು. ಅದರಡಿ ನಮ್ಮೂರಲ್ಲಿ ಸುಮಾರು ಜನರಿಗೆ ಒಂದಿಷ್ಟು ಭೂಮಿ ಸಿಕ್ಕಿತ್ತು. ಹಾಗೆ ಭೂಮಿ ಸಿಕ್ಕವರಲ್ಲಿ ನಮ್ಮ ಆಯಿಯೂ ಒಬ್ಬಳು. ಅದರಲ್ಲಿರುವ ಗಿಡಗಂಟಿ, ಮುಳ್ಳು ಗಿಡ ಇತ್ಯಾದಿ ಕಡಿದು ಒಂದಿಷ್ಟು ಗೇರು ಗಿಡ (ಗೋಡಂಬಿ) ಹಾಕಿದ್ದಳು. ಈ ಗೇರು ಪ್ಲೋಟು ಮನೆಯಿಂದ ಸ್ವಲ್ಪ ದೂರ ಇರುವುದರಿಂದ ಬೆಳೆಯನ್ನು ಎಲ್ಲರೂ ಕದ್ದುಕೊಂಡು ಹೋದ ಮೇಲೂ ಉಳಿದದ್ದನ್ನು ಆಕೆ ಕೊಯ್ದು ತರುತ್ತಿದ್ದಳು.ಈ ಗೇರು ಪ್ಲೋಟನ್ನು ಹಲವರು ಕಾನೂನು ಬದ್ಧವಾಗಿ ಹಣ ತುಂಬಿ, ಕಾನೂನು ವಿರುದ್ಧವಾಗಿ ಲಂಚ ನೀಡಿ ತಮ್ಮ ತಮ್ಮ ಹೆಸರಿಗೆ ಮಾಡಿಕೊಂಡರೂ ನಮ್ಮದು ಮಾತ್ರ ಆಗಿರಲಿಲ್ಲ. ಆಯಿ ಅಣ್ಣನಲ್ಲಿ ಎಷ್ಟೇ ಹೇಳಿದರೂ ಈತ ತಹಶಿಲ್ದಾರ ಕಛೇರಿಗೆ ಓಡಾಡಿ ಮಾಡಿಸಿ ಕೊಟ್ಟಿರಲಿಲ್ಲ.

ಅಕ್ಕ ಮತ್ತು ಆಯಿ ಸೇರಿ ಏನೋ ಕಟಪಟೆ ಮಾಡಿ ಯಾರಿಗೋ ಹೇಳಿ ಸಹಾಯ ಪಡೆದು ಸರ್ವೆ ಮಾಡಲು ಬರುವ ದಿನ ಗೊತ್ತಾಯಿತು. ಆಗ ನಾನು ವಿ.ವಿ.ಯಲ್ಲಿ ಓದುತ್ತಿದ್ದೆ. ಸರ್ವೆ ಮಾಡುವವರು ಅಣ್ಣನ ಪರಿಚಯದವರೆ. ಸರ್ವೆ ಮಾಡುವವರನ್ನು ಕರೆದುಕೊಂಡು ಬಂದವನು ಕೂಡ ನಮ್ಮ ದೂರದ ಸಂಬಂಧಿ, ಉಗ್ರಾಣಿ ಕೆಲಸ ಮಾಡುತ್ತಿದ್ದ ಉಪ್ಲೆಯ ಗಂಪ ಮಾವ. ಉಗ್ರಾಣಿ ಕೆಲಸ ಮಾಡುವ ಗಂಪಮಾವ ಬರೀ ಕಾಲಲ್ಲೇ ಇಡೀ ಊರು ತಿರುಗುತ್ತಿದ್ದ. ಆತ ಮಧ್ಯಾಹ್ನ ಯಾರ ಮನೆ ಮುಟ್ಟುತ್ತಾನೋ ಅಲ್ಲಿ ಅವನ ಊಟ. ಹಾಗಾಗಿ ಹಲವು ದಿನ ಆತನ ಊಟ ನಮ್ಮ ಮನೆಯಲ್ಲಿಯೇ. ಆತ “ತಾನೆಲ್ಲಾ ಮಾತನಾಡಿದ್ದೇನೆ. ಸರಿಯಾಗಿ ಕಾಗದ ಪತ್ರ ಮಾಡಿಸಿ ಕೊಡುತ್ತೇನೆ” ಎಂದು ಅಕ್ಕ, ಆಯಿಯವರಿಗೆ ಹೇಳಿ ಹೋಗಿದ್ದ.

ಸರ್ವೆಯವರಿಗೆ ಜಾಗ ತೋರಿಸಲು ಹೋಗಿದ್ದು ಅಣ್ಣ ಮತ್ತು ನನ್ನ ಭಾವ ಕಮಲಾಕರ. ಭಾವನಿಗೆ ಜಾಗ ಎಲ್ಲಿ ಎಂದು ಸರಿಗೊತ್ತಿಲ್ಲ. ಅಣ್ಣ ಯಾವತ್ತೂ ಆ ಗೇರು ಪ್ಲೋಟಿಗೆ ಒಂದಿನವೂ ಕಾಲಿಟ್ಟವ ಅಲ್ಲ. ಆಯಿಗೆ ದಮ್ಮಿನ ಶೀಕು ಇರುವುದರಿಂದ ಆಕೆ ಹೋಗಿಲ್ಲ. ಅಣ್ಣ ಮತ್ತು ಭಾವ ಸೇರಿ ಕೆಳಗೆ ರಸ್ತೆಯಲ್ಲಿ ನಿಂತು ಸರ್ವೆಯವರಿಗೆ ಜಾಗ ತೋರಿಸಿದರು. ಸರ್ವೆ ಮಾಡುವವರಿಗೆ ಅಣ್ಣ “ತೀರಾ ಮೇಲೆ ಹೋಗಬೇಡಿ. ಮುಳ್ಳು ಹಿಂಡಿದೆ. ಮೈಗೆ ತಾಗಬಹುದು” ಎಂದು ನಮ್ಮ ಜಾಗ ಇರುವವರೆಗೆ ಹೋಗಲೇ ಕೊಟ್ಟಿಲ್ಲ. ಅಂತೂ ಸರ್ವೆ ಕಾರ್ಯ ಮುಗಿಯಿತು.
ಏನು ಅಳತೆ ಮಾಡಿದರೋ ಗೊತ್ತಿಲ್ಲ. ಗಂಪಮಾವ ಮಾಮೂಲಿಯಂತೆ ಸರ್ವೆಯ ಕೇಸ್‍ವರ್ಕರ್ ಗೆ ಮಾಮೂಲಿ ಕೊಡುವ ಬಗ್ಗೆ ಮಾತನಾಡಿದ. ಮಾಮೂಲಿ ಕೊಡಲು ಅಣ್ಣನ ವಿರೋಧ ಇದ್ದುದರಿಂದ ಅವನಿಲ್ಲದಿದ್ದಾಗ ಸರ್ವೇಯರ್ ನ ಹತ್ತಿರ ಹೋಗಿ ಮಾತನಾಡಿದ.


“ಛೆ ಛೆ…. ಭಂಡಾರಿ ಮಾಸ್ತರರು ನನ್ನ ಪರಿಚಯದವರು ಅವರಿಂದ ಲಂಚ ಪಡೆಯುವುದೆ? ಏನೂ ಬೇಡ. ನಾನೆಲ್ಲಾ ಸರಿ ಮಾಡಿಕೊಡುತ್ತೇನೆ” ಎಂದು ಹೇಳಿ ಹೋದವರು ಅಲ್ಲಿರುವ ಜಾಗ 2 ಎಕರೆಗೆ ಬದಲು 1 ಎಕರೆ 20 ಗುಂಟೆ ಎಂದು ಮಾಡಿ ರೆಕಾರ್ಡ ಮಾಡಿಕೊಟ್ಟರು. ಲಂಚವನ್ನೂ ಪಡೆದಿಲ್ಲ; ಲಂಚ ಪಡೆಯದೆ 2 ಎಕರೆ ಎಂದು ತೋರಿಸುವುದು ಬಹುಶಃ ಅವರಿಗೆ ವೃತ್ತಿ ನೈತಿಕತೆ ಕಾಡಿರಬೇಕು. ಅದಕ್ಕಾಗಿ ಅರ್ಧ ಎಕರೆ ಕಡಿಮೆ ಇದೆ ಎಂದೇ ತೋರಿಸಿದರು. ಕಡಿಮೆ ಇದ್ದರೂ ಲಂಚ ಕೊಟ್ಟವರದು ಎರಡು ಎಕರೆ ರೆಕಾರ್ಡ್ ಆಯಿತು. ನಮ್ಮದು ಲಂಚಕೊಟ್ಟಿಲ್ಲ ಎಂದು ಎರಡು ಎಕರೆ ಇದ್ದದ್ದು ಒಂದೂವರೆ ಎಕರೆಗೆ ಇಳಿಯಿತು! ಹೇಗಿದೆ ನೋಡಿ ನ್ಯಾಯ!!

ಯಾರೋ ಒಬ್ಬನು ಬಂದು ಮಾಸ್ತರರೇ, “ನನಗೆ ಭೂಮಿಯೇ ಇಲ್ಲ. ನೀವು ಹೂ ಎಂದರೆ ನಾನು ನಿಮ್ಮ ಫ್ಲೋಟಿನ ಮೇಲೆ ಸ್ವಲ್ಪ ಜಾಗ ಅತಿಕ್ರಮಣ ಮಾಡುತ್ತೇನೆ” ಎಂದಾಗ ಅಣ್ಣನಿಗೆ ತಾನು ತಾಳಮದ್ದಲೆಯಲ್ಲಿ ಕರ್ಣನ ಪಾತ್ರ ಮಾಡಿದ್ದು ನೆನಪಿಗೆ ಬಂದಿರಬೇಕು. ನಿಜ ಜೀವನದಲ್ಲೂ ಕರ್ಣನೇ ಆಗಿ ‘ಹೂ’ ಅಂದ. ಅವನು ನಮ್ಮ ಜಾಗವನ್ನು ಒಳಮಾಡಿ ಕುಳಿತ. ಅಲ್ಲಿಗೆ ಅಲ್ಲಿಯ ಒಂದಿಷ್ಟು ಜಮೀನು ಕಳೆದುಹೋಯ್ತು.

ರೆಕಾರ್ಡ್ ಆಗಿ ಬಂದಾಗ ಭೂಮಿ ಕಡಿಮೆ ಆಯ್ತು. ತಕರಾರು ಹಾಕಬಹುದಾಗಿತ್ತು. ಆಗ ಹೊನ್ನಾವರದ ತಹಶೀಲ್ದಾರ ಆದವರು ಸುಬ್ರಾಯ ಕಾಮತರು. ಸಾಕ್ಷರತಾ ಆಂದೋಲನದಲ್ಲಿ ಒಟ್ಟಿಗೆ ಹಗಲಿರುಳೂ ದುಡಿದವರು. (ಅವರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.) “ಅವರಿಗೆ ಒಂದು ಮಾತು ಹೇಳಿದರೆ, ಮರು ಸರ್ವೆ ಮಾಡಿಸಿ ಸರಿ ಮಾಡುತ್ತಾರೆ.” ಎಂದು ಗಂಪಮಾವ ಬಂದು ಹೇಳಿದ. ಈತ ಸುಬ್ರಾಯ ಕಾಮತರಿಗೆ ಹೇಳಿದರೆ ಅವರು ಕಾನೂನು ಬದ್ಧವಾಗಿಯೇ ಸರಿಮಾಡಿಕೊಡುತ್ತಿದ್ದರು. ಆದರೆ ಅಣ್ಣ ಇದಕ್ಕೆ ಒಪ್ಪಲಿಲ್ಲ. ಅವರೊಂದಿಗಿನ ಸ್ನೇಹವನ್ನು ನಾನು ದುರುಪಯೋಗ ಮಾಡಿಕೊಂಡಂತಾಗುತ್ತದೆ ಎಂದು ಸುಮ್ಮನಾದ.

ಸ್ವಂತ ವಿಷಯದಲ್ಲಿ ಎಂದೂ ವಶೀಲಿ ಹಚ್ಚಬಾರದೆನ್ನುವ ಅವರ ಬದುಕಿನ ಧ್ಯೇಯಕ್ಕೆ  ಮನೆಯಲ್ಲಿ ಯಾರೂ ವಿರೋಧ ಮಾಡದಿರುವುದರಿಂದ ಜಾಗ ಕಡಿತವಾಗಿದ್ದು ಇನ್ನೂ ಹಾಗೇ ಇದೆ. (ಇನ್ನೆರಡು ಘಟನೆಯನ್ನು ಮುಂದಿನ ವಾರ ಹೇಳುತ್ತೇನೆ.)

‍ಲೇಖಕರು Avadhi

October 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: