'ಅಜ್ಜಿಗೂ ಅಂಟಿತು ಫೇಸ್ ಬುಕ್ ಗೀಳು' – ಆರತಿ ಘಟಿಕರ್

ಆರತಿ ಘಟಿಕರ್

ಪ್ರತಿವರ್ಷವೂ ಮಕ್ಕಳ ಬೇಸಿಗೆ ರಜೆಗೆ ನಾವುಗಳೆಲ್ಲ ಭಾರತಕ್ಕೆ ಹೋಗುವ ರೂಡಿ ಆದರೆ ಕಾರಾಣಾಂತರಗಳಿಂದ ನಾವು ಆ ಸಲದ ವಾರ್ಷಿಕ ರಜೆಗೆ ಬೆಂಗಳೂರಿಗೆ ಹೋಗಲಾಗಲ್ಲಿಲ್ಲ . ಸರಿ ಅಪ್ಪ ಅಮ್ಮನಿಗೆ ಫೋನಾಯಿಸಿ ಹೇಗೂ ನೀವು ನಮ್ಮೂರಿಗೆ ಬಂದು ಬಹಳ ವರ್ಷ ಆಯ್ತಲ್ಲ ,ಈ ಬಾರಿ ನೀವೇ ಈ ಕಡೆ ಬಂದು ಬಿಡಿ ಅಂತ ಹೇಳಿ ಇಲ್ಲಿಗೇ ಕರೆಸಿದೆ .
ಅವರುಗಳು ಬಂದು ಈ ಊರು, ದಿನಚರಿಗೆ ಹೊಂದಿಕೊಂಡು ಸ್ವಲ್ಪ ದಿನಗಳಾದ ನಂತರ ಅಜ್ಜ -ಅಜ್ಜಿ ಮಧ್ಯಾನದ ಹೊತ್ತು ಊಟವಾದ ಬಳಿಕ ಸ್ವಲ್ಪ ಬಿಡುವಾಗಿರುವುದನ್ನು ನೋಡಿ ನನ್ನ ಮಗ ರಾಜ ‘ಅಜ್ಜ ನೀನೂ ಫೇಸ್ ಬುಕ್ ಅಕೌಂಟ್ ಮಾಡ್ಕೊಂಡ್ ಬಿಡು ,ಅಲ್ಲಿ ನಿಮ್ಮೆಲ್ಲಾ ಬಂಧು –ಬಳಗದವರು ,ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇರಬಹುದು, ಹಾಗೇನೆ ನಿಮಗೂ ಬೋರ್ ಆಗಲ್ಲ’ ಅಂತ ಅದರ ಬಗ್ಗೆ ಒಂದು ಚಿಕ್ಕ ವಿವರಣೆ ಕೊಡುತ್ತಾ ಆಸಕ್ತಿ ಕೆರಳಿಸಿದ . .

ನಮ್ಮ ತಂದೇನೂ “ ಹೌದು ಕಣೋ ನನ್ನ ಫ್ರೆಂಡ್ಸು ಹೇಳ್ತಾ ಇರತರಾಪ್ಪ ಅದೇನೋ ಫೇಸ್ ಬುಕ್ಕೊ , ಹ್ಯಾಂಡ್ ಬುಕ್ಕೋ ಅಂತ ಏನೂ ಇದ್ಯಂತೆ , ಅದರಲ್ಲಿ ಎಷ್ಟೋ ದೂರದಲ್ಲಿ ಇರುವ ನಮ್ಮ ಬಂದು ಬಳಗ ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇರೋದಲ್ಲದೆ ಎಲ್ಲರ ಬಗ್ಗೆ ಸುದ್ದಿ ಸಮಚಾರವನ್ನೂ ( ಫೋನ್ ಖರ್ಚಿಲ್ಲದೆ ) ತಿಳ್ಕೊಳ್ಬಹುದಂತೆ ಅಲ್ವೇನೋ ? ಅಷ್ಟೇ ಅಲ್ಲಾಕಣ್ರೀ ಅವರುಗಳು ಹಾಕಿದ ಫೋಟೋ ಗಳನ್ನೆಲ್ಲಾ ಹಾಕಿದ ತಕ್ಷಣವೆ ನೋಡಿ ಹೇಗಿದೆ ಅಂತ ತಿಳಿಸಬಹುದಂತೆ ,ಜೊತೆಗೆ ಗಂಟೆ ಗಟ್ಟಲೆ ಹರಟೆನೂ ಹೊಡೀಬಹುದಂತೆ “ ಹರಟೆ ಮಲ್ಲಿ ಅಜ್ಜಿನೂ ಉತ್ಸಾಹದಲ್ಲಿ ದ್ವನಿ ಗೂಡಿಸಿದರು.ನಮ್ಮ ರಾಜ “ ಸರಿ ಅಜ್ಜಿ ಹಾಗಾದ್ರೆ ನಿಮ್ಮ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ತೆಗೆದು ಬಿಡ್ತೀನಿ ಅಂದ “
ನನ್ನ ತಂದೆ “ಹಾಗಾದ್ರೆ ಮರಿ ಒಂದೇ ಅಕೌಂಟ್ ತೆಗೆದ ಬಿಡು ಜಾಯಿಂಟ್ ಅಕೌಂಟ್ ನಂದು ನಿಮ್ಮಮಂದು , ಸುಮ್ನೆ ಎರೆಡೆರಡು ಅಕೌಂಟ್ ಯಾಕೆ “ಅಂದ್ರು . ನಮ್ಮಮ್ಮ ನಿಗೆ ರೇಗಿತು “ ಅದೆಲ್ಲಾ ಏನೂ ಬೇಡ , ಇಲ್ಲಾದರೂ ನಂದು ಸೇಪರೇಟ್ ಅಕ್ಕೌಂಟೆ ತಗ್ಯಪ್ಪ , ಅದೇನು ಬ್ಯಾಂಕಿನ ವ್ಯವಹಾರ ಅನ್ಕೊಂಡ್ರಾ ನಿಮ್ಮ ಜೊತೆ ಜಾಯಿಂಟ್ ಅಕ್ಕೌಂಟ್ ತೆಗಯಕ್ಕೆ “ ಎಂದು ಅಪ್ಪನನ್ನು ಕುಟುಕಿದಾಗ . ಅಲ್ಲೇ ಇವರ some- ವಾದ ಕೇಳುತಿದ್ದ ನನಗೆ ನಗುವಿನ ಜೊತೆಗೆ ಸಿಕ್ಕಾಪಟ್ಟೆ ಸ್ಪೂರ್ತಿ ಉಕ್ಕಿ ಬಂದು ಈ ಒಂದು ಚುಟುಕನ್ನು ಅವರಿಗಾಗಿ ಅರ್ಪಿಸಿಯೇಬಿಟ್ಟೆ !
ಪತ್ನಿ ನೌಕರಿಗೆ
ಸೇರಿದೊಡೆ
ಅಧಿಕವಾಯಿತು ಅವನ
ಪ್ರೀತಿಯ ನಂಟು ;
ದೃಢ ಪಡಿಸಲು ತೆಗೆಸಿದನಲ್ಲ
ಜಾಯಿಂಟ್ ಅಕೌಂಟು !
ಅಮ್ಮ ಅದನ್ನು ಅಸಕ್ತಿಯಿಂದ ಆಲಿಸಿ ಮುಗುಳ್ನಕ್ಕು “ ಹೌದು ಕಣೆ ಸರಿಯಾಗಿ ಹೇಳ್ದಿ ! ಸದ್ಯ ಮುಖಪುಸ್ತಕದ ಖಾತೆ ಪುಕ್ಕಟೆ ಇರೋದ್ರಿಂದ ಪರವಾಗಿಲ್ಲ , ಇಲ್ಲಿದ್ದಿದ್ದರೆ ನಿಮ್ಮ ತಂದೆ ಗೊತ್ತಲ್ಲ ಮೊದಲಿನ ಹಾಗೆ ಏನಾದ್ರೂ ತಕರಾರು ತೆಗೆತ್ತಿದ್ರು “ ಅಪ್ಪನ ಕಡೆ ಕೈ ಮಾಡಿ ತೋರಿಸಿದರು .
ನಾನು ಇಬ್ಬರನ್ನೂ ಸಮಾಧಾನ ಪಡಿಸುತ್ತಾ “ ಅಯ್ಯೋ ಯಾಕೆ ಸುಮ್ಮನೆ ತಲೆ ಕೆಡಿಸ್ಕೊತೀರ ? ಇದುಫ್ರೀ ! ಇಬ್ಬರಿಗೂ ಬೇರೆ ಬೇರೆ ಅಕ್ಕೌಂಟೆ ತೆಗೆತೀವಿ , ಏನೂ ಯೋಚನೆ ಮಾಡಬೇಡಿ “ ಫೇಸ್ ಬುಕ್ ಕಂಪನಿಯ ಅಧಿಕೃತ ಪ್ರತಿನಿಧಿಯ ಹಾಗೆ ನಗುತ್ತಾ ಆಶ್ವಾಸನೆ ನೀಡಿದೆ ! ಸರಿ ನಮ್ಮ ರಾಜ ಫೇಸ್ ಬುಕ್ಕಿನಲ್ಲಿ ಅಜ್ಜ ಅಜ್ಜಿಯ ಫೋಟೋಗಳನ್ನ ಹಾಕಿ ಪ್ರೊಫೈಲ್ ಐಡಿ ಮಾಡಿ , ಇಬ್ಬರ ಕಡೆಯಿಂದಲೂ ಬಂಧು ಬಳಗದವರನ್ನು ಅಲ್ಲದೆ ಕೆಲವು ಹಳೆ ಸ್ನೇಹಿತರನ್ನ ಹರಸಾಹಸ ಮಾಡಿ ಅವರ ಮಕ್ಕಳ ಮುಖಪುಸ್ತಕದ ಖಾತೆಯ ಮೂಲಕ ಹುಡುಕಿ ತೆಗೆದು ಸ್ನೇಹಿತರ ಪಟ್ಟಿಯಲ್ಲಿ ಸೇರಿಸಿ “ ತಾನು ಕಲಿತ ( ಫೇಸ್ ಬುಕ್ ) ವಿದ್ಯೆಯನ್ನೆಲ್ಲಾ ಧಾರೆ ಎರೆಯಲು ಉತ್ಸಾಹ ತೋರಿಸಿದ !.
ರಾಜನ ನೇತೃತ್ವದಲ್ಲಿ ಅಜ್ಜ ಅಜ್ಜಿ ವಿಧೇಯ ವಿಧ್ಯಾರ್ಥಿಗಳಂತೆ ಅವನ ಟ್ರೈನಿಂಗ್ ಶುರು ಮಾಡುವುದನ್ನೇ ಎದುರು ನೋಡುತ್ತಿದ್ದರು .ರಾಜನ ಶಾಲೆಗೆ ಬೇಸಿಗೆ ರಜಾ ಇದ್ದ ಕಾರಣ ಮಾರನೆಯ ದಿನದಿಂದಲೇ ಒಂದೆರೆಡು ಗಂಟೆ ಇಬ್ಬರನ್ನೂ ಕೂಡಿಸಿ ಮುಖಪುಸ್ತಕದ ಪರಿಚಯ ಮಾಡಿಸಿದಾಗ ಇಬ್ಬರಿಗೂ ಹುರುಪು . ಎಷ್ಟೋ ವರ್ಷಗಳ ನಂತರ ಭೇಟಿ ಆದ ಕೆಲವು ಸ್ನೇಹಿತರು ,ಬಳಗದವರ , ಅವರ ಈಗಿನ ಸ್ಥಿತಿ ಗತಿಗಳು , ಅವರ ಪರಿವಾರ ಎಲ್ಲವನ್ನೂ ಕಂಡು ಅಪರೂಪದ ನಿಧಿ ಸಿಕ್ಕ ಹಾಗೆ ಸಂತಸ ಗೊಂಡರು .
ಕೆಲವೊಮ್ಮೆ ರಾಜನ ಸಹಾಯದಿಂದ ಹಳೆ ಸ್ನೇಹಿತರು , ಬಂಧುಗಳ ಜೊತೆ ಮುಖಪುಸ್ತಕದ ಕಾಪೌಂಡ್ ಗೋಡೆ ಬಳಿನಿಂತು ಗಂಟೆ ಗಟ್ಟಲೆ ತಮ್ಮ ಹಳೆಯ (ಹರಿ)ಕಥೆಗಳನ್ನು, ಮರೆಯದ ಘಟನೆಗಳನ್ನು, ನೆನೆಸಿ ಕೊಳ್ಳುತ್ತಾ ಸಾಗಿತು ಅವರ ಅಪರೂಪದ ಹರಟೆ! ಇನ್ನು ಅಮ್ಮನ ಹಾಗಿರುವ ಸಮಾನ ವಯಸ್ಕರು/ಆಸಕ್ತರ ಪರಿಚಯಗಳೂ ಚಿಗುರೊಡೆದು ಅವರ ಸ್ನೇಹ ವಲಯ ಇನ್ನಷ್ಟು ಹಬ್ಬಿತು. ಹಾಗೇನೆ ತಮ್ಮ ಬಂಧು ಬಳಗದವರು ಅದ್ದೂರಿಯಾಗಿ ಆಚರಿಸಿಕೊಂಡ ಹುಟ್ಟು ಹಬ್ಬ ,ವಾರ್ಷಿಕೋತ್ಸವ, ಮಜವಾಗಿ ಸುತ್ತಾಡಿ ಬಂದ ಹೊಸ ವಿಹಾರ ತಾಣಗಳು ಅಂತೆಲ್ಲಾ (ಕೆಲವರ ಹೊಟ್ಟೆ ಉರಿಸುತ್ತಾ !) ಮುಖ ಪುಸ್ತಕ ದ ಗೋಡೆಯ ಮೇಲೆ ಆಗಾಗ ರಾರಾಜಿಸುವ ಫೋಟೋಗಳು ಒಂದೇ ಎರಡೇ,ಇನ್ನು ಸ್ನೇಹಿತರ ವಯಕ್ತಿಕ ಪ್ರಕಟಣೆಗಳು, ಎಲ್ಲಿಂದಲೋ ಕದ್ದ ಜೋಕುಗಳನ್ನ ಹಾಕಿ ಕಾಮೆಂಟು ಎದುರು ನೋಡುವ ಜೋಕುಮಾರರು! ಇವರ ಪ್ರಕಟಣೆಗಳಿಗೆ ಬಂದು ಬೀಳುವ ಲೈಕು ಹಾಗು ಕಾಮೆಂಟುಗಳ ಆಧಾರದಿಂದ ಫೇಸ್ ಬುಕ್ ಸಮಾಜದಲ್ಲಿ ಇವರ ಸ್ಟೇಟಸ್ ಏನು ಅಂಬುದು ಅಂದಾಜು ಮಾಡಬಹುದೇನೋ!
ಅಷ್ಟೇ ಅಲ್ಲದೆ ಕೆಲ ಪೋಷಕರು ತಮ್ಮ ಮುದ್ದು ಮಕ್ಕಳು ಡ್ರಾಯಿಂಗ್ ಅನ್ನುವ ಹೆಸರಿನಲ್ಲಿ ಗೀಚಿದ ಮನೆ , ಗುಬ್ಬಿ ,ಸೂರ್ಯ ನ ಚಿತ್ರಗಳನ್ನು ಹಾಕಿ ಖುಷಿಪಟ್ಟರೆ , ಕೆಲವು ಪ್ರಾಣಿಪ್ರಿಯರು ತಾವು ಹೊಸದಾಗಿ ತಂದ ನಾಯಿ /ಬೆಕ್ಕಿನ ಮರಿಗಳ ಫೋಟೋಗಳನ್ನು ಹಾಕುವುದಲ್ಲದೆ ತಮ್ಮ ಸಾಕು ಪ್ರಾಣಿಗಳ ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ತೆಗೆದು ತಮ್ಮ ಒಲವಿನ ಧಾರೆ ಹರಿಸಿದ್ದರು, ಇದಲ್ಲದೆ ಕೆಲವು ಉತ್ಸಾಹಿ ಪಾಕ ಪ್ರವೀಣ ಗೃಹಿಣಿಯರ ತಾವು (ಗಂಡನ ಮೇಲೆ) ಪ್ರಯೋಗ ಮಾಡಿದ ತಿಂಡಿ ತಿನಸುಗಳ ಫೋಟೋಗಳು, ಅಬ್ಬ ಬ್ಬ ಒಂದೇ ಎರಡೇ!
ಇದನ್ನೆಲ್ಲಾ ಆಸಕ್ತಿಯಿಂದ ನೋಡುತ್ತಿದ್ದ ಅಮ್ಮನಿಗೆ ನಮ್ಮ ರಾಜ “ ಅಜ್ಜಿ ಇದರ ಬಗ್ಗೆ ನಿಮಗೆನನಿಸುತ್ತೆ ಅಂತ ಒಂದು ಸಾಲು ಬರೆದ್ಬಿಡಿ ಅವರಿಗೂ ಖುಷಿ ಆಗತ್ತೆ ನಿಮ್ಮ ಕಾಮೆಂಟ್ ನೋಡಿ “ ಅಂತ ಹುರಿದುಂಬಿಸಿದಾಗ ಅಮ್ಮ ಕೂಡಾ ಹುರುಪಿನಿಂದ ಅದಕ್ಕೆಲಾ ತಮ್ಮ ಸುಧೀರ್ಘ ಒಕ್ಕಣೆ ಯನ್ನು ಕಾಮೆಂಟಿನ ರೂಪದಲ್ಲಿ ಕೊಟ್ಟು, ಅದಕ್ಕೆ ಅವರ ಕಡೆಯಿಂದ ಏನು ಪ್ರತ್ಯುತ್ತರ ಬರುವುದೋ ಎಂದು ಕುತೂಹಲದಿಂದ ದಿನ ಬೆಳಗಾದರೆ ಕಾಯುವುದೇ ಕೆಲಸವಾಯಿತು!  ( ಸದ್ಯ ನೀವೇಕೆ ಉತ್ತರ ಕೊಟ್ಟಿಲ್ಲ ಅಂತ ಫೋನಾಯಿಸಿ ಕೇಳುವುದೊಂದು ಬಾಕಿ ) ಏನೇ ಅನ್ನಿ ಅಮ್ಮನಿಗೆ ಈ ಫೇಸ್ ಬುಕ್ಕ್ ಗೀಳು ಹಿಡುಸುವಲ್ಲಿ ನನ್ನ ಮಗ ಯಶಸ್ವಿ ಆಗಿಬಿಟ್ಟ.

ಒಮ್ಮೆ ಹೀಗೆ ಅಮ್ಮ ಬಿಡುವಿನ ಸಮಯದಲ್ಲಿ ಆಸಕ್ತಿಯಿಂದ ಮುಖಪುಸ್ತಕದ ಗೋಡೆಯನ್ನೇ ನೋಡುತ್ತಿದ್ದಾಗ ರಾಜ “ ಏನ್ ಅಜ್ಜಿ ನಿಮ್ಗೆ ಹೇಗನ್ನಸ್ತಾ ಇದೆ “ ? ಎಂದಾಗ ಅಮ್ಮ “ ಯಾಕೂ ಮಂಡಿನೋವು , ಕೈ ಸೆಳ್ತಾ ಕಣೋ ರಾಜ , ಪಾಪ ನೀನು ಇಷ್ಟು ವಿಚಾರಿಸಿ ಕೊಳ್ತಾ ಇರೋದು ನೋಡಿ ಖುಷಿ ಆಗತ್ತಪ್ಪ “ ಅಂತ ಹೆಮ್ಮೆಯಿಂದ ನುಡಿದಾಗ ರಾಜ ಸುಮ್ಮನಿರದೆ “ ಅಯ್ಯೋ ಅಜ್ಜಿ ನಾನ್ ಕೇಳ್ತಾ ಇಲ್ಲ ಇದು ನೋಡಿ ಫೇಸ್ ಬುಕ್ಕ್ ಕೇಳ್ತಾ ಇದೆ “ how are u feeling “? ಅಂತ.
ಅಮ್ಮನಿಗೆ ಘಾಬರಿ “ ಒಹೋ ಇದನ್ನೆಲ್ಲಾ ನಾವು ಇಲ್ಲಿ , ಬರೀಬೇಕಾ ಹಾಗಾದ್ರೆ? , ” ಮುಗ್ಧತೆಯಿಂದ ಕೇಳಿದಾಗ ರಾಜ ನಗುತ್ತ “ ಅಯ್ಯೋ ಅಜ್ಜಿ ಏನ್ ಹೇಳ್ಲಿ ನಿಮಗೆ ?ಎಲ್ಲರೂ ಇಲ್ಲಿ ಸತ್ಯಾನೆ ಬರೀತಾರೆ ಅನ್ಕೊಂಡ್ರಾ ? ಅಮ್ಮನ್ನ ಕೇಳಿ ಬೇಕಾದ್ರೆ . ಒಮ್ಮೆ ಅಮ್ಮನ ಗೆಳತಿ ಯಾರೋ “ಅವರು ಮಾಡಿದ ಕ್ಯಾಂಡಲ್ ಲೈಟ್ ಡಿನ್ನರ್ ( ಮೊಂಬತ್ತಿ ಬೆಳಕಿನ ಊಟ ) ದ ಕೆಲವು ಚಿತ್ರಗಳನ್ನ ಮುಖಪುಸ್ತಕದಲ್ಲಿ ಹಾಕಿದನ್ನು ಇವರೆಲ್ಲಾನೋಡಿ “ಒಹ್ ಎಷ್ತು ರೋಮಾಂಟಿಕ್ ಆಗಿದೆ ಅಲ್ವಾ ! “ ಅಂತ ಕಾಮೆಂಟುಗಳ ಸುರಿಮಳೆ ಹರಿಸಿದ್ದೆ ಹರಿಸಿದ್ದು !. ಆಮೇಲೆ ಗೊತ್ತಾಯ್ತಂತೆ ಅವರ ಫ್ರೆಂಡ್ ಮನೇಲಿ ಕರ್ರೆಂಟ್ ಹೋಗಿ ಕಡ್ಡಾಯವಾಗಿ ಮೊಂಬತ್ತಿ ಹಚ್ಚಿಯೇ ಊಟ ಮಾಡುವ ಪರಿಸ್ತಿತಿ ಬಂದಿತ್ತು ಅಂತ !
ನಾನು ನಗುತ್ತ “ ಲೋ ರಾಜ ಇದೆಲ್ಲಾ ನಿನಗೆ ಚನ್ನಾಗಿ ನೆನ್ಪಿರತ್ತೆ ಬಿಡು ! ಅದೇ ಯಾವುದಾದರರೂ ಪಾಠದ ಬಗ್ಗೆ ಕೇಳಿದರೆ ನನಗೂ ಈ ಪ್ರಶ್ನೆಗೂ ಏನ್ ಸಂಬಂಧ ಅನ್ನೋ ತರ ಲುಕ್ ಕೊಡ್ತೀಯ ,!” ಅಂತ ಅವನನ್ನು ರೇಗಿಸಿದರೂ ಅವನು ಹೇಳಿದ ವಿಷಯಕ್ಕೆ ಮತ್ತೆ ಎಂಟ್ರಿ ಕೊಟ್ಟೆ “ ಹೌದಮ್ಮ ಹೀಗೆಲ್ಲಾ ಒಮ್ಮೊಮ್ಮೆ ತಮಾಷೆ ನಡೀತಾ ಇರತ್ತೆ , ಇದು ಬಿಡು ಮೊನ್ನೆ ನನ್ನ ಗೆಳತಿಯೊಬ್ಬಳು, “ಇವೆಲ್ಲಾ ನಾನು ದೀಪಾವಳಿ ಹಬ್ಬಕ್ಕೆ ಮಾಡಿದ ತಿಂಡಿಗಳು “ಅಂತ ಅಂತರ್ಜಾಲದಿಂದ ಎತ್ತಿಕೊಂಡಿದ್ದ ಫೋಟೋ ಹಾಕಿ ಒಳ್ಳೆ ಪೋಸ್ ಕೊಟ್ಟಿದ್ದಳು. ಆಹಾ ಬಾಯಲ್ಲಿ ನೀರೂರಿಸುವ ತಿಂಡಿಗಳು ಒಂದೇ ಎರಡೇ ! ಚಕ್ಕಲಿ , ಕೊಬ್ಬರಿ ಮಿಟಾಯಿ , ಕೊಡಬಳೆ , ಮೈಸೂರ್ ಪಾಕು. … ! ಸರಿ ಬೇರೆ ಊರಿನಲ್ಲಿದ್ದ ಅವಳ ನಾದುನಿ ಆ ಫೋಟೋ ತಮ್ಮ ಅಮ್ಮನಿಗೆ ತೋರಿಸಿದಾಗ, ಅವಳ ಅತ್ತೆಯವರು, ಇಷ್ಟರ ಮಟ್ಟಿಗೆ ಪಾಕ ಪ್ರಾವೀಣ್ಯತೆ ಹೊಂದಿರುವ ತಮ್ಮ ಸೊಸೆಯ ಬಗ್ಗೆ ಪ್ರಸಂಸೆ ವ್ಯಕ್ತ ಪಡಿಸಿ , ಈ ಸಲ ದೀಪಾವಳಿಗೆ ಊರಿಗೆ ಬಂದಾಗ ನೀನೆ ಇವನ್ನೆಲ್ಲಾ ಮಾಡಮ್ಮಾ ಅಂತ ಬೆನ್ನ ಹತ್ತಿದ್ದಾರಂತೆ ! “ ಎಂದು ಅಮ್ಮನ ಆಶ್ಚರ್ಯ ಬೆರೆತ ನಗು ಮುಖ ವನ್ನು ನೋಡಿ ಮುಗುಳ್ನಕ್ಕೆ.
ಅಷ್ಟರಲ್ಲಿ ನಮ್ಮಮನೆಯ ಕರಗಂಟೆ ಸದ್ದು ನನ್ನ ಪತಿ ಕಛೇರಿಯಿಂದ ಬರುವ ಸೂಚನೆ ಕೊಟ್ಟಿತು. ಇವರ ಮೇಲಂದು ನನಗೆ ಲೈಟಾಗಿ ಕೋಪ ! ಕಾರಣ ಇಷ್ಟೇ. ಮುಖಪುಸ್ತಕದಲ್ಲಿ ನಾನಂದು ಬರೆದು ಹಾಕಿದ ಘನ ಗಂಭೀರ ಚುಟುಕಿಗೆ ಇವರದು ಬರಿ ಒಂದು ಸಪ್ಪೆ ಲೈಕು. ಅದೇ ಅವರ ಕಚೇರಿಯಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾಳ ಫೋಟೋಗೆ ಇವರದು ಸಿಕ್ಕಾಪಟ್ಟೆ ಹೊಗಳಿಕೆಯ ಕಾಮೆಂಟು! ಬರಲಿ ವಿಚಾರಿಸ್ಕೊಳ್ತೇನೆ ಅಂದುಕೊಂಡಾಗ ಯಾಕೋ ನನ್ನ ಈ ಹನಿಗವನ ನೆನಪಾಯಿತು !
ಮಡದಿಯ ನಗು ಮುಖದ
ಸ್ವಾಗತವ ಬಯಸಿ ದಿನವೂ
ಒತ್ತುತ್ತೇನೆ ಕರೆಗಂಟೆ
ಆದರೆ ಎಂದಿನಂತೆ
ಇವಳ ಮುಖ ಇಂದೂ
ಕೂಡ ಗಂಟೇ !
ಸರಿ ನನ್ನ ಸಿಟ್ಟಿನ ಮುಖಕ್ಕೆ ಕೊಂಚ ಮಂದಹಾಸದ ಮೇಕ್ಅಪ್ಪ್ ಹಾಕಿಕೊಂಡು ನಿಧಾನವಾಗಿ ನನ್ನದೇ ಸ್ಟೈಲಿನಲ್ಲಿ ವಿಚಾರಿಸಿಕೊಂಡೆ . ಇವರ ಅಂಜದೆ ಅಳುಕದೆ ತಕ್ಷಣವೇ ಉತ್ತರಮುಖಿಯಾದರು! ‘ಅಯ್ಯೋ ಇಷ್ಟ ಸಣ್ಣ ವಿಷಯಕ್ಕೆ ಯಾಕೆ ಕೋಪ’  ಹಲ್ಕಿರಿದರು.
‘ಇನ್ನೇನು ಮತ್ತೆ ,ನನ್ನ ಚುಟುಕಿಗೆ ಒಂದು ಸಾಲು ಪ್ರತಿಕ್ರಿಯೆ ಬರಯಕ್ಕೂ ಬರಲ್ಲ ಬಿಡಿ ನಿಮಗೆ’ ರೇಗಿದೆ.
‘ಒಹ್ ಇದೇನು ನನಗೆ ಕಾಮೆಂಟ್ ಬರೆಯಲು ಬರೋದೆ ಇಲ್ಲ ಅಂತ ಇದ್ಯಲ್ಲ. ನಾನು ಕಾಮೆಂಟ್ ಹಾಕಿದಷ್ಟು ನೀನು ಲೈಕ್ ಒತ್ತಿರಲಿಕ್ಕಿಲ್ಲಾ ಗೊತ್ತಾ ?’ ( ನಾನು ಕಾಫೀ ಕುಡಿದಷ್ಟು ನೀನು ನೀರು ಕುಡಿದಿರಲಿಕ್ಕಿಲ್ಲ ಅನ್ನುವದನ್ನ ಎಲ್ಲೋ ಕೇಳಿದ್ದೆ ಆದರೆ ಇದು ಈಗೀಗ ಬಳಕೆಯಲ್ಲಿರುವ ಹೊಸ ಪ್ರಯೋಗ ಅನಿಸತ್ತೆ !) ಅನ್ನುತ್ತಾ ಆಗತಾನೆ ಫೇಸ್ ಬುಕ್ ಬಳಕೆ ಆರಂಭಿಸಿದ ನನಗೆ ತಮಾಷೆ ಮಾಡಿದರೂ ನನ್ನ ಹತ್ತಿರ ಬಂದು ಸಮಾಧಾನ ಮಾಡಿ ‘ನಿಜ ಹೇಳ್ಬೇಕು ಅಂದ್ರೆ ನಿನ್ನ ಚುಟುಕು ಬಹಳ ಅರ್ಥಗರ್ಭಿತವಾಗಿತ್ತು ಕಣೆ ,ನನಗೆ ಏನು ಬರೀಬೇಕು ಅಂತ ಗೊತ್ತಾಗ್ಲೇ ಇಲ್ಲ!. ಹೋಗಲಿ ಬಿಡು ಏನ್ ಕಾಮೆಂಟು ಬರೀಲಿ ಅಂಥ ಹೇಳಿಕೊಡು ಹಾಗೆ ಬರೀತೀನಿ ಆಯ್ತಾ , ಬೇಜಾರ ಮಾಡ್ಕೋಬೇಡ’ ಅಂದಾಗ ನನ್ನ ಮುಖದಲ್ಲೂ ಅರ್ಥಗರ್ಭಿತ ಭಾವನೆಗಳೇ !
ಅಂದೂ ಯಥಾಪ್ರಕಾರ ಅಮ್ಮ ಬೇಗನೆ ಊಟ ಮುಗಿಸಿ ರಾಜ ತೆರೆದು ಕೊಟ್ಟ ಫೇಸ್ ಬುಕ್ಕಿನ್ನಲ್ಲಿ ಮುಖ ಹುದುಗಿಸಿ ಆಸಕ್ತಿಯಿಂದ ಕುಳಿತ್ತಿದ್ದರು .ಅಗಾ ಅವರ ಗಮನ ಸೆಳೆದಿದ್ದು ಆಗಷ್ಟೇ ತೇಲಿ ಬಂದ ತಮ್ಮ ಅಣ್ಣನ ಪ್ರವಾಸದ .ಫೋಟೊಗಳು ! ಅವುಗಳನ್ನ ನೋಡಿದಾಗ ಅಮ್ಮನ ಖುಷಿ ಹೇಳತೀರದು. ‘ನೋಡ್ರಿ ಎಷ್ಟು ಚನ್ನಾಗಿ ಉತ್ತರ ಭಾರತ ಪ್ರವಾಸಕ್ಕೆ ಕರ್ಕೊಂಡ್ ಹೋಗಿದ್ದಾನೆ ನಮ್ಮ ಅಣ್ಣ , ಅತ್ತಿಗೇನಾ’ ಅಂತ ಅಲ್ಲೇ ತಮ್ಮ ಕನ್ನಡಕ ತೆಗೆದುಕೊಂಡು ಹೋಗಲು ಬಂದ ಅಪ್ಪನಿಗೆ ತೋರಿಸಿದಾಗ , ಅಪ್ಪ ‘ಅಯ್ಯೋ ಇರು ಮಹರಾಯ್ತಿ ನನ್ನ ಕನ್ನಡಕ ಸಿಗದೇ ಒದ್ದಾಡ್ತಾ ಇದ್ದೀನಿ’ ಎಂದು ಮತ್ತೆ ತಮ್ಮ ಹುಡುಕಾಟ ಮುಂದುವರೆಸಿದರು ! ಅವರ ಈ ಹುಡುಕಾಟ ನೋಡ್ತಾ ಇದ್ದ ನಾನು ಸುಮ್ಮನಿರದೆ .
ಎಲ್ಲಾದರೂ ಇರು
ಎಂತಾದರೂ ಇರು
ಎಂದೆಂದೂ ನೀನು
ಹುಡುಕಿದಾಗ ತಟ್ಟನೆ
ಸಿಗುವ ಕನ್ನಡಕ ವಾಗಿರು “
ಎಂದು ಅಪ್ಪನ ಕನ್ನಡಕದ ಕುರಿತು ಎರಡು ಸಾಲು ಧಿಡೀರ್ ಹನಿಗವನ ಹೇಳಿ ರೇಗಿಸಿದರೂ , ಕ್ಷಣದಲ್ಲೇ ಮರುಕ ಪಟ್ಟು ನಾನು ಅತ್ತಿತ್ತ ಕಣ್ಣಾಡಿಸಿದೆ . ಪೇಪರ್ ಓದುತ್ತಾ ಅದರೊಳಗೇ ತಮ್ಮ ಕನ್ನಡಕವನ್ನೂ ಸೇರಿಸಿ ಪೇಪರ್ ಮಡಚಿಟ್ಟಿದ್ದರು ! ಹಾಗಾಗಿ ಅದೂ ಕೂಡ ಪೇಪರ್ ಓದುತ್ತಾ ಒಳಗೆ ಕುಳಿತ್ತಿತ್ತು!
ಸರಿ ಅಪ್ಪ ತಮ್ಮ ಕನ್ನಡಕ ಸಿಕ್ಕ ಖುಷಿಗೆ ಅದನ್ನ ಸರಿಯಾಗಿ ಏರಿಸಿಕೊಂಡು ಸ್ಪಷ್ಟವಾಗಿ ಅಮ್ಮತೋರಿಸುತ್ತಿದ್ದ ಅವರ ಅಣ್ಣ-ಅತ್ತಿಗೆಯ ಪ್ರವಾಸದ ಪೋಟೋ ಗಳತ್ತ ದೃಷ್ಟಿ ಹಾಯಿಸಿ “ ಒಹ್ ಹೌದಲ್ಲ ! ಚನ್ನಾಗಿವೆ ! ಆದರೆ ಹೋದ ತಿಂಗಳು ನಮ್ಮ ಷಷ್ಟಬ್ಡಿ ಕಾರ್ಯಕ್ರಮಕ್ಕ್ಕೆ ಆಮಂತ್ರಣ ಕೊಟ್ಟಾಗ ನಿಮ್ಮ ಅಣ್ಣ “ ದಯವಿಟ್ಟು ಕ್ಷಮಿಸಿ ಭಾವ ,ಸಮಾರಂಭಕ್ಕೆ ಬರಕ್ಕಾಗಲ್ಲ , ,ಸಿಕ್ಕಾಪಟ್ಟೆ ಕತ್ತು ನೋವು, ಕುತ್ತಿಗೆಗೆ ಬೆಲ್ಟ್ ಹಾಕಿ ಕೂಡ್ಸ್ಸಿದ್ದಾರೆ “ ಅಂದ್ದಿದ್ರಲ್ಲಾ , ಈಗ ನೋಡಿದ್ರೆ ಹಾಯಾಗಿ ಉತ್ತರ ಭ್ಹಾರತ ಪ್ರವಾಸ ಮಾಡ್ತಾ ಇದ್ದರಲ್ಲ “ ಅಂತ ತಮ್ಮ ಹುಸಿ ಕೋಪವನ್ನು ಪ್ರದರ್ಶಿಸಿದಾಗ “ ಅಯ್ಯೋ ಅದೇರಿ! ಅತ್ತಿಗೆ, ಅಣ್ಣನ ಕತ್ತು ನೋವು ವಾಸಿ ಆದ್ರೆ ದೆಹಲಿ ಹತ್ರ ( ತಾವು ನೋಡದೆ ಇರುವ) ಮಾನಸಾ ದೇವಿ ಮಂದಿರಕ್ಕೆ ಬಂದು ಸೀರೆ ಉಡಸ್ತೀನಿ ಅಂತ ಬೇಡ್ಕೊಂಡಿದ್ರಂತೆ, ಸರಿ ಹಾಗೆ ದಾರೀಲಿ ದೆಹಲಿ ,ಆಗ್ರಾ ಎಲ್ಲ ನೋಡ್ಕೊಂಡ್ ಬಂದ್ದಿದ್ದಾರೆ ಅಷ್ಟೇ “ ಅಪ್ಪನನ್ನು ಸುಮ್ಮನಾಗಿಸುತ್ತಾ ಬಂತು ಅಮ್ಮನ ಸಮಜಾಯಿಷಿ .
ಅಪ್ಪ ನಗುತ್ತ “ ಚನ್ನಾಗಿದೆ ಕಣೆ ನಿನ್ನ ಒಕ್ಕಣೆ , ನನ್ನ ಮಂಡಿ ನೋವು ಕಡಮೆ ಆದ್ರೆ ಕಾಶ್ಮೀರದಲ್ಲಿ ಇರೋ ದೇವಸ್ತಾನಕ್ಕೆ ಬಂದು ಸೇವೆ ಮಾಡ್ತೀನಿ ಅಂತ ನೀನೂ ಬೇಡ್ಕೊಲ್ಲೇ , ಆ ಊರು ನೋಡಿದಹಾಗೆ ಆಗತ್ತೆ “ ರೇಗಿಸಿದಾಗ ಅಮ್ಮನಿಗೆ ಹುಸಿ ಕೋಪ ! “ “ ಅಯ್ಯೋ ನಿಮ್ಮದೇನು ಕಡೆಮೆ ಆಗೋ ಸಮಸ್ಯೆ ಅಲ್ಲ ಬಿಡಿ , ಹೋಗ್ಲಿ ನಮ್ಮ ತಿರುಪತಿ ತಿಮ್ಮಪ್ಪನಿಗೆ ನಿಮ್ಮ ಮಂಡಿ ವಾಸಿ ಆದರೆ ನೀವು ಬೆಟ್ಟ ಹತ್ತಿ ದರ್ಶನ ಮಾಡ್ತೀರ ಅಂತ ಹರಕೆ ಹೊತ್ತ ಕೊಳ್ಳ ತೀನಿ ಬಿಡಿ “ ಅಮ್ಮ ತಮಾಷೆ ಮಾಡುತ್ತಾ ಅಪ್ಪನಿಗೆ ಲೈಟಾಗಿ ಶಾಕ್ ಕೊಟ್ಟು ಫೇಸ್ ಬುಕ್ ತಮ್ಮ ವೀಕ್ಷಣೆಯನ್ನು ಮುಂದುವರೆಸಿದರು.
ಆಗ ಗೋಡೆಯ ಮೇಲೆ ಕಂಡದ್ದು ನಮ್ಮ ಚಿಕ್ಕಪ್ಪ . (ಅಪ್ಪನ ತಮ್ಮ )ಈಗಿರುವ ಕಾರಿಗೆ ಜೊತೆಯಾಗಲೆಂದು ಇರಬೇಕು , ಮತ್ತೊಂದು ಹೊಚ್ಚ ಹೊಸಾ ಮಾಡೆಲ್ ಕಾರನ್ನು ಖರೀದಿಸಿ , ಶಾಸ್ತ್ರೋಕ್ತವಾಗಿ ಕಾರಿಗ ಪೂಜೆ ಮಾಡಿದ ಕೆಲವು ಫೋಟೋಗಳು.  ಸರಿ ಅಮ್ಮನೂ ಕುತೂಹಲದಿಂದ ತಮ್ಮ ಮೈದುನನ ಹೊಸ ದರಬಾರ್ ನೋಡುವುದರಲ್ಲಿ ಮುಳುಗಿದರು.
ಅಪ್ಪಾ ಕೂಡ, ಅವುಗಳನ್ನು ನೋಡಿ ಎಲ್ಲಿಲ್ಲದ ಉತ್ಸಾಹದಿಂದ “ ನೋಡೇ ! ಎಷ್ಟು ಚನ್ನಾಗಿ ಕಾರಿನ ಪೂಜೆ ಮಾಡಿದ್ದಾನೆ ,ನಮ್ಮ ಶ್ರೀಕಾಂತು , ಕಾರಿನ ಕಲರ್ರೂ ತುಂಬಾ ಚನ್ನಾಗಿದೆ , ಅಲ್ವೇನೆ ಸೀತಾ? “ ಅಂದಾಗ ಅಮ್ಮ ‘ “ ಹೌದು ತುಂಬಾ ಚನ್ನಾಗಿದೆ ರೀ . ಕಾರು ,ಕಲರ್ರೋ ಎರಡೂ, ಆದರೆ ಹೋದವರ್ಷ ನಮ್ಮ ಪ್ರೇಮಿ ಮದುವೆಗೆ ಸ್ವಲ್ಪ ಸಹಾಯ ಮಾಡಿ ಅಂದ್ರೆ “ ಅಯ್ಯೋ ಮನೆ ಕಟ್ಟಿದ ಸಾಲಾನೇ ತುಂಬಾ ಉಳಕೊಂಡಿದೆ ,ದಯವಿಟ್ಟು ಏನೂ ತಿಳ್ಕೊಬೇಡಿ “ ಅಂತ ಕೈ ಎತ್ತ ಬಿಟ್ರಲ್ಲಾ ರೀ ,! ಈಗ ನೋಡಿದ್ರೆ ಕಾರ್ ಮೇಲೆ ಕಾರ್ ಖರೀದಿ ಮಾಡ್ತಾ ಇದ್ದರಲ್ಲ “ ಎನ್ನುತ್ತಾ , ನಮ್ಮ ಚಿಕ್ಕಪ್ಪ ನನ್ನ ಕೊನೆ ತಂಗಿಯ ಮದುವೆ ಸಮಯದಲ್ಲಿ ಹಣದ ಸಹಾಯ ಕೋರಿದಾಗ ಮಾಡದೇ ತಪ್ಪಿಸಿಕೊಂಡಿದನ್ನು ತಕ್ಷಣ ಸಕಾಲಿಕವಾಗಿ ನೆನಪು ಮಾಡಿಕೊಟ್ಟರು ! “ ಹೌದು ಕಣೆ ನೀನು ಹೇಳೋದೇನೋ ನಿಜ ! , ಮನೆಗೆ ಸಾಲ ಮಾಡಿದ ಹಾಗೆ ಈ ಕಾರನ್ನೂ ಪಾಪಾ ಸಾಲಾ ಮಾಡೇ ತೊಗೊಂಡಿದ್ದಾನಂತೆ ಕಣೆ ,, ನಮ್ಮ ಸೀನು ಹೇಳ್ದ “ ಅನ್ನುತಾ ಅಪ್ಪ, ಅಮ್ಮ ಇನ್ನೂ ಹಳೆಯ ನೆನೆಪಿನ ಲೋಕಕ್ಕೆ ಜಾರುವ ಮುನ್ನವೇ ಮುಂಜಾಗ್ರತೆ ಕ್ರಮವಾಗಿ ಅಲ್ಲಿಂದ್ದೆದ್ದು ಮೆಲ್ಲನೆ ತಮ್ಮ ರೂಮಿಗೆ ಜಾರಿಕೊಂಡರು .!
ಅಮ್ಮ ಹುಸಿ ನಗುತ್ತಾ “ ನೋಡ್ದೆನಮ್ಮಾ ನಿಮ್ಮ ತಂದೆ ಹೇಗೆ ಜಾರ್ಕೊಂಡ್ ಬಿಟ್ಟರು ! ಆದರೂ ನೀ ಏನೇ ಹೇಳು ಈ ಫೇಸ್ ಬುಕ್ಕ್ ಮುಂದೆ ಕುಳಿತರೆ ನಮ್ಮಗಳ ತಲೇನೂ ಏರು ಪೇರು , ಸಮಯದ ಅರಿವೂ ಇರಲ್ಲ ! , ಅತಿಯಾಗಿ ಹಚ್ಚಿಕೊಂಡು ಬಿಟ್ಟರೆ ಕೆಲವೊಮ್ಮೆ ಮನಸ್ಸಿಗೂ ಹಿಂಸೆ , ಇದರ ಬಳಕೆ ಇತಿ ಮಿತಿಯಲ್ಲಿದ್ದು ನಮ್ಮ ಒಳತಿಗಾಗಿ ಉಪಯೋಗಿಸಿ ಕೊಂಡರೆ ಚೆನ್ನ ಅಲ್ವೇನೆ , ನೋಡು ಆಗಲೇ ಟೈಮ್ ಆರು ಗಂಟೆ ,ನಮ್ಮ ಸಾಯಂಕಾಲದ ಭಜನೆ ಕಾರ್ಯಕ್ರಮದ ಸಮಯ ಆಗ್ತಾ ಬಂತು “ ಅಂತ ಹೇಳಿ ಏನೋ ನೆನಪಿಸಿಕೊಂಡವರಂತೆ “ ನೀನು ನಡಿ ನಾನು ರಾಜನಿಗೆ ಹೇಳ್ಬಿಡ್ತೀನಿ ನಾನು ಇವತ್ತು ಬರೆದ ಕಾಮೆಂಟ್ ಗೆ, ಏನು ಉತ್ತರ ಬಂತು ಅಂತಾ ನೀನೇ ಸ್ವಲ್ಪ ನೋಡಿ ಹೇಳ ಬಿಡಪ್ಪ ಅಂತ “ “, ಅನ್ನುತ್ತಾ ಎದ್ದು ಒಳ ನಡೆದರು .

‍ಲೇಖಕರು G

November 5, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಸುಲಲಿತ,ಚೆಂದ ಬರಹ..

    ಪ್ರತಿಕ್ರಿಯೆ
  2. pushpa

    ನಮಸ್ಕಾರ, ಬರಹ ಚನ್ನಾಗಿದೆ. ಮುಖಪುಸ್ತಕ’ಧ್ವನಿಪೂರ್ಣ ಪ್ರಯೋಗ.-pushpa

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ಲೇಖನ ಚೆನ್ನಾಗಿದೆ ಆರತಿಯವರೇ.ಮುಖ ಪುಸ್ತಕದ ಬಗ್ಗೆ , ಅದನ್ನು ಹಚ್ಚಿಕೊಂಡವರು ಅನುಭವಿಸುತ್ತಿರುವ ಕಷ್ಟ ಸುಖಗಳ ಬಗ್ಗೆ, ಇಕ್ಕಟ್ಟುಗಳಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವವರ ಬಗ್ಗೆ, ಅವರಿಗಿರುವುದು ತಮಗಿಲ್ಲವೇ ? ಎಂದು ಕೊರಗುವವರ ಬಗ್ಗೆ – ಹಾಗೆ ಹಾಗೇ ಹೇಳಿದ್ಧೀರಿ. ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: