ಅಡುಗೆ ಎಂಬ ಮುಗಿಯದ ಆಟ

ಅಡುಗೆ ಎಂಬ ಮುಗಿಯದ ಆಟ

ಸ್ಮಿತಾ ಅಮೃತರಾಜ್ ಸಂಪಾಜೆ

ಎಳವೆಯಲ್ಲಿ ನಮಗೆಲ್ಲರಿಗೂ ಅಡುಗೆ ಮಾಡೋದು ಅಂದರೆ ತುಂಬಾ ಇಷ್ಟವಾದ ಸಂಗತಿ. ಅಮ್ಮನಂತೆ ಸೀರೆ ಉಡುವುದೇನು? ಜಡೆ ಕಟ್ಟಿ, ಮೋಟುದ್ದದ ಜಡೆಗೆ ಮಾರುದ್ದದ ಹೂಮಾಲೆ ಕಟ್ಟಿ ಮುಡಿಯುವುದೇನು? ಕಂಕುಳಲ್ಲಿ ಗೊಂಬೆಯೊಂದನ್ನು ಮಗುವಿನಂತೆ ಸುತ್ತಿಕೊಂಡು ರಮಿಸುತ್ತಾ, ಲಾಲಿ ಹಾಡುತ್ತಾ ತೂಗಿ ಮಲಗಿಸುವುದೇನು?. ನಾವು ಹೆಣ್ಮಕ್ಕಳೆಲ್ಲಾ ಮುಂದೊಮ್ಮೆ ಮಾಡಲೇಬೇಕಾದ ಕೆಲಸಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವಂತಿತ್ತು ನಮ್ಮಗಳ ಆಟ.

homeಆದರೆ ಮುಂದೊಮ್ಮೆ ಎಲ್ಲರ ಇದಿರೇ ಹೈರಾಣಾಗುವಂತೆ ಮಾಡಲೇ ಬೇಕಾದ ಈ ಕೆಲಸವನ್ನು ಮಾತ್ರ ಆ ಪ್ರಾಯದಲ್ಲಿ ಕಣ್ತಪ್ಪಿಸಿ ಮಾಡುತ್ತಿದ್ದೆವು ಎಂಬುದು ಮಾತ್ರ ಒಂದು ತಮಾಷೆಯ ಸಂಗತಿಯೇ ಸರಿ. ಸೀರೆ ಕೇಳಿದರೆ ಕೊಳೆಯಾಗುತ್ತದೆಯೆಂದೋ, ಹುಡಿಯಾಗುತ್ತದೆಯೆಂದೋ ಅಥವಾ ಹರಿದು ಹೋಗುತ್ತದೆಯೆಂದೋ.. ಕೊನೇಗೆ ನಮ್ಮ ಹಠ ಬಿಡದೇ ಇದ್ದರೆ ಇಷ್ಟು ಬೇಗ ಸೀರೆ ಉಡಲಿಕ್ಕೆ ನಿಂಗೆ ನಾಚಿಕೆಯಾಗುವುದಿಲ್ಲವೋ ಅಂತ ಗದರಿಸಿ, ನೂರಾರು ಸಬೂಬುಗಳನ್ನು ಹೇಳಿ, ಅಮ್ಮ ನಮ್ಮನ್ನು ಸಾಗಹಾಕುತ್ತಿದ್ದಳು.

ಇನ್ನು ಅಡುಗೆ ಮಾಡಲಿಕ್ಕೆ, ಒಲೆ ಹಚ್ಚಲಿಕ್ಕೆ ಬಿಟ್ಟಾಳೆಯೇ? ಹಾಗಂತ ನಾವುಗಳೆಲ್ಲರು ಆ ಕೆಲಸಗಳನ್ನು ಮಾಡದೇ ಕುಳಿತು ಕೊಳ್ಳಲು ಸಾಧ್ಯವಾ..?. ಹಾಗಾಗಿ ನಾವುಗಳೆಲ್ಲರೂ ಹಿತ್ತಲಿಗೆ ಓಡಿ ಹೋಗಿ, ಕೋಲಿನಿಂದ ಪುಟ್ಟ ಚಪ್ಪರ ಹಾಕಿ ಮನೆಯ ಮಾಡಿ, ಅದರೊಳಗೆ ಮೂರು ಸಣ್ಣ ಸಣ್ಣ ಕಲ್ಲುಗಳನ್ನಿಟ್ಟು,ಅನ್ನ ಪಾಯಸ, ಸಾರು ಮಾಡುತ್ತಿದ್ದೆವು. ಇನ್ನು ನಾವು ಅಡುಗೆ ಮಾಡುತ್ತಿದ್ದ ಪಾತ್ರೆಯ ಬಗ್ಗೆಯಂತು ಹೇಳಲೇಬೇಕು. ನಮಗೆ ಸುಲಭಕ್ಕೆ ಸಿಗುವ ಪಾತ್ರೆಯೆಂದರೆ ತೆಂಗಿನ ಕರಟವೊಂದೆ. ಸಣ್ಣ ಸಣ್ಣ ಕಡ್ಡಿಗಳನ್ನು ಉರಿಸಿ ಮೂರು ಕಲ್ಲಿನ ಮೇಲೆ ಜಾಗರೂಕತೆಯಿಂದ ಕರಟವನ್ನಿಟ್ಟು, ಅದರಲ್ಲಿ ಅಡುಗೆ ಮಾಡುತ್ತಿದ್ದೆವು.

ಆದರೆ ತಮಾಷೆಯ ಸಂಗತಿಯೆಂದರೆ, ನಮ್ಮ ಒಂದು ತೊಂಡೆಕಾಯಿಯ ಸಾರು, ಒಂದು ಚಮಚದ ಅಕ್ಕಿ ಪಾಯಸ ಬೇಯುವಲ್ಲಿಯವರೆಗೆ ತೆಂಗಿನ ಕರಟ ಹೊತ್ತಿ ಉರಿಯುತ್ತಿರಲಿಲ್ಲವೆಂಬುದು ಮಾತ್ರ ಸೋಜಿಗದ ಸಂಗತಿ. ಅಬ್ಭಾ! ಆ ಅಡುಗೆಗೆ ಎಷ್ಟು ಅಮೃತದ ಸವಿಯಿತ್ತು ಅಂದರೆ,ತದನಂತರ ನಾವ್ಯಾರು ಅಷ್ಟೊಂದು ರುಚಿಯಾದ ಅಡುಗೆಯನ್ನ ಸೇವಿಸಿರಲಿಕ್ಕಿಲ್ಲ.

ಒಮ್ಮೆ ಹೀಗಾಗಿತ್ತು. ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಗೋದಿಯ ಉಂಡೆಯನ್ನು ಕೊಡುತ್ತಿದ್ದರು. ನಾವು ಅದನ್ನು ನೋಟ್ ಪುಸ್ತಕದ ಹಾಳೆ ಹರಿದು, ಅದರಲ್ಲಿ ಸುತ್ತಿ, ಟೀಚರ ಕಣ್ತಪ್ಪಿಸಿ ಚೀಲದೊಳಗೆ ತುರುಕಿ ಮನೆಗೆ ತಂದು ರೊಟ್ಟಿ ಮಾಡಿ ತಿನ್ನುತ್ತಿದ್ದೆವು. ಒಮ್ಮೆ ಹೀಗೆ ರೊಟ್ಟಿ ಮಾಡುವಾಗ,ಅಚಾನಕ್ ಆಗಿ ಬಿಸಿ ಕಾವಲಿ ಕೈಗೆ ತಾಗಿ ಅಂಗೈಯ ಅಷ್ಟು ಅಗಲಕ್ಕೂ ಬೊಬ್ಬೆಗಳೆದ್ದು ನಾನು ಬೊಬ್ಬೆ ಹೊಡೆದಿದ್ದೆ. ಶಾಲೆಯಲ್ಲಿ ಟೀಚರ್ ಕೇಳಿದ್ದಕ್ಕೆ, ಬಿಸಿ ನೀರು ಕೈ ಮೇಲೆ ಬಿದ್ದದ್ದು ಅಂತ ನಡಗುವ ದನಿಗಳಿಂದ ಸುಳ್ಳು ಸುಳ್ಳೇ ಒದರಿದ್ದೆ. ಇಲ್ಲದಿದ್ದರೆ, ಶಾಲೆಯಲ್ಲಿ ತಿನ್ನಬೇಕಾದ ಉಂಡೆಯನ್ನು ಮನೆಯಲ್ಲಿ ತಟ್ಟಿ ರೊಟ್ಟಿ ಮಾಡಿದ ನಿಜ ಸಂಗತಿ ಅರುಹಿ ಬಿಟ್ಟರೆ.. ಮತ್ತೊಂದು ಕೈಯೂ ಬಾಸುಂಡೆಯಿಂದ ಬೊಬ್ಬೆಗಳು ಏಳುತ್ತಿದ್ದವೇನೋ.

ಆದರೆ ಆಮೇಲಾಮೇಲೆ ಪ್ರಾಯವೂ ಬುದ್ದಿಯೂ ಬಲಿಯತೊಡಗಿದ ಹೊತ್ತಿಗೆ ಅಡುಗೆಮನೆಯ ನಮ್ಮ ಒಂದೊಂದೇ ಆಟಗಳು, ಮುಗಿಯದ ಕೆಲಸಗಳಾಗಿ ಸದ್ದಿಲ್ಲದೆ ಆವರಿಸಿ ಅದರಿಂದ ಹೊರಬರಲಾಗದೆ ಚಡಪಡಿಸುವಾಗಲೆಲ್ಲಾ,ಆವತ್ತು ಗೋಗೆರೆದು, ಕಾಡಿ ಬೇಡಿ ಅಡುಗೆ ಮಾಡಿದ್ದು ನಾವೇನಾ? ಅಂತ ಅಚ್ಚರಿ ಹುಟ್ಟುವುದರಲ್ಲಿ ಸಂಶಯವಿಲ್ಲ. ಆದರೆ ಈಗ ಅಡುಗೆ ಕೆಲಸವೆಂದರೆ ಮೊದಲಿನಂತೆ ತ್ರಾಸದಾಯಕವಲ್ಲ ಅನ್ನುವುದು ಕಾಲದ ಪ್ರವಾಹದಲ್ಲಿ ನಮಗೆ ಸಿಕ್ಕ ಬದಲಾವಣೆಯೆಂಬ ದೊಡ್ಡ ಉಡುಗೊರೆಯಷ್ಟೆ.

ಒಂದು ಮಡಕೆ ಅನ್ನ ಬೇಯಬೇಕಾದರೆ, ದೂರದ ಬಾವಿಯಿಂದಲೋ, ಹೊಳೆಯಿಂದಲೋ ನೀರು ಹೊತ್ತು ತರಬೇಕಾದ ಕಾಲವೊಂದಿತ್ತು. ಕೆಲವೊಂದು ಗುಡ್ಡಗಾಡು ಪ್ರದೇಶಗಳ ಊರಿನಲ್ಲಿ ಇಂತಹ ತ್ರಾಸದಾಯಕ ಕೆಲಸಗಳು ಇನ್ನೂ ಹಾಗೇ ಇವೆ. ಅದಕ್ಕೆ ಬೇಕಾದ ಉರುವಲುಗಳನ್ನು ಸಾಕಷ್ಟು ಹಿಂದೆಯೇ ಸಂಗ್ರಹಿಸಿಡಬೇಕಿತ್ತು. ಮಸಿ ಪಾತ್ರೆ ತೊಳೆಯುವುದು, ಬೂದಿ ಎತ್ತುವುದು ಇವೆಲ್ಲ ಅಡುಗೆ ಮನೆಯೊಳಗಿನ ಕೆಲಸ ಅಂತ ಈಗ ಪ್ರಾತ್ಯಕ್ಷಿಕೆ ಮಾಡಿ ತೋರಿಸ ಬೇಕಷ್ಟೆ. ಬೂದಿ, ಮಸಿ, ಹೊಗೆ, ಬೆಂಕಿಯೇ ಇಲ್ಲದೆ ಅಡುಗೆ ಮಾಡುವಾಗ.. ನಮ್ಮ ಮಕ್ಕಳ ಅಡುಗೆ ಆಟ ಹೇಗಿರಬಹುದೆಂದು ಕುತೂಹಲವಾಗುತ್ತದೆ.

playಯಾವ ಅಡುಗೆ ಇವತ್ತು ಎಂಬುದೇ ನಮ್ಮ ದಿನದ ಬಹುಮುಖ್ಯವಾದ ಸಮಯವನ್ನ,ಶ್ರಮವನ್ನ ನುಂಗಿ ಹಾಕಿ ಬಿಡುತ್ತಿತ್ತು.ಈಗ ಹಾಗಲ್ಲ,ನಾವುಗಳು ಐದು ನಿಮಿಷಕ್ಕೆಲ್ಲಾ ಏಕಕಾಲದಲ್ಲಿ ಪಟಾಪಟ್ ಅಂತ ಅಡುಗೆ ಮಾಡಿ ಮುಗಿಸುವುದು ಕಂಡಾಗ,ಹಳೇ ಮಂತ್ರ ದಂಡದ ಮಾಯಕದ ವಿದ್ಯೆಗಳೆಲ್ಲಾ ನೆನಪಿಗೆ ಬರುತ್ತಿವೆ.ಆದರೆ ಸೌಕರ್ಯಗಳು ಎಷ್ಟೇ ಬಂದರೂ,ಹೊಟ್ಟೆ ಇರುವಲ್ಲಿಯವರೆಗೆ ಅಡುಗೆ ಕೋಣೆಯೊಂದು ಸದಾ ಇರುವುದು,ಹಾಗು ಅದರಲ್ಲಿ ಸೆರಗು ಕಟ್ಟಿಯೋ,ಶಾಲು ಬಿಗಿದೋ,ಜೀನ್ಸ್ ತೊಟ್ಟೋ,ನಮ್ಮ ಹುಡುಗಿಯರು ಒಗ್ಗರಣೆಯನ್ನು ಸಿಡಿಸುವುದು ಮಾತ್ರ ತಪ್ಪಲಾರದು ಅಂತ ಮನಸು ಮುಸಿ ಮುಸಿ ನಗುತ್ತದೆ.

ರೂಪಾಂತರಗೊಂಡ ಅಡುಗೆ ಮನೆಯೊಳಗೆ, ತಾವೂ ರೂಪಾಂತರಗೊಳ್ಳುತ್ತಾ, ಕಲಿತಷ್ಟೂ ಮುಗಿಯದೇ ಇರುವ ಅಡುಗೆ ವಿದ್ಯೆಯನ್ನು, ಉಂಡಷ್ಟೂ ಹಸಿವು ನೀಗದೇ ಇರುವಲ್ಲಿಯವರೆಗೆ ಅದನ್ನು ನಮ್ಮ ಇಷ್ಟಾನುಸಾರವೋ, ಕಷ್ಟಾನುಸಾರವೋ ಮಾಡುತ್ತಾ, ಅದನ್ನು ಪ್ರಯೋಗಿಸುತ್ತಾ, ಮುಂದಿನ ಪೀಳಿಗೆಗೆ ಅದನ್ನು ರವಾನಿಸುವ ಕೆಲಸವನ್ನು ಮಾತ್ರ ನಾವು ತಪ್ಪದೆ ಮಾಡುತ್ತಿದ್ದೇವೆ. ಈ ಹಿಂದಿನ ದಿನಗಳಲ್ಲಿ ನಾಳೆಗೇನು ಅಡುಗೆ ಅಂತ ರಾತ್ರೆಯಿಡೀ ನಿದ್ದೆಗೆಟ್ಟು ಯೋಚಿಸಿ, ಬೆಳಕು ಹುಟ್ಟುವ ಮೊದಲೇ ಎದ್ದು ಕುಳಿತು, ಅಡುಗೆ ಮನೆಯೊಳಗೆ ದೀಪ ಉರಿಸಿ, ಅಡುಗೆ ಎಂಬ ಮಹಾ ಪಾಕಕ್ಕೆ ಸಜ್ಜಾಗುತ್ತಿದ್ದನ್ನು ನೆನೆದರೆ, ಈಗ ಒಂದು ಫೋನಾಯಿಸಿದರೆ ಮನೆ ಬಾಗಿಲಿಗೆ ಊಟ, ತಿಂಡಿ ಬಂದು ಬೀಳುವ ಪರಿಗೆ ಇದು ಕನಸಾ.. ಅಂತ ಕಣ್ಣುಜ್ಜಿಕೊಳ್ಳುವಂತಾಗುತ್ತದೆ.

ಅಷ್ಟಕ್ಕೂ ಇವೆಲ್ಲಾ ಝಣ ಝಣ ಕಾಂಚಣವಿದ್ದರಷ್ಟೆ ಆಗಿ ಹೋಗುವ ಸಂಗತಿಗಳು ಎಂಬುದ ಮನಗಂಡಾಗಲೆಲ್ಲಾ, ಅಲ್ಲಿ ಅನತಿ ದೂರದ ಬಯಲಿನಲ್ಲಿ ಬೀದಿ ಬದಿಯಲ್ಲಿ ಮೂರು ಕಲ್ಲಿಟ್ಟು, ಕಂಕುಳಲ್ಲಿ ಮಗುವನ್ನೆತ್ತಿಕೊಂಡು, ಒಲೆ ಊದುತ್ತಾ, ಬೆಂಕಿ ಉರಿಸುತ್ತಾ ಅಡುಗೆ ಆಟದಂತೆ ಅಡುಗೆ ಮಾಡುವ ಆಕೆಯನ್ನು ಕಾಣುವಾಗಲೆಲ್ಲಾ ಹೃದಯ ದ್ರವಿಸುತ್ತದೆ. ಚುರುಗುಟ್ಟುವ ಹಸಿವು ಹಾಗೇ ಇಂಗಿ ಹೋಗುತ್ತಿದೆ.

‍ಲೇಖಕರು admin

April 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Kavya Kadame Nagarakatte

    ಲೇಖನ ತುಂಬಾ ಸಂವೇದನಾಶೀಲವಾಗಿದೆ ಸ್ಮಿತಾ ಅವರೇ. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ಭಾರತದ ಮಧ್ಯಮ ವರ್ಗ ಆರ್ಥಿಕವಾಗಿ ವಿಕಾಸಗೊಂಡಿದ್ದು ನಮ್ಮ ಪುಣ್ಯವೇ ಸರಿ. ಹಳ್ಳಿಗಳ ಕಡೆಗೆ ಇಂದಿಗೂ ಮಕ್ಕಳು ಬರಿಗಾಲಿನಲ್ಲಿ ನಡೆದೇ ಸಂಚರಿಸುವುದ ಕಂಡಾಗ ಶೂ-ರಾಕಿನ ತುಂಬಾ ತುಂಬಿರುವ ಚಪ್ಪಲಿಗಳು ಮುಖಕ್ಕೆ ಬಂದು ಎರಚಿದಂತೆನಿಸುವುದು. ಅನಂತಮೂರ್ತಿಯವರು “Centuries co-exist in India” ಅಂದಿದ್ದು ಪದೇ ಪದೇ ನೆನಪಿಗೆ ಬರುವುದು.

    ಪ್ರತಿಕ್ರಿಯೆ
  2. ಸುನೀತಾ.

    ಲೇಖನ ಆಪ್ತವಾಗಿದೆ…. ಸ್ಮಿತಾ
    ಮತ್ತಷ್ಟು ಲೇಖನಗಳು ಹೊರಹೊಮ್ಮಿ ಓದುವ ಅವಕಾಶ ನಮಗೆ ದಕ್ಕಲಿ

    ಪ್ರತಿಕ್ರಿಯೆ
  3. ಆನಂದ್ ಋಗ್ವೇದಿ

    ಅಡುಗೆ ಎಂಬ ನಿತ್ಯ ಕಾಯಕವನ್ನು ಹೆಣ್ಣಿಗಷ್ಟೇ ನಿಗದಿಗೊಳಿಸಿದ ಈ ಸಾಮಾಜಿಕ ತರತಮವನ್ನು ಲೇಖನ ನವುರಾಗಿ ಮಂಡಿಸುತ್ತಲೇ ಗಾಢ ವಿಷಾದವನ್ನು ಮೂಡಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: