ಶಾಂತಾ ನಾಗರಾಜ್
ನೋಡಿದೆ ಮೊಮ್ಮಗಳೆ ಅಮೆರಿಕದ
ನಿನ್ನ ಆಫ಼ೀಸಿನ ಹೊಸ ಕ್ಯಾಬಿನ್ನನ್ನು
ಸೆಮಿನಾರು ಹಾಲ್, ಎಲ್.ಸಿ.ಡಿ ಪರದೆಗಳು
ಕೆಂಪು ನೆಲಹಾಸು ಕನ್ನಡಿಯ ಗೋಡೆಗಳು
ನಡುವೆ ಮಂದಸ್ಮಿತೆ ಎಂ.ಡಿ ನೀನು!
ನಾನೂ ಕುಶಲವಿಲ್ಲಿ ನನ್ನದೇ ಕ್ಯಾಬಿನ್ನಿನಲ್ಲಿ
ನಗಬೇಡವೇ ಪುಟ್ಟಿ ಹಳೆಯದೆಂದು
ನನ್ನ ಮದರ್ ಬೋರ್ಡಿಗೆ ಎಂದಿಗೂ ಅಮರತ್ವ
ಫ಼ೈಲುಗಳ ಡೌನ್‍ಲೋಡು ಅಪ್‍ಡೇಟ್‍ಗಳ ಹಂಗಿಲ್ಲ
ನನ್ನ ಐಕಾನುಗಳು ಎಲ್ಲಕಾಲಕು ಹೊಸತು
ಹಳೆಯ ಇ-ಸ್ಕ್ಯಾನಿದೆ ಓಡಿಸಲು ವೈರಸ್ಸು
ಸೊಳ್ಳೆ ಚಿಗಟಗಳಿಲ್ಲ ಜಿರಲೆ ಜೇಡಗಳೂ ಇಲ್ಲ
ಪಿಪಿಪಿ ವೈರಸ್ಸು ತ್ರೋಜನ್ನು ಸುಳಿಯುವುದೆ ಇಲ್ಲ
ನನ್ನಜ್ಜಿಯದೇ ಸಾಫ಼್ಟ್‍ವೇರು ಹುಸಿಯದಲ್ಲ

ನನ್ನ ಸಿಪಿಯುವಿನಲ್ಲಿ ಮೆಮೊರಿಚಿಪ್ಪುಗಳು ಸಾವಿರಾರು
ಡಬ್ಬಿ ತೆರೆದರೆ ಸಾಕು ದಿಬ್ಬಣದ ಸಾಲು ಸಾಲು
ಸಿಡಿಯದ ಸಾಸಿವೆ ಹಂಜಕ್ಕಿಯನ್ನ ಉಪ್ಪು ಮಯವೇ ಆದ ಸೊಪ್ಪುಸಾರು
ಹೆಜ್ಜೆಹೆಜ್ಜೆಗೆ ಎರರ್ರು ಕರೆಪ್ಟಿನದೇ ಜೋರು ನನಗಾಗ ವರುಷ ಹದಿನಾರು
ಈಗ ಹಾಗೇನಿಲ್ಲ ಎಲ್ಲ ಠಾಕುಠೀಕು
ಬಿದ್ದರೂ ಐವತ್ತು ಎಲೆಗಳ ಸಾಲು
ನನ್ನ ಸೌಟೆಂಬ ಮೌಸಿಗೆ ಇಲ್ಲ ಸೋಲು
ಹೋಳಿಗೆಯ ರುಚಿಯನರಸಿ ಬರುತಾಳೆ ಗೌರಿ
ಗಣಪನೋ ಅನಂತನೋ ಬೀಗರೋ ನೆಂಟರೋ
ಎಲ್ಲ ಒಂದೆ ನನ್ನ ಕ್ಯಾಬಿನ್ನಿಗೆ
ನೋಡಿಲ್ಲಿ ಬಂಗಾರಿ ಕ್ಯಾಬಿನ್ನು ಮಾಸಿಲ್ಲ
ಬರೆದ ಪ್ರೋಗ್ರಾಮುಗಳ ಲೆಕ್ಕವಿಲ್ಲ
ಕರಿದದ್ದು ಬೆಂದದ್ದು ಅರಳಿದ್ದು ಹುರಿದಿದ್ದು
ಹೊತ್ತು ಹೆತ್ತದ್ದು ತಿನಿಸಿ ಬೆಳೆಸಿದ್ದು ಕರೆದು ಕಳಿಸಿದ್ದು
ಎಲ್ಲವೂ ಇತಿಹಾಸ ಶೂನ್ಯದಲ್ಲಿ
ನಿನ್ನಂತೆ ಪರದಾಡ ಬೇಕಿಲ್ಲ ಗಾರ್ಬೇಜು ವಿತರಣೆಗೆ
ನನ್ನಂಗಳದ ಪಾರಿಜಾತ ಸೀಬೆ
ಪಾತಿಗಳೆ ಸುಸ್ಥಾನ ನನ್ನ ಕ್ಯಾಬಿನ್ನ ಕಸಗಳಿಗೆ
ಹೂ ಅರಳಿ ನಕ್ಕಾಗ ನಿನ್ನದೇ ನೆನಪು ನನಗೆ
ನನ್ನ ತೊಡೆಗಳು ಕಾಯುತ್ತಿವೆ ನಿನ್ನ ಲ್ಯಾಪ್‍ಟಾಪಿಗಾಗಿ
ಚಂದದರಳೆಲೆಯನ್ನು ಎಂದು ಕೊಡುವೆಯೇ ಹುಡುಗಿ
ಹುಟ್ಟಿಸಿ ಬಿಡಬೇಡ ತಾಯಿ ಹೊಟ್ಟೆಯಿಲ್ಲದ ಶಿಶುವನ್ನ
ತಾಳಲಾರದು ನನ್ನ ಕ್ಯಾಬಿನ್ನು ಇಂಥ ಅವಮಾನವನ್ನ
ವಿಸೂ: ಅಜ್ಜಿಯ ಐ ಟಿ ( ಇಂಡಿಯನ್ ತಿನಿಸಿನ ) ಕ್ಯಾಬಿನ್






thumba chennagide shanta
meaningful poem shantha. i liked it.
-ಬಹಳ ದಿನಗಳ ನ೦ತರ ಒ೦ದು ಒಳ್ಳೆಯ ಕವನ ಓದಿದ ಅನುಭವ!