ಎದೆಯ ಮಾತು ಹಾಡಾಗಲಿಲ್ಲ
-ಸಂತೆಬೆನ್ನೂರು ಫೈಜ್ನಟ್ರಾಜ್
ತಲೆಗೆ ಸುತ್ತಿಕೊಂಡ ಮದ್ದಿನ
ಸೊಕ್ಕಿನಿಂದಲೇ ಕಡ್ಡಿ ಉರಿದು ಬೂದಿಯಾಯಿತು
ಮನುಜನ ತಲೆಯೊಳಗೆ ಹೊಕ್ಕ
ಅಗಣಿತ ಮದ್ದುಗಳಿಂದ
ಎದೆಯಲಿ ಚಿಗುರಬೇಕಿದ್ದ ಒಲವು ದೂರಾಯಿತು
ಸುಮ್ಮನೆ ಬಿದ್ದೇ…ಪಾಪ ಕಬ್ಬಿಣ
ಏನಕ್ಕೂ ಬರದೇ ಹಾಳಾಯಿತು
ಮಾತಾಡುವಾಗ ಮಾತಾಡದೇ ಸುಮ್ಮನಿದ್ದು
ಎಷ್ಟೋ ಮನಸುಗಳ ಕಥೆ ಗೋಳಾಯಿತು
ಮಸೆದಷ್ಟೂ ಚೂಪೆಂದು ಚೂರಿಯ
ಕಲ್ಲಿಗೆ ಉಜ್ಕುತ್ತಾ ಹೋದೆವು ನೋಡಿ ಬರಿದೆ ಸವೆಯಿತು
ಯುದ್ಧ ಹತ್ತಿರ ಇದ್ದರೂ
ಮೌನ ನಾವು ಗೆಲುವಿನ ಮೇಲೆ ಸೋಲು ಬಂದು ಕವಿಯಿತು
ನೀರು ಹರಿದಿದೆ ಎಂದು ಕಾಗದದ ದೋಣಿ
ತೇಲಿ ಬಿಟ್ಟೆವು ಮುಂದೆ ಸಾಗಿ ಮುಳುಗಿದ್ದು ಕಂಡೆವು
ಒಲವ ಹಾದಿಯಲಿದ್ದೂ ಹೇಳಿ
ಕೊಳ್ಳದೇ ಬರಿದೇ…ನೋವುಗಳನಷ್ಟೇ ಉಂಡೆವು
ಬಿದಿರ ಬಳಸಿ ನೋಡಿ ಏನೇನೋ ಮಾಡಿದೆವು
ಕೊಳಲೂ ಆಗುತ್ತೆಂದು ಅರಿಯದೇ ಹಾಡು ನಿಲ್ಲಿಸಿದೆವು
ಎದೆಯ ಮಾತುಗಳು ಹಾಡಾಗಲಿಲ್ಲ
ಮೌನದ ಕೋಟೆಯೊಳಗೆ ಮಾತುಗಳ ಕೊಲ್ಲಿಸಿದೆವು
ಅಮ್ಮ ಎಂದರೆ ಅಡುಗೆ ಮನೆಯ ಒಡನಾಡಿ
ಸಂಕಟದ ಸಂತೆಯ ಒಂಟಿಜೀವ ಎಂದೆನಿಸಿದ್ದು ಈಗ
ಇದ್ದಾಗ ಏನೂ ಇಲ್ಲ ಕಳೆದು ಕೊಂಡಾಗ ಅನಿಸಿದ್ದು
ಅಮ್ಮ… ಹೋಗಬೇಕಿತ್ತಾ ಹೇಳದೇ ಇಷ್ಟು ಬೇಗ…






0 Comments