ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜ್ಜಮ್ಮ ಅಂದ್ರೆ ಆ ಪ್ರೀತಿನೆ ಬೇರೆ ಬಿಡ್ರಿ..

ಅಜ್ಜಿಲೋಕದ ಕಕ್ಕುಲತೆಯ ಜೀಕು..!

– ವಿಜಯಕಾಂತ ಪಾಟೀಲ

ಇದ್ದಾಗ ಇದ್ದವರೆಲ್ಲರ
ಚಿಂತೀ ಹಿಡಕೊಂಡು
ಒಜ್ಜಿಯಾಗಿ ಕಾಣುತ್ತಿದ್ದ ಅಜ್ಜಿ,
ಉಸುರು ನಿಂತಾಗ ಮಾತ್ರ
ಹಗುರಾಗಿದ್ದಳು…
ನನ್ನಪ್ಪನ ಅಮ್ಮ ಪುಟ್ಟಜ್ಜಿ ತೀರಿಕೊಂಡಾಗ `ಅಜ್ಜಿಯ ಸಾವು’ ಎಂಬ ಕವಿತೆಯೊಂದರ ಮೊದಲ ಸಾಲುಗಳಲ್ಲಿಯೇ ನಾನು ನನ್ನಜ್ಜಿಯನ್ನು ತುರಿದು `ಮಸರಗಾಯಿ ಬಜ್ಜಿ’ ಮಾಡಿ ಹೊಟ್ಟೆ ತಣ್ಣಗೆ ಮಾಡಿಕೊಂಡಿದ್ದು ಹೀಗೆ..!
ನನ್ನಮ್ಮನ ಅಮ್ಮ ಚಿನ್ನಜ್ಜಿಯದೂ ಮಸರಗಾಯಿ ಬಜ್ಜಿಯಷ್ಟೇ ತಂಪು ನೀಡುವ ಸಂಪನ್ನ ಗುಣ. ಸಾವೆಂದರೆ ಹೆದರುತ್ತಿದ್ದ ಪುಟ್ಟಜ್ಜಿ, ಅಜ್ಜ ಸತ್ತಾದ ಮೇಲೆ ಸುಮಾರು ಹದಿನೈದು ವರ್ಷ ಬದುಕಿದ್ದಳು. ನೆಮ್ಮದಿಯ ಸಾವನ್ನು ಬಯಸಿದ್ದ ಇವಳಿಗೆ ಕೊನೆಗೆ ಪಾಶ್ರ್ವವಾಯು ಬಡಿದು ಆಕೆಯ ಸಾವಿನ ಸುಗಮ ಕನಸನ್ನೇ ನುಚ್ಚುನೂರಾಗಿಸಿದ್ದಕ್ಕೆ ಸಾಯುವವರೆಗೂ ಕೊರಗಿದಳು. ಆಕೆ ಹೇಳಿದ್ದನ್ನು ನಾನೇ ಕೇಳಿಸಿಕೊಂಡಂತೆ `ಆ ರೋಗ ಮಾತ್ರ ನನಗೆ ಬರಬಾರದು,ಮಲಗಿದ ಹಾಗೆಯೇ ನೋವನುಭವಿಸದೇ ಸತ್ತು ಹೋಗಬೇಕು..’ ಅನ್ನುತ್ತಿದ್ದಳು.ಅದು ನನಗೂ ಗೊತ್ತಾಗಿತ್ತು: `ಯಾರ ಕೈಯಲ್ಲೂ ತೋಳಿ-ಬಳಿ ಉಪಚಾರ ಮಾಡಿಸಿಕೊಳ್ಳದೇ ತಣ್ಣಗೆ ಹೋಗಿಬಿಡಬೇಕು..’ ಎಂಬುದವಳ ಒಳಸುಳಿಯ ಕ್ಯಾಲ್ಕೂಲೇಶನ್ನು.! ಅಜ್ಜ ಸತ್ತಾಗ ಆತನ ನಿಜರ್ೀವ ವಿಭೂತಿ ಲೇಪಿತ ಬಾಡಿಯ ಬಾಜೂ ಕಣ್ಣೀರು ಕಾಣಿಸದಂತೆ ಅಳುತ್ತ,ನೋವು ನುಂಗುತ್ತ ಕುಂತಿದ್ದು ಸೀರೆ ಅಂಚಿಗೆ ಮತ್ತು ನನಗೆ ಮಾತ್ರ ಗೊತ್ತಾಗಿತ್ತು. ನಾ ನೋಡಿದ ಮಟ್ಟಿಗೆ ಈ ಲೋಕದ ಹೆಣ್ಮಕ್ಕಳ ಪೈಕಿಯಲ್ಲೇ ಈ ಅಜ್ಜಿಯದು ಬಹು ವಿಭಿನ್ನ ಪಾತ್ರ: ಹತ್ತು-ಹಲವಾರು ನಡೆ-ನುಡಿಗಳ ವಿಚಾರದಲ್ಲೂ. ಇರಲಿ,ಆ ಶೋಕತಪ್ತ ಕಾಲಮಾನದಲ್ಲಿ ಎಲ್ಲರೂ ಲಬೋ ಲಬೋ ಧಾರೆಗರೆಯುತ್ತಿದ್ದರೆ ಇವಳು ಸಾಕ್ಷಾತ್ ಭೂತಾಯಮ್ಮನ ಪಡಿಯಚ್ಚಿನಂತೆ ಕುಂತಿದ್ದಳು. ನನಗೆ ಅಚ್ಚರಿಯಾದರೂ ಅರ್ಥಮಾಡಿಕೊಂಡಿದ್ದೆ ನನಗೆ ನಿಲುಕಿದ ಮಟ್ಟಿಗೆ; ಕಣ್ಣ ಮುಂದೆ ಎಲ್ಲ ಮಕ್ಕಳು,ಮೊಮ್ಮಕ್ಕಳು ಜೀವಂತವಾಗಿ ಓಡಾಡಿಕೊಂಡಿದ್ದೇ ಆಕೆಯ ಈ ಅಗಾಧ ಸಹನೆಗೆ,ನೋವ ನುಂಗಿ ಇರಲಿಕ್ಕೆ ಸಾಥ್ ಆಗಿದ್ದಿರಲೂಬಹುದು..!
ಅರ್ಧ ಡಜನ್ ಗಂಡು ಹಾಗೂ ಕಾಲು ಡಜನ್ ಹೆಣ್ಣು ಮಕ್ಕಳ ಮಾತೆಯಾದ ಪುಟ್ಟಜ್ಜಿ ಪಡೆದ ಮಕ್ಕಳ,ಮೊಮ್ಮಕ್ಕಳ ಸಂಖ್ಯೆ ಅದೆಷ್ಟೆಂದು ಲೆಕ್ಕ ಹಾಕ ಹೊರಟವರೇ ಲೆಕ್ಕ ತಪ್ಪುವಷ್ಟರ ಮಟ್ಟಿಗಿನ ಭೂಮಿತೂಕದ ಖರೆ ಖರೆ ಅವ್ವನೂ ಹೌದು; ಕೆನೆಭರಿತ ಬುತ್ತಿಯ ಸ್ವಾದದ ಕಲ್ಲು ಸಕ್ಕರೆಯಂಥ ಅಕ್ಕರೆಯ ಅಜ್ಜಿಯೂ ಹೌದು. ನೋಡಲು ಲಕ್ಷಣವಾಗಿದ್ದ ಅಜ್ಜಿ ಮುಪ್ಪಿನಲ್ಲೂ ಅದೇ ಛಂದ ಉಳಿಸಿಕೊಂಡಿದ್ದಳು. ಸದಾ ವಟಗುಡುವ ಅಜ್ಜಿಯಂದಿರ ನಡುವೆ ಸಹನೆ-ಸಂಭಾವಿತತನವೇ ಮೈವೆತ್ತ ಗುಣಸಂಪನ್ನೆಯಾಗಿ,ಯಾವಾಗಲೂ ಪ್ರೀತಿಯ ಹೊಳೆಯನ್ನೇ ಹರಿಸುತ್ತಿದ್ದ ಈ ಅಜ್ಜಿ ಸೌಂದರ್ಯ ಮತ್ತು ಸಜ್ಜನಿಕೆಗಳಿಂದಲೂ ಮಕ್ಕಳು-ಮರಿಗಳ ಪಾಲಿಗೆ ಆಯಸ್ಕಾಂತವಾಗಿ ಬಿಟ್ಟಿದ್ದಳು. ನಾವೆಲ್ಲ ಅಜ್ಜಿಯನ್ನು

(2)

`ಅಜ್ಜಮ್ಮ’ ಎಂದೇ ಕರೆಯುತ್ತಿದ್ದೆವು. ಅಮ್ಮ ಚಾಮುಂಡಿಯಾವತಾರ ತಾಳಿ ಹಿಗ್ಗಾ ಮುಗ್ಗಾ ಜಡಿದಾಗ ಥೇಟ್ ಅಮ್ಮನಾಗಿ ಕಲ್ಲು ಸಕ್ಕರೆ ಕೊಟ್ಟು ಸಂತಯಿಸುತ್ತಿದ್ದಳು. ಮೇಲಾಗಿ ಯಾರಾದರೂ ಮಕ್ಕಳಿಗೆ ಹೊಡೆದರೆ, `ಏ..ಕಗ್ಯಲ ಬುದ್ದಿ ಮಾಡಬ್ಯಾಡ್ರೇ..ಹೊಡೆಯೋದಕ್ಕು ಒಂದ ಮಿತಿ ಐತಿ..ಮಕ್ಕಳು ಮರಿ ಅಂದ್ರ ದೇವ್ರಿದ್ದಂಗ..ಕರುಣೆ-ಕಕ್ಕುಲ್ತಿ ಇಲ್ದೋರು ನೀವು..” ಎಂದು ಬರೋಬ್ಬರಿ ತಿವಿಯುತ್ತಿದ್ದಳು. ಗೊಣಗುವಿಕೆಯೊಂದಿಗೆ ಮಹಾ ರಣರಂಗದಂತೆ ಗೋಚರಿಸುತ್ತಿದ್ದ ಮನೆಯ ವಾತಾವರಣ ಆಕೆಯ ನಿಧಾನಗತಿಯ ದನಿಯ ಮೋಡಿಗೆ ಶಾಂತ-ಸಂಪನ್ನವಾಗುತ್ತಿತ್ತು. ಇಬ್ಬರು ಗಂಡು ಮಕ್ಕಳು ಬೇರೆಯಾಗಿ ಮನೆ ಮಾಡಿಕೊಂಡು ಹೋದ ಮೇಲೆಬೇಜಾರುಗೊಂಡ ಆಕೆ ಹೆಚ್ಚಾಗಿ ಆ ಕಡೆಯೇ ತುಡಿಯುತ್ತಿದ್ದಳು.ಕಾಳು-ಕಡಿಗಳ ಗಂಟು ಕಟ್ಟಿ ಅವರಿದ್ದಲ್ಲಿಗೆ ಹೋಗಿ ಸ್ವತಃ ಮುಟ್ಟಿಸಿ ಬರುತ್ತಿದ್ದಳು. ಇದು ಅಮ್ಮ-ಚಿಕ್ಕಿಯರಿಗೆ ಆಗಿ ಬರುತ್ತಿರಲಿಲ್ಲ ಎನ್ನುವುದು ನನಗೆ ಆಗಲೇ ಗೊತ್ತು ಹತ್ತಿತ್ತು.ಆದರೆ,ಅಸಹಾಯಕತೆಗೆ ಮಿಡಿವ ಅಜ್ಜಮ್ಮನ ಮನ ಮನೆತನವನ್ನೂ ಮೀರಿ ಮಿಡಿಯುತ್ತಿತ್ತು. ಇಂಥವೆಲ್ಲ ಅಜ್ಜಿ ಎಂಬ ಗ್ರಂಥದ ಮೂಲಕ ನನ್ನೊಳಗಿಳಿದದ್ದು ಸುಳ್ಳಲ್ಲ..
ತನ್ನ ಕೆಲಸ ಮುಗುಸಿ ಮನೆ ಬಾಗಿಲ ಬಳಿ ಮೆಟ್ಟಿಲು ಹಿಡಿದು ಕುಂತರೆ ದಾರಿಯುದ್ದಕ್ಕೂ ಹೊಗು-ಬರುವವರ ಯೋಗಕ್ಷೇಮಸಮಾಚಾರ ವಿನಿಮಯದಲ್ಲೇ ಸ್ವರ್ಗ ಕಾಣುವಾಕೆ ಈಕೆ. `ಯಾವಾಗ ಬಂದೆವ್ವ..ಮಕ್ಕಳು ಹೆಂಗದಾರ..ಆ ನಿಂಗವ್ವ ಪಾಡಾಗದಾಳ..ಭಾಳ ದಿನಾ ಆತು ಕಂಡೇಲಾಕಿ..ಕಂಡ್ರ ಬರಾಕ ಹೇಳು.. ಬಾ..ಕುಂತ್ಕಾ..’ ಅಂತಾ ಕರೆದು ಕುಂದರಿಸಿ ಆಕೆಯ ಗೋಳನ್ನು ತನ್ನ ಗೋಳಾಗಿಸಿಕೊಂಡು ಕಾಣದಂತೆ ಕಂಬನಿ ಮಿಡಿದು ಅಕ್ಕಿ ರೊಟ್ಟಿ ತಿನಿಸಿ ಸಮಾಧಾನ ಮಾಡಿ ಕಳಿಸಿದರೆ ಈ ಅಜ್ಜಿಗೆ ತಿಂದದ್ದು ಅರಗುತ್ತಿತ್ತು. ಅಂಥ ಕಾಳಜಿ-ಕಕ್ಕುಲಾತಿ-ಕನಿಕರಗಳನ್ನು ಒಡಲ ತುಂಬ ಹೊತ್ತು ಬಿತ್ತುತ್ತಿದ್ದಳು. ಅದೆಲ್ಲ ಹಸಿರುಕ್ಕಿ ತೆನೆ ಬಾಗಿ ಹಸಿವ ನೀಗಿಸಿದ್ದು ಕಂಡು ಖುಷಿ ಪಡುತ್ತಿದ್ದಳು.
ಈ ಅಜ್ಜಿಯ ವಿಶೇಷತೆಯೆಂದರೆ,ಈ ಜಗದ ಎಲ್ಲ ಅಜ್ಜಿಯಂದಿರು ಕಥೆ ಹೇಳುವವರೇ ಆಗಿದ್ದರೆ ಇವಳದು ಅದಕ್ಕೆ ವ್ಯತಿರಿಕ್ತ ನಡೆ. ಕಥೆ ಹೇಳಿದ್ದೇ ನಾವು ಕೇಳಲಿಲ್ಲ.ಆದರೂ ಅವಳೇ ಜೀವಂತ ಕಥೆಯಾಗಿದ್ದಳು. ಅಷ್ಟೇ ಅಲ್ಲ, ಎಂದೂ ಮುಗಿಯದ ಮಹಾ ಕಾದಂಬರಿಯಂತೆ ತೋರುತ್ತಿದ್ದಳು. ಅವಳ ಸಿಟ್ಟಿನ ಪರಮ ಪ್ರತಿಕ್ರಿಯೆ ಅಂದರೆ, ತೊಡೆ ಸಂದು ಚಿವುಟಿ `ಶುಂಠಿ’ ಕೊಡುವುದು.ಹೊಡೆತಕ್ಕಿಂತ ಉರಿಯೇಳಿಸುವ ಶಿಕ್ಷೆ ಅದು.ಆದರದು ಆ ಅಜ್ಜಿ ಎಂಬ ಸಿಹಿ ಲೇಹ್ಯದ ಚಪ್ಪರಿಸುವಿಕೆಯಲ್ಲಿ ಕಹಿ ಅನುಭವ ತರಲೇ ಇಲ್ಲ; ಇರುವೆಗಳಾಗಿ ಹರಿದಾಡಲು,ಮುತ್ತಿಕೊಳ್ಳಲು ಅಡ್ಡಿಯಾಗಲಿಲ್ಲ.ಅವಳಿಗೆ ಎಲೆ ಅಡಿಕೆ ತಂಬಾಕು ಜಗಿಯುವ ಚಟ ಇತ್ತು.ಅವಳ ಎಲಾಡಕಿ ಚೀಲ ನಮಗೆಲ್ಲ ಅಚ್ಚರಿದಾಯಕ,ಕುತೂಹಲದ ನಿಧಿಯಂತೆ ತೋರುತ್ತಿತ್ತು.ಅಲ್ಲಿ ಬಡೇಸೋಪು,ಅಜಿವಾನ,ಬಜಿಯಂಥ ತರಾವರಿಯ ಜುಂ ಜುಂ ಸಾಮಗ್ರಿಗಳಿರುತ್ತಿದ್ದವು. ನಮಗೂ ಅವನ್ನೆಲ್ಲ ಹದಭರತವಾಗಿಸಿ ಜಗಿಯಲು ಕೊಡುತ್ತಿದ್ದಳು.,ತುಟಿ ಕೆಂಪಾಗಿಸಿಕೊಂಡು ಯಾರ ನಾಲಗೆ ಹೆಚ್ಚು ಕೆಂಪೋ ಎಂದು ಉದ್ದುದ್ಧ ಮಾಡಿ ನೋಡಿಕೊಳ್ಳುತ್ತಿದ್ದೆವು. ಅದರೆ,ಪಿತ್ತ ನೆತ್ತಿಗೇರಿಸಿಕೊಳ್ಳುವಷ್ಟು ಆ ಚಟ ಅವಳನ್ನು ಆಲಂಗಿಸಿರಲಿಲ್ಲ.ಅಪ್ಪ ಮಾತ್ರ ಈ ದಿಶೆಯಲ್ಲಿ ದಾಖಲೆ ಮಾಡಿದ.ತಕ್ಕ ಮಟ್ಟಿಗೆ ನಾನೂ. ನಮ್ಮ ನೆತ್ತಿ ಇರುವುದೇ ಪಿತ್ತವೇರಿಸಿಕೊಳ್ಳಲು ಎಂದೇ ನಾವಂದುಕೊಂಡಿದ್ದೇವೆ ಈಗಲೂ.ಈಗಲೂ ನನ್ನ ಕವಳ ಕೆಂಪಿನ ಹಾದಿಯಲ್ಲಿ ಅಜ್ಜಿಯ ಕರುಳ ಪ್ರೀತಿಯ ನೆನಪಿನ ಸೊಗಡಿದೆಯೆಂದರೆ ನಗಬೇಡಿ..!.
ಇನ್ನು ಮತ್ತೊಬ್ಬ ಅಜ್ಜಮ್ಮ ಅಲಿಯಾಸ್ `ಅಮ್ಮಮ್ಮ’ (ಮಲ್ಲಾಡ ಸೀಮೆಯ ಪರಿಭಾಷೆ) ಅಂದರೆ ಅಮ್ಮನ ಅಮ್ಮ ಚಿನ್ನಮ್ಮನ ಲೋಕ ದರ್ಶನವೂ ಅಂಥದೇ. ಇವಳು ಕಥೆ ಹೇಳುವಲ್ಲಿ ನಿಪುಣೆ. ಇವಳ ಕಥಾ ನಿರೂಪಣೆಯ ಪರಿ, ಮಂತ್ರಮುಗ್ಧ ಮಾದರಿ. ಕೇಳ ಕುಂತರೆ ಏಳ ಹೊರಡಲಾಗದು. ಅಕ್ಕರೆಯ ನೆಡುವಲ್ಲಿಯೂ ಅಗ್ರಗಣ್ಯೆ. ಚಿನ್ನಜ್ಜಿ ಹೇಳಿದ `ಕಥಿ ಕಥಿ ಕಬ್ಬು,ಮೈಯೆಲ್ಲ ಚಿಬ್ಬು,ಪಾತಾಳಕ ಹೋಗಿ ದೀಪಾ ತಂದು……’ ಇನ್ನೂ ಅಚ್ಚಳಿಯದೇ ಮನಸ್ಸಲ್ಲಿ ಕುಂತು ಬಿಟ್ಟಿದೆ. ಇಂಥ ನೂರಾರು ಕಥೆಗಳ ಚಿನ್ನದ ಕಣಜ

(3)

ಈ ಚಿನ್ನಮ್ಮ. ಸಿಟ್ಟೋ ಮೂಗಿನ ತುದಿಯಲ್ಲಷ್ಟೇ ಅಲ್ಲ,ಮೈಮನಗಳಾದಿಯಲ್ಲೂ ಮನೆಮಾಡಿತ್ತು. ಆದರದು ತಕ್ಷಣಕ್ಕೆ ಕರಗಿ ನೀರಾಗಿ ಹರಿದು ತಂಪನ್ನೀಯುವ ಜಾತಿಯದು. ಪ್ರೀತಿ-ಕಕ್ಕುಲಾತಿಯ ವಿಷಯದಲ್ಲಂತೂ ನನಗೆ ಗೊತ್ತಿದ್ದ ಅಜ್ಜಿಯಂದಿರ ಪೈಕಿ ಇವಳಿಗೇ ರ್ಯಾಂಕು ಸಿಗಬೇಕಿತ್ತು,ನಾ ಮಾತ್ರ ಯಾವಾಗಲೋ `ಡಾಕ್ಟರ್’ ಪದವಿ ಪ್ರದಾನ ಮಾಡಿಬಿಟ್ಟಿದ್ದೆ..! ಚಿನ್ನಜ್ಜಿ ಜಡ್ಡಿಗೆ ಬಿದ್ದಾಗ ನಾನು ಧಾರವಾಡದಲ್ಲಿ ಓದಲು ನೆಲೆಸಿದ್ದೆ. ರಜೆಯಲ್ಲಿ ಅವಳೂರಿಗೆ ಮಾತಾಡಿಸಿಕೊಂಡು ಬರಲು ಹೋದರೆ,ನನ್ನ ನೋಡಿದೊಡನೆಯೇ ಕಣ್ಣು ತುಂಬಿಕೊಂಡು ಅಳಲು ಶುರು ಹಚ್ಚಿಕೊಂಡು ಬಿಡುತ್ತಿದ್ದಳು. ನಾನೋ ಬಹುದೊಡ್ಡ ಅಳುಮುಂಜಿ. ನನ್ನ ಕಣ್ಣೂ ಮಂಜು ಕವಿದು ಎದ್ದು ಹೊರಬಂದು ಬಿಡುತ್ತಿದ್ದೆ. ಸಾವರಿಸಿಕೊಂಡು ಮತ್ತೆ ಚಿನ್ನಜ್ಜಿಯ ಬಾಜೂ ಬಿಜಯಂಗೈಯ್ಯತ್ತಿದ್ದೆ. `ತಮ್ಮಾ,ಚೆನ್ನಾಗಿ ಓದಿ ದೊಡ್ಡ ಮನುಷ್ಯ ಆಗಬೇಕಪ್ಪ..ಹೆಸರು ತರ್ಬೇಕು ಮೊಮ್ಮಗನೇ ಮನೆಗೆ..’ ಅಂದಾಗ ಮತ್ತೆ ದುಃಖ ಸಾಗರ ಉಕ್ಕುಕ್ಕಿ ಬಂದು ಎಲ್ಲ ಉಪ್ಪುಪ್ಪು. ಜೊತೆಗೊಯ್ದ ಹಣ್ಣೋ ಬಿಸ್ಕೀಟೋ ಕೊಟ್ಟು ಅಜ್ಜಮ್ಮನ ಹಳೇ ಕಥೆಗಳ ನೆನಪಲ್ಲಿ ಊರ ಸೇರುತ್ತಿದ್ದೆ. ಈ ಅಜ್ಜಿ ನಮ್ಮೂರಿಗೆ ಆಗಾಗ ಬಂದು ತಿಂಗಳುಗಟ್ಟಲೆ ಇರುತ್ತಿದ್ದಳು. ಮೇಲಾಗಿ ಚಿನ್ನಜ್ಜಿ ನನ್ನಜ್ಜನ ತಂಗಿಯೂ ಹೌದು.ಹಾಗಾಗಿ ನಮ್ಮನೆ ಅವಳ ತವರುಮನೆ. ಅತ್ತೆ ಮಗಳನ್ನೇ ನಮ್ಮಪ್ಪ ಕಟ್ಟಿಕೊಂಡಿದ್ದರು. ನಮ್ಮಮ್ಮ ಹಾಗೂ ಈ ಇಬ್ಬರು ಅಜ್ಜಿಯಂದಿರು-ಎಲ್ಲರೂ ನಿರಕ್ಷರಿಗಳೇ ಆಗಿದ್ದರು. ಆದರೆ,ಅಕ್ಷರಸ್ಥರ ಈಗಿನ ವರಸೆ,ವಿರಸಾದಿ ಗುಣಗಳನ್ನು ನೋಡಿದರೆ,ಈಗ ಅಂಥ ಹಿರಿತಲೆಮಾರಿನ ಅಮ್ಮ-ಅಜ್ಜಿಯಂದಿರಿಗೆ ಅವರು ಯಾವ ಸಾಕ್ಷರ,ಬುದ್ಧಿಜೀವಿಗಳಿಗೂ ಕಮ್ಮಿಯಿಲ್ಲದಿರುವುದರಿಂದ ನಮ್ಮ ವಿ.ವಿ.ಗಳು ಕರೆದು ತಂದು ಗೌರವ ಡಾಕ್ಟರೇಟ್ ಕೊಟ್ಟು ಸಮ್ಮಾನಿಸಬೇಕು,ಅಂಥ ಕಷ್ಟದ ಬದುಕು ಜಯಿಸಿದ,ಸಾಮರಸ್ಯ ಸೃಜಿಸಿದ ಈ ಇವರ ಸಾಧನೆಗೆ ಅಂತಾ ಅನ್ನಿಸುತ್ತದೆ.

ಚಿನ್ನಜ್ಜಿಯ ಸಿಟ್ಟು ಇಡೀಯಾಗಿ ನನ್ನಮ್ಮನಿಗೂ ಭಟ್ಟಿ ಇಳಿದಿತ್ತು. ಈಗ ಇವಳೂ ಅಜ್ಜಿಯಾಗಿದ್ದರಿಂದ ಪ್ರೀತಿಯನ್ನು ಉಕ್ಕಿ ಹರಿಸುತ್ತಿದ್ದಾಳೆ ಮೊಮ್ಮೊಕ್ಕಳನ್ನು ಪಡೆದಾದ ಮೇಲೆ. ಅವರ ನೆಪದಲ್ಲಿ ನಮಗೂ ಪಾಲು ಸಿಗುತ್ತಿದೆ. ಆಗೆಲ್ಲ ಈ ಚಿನ್ನಜ್ಜಿ ಊರಿಗೆ ಬಂದರೆ ಬೆಣ್ಣೆ ಕಡೆಯುವ ಕೆಲಸ ಅವಳ ಪಾಲಿನದಾಗಿರುತ್ತಿತ್ತು. ಅಮ್ಮ ಅಷ್ಟಾಗಿ ರೊಟ್ಟಿಗೆ ಬೆಣ್ಣೆ ಹಚ್ಚಿ ಕೊಡದೇ ಇಷ್ಟಿಷ್ಟೇ ಸವರಿ ಕೊಡುತ್ತಿದ್ದಳು. ಈ ಬಗೆಗೆ ಅಮ್ಮನ ಮೇಲೆ ನನಗೊಂದು ಬಲವಾದ ದ್ವೇಷವಿತ್ತು,ಪ್ರೀತಿಯ ಜೊತೆಜೊತೆಗೇ. ಆದರೆ,ಇದೆಲ್ಲ ಗೊತ್ತಿದ್ದ ಚಿನ್ನಜ್ಜಿ ಬೆಣ್ಣೆ ಕಡೆಯುವಾಗ ಅಮ್ಮನ ಕಣ್ಣು ತಪ್ಪಿಸಿ ಅಕ್ಕಿ ರೊಟ್ಟಿಯ ಒಳಗೊಂದು ಮುದ್ದಿ ಬೆಣ್ಣೆಯನ್ನು ಇಟ್ಟು ಸುತ್ತಿಕೊಟ್ಟು ಲಗೂ ಲಗೂ ತಿನ್ನಲು ಹಚ್ಚುತ್ತಿದ್ದಳು. ಈ ಕದ್ದುಮುಚ್ಚಿ ನಡೆಯುವ ಕ್ರಿಯೆಯು ಜಟ್ ಪಟ್ ಮುಗಿಸದಿದ್ದರೆ ಉರಿಕೆಂಡವಾಗಿ ಹರಿಹಾಯುತ್ತಿದ್ದಳು. ನಾನೋ ಇಡೀ ಮುಖದ ಮುಖಾಂತರವೇ ತಿಂದು ಹಾಕುತ್ತಿದ್ದೆ. ನಡುಮಾಳಿಗೆಯಲ್ಲಿ ಮೇಲಿನಿಂದ ತೂಗುಬಿಟ್ಟ ಬೆಣ್ಣೆ ಗಡಿಗೆಯಿಂದ ಬೆಣ್ಣೆ ಕದ್ದು ತಿಂದು ಕೃಷ್ಣಾವತಾರಿಯೂ ಆಗಿಬಿಡುತ್ತಿದ್ದೆ ಆಸ್ಪದ ಸಿಕ್ಕಾಗ. ಹಾಗೇ,ಗೊತ್ತಾಗದಂತೆ ಮತ್ತೆ ದುಂಡಗೆ ಮಾಡಿ ಮಜ್ಜಿಗೆಯ ಹೊಳೆಯೊಳು ತೇಲಿ ಬಿಡುಡುತ್ತಿದ್ದೆ. ನನ್ನ ಇಂಥ ಕಳ್ಳತನ ಚಾಳಿಗೆ ಚಿನ್ನಜ್ಜಿ `ಹೊರಗಿನಿಂದಲೇ’ ಬೆಂಬಲ ಘೋಷಿಸಿ ಬಿಟ್ಟಿದ್ದಳು.ಇಲ್ಲದಿದ್ದರೆ ನನ್ನ ಬಾಲ್ಯಕಾಲದ ಸಕರ್ಾರ ಅಥವಾ ಆಡಳಿತ ಬಿದ್ದು ಹೋಗಿ ಇಂದು ನಾನು ಅಪಾರವಾಗಿ ಖೇದ ಪಡಬೇಕಾಗಿತ್ತೇನೋ.!.
ಪ್ರತಿದಿನದ ಬೆಳಬೆಳಿಗ್ಗೆ ಈ ಚಿನ್ನಜ್ಜಿ ಒಂದು ಗಿರ್ದ ರೊಟ್ಟಿಯ ತುಣುಕಿಗೆ ಉಪ್ಪಿನಕಾಯೀ ಎಸರು ಸವರಿಕೊಂಡು ತಿನ್ನುತ್ತ ಚಾ ಸವಾರಿ ಮಾಡುತ್ತಿದ್ದಳು. ಇದ ನೆನೆದೊಡೆ ಬಾಯಲ್ಲಿ ಉಪ್ಪು ನೀರಝರಿ ಚಿಮ್ಮಿ ಈಗಲೂ ಅಜ್ಜಿ ಲೋಕದ ಸಾಂಗತ್ಯದ ಹಳವಂಡ ಶುರುವಾಗುತ್ತದೆ. ಇಂಥ ಘಟನೆ,ಸಂಗತಿಗಳು ಈಗ ಬಾಲ ಬಿಚ್ಚಿಕೊಂಡರೆ ಆ ದಿನಗಳು, ಅಜ್ಜಿಲೋಕದ ಅಕ್ಕರೆಗಳು, ಹುಡುಕಾಟಗಳು, ತುಂಟಾಟಗಳು ನೆನಪ ಹಂದರದಲ್ಲಿ ಇಣುಕುವ ಮುಂಜಾವಿನ ಬಿಸಿಲ ಹನಿಗಳಂತೆ ಮುದ ನೀಡುತ್ತವೆ ಇಂದಿಗೂ….
ನನಗೆ ಈ ಇಬ್ಬರು ಅಜ್ಜಿಯರೂ ಈ ಜೀವಲೋಕದ ಪರಮ ಇಷ್ಟದ ಸಂಗತಿಗಳಾಗಿದ್ದರು. ಈ ಇಬ್ಬರೂ ನಮ್ಮ ಮನೆಯಲ್ಲಿದ್ದಾಗ ನಾವು ಪುಟ್ಟಮ್ಮನನ್ನು `ಕ್ಯಾಸ್ನೂರ ಅಜ್ಜಮ್ಮ’ ಎಂದೂ, ಚಿನ್ನಮ್ಮನನ್ನು

(4)

`ಶ್ಯಾನಳ್ಳಿ ಅಜ್ಜಮ್ಮ’ ಎಂದೇ ಕರೆಯುತ್ತಿದ್ದೆವು. ಇಂಥ ಹಲವಾರು ಅಜ್ಜಿಯರು ನೆತ್ತರ ಸಂಬಂಧವಲ್ಲದಿದ್ದರೂ ಕರುಳು ಮುತ್ತಿಕೊಂಡು ಸದಾ ಈ `ಅಜ್ಜಿಲೋಕ’ವನ್ನು ನನಗಿವತ್ತಿಗೂ ಹತ್ತಿರವಾಗಿರಿಸಿದೆ. ಹೆಣ್ಣಿನ ಹಲವು ರೂಪಗಳಲ್ಲಿ ಅಮ್ಮನಾದ ಮೇಲಿನ ಹೆಣ್ಣು,ಮೊಮ್ಮೊಕ್ಕಳನ್ನು ಕಂಡ ಅಜ್ಜಿರೂಪದ ಹೆಣ್ಣುಜೀವಗಳ ಕಾರುಣ್ಯ,ಕನಿಕರ,ಕಕ್ಕುಲಾತಿ,ಸಹನಾಶೀಲ ಮನಸ್ಸಿನ ವಿಶಾಲ ಹರಹು, ತಾರುಣ್ಯದ ಹೆಣ್ಣುಗಳಲ್ಲಿ ಕಾಣಸಿಗುವುದೇ ತೀರಾ ಅಪರೂಪ.ಹೀಗಾಗಿ,ಅಮ್ಮ,ಅಜ್ಜಿ ಪಾತ್ರಗಳೇ ಅನಾದಿ ಕಾಲದಿಂದಲೂ ಆಪ್ತವಾಗಿ ತೋರುತ್ತವೆ. ಇಂಥ ಕಥೆ ಹೇಳುವ ಅಜ್ಜಿ, ಅಮ್ಮ-ಅಪ್ಪ ಹೊಡೆದಾಗ ಕಲ್ಲು ಸಕ್ಕರೆ ಕೊಟ್ಟು ಸಂತಯಿಸುವ ಅಜ್ಜಿ, ತನ್ನ ಕೌದಿಯೊಳಗೆ ಹುದುಗಿಸಿಕೊಂಡು ಬೆಚ್ಚಗಿರಿಸುವ ಅಜ್ಜಿ, ಬೆನ್ನುಜ್ಜಿ ಬಿಸಿನೀರ ಹೊಯ್ದು ತನ್ನ
ಸೀರೆಯ ಸೆರಗಿನಿಂದಲೇ ಮೈ ಒರಸಿ ಚಡ್ಡಿ ಹಾಕುವ ಅಜ್ಜಿ, ಮಳೆ-ಬಿಸಿಲು-ಛಳಿಗೆ ಕಾವಲಾಗುವ ಅಜ್ಜಿ, ತಲೆ ಬಾಚಿ ಹೇನು ಕುಕ್ಕಿ ಚಂದಗಾಣಿಸುವ ಅಜ್ಜಿ, ಪೆಟ್ಟು ಕೊಡದೇ ಜೀವನದ ಪಾಠ ಹೇಳಿಕೊಡುವ ಅಜ್ಜಿ, ಬೆಣ್ಣೆ-ಎಣ್ಣೆ ಹಚ್ಚಿ ಬಿಸಿಬಿಸಿ ರೊಟ್ಟಿ ತಿನಿಸುವ ಅಜ್ಜಿ, ಹದಭರಿತ ಎಲಾಡಕಿ ಕುಟ್ಟಿ ಬಾಯಿ ಕೆಂಪು ಮಾಡುವ ಅಜ್ಜಿ….ಇಂಥ ನೂರಾರು ಥರದ ಪಾತ್ರಗಳಲ್ಲಿ ಅಜ್ಜಿ ತನ್ನನ್ನು ಇಡೀಯಾಗಿ ತೊಡಗಿಸಿಕೊಂಡು
ಲೋಕ ಪೊರೆವ ಅವಳ ರೀತಿಗೆ,ಪ್ರೀತಿಗೆ ಪ್ರತಿಯಾಗಿ ನಾವೇನು ಕೊಟ್ಟಿದ್ದೇವೆ,ಕೊಡುತ್ತಿದ್ದೇವೆ ಎಂದು ಒಂದಷ್ಟು ತಲೆ ಕೆರೆದುಕೊಂಡರೆ ಆತಂಕದ ಭೂತ ಧುತ್ತೆಂದು ಎದುರಾಗುತ್ತದೆ..! ಅನಾಥಾಶ್ರಮ ಕಣ್ಣ ಮುಂದೆ ಬಂದು,ಧೂಳು ಹಿಡಿದ ಮನೆಯ ಕರಾಬು ಮೂಲೆಯೊಂದು ನೆನಪಿಗೆ ಬಂದು `ಅಯ್ಯೋ..’ ಅನ್ನಿಸಿ ಗೊತ್ತಾಗದೇ ಕಣ್ಣಾಲಿಗಳು ಬನಿಯನ್ನೊಳಗೂ ಹಸಿ ಮಾಡಿಬಿಡುತ್ತವೆ.
`ಅಜ್ಜಿ’ ಎಂದರೆ ಮಕ್ಕಳ ಪರಿಭಾಷೆಯಲ್ಲಿ `ಕಥೆ’ಯೇ…! ಅಜ್ಜಿಯನ್ನು ಕಥೆಯ ಕಣಜದಂತೆ ನೋಡುವ ಮಕ್ಕಳಿಗೆ ಅಜ್ಜಿಯೆಂದರೆ ಅಕ್ಕರೆ, ಸಕ್ಕರೆ, ಹಾಲು-ಜೇನ ಮಳೆ, ಸಿಹಿನೀರ ಒರತೆ, ಶಾಂತಿ-ಸಮನ್ವಯತೆ, ಸೌಮ್ಯತೆ, ಸೌಜನ್ಯತೆ..ಇತ್ಯಾದಿ ಇತ್ಯಾದಿ..ಅಜ್ಜಿ ಎಂಬ ಈ ಲೋಕ ಈ ಲೋಕ ಇರುವವರೆಗೂ ಜೀವಕಾರುಣ್ಯದ ಲೋಕವೇ.. ಈ ನಿಟ್ಟಿನಲ್ಲೊಂದು ನನ್ನ ಚಿಕ್ಕ ಸೈಜಿನ `ಪೋಯೆಮ್…ಗಮ್..!’
ಅಜ್ಜೀ ಕಥೆ
ಅಜ್ಜಿ ಅಳಿದ ಮೇಲೂ ಮನೆಯ
ಆ ಮೂಲೆಯಲ್ಲಿ
ಮಕ್ಕಳಿನ್ನೂ ಕಥೆ ಕೇಳುತ್ತಲೇ
ಕೂತಿರುತ್ತಾರೆ..!
 
ಆಕೆ ಹೇಳಿದ್ದ ಕಥೆಗಳೆಲ್ಲ
ವ್ಯಥೆಯಲ್ಲ; ಸಿಹಿ ನೀರ ಒರತೆ,
ಸದಾ ಬಸಿ, ಹಸಿ ಹಸಿ;
ಮೂಲೆಮೂಲೆಯಲ್ಲೂ
ನಳನಳಿಸುವ ಹಸಿರ ಸಸಿ..!
 

‍ಲೇಖಕರು G

18 June, 2014

1 Comment

  1. Siddu Satyannavar

    Vijayakant Sir…..
    Tumaba chennagide baraha. inukidare poorti oduva tanaka biduvudilla

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading