ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜ್ಜಿ

ಶೀಲಾ ಗೌಡರ

ಅಜ್ಜಿಯ ಬೆನ್ನು
ಬಾಗಿಬಿಟ್ಟಿದೆ.
ಅನುಕ್ಷಣವೂ ಬಾಗಿ ಬಾಗಿ
ನಿಲ್ಲುವ ಭಂಗಿಯೇ
ಮರೆತುಹೋಗಿದೆ.
ಗುಂಗಿನಲಿ ಭಾವಗಂಗೆ
ಇಂಗಿಹೋಗಿದೆ.

ಅಜ್ಜಿಯ ಕಣ್ಣು ಪೊರೆಗಟ್ಟಿದೆ.
ಧಗ ಧಗಿಸುವ
ಒಲೆ ಮುಂದೆ ಹೊಗೆ
ಯಾಡಿದೆ, ಉರಿಯ ಆರಿಸಲು
ಹೋದ ಕಣ್ಣೀರು
ಕಣ್ಣನೇ ನುಂಗಿದೆ.
ನೋಟದ ತೀಟೆಗಳ ಹಂಗನು
ಹರಿದಿದೆ.

ಅಜ್ಜಿಯ ಕೈ ಒರಟು
ದೊಣ್ಣೆಯಾಗಿದೆ.
ತವಡು ಕುಟ್ಟಿ ಕುಟ್ಟಿ,
ಕಳೆಯ ಕೆತ್ತಿ ಕೆತ್ತಿ,
ತಾಕಿದರೆ ತೊಟ್ಟಿಲೂ
ಬೆಚ್ಚಿ ಬೀಳುವಂತಿದೆ.
ಭಾಗ್ಯದ ಗೆರೆಗಳನ್ನು
ಕೆತ್ತಿ ಕೆತ್ತಿ ಒಗೆದಂತಿದೆ.

ಅಜ್ಜಿಯ ಕಿವಿ ಕಿವುಡಾಗಿದೆ
ಸಂಚಿನ ಮಿಂಚಿನ
ಹೊಡೆತಕೆ, ಹುರುಳಿಲ್ಲದ
ಗುಡುಗಿನ ಅಬ್ಬರಕೆ.
ಮಾತು ಮೌನದಲಿ
ಗೋರಿಯಾಗಿ, ಎದೆ
ಗಟ್ಟಿಯಾಗಿ ಬಡಿದುಕೊಳ್ಳುತಿದೆ
ದಣಿವರಿಯದೇ.

‍ಲೇಖಕರು Avadhi

12 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading