ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಜ್ಜ ಹೇಳಿದ ಕಥೆಗಳು’ – ವಿದ್ಯಾ ಬರೀತಾರೆ

ನೆನಪಿನಂಗಳದಲ್ಲಿ ಎರಡು ಪ್ರಸಂಗಗಳು..

ವಿದ್ಯಾ ಕೆ ಆರ್

-1-

ಮಹಾರಾಷ್ಟ್ರದ ಮಹಾನ್ ಸಂತ, ಕವಿ ತುಕಾರಾಮನ ಕುರಿತಾದ ಪ್ರಪ್ರಥಮ ಚಿತ್ರ ನಿರ್ಮಾಣ ಮಾಡಲ್ಫಟ್ಟಿದ್ದು ೧೯೩೬ ರಲ್ಲಿ, ವಿ. ಶಾಂತಾರಾಮರ ಪ್ರಭಾತ್ ಫಿಲ್ಮ್ಸ್ ಬ್ಯಾನರಿನ ಅಡಿಯಲ್ಲಿ. ಇದರ ನಿರ್ದೇಶಕರು ವಿಷ್ಣುಪಂತ್ ಗೋವಿಂದ ದಾಮ್ಲೆ ಹಾಗೂ ಶೇಖ್ ಫತ್ತೇತಾ. ಈ ಅಸಾಮಾನ್ಯ ಸಂತನ ಬದುಕನ್ನು ಅಭಿನಯಿಸಿ ತೆರೆಯ ಮೇಲೆ ತರುವ ಭಾರ ಹೊತ್ತುಕೊಂಡಿದ್ದು ವಿಷ್ಣುಪಂತ್ ಪಗ್ನೀಸರು.
ಈ ಕಪ್ಪು ಬಿಳುಪು ಚಲನಚಿತ್ರದ ಕುರಿತಾದ ಒಂದು ರೋಚಕ ಕಥೆಯಿದೆ. ವಿ. ಶಾಂತಾರಾಮರು ಈ ಚಿತ್ರದ ನಿರ್ದೇಶನವನ್ನು ಕುರಿತು ವಿಮರ್ಶೆಮಾಡಲೆಂದು ಭಾರತದುದ್ದಕ್ಕೂ ವಿಮರ್ಶಕರಿಗೆ ಅಹ್ವಾನವಿತ್ತಿದ್ದರಂತೆ. ಅಷ್ಟೂ ವಿಮರ್ಶಕರಲ್ಲಿ ಮೂರು ಮಂದಿ ಮಾತ್ರ ಕೊನೆಯ ಸುತ್ತಿಗೆ ಆಯ್ಕೆಗೊಂಡಿದ್ದರು. ಅವರುಗಳಲ್ಲಿ ನನ್ನ ತಾತ ಶ್ರೀ ಸಿ. ಜಿ. ಎಂ. ಆಚಾರ್ಯರೂ ಒಬ್ಬರಾಗಿದ್ದರು. ಇವರ ಆಂಗ್ಲ ಬರಹವನ್ನು ಮೆಚ್ಚಿ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು. ಅಂದಿನ ಕಾಲಕ್ಕೆ ಪ್ರಯಾಣ ಹಾಗೂ ಉತ್ತಮ ವಸತಿ ಸೌಲಭ್ಯವನ್ನು ಒದಗಿಸಿ ನನ್ನ ತಾತನವರನ್ನು ವಿ. ಶಾಂತಾರಾಮರು ಮುಂಬೈಗೆ ಕರೆಸಿಕೊಂಡಿದ್ದರಂತೆ.
ಸುಮಾರು ಹದಿನೈದು-ಇಪ್ಪತ್ತು ದಿನಗಳ ಕಾಲ ನನ್ನ ತಾತ, ಉಳಿದ ಇಬ್ಬರೊಟ್ಟಿಗೆ “ಸಂತ ತುಕಾರಾಂ” ಚಿತ್ರದ ಚಿತ್ರೀಕರಣ ನೋಡಲು ಸೆಟ್ಟಿಗೆ ಹೋಗಿ ಕುಳಿತುಕೊಳ್ಳುವುದಷ್ಟೇ ಅಲ್ಲದೆ ವಿಷ್ಣುಪಂತ್ ಪಗ್ನೀಸರ ಹಾಗೂ ಮತ್ತಿತರ ನಟರ ಅಭಿನಯವನ್ನು, ಸಂಭಾಷಣೆಯನ್ನು, ದಿಗ್ದರ್ಶನವನ್ನು ಕೂಲಂಕುಷವಾಗಿ ವಿಮರ್ಶಿಸಬೇಕಿತ್ತಂತೆ. ಚಿತ್ರೀಕರಣದ ಮಧ್ಯೆ ಅಭಿನಯದಲ್ಲಿ ವ್ಯತ್ಯಾಸ, ಅತಿರೇಕ, ಅನಗತ್ಯ ಸನ್ನಿವೇಶಗಳ ಬಗ್ಗೆ ಚಕಾರವೆತ್ತಬಹುದಿತ್ತು. ನಿರ್ದೇಶಕರು, ಶಾಂತಾರಾಮರಾದಿಯಾಗಿ ಅದನ್ನು ಅತ್ಯಂತ ತಾಳ್ಮೆಯಿಂದ ಪರಿಶೀಲಿಸಿ, ಅಗತ್ಯ ಬದಲಾವಣೆಗಳನ್ನು ಮಾಡಿ ಚಿತ್ರೀಕರಣ ಮುಂದುವರೆಸುತ್ತಿದ್ದರಂತೆ. ಈ ಮಹತ್ತರ ಘಟನೆ ನನ್ನ ತಾತನವರ ಬದುಕಿನ ಒಳನೋಟವನ್ನೇ ಬದಲಿಸಿತ್ತು. ವೃತ್ತಿಯಿಂದ ವೈದ್ಯರಾಗಿಯೂ, ಬ್ರಿಟಿಶರ ಒಡನಾಟ ಹೊಂದಿದವರೂ ಆಗಿದ್ದ ಅವರು ಇದ್ದಕ್ಕಿದ್ದಂತೆ ಆಧ್ಯಾತ್ಮವನ್ನು ಅಪ್ಪಿ, ಸಂಪೂರ್ಣ ಭಗವದ್ಭಕ್ತಿಗೆ ಶರಣಾಗಿಬಿಟ್ಟರು. ಅಪ್ಪಟ ಭಾರತೀಯತೆಯನ್ನೂ, ಅತ್ಯಂತ ಸರಳ ಜೀವನವನ್ನೂ ಮೈಗೂಡಿಸಿಕೊಂಡರು.
ನನ್ನ ಬಾಲ್ಯದಲ್ಲಿ ನಾನು ತಾತನೊಂದಿಗೆ ಪೌರಾಣಿಕ ಕಥೆಗಳನ್ನು ಕೇಳುತ್ತ ಮಲಗುತ್ತಿದ್ದದ್ದು ಒಂದು ಮರೆಯಲಾರದ ನೆನಪು. ಇಂಥದ್ದೇ ಸಂದರ್ಭದಲ್ಲಿ ನನಗೆ ತಾತ ಈ ಕಥೆಯನ್ನು ಹೇಳಿದ್ದರು. ಹಾಗೆಯೇ ಸಂತ ತುಕಾರಾಮನ ಜೀವನ ಚರಿತ್ರೆಯನ್ನೂ!
ಚಿತ್ರೀಕರಣ ಮುಕ್ತಾಯಗೊಂಡು ಚಿತ್ರ ಬಿಡುಗಡೆಯಾದ ನಂತರ ತಾತ ಅದನ್ನು ಕನಿಷ್ಟ ಪಕ್ಷ ೧೩-೧೪ ಬಾರಿಯಾದರೂ ನೋಡಿದ್ದರಂತೆ. ಪ್ರತಿಬಾರಿಯೂ ಮೈಯ ಕಣಕಣದಲ್ಲೂ ರೋಮಾಂಚನವನ್ನನುಭವಿಸಿ, ಕಣ್ಣೀರು ಧಾರೆಯಾಗಿ ನಿಲ್ಲದೆ ಹರಿಯುತ್ತಿತ್ತೆಂದು ನನಗೆ ಹೇಳುತ್ತಲೇ ಅತ್ತು ಬಿಡುತ್ತಿದ್ದರು ತಾತ. ಸಂತ ತುಕಾರಾಮ ಜೀವ-ಪರಬ್ರಹ್ಮ ತತ್ವ ಸಾರುವ “ಆದಿ ಬೀಜ ಏಕಲೆ” ಎಂಬ ಹಾಡು ಅವರು ಸಾಯುವವರೆಗೂ ಜ್ಞಾಪಿಸಿಕೊಳ್ಳುತ್ತಿದ್ದರು.
ಇಂಥ ನನ್ನ ತಾತ ತೀರಿಕೊಂಡು ಈಗ್ಯೆ ಹತ್ತು ತಿಂಗಳು ಕಳೆದಿವೆ. ಅವರು ಕ್ಯಾನ್ಸರಿನಿಂದ ಕೊನೆಯುಸಿರೆಳೆದಾಗ ಅವರ ವಯಸ್ಸು ೯೯..ಯಾಕೋ ತಾತ ಬಹಳ ನೆನಪಾಗುತ್ತಿದ್ದಾರೆ.ಹಾಗೆಯೇ ಅವರಿಗೆ ಪ್ರಿಯವಾದ ಈ ಹಾಡು ಕೂಡಾ.ಬಾಲ್ಯದಲ್ಲಿ ಅವರೆದೆಯ ಮೇಲೆ ತಲೆಯಿಟ್ಟು ಕಥೆ ಕೇಳುತ್ತ, ನಿದ್ರಿಸುತ್ತಿದ್ದ ನೆನಪುಗಳೂ ಕಾಡುತ್ತಿವೆ..ಹಾಗೆಯೇ ನನ್ನ ಪುಟ್ಟ ಕೈಯೊಳಗೆ ಅವರು ಹಾಕುತ್ತಿದ್ದ ಹಿಡಿಸಲಾಗದಷ್ಟು ದೊಡ್ಡ ಕೈತುತ್ತೂ…

-2-


ದಸರೆಯ ದಿನಗಳು ಸಂಭ್ರಮದ ದಿನಗಳು. ಮನೆಯ ಮುಂದಿನ ಚಂದ ಚಂದದ ರಂಗೋಲಿ, ತಳಿರು ತೋರಣ, ಹೂವು, ಹಣ್ಣುಗಳು, ಬಣ್ಣಬಣ್ಣದ ದಶಾವತಾರಗಳನ್ನೊಳಗೊಂಡ ಪೈಪೋಟಿಗೆ ನಿಂತು ಜೋಡಿಸಲ್ಪಟ್ಟ ಗೊಂಬೆಗಳು, ದೇವಿ ದುರ್ಗೆಯ ಉಪಾಸನೆ, ಹರಿದ್ರಾ ಕುಂಕುಮಗಳನ್ನು ತುಂಬಿಕೊಂಡ ಬೆಳ್ಳಿಯ ಬಟ್ಟಲುಗಳು, ದೀಪ ಎಲ್ಲವೂ ಸಮೃದ್ದಿಯ ಸಂಕೇತಗಳು. ಇಂಥದ್ದೇ ನವರಾತ್ರಿಯಲ್ಲೊಂದು ದಿನ, ಚಂದ್ರನ ಕೆಳಗೆ ಅಂಗಳದಲ್ಲಿ ನನ್ನ ತಾತನವರು ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಕಥೆಯಾಗಿ ಬಿಚ್ಚಿಡುತ್ತ ನನಗೆ ಕೈತುತ್ತು ಹಾಕಿದ್ದರು.
ನನ್ನ ತಾತ ಮೈಸೂರಿನಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಓದುತ್ತಿದ್ದ ಕಾಲವದು. ಮನೆಯಲ್ಲಿ ಕಡು ಬಡತನ. ಪರೀಕ್ಷೆಯ ಹಣಕ್ಕಷ್ಟೇ ಅಲ್ಲದೆ, ಉದರ ನಿರ್ವಹಣೆಗೂ ಇನ್ನೊಬ್ಬರನ್ನು ಆಶ್ರಯಿಸಬೇಕಾದ ಕಾಲವಾಗಿತ್ತು ಅದು. ವಾರಾನ್ನದ ಮನೆಗಳಿಗೆ ಎಡತಾಕಿ ಮನಸ್ಸು, ಚಪ್ಪಲಿ ಎರಡೂ ಸವೆದ ದಿನಗಳಲ್ಲಿ ಪುಣ್ಯಾತ್ಮರೊಬ್ಬರು ವಾರಾನ್ನದ ಬವಣೆಗಳಿಗೆ ಪೂರ್ಣ ವಿರಾಮ ಹಾಕಿ, ತಮ್ಮ ಮನೆಯಲ್ಲಿಯೇ ಒಂದು ಕೋಣೆಯನ್ನು ನಾಲ್ಕು ವಿದ್ಯಾರ್ಥಿಗಳಿಗೆ ಬಿಟ್ಟುಕೊಟ್ಟು, ಅವರಿಗೆ ಪುಸ್ತಕ, ಲೇಖನಿ, ಮಸಿಕುಡಿಕೆ, ಸೀಮೆ ಎಣ್ಣೆಯ ಬುಡ್ಡಿ ದೀಪಗಳನ್ನು ಒದಗಿಸಿ, ದಿನವೂ ಊಟದ ವ್ಯವಸ್ಥೆಯನ್ನೂ ಮಾಡಿ ಕೊಟ್ಟರಂತೆ.
ಪ್ರತಿ ಭಾನುವಾರದಂದು ಈ ನಾಲ್ಕು ವಿದ್ಯಾರ್ಥಿಗಳು ಚಾಮುಂಡಿ ಬೆಟ್ಟಕ್ಕೆ ಹೋಗಿ, ತಮ್ಮ ಬಟ್ಟೆಗಳನ್ನು ಒಗೆದುಕೊಂಡು, ದೇವಿಯ ದರ್ಶನ ಮಾಡಿಕೊಂಡು ಸಂಜೆಯ ವೇಳೆಗೆ ಹಿಂತಿರುಗುವ ಅಭ್ಯಾಸವಿತ್ತು.
ಉಟ್ಟಿದ್ದ ತುಂಡು ಅಂಗವಸ್ತ್ರದಲ್ಲಿಯೇ ಅಲ್ಲಿಯೇ ಕುಳಿತು ಬಟ್ಟೆ ಒಣಗುವಷ್ಟರಲ್ಲಿ ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವೂ ಅಖಂಡವಾಗಿ ನಡೆಯುತ್ತಿತ್ತು. ನನ್ನ ತಾತ ಮೂಗಿನಲ್ಲಿ ಶಹನಾಯಿಯ ಧ್ವನಿ ಹೊರಡಿಸಿದರೆ, ಮತ್ತೊಬ್ಬರು ಬಾಯಲ್ಲಿ ಮೃದಂಗ, ತಾಳ, ಮುಂತಾದವುಗಳ ನಕಲು ತೆಗೆದು ಮೈಸೂರು ವಾಸುದೇವಾಚಾರ್ಯರ ಕೃತಿಯೊಂದನ್ನು ತಮ್ಮ ತಮ್ಮಲ್ಲಿಯೇ ಪ್ರಸ್ತುತ ಪಡಿಸಿಕೊಳ್ಳುತ್ತಿದ್ದರಂತೆ. ಹೀಗೆ ಕಚೇರಿ ನಡೆಯುತ್ತಿರಬೇಕಾದರೆ ತಮ್ಮ ಹಿಂದೆಯೇ ಪರಿಚಾರಕರೊಂದಿಗೆ ಹಾದು ಹೋದ ಮೈಸೂರಿನ ಶ್ರೀ ಮನ್ಮಹಾರಾಜರು ಯಾರ ಗಮನಕ್ಕೂ ಬರಲೇ ಇಲ್ಲ. ಆದರೆ ಈ ಪುಂಡರ ಎಲ್ಲ ಕಪಿ ಚೇಷ್ಟೆಗಳನ್ನೂ ಮಹಾರಾಜರು ಕಿರುಗಣ್ಣಿನಲ್ಲಿ ಗಮನಿಸಿ ತೆರಳಿದ್ದರು. ಬಟ್ಟೆಗಳೆಲ್ಲ ಒಣಗಿದ ಮೇಲೆ ಮನೆಗೆ ಹೊರಡಲು ತಯಾರಾದ ಇವರನ್ನೆಲ್ಲ ಸೇವಕನೊಬ್ಬನನ್ನು ಕಳಿಸಿ ಮಹಾರಾಜರು ತಮ್ಮ ಸ್ಥಳಕ್ಕೆ ಕರೆಸಿಕೊಂಡರಂತೆ. ಮಹಾರಾಜರು ಆಗಲೆಲ್ಲ ಇವರನ್ನು ನೇರವಾಗಿ ಎದುರಾಗಿ ನೋಡುತ್ತಿರಲಿಲ್ಲ. ಕನ್ನಡಿಯ ಪ್ರತಿಬಿಂಬಗಳನ್ನು ನೋಡಿ “ಶುರುವಾಗಲಿ ಕಚೇರಿ” ಎಂದಪ್ಪಣೆ ಕೊಟ್ಟಿದ್ದೇ ತಡ, ಮೊದಲೇ ಹೆದರಿದ್ದ ಹುಡುಗರು, ಒಡೆದು ಹೋಗುವ ಹಾಗೆ ಬಡಿದುಕೊಳ್ಳುತ್ತಿದ್ದ ಗುಂಡಿಗೆಯ ಸದ್ದಿಗೆ ನಡುಗುತ್ತ ಹೇಗೆ ಹೇಗೋ, ಮನಬಂದಂತೆ, ನಡುಗುವ ಸ್ವರಗಳಿಂದ ತಮ್ಮೆಲ್ಲ ಬುದ್ಧಿ ಖರ್ಚು ಮಾಡಿ ಸಂಗೀತವನ್ನು ದೊರೆಗಳ ಕಿವಿಗೆ ತಲುಪಿಸಿದರಂತೆ. ಇವರ ರಾಗಾಲಾಪನೆಯ ನಡು ನಡುವೆ ನಸು ನಗುತ್ತ, ಶಹಬ್ಬಾಸ್ ಎನ್ನುತ್ತ, ಕೇಳಿ ಆನಂದಿಸಿ, ಕೊನೆಗೊಮ್ಮೆ ದೊಡ್ಡದಾಗಿ ನಕ್ಕುಬಿಟ್ಟರಂತೆ ಮಹಾರಾಜರು. ನಂತರ ಸೇವಕನನ್ನು ಕರೆದು ದೊಡ್ಡ ಹರಿವಾಣದ ತುಂಬ ದ್ರಾಕ್ಷಿ, ಗೋಡಂಬಿ ಇತ್ಯಾದಿ ಒಣ ಹಣ್ಣುಗಳನ್ನೂ, ಪಂಚೆ, ಶಾಲು, ಶಲ್ಯಗಳನ್ನೂ, ತಾಂಬೂಲಾದಿಗಳನ್ನೂ ತರಿಸಿ ಸ್ವಲ್ಪ ಹಣದೊಂದಿಗೆ ತೆಗೆದುಕೊಳ್ಳಲು ಸನ್ನೆ ಮಾಡಿದರಂತೆ. ಸೇವಕ “ಬುದ್ಧಿಯವರು ಅಪ್ಪಣೆ ಮಾಡುತ್ತಿದ್ದಾರೆ ಒಪ್ಪಿಸಿಕೊಳ್ಳಿ” ಎಂದದ್ದೇ ತಡ ಅವನ್ನೆಲ್ಲ ಬಟ್ಟೆಯಲ್ಲಿ ಗಂಟುಕಟ್ಟಿ ಬೆಟ್ಟ ಇಳಿದು ಮನೆ ಸೇರಿದವರು ಒಂದು ತಿಂಗಳವರೆಗೆ ಬೆಟ್ಟದ ಕಡೆಗೆ ತಲೆಯಿಟ್ಟೂ ಮಲಗಿರಲಿಲ್ಲವೆಂದು ತಾತ ಹೇಳಿದ್ದರು. ಒಂದೆರಡು ದಿನ ಜ್ವರದಿಂದಲೂ ಬಳಲಿದ್ದರಂತೆ ನನ್ನ ತಾತ.
ನನಗೆ ಈ ಕಥೆ ಹೇಳುತ್ತ ” ಮಗು, ಅರಸರು ಕರುಣಾಮಯಿಗಳಾಗಿದ್ದರು. ನಮ್ಮನ್ನು ನೋಡಿದ ಗಳಿಗೆಯಲ್ಲೇ ನಮ್ಮ ಕಷ್ಟಗಳ ಅರಿವಾಗಿತ್ತು ಅವರಿಗೆ. ಆದರೂ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ, ನಮ್ಮ ಅಲ್ಪ ಪ್ರತಿಭೆಗೂ ಮನ್ನಣೆಯಿತ್ತು, ಪೋಷಿಸಿ, ಹಣವಿತ್ತು ನಮ್ಮ ಓದಿಗೂ, ಜೀವನಕ್ಕೂ ನೆರವು ಕಲ್ಪಿಸಿಕೊಟ್ಟರು. ಅವರು ನಮ್ಮ ಪಾಲಿನ ಅಂದಿನ ದೇವತೆ” ಎಂದಿದ್ದರು. ತಾತನವರು ಸುಮಾರು ೫೦ ವರ್ಷಗಳ ಕಾಲ ವೈದ್ಯಕೀಯ ವೃತ್ತಿ ಮಾಡಿದ್ದರು. ಸರ್ಕಾರಿ ನೌಕರಿಯಿಂದ ನಿವೃತ್ತರಾದರೂ, ಚಿತ್ರದುರ್ಗದ ಬಳಿಯ ಚಿತ್ರಹಳ್ಳಿಯೆಂಬ ಕುಗ್ರಾಮದಲ್ಲಿ ನೆಲೆ ನಿಂತು ಹಳ್ಳಿಯ ಜನರಿಗೆ ತಮ್ಮ ಪಿಂಚಣಿಯಿಂದ ಉಚಿತ ಔಷಧೋಪಚಾರಗಳನ್ನು ಕೈಲಾಗುವಷ್ಟು ಸಮಯ ನಡೆಸಿದರು. ತಾತ ತೀರಿಕೊಂಡಾಗ ಅವರಿಗೆ ೯೭ ವರ್ಷ ವಯಸ್ಸು. ಶರನ್ನವರಾತ್ರಿಗಳಲ್ಲಿ ನನಗೆ ಅವರು ಉಣಿಸಿದ ಕೈತುತ್ತು, ಹೇಳಿದ ಈ ಕಥೆ ಬಹಳ ನೆನಪಾಗುತ್ತದೆ.
ತಾತನವರಂತೆ, ನಾನು ನೋಡದಿದ್ದ ಮೈಸೂರಿನ ಶ್ರೀಮನ್ಮಹಾರಾಜರೂ ನನ್ನ ನೆನಪಿನಂಗಳದಲ್ಲಿ ಕಲ್ಪನೆಯಾಗಿ ನಿಂತುಬಿಟ್ಟಿದ್ದಾರೆ ಇಂದಿಗೂ.
 

‍ಲೇಖಕರು G

17 October, 2014

7 Comments

  1. krishna

    Very very touching story. Excellent writing. Thanks for sharing

    • Anonymous

      Thank you very much for your kind appreciation.

  2. Palahalli Vishwanath

    ಬರಹ, ಕಥೆ – ಎರಡೂ ಇಷ್ಟವಾಯಿತು

    • Anonymous

      Thank you very much sir.

  3. Anil Talikoti

    ತುಂಬಾ ಒಳ್ಳೆಯ ಮನ ಮುಟ್ಟುವ ಬರಹ
    -Anil

  4. D.Ravivarma

    ಮನಮುಟ್ಟುವ ಬರಹ ..ನಮ್ಮ ಹಿರಿಯರ ಬದುಕಿನಲ್ಲಿ ಜೀವಂತಿಕೆ ಇತ್ತು ,ಬದುಕಿನ ಬಗ್ಗೆ ಒಂದು ಘಮ್ಬೀರ ಚಿಂತನೆ ,ತ್ಯಾಗ,ಬದ್ದತೆ ಇಸ್ತೆಲ್ಲಕ್ಕು ಮಿಗಿಲಾಗಿ ನಿಸ್ವಾರ್ಥ ಪ್ರೀತಿ .ಸ್ಪನ್ದನಾ ಮನೋಭಾವ ಅವರ ಬದುಕಿನ ಮಾರ್ಗವಾಗಿದ್ದವು ..
    ನಿಮ್ಮ ಬರಹ ಮನಮಿದಿಯುವನ್ತಿದೆ.. ಮತ್ತೆ ಮತ್ತೆ ಒದುವನ್ತಿದೆ..

  5. J.S.Ganjekar

    ತುಂಬಾ ಒಳ್ಳೆಯ ಮನ ಮುಟ್ಟುವ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading